ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಸುದ್ದಿ ಮಾಧ್ಯಮಗಳ ಮಧ್ಯೆ ಸಂಘರ್ಷ

ಪಾಕಿಸ್ತಾನದ ಸುದ್ದಿ ಮಾಧ್ಯಮಗಳ ಕಲಹಕ್ಕೆ ಕೊನೆಗೂ ತಾತ್ಕಾಲಿಕವಾಗಿ  ಕಡಿವಾಣ ಬಿದ್ದಿದೆ. ಅತ್ಯಂತ ಜನಪ್ರಿಯ ಸುದ್ದಿ ಚಾನೆಲ್ ‘ಜಿಯೋ ನ್ಯೂಸ್’ಗೆ ಕಳೆದ ವಾರ ನಿಷೇಧ ಹೇರಲಾಯಿತು. ಈ ಮೂಲಕ ಪರಸ್ಪರ ಪ್ರತಿಸ್ಪರ್ಧಿ ಚಾನೆಲ್‌ಗಳ ಕೆಸರೆರಚಾಟಕ್ಕೆ ಒಂದು ತಿಂಗಳ ನಂತರ ದೇಶದ ಮಾಧ್ಯಮ ನಿಯಂತ್ರಣ ಮಂಡಳಿ ಅಂತ್ಯ ಹಾಡಿತು. ಜಿಯೋ ನ್ಯೂಸ್ ಮುಚ್ಚಬೇಕು ಎಂದು ತೀವ್ರ ಒತ್ತಡ ಹೇರುತ್ತಿದ್ದ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ಕೊಂಚ ಮುನ್ನಡೆ ಸಿಕ್ಕಂತಾಗಿತ್ತು.

ಆದರೆ ಜಿಯೋ ಮೇಲಿನ ನಿರ್ಬಂಧ ತಾತ್ಕಾಲಿಕವಾಗಿತ್ತು. ಪ್ರಧಾನಿ ನವಾಜ್ ಷರೀಫ್ ಅವರ ಸರ್ಕಾರದ ಬೆಂಬಲಿಗರನ್ನೊಳಗೊಂಡ ಮಾಧ್ಯಮ ನಿಯಂತ್ರಣ ಮಂಡಳಿ, ತಾನು ಹೇರಿದ್ದ ನಿಷೇಧವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆಯಿತು. ‘ಕೆಲ ಅಧಿಕಾರಿಗಳು ಕೈಗೊಂಡ ಕಾನೂನುಬಾಹಿರ ಕ್ರಮ ಇದು. ಜಿಯೋ ಟಿ.ವಿ ಪ್ರಸಾರ ಮುಂದುವರಿಸಬಹುದು’ ಎಂದು ಸಮಜಾಯಿಷಿ ನೀಡಿತು.

ಜಿಯೋ ನ್ಯೂಸ್‌ನ ಖ್ಯಾತ ಕಾರ್ಯಕ್ರಮ ನಿರೂಪಕ ಹಮೀದ್ ಮೀರ್ ಅವರ ಮೇಲೆ ಕಳೆದ ತಿಂಗಳು ನಡೆದ ಗುಂಡಿನ ದಾಳಿಯ ಹಿಂದೆ ಐಎಸ್‌ಐ ಕೈವಾಡವಿದೆ ಎಂದು ಜಿಯೋ ಮಾಡುತ್ತಿರುವ ಆರೋಪಕ್ಕೆ ಪ್ರತಿಯಾಗಿ, ತಮ್ಮ ಪ್ರಬಲ ಎದುರಾಳಿ ಜಿಯೋವನ್ನು ಮಣಿಸುವ ಸುಸಂದರ್ಭ ಇದು ಎಂದು ತಿಳಿದ ಎದುರಾಳಿ ಚಾನೆಲ್‌ಗಳು ಐಎಸ್‌ಐ ಬೆಂಬಲಕ್ಕೆ ನಿಂತವು. ಪ್ರಭಾವಿ ಮಾಧ್ಯಮಗಳ ಸಮರದಿಂದಾಗಿ ಗುಂಡಿನ ದಾಳಿ ಪ್ರಕರಣ ದೊಡ್ಡದಾಗಿ ಬಿಂಬಿಸಲ್ಪಟ್ಟಿತು.

ಜಿಯೋ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳು ಭಾರತ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ವಿಚಾರಧಾರೆಯಿಂದ ಪ್ರಭಾವಿತವಾದವು ಎಂದು ವಿರೋಧಿ ಚಾನೆಲ್‌ಗಳು ನಿರಂತರವಾಗಿ ಖಂಡಿಸುತ್ತಿದ್ದವು. ಅಲ್ಲದೇ, ತಮ್ಮನ್ನು ಟೀಕಿಸುತ್ತಿದ್ದ ಜಿಯೋ ವಿರುದ್ಧ ದನಿಯೆತ್ತಿದ ಇಸ್ಲಾಮಿಕ್ ಉಗ್ರವಾದಿಗಳು ಇವಕ್ಕೆ ಬೆಂಬಲ ಸೂಚಿಸಿ ಐಎಸ್‌ಐ ಪರ ನಿಂತಿದ್ದಾರೆ. ನಿಷೇಧಿತ ಉಗ್ರರ ಸಂಘಟನೆ ಲಷ್ಕರ್ –-ಎ –-ತೈಯಬಾ ಮುಖಂಡ ಹಫೀಜ್ ಸಯೀದ್ ಕೂಡ ಇವರೊಂದಿಗೆ ಕೈ ಜೋಡಿಸಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಜಿಯೋ ನ್ಯೂಸ್‌ನ್ನು ಬಗ್ಗುಬಡಿಯಲೆಂದೇ ನಡೆದ ಈ ‘ಪ್ರಹಸನ’ವು ಅಧಿಕಾರದಲ್ಲಿರುವವರು ಮತ್ತು ಸೇನಾ ಮುಖ್ಯಸ್ಥರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಅಧಿಕಾರ ವಹಿಸಿಕೊಂಡ ಒಂದು ವರ್ಷದ ಅವಧಿಯಲ್ಲಿ ಪ್ರಧಾನಿ ನವಾಜ್ ಷರೀಫ್ ಅವರು, ಸೇನೆಯ ಮಾಜಿ ಮುಖ್ಯಸ್ಥ ಪರ್ವೇಜ್ ಮುಷರಫ್ ಮೇಲಿನ ದೇಶದ್ರೋಹದ ಆರೋಪ ಹಾಗೂ ತಾಲಿಬಾನ್ ಶಾಂತಿ ಮಾತುಕತೆ ಸೇರಿದಂತೆ ಹಲವು ವಿಚಾರ ಸಂಬಂಧ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಅವರೊಂದಿಗೆ ತಿಕ್ಕಾಟದಲ್ಲಿ ತೊಡಗಿದ್ದಾರೆ. ಇದಕ್ಕೆ ಈಗ ಹೊಸ ಸೇರ್ಪಡೆ ಜಿಯೋ ಮೇಲಿನ ನಿರ್ಬಂಧದ ಪ್ರಕರಣ.

‘ಮಾಧ್ಯಮ ಸಮರ ತೀಕ್ಷ್ಣ ಮತ್ತು ನಾಟಕೀಯವಾದದ್ದು. ಆದರೆ ಇಲ್ಲಿರುವ ಪ್ರಮುಖ ಸಂಗತಿ ಇದಲ್ಲ. ವಿಶಾಲ ಅರ್ಥದಲ್ಲಿ ಹೇಳುವುದಾದರೆ ಇದು ಪ್ರಧಾನಿ ಮತ್ತು ಸೇನೆ ನಡುವಣ ಸಂಘರ್ಷ’ ಎಂಬುದು ರಾಜಕಾರಣಿ ಅಯಾಜ್ ಅಮೀರ್ ಅವರ ವಿಶ್ಲೇಷಣೆ.

ಸುದ್ದಿ ಪ್ರಸಾರ ಹಾಗೂ ವೀಕ್ಷಕರ ಸಂಖ್ಯೆಯ ದೃಷ್ಟಿಯಿಂದ ಕಳೆದೊಂದು ದಶಕದಿಂದ ಮೀರ್ ಶಕೀಲ್ ಉರ್ ರೆಹಮಾನ್ ಒಡೆತನದ ಜಿಯೋ ವ್ಯಾಪ್ತಿ ವಿಶಾಲವಾದದ್ದು. ಭಾರಿ ಪ್ರಮಾಣದ ಆದಾಯವನ್ನು ‘ಬಾಚಿಕೊಳ್ಳುತ್ತಿದೆ’ ಎಂದೇ ಹೇಳಬೇಕು.

ಪಾಕಿಸ್ತಾನದ ರಾಜಕಾರಣದಲ್ಲಿ ಸೇನೆಯ ಹಸ್ತಕ್ಷೇಪ ಮೊದಲಿನಿಂದಲೂ ಇದ್ದಿದ್ದೇ. ಆದರೆ ಜಿಯೋ ತನ್ನ ಪ್ರಭಾವದಿಂದಾಗಿ ಸೇನೆಯ ಹಸ್ತಕ್ಷೇಪವನ್ನು ಸಮರ್ಥವಾಗಿ ಟೀಕೆಗೊಳಪಡಿಸುತ್ತಿತ್ತು.

೨೦೧೧ರಲ್ಲಿ ಅಮೆರಿಕ ಸೇನೆ ಪಾಕಿಸ್ತಾನ ನೆಲದಲ್ಲಿ ಕಾರ್ಯಾಚರಣೆ ನಡೆಸಿ ಒಸಾಮಾ ಬಿನ್ ಲಾಡೆನ್‌ನ  ಹತ್ಯೆ ಮಾಡಿತ್ತು. ಇಂತಹ ಘಟನೆಗಳನ್ನಿಟ್ಟುಕೊಂಡು ಸೇನೆ ಮೇಲೆ ಜಿಯೋ  ಮುಗಿಬಿದ್ದಿತ್ತು. ಕೆಲ ಸೇನಾಧಿಕಾರಿಗಳು  ಇದರ ಆಹಾರವಾಗಿದ್ದೂ ಉಂಟು.
ಇದರ ಹಿನ್ನೆಲೆಯಲ್ಲಿ ಯಶಸ್ಸಿನ ಜತೆ ಜತೆಗೇ ಸಾಕಷ್ಟು ಶತ್ರುಗಳೂ ಜಿಯೋ ಚಾನೆಲ್‌ನ  ಬೆನ್ನು ಹತ್ತಿದ್ದಾರೆ.

ಕೆಲ ದಿನಗಳ ಹಿಂದೆ ಜಿಯೋ ನ್ಯೂಸ್‌ನ ಮನರಂಜನಾ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ನಟಿ ವೀಣಾ ಮಲಿಕ್ ಅವರ ವಿವಾಹದ  ‘ಮರುಸೃಷ್ಟಿ’ಯ ಪ್ರಸಾರ ಆದಾಗ    ಹಿನ್ನೆಲೆಯಲ್ಲಿ ಧಾರ್ಮಿಕ ಶ್ಲೋಕಗಳು ಕೇಳಿಬರುತ್ತಿತ್ತು. ಜನಪ್ರಿಯತೆಗಾಗಿ ಏನನ್ನಾದರೂ ಮಾಡುತ್ತೇನೆಂಬ ವೀಣಾ ಧೋರಣೆ ಧಾರ್ಮಿಕ ಮುಖಂಡರನ್ನು ಕೆರಳಿಸಿತು. ಅಲ್ಲದೇ ಧರ್ಮನಿಂದನೆಯ ವಿವಾದವನ್ನೂ ಅದು ಹುಟ್ಟುಹಾಕಿತು. ಉಳಿದ ಮಾಧ್ಯಮಗಳು ಇಂತಹ ಒಂದು ಸುವರ್ಣಾವಕಾಶಕ್ಕಾಗಿ ಕಾಯುತ್ತಿದ್ದವರಂತೆ ಈ ವಿಚಾರವನ್ನು ದೊಡ್ಡದು ಮಾಡಿದ ಕಾರಣ ಅದು ದೊಡ್ಡ ಸುದ್ದಿಯಾಯಿತು.

ವೀಣಾ ಈ ಹಿಂದೆ ತೋಳುಗಳ ಮೇಲೆ ಐಎಸ್‌ಐ ಎಂದು ಬರೆಸಿಕೊಂಡು ಅರೆನಗ್ನರಾಗಿ ಭಾರತದ ನಿಯತಕಾಲಿಕೆಯೊಂದರ ಮುಖ ಪುಟದಲ್ಲಿ ಕಾಣಿಸಿಕೊಂಡಿದ್ದರು. ಆಗಲೂ ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಂತಹ ನಟಿಗೆ ಕಾರ್ಯಕ್ರಮದಲ್ಲಿ ಅವಕಾಶ ನೀಡಿದ್ದು ಅದರ ವಿರುದ್ಧ ರೋಷ ಹೆಚ್ಚಲು ಕಾರಣವಾಯಿತು.

ಪಾಕಿಸ್ತಾನದಲ್ಲಿ ಜಾಹೀರಾತಿನ ಬಹುಪಾಲು ಆದಾಯವನ್ನು ಜಿಯೋ ಒಂದೇ ಗಳಿಸುತ್ತದೆ. ಚಿಕ್ಕ ಪುಟ್ಟ ಚಾನೆಲ್‌ಗಳು ಅದಕ್ಕೆ ಪೈಪೋಟಿ ನೀಡಲಾಗದೇ ಸೊರಗುತ್ತಿವೆ. ಹೀಗಾಗಿ ಇದುವರೆಗೆ ಜಿಯೋ ಮೇಲೆ ವ್ಯಾವಹಾರಿಕ ದೃಷ್ಟಿಕೋನದಿಂದ ಆರೋಪಗಳ ಸುರಿಮಳೆಗರೆಯುತ್ತಿದ್ದ ಪ್ರತಿಸ್ಪರ್ಧಿಗಳಿಗೆ ಈ ವಿಚಾರದಲ್ಲಿ ಐಎಸ್‌ಐ ಕುಮ್ಮಕ್ಕೂ ದೊರೆಯಿತು. ಇದು ತೀರಾ ನಿಂದನೆಯ ಸ್ವರೂಪ ಪಡೆದು, ಸಂಘರ್ಷ ದಿಕ್ಕು ತಪ್ಪಿತು.

ವೈಯಕ್ತಿಕ ಟೀಕೆ: ವೀಣಾ ಮಲಿಕ್ ಅವರ ಕಾರ್ಯಕ್ರಮದಲ್ಲಿ ಧಾರ್ಮಿಕ ನಿಂದನೆಯ ಅಂಶಗಳಿವೆ ಎಂದು ತೀರ್ಮಾನಿಸಿದ ಧಾರ್ಮಿಕ ಮುಖಂಡರು, ಜಿಯೋ ವಿರುದ್ಧ ಧರ್ಮನಿಂದನೆಯ ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ  ಹಮೀದ್ ಮೀರ್ ಅವರ ವಿರುದ್ಧ ಅವಹೇಳನಕಾರಿ ಟೀಕೆಗಳು ಹರಿದಾಡತೊಡಗಿವೆ. ತೀವ್ರ ಪೈಪೋಟಿ ನೀಡುತ್ತಿರುವ ಚಾನೆಲ್ ಎಆರ್‌ವೈನ ನಿರೂಪಕ ಮುಬಾಷೆರ್ ಲುಕ್ಮನ್ ಅವರಿಗಂತೂ ಜಿಯೋ ಮೇಲೆ ವಾಗ್ದಾಳಿ ನಡೆಸುವುದು ಒಂದು ಚಾಳಿಯೇ ಆಗಿದೆ.

ಬಿಕ್ಕಟ್ಟುಗಳ ಮಧ್ಯೆ ಜಿಯೋ  ಜನಪ್ರಿಯತೆ ಕುಂದಿದೆ. ಕೆಲ ಕೇಬಲ್ ನಿರ್ವಾಹಕರು ಜಿಯೋವನ್ನು ಮೂಲೆಗುಂಪು ಮಾಡಿದ್ದರೆ ಇನ್ನು ಕೆಲವರು ಪ್ರಸಾರವನ್ನೇ ಸ್ಥಗಿತಗೊಳಿಸಿದ್ದಾರೆ. ಜಾಹೀರಾತುದಾರರು ಜಿಯೋಗೆ ಬೆನ್ನು ಮಾಡಿದ್ದಾರೆ. ಮಾಲೀಕ ರೆಹಮಾನ್ ದುಬೈನಲ್ಲಿ ವಾಸವಾಗಿದ್ದಾರೆ. ಪಾಕಿಸ್ತಾನದಲ್ಲಿದ್ದು ಚಾನೆಲ್‌ನ ಜವಾಬ್ದಾರಿ ಹೊತ್ತಿದ್ದ ಅವರ ಮಗ ಇಬ್ರಾಹಿಂ ಕೂಡ ಈಗ ಅಲ್ಲಿಗೇ ಪಲಾಯನ ಮಾಡಿದ್ದಾರೆ.

ಇಷ್ಟೆಲ್ಲ ಆದ ನಂತರ ನಟಿ ವೀಣಾ ಅವರ ಕಾರ್ಯಕ್ರಮ, ಪತ್ರಕರ್ತ ಹಮೀದ್ ಮೀರ್ ಹತ್ಯೆ ಯತ್ನ ಪ್ರಕರಣದ ಸಂಬಂಧದ ಐ ಎಸ್ ಐ ಮೇಲೆ ಮಾಡಿದ ಆರೋಪ ಸಂಬಂಧ ಜಿಯೋ  ಐಎಸ್‌ಐ ಹಾಗೂ ಸೇನೆಯ ಕ್ಷಮೆ ಯಾಚಿಸಿದೆ. ಕಠಿಣ ಶಿಕ್ಷೆ ಎದುರಿಸುವುದಾಗಿ ಹೇಳಿಕೊಂಡಿದೆ. ಸೇನೆಯೊಂದಿಗೆ ಸಂಬಂಧ ಕೆಡಿಸಿಕೊಂಡ ಪ್ರಧಾನಿ ನವಾಜ್ ಜಿಯೋ ಪರ ನಿಂತಿದ್ದಾರೆ.  ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಹೊಸ ಪರಿಕಲ್ಪನೆ ಹಿರಿಯ ಪತ್ರಕರ್ತರಲ್ಲಿ ಆತಂಕ ಸೃಷ್ಟಿಸಿದೆ.

‘ಸಂಘರ್ಷ ಹೀಗೆಯೇ ಮುಂದುವರೆದರೆ ದೇಶದ ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ಹೊಣೆ­ಗಾರಿಕೆಗೆ ಧಕ್ಕೆ ಉಂಟಾಗುತ್ತದೆ’ ಎಂದು ಇಂಗ್ಲಿಷ್ ಪತ್ರಿಕೆ ‘ಡಾನ್’ ಎಚ್ಚರಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT