ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯ ಉತ್ಸಾಹಿಗಳಿಗೆ ಒಂದು ಅಗತ್ಯ ಸಲಹಾಸಂಹಿತೆ

ವಿಮರ್ಶೆ
Last Updated 4 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಸೃಜನೇತರ ಎಂಬ ಹಣೆಪಟ್ಟಿಯ ಕೃತಿಗಳು ವಿಮರ್ಶೆಯ ಹಿಡಿತಕ್ಕೆ ಸಿಗುವುದಿಲ್ಲ. ಸಂಶೋಧನೆಯ ಪ್ರಕ್ರಿಯೆಯನ್ನು ಕುರಿತು ವಿಮರ್ಶತ್ಮಾಕವಾಗಿ ಸಾಕಷ್ಟು ದೀರ್ಘವಾಗಿ ಚರ್ಚಿಸಿರುವ ‘ಸಂಶೋಧನ ಮೀಮಾಂಸೆ’ ಕೃತಿಯ ವಿಮರ್ಶೆಯೂ ಸಂಶೋಧನೆಯ ಒಂದು ಭಾಗವೇ ಆಗುತ್ತದೆ. ಇದು ಎಷ್ಟರ ಮಟ್ಟಿಗೆ ಅಗತ್ಯ ಮತ್ತು ಅವಶ್ಯಕ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಅನಿವಾರ್ಯವಾಗಿದೆ.

ಕೃತಿಯ ಕೊನೆಯ ಪ್ರಕರಣದಲ್ಲಿನ ಲೇಖಕರ ಮಾತುಗಳಲ್ಲೇ ಕೃತಿಯ ಪರಿಚಯವಿದೆ. ‘ಸಂಶೋಧನೆಯು ಪದವಿಗಾಗಿ ಮಾಡಿದ ಬರೆಹವಾದ ಕಾರಣ, ಅದು ಪದವಿ ಪಡೆಯುವವರೆಗೂ ಪರೀಕ್ಷಕರ ಮೌಲ್ಯಮಾಪನಕ್ಕೆ ಒಳಪಡುತ್ತಿರುವ ಉತ್ತರ ಪತ್ರಿಕೆಯೇ ಆಗಿರುತ್ತದೆ’. ಅಂದರೆ ಲೇಖಕರು ಪಿಎಚ್.ಡಿ., ಪದವಿ ಪಡೆಯುವ ಸಂದರ್ಭದ ಸಂಶೋಧನೆಯನ್ನು ಕುರಿತೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ. ಪದವಿ ಪಡೆದು, ಹೆಸರಿನ ಮುಂದೆ ಡಾಕ್ಟರ್ ಎಂಬ ಪದವಿಸೂಚಕ ಸಂಕೇತವನ್ನು ಸೇರಿಸಿಕೊಳ್ಳಲು ಹಂಬಲಿಸುವ ಅಪಾರ ಮಂದಿಯನ್ನು ಸಂಶೋಧಕರು ಎಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯೂ ಈಗ ಎದುರಾಗಿದೆ. ಸಂಶೋಧನೆಯ ಕಷ್ಟ ಸುಖಗಳಿಗೆ ಎದೆಯೊಡ್ಡುವ ಸಾಹಸಿಗಳ ಪ್ರಮಾಣ ವಿರಳ ಎಂದು ಲೇಖಕರು ಒಪ್ಪಿಕೊಂಡಿದ್ದಾರೆ.

‘ಸಂಶೋಧನ ಮೀಮಾಂಸೆ’ಯು ಡಾಕ್ಟರೇಟ್ ಪದವಿಗಾಗಿ ನಿಬಂಧ ಸಿದ್ಧಪಡಿಸುವ ಮತ್ತು ಸಲ್ಲಿಸುವ ನಾಲ್ಕು ವರ್ಷದ ಮಟ್ಟಿಗೆ ಸಂಶೋಧಕರಿಗಾಗಿ ಸಿದ್ಧಪಡಿಸಿದ ಮಾರ್ಗದರ್ಶಿ ಎಂದು ತಿಳಿಯಬೇಕಾಗುತ್ತದೆ. ಏಕೆಂದರೆ ಪದವಿಯ ಹಂಗಿಲ್ಲದೆ ಸಂಶೋಧನೆಯನ್ನು ಬಾಳಿನ ಮುಖ್ಯ ಉದ್ದೇಶವಾಗಿರಿಸಿಕೊಂಡ ಸಂಶೋಧಕರ ನಡುವಿನ ಸೂಕ್ಷ್ಮ ಗೆರೆಯನ್ನು ರಹಮತ್ ತರೀಕೆರೆ ಗುರುತಿಸಿದ್ದಾರೆ. ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಪಿಎಚ್.ಡಿ., ಅಧ್ಯಯನಕ್ಕೆ ಪ್ರವೇಶ  ಪಡೆಯಲು ಸಾಲುಕಟ್ಟಿ ನಿಂತಿರುವ ಭಾವೀ ಸಂಶೋಧಕರ ತಂಡ, ‘ತಮ್ಮ ಬಳಿ ಅವಕಾಶ ಇಲ್ಲ’ ಎಂದು ಹೇಳುವ ಮಾರ್ಗದರ್ಶನ ಮಾಡಬೇಕಾದ ಪ್ರಾಧ್ಯಾಪಕರುಗಳು, ಇಂತಹ ಪರಿಸ್ಥಿತಿಯಲ್ಲೂ ನಡೆಯುವ ಪ್ರವೇಶ ಪರೀಕ್ಷೆಗಳು, ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳಲ್ಲಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸುವ ಹೆಚ್ಚು ಸಂಖ್ಯೆಯ ಸಂಶೋಧಕರು, ಪ್ರಕಟಗೊಂಡ ಅವರ ನಿಬಂಧಗಳ ಗುಣಮಟ್ಟ, ಅಗೆದದ್ದನ್ನೇ ಅಗಿದಂತೆ ಕಾಣುವ ವಿಚಾರಗಳು ಇತ್ಯಾದಿಗಳನ್ನು ಗಮನಿಸಿದಾಗ, ಲೇಖಕರೇ ಕೇಳುವ ಸ್ನಾತಕೋತ್ತರ ಪದವಿ ಮುಗಿದೊಡನೆ ಡಾಕ್ಟರೇಟ್ ಪದವಿಯ ಹಂಗಿಲ್ಲದೆ ನೌಕರಿ ಸಿಗುವಂತಿದ್ದರೆ, ಬಹಳ ಜನ ಪಿಎಚ್.ಡಿ. ಅಧ್ಯಯನಕ್ಕೆ ಬರುತ್ತಿದ್ದರೇ? ಎಂಬ ಪ್ರಶ್ನೆಯಲ್ಲೇ ಉತ್ತರವಿರುವುದು ತಿಳಿಯುತ್ತದೆ.

ಪಿಎಚ್.ಡಿ. ಪದವಿಯು ಉದ್ಯೋಗಕ್ಕೆ ಅವಕಾಶ ಕಲ್ಪಿಸುತ್ತಿರುವ ಕಾರಣ ಪ್ರವೇಶ ಪರೀಕ್ಷೆಗಳು, ಲಭ್ಯವಾಗುವ ಮಾರ್ಗದರ್ಶಕ ಪ್ರಾಧ್ಯಾಪಕರು, ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ವಿಷಯ, ನಂತರದ ಅಧ್ಯಯನ ಕ್ರಮ ಇತ್ಯಾದಿಗಳ ಬಗ್ಗೆ ಸೂಕ್ತ ಮಾರ್ಗದರ್ಶಕ ಮಾಹಿತಿಗಳಿಗಾಗಿ ಇಂತಹ ಕೃತಿಗಳು ಬೇಕಾಗುತ್ತವೆ. ಕನ್ನಡದಲ್ಲಿ ಸಂಶೋಧನೆಗೆ ಸಂಬಂಧಿಸಿದಂತೆ ಇಂತಹ ಕೃತಿಗಳು ಹಿಂದೆ ಪ್ರಕಟವಾಗಿವೆ. ಕೆಲವು ಸಮರ್ಥ ವಿದ್ವಾಂಸರು ಸಂಶೋಧನೆಗೆ ಸಂಬಂಧಿಸಿದ ಮಹತ್ವದ ತಿಳಿವಳಿಕೆ ನೀಡಿದ್ದಾರೆ. ಎಂ. ಚಿದಾನಂದಮೂರ್ತಿ, ಎಂ.ಎಂ. ಕಲಬುರ್ಗಿ. ಬಿ.ವಿ. ಶಿರೂರ, ಸಂಗಮೇಶ ಸವದತ್ತಿಮಠ, ಎ.ವಿ. ವೆಂಕಟರತ್ನಂ, ಮಹಾಬಲೇಶ್ವರ ರಾವ್ ಮುಂತಾದ ವಿದ್ವಾಂಸರ ಕೃತಿಗಳು ಸಂಶೋಧನೆಗೆ ಸಂಬಂಧಿಸಿದ ತಿಳಿವಳಿಕೆ ನೀಡುತ್ತವೆ. ಆ ಕೃತಿಗಳು ಹೊರಬಂಧ ಸಂದರ್ಭದಲ್ಲಿ ಪಿಎಚ್.ಡಿ. ಅಧ್ಯಯನಕ್ಕೆ ಈಗಿನಷ್ಟು ಸ್ಪರ್ಧೆ ಇರಲಿಲ್ಲ.

ಸಂಶೋಧನೆಯಲ್ಲಿ ಆಸಕ್ತಿಯಿದ್ದ ಕೆಲವರು ಅಧ್ಯಯನ ಮಾಡುತ್ತಿದ್ದರು. ಈಗ ಪಿಎಚ್.ಡಿ. ಆಗಿದ್ದರೆ ಮಾತ್ರ ಉದ್ಯೋಗ ಎನ್ನುವಂತಹ ಸ್ಥಿತಿ ಎದುರಾಗಿರುವಾಗ, ಅಧ್ಯಯನ ಯಾಂತ್ರಿಕವಾಗಿ ಆಗುತ್ತಿದೆ ಎನಿಸಿದರೆ ಆಶ್ಚರ್ಯವಿಲ್ಲ. ಆಸಕ್ತಿಯ ವಿಷಯವನ್ನು ಹೊರಗಿಟ್ಟು ಸಂಶೋಧನೆಗೆ ಎನ್ನುವುದಕ್ಕಿಂತ, ಪಿಎಚ್.ಡಿ. ಅಧ್ಯಯನಕ್ಕೆ ಸೂಕ್ತ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಇಂತಹ ಕೃತಿಗಳು ಪ್ರಕಟವಾಗಬೇಕಾದ್ದು ಅನಿವಾರ್ಯ. ಸಂಶೋಧನೆಯ ವಿಷಯಕ್ಕೆ ಸಂಬಂಧಿಸಿದಂತೆ ಆಕರಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಣೆ, ವ್ಯಾಖ್ಯಾನಗಳ ನಂತರ ಫಲಿತಗಳು ದೊರೆತ ಮೇಲೆ, ವಿಮರ್ಶೆಯನ್ನು ಮೀರಿ ನಡೆಯುವ ಅಧ್ಯಯನದಲ್ಲಿ ತಾಂತ್ರಿಕ ವಿಚಾರಗಳನ್ನೂ ಒಳಗೊಂಡ ಪ್ರಮೇಯ ನಿರ್ಮಿತಿ ಆಗುವುದರಿಂದ ಲೇಖಕರು ಇದನ್ನು ಮೀಮಾಂಸೆ ಎಂದಿದ್ದಾರೆ.

ಲೇಖಕರೇ ಸ್ಪಷ್ಟಪಡಿಸಿರುವಂತೆ ಸಂಶೋಧನ ಮೀಮಾಂಸೆಯು ಹೆಚ್ಚಾಗಿ ಸಾಹಿತ್ಯ ಸಂಶೋಧನೆಯನ್ನು ಉದ್ದೇಶಿಸಿಯೇ ರಚನೆಯಾಗಿರುವುದರಿಂದ ಪ್ರಧಾನವಾಗಿ ಸಾಹಿತ್ಯಕ ವಿಚಾರಗಳಿದ್ದರೂ, ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳೂ ಆನುಷಂಗಿಕವಾಗಿ ಉಲ್ಲೇಖಗೊಂಡಿವೆ. ಅನುಬಂಧಗಳನ್ನು ಹೊರತುಪಡಿಸಿ, ಎಂಟು ಪ್ರಕರಣಗಳ ಅಡಿಯಲ್ಲಿ ಅಧ್ಯಯನದ ಆರಂಭದಿಂದ ಪರೀಕ್ಷೆಯವರೆಗೆ ವಿವರವಾಗಿ ವಿಷಯಗಳ ಚರ್ಚೆಗೆ ಲೇಖಕರು ಮಾಡಿಕೊಂಡಿರುವ ಅವಕಾಶಗಳಲ್ಲಿ ಸಂಶೋಧನೆಯ ವಿವಿಧ ಮಜಲುಗಳನ್ನು ಸಮಗ್ರವಾಗಿಯೇ ವಿಶ್ಲೇಷಿಸಿದ್ದಾರೆ. ಪ್ರಕರಣಗಳಿಗೆ ಅವರು ಆಯ್ಕೆ ಮಾಡಿಕೊಂಡಿರುವ ಧ್ವನಿಪೂರ್ಣ ಶೀರ್ಷಿಕೆಯಲ್ಲೇ ಅಧ್ಯಯನದ ಸ್ವರೂಪದ ಪರಿಚಯ ಆಗುತ್ತದೆ. ಆರಂಭ, ಸಿದ್ಧತೆ, ತೊಡಗು, ತೊಡಕು, ಸವಾಲು, ಗಮನ, ಮಂಡನೆ ಮತ್ತು ಪರೀಕ್ಷೆ ಎಂಬ ಶೀರ್ಷಿಕೆಗಳು ಅರ್ಥಪೂರ್ಣವಾಗಿರುವುದರಿಂದ ಜಾಣ ವಿದ್ಯಾರ್ಥಿಗೆ ಬೆರಕು ಕಂಡ ಅನುಭವವಾಗಬಹುದು. ಪ್ರತಿ ಪ್ರಕರಣದ ಉಪಶೀರ್ಷಿಕೆಗಳು ಅಧ್ಯಯನ ವಿಧಾನಕ್ಕೆ ತೋರುಬೆರಳಾಗಿವೆ.

ಸೃಜನಶೀಲ ಸಾಹಿತ್ಯವಾಗಲೀ, ಸೃಜನೇತರ ಸಾಹಿತ್ಯವಾಗಲೀ ಹೆಚ್ಚಿನ ವ್ಯಾಖ್ಯಾನವನ್ನು ಬೇಡಿದಾಗ ಅವುಗಳನ್ನು ಕುರಿತಂತೆ ಚರ್ಚೆ, ವಿಶ್ಲೇಷಣೆ ನಡೆದು, ಪ್ರಮೇಯಗಳು ರೂಪುಗೊಳ್ಳುತ್ತವೆ. ಈ ಬಗೆಗೆ ನಡೆಯುವ ಅಧ್ಯಯನವು ಹೊಸ ವಿಚಾರಗಳನ್ನು ಬೆಳಕಿಗೆ ತರುವುದರಿಂದ ಅದು, ಸಂಶೋಧನೆಯ ಪರಿಧಿಯೊಳಗೇ ಇರುತ್ತದೆ. ನಿರಂತರ ಬದಲಾಗುವ ಸಾಹಿತ್ಯದ ಸ್ವರೂಪವು ಆಯಾ ಕಾಲಘಟ್ಟಗಳ ಫಲ. ಬರೆಯಲು ಬಂಡೆಗಳ ಮೇಲ್ಮೈಯನ್ನೇ ಆಶ್ರಯಿಸಿದ್ದ ಮನುಷ್ಯ ಈಗ ಕಾಗದದ ಬಳಕೆಯೇ ಬೇಡ ಎನ್ನುವ ಪರಿಸ್ಥಿತಿ ತಲುಪಿದ್ದಾನೆ. ಇಂತಹ ಬದಲಾವಣೆಗಳ ಜೊತೆಗೇ ಸಾಹಿತ್ಯದ ಸ್ವರೂಪವೂ ಬದಲಾಗುವುದನ್ನು ಲೇಖಕರು ಉದಾಹರಣೆಗಳ ಸಹಿತ ಸ್ಪಷ್ಟಪಡಿಸಿದ್ದಾರೆ. ಈಗ ಗ್ರಂಥಾಲಯದ ಕೊರತೆಯಾಗಲೀ, ಕ್ಷೇತ್ರಕಾರ್ಯದ ಕಷ್ಟಗಳಾಗಲೀ ಕಡಿಮೆ ಇರುವುದರಿಂದ ಆಕರಗಳ ಸಂಗ್ರಹ ಕಷ್ಟದ ಸಂಗತಿಯಲ್ಲ. ಅವುಗಳನ್ನು ವಿಶ್ಲೇಷಿಸುವುದು ಸ್ವಂತ ಪರಿಶ್ರಮವನ್ನು ಬೇಡುವುದರಿಂದ ಅಲ್ಲಿ ಆಲಸ್ಯ ಮಾತ್ರ ಅಡ್ಡಿಯಾಗಬಹುದು. ಸಾಹಿತ್ಯದ ಸ್ವರೂಪ ಬದಲಾದಂತೆ ಅಧ್ಯಯನದ ಸ್ವರೂಪವೂ ಬದಲಾಗುವುದು ನಿರೀಕ್ಷಿತ.

ಸಂಶೋಧನಾಧ್ಯಯನ ಕೈಗೊಳ್ಳುವ ಯಾರಿಗೇ ಆದರೂ ಆಯಾ ಕ್ಷೇತ್ರಗಳ ಸಂಶೋಧನೆಯ ಇತಿಹಾಸ ತಿಳಿದಿರದಿದ್ದರೆ, ಮುಂದಕ್ಕೆ ಹೆಜ್ಜೆಯಿಡುವುದೂ ಕಷ್ಟ. ಬಿ.ಎಲ್. ರೈಸ್, ಜೆ.ಎಫ್. ಫ್ಲೀಟ್, ಆರ್.ನರಸಿಂಹಾಚಾರ್, ರಾ.ಹ. ದೇಶಪಾಂಡೆ ಇತ್ಯಾದಿ ಹಿರಿಯರ ಸಾಧನೆಗಳನ್ನು ತಿಳಿಯದೆ ಆದ್ಯತೆಯ ಮೇಲೆ ಯಾವ ಕೆಲಸ ಆಗಬೇಕು ಎಂದು ನಿರ್ಧರಿಸುವುದೇ ಕಷ್ಟವಾಗುತ್ತದೆ. ಸಂಶೋಧನೆಯ ಸಿದ್ಧತೆ ಎಂದರೆ ಮಾರ್ಗದರ್ಶಿಗಳ ಮತ್ತು ಅವರ ಜೊತೆ ಚರ್ಚಿಸಿ ವಿಷಯದ ಆಯ್ಕೆ. ‘ಸಂಶೋಧನೆಯು ವಿದ್ಯಾರ್ಥಿ ಮತ್ತು ಮಾರ್ಗದರ್ಶಿಯ ಕೂಡುಪಯಣ’ ಎಂದು ರಹಮತ್ ಖಚಿತಪಡಿಸಿದ್ದಾರೆ. ವಿಷಯದ ಆಯ್ಕೆಯಿಂದ ಆರಂಭಿಸಿ, ಸಂಶೋಧನ ಪ್ರಸ್ತಾವವನ್ನು ಸಿದ್ಧಪಡಿಸಿ, ಫಲಿತವನ್ನು ಅಣಿಗೊಳಿಸುವವರೆಗೆ ಸಂಶೋಧನೆಯು ಪರಸ್ಪರರನ್ನು ಅವಲಂಬಿಸಿರುತ್ತದೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳೂ ಅರ್ಥವತ್ತಾಗುವ ಸಂಭವ ಇರುತ್ತದೆ.

ಆಕರಗಳ ಸಂಗ್ರಹದಿಂದ ಆರಂಭಿಸಿ, ಪರೀಕ್ಷೆಯನ್ನು ಎದುರಿಸುವವರೆಗೂ ಸಂಶೋಧನ ವಿದ್ಯಾರ್ಥಿಗೆ ಮಾರ್ಗದರ್ಶಕನ ಸಹಾಯ ಅನಿವಾರ್ಯ. ಪರಸ್ಪರ ಸಂಬಂಧವು ಹಾರ್ದಿಕವಾಗಿದ್ದರೆ ಒಳ್ಳೆಯ ಸಂಶೋಧನೆ ಆಗುತ್ತದೆ. ಕೆಲವು ಬಾರಿ ಮಾತ್ರ ಅತಿಯಾದ ಸ್ನೇಹ, ವಿಶ್ವಾಸಗಳು ಸಂಶೋಧನೆಗೆ ತಡೆಯಾಗುವ ಅಪಾಯಗಳೂ ಇರುತ್ತವೆ. ಸಂಶೋಧನೆಗೆ ಗುರುತಿಸಬೇಕಾದ ಸಂಶೋಧನ ಸಮಸ್ಯೆ, ಮಾಡಿಕೊಳ್ಳಬೇಕಾದ ಸಿದ್ಧತೆ, ಟಿಪ್ಪಣಿಗಳ ಸಿದ್ಧತೆ, ಸಂಶೋಧನ ಓದು ಮತ್ತು ಕೇಳು, ಕ್ಷೇತ್ರಕಾರ್ಯದ ಸ್ವರೂಪ ಇತ್ಯಾದಿ ಕ್ರಿಯೆಗಳಿಗೆ ತೊಡಕುಗಳಿರುವುದು ಸಹಜ. ಆ ತೊಡಕುಗಳ ಸ್ವರೂಪ ಮತ್ತು ಅವುಗಳ ನಿವಾರಣೋಪಾಯಗಳು, ಕೃತಿಯ ಒಳಗಿನಿಂದಲೇ ಅದರ ಅರ್ಥವನ್ನು ಹುಡುಕಬೇಕಾದ ಪರಿ ಇತ್ಯಾದಿಗಳನ್ನು ಹಲವು ಸಂಶೋಧಕರನ್ನು ಉದಾಹರಿಸಿ, ತೊಡಕುಗಳನ್ನು ನಿವಾರಿಸಿಕೊಳ್ಳಬಹುದು ಎಂಬ ಭರವಸೆ ಹುಟ್ಟಿಸುವಲ್ಲಿ ಮತ್ತು ಬಹುಶಿಸ್ತೀಯ ಅಧ್ಯಯನದ ಪ್ರಯೋಜನವನ್ನು ತಿಳಿಸುವಲ್ಲಿ ಲೇಖಕರು ಸಫಲರಾಗಿದ್ದಾರೆ.

ಸಂಶೋಧನೆಯಲ್ಲಿ ಕೊನೆಯ ಮತ್ತು ಮಹತ್ವದ ಘಟ್ಟವೆಂದರೆ ಬರವಣಿಗೆ. ಸಂಶೋಧನೆಯಲ್ಲಿ ಸ್ವತಂತ್ರವಾದ ಅಧ್ಯಯನ, ಚಿಂತನೆ, ಬರೆಹ ಮೂರೂ ಅನಿವಾರ್ಯ ಎಂಬ ಮಾತನ್ನು ಲೇಖಕರು ಸ್ಪಷ್ಟಪಡಿಸಿದ್ದಾರೆ. ಆವರೆಗಿನ ಶ್ರಮ ಏನೇ ಇದ್ದರೂ, ಸಂಶೋಧನೆಯ ಫಲಿತವನ್ನು ಬರವಣಿಗೆಯ ಮೂಲಕ ದಾಖಲಿಸುವುದು ಮುಖ್ಯ. ಕೆಲವರಿಗೆ ಬರವಣಿಗೆ ಸುಲಭವಲ್ಲ. ಸಂಶೋಧನಾ ಬರವಣಿಗೆಗೆ ಬಳಸುವ ಭಾಷೆ ಮತ್ತು ಶೈಲಿಯ ಬಗೆಗೂ ತಿಳಿವಳಿಕೆ ಇರಬೇಕು. ಎಲ್ಲೂ ಉತ್ಪ್ರೇಕ್ಷೆಗೆ ಅವಕಾಶ ಇರುವಂತಿಲ್ಲ. ಈ ಬಗ್ಗೆಯೂ ಲೇಖಕರು ಹಲವು ಉದಾಹರಣೆಗಳನ್ನು ನೀಡಿ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ದಾಖಲಿಸಬೇಕಾದ ಕೊನೆಟಿಪ್ಪಣಿಯ ಬಗೆಗೂ ಸೂಕ್ತ ಮಾರ್ಗದರ್ಶನ ನೀಡಲು ಲೇಖಕರು ಮರೆತಿಲ್ಲ.

ಸಂಶೋಧಕರು ಪೂರ್ವಸೂರಿಗಳ ಸಮೀಕ್ಷೆಗಳನ್ನು ಗಮನಿಸಿಯೇ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವುದು ಅನಿವಾರ್ಯ ಮತ್ತು ಅಪೇಕ್ಷಣೀಯ. ಆಕರಗಳನ್ನು ತಾತ್ವಿಕ ಚೌಕಟ್ಟಿನ ಒಳಗೇ ಪರಿಶೀಲಿಸಿ, ವಿಶ್ಲೇಷಿಸಬೇಕಾಗುತ್ತದೆ. ಸಂಶೋಧಕನು ತನ್ನ ಫಲಿತದ ಬಗ್ಗೆ ಹೆಮ್ಮೆ ಪಡಬಹುದು; ಅಲ್ಲಿ ಹಮ್ಮಿಗೆ ಅವಕಾಶವಿಲ್ಲ. ಬರವಣಿಗೆಯ ಸಂದರ್ಭದಲ್ಲಿ ಅಧ್ಯಾಯಗಳ ವಿಭಜನೆಯ ಕಡೆ ಗಮನವಿಡಬೇಕಾದ್ದು ಮುಖ್ಯ. ವಿಷಯದ ಆಯ್ಕೆಯಿಂದ ಆರಂಭಗೊಂಡು, ಮಾರ್ಗದರ್ಶಿಯ ಸಮರ್ಥ ಮಾರ್ಗದರ್ಶನದೊಂದಿಗೆ ಶ್ರಮ ವಹಸಿ, ಸಂಶೋಧನ ವಿದ್ಯಾರ್ಥಿಯು ಸಿದ್ಧಪಡಿಸಿ, ಆ ಮೂಲಕ ಪಿಎಚ್.ಡಿ. ಪಡೆಯುವ ಸಂಶೋಧನ ಪ್ರಕ್ರಿಯೆಯು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವ ಸಂದರ್ಭದಲ್ಲಿ, ಇಂತಹ ಮಾರ್ಗದರ್ಶಕ ಕೈಪಿಡಿಗಳು ಅವಶ್ಯಕ.

ಒಂದು ಕಾಲಕ್ಕೆ ಸಂಶೋಧನೆಗೆ ಸಂಬಂಧಿಸಿದಂತೆ ಯಾವುದೇ ಕೈಪಿಡಿ ಇರಲಿಲ್ಲ. ಆಗ ಮಾರ್ಗದರ್ಶಕರ ಸಮರ್ಥ ಮಾರ್ಗದರ್ಶನ ಮತ್ತು ಸಂಶೋಧನ ವಿದ್ಯಾರ್ಥಿಯ ಕುತೂಹಲ ಮತ್ತು ಶ್ರಮಗಳು ಒಳ್ಳೆಯ ಫಲ ನೀಡುತ್ತಿದ್ದವು. ಪಿಎಚ್.ಡಿ., ಅಧ್ಯಯನವೂ ಉದ್ಯೋಗದ ಕಾರಣದಿಂದ ವಾಣಿಜ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಸಂಶೋಧನೆಯ ಪಾವಿತ್ರ್ಯ ಮತ್ತು ಮಹತ್ವ ಕುರಿತಂತೆ ಅನುಭವೀ ಸಂಶೋಧಕರೊಬ್ಬರು ನೀಡುವ ಸಮರ್ಥ ಮಾರ್ಗದರ್ಶನದ ಗುರುತಾಗಿರುವ ಈ ಕೃತಿಯು ಉದ್ಯೋಗದ ಕಾರಣದಿಂದ ಮಾತ್ರವಲ್ಲದೆ, ವಿಶ್ವಾಸದಿಂದ ಸಂಶೋಧನೆಯ ದಿಕ್ಕಿಗೆ ಹೆಜ್ಜೆಯಿಡುವ ಯಾರಿಗೇ ಆದರೂ ಅಗತ್ಯ ಎನ್ನಬೇಕಾಗಿದೆ.

ಕೃತಿ: ಸಂಶೋಧನ ಮೀಮಾಂಸೆ
ಲೇ: ರಹಮತ್ ತರೀಕೆರೆ
ಪು: 246
ರೂ. 200
ಪ್ರ: ಪ್ರಸಾರಾಂಗ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT