ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳೊಂದಿಗಿನ ಪ್ರಸಂಗಗಳ ಹಿನ್ನೋಟ..

Last Updated 18 ಜನವರಿ 2015, 19:30 IST
ಅಕ್ಷರ ಗಾತ್ರ

ಧಾರವಾಡ: ಕವಿಗೋಷ್ಠಿಯಲ್ಲಿ ಸಿಕ್ಕಿತ್ತು
ಎರಡು ಬಿಸ್ಕತ್ತು ಒಂದು ಟೀ
ಅದೇ ನಮಗೆ ರಾಯಲ್‌ ಟೀ
–ಡುಂಡಿರಾಜ್ ಅವರು ಚುಟುಕು ಹೇಳಿ ನಗೆಯುಕ್ಕಿಸುವ ಮೂಲಕ ಆರಂಭ­ವಾದ ‘ಸಾಹಿತಿ­ಗಳೊಂದಿಗೆ ನಾವು (ಪ್ರಸಂಗಗಳು)’ ಗೋಷ್ಠಿಯು ‘ಹಾಸ್ಯ ಸಂಭ್ರಮ’ವಾಯಿತು.

‘ಧಾರವಾಡ ಸಾಹಿತ್ಯ ಸಂಭ್ರಮ’ದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಗೋಷ್ಠಿಯಲ್ಲಿ ಸೇರಿದ್ದ 300ಕ್ಕೂ ಹೆಚ್ಚು ಸಾಹಿತಿಗಳು, ಸಾಹಿತ್ಯಾಸಕ್ತರು, ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡರು. ಹಸಿವನ್ನೂ ಮರೆತರು!
ನಿರ್ದೇಶಕ, ಚುಟುಕು ಕವಿ ಡುಂಡಿರಾಜ್ ತಮ್ಮ ಕಾಲೇಜು ದಿನಗಳ ಪ್ರಸಂಗವನ್ನು ಹೇಳುವ ಮೂಲಕ ಗೋಷ್ಠಿಗೆ ಚಾಲನೆ ನೀಡಿದರು. ಕೆ.ಆರ್. ರಾಮಕೃಷ್ಣ, ನ. ರವಿ­ಕುಮಾರ್, ಸುರೇಶ್ ಹೆಬ್ಳೀಕರ್, ಸದಾನಂದ ಕನವಳ್ಳಿ, ಟಿ.ಎಸ್. ನಾಗಾಭರಣ, ಅನಿಲ ದೇಸಾಯಿ, ಶ್ರೀಪತಿ ಮಂಜಿನಬೈಲು, ಕಡಿದಾಳು ಶಾಮಣ್ಣ ಅವರು ಸಾಹಿತ್ಯ ದಿಗ್ಗಜರ ಒಡನಾಟದ ಸಂದರ್ಭದಲ್ಲಿ ನಡೆದ ವಿಶೇಷ ಪ್ರಸಂಗ ಹಂಚಿಕೊಂಡರು.

ಅದರಲ್ಲಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಬೀಚಿ, ಪಿ.ಲಂಕೇಶ್, ಗೋಪಾಲಕೃಷ್ಣ ಅಡಿಗರು, ಯು.ಆರ್. ಅನಂತಮೂರ್ತಿ, ಸರೋದ್ ವಾದಕ ರಾಜೀವ ತಾರಾನಾಥ್, ಶಿವರಾಮ ಕಾರಂತ, ಹುಕ್ಕೇರಿ ಬಾಳಪ್ಪ ಸೇರಿದಂತೆ ಸಾರಸ್ವತ ಲೋಕದ ದಿಗ್ಗಜರ ಜೀವನದಲ್ಲಿ ನಡೆದ ಮತ್ತು ಎಲ್ಲಿಯೂ ದಾಖಲಾಗದ ರಸಪ್ರಸಂಗಗಳು ಕೇಳು­ಗರ ಮನದಾಳಕ್ಕೆ ಇಳಿದು ಕಚಗುಳಿಯಿಟ್ಟವು.  ಗೋಷ್ಠಿಯನ್ನು ನಿರ್ವಹಿಸಿದ ಡುಂಡಿರಾಜ್ ಅವರು ಆಗಾಗ ತಮ್ಮ ‘ಚುಟುಕು’ಗಳನ್ನು ಹೇಳುವ ಮೂಲಕ ಹಾಸ್ಯದ ಹೊನಲನ್ನು ಇಮ್ಮಡಿಗೊಳಿಸಿದರು.

ಒಂದು ತಾಸು ನಡೆಯಬೇಕಿದ್ದ ಗೋಷ್ಠಿಯು 45 ನಿಮಿಷಗಳಷ್ಟು ಹೆಚ್ಚು ಸಮಯ ತೆಗೆದುಕೊಂಡಿತು.  ಊಟದ ಹೊತ್ತಿನಲ್ಲಿ ಹೊರಗೆ ಉತ್ತರ ಕರ್ನಾಟಕ ವಿಶೇಷ ಖಾದ್ಯ ಮಾಲ್ದಿ–ತುಪ್ಪ, ಮೆಂತ್ಯ ಚಪಾತಿ–ಕೂರ್ಮಾದ ಸವಿಯೂಟ ಕಾಯುತ್ತಿದ್ದರೂ ಒಳಗಿದ್ದವರು ಯಾರೂ ಕುರ್ಚಿ ಬಿಟ್ಟು ಏಳಲಿಲ್ಲ. ನಗೆಗಡಲಲ್ಲಿ ಈಜುವ ಅವಕಾಶವನ್ನು ತಪ್ಪಿಸಿಕೊಳ್ಳಲಿಲ್ಲ!

ಕನವಳ್ಳಿಯವರಿಗೆ ಬೀಚಿ ಸ್ನೇಹವಾಗಿದ್ದು!
‘ನಾನು ಲಕ್ಷ್ಮೇಶ್ವರದ ಕಾಲೇಜಿಗೆ ಪ್ರಾಂಶುಪಾಲನಾಗಿದ್ದಾಗಿನ ಘಟನೆ ಇದು. ನಮ್ಮ ಕಾಲೇಜಿನ ಕಾರ್ಯಕ್ರಮಕ್ಕೆ ಸಾಹಿತಿ ಬೀಚಿಯವರನ್ನು ಕರೆಯಬೇಕು ಎಂದುಕೊಂಡು ಅವರಿಗೆ ಪತ್ರ ಬರೆದೆವು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಬರ್ತೀನಿ ಎಂದು ಪತ್ರ ಬರೆದರು. ಮತ್ತೆ ಕೆಲವು ದಿನ ಬಿಟ್ಟು, ನನಗೆ ಬರಲು ಆಗುವುದಿಲ್ಲ. ಆರೋಗ್ಯ ಚೆನ್ನಾಗಿಲ್ಲ ಎಂದು ಪತ್ರ ಬರೆದರು. ನನಗೆ ಸಂಶಯ ಬಂತು.

ಬೆಂಗಳೂರಿನಲ್ಲಿದ್ದ ಸ್ನೇಹಿತ­ರೊಬ್ಬರ ಮೂಲಕ ಬೀಚಿಯವರನ್ನು ವಿಚಾರಿಸುವಂತೆ ಕೋರಿದೆ. ಅವರು ಹೋಗಿ ಮಾತನಾಡಿದಾಗ ಬೀಚಿ­ಯವರು ಒಂದು ಪತ್ರವನ್ನು ತೋರಿಸಿದರು. ಅದರಲ್ಲಿ ನನ್ನ ಬಗ್ಗೆ ಬೈಯ್ದು ಬರೆದು, ಕೆಳಗೆ ಬೂಟು, ಚಪ್ಪಲಿಗಳ ಚಿತ್ರ ಬರೆಯಲಾಗಿತ್ತು. ಕಾಲೇಜಿಗೆ ಬಂದರೆ ಏಟು ಬೀಳುವುದು ಖಚಿತ ಎಂದು ಹೇಳಲಾಗಿತ್ತು. ಈ ವಿಷಯದಿಂದಾಗಿ ಬೀಚಿ ಬರಲು ಹಿಂಜರಿದಿದ್ದರು. ನಂತರ ಅವರು ಹೋದ ಸಮಾರಂಭಗಳಿಗೆಲ್ಲ ಬೆನ್ನತ್ತಿ ಹೋಗಿ ಕೊನೆಗೂ ನನ್ನ ಕಾರ್ಯಕ್ರಮಕ್ಕೆ ಕರಕೊಂಡು ಬಂದೆವು. ನಂತರ ನಮ್ಮ ಸ್ನೇಹ ಗಾಢವಾಯಿತು.

ಆದರೆ, ಅವರು ಹೋದ ಕಡೆಗಳಲ್ಲಿ ತಮ್ಮ ಭಾಷಣದಲ್ಲಿ ನಮ್ಮ ಕಾಲೇಜಿನ ಹೆಸರು ಬಹಿರಂಗ­ಗೊಳಿಸದೇ ಘಟನೆಯನ್ನು ಮಾತ್ರ ಹಾಸ್ಯಭರಿತವಾಗಿ ವಿವರಿಸುತ್ತಿದ್ದರು. ಒಂದು ವಾರಪತ್ರಿಕೆಯಲ್ಲಿ  ಅದೇ ರೀತಿ ಬರೆದರು. ಆದರೆ, ಆ ಲೇಖನದಲ್ಲಿ ನನ್ನ ಹೆಗಲ ಮೇಲೆ ಕೈಹಾಕಿಕೊಂಡು ನಿಂತ ಚಿತ್ರವೂ ಪ್ರಕಟವಾಗುವ ಮೂಲಕ ಆ ಕಥೆಯಲ್ಲಿನ ಕಾಲೇಜು ನಮ್ಮದೇ ಎಂದು ಎಲ್ಲರಿಗೂ ಗೊತ್ತಾಯಿತು’ ಎಂದು ನಿವೃತ್ತ ಪ್ರಾಂಶುಪಾಲ ಡಾ.ಸದಾನಂದ ಕನವಳ್ಳಿ ಸ್ಮರಿಸಿಕೊಂಡರು.

ಮೂರ್‌ ತಿಂಗಳು ಆತು!
ಧಾರವಾಡ ಆಕಾಶವಾಣಿಯ ಕಾರ್ಯ­ಕ್ರಮ ನಿರ್ವಾಹಕ ಅನಿಲ ದೇಸಾಯಿ ತಮ್ಮ ವೃತ್ತಿಯಲ್ಲಿ ಆದ ಅನುಭವ ಪ್ರಸಂಗಗಳನ್ನು ಹೇಳುವ ಮೂಲಕ ಕಚಗುಳಿ ಇಟ್ಟರು.

‘ಆಕಾಶವಾಣಿಯಲ್ಲಿ ಒಮ್ಮೆ ಕಾರ್ಯ­ಕ್ರಮ ಕೊಟ್ಟ ನಂತರ ಮತ್ತೆ ಮೂರು ತಿಂಗಳ ನಂತರವೇ ಇನ್ನೊಂದು ಕಾರ್ಯಕ್ರಮ ಕೊಡುವುದು ನಿಯಮ. ಒಂದು ಬಾರಿ ಪಂಚಾಕ್ಷರಿ ಹಿರೇಮಠ ಅವರು ಕರೆ ಮಾಡಿ, ‘ಅನಿಲ ನಂದು ಮೂರು ತಿಂಗಳಾತು’ ಎಂದರು. ಅದಕ್ಕೆ ನಾನು ‘ಮೂರು ತಿಂಗಳಾದೋರ ದೊಡ್ಡ ಸಾಲು ಐತಿ. ನೀವು ಬಂದು ಕಾರ್ಯ ಕ್ರಮ ಮಾಡ್ರಿ’ ಎಂದೆ. ನಿಗದಿತ ದಿನ ಅವರು ಬಂದರು. ಆಕಾಶವಾಣಿ ಸ್ಟುಡಿಯೋದಲ್ಲಿ ಎಂಟು ದೀಪಗಳನ್ನು ಹಚ್ಚಲಾಯಿತು. ಅವರು ತಮ್ಮ ಚೀಲದಿಂದ ಬ್ಯಾಟರಿ ತೆಗೆದು ಸ್ಕ್ರಿಪ್ಟ್‌ ಮೇಲೆ ಬ್ಯಾಟರಿ ಬೆಳಕು ಹಾಕಿದರು. ಜೊತೆಗೆ ಭೂತಗನ್ನಡಿಯನ್ನೂ ಕೈಯಲ್ಲಿ ಹಿಡಿದರು.
ನಂತರ ಸ್ಕ್ರಿಪ್ಟ್ ನೋಡದೇ ಹಾಗೆಯೇ ಮಾತನಾಡಿದರು’ ಎಂದು ದೇಸಾಯಿ ಹೇಳಿದಾಗ ಸಭಿಕರ ಮುಖದಲ್ಲಿ ನಗು ನಲಿದಾಡುತ್ತಿತ್ತು.

ದನ ಕಾಯಲೋ, ವೈಸ್‌ಚಾನ್ಸಲ್‌­ಗಿರಿ ಮಾಡಲೋ!
ಗೋಷ್ಠಿಯ ‘ಕೊನೆಯ ಬ್ಯಾಟ್ಸ್‌­ಮನ್‌’ ಆಗಿ ಮಾತನಾಡಿದ ಕಡಿದಾಳು ಶಾಮಣ್ಣ, ತೇಜಸ್ವಿ ಹಾಗೂ ಕುವೆಂಪು ಅವರೊಂದಿಗಿನ ತಮ್ಮ ಒಡನಾಟದ ಕೆಲವು ಪ್ರಸಂಗಗಳನ್ನು ಹೇಳಿ ನಕ್ಕು ನಗಿಸಿದರು.

‘ಕುವೆಂಪು ಅವರು ವಿಶ್ವವಿದ್ಯಾಲ­ಯದ ಕುಲಪತಿ ಆಗಿದ್ದ ಸಂದರ್ಭ ಅದು. ಅವರು ಮಧ್ಯಾಹ್ನ ಮನೆಗೆ ಊಟಕ್ಕೆ ಬಂದು ಹೋಗುತ್ತಿದ್ದರು. ಅದೊಂದು ದಿನ ಮಧ್ಯಾಹ್ನ ತೇಜಸ್ವಿಯನ್ನು ನೋಡಲು ಹೋಗಿದ್ದೆ. ಅಲ್ಲಿ ಕುವೆಂಪು  ಲುಂಗಿ ಎತ್ತಿ ಕಟ್ಟಿದ್ದರು. ಮನೆ ಅಂಗಳ­ದಲ್ಲಿದ್ದ ಎರಡು ದನಗಳನ್ನು ಕೊಟ್ಟಿಗೆಗೆ ಸೇರಿಸಲು ಪ್ರಯತ್ನಿಸುತ್ತಿದ್ದರು. ನನ್ನನ್ನು ನೋಡಿದವರೇ,  ‘ಬಾ ಇಲ್ಲಿ, ಅದನ್ನು ಅಲ್ಲಿಂದ ಈಚೆಗೆ ಓಡಿಸು’ ಎಂದರು.

ಸಾಕಷ್ಟು ಓಡಾಡಿ ಆಯಿತು. ಆದರೆ ಒಂದು ದನ ತಪ್ಪಿಸಿಕೊಂಡು ಮೈದಾನಕ್ಕೆ ಓಡಿತು. ಸುಸ್ತಾದ ಕುವೆಂಪು ‘ಬಾ ಮಜ್ಜಿಗೆ ಕುಡಿ’ ಎಂದು ತಮ್ಮೆದುರಿಗೆ ಕೂರಿಸಿಕೊಂಡರು. ಸುಧಾರಿಸಿಕೊಂಡ ನಂತರ ಅವರು, ‘ಅಲ್ವೋ ಶಾಮಯ್ಯ, ನಾನು ವೈಸ್‌ಛಾನ್ಸಲರ್‌ಗಿರಿ ಮಾಡ್ಲೋ, ದನ ಕಾಯ್ಲೋ’ ಎಂದರು. ಆಗ ನಾನು, ಯಾವುದು ಅನುಕೂಲಾನೋ ನೋಡ್ರಿ ಸರ್ ಎಂದು ಪ್ರತಿಕ್ರಿಯಿಸಿದೆ’ ಎಂದಾಗ ಇಡೀ ಸಭೆಯಲ್ಲಿ ನಗೆ ಸ್ಫೋಟ.

ಮತ್ತೊಂದು ಪ್ರಸಂಗ ನೆನಪಿಸಿಕೊಂಡ ಅವರು, ‘ತೇಜಸ್ವಿಯವರ ಚಿತ್ರಕೂಟ ತೋಟದಲ್ಲಿ ಹೂ ಬಿಡುವ ಸಂದರ್ಭ­ದಲ್ಲಿ ಕುವೆಂಪು ಬಂದಿದ್ದರು. ನನ್ನ ಬಳಿ ಇದ್ದ ನಾರ್ಟನ್ ಮಿಲಿಟರಿ ಮೋಟಾರ್ ಸೈಕಲ್ ಮೇಲೆ ಕುವೆಂಪು ಮನೆಗೆ ಹೋದೆ. ತೇಜಸ್ವಿ ತಮ್ಮ ಜೀಪಿನ ಕೆಳಗೆ ಮಲಗಿ ಗೇರ್‌ಬಾಕ್ಸ್ ದುರಸ್ತಿ ಮಾಡುತ್ತಿದ್ದರು. ತೇಜಸ್ವಿಯವರ ತಮ್ಮ, ಜಾವಾ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದ ಚೈತ್ರ, ನನ್ನ ಬೈಕ್ ಹತ್ತಿ ಹೊಡಕೊಂಡು ಹೊರಟ. ಆಗ ತೇಜಸ್ವಿ, ‘ಏ ಅದು ಟು ಸ್ಟ್ರೋಕು ತೊಗೊಂಡ್ ಹೋಗಬೇಡಾ‘ ಎಂದು ತಾವು ಇದ್ದಲ್ಲಿಂದಲೇ ತಮ್ಮನನ್ನು ತಡೆದರು. ಆಗ ಕುವೆಂಪು ಅವರು, ‘ಅವನು ಎಂಜಿನಿಯರ್, ಅವನಿಗೆ ಗೊತ್ತಿರುತ್ತೆ ಹೋಗಲಿ ಬಿಡು’ ಎಂದರು. ಆದರೆ, ಅರ್ಧ ಗಂಟೆ ಕಳೆದ ನಂತರ ಗಾಡಿ ನೂಕಿಕೊಂಡು ಬಂದ ಚೈತ್ರ ಸುಸ್ತಾಗಿ ಕುಳಿತರು.  ಮಾರನೇ ದಿನ ಬೆಳಿಗ್ಗೆ ಕುವೆಂಪು ಅವರ ಬಳಿಗೆ ಹೋಗಿ, ‘ನಾನು ಹೋಗಿ ಬರ್ತಿನಿ’ ಎಂದೆ. ‘ಹೋಗ್ತೀನಿ ಅಂತ ಹೇಳು ಬರ್ತೀನಿ ಅನಬೇಡ, ನಿನ್ನೆ ಚೈತ್ರನನ್ನು ಗೋಳಾಡಿಸಿದ್ದನ್ನು ನೋಡಿದ್ದೇನೆ’ ಎಂದರು. ಆಗ ತೇಜಸ್ವಿ ತಮ್ಮ ತಂದೆಯವರಿಗೆ ‘ಅಣ್ಣ, ನೀವು ಅವರು ಹೋದ ಐದು ನಿಮಿಷದ ಮೇಲೆ ನೋಡಿ ಮಾತನಾಡಿ’ ಎಂದರು.

ನಾನು  ಗಾಡಿ ಚಾಲೂ ಮಾಡಿಕೊಂಡು ಹೋದೆ. ಅದು ಸೇನೆಯಲ್ಲಿ ಬಳಸುತ್ತಿದ್ದ ವಾಹನ, ತುರ್ತು ಸಂದರ್ಭದಲ್ಲಿ ಪೆಟ್ರೊಲ್ ಇಲ್ಲದೆಯೂ ಓಡಿಸುವ ತಂತ್ರಜ್ಞಾನ ಅದರದ್ದು. ಅದಕ್ಕೆ ಎರಡು ತೈಲ ಟ್ಯಾಂಕುಗಳು ಇದ್ದವು. ನಾನು ಕಿಕ್ ಮಾಡಿ ಆರಂಭಿಸುವಾಗ ಪೆಟ್ರೊಲ್ ಬಿಡುತ್ತಿದ್ದೆ ಮತ್ತು ನಂತರ ಸೀಮೆಎಣ್ಣೆ ಬಿಡುತ್ತಿದ್ದೆ. ಈ ಗುಟ್ಟು ಚೈತ್ರನಿಗೆ ಗೊತ್ತಿರಲಿಲ್ಲ !

‘ಪ್ರೊ.ಯು.ಆರ್. ಅನಂತಮೂರ್ತಿ­ಯವರು ನಿಧನರಾಗುವ ಕೆಲವು ದಿನಗಳ ಹಿಂದಿನ ಘಟನೆಯಿದು. ನಮ್ಮ ಮನೆಗೆ ಬಂದಿದ್ದರು. ನಮ್ಮ ಮನೆಯಲ್ಲಿದ್ದ ನಾಯಿಗೆ ನಾನು ರೊಟ್ಟಿ ಹಾಕುತ್ತಿದ್ದೆ.  ಆ ನಾಯಿಯನ್ನು ನೋಡಿದ ಮೂರ್ತಿ­ಯವರು ‘ಏ ನಾಯಿ ಹೊಟ್ಟೆಗೆ ಚೆನ್ನಾಗಿ ಊಟ ಹಾಕು. ಇದೇ ಮೂಳೆ ಚಕ್ಕಳ­ವಾಗಿದೆ ನೋಡು’ ಎಂದು ಜೋರು ಮಾಡಿದರು. ಅವರಿಗೆ ನಾಯಿಗಳ ಬಗ್ಗೆ ತಿಳಿದಿರಲಿಲ್ಲ. ಏಕೆಂದರೆ, ಅದು ಮುಧೋಳ ನಾಯಿಯಾಗಿತ್ತು. ನಾನು ಆ ಕುರಿತು ತಿಳಿಸಿದಾಗ ಅವರು ಸುಮ್ಮನಿರಲಿಲ್ಲ. ‘ನೋಡು ನೀನು ರೊಟ್ಟಿ ಕೈಯಲ್ಲಿ ಹಿಡಕೊಂಡು ನಿಂತಿದ್ದರೂ ಅದು ಬಾಯಿ ಹಾಕಲ್ಲ, ತೊಗೋ ಎಂದರೆ ಮಾತ್ರ ತೆಗೆದುಕೊಳ್ಳುತ್ತದೆ. ಅದೇ ನಮ್ಮ ವಿಧಾನಸೌಧದಲ್ಲಿ ಇದ್ದಾರಲ್ಲ ಅವರಿಗೆ ಹಿಂಗ ಸಿಕ್ಕರ ಬಿಟ್ಟಾರೇನು. ಈ ನಾಯಿ ತೊಗೊಂಡು ಹೋಗಿ ವಿಧಾನಸೌಧದ ಮುಂದ ಪ್ರಾತ್ಯಕ್ಷಿಕೆ ಮಾಡೋಣ ನಡಿ’ ಎಂದ ಅವರನ್ನು ನಾನು ತಡೆದಾಗ, ಏ ಇದಕ್ಕೆಲ್ಲ ವಾಟಾಳನೇ ಸರಿ ಬಿಡು ಎಂದಿದ್ದರು’ ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.

ನಾಗಾಭರಣರ ಸಂಸ್ಕೃತ ನಾಟಕ
1970ರಲ್ಲಿ ಶ್ರೀರಂಗರ ಬಳಿ ರಂಗ ತಾಲೀಮು ಕಾರ್ಯಾಗಾರದಲ್ಲಿ ‘ಶಾಕುಂತಲ’ ಸಂಸ್ಕೃತ ನಾಟಕದಲ್ಲಿ ಕೆಲಸ ಮಾಡಿದ ಪ್ರಸಂಗವನ್ನು ಟಿ.ಎಸ್. ನಾಗಾಭರಣ ಅವರು ಸ್ವಾರಸ್ಯಕರವಾಗಿ ವಿವರಿಸಿದರು.  ಬೆಂಗಳೂರಿನಲ್ಲಿದ್ದ ಕಾರ್ಯಾ­ಗಾರ ಮುಗಿದ ನಂತರ ಎಲ್ಲರೂ ಹುರುಪುಗೊಂಡಿದ್ದೇವು. ಉಜ್ಜಯಿನಿಯಿಂದ ಆದ್ಯ ಶ್ರೀರಂಗರಿಗೆ ಒಂದು ಅವಕಾಶ ಒದಗಿಬಂತು. ‘ಶಾಕುಂತಲ’ ಸಂಸ್ಕೃತ ನಾಟಕ ಮಾಡಬೇಕು ಎಂದು ನನ್ನ ಗುಂಪಿಗೆ ಹೇಳಿದರು. ನನಗೆ ಸಂಸ್ಕೃತ ಬರುತ್ತಿ­ರಲಿಲ್ಲ. ಆ ನಾಟಕಕ್ಕೆ ಬಿ.ವಿ.ಕಾರಂತರು ನಿರ್ದೇಶಕರಾಗಿದ್ದರು. ಸಂಸ್ಕೃತ ಗೊತ್ತಿರುವ ಕೆಲವರನ್ನು ಸೇರಿಸಿಕೊಂಡು ತಾಲೀಮು ಶುರುವಾಯಿತು.

ಒಂದು ದಿನ ಕಾರಂತರು ಬಂದು, ‘ನಾನು ಎರಡು ದಿನ ಇರಲ್ಲ, ನೀನೆ ತಾಲೀಮು ಮಾಡಿಸು’ ಎಂದು ಹೇಳಿದರು. ನಾನು ಕನ್ನಡದಲ್ಲಿಯೇ ಸಂಸ್ಕೃತ ಸ್ಕ್ರಿಪ್ಟ್ ಬರೆಸಿಕೊಂಡು ತಾಲೀಮು ಮಾಡಿಸಿದೆ. ಎರಡು ದಿನ ಕಳೆದ ಮೇಲೆ, ಶ್ರೀರಂಗರು, ಕಾರಂತರೂ ಕೂಡಿ ಬಂದರು. ನನ್ನ ತಾಲೀಮು ನಡೆದಿತ್ತು. ಅದನ್ನು ಮಧ್ಯದಲ್ಲಿಯೇ ನಿಲ್ಲಿಸಿದ ಶ್ರೀರಂಗರು, ‘ಯಾರು ಕಲಿಸಿದ್ದು ಇದನ್ನು?’ ಎಂದು ಜೋರಾಗಿ ಕೇಳಿದರು. ನಾನು ಬೆದರಿದೆ. ಆಗ ಕಾರಂತರು ನನ್ನನ್ನು ತೋರಿಸಿದರು. ನಾನಾಗಲೇ ಬಾಗಿಲ ಬಳಿ ನಿಂತಿದ್ದೆ. ಆಗ ಶ್ರೀರಂಗರು, ‘ಎಷ್ಟ್ ಚೆನ್ನಾಗಿ ಮಾಡಿ­ದಿಯೋ’ ಎಂದು ಮೆಚ್ಚುಗೆ ವ್ಯಕ್ತಪಡಿ­ಸಿದರು ಎಂದು ನಾಗಾಭರಣ ಸ್ಮರಿಸಿದರು.

ಕಾರಂತರೂ–ಕಾನೂರು ಸುಬ್ಬಮ್ಮ ಹೆಗ್ಗಡತಿಯೂ!
ನಿವೃತ್ತ ಅಧಿಕಾರಿ ಕೆ.ಆರ್. ರಾಮಕೃಷ್ಣ ಅವರು ತಾವು ಮಂಗಳೂ­ರಿನಲ್ಲಿ ಕಾರ್ಯನಿರ್ವಹಿಸು­ತ್ತಿದ್ದ ಸಂದರ್ಭವನ್ನು ಸ್ಮರಿಸಿಕೊಂಡರು.

‘ಒಂದು ಬಾರಿ ನಮ್ಮ ಕಾರ್ಯಕ್ರಮ­ವೊಂದಕ್ಕೆ ಡಾ.ಶಿವರಾಮ ಕಾರಂತರನ್ನು ಆಹ್ವಾನಿಸಲಾಗಿತ್ತು. ಸಮಾರಂಭ ಮುಗಿದ ನಂತರ ಅವರನ್ನು ಬೀಳ್ಕೊಡಲು ಹೊರಟಾಗ ಅಲ್ಲಿಯೇ ಇದ್ದ ಮಹಿಳೆ­ಯೊಬ್ಬರು, ‘ಸರ್, ನಿಮ್ಮ ಕಾನೂರು ಹೆಗ್ಗಡತಿ ಸುಬ್ಬಮ್ಮ ಕಾದಂಬರಿ ಚೆನ್ನಾ­ಗಿದೆ’ ಎಂದುಬಿಟ್ಟಳು. ಇದರಿಂದ ತೀವ್ರ ಕೋಪಗೊಂಡ ಕಾರಂತರು, ‘ಏ ಯಾರ್ರಿ ಅದು ಇವರನ್ನು ಒಳಗೆ ಬಿಟ್ಟಿದ್ದು, ಕಾನೂರು ಹೆಗ್ಗಡತಿ ಬರೆದದ್ದು ಯಾರು ಎಂದೇ ಗೊತ್ತಿಲ್ಲ ಇವರಿಗೆ’ ಎಂದು ಕೂಗಿದರು. ಆಗ ನಾವು ಗಾಬರಿಗೊಂಡು ಆ ಮಹಿಳೆ ಹೊರಗೆ ಕಳಿಸಿ, ಕಾರಂತರವನ್ನು ಶಾಂತ ಗೊಳಿಸಿ ಕಾರು ಹತ್ತಿಸಲು ಸಾಹಸಪಡಬೇಕಾಯಿತು’ ಎಂದರು.

ಮಧ್ಯರಾತ್ರಿಯಲ್ಲಿ ರಾಗ ಸಂಯೋಜನೆ!
ಬೆಳಗಾವಿ ದಂಡು ಪ್ರದೇಶದಲ್ಲಿದ್ದ ತಮ್ಮ ಮನೆಗೆ ಬಿ.ವಿ.ಕಾರಂತರು ಆಗಾಗ ಬರುತ್ತಿದ್ದ ಸಂಗತಿಯನ್ನು ನೆನಪಿಸಿಕೊಂಡ ಶ್ರೀಪತಿ ಮಂಜನಬೈಲು, ‘ಒಂದು ಬಾರಿ ಅವರು ನಮ್ಮ ಮನೆಯಲ್ಲಿ ಮಲಗಿದ್ದರು. ರಾತ್ರಿ ಇದ್ದಕ್ಕಿದ್ದಂತೆ ಎದ್ದು ಬಂದ ಅವರು, ‘ಶ್ರೀಪತಿ ಹಾರ್ಮೋನಿಯಂ ತೆಗೆದುಕೋ ಸೋಲಿಗರ ಹಾಡಿಗೆ ರಾಗ ಸಂಯೋಜನೆ ಮಾಡಬೇಕು’ ಎಂದರು. ನಾನು ಸಿದ್ಧವಾಗಿ ಹಾರ್ಮೋನಿಯಂ ಹಿಡಿದು ಕುಳಿತೆ. ನಮ್ಮ ಊರಿನಲ್ಲಿ ಹಾಡುವ ಗೋವಿಂದಾ..ಗೋವಿಂದಾ.. ಹಾಡನ್ನು ನನ್ನಿಂದ ಎರಡು ಧಾಟಿಗಳಲ್ಲಿ ಹಾಡಿಸಿದರು. ಅದೇ ಧಾಟಿಗೆ ಸೋಲಿಗರ ಹಾಡನ್ನು ಸಂಯೋಜಿಸಿ ತಾವೇ ಹಾಡಿದರು. ಅಷ್ಟೊತ್ತಿಗೆ ಎದ್ದು ಬಂದ ನನ್ನ ಮಗಳು, ಅವರ ಕೊರಳಿಗೆ ಜೋತುಬಿದ್ದು ಅಜ್ಜಾ ನೀವೆಷ್ಟು ಚೆಂದ ಹಾಡ್ತೀರಿ ಎಂದಳು. ಆಗ ಕಾರಂತರು. ಈ ಮಗುಗೆ ತಿಳಿತದೇ ನಿಮಗೆ ತಿಳಿಯಲ್ಲ ಎಂದು ನಕ್ಕಿದ್ದರು’ ಎಂದು ಸ್ಮರಿಸಿದರು.

ಬೇಸಿಕಲೀ ಕರಪ್ಟ್‌ ಅಲ್ಲ!
ಸಾಹಿತಿ ದೇವನೂರ ಮಹಾದೇವ ಅವರ ಜೊತೆಗಿನ ಒಡನಾಟ ನೆನೆದ ಪ್ರಕಾಶಕ ನ.ರವಿಕುಮಾರ್, ‘ಆಡಿದ ಮಾತಿಗೆ ಬದ್ಧರಾಗಿರುವ ಲೇಖಕ ಎಂದರೆ ದೇವನೂರ ಅವರು. ಹೀಗೆ ಒಮ್ಮೆ ಮಾತನಾಡುತ್ತ, ‘ಸರ್ ನೀವು ಬೇಸಿಕಲಿ ಕರಪ್ಟ್ ಅಲ್ಲ (ಭ್ರಷ್ಟರಲ್ಲ)’ ಎಂದಿದ್ದೆ. ಅವರು ಅದನ್ನು ಗಂಭೀರವಾಗಿ ಆಲೋಚನೆ ಮಾಡತೊಡಗಿದರು. ಅದಕ್ಕಾಗಿ ಮೂರು ದಿನ ನಿದ್ದೆಯನ್ನೇ ಬಿಟ್ಟಿದ್ದರು. ಜ್ವರವೂ ಬಂದುಬಿಟ್ಟಿತ್ತು’ ಎಂದರು.

ಇನ್ನೊಂದು ಪ್ರಸಂಗ ನೆನಪಿಸಿಕೊಂಡ ಅವರು, ‘ಸರೋದ್ ವಾದಕ ರಾಜೀವ ತಾರಾನಾಥ್ ಅವರ ಸಂಗೀತವನ್ನು ರೆಕಾರ್ಡ್‌ ಮಾಡಿಕೊಳ್ಳಲು ಕೇಳಿ­ಕೊಂಡಾಗ ಒಪ್ಪಿದರು. ಎಲ್ಲ ಕಾರ್ಯ ಮುಗಿದ ನಂತರ ಇದ್ದಕ್ಕಿದ್ದಂತೆ ಅವರು, ‘ನನ್ನ ಸಂಭಾವನೆ ಕೊಡಿ’ ಎಂದಾಗ ನಮಗೆ ಅಚ್ಚರಿಯಾಯಿತು. ‘ಸಂಭಾವನೆ ಏನು ಕೊಡಬೇಕು ಸರ್?’ ಎಂದು ಕೇಳಿದಾಗ, ‘ಒಂದು ಪ್ಯಾಕ್ ಸಿಗರೇಟು’ ಎಂದಿದ್ದರು’ ಎಂದಾಗ ಸಭೆಯಲ್ಲಿ ನಗುವಿನ ಚಿಲುಮೆ.

ಸಾಹಿತಿಗಳ ತಲೆ ವಿಶೇಷವೇ?
ಪರಿಸರವಾದಿ, ಚಿತ್ರನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಅವರು ಧಾರ­ವಾಡದ ಭಾಷೆಯಲ್ಲಿ ತಾವು ವಿದ್ಯಾರ್ಥಿಯಾಗಿದ್ದಾಗ ಸಾಹಿತಿಗಳನ್ನು ತಿಳಿದುಕೊಂಡಿದ್ದ ರೀತಿ, ನಂತರ ಸಾಹಿತಿಗಳೊಂದಿಗಿನ ಒಡ ನಾಟದ ನಂತರ ಅಂದುಕೊಂಡಿದ್ದನ್ನು ವಿವರಿಸುವ ಮೂಲಕ ಸಭೆಯಲ್ಲಿ ಸೇರಿದ್ದ ಸಾಹಿತಿ­ಗಳನ್ನು ನಗೆ ಹಾಯಿದೋಣಿ ಹತ್ತಿಸಿದರು.

‘ಬರವಣಿಗೆ, ವಿಶ್ಲೇಷಣೆ, ಕವಿತೆ ರಚನೆ ಮಾಡುವ ಸಾಹಿತಿಗಳು ಅಸಾಮಾನ್ಯರು. ಅವರಿಗೆ ಇರುವ ತಲೆಯೇ ವಿಶೇಷ ಎಂದುಕೊಂಡಿದ್ದೆವು. ಹತ್ತಿರ ಹೋಗಿ ಮಾತನಾಡಿಸಲು ಭಯವಾಗುತ್ತಿತ್ತು. ಆ ಸಂದರ್ಭದಲ್ಲಿ ಬೇಂದ್ರೆ, ವಿ.ಕೃ. ಗೋಕಾಕರು, ಶಂ.ಭಾ. ಜೋಶಿ ಮತ್ತಿತರ ದೊಡ್ಡ ಸಾಹಿತಿಗಳು ಇದ್ದರು. ಇದೇ ಆಸಕ್ತಿಯಿಂದಾಗಿ ಸಿನಿಮಾ ರಂಗಕ್ಕೆ ಹೋದೆ. ಅಪರಿಚಿತ ಸಿನಿಮಾ ಬಿಡುಗಡೆ ಯಾಯಿತು. ಆ ಸಂದರ್ಭ­ದಲ್ಲಿ ಪಿ.ಲಂಕೇಶ್  ಪರಿಚಯ­ವಾಯಿತು. ನನ್ನನ್ನು ಜೇಮ್ಸ್‌ ಬಾಂಡ್ ಎಂದು ಕರೆಯು ತ್ತಿದ್ದರು. ಬಹಳ ಆತ್ಮೀಯತೆಯಿಂದ ನನ್ನನ್ನು ನೋಡಿ­ಕೊಳ್ಳುತ್ತಿದ್ದರು. ಬಹಳಷ್ಟು ಸಾಹಿತಿಗಳ ಒಡನಾಟ ಸಿಕ್ಕಿತು. ಆಗ ತಿಳಿದಿದ್ದೇನೆಂದರೆ ಸಾಹಿತಿಗಳೂ ನಮ್ಮಂಗೆ ಸಾಮಾನ್ಯರು’ ಎಂದಾಗ ಚಪ್ಪಾಳೆ ಪ್ರತಿಧ್ವನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT