ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕ ಪೂರೈಸಿದ ಮೈಸೂರು ರೇಷ್ಮೆ

Last Updated 4 ಜೂನ್ 2013, 19:59 IST
ಅಕ್ಷರ ಗಾತ್ರ

ಮುನಿದ ಮಡದಿಯ ಕೋಪ ತಣ್ಣಗಾಗಿಸಲು ಏನು ಮಾಡಬಹುದು? ಅಬ್ಬಬ್ಬಾ ಎಂದರೆ ಅಂಗಡಿಗೆ ಹೋಗಿ ಒಂದು ಷಿಫಾನ್ ಅಥವಾ ಜಾರ್ಜೆಟ್ ಸೀರೆ ತಂದುಕೊಡಬಹುದು. ಬ್ಯಾಂಕ್   ಬ್ಯಾಲೆನ್ಸ್ ಸ್ವಲ್ಪ ಹೆಚ್ಚಿಗೆ ಇದ್ದರೆ `ರೇಷ್ಮೆ ಸೀರೆ' ಖರೀದಿಸಬಹುದು. ಇಡೀ ಕುಟುಂಬದ ಸದಸ್ಯರಿಗೆ ಸೀರೆ ತರುವುದಾದರೆ ಒಂದಿಷ್ಟು ಸಾಲ ಮಾಡಬಹುದು! ಹಾಗೆಂದು ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೂ ಯೋಚನೆ ಮಾಡಿದ್ದರೆ ಮೈಸೂರಿನ ಹೆಮ್ಮೆಯ ರೇಷ್ಮೆ ನೇಯ್ಗೆ ಕಾರ್ಖಾನೆ ತಲೆ ಎತ್ತುತ್ತಲೇ ಇರಲಿಲ್ಲ!

ಹೌದು, ದೇಶದಲ್ಲೇ ಪ್ರತಿಷ್ಠಿತ ರೇಷ್ಮೆ ವಸ್ತ್ರೋದ್ಯಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ರೇಷ್ಮೆ ನೇಯ್ಗೆ ಕಾರ್ಖಾನೆ' ಆರಂಭದ ಹಿಂದಿನ ಕಥೆಇದು.  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರ   ದರ್ಶಿತ್ವ ಮತ್ತು ಪರಿಶ್ರಮದಿಂದ 1912ರಲ್ಲಿ ಈ ಕಾರ್ಖಾನೆ ಆರಂಭವಾಯಿತು. ಆರಂಭದಲ್ಲಿ ರಾಜ ವಂಶಸ್ಥರ ದಿರಿಸುಗಳಿಗೆ ಬೇಕಾದ ಉತ್ಕೃಷ್ಟ ದರ್ಜೆಯ ರೇಷ್ಮೆ ವಸ್ತ್ರ ತಯಾರಿಕೆಗಷ್ಟೇ ಸೀಮಿತವಾಗಿದ್ದ ಕಾರ್ಖಾನೆ, 1938ರಿಂದ ವಾಣಿಜ್ಯ ದೃಷ್ಟಿಯಿಂದ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಶುರುವಿಟ್ಟುಕೊಂಡಿತು. ಈ ಕಾರ್ಖಾನೆಗೆ ಈಗ ಭರ್ತಿ ನೂರು ವರ್ಷ ಪೂರೈಸಿದ ಸಂಭ್ರಮ.

2012ರಲ್ಲೇ ಶತಮಾನೋತ್ಸವ ಆಚರಿಸಿಕೊಂಡ ರೇಷ್ಮೆ ಕಾರ್ಖಾನೆ ಅರ್ಥಾತ್ ಈಗಿನ `ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ'(ಕೆಎಸ್‌ಐಸಿ), ಕಾಲಕಾಲಕ್ಕೆ ತನ್ನ ಮಾರಾಟ ವ್ಯವಸ್ಥೆಯಲ್ಲಿಯೂ ಬಹಳಷ್ಟು ಬದಲಾವಣೆ ಮಾಡಿಕೊಂಡಿದೆ. ದೇಶ-ವಿದೇಶದ ಎಲ್ಲ ಮೂಲೆಯ ಗ್ರಾಹಕರನ್ನು ತಲುಪಲೆಂದೇ ಆನ್‌ಲೈನ್ ಷಾಪಿಂಗ್ ಮತ್ತು ಸುಲಭ ಖರೀದಿಗೆ ಅವಕಾಶವಾಗುವಂತೆ ಸರ್ಕಾರಿ ನೌಕರರಿಗೆ ಕಂತುಗಳಲ್ಲಿ ಸೀರೆ ಮಾರಾಟ ವ್ಯವಸ್ಥೆಯನ್ನೂ ಕಲ್ಪಿಸಿದೆ.  ಸ್ವಾತಂತ್ರ್ಯಾ ನಂತರ ಮೈಸೂರು ರೇಷ್ಮೆ ಕಾರ್ಖಾನೆಯನ್ನು ಮೈಸೂರು ಸರ್ಕಾರದ ರೇಷ್ಮೆ ಇಲಾಖೆಗೆ ವರ್ಗಾಯಿಸಲಾಗಿತ್ತು. 1980ರಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ (ಕೆಎಸ್‌ಐಸಿ) ಹಸ್ತಾಂತರಿಸಲಾಗಿದೆ.

ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ `ಕೆಎಸ್‌ಐಸಿ' ಸೀರೆ ತಯಾರಿಕಾ ಘಟಕದಲ್ಲಿ ಸದ್ಯ 46 ಮಹಿಳೆಯರು ಸೇರಿದಂತೆ ಒಟ್ಟು 503 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಒಂದೇ ಪಾಳಿಯಲ್ಲಿ (ಬೆಳಿಗ್ಗೆ 8ರಿಂದ ಸಂಜೆ 4 ಗಂಟೆವರೆಗೆ) ಈ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.  ಈ ಮೊದಲು 10 ಮಗ್ಗಗಳಿಂದ (ಲೂಮ್ಸ) ಆರಂಭವಾದ ಕಾರ್ಖಾನೆಯಲ್ಲಿ ಈಗ 139 ವಿದ್ಯುತ್ ಚಾಲಿತ ಮಗ್ಗುಗಳು ಇವೆ. ಇದಿಷ್ಟೂ ರಾಜ್ಯದ ಹೆಮ್ಮೆಯ ರೇಷ್ಮೆ ಜವಳಿ ಸಂಸ್ಥೆ ಬೆಳೆದುಬಂದ ಹಾದಿಯ ಕಿರುಪರಿಚಯ.

ಗುಣಮಟ್ಟಕ್ಕೆ ಆದ್ಯತೆ

100 ವರ್ಷ ಪೂರೈಸಿರುವ ಸಂಸ್ಥೆಯ ಸದಾಕಾಲದ ಅಮೌಲ್ಯ ಬಂಡವಾಳ ಎಂದರೆ `ಗುಣಮಟ್ಟ'.
ಉತ್ಕೃಷ್ಟ ದರ್ಜೆಯ ರೇಷ್ಮೆ ಗೂಡುಗಳನ್ನು ಖರೀದಿಸಲು ಹಾಗೂ ನೂಲು ತೆಗೆಯಲು ಜಿಲ್ಲೆಯ ತಿರಮಕೂಡಲ ನರಸೀಪುರ ತಾಲ್ಲೂಕಿನಲ್ಲಿ ವಿಶೇಷ ಘಟಕವನ್ನೇ ತೆರೆಯಲಾಗಿದೆ. ರಾಮನಗರ, ಶಿಡ್ಲಘಟ್ಟದಿಂದ ನೂರಾರು ರೈತರು ರೇಷ್ಮೆ ಗೂಡುಗಳನ್ನು ಮಾರಾಟ ಮಾಡಲು ಇಲ್ಲಿಗೆ ಆಗಮಿಸುತ್ತಾರೆ.

ಪ್ರಸ್ತುತ ಒಂದು ಕೆ.ಜಿ ರೇಷ್ಮೆ ಗೂಡಿನ ಬೆಲೆ ರೂ390-400ರ ಆಸುಪಾಸಿನಲ್ಲಿದೆ. ಈ ವಿಶೇಷ ಘಟಕದಲ್ಲಿ ನಿತ್ಯ 700ರಿಂದ 800 ಕೆ.ಜಿವರೆಗೂ ರೇಷ್ಮೆ ಗೂಡು ಖರೀದಿಸಲಾಗುತ್ತದೆ. ಇದರಿಂದಾಗಿ ರೇಷ್ಮೆಯನ್ನೇ ನಂಬಿಕೊಂಡಿರುವ  ನಾಲ್ಕು ಸಾವಿರ ಕುಟುಂಬಗಳು ನೆಮ್ಮದಿಯ ಜೀವನ ಕಾಣುವಂತಾಗಿದೆ.



ರೇಷ್ಮೆ ಜವಳಿ ತಯಾರಿಕೆ
ರೇಷ್ಮೆ ಸೀರೆ ಮತ್ತು ಇತರೆ ವಸ್ತ್ರಗಳಿಗೆ ಬಳಸಲಾಗುವ ರೇಷ್ಮೆ ದಾರ ಹಾಗೂ ಚಿನ್ನದ ಎಳೆಗಳನ್ನು ಉತ್ಕೃಷ್ಟ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಅತ್ಯಂತ ಕಠಿಣವಾದ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

`ಕೆಎಸ್‌ಐಸಿ' 26/28 ಡಿನೈರ್ (ರೇಷ್ಮೆ ನೂಲು) ಕಚ್ಚಾದಾರ, ಶೇ 100ರಷ್ಟು ರೇಷ್ಮೆ, ಚಿನ್ನ ಮತ್ತು ಬೆಳ್ಳಿಯನ್ನು ಸೀರೆ ನೇಯ್ಗೆಗೆ ಬಳಸುತ್ತದೆ.

ರೂ 2.23 ಲಕ್ಷ ಮೌಲ್ಯದ ಸೀರೆ!

ರೇಷ್ಮೆ ಸೀರೆ ಯಾತ್ರಿಕ ನೇಯ್ಗೆಯ ಈ ಘಟಕದಲ್ಲಿ ವಾರ್ಷಿಕ ಒಟ್ಟು 76 ಸಾವಿರ (4.21 ಲಕ್ಷ ಮೀಟರ್) ಸೀರೆಗಳನ್ನು ತಯಾರಿಸಲಾಗುತ್ತದೆ. ಈ ಸೀರೆಗಳ ಮೌಲ್ಯ ರೂ11 ಸಾವಿರದಿಂದ ರೂ2.23 ಲಕ್ಷದವರೆಗೂ ಇದೆ.

ಶೇ 100ರಷ್ಟು ಅಪ್ಪಟ ರೇಷ್ಮೆ, ಗುಣಮಟ್ಟದ ಜರಿ ಹಾಗೂ ಚಿನ್ನ ಮತ್ತು ಬೆಳ್ಳಿ ಎಳೆಗಳನ್ನೂ ಸೀರೆ ನೇಯ್ಗೆಯಲ್ಲಿ ಬಳಸಲಾಗುತ್ತದೆ.
ಸೀರೆ ತಯಾರಿಕೆಯ ನಕಲು ತಪ್ಪಿಸಲು ಪ್ರತಿ ಸೀರೆಗೂ ವಿಶಿಷ್ಟ ಸಂಖ್ಯೆ, `ಹಾಲೋಗ್ರಾಂ' ಅಳವಡಿಸಲಾಗುತ್ತದೆ. ಅಲ್ಲದೇ, `ಮೈಸೂರು ಸಿಲ್ಕ್' ಬ್ರ್ಯಾಂಡ್ ನೇಮ್‌ನಲ್ಲಿಯೇ ಸೀರೆಗಳನ್ನು ಮಾರಲಾಗುತ್ತದೆ. ಗ್ರಾಹಕರು ಸಂಖ್ಯೆ, ಲೋಗೋ ನೋಡಿ ಸೀರೆಯ ಅಸಲಿತನ ಖಾತರಿಪಡಿಸಿಕೊಂಡು ಖರೀದಿಸಬಹುದು.

ದಾರದ 1 ಎಳೆಗೆ 10 ಗೂಡು!
ರೇಷ್ಮೆ ಸೀರೆಯ ಒಂದು ಎಳೆ ದಾರ ತಯಾರಿಸಲು 10 ರೇಷ್ಮೆ ಗೂಡುಗಳು ಬಳಕೆಯಾಗುತ್ತವೆ! ಒಂದು ಕೆ.ಜಿ ನೂಲು ತಯಾರಿಕೆಗೆ 7 ರಿಂದ 8 ಕೆ.ಜಿ ಗೂಡುಗಳು ಬೇಕಾಗುತ್ತವೆ. ಒಂದು ಸೀರೆ ತಯಾರಾಗಲು 15 ಸಾವಿರ ಎಳೆ ದಾರ ಬೇಕಾಗುತ್ತದೆ. ಒಬ್ಬ ವ್ಯಕ್ತಿ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಕೆಲಸ ಮಾಡಿದರೆ ಎರಡು ಸೀರೆಗಳು ಸಿದ್ಧಗೊಳ್ಳುತ್ತವೆ. ರೂ1 ಲಕ್ಷಕ್ಕೂ ಅಧಿಕ ಮೌಲ್ಯದ್ದಾದರೆ ಒಂದು ಸೀರೆಯನ್ನಷ್ಟೇ ತಯಾರಿಸಲು ಸಾಧ್ಯವಾಗುತ್ತದೆ.

ಸೀರೆಗಳ ವೈವಿಧ್ಯ
ಕ್ರೇಪ್-ಡಿ-ಚೈನ್, ಜಾರ್ಜೆಟ್ ಹಾಗೂ ಜರಿ ಪ್ರಿಂಟೆಡ್ ಕ್ರೇಪ್ ರೇಷ್ಮೆ ಸೀರೆಗಳೂ ಮೈಸೂರಿನ ಈ ಘಟಕದಲ್ಲಿ ಸಿದ್ಧವಾಗುತ್ತವೆ.
ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಎಂಬ್ರಾಯ್ಡರಿ ಡಿಸೈನ್ ಸ್ಯಾರಿ, ಕುಸುರಿ ವಿನ್ಯಾಸ, ಜವರ್ ಅಂಚಿನ ಸೀರೆ, ಪಲ್ಲು ಸೀರೆ, ದೊಡ್ಡ ಪಲ್ಲು ಸೀರೆ, ಜರಿ ಸೀರೆ, ಬಾರ್ಡ್‌ರ್ ಸೀರೆ, ಮಾವಿನ ಅಂಚಿನ ವಿನ್ಯಾಸ, ಸೂರ್ಯೋದಯ ವಿನ್ಯಾಸದ ಸೀರೆ, ಸಾಂಪ್ರದಾಯಿಕ ಸೀರೆ ಹೀಗೆ ವಿಭಿನ್ನ ಶ್ರೇಣಿ ಮತ್ತು ವಿನ್ಯಾಸಗಳಲ್ಲಿ ಸೀರೆಯನ್ನು ತಯಾರಿಸಲಾಗುತ್ತದೆ. ವಿಶೇಷವೆಂದರೆ, ಗ್ರಾಹಕರು ಬಯಸಿದ ಡಿಸೈನ್‌ನ (ಒಂದು) ಸೀರೆಯನ್ನೂ ಸಿದ್ಧಪಡಿಸಿಕೊಡಲಾಗುತ್ತದೆ.

ಭೌಗೋಳಿಕ ಸೂಚಿ ಗುರುತು
`ಕೆಎಸ್‌ಐಸಿ'ಯಲ್ಲಿ ತಯಾರಾಗುವ ಸೀರೆಗಳಿಗೆ `ಮೈಸೂರು ಸಿಲ್ಕ್' ಎಂಬುದೇ ಬ್ರ್ಯಾಂಡ್ ನೇಮ್ ಆಗಿದೆ. ಈ ವಿಶೇಷ ಗುಣದ ರೇಷ್ಮೆ ಸೀರೆಗೆ 2005ರಲ್ಲಿ `ಭೌಗೋಳಿಕ ಸೂಚಿ'(ಜಿಯಾಗ್ರಫಿಕಲ್ ಟ್ಯಾಗ್) ಗುರುತೂ ಸಹ ಲಭ್ಯವಾಗಿದೆ. ಅಲ್ಲದೇ, ಸಂಸ್ಥೆ ನಿರಂತರವಾಗಿ ಕಾಯ್ದುಕೊಂಡು ಬಂದಿರುವ ಗುಣಮಟ್ಟಕ್ಕೆ `ಐಎಸ್‌ಒ 9001-2008' ಪ್ರಮಾಣ ಪತ್ರ, `ಐಎಸ್‌ಒ 14001-2004' ಪರಿಸರ ದೃಢೀಕರಣ ಪತ್ರ, `ಒಎಚ್‌ಎಸ್‌ಎಎಸ್ 18001-2007' ಪತ್ರಗಳೂ ಲಭಿಸಿವೆ. ರಾಜ್ಯ ಸರ್ಕಾರದಿಂದ `ಮಾರಾಟ ರತ್ನ' ಪ್ರಶಸ್ತಿಯನ್ನೂ `ಕೆಎಸ್‌ಐಸಿ' ಮುಡಿಗೇರಿಸಿಕೊಂಡಿದೆ.

ದಾಖಲೆ ವಹಿವಾಟು
15 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸ್ಥಾಪಿತವಾದ ಕಾರ್ಖಾನೆಗೆ ಆರಂಭಿಕ ಬಂಡವಾಳ ಹೂಡಿದ್ದು, ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು.

1938ರಿಂದ ವಾಣಿಜ್ಯ ಉತ್ಪಾದನೆ ಆರಂಭಿಸಿದ ಬಳಿಕ ಲಾಭಾಂಶವನ್ನು ಕಾರ್ಖಾನೆಯ ಅಭಿವೃದ್ಧಿಗೆ ಬಳಸಲಾಗುತ್ತಿದೆ. 2007-08ರಲ್ಲಿ  ರೂ50.60 ಕೋಟಿ ವಹಿವಾಟು ನಡೆಸಿ,  ರೂ 4.8 ಕೋಟಿ ಲಾಭ ಗಳಿಸಿದ್ದ `ಕೆಎಸ್‌ಐಸಿ', 2011-12ರಲ್ಲಿ  ರೂ 92.99 ಕೋಟಿ ವ್ಯಾಪಾರ ಮಾಡಿ,  ರೂ13.63 ಕೋಟಿ ದಾಖಲೆ ಲಾಭಾಂಶ ಪಡೆದುಕೊಂಡಿದೆ. 2012-13ನೇ ಸಾಲಿನಲ್ಲಿ  ರೂ104.68 ಕೋಟಿ ವಹಿವಾಟು ನಡೆಸಿದ್ದು, ರೂ10 ಕೋಟಿಗೂ ಅಧಿಕ ಲಾಭಾಂಶದ ನಿರೀಕ್ಷೆಯಲ್ಲಿದೆ.

ಮಾರಾಟ ಮಳಿಗೆ
ಮೈಸೂರು, ಬೆಂಗಳೂರು, ಚೆನ್ನೈ, ಕೇರಳ, ಹೈದರಾಬಾದ್ ಸೇರಿದಂತೆ 15ಕ್ಕೂ ಹೆಚ್ಚು ಕಡೆ ಮಾರಾಟ ಮಳಿಗೆಗಳಿವೆ. ಆದರೆ, ರೇಷ್ಮೆ ಸೀರೆ ನೇಯ್ಕೆ ಕಾರ್ಖಾನೆ ಇರುವುದು ಮೈಸೂರಿನಲ್ಲಿ ಮಾತ್ರ.

ಮಾರಾಟ ಮಳಿಗೆಗಳನ್ನು ಹೊರತುಪಡಿಸಿ, ವಿವಿಧ ಜಿಲ್ಲೆ ಹಾಗೂ ಸಿಂಗಪುರ, ದುಬೈ ಸೇರಿದಂತೆ ಇತರೆ ದೇಶಗಳಲ್ಲಿ ಮಾರಾಟ ಮೇಳಗಳನ್ನು ಆಯೋಜಿಸುವ ಮೂಲಕ ವಿಶ್ವದೆಲ್ಲೆಡೆಯ ಗ್ರಾಹಕರನ್ನೂ ತಲುಪುವ ಪ್ರಯತ್ನವನ್ನೂ `ಕೆಎಸ್‌ಐಸಿ' ಮಾಡುತ್ತಿದೆ. ಇದರಿಂದಾಗಿ `ಮೈಸೂರು ಸಿಲ್ಕ್' ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿದೆ.

ಆನ್‌ಲೈನ್ ಷಾಪಿಂಗ್
ಹೊರರಾಜ್ಯ ಹಾಗೂ ವಿದೇಶದಲ್ಲಿನ  ಗ್ರಾಹಕರನ್ನು ತಲುಪಲು `ಕೆಎಸ್‌ಐಸಿ' ಆನ್‌ಲೈನ್ ಷಾಪಿಂಗ್ ವ್ಯವಸ್ಥೆಯನ್ನೂ ಆರಂಭಿಸಿದೆ. ಗ್ರಾಹಕರು ತಮ್ಮ ವಿಳಾಸ ನೀಡಿ, ಮುಂಗಡ ಹಣ ಪಾವತಿಸಿದರೆ ಬುಕ್ಕಿಂಗ್ ಮಾಡಿದ 15-20 ದಿನಗಳಲ್ಲಿ ತಮ್ಮ ಅಚ್ಚುಮೆಚ್ಚಿನ ರೇಷ್ಮೆ ಸೀರೆಯನ್ನು ಮನೆ ಬಾಗಿಲಿಗೇ ಬರಮಾಡಿಕೊಳ್ಳಬಹುದು.

ರೇಷ್ಮೆ ಸೀರೆಯ ಬೆಲೆ  ರೂ11 ಸಾವಿರದಿಂದ ಆರಂಭವಾಗುತ್ತದೆ. ವಿನ್ಯಾಸ ಚೆನ್ನಾಗಿರುವ ಸೀರೆ ಖರೀದಿಸಬೇಕು ಎಂದರೆ ಕನಿಷ್ಠ  ರೂ20 ಸಾವಿರದಿಂದ 25 ಸಾವಿರದವರೆಗೂ ವ್ಯಯಿಸಬೇಕು. ಇದು, ಮಧ್ಯಮ ವರ್ಗದವರಿಗೆ ಸ್ವಲ್ಪ ಕಷ್ಟದ ಖರೀದಿ ಎಂಬುದನ್ನು ಅರಿತ `ಕೆಎಸ್‌ಐಸಿ', ಸರ್ಕಾರಿ ನೌಕರರಿಗಾಗಿ `ಸೀರೆ ಖರೀದಿಸಿ-ಮಾಸಿಕ ಕಂತುಗಳಲ್ಲಿ ಹಣ ಪಾವತಿಸಿ' ಎಂಬ ಸುಲಭದ ಖರೀದಿ ವ್ಯವಸ್ಥೆಯನ್ನೂ ಕಲ್ಪಿಸಿದೆ.

ಸೀರೆಯ ಒಟ್ಟು ಮೌಲ್ಯದ 10ನೇ ಒಂದು ಭಾಗದಷ್ಟು ಹಣವನ್ನು ಖರೀದಿ ವೇಳೆ ಪಾವತಿಸಿ, ಉಳಿದ ಮೊತ್ತವನ್ನು ಒಂಬತ್ತು ತಿಂಗಳ ಕಾಲ ಕಂತುಗಳಲ್ಲಿ ಪಾವತಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ www.ksicsilk.com ಗೆ ಭೇಟಿ ನೀಡಬಹುದು. 

ರೀಲಿಂಗ್ ಮೆಷಿನ್ ಖರೀದಿಗೆ ಚಿಂತನೆ

`ಈ ಹಿಂದೆ ಜಪಾನ್‌ನಿಂದ ರ್‍ಯಾಂಪಿಂಗ್ ಮತ್ತು ಪಿರ್ನ್ (warping and pirn) ಮೆಷಿನ್‌ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಕೆಎಸ್‌ಐಸಿಯಲ್ಲಿ ಆಟೊಮ್ಯಾಟಿಕ್ ರೀಲಿಂಗ್ ಮೆಷಿನ್ ಇಲ್ಲ. ಹೀಗಾಗಿ ಚೀನಾದಿಂದ ಎರಡು ಮೆಷಿನ್‌ಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಇಡೀ ದೇಶದಲ್ಲೇ ಉತ್ಕೃಷ್ಟ ದರ್ಜೆಯ ರೇಷ್ಮೆ ಸೀರೆ ತಯಾರಿಕೆಗೆ `ಮೈಸೂರು  ಸಿಲ್ಕ್' ಹೆಸರುವಾಸಿಯಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಆನ್‌ಲೈನ್ ಷಾಪಿಂಗ್ ಮತ್ತು ಕಂತುಗಳಲ್ಲಿ ಸೀರೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ'.
-ಬಿ.ಎಸ್.ಸದಾನಂದಸ್ವಾಮಿ
ಪ್ರಧಾನ ವ್ಯವಸ್ಥಾಪಕ, ಕೆಎಸ್‌ಐಸಿ

13 ಮೀಟರ್ ಬಟ್ಟೆ ನೇಯ್ಗೆ


'28 ವರ್ಷಗಳಿಂದ `ಕೆಎಸ್‌ಐಸಿ'ಯಲ್ಲಿ  ಕೆಲಸ ಮಾಡುತ್ತಿದ್ದೇವೆ. ದಿನಕ್ಕೆ 11ರಿಂದ 13 ಮೀಟರ್ ಬಟ್ಟೆ ನೇಯುತ್ತೇವೆ. ತಿಂಗಳಿಗೆ  ರೂ  25 ಸಾವಿರದವರೆಗೂ ಸಂಬಳ ಬರುತ್ತದೆ. ಕ್ರೇಪ್, ಜಾರ್ಜೆಟ್ ಸೀರೆಗಳನ್ನು ತಯಾರಿಸುತ್ತೇವೆ. ಕೆಲಸ ಖುಷಿ ಕೊಡುತ್ತದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸದ ಸೀರೆಗಳನ್ನು ಸಿದ್ಧಪಡಿಸುತ್ತೇವೆ'.
ಅಮೃತರಾಜ್.ಕೆಎಸ್‌ಐಸಿ ನೇಕಾರರು

 

ರಜೆ ದಿನ ಹೆಚ್ಚು ಮಾರಾಟ
ದಕ್ಷಿಣ ಭಾರತದವರಿಗೆ ಮೈಸೂರು ರೇಷ್ಮೆ ಸೀರೆ ಬಗ್ಗೆ ಚೆನ್ನಾಗಿಯೇ ಗೊತ್ತಿದೆ. ಆದರೆ, ಉತ್ತರ ಭಾರತದವರಿಗೆ ಅಷ್ಟಾಗಿ ತಿಳಿಸಿಲ್ಲ. ದಸರಾ, ಹಬ್ಬಗಳು, ರಜೆ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಪ್ರತಿ ವರ್ಷ  ್ಙ20 ಕೋಟಿಗೂ ಅಧಿಕ ವಹಿವಾಟು ಇಲ್ಲಿನ ಮಾರಾಟ ಮಳಿಗೆವೊಂದರಲ್ಲೇ ನಡೆಯುತ್ತದೆ.
ಎ. ಸೋಮಣ್ಣ
ಸಹಾಯಕ ಮಾರಾಟ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT