ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿಗಳಿಂದ ಅರೆಲಕ್ಮಾಪುರ ಆಮ್ಲ ಮಳೆ ಪ್ರದೇಶ ಪರಿಶೀಲನೆ

Last Updated 1 ನವೆಂಬರ್ 2012, 9:40 IST
ಅಕ್ಷರ ಗಾತ್ರ

ಅಕ್ಕಿಆಲೂರ: ಇಲ್ಲಿಗೆ ಸಮೀಪದ ಅರೆಲಕ್ಮಾಪುರದಲ್ಲಿ ಹಳದಿ ಬಣ್ಣದ ಮಳೆ ಸುರಿದು ಗ್ರಾಮಸ್ಥರಲ್ಲಿ ಭಯ ಮೂಡಿಸಿದ್ದ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಬುಧವಾರ ಮುಂಜಾನೆ ಗ್ರಾಮಕ್ಕೆ ಭೇಟಿ ನೀಡಿ ಮಳೆ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿತು.

ಸಿದ್ಧಾರೂಢ ಮಠಕ್ಕೆ ಹೊಂದಿಕೊಂಡಿರುವ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿದ ವಿಜ್ಞಾನಿಗಳು ಮನೆಗಳ ಮೇಲ್ಭಾಗದಲ್ಲಿದ್ದ ತಗಡು, ಹಂಚು, ಗೋಡೆಗಳ ಮೇಲೆ ಮೂಡಿರುವ ಹಳದಿ ಬಣ್ಣದ ಕಲೆಗಳನ್ನು ವೀಕ್ಷಿಸಿದರು. ಬಟ್ಟೆಗಳ ಮೇಲೆ ಮೂಡಿದ್ದ ಕಲೆಗಳನ್ನು ನೋಡಿದ ವಿಜ್ಞಾನಿಗಳು ರೈತರ ಬೆಳೆಗಳನ್ನು ಸಹ ಪರಿಶೀಲಿಸಿದರು.

ಮಳೆ ಒಂದೆರಡು ಸೆಕೆಂಡುಗಳ ಕಾಲ ಮಾತ್ರವೇ ಬಿದ್ದಿದ್ದು ನೀರು ಸಂಗ್ರಹಗೊಂಡಿಲ್ಲ. ಹೀಗಾಗಿ ಸಂಶೋಧನೆ ಕೈಗೊಳ್ಳುವುದು ಅಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟ ವಿಜ್ಞಾನಿಗಳು ಸಂಶೋಧನೆ ನಡೆದು ವರದಿ ಬರುವ ವರೆಗೂ ಇದಕ್ಕೆ ಕಾರಣ ತಿಳಿಯುವುದಿಲ್ಲ. ಮಳೆ ಸ್ವಲ್ಪ ಪ್ರಮಾಣದಲ್ಲಿ ಸುರಿದಿದೆ. ಹೀಗಾಗಿ ಯಾರೂ ಆತಂಕ ಪಡಬೇಕಿಲ್ಲ ಎಂದು ಸ್ಪಷ್ಪಪಡಿಸಿದರು.

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಕೆಲವು ಮಕ್ಕಳ ಮೇಲೆ ಮಳೆ ಬಿದ್ದಿದ್ದರೂ ಯಾವುದೇ ತೊಂದರೆ ಆಗಿಲ್ಲ  ಎಂಬುದನ್ನು ಗ್ರಾಮಸ್ಥರು ವಿಜ್ಞಾನಿಗಳ ಗಮನಕ್ಕೆ ತಂದರು. ಕೆಲವು ಗಿಡಗಳ ಎಲೆ ಮೇಲಿನ ಕಲೆಯನ್ನು ಅಳಿಸಿದರೆ ಆ ಭಾಗದಲ್ಲಿ ಸುಟ್ಟ ಕಲೆ ಮೂಡಿರುವುದನ್ನು ಗಮನಿಸಿದ ವಿಜ್ಞಾನಿಗಳು ರಸಾಯನಿಕ ದ್ರವ್ಯದ ಅಂಶ ಹೆಚ್ಚಿರುವುದರಿಂದ ಹೀಗಾಗಿರಬಹುದು ಎಂದರು.

ಯಾವುದಾದರೂ ಪ್ರದೇಶದಲ್ಲಿ ವಾಯು ಮಾಲಿನ್ಯ ಉಂಟಾದರೆ ಅದರ ದುಷ್ಪರಿಣಾಮ ದೂರದ ಬೇರೆ ಪ್ರದೇಶದ ಮೇಲೆ ಬೀರುವ ಸಂಭವ ಹೆಚ್ಚಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿಯೂ ಕೂಡ ಮಾಲಿನ್ಯದ ದುಷ್ಪರಿಣಾಮ ಉಂಟಾದ ಸಂಶಯ ವ್ಯಕ್ತಪಡಿಸಿದ ವಿಜ್ಞಾನಿಗಳು ಸಾಮಾನ್ಯವಾಗಿ ಇದು ತುಂಬಾ ಅಪರೂಪದ ಪ್ರಕರಣವಾಗಿದೆ. ಇಂಥ ಪ್ರಕರಣವನ್ನು ತಾವು ಕಂಡಿಲ್ಲ. ಪ್ರಯೋಗಾಲಯದ ವರದಿ ಪಡೆದ ಬಳಿಕ ನಿಖರವಾದ ಕಾರಣ ದೊರೆಯಲಿದೆ ಎಂದರು.

ನೈಟ್ರೋಜನ್ ಮತ್ತು ಗಂಧಕ ವಾತಾವರಣದಲ್ಲಿ ಬೆರೆಯುವುದರಿಂದ ಹಳದಿ ಬಣ್ಣದ ಮಳೆ ಸುರಿಯುವ ಸಾಧ್ಯಗಳಿವೆ. ವಾಹನ ದಟ್ಟನೆ, ಕೈಗಾರಿಕಾ ಪ್ರದೇಶ ಮತ್ತು ದಟ್ಟ ಅರಣ್ಯದಿಂದಲೂ ಇಂಥ ಮಳೆ ಬೀಳಬಹುದು. ಆದರೆ ಈ ಭಾಗದಲ್ಲಿ ಅಂಥ ಸಾಧ್ಯತೆಗಳು ಇಲ್ಲ. ಅದಾಗ್ಯೂ ಆಮ್ಲ ಮಳೆ ಬಿದ್ದಿರುವುದು ಕುತೂಹಲದ ಸಂಗತಿ ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಮಹ್ಮದ್ ನಸರುಲ್ಲಾ, ಪರಿಸರ ಇಲಾಖೆಯ ಅಧಿಕಾರಿ ಪ್ರಕಾಶ, ಭೂವಿಜ್ಞಾನಿ ಶಬ್ಬೀರ್ ಅಹ್ಮದ್ ದಿಡಗೂರ, ಹಿರೇಹುಲ್ಲಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುಟ್ಟನಗೌಡ ಮಾಳಗಿ ವಿಜ್ಞಾನಿಗಳಿಗೆ ಅಗತ್ಯ ಮಾಹಿತಿ ನೀಡಿದರು.

ಗ್ರಾಮಸ್ಥರಾದ ಗಣೇಶಪ್ಪ ರಾಮಣ್ಣನವರ, ಮಲ್ಲಪ್ಪ ಕರೆಣ್ಣನವರ, ನಾರಾಯಣ ಕರೆವ್ವನವರ, ನಿಂಗಪ್ಪ ರಾಣೇಬೆನ್ನೂರ, ಅಣ್ಣಪ್ಪ ಪಾಟೀಲ, ಅನಂತಗೌಡ ಪಾಟೀಲ, ಮಂಜುನಾಥ ಪಾಟೀಲ, ವಾಸಪ್ಪ ಕರೆಣ್ಣನವರ, ಧನಪಾಲಪ್ಪ ರಾಮಣ್ಣನವರ ಹಳದಿ ಮಳೆಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.

ಹಾನಗಲ್ಲ ತಾಲ್ಲೂಕಿನ ತಹಶೀಲ್ದಾರ ರಮೇಶ ಕೋನರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT