ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮುಂಜಾವಿನ ಹಂಬಲದ ಸೂರ್ಯ

Last Updated 13 ಸೆಪ್ಟೆಂಬರ್ 2014, 20:10 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ಇಂದು ಮತ್ತು ನಾಳೆ (ಸೆ. 14–15) ಐದನೇ ‘ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ’. ದಲಿತ ಸಾಹಿತ್ಯದ ಹಿನ್ನೆಲೆ ಮುನ್ನೆಲೆ ಮತ್ತು ಸಾಧ್ಯತೆ–ಸವಾಲುಗಳ ಕುರಿತ ಚರ್ಚೆಗೆ ಇಂಥ ಸಮ್ಮೇಳನಗಳು ‘ಮರು ಅವಲೋಕನ’ದ ವೇದಿಕೆಗಳಾಗಿ ಪರಿಣಮಿಸಬೇಕು. ಈ ಆಶಯದಲ್ಲಿ– ದಲಿತ ಸಂವೇದನೆಯ ಪ್ರಸ್ತುತತೆ, ಅದು ಸಾಗುತ್ತಿರುವ ದಿಕ್ಕು, ದಲಿತ ರಾಜಕಾರಣ ಮತ್ತು ಚಳವಳಿ ಹಾಗೂ ದಲಿತ ಸಂಘಟನೆಗಳ ವಿಘಟನೆಯ ಕುರಿತು ‘ಸಾಪ್ತಾಹಿಕ ಪುರವಣಿ’ ನಾಡಿನ ದಲಿತ ಬರಹಗಾರರು, ಸಂಘಟಕರನ್ನು ಮಾತನಾಡಿಸಿದೆ.

ಅಪೂರ್ಣತೆಯ ಮೀರುವ ಹಂಬಲ


-ಪ್ರೊ. ಎಚ್.ಗೋವಿಂದಯ್ಯ

ಸ್ವಾಭಿಮಾನ, ಪ್ರತಿರೋಧ, ಸಹಾನುಭೂತಿ, ಸಹನೆ, ಸಮಗ್ರಜೀವನ ದೃಷ್ಟಿಕೋನದ ಒಟ್ಟು ಅಂದವೇ ದಲಿತ ಸಂವೇದನೆ ಎಂದು ನಾನು ತಿಳಿದಿದ್ದೇನೆ. ಕೇವಲ ಪ್ರತಿರೋಧ, ಒಣ ಸ್ವಾಭಿಮಾನ ದಲಿತ ಸಂವೇದನೆ ಅಲ್ಲ. ಈ ದಲಿತ ಸಂವೇದನೆ ಸಾಹಿತ್ಯದಲ್ಲಿ ಅಭಿವ್ಯಕ್ತವಾಗಿದೆಯೇ ಎನ್ನುವುದು ಮುಖ್ಯ ಪ್ರಶ್ನೆ. ನನ್ನ ಅರ್ಥದ ದಲಿತ ಸಂವೇದನೆ ಹಿನ್ನೆಲೆ ಪರಿಶೀಲಿಸಿದರೆ ದಲಿತ ಸಾಹಿತ್ಯ ಇನ್ನೂ ಆ ಹಂತಕ್ಕೆ  ರೂಪುಗೊಂಡಿಲ್ಲ ಎನಿಸುತ್ತದೆ. ದಲಿತ ಸಂವೇದನೆ ಮತ್ತು ಸಾಹಿತ್ಯಾಭಿವ್ಯಕ್ತಿಯ ಮಹಾರೂಪಕಗಳಂತೆ ಇರುವುದು ಮಲೈಮಹಾದೇಶ್ವರ ಮತ್ತು ಮಂಟೇಸ್ವಾಮಿ ಕಾವ್ಯಗಳು. ಇವುಗಳಲ್ಲಿ ಪೂರ್ಣ ದಲಿತ ಸಂವೇದನೆಗಳಿವೆ. ಇವುಗಳನ್ನು ಮಾದರಿ ಎಂದುಕೊಂಡು ದಲಿತ ಸಾಹಿತಿಗಳು ತಮ್ಮ ಬರವಣಿಗೆಯನ್ನು ಈ ದಿಕ್ಕಿನಲ್ಲಿ ಯೋಚನೆ ಮಾಡಬೇಕು ಎನಿಸುತ್ತದೆ.

70–80ರ ದಶಕದಲ್ಲಿ ಬಂದ ದಲಿತ ಸಾಹಿತ್ಯ ಕೃತಿಗಳ ಹೆಸರನ್ನೇ ಈಗಲೂ ಹೇಳುತ್ತಿದ್ದೇವೆ. ಆ ಕಾಲದಲ್ಲಿ ಬಂದ ದೇವನೂರರ ‘ಒಡಲಾಳ’, ‘ದ್ಯಾವನೂರು’, ಸಿದ್ದಲಿಂಗಯ್ಯ ಅವರ ‘ಹೊಲೆ ಮಾದಿಗರ ಹಾಡು’ ಕೃತಿಗಳನ್ನು ಈಗಲೂ ಮುಖ್ಯವಾಗಿ ಹೆಸರಿಸುತ್ತೇವೆ. ಒಂದು ಅರ್ಥದಲ್ಲಿ ಅವುಗಳಲ್ಲಿ ಕೂಡ ನಾನು ಹೇಳಿದ ದಲಿತ ಸಂವೇದನೆಗಳ ಒಟ್ಟು ಅಂದವಿಲ್ಲ. ಕಿಚ್ಚು, ಪ್ರತಿರೋಧ, ಸ್ವಾಭಿಮಾನ ಇದೆಯೇ ಹೊರತು ಸಮಗ್ರ ಜೀವನ ದೃಷ್ಟಿಕೋನ, ಸಹನೆ, ಸಹಾನುಭೂತಿ ಕೊರತೆ ಕಾಣುತ್ತದೆ. ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ಆ ದೃಷ್ಟಿಯಲ್ಲಿ ನೋಡಿದರೆ ದಲಿತ ಸಂವೇದನೆ ಸಾಹಿತ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವ್ಯಕ್ತವಾಗಿಲ್ಲ. ತೊಂಬತ್ತರ ದಶಕದಲ್ಲಿ ಎನ್‌.ಕೆ. ಹನುಮಂತಯ್ಯ ಅವರನ್ನು ಹೆಸರಿರಬಹುದಷ್ಟೇ. ಆ ದಶಕದ ಪ್ರಾರಂಭದಲ್ಲಿ ಮೊಗಳ್ಳಿ ಗಣೇಶ ಅವರ ಆರಂಭದ ಕಥೆಗಳು ಬಿಟ್ಟರೆ ನಂತರದ ದಿನಗಳಲ್ಲಿ ಅವರಿಂದಲೂ ಹೆಸರಿಸಬಹುದಾದ ಸೃಜನಶೀಲ ಕೃತಿಗಳು ಬರಲಿಲ್ಲ. ಈ ದೃಷ್ಟಿಯಿಂದ ನೋಡುವುದಾದರೆ ದಲಿತ ಸಂವೇದನೆ ಮತ್ತು ದಲಿತ ಸಂವೇದನೆಯ ಸಾಹಿತ್ಯಾಭಿವ್ಯಕ್ತಿ ನಿಜಕ್ಕೂ ಒಂದು ರೀತಿಯಲ್ಲಿ ರೂಪುಗೊಂಡಿಲ್ಲ. ನಾನೂ 70–80ರ ದಶಕದಲ್ಲಿ ದಲಿತ ಸಾಹಿತ್ಯವನ್ನು ಸೀಮಿತ ಅರ್ಥದಲ್ಲಿ ಗ್ರಹಿಸಿದ್ದೆ ಎನಿಸುತ್ತದೆ. ಈಗ ಭಿನ್ನವಾಗಿ ಗ್ರಹಿಸುವ ಕಾರಣಕ್ಕೆ ವಿಭಿನ್ನ ಸ್ವರೂಪವನ್ನು ಧರಿಸಲು ತವಕದಲ್ಲಿದ್ದೇನೆ. ಈ ಸಂಕ್ರಮಣದ ಸ್ಥಿತಿಯ ಕಾರಣ ನಾನು ಕೂಡ 10–12 ಕವನಗಳನ್ನು ಮೀರಿ ಬರೆಯಲಿಲ್ಲ ಎನ್ನುವುದು ವಿನಮ್ರ ಅಭಿಪ್ರಾಯ.

70–80ರ ದಶಕದಲ್ಲಿನ ದಲಿತ ಚಳವಳಿ ತಳಮಟ್ಟದಲ್ಲಿ ಜನರ ಸಾಂಸ್ಕೃತಿಕ ಮನೋಭೂಮಿಕೆಯನ್ನು ತಲುಪುವ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಯೂ ಆಗಿ ರೂಪುಗೊಂಡಿತು. ಆದರೆ ಈಗಿನ ದಲಿತ ಚಳವಳಿಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿವೆ. ಜನರ ಬಿಡುಗಡೆಯ ಮನೋಭೂಮಿಕೆಯನ್ನು ಇಂದಿನ ಚಳವಳಿಗಳು ಪ್ರತಿನಿಧಿಸಲೇ ಇಲ್ಲ. ದಲಿತರೊಳಗಿನ ಜಾತಿಯ ಪ್ರಜ್ಞೆಗೆ ಕಟ್ಟುಬಿದ್ದು ಜಾತಿ ಸಂಘಟನೆ ಮಟ್ಟಕ್ಕೆ ಇಳಿದಿವೆ. ಹಾಗಾಗಿ ಹೆಸರಿಸಬಹುದಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಯೂ ಇದಾಗಿಲ್ಲ.  ದಲಿತ ಸಂಘಟನೆಗಳ ವಿಘಟನೆ ಎಷ್ಟರ ಮಟ್ಟಿಗೆ ಆಗಿದೆ ಎಂದರೆ ಕಂಬಾಲಪಲ್ಲಿಯಲ್ಲಿ ದಲಿತರನ್ನು ಬರ್ಬರವಾಗಿ ಸುಟ್ಟುಹಾಕಿದ ಪ್ರಕರಣ ಸಾಕ್ಷಿಗಳಿಲ್ಲದೆ ಮುಚ್ಚಿಹೋಗುತ್ತಿದೆ. ಬೆಂಕಿಯಲ್ಲಿ ಬೆಂದ ದಲಿತರನ್ನು ನೋಡಿದ ದಲಿತರೂ ಸಾಕ್ಷಿ ಹೇಳದ ಸ್ಥಿತಿಯಲ್ಲಿದ್ದಾರೆ. ಇದು ಹತಾಶೆ–ಭಯದಿಂದ ಆಗಿದೆ ಎನಿಸುವುದಿಲ್ಲ. ದಲಿತರೇ ಅನೇಕ ಆಮಿಷಗಳಿಗೆ ಒಳಗಾಗಿದ್ದಾರೆ.

ಸಮಾನ ಮನಸ್ಕರ ಸಮ್ಮೇಳನ
ಒಂದು ಕಾಲದ ದಲಿತ ಸಾಹಿತ್ಯ ಮತ್ತು ಪ್ರಬಲ ಚಳವಳಿ ಕಾರಣಾಂತರಗಳಿಂದ ಛಿದ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ದಲಿತ ಸಾಹಿತ್ಯ ಮತ್ತು ಸಂಘಟನೆ ಕುರಿತು ಚರ್ಚಿಸಲು ಸಮಾನ ಮನಸ್ಕ ಗೆಳೆಯರನ್ನು ಒಂದು ಕಡೆ ಸೇರಿಸುವುದೇ ಸಮ್ಮೇಳನದ ಮೊದಲ ಉದ್ದೇಶ.

ಅಲ್ಲದೆ ಶೋಷಿತ ಪರವಾಗಿ ದನಿ ಎತ್ತುತ್ತಿರುವ ಸಮಾನ ಮನಸ್ಕರೂ ಇಲ್ಲಿ ಸೇರುವರು. ಈ ಬಾರಿ ಪರಿಷತ್ತಿನಿಂದ ಕೊಡಮಾಡುವ ಗೌರವ ಪ್ರಶಸ್ತಿಯನ್ನು ಲೇಖಕಿ ಡಿ.ಬಿ. ರಜಿಯಾ ಅವರಿಗೆ ನೀಡಲಾಗಿದೆ. ಪರಿಷತ್ತಿನ ಬಳಿ 2,500 ಮಂದಿ ಹೊಸ ದಲಿತ ಲೇಖಕರ ಪಟ್ಟಿ ಇದೆ. ಹೊಸ ತಲೆಮಾರಿನ ಅನೇಕ ಲೇಖಕರಿಗೆ ವೇದಿಕೆಗಳು ಇಲ್ಲದೆ ಅವರಿಗೆ ತಮ್ಮ ವಿಚಾರಗಳನ್ನು ಹೇಳಲು ಅವಕಾಶಗಳು ಸಿಕ್ಕುತ್ತಿಲ್ಲ. ಪರಿಷತ್ತಿನಿಂದ ಈಗಾಗಲೇ 50 ಪುಸ್ತಕಗಳನ್ನು ಪ್ರಕಟಿಸಲಾಗಿದ್ದು ಇದರಲ್ಲಿ ಬಹುಮಂದಿ ಹೊಸ ಲೇಖಕರ ಪುಸ್ತಕಗಳು ಸೇರಿವೆ. ಪ್ರಸಕ್ತ ಸಮ್ಮೇಳನದಲ್ಲಿ 11 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಸಂಘಟನೆ, ಸಾಹಿತ್ಯ ಮತ್ತು ಸಂಸ್ಕೃತಿಯ ಚಿಂತನ–ಮಂಥನದ ಹಿನ್ನಲೆಯಲ್ಲಿ ಈ ಎರಡು ದಿನದ ಸಾಹಿತ್ಯ ಸಮ್ಮೇಳನ ನಡೆಯಲಿದೆ.
–ಅರ್ಜುನ್ ಗೊಳಸಂಗಿ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ

ಹೆಣ್ಣುಮಕ್ಕಳು ಮುಂಚೂಣಿಗೆ ಬರಲಿ
-
ಡಾ. ಎಸ್‌. ತುಕಾರಾಂ

ಸಮಾಜದ ಗುಣಾತ್ಮಕ ಬದಲಾವಣೆಯಲ್ಲಿ ದಲಿತ ಲೇಖಕರ ಚಿಂತನೆಗಳ ಹೆಚ್ಚು ಕೆಲಸ ಮಾಡಿವೆ. ಆ ಬದಲಾವಣೆಯ ಪಾಲುದಾರರಾಗಿ ಕೆಲಸ ಮಾಡಿದ್ದೇವೆ. ಆದರೆ ಕ್ಷೇತ್ರಮಟ್ಟಕ್ಕೆ ಇಳಿದು ನೋಡಿದಾಗ ಬದಲಾವಣೆ ಆಗಿದೆ ಅನ್ನಿಸಿದ್ದರೂ ಹಲವು ಸಂಗತಿಗಳಲ್ಲಿ ಮಾರ್ಪಾಡು ಸಾಧ್ಯವಾಗಿಲ್ಲ. ಆ ಬದಲಾವಣೆಗಳು ಬಾಹ್ಯ ಒತ್ತಡದಿಂದ ಆಗಿದೆಯೇ ಹೊರತು, ಅಂತರಂಗದಿಂದ ಅಲ್ಲ. ಅಂತರಂಗ ಇನ್ನೂ ಕತ್ತಲೆಯಲ್ಲಿಯೇ ಇದೆ.

ದಲಿತ ಸಂವೇದನೆಗಳನ್ನು ವರ್ತಮಾನದ ಬೇರೆ ಬೇರೆ ಸಂದರ್ಭಕ್ಕೆ ವ್ಯಕ್ತಮಾಡಬೇಕು. ಜಾತಿ ಸ್ವರೂಪ ಇಂದು ಬೇರೆ ರೂಪದಲ್ಲಿ ಚಲಾವಣೆಯಲ್ಲಿದೆ. ಹಾಗೆಂದು ಜಾತಿ ಬೇರೂರಿದೆ ಎಂದು ಅತಿಶಯವಾಗಿ ಹೇಳಲೂ ಸಾಧ್ಯವಿಲ್ಲ. ಹಳೆಯ ನೋವು ಬೇಸರವನ್ನು ಹೇಳಬೇಕೆ, ಬೇಡವೆ? ಹೇಳಿ ಆಗಿದ್ದರೆ ಏನು ಮಾಡಬೇಕು ಎನ್ನುವ ಸರಿಯಾದ ನಿಲುವಿನಲ್ಲಿ ನಾವು ಇನ್ನೂ ಕೆಲಸ ಮಾಡುತ್ತಿಲ್ಲ ಎನಿಸುತ್ತದೆ. 70–80ರ ದಶಕದ ದಲಿತ ಚಳವಳಿಗೆ ಸಂವೇದನಾಶೀಲ ವ್ಯಕ್ತಿಗಳು ಪ್ರತಿಕ್ರಿಯಿಸುತ್ತಿದ್ದರು. ಈಗ ಆ ಹಾದಿಯಿಂದ ತುಸು ಹಿಂದೆ ಇದ್ದೇವೆ. ದಲಿತ ಸಂವೇದನೆಗಳನ್ನು ಪ್ರಸ್ತುತ ಹೊಸ ಬಗೆಯಲ್ಲಿ ನೋಡಬೇಕಾಗಿದೆ. ಓದಿನ ಸಮುದಾಯಗಳು ಹೆಚ್ಚುತ್ತಿದ್ದರೂ, ಆರ್ಥಿಕತೆ ಸುಧಾರಿಸುತ್ತಿದ್ದರೂ ಜಾತೀಯತೆ ಹೋಗಿಲ್ಲ, ಅವಮಾನ ಕರಗಿಲ್ಲ ಎನ್ನುವ ಪ್ರಜ್ಞೆ ಇಟ್ಟುಕೊಂಡು ದಲಿತರು ಸಾಗಬೇಕಿದೆ. ಈಗಿನ ದಲಿತ ಬರಹಗಾರಿಗೆ ಒಂದು ಚೌಕಟ್ಟು ಸಿಕ್ಕಿದೆ. ಉದಾಹರಣೆಗೆ; ಕಿಚ್ಚು, ನೋವನ್ನು ಸಾಹಿತ್ಯದಲ್ಲಿ ಅಭಿವ್ಯಕ್ತಿಸಲು ಗೊತ್ತಿಲ್ಲದೆಯೋ ಗೊತ್ತಿದ್ದೋ ದೇವನೂರ ಮಹಾದೇವ, ಸಿದ್ಧಲಿಂಗಯ್ಯ, ಮೊಗಳ್ಳಿ ಗಣೇಶ್ ಅವರ ಪ್ರೇಮ್ ಇಟ್ಟುಕೊಂಡಿದ್ದಾರೆ. ಅದನ್ನು ದಾಟಿ ಬಂದಾಗ ವರ್ತಮಾನದ ಬೇರೆ ಬೇರೆ ರೀತಿಯ ಅವಸರಗಳು ತಿಳಿಯುತ್ತದೆ. ಜಾತಿ ಮೀರಿದ ಬಡತನದ ಕ್ರೌರ್ಯ ಎಲ್ಲರನ್ನೂ ಆವರಿಸುತ್ತಿದೆ. ಸಾಂಸ್ಕೃತಿಕ ಚಳವಳಿಗಳು ಗಟ್ಟಿಗೊಂಡಷ್ಟು ದಲಿತ ರಾಜಕಾರಣದ ಚಳವಳಿಗಳು ಗಟ್ಟಿಗೊಳ್ಳಲಿಲ್ಲ. ಈ ಅಪಾಯ ಎಲ್ಲ ಚಳವಳಿಗೂ ಇದೆ. ಸಾಂಸ್ಕೃತಿಕ ಚಟುವಟಿಕೆಯ ಆಶಯದಲ್ಲಿರುವ ವ್ಯಕ್ತಿ ಆ ದಿಕ್ಕಿನಲ್ಲಿ ಹೋಗಲಿ. ರಾಜಕಾರಣದ ಮೂಲಕ ಸುಧಾರಿಸಬಹುದು ಎನ್ನುವ ಮನೋಭಾವದವರು ಆ ಹಾದಿಯಲ್ಲಿ ಹೋಗಬೇಕು. ಆದರೆ ಒಬ್ಬರೇ ಎರಡೂ ಕಡೆ ಕಾಲಿಟ್ಟಾಗಲೇ ಚಳವಳಿಗಳ ಚಲನೆಗೆ ಪೆಟ್ಟು ಬೀಳುತ್ತದೆ.

ದಲಿತ ಸಂಘಟನೆಗಳು ಹೆಚ್ಚಿರುವುದಕ್ಕೆ ‘ವಿಘಟನೆ’ ಶಬ್ದ ಬಳಸಬಾರದು ಎನ್ನುವುದು ನನ್ನ ಕೋರಿಕೆ. ಒಂದು ದೀರ್ಘ ಸಮಸ್ಯೆಗೆ ಒಂದು ಕಾಲಘಟ್ಟದಲ್ಲಿ ದುಡಿಯಬೇಕಿತ್ತು, ದುಡಿದಿದ್ದೇವೆ. ದಕ್ಕಿಸಿಕೊಳ್ಳುವಷ್ಟನ್ನು ದಕ್ಕಿಸಿಕೊಂಡಿದ್ದೇವೆ. ದಕ್ಕದಿದ್ದು ಇನ್ನೂ ಇದೆ. ಅದನ್ನು ಪರಿಪೂರ್ಣವಾಗಿ ಪಡೆಯಲು ಬೇರೆ ಬೇರೆ ದಿಕ್ಕಿನಲ್ಲಿ ಹೋರಾಟ ಮಾಡುತ್ತಿದ್ದಾರೆ. ಒಂದು ಮನೆಯಲ್ಲಿ ಐದು ಮಂದಿ ಅಣ್ಣ ತಮ್ಮಂದಿರು ಇದ್ದರೆ ಅವರು ಅವರದ್ದೇ ಹಾದಿಯಲ್ಲಿ ದುಡಿಮೆಗೆ ಸಾಗುವರು. ಒಟ್ಟು ದುಡಿಯುತ್ತಿದ್ದಾಗ ಎಷ್ಟು ಫಲಿತಾಂಶ ಕಂಡುಕೊಂಡಿದ್ದೆವೊ ಅದಕ್ಕಿಂತ ಹೆಚ್ಚಿನ ಫಲಿತಾಂಶವನ್ನು ಈಗ ಕಂಡುಕೊಳ್ಳುತ್ತಿದ್ದೇವೆ. ಭಿನ್ನ ದಿಕ್ಕಿನಲ್ಲಿ ಸಾಗಿದರೂ ಉದ್ದೇಶ ಮತ್ತು ಗುರಿ ಒಂದೇ. ತಳ ಸಮುದಾಯದ ಹೋರಾಟಗಳನ್ನು ಅನುಮಾನಿಸಬಾರದು. ಇದು ಅವರನ್ನು ನೈತಿಕವಾಗಿ ಅಧೀರರನ್ನಾಗಿ ಮಾಡಿದಂತೆ. ಅವರು ಮೊದಲೇ ಅನುಮಾನಕ್ಕೆ, ಪ್ರಶ್ನೆಗೆ ಒಳಪಟ್ಟು ಒದ್ದಾಡಿಕೊಂಡು ಹೊರಬರುತ್ತಿರುತ್ತಾರೆ. ಮುಖ್ಯವಾಗಿ ಇಷ್ಟು ದಿನದ ಹೋರಾಟದಲ್ಲಿ ನೋಡಿಲ್ಲದ ಭಾಗ ಎಂದರೆ– ಹೆಣ್ಣುಮಕ್ಕಳ ಬದುಕು ಬವಣೆಯನ್ನು ನಾವು ಸರಿಯಾಗಿ ನಿರೂಪಿಸಿಲ್ಲ. ಮಹಿಳೆಯರು ನಾಯಕತ್ವ ವಹಿಸಿಕೊಳ್ಳುವ ದಿಸೆಯಲ್ಲಿ ನಾವು ಪ್ರಯತ್ನ ಮಾಡಿಲ್ಲ.

ಎದೆಗೆ ಬೀಳಬೇಕು ಅಕ್ಷರ
-ಕೋಟಿಗಾನಹಳ್ಳಿ ರಾಮಯ್ಯ

ದಲಿತ ಸೇರಿದಂತೆ ಕನ್ನಡದ ಒಟ್ಟು ಸಮಷ್ಟಿ ಪ್ರಜ್ಞೆಯ ಬೌದ್ಧಿಕತೆಗೆ ನವ ಆರ್ಥಿಕತೆ ಸೃಷ್ಟಿಸಿರುವ ಭೀಕರತೆಯನ್ನು ಸರಳವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಿಕ್ಕಟ್ಟುಗಳ ಬಗ್ಗೆ ಸರಳವಾಗಿ ಬೀದಿಯಲ್ಲಿ ನಿಂತು ಮಾತನಾಡಬೇಕಾದವರು ಸಂಶೋಧನೆ, ಡಾಕ್ಟರೇಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದಲಿತ ಸಾಹಿತ್ಯ, ಸಂಶೋಧನೆ ಕುರಿತು ವರ್ಷಕ್ಕೆ ಸರಾಸರಿ ನೂರು ಸಂಶೋಧಕರು ನನಗೆ ಫೋನ್ ಮಾಡುತ್ತಾರೆ. ‘ನಿಮ್ಮ ಸಂಶೋಧನೆಗಳನ್ನು ತಿಪ್ಪೆಗೆ ಹಾಕಿ’ ಎಂದು ಹೇಳುತ್ತೇನೆ. ಮಾರ್ಗದರ್ಶಿಗೆ ಅಗತ್ಯವಾದ ಬೌದ್ಧಿಕ ರಾಹಿತ್ಯವನ್ನು ಅವರೂ ಅನುಭವಿಸುತ್ತಿದ್ದಾರೆ. ಯಾವ ಭಾರತವನ್ನು ಗಟ್ಟಿ ಮಾಡುತ್ತೇವೆ ಎನ್ನುವುದರ ಮೇಲೆ ದಲಿತ ಸಂವೇದನಗಳು ನಿಂತಿವೆ.

‘ಬುದ್ಧ ಹಾಗೂ ಬುದ್ಧಪೂರ್ವ ಅವಲೋಕಿತೇಶ್ವರ ಪರಂಪರೆಗಳ ನೆತ್ತಿಯ ಮೇಲೆ ವರ್ಣಾಶ್ರಮ ಧರ್ಮ ಮಲಬಾಂಡ್ಲಿಯನ್ನು ಹೊರೆಸಿತು’ ಎಂದು ಇತ್ತೀಚೆಗೆ ಒಂದು ನೋವಿನ ಸಾಲು ಬರೆದಿದ್ದೇನೆ. ದಲಿತ ಸಾಹಿತ್ಯ ಸಂವೇದನೆ ಮತ್ತು ಚಳವಳಿಗಳನ್ನು ಟೋಕನ್‌ ಬಿಲ್ಲೆಗೆ ತಂದು ನಿಲ್ಲಿಸಿಕೊಂಡಿದ್ದಾರೆ. ಒಂದು ಫ್ಲಾಟ್‌ಫಾರ್ಮ್‌ಗಾಗಿಯೇ ದಲಿತ ಚಳವಳಿ ಆರಂಭವಾಗಿದ್ದು. ಧರ್ಮಸ್ಥಳದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಸಾಹಿತಿ ಚೆನ್ನಣ್ಣ ವಾಲೀಕಾರ ಅವರು ಸಮ್ಮೇಳನದಲ್ಲಿ ದಲಿತ ಸಾಹಿತ್ಯದ ಪ್ರತ್ಯೇಕ ಗೋಷ್ಠಿಗೆ ಅವಕಾಶ ಕೇಳಿದ್ದರು. ನಿರಾಕರಣೆಯ ನಂತರ ದಲಿತ–ಬಂಡಾಯ ಸಾಹಿತ್ಯ ಗಟ್ಟಿಗೊಂಡಿತು. ಕಣ್ತರೆದ ದಲಿತ ಬರಹಗಾರರು ತಮ್ಮ ಗ್ರಾಮ್ಯ ಅನುಭವಗಳನ್ನು ದಾಖಲಿಸಿದರು. ಗ್ರಾಮೀಣ ಲೋಕದಿಂದ ಅನನ್ಯ ಎಳೆಗಳು ಅನಾವರಣಗೊಂಡವು. ಈಗ ಆ ಫ್ಲಾಟ್‌ಫಾರ್ಮ್‌ಗಳು ವಿಭಿನ್ನವಾಗಿವೆ, ಹೆಚ್ಚಿವೆ. 

ದಲಿತ ಸಾಹಿತ್ಯ ಮತ್ತು ಚಳವಳಿ ಫ್ಲಾರ್ಟ್‌ಫಾರ್ಮ್‌ ಹೊಂದಾಣಿಕೆಯತ್ತ ಸಾಗುತ್ತಿದೆ. ಬೌದ್ಧಿಕತೆಯಲ್ಲಿನ ಹೊಸ ಆಯಾಮ – ಆಲೋಚನೆಗಳನ್ನು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಚಳವಳಿಯ ಎದೆಹಾಲು ಕುಡಿದಿದ್ದರೆ ಈ ಬಿಕ್ಕಟ್ಟುಗಳು ಬರುತ್ತಿರಲಿಲ್ಲ. ಖಂಡಿತಾ ಇಲ್ಲಿ ಇಂದು ತೊಡಗಿರುವುದು ಬೇಜವಾಬ್ದಾರಿ ಮತ್ತು ಡೇಂಜರಸ್ ಪೀಳಿಗೆ. ಆದರೆ ಮುಂದೆ ಬರುತ್ತಿರುವ ಯುವ ಸಮದಾಯದಲ್ಲಿ ನಾನು ಆಶಾಭಾವ ಕಾಣುತ್ತಿದ್ದೇನೆ. ಅವರ ಜತೆ ನಾನು ಗುರ್ತಿಸಿಕೊಳ್ಳುವೆ. ದಲಿತ ಚಳವಳಿಯ ತಾಯಿಯೇ ದಲಿತ ಸಾಹಿತ್ಯ. ಆದರೆ ಇವು ಎರಡೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ.

ದೇವನೂರ ಮಹಾದೇವ ಅವರು ಸಣ್ಣ ಸಣ್ಣ ಮಾತುಗಳಲ್ಲಿ ಹೇಳಿರುವ ‘ಎದೆಗೆ ಬಿದ್ದ ಅಕ್ಷರ’ ನಮ್ಮ ಎದೆಗೆ ಬೀಳುತ್ತಿಲ್ಲ. ರಾಜಕಾರಣವನ್ನು ಸರಿಯಾದ ರೀತಿ ಅರ್ಥೈಸಿಕೊಂಡು ಒಗ್ಗೂಡಿ ಹೋಗಲಿಲ್ಲ. ಸೈದ್ಧಾಂತಿಕ ಲೇಪದಲ್ಲಿ ವ್ಯಕ್ತಿಗತ ಅವಕಾಶಗಳನ್ನು ಹುಡುಕಿ ಹೋದರು. ಒಗ್ಗೂಡಿ ಒತ್ತಡದ ಗುಂಪುಗಳಾಗಿದ್ದರೆ ಬದಲಾವಣೆ ಸಾಧ್ಯವಿತ್ತು. ಹಿಂದಿನಿಂದಲೂ ನಮ್ಮ ಪ್ರಜಾಪ್ರಭುತ್ವದ ಕ್ರಾಂತಿಗೆ ಬೇಕಾದ ಚಾರಿತ್ರಿಕ ಹಿನ್ನೆಲೆ ಸೃಷ್ಟಿಸಬೇಕಾದ ಹೊಣೆಗಾರಿಕೆಯಿಂದ ಎಲ್ಲರೂ ನುಣುಚಿಕೊಂಡರು. ಜಾಗತೀಕರಣ ವಿನ್ಯಾಸಗಳು ಕುಟುಂಬವನ್ನು ಒಡೆಯುತ್ತಿವೆ. ಮಾರುಕಟ್ಟೆ ಮೂಲವನ್ನು ಹೆಚ್ಚಿಸುತ್ತಿವೆ. ಒಂದು ಮನೆ ಎರಡಾದರೆ ಮಾರುಕಟ್ಟೆಯಲ್ಲಿ ಎರಡು ಫ್ರಿಡ್ಜ್‌ಗಳನ್ನು ಕೊಳ್ಳಬೇಕಾಗುತ್ತದೆ; ಇದು ಚಳವಳಿಗಳಲ್ಲೂ ಆಗುತ್ತಿದೆ. ಸಂವಹನ (ಮಾಧ್ಯಮಗಳು) ಮತ್ತು ಸಂಸ್ಕೃತಿಯನ್ನು ನಾವು ‘ಸರ್ವೈವ್‌’ ಎಂದು ಯೋಚಿಸಬೇಕಾದ ಸಂದರ್ಭದಲ್ಲಿ ಅದನ್ನು ಪ್ರಚಾರ ಇತ್ಯಾದಿ ಬೇರೆ ರೀತಿಯಲ್ಲಿ ಆಲೋಚಿಸುತ್ತಿದ್ದೇವೆ.

ಚಳವಳಿ ಮತ್ತು ದಲಿತ ಸಾಹಿತ್ಯದ ಹೆಸರಿನಲ್ಲಿ ನಡೆಯುವ ಈ ‘ಫ್ಲಾಟ್‌ಫಾರ್ಮ್ ಅಡ್ಜಸ್ಟ್‌ಮೆಂಟ್’ ಅಸಹ್ಯವಾಗಿ ಕಾಣುತ್ತಿದೆ. ‘ಕಮಾಡಿನಿಂದ ಹೇಲು ತುಂಡೊಂದು ತಪ್ಪಿಸಿಕೊಂಡು ಫ್ಲೆಕ್ಸ್‌ನಲ್ಲಿ ಬಂದು ಕೂತದೆ’ ಎನ್ನುವುದು ಇಂದಿನ ದಲಿತ ನಾಯಕತ್ವದ ರೀತಿ. ದಲಿತ ಚಳವಳಿ ಮತ್ತು ಸಾಹಿತ್ಯಕ್ಕೆ ಪ್ರಣಾಳಿಕೆ ರೂಪಿಸುವ ಪಾಲುದಾರರಲ್ಲಿ ನಾನೂ ಒಬ್ಬ. ಆಫ್ರಿಕಾ ಸೇರಿದಂತೆ ಬಹುತೇಕ ದೇಶಗಳ ಪ್ರಣಾಳಿಕೆಯನ್ನು ಅಭ್ಯಾಸ ನಡೆಸಿ 10ನೇ ತರಗತಿಯ ಹುಡುಗನಿಗೂ ಅರ್ಥವಾಗುವಂತೆ ಪ್ರಣಾಳಿಕೆ ರೂಪಿಸಿದ್ದೇನೆ. 

ಕಾಲ್ನಡಿಗೆಯಲ್ಲಿ ಸಾಗಬೇಕಾದ ದಲಿತ ನಾಯಕರ ಬಳಿ ಕ್ವಾಲಿಸ್‌ ವಾಹನವಿದೆ. ನಾನು ದಲಿತರ ಜೀವನ ಗುಣಮಟ್ಟದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನನ್ನ ಜನಾಂಗದ ಹಿತಾಸಕ್ತಿ ಬದಿಗಿಟ್ಟು ಕ್ವಾಲಿಸ್‌ನಲ್ಲಿ ಇಲ್ಲವೇ ಹೆಲಿಕಾಪ್ಟರ್‌ನಲ್ಲಿ ಓಡಾಡಿದರೆ ಏನು ಸಾಧ್ಯ? ಮುಂದೆ ಬರುತ್ತಿದೆಯಲ್ಲ, ದಲಿತ ಸಮುದಾಯದ ಆ ಮೂರನೇ ತಲೆಮಾರು ಉತ್ತಮವಾಗಿದೆ. ಗಮನಾರ್ಹ ಆಲೋಚನೆ–ಚಿಂತನೆ ಇದೆ. ನಾನು ಅವರ ಜತೆಯವನು. ನಮ್ಮ ನೆಲದಲ್ಲಿ ಜನಪದ ಸೇರಿದಂತೆ ಎಲ್ಲ ಸಂಪತ್ತು ಉತ್ತಮವಾಗಿದೆ. ಮಕ್ಕಳನ್ನು ಸಾಂಸ್ಕೃತಿಕವಾಗಿ ಪೋಷಿಸಬೇಕು. ಆ ನಂತರ ಅವರು ಆರ್ಎಸ್ಎಸ್, ಮಾರ್ಕ್ಸ್‌ವಾದ, ಮಾವೋವಾದ ಏನನ್ನಾದರೂ ಒಪ್ಪಿಕೊಳ್ಳಲಿ. ಅಂತಿಮವಾಗಿ ನಿನ್ನಲ್ಲಿ ನನ್ನಲ್ಲಿ ಭೇದವಿದೆ ಎಂದು ಪ್ರತ್ಯೇಕವಾಗಲಿ. ಆದರೆ ಆರಂಭದಲ್ಲಿಯೇ ಐಡಿಯಾಲಜಿಗಳನ್ನು ತುಂಬಿ ಮಕ್ಕಳನ್ನು ರೋಗಿಗಳನ್ನಾಗಿ ಮಾಡುತ್ತಿದ್ದೇವೆ.

ಹೋರಾಟಗಳ ಹರಿವಿನತ್ತ ವಿದ್ಯಾರ್ಥಿಗಳು...
-ಡಾ. ಅನಸೂಯ ಕಾಂಬಳೆ

ದಲಿತ ಸಾಹಿತ್ಯದ ದನಿ ಪ್ರಸ್ತುತ ಮತ್ತಷ್ಟು ಗಟ್ಟಿಯಾಗಿ ಕೇಳಬೇಕಿದೆ. ಈ ಹಿನ್ನೆಲೆಯಲ್ಲಿ ಐದನೇ ದಲಿತ ಸಾಹಿತ್ಯ ಸಮ್ಮೇಳನ ಹೆಚ್ಚು ಪ್ರಸ್ತುತ. ದಲಿತ ಸಂವೇದನೆಗಳು ಎಂದಿಗೂ ಮಾನವೀಯ ಕಳಕಳಿಯ ಆಶಯದ ಹಿನ್ನೆಲೆಯವು. ಮಹಿಳೆಯ ವಿರುದ್ಧದ ಅತ್ಯಾಚಾರ, ದೌರ್ಜನ್ಯಗಳ ಈ ಸಂದರ್ಭದಲ್ಲಿ ಇನ್ನೂ ಪ್ರಖರವಾಗಿ ದನಿ ಹೊರಡಿಸಬೇಕು. ದಲಿತರು ಹೆಚ್ಚು ಹೆಚ್ಚು ವೈಚಾರಿಕವಾಗಿ ತೆರೆದುಕೊಳ್ಳಬೇಕು.

ದಲಿತ ಸಾಹಿತ್ಯ–ಸಂವೇದನೆಗಳು ಗಟ್ಟಿಯಾಗಿವೆ. ಸಮ್ಮೇಳನ ದಲಿತ ಸಾಹಿತ್ಯ ಉನ್ನತ ಸ್ಥಿತಿಯಲ್ಲಿದೆ ಎನ್ನುವುದನ್ನು ತೋರಿಸುತ್ತದೆ. ಇದರ ದನಿ ಮತ್ತಷ್ಟು ಪ್ರಖರವಾಗಿ ಅಭಿವ್ಯಕ್ತಗೊಳ್ಳಬೇಕಾದುದು ಚಳವಳಿಗಳ ಕಾವು ಕಡಿಮೆ ಆಗಿರುವ ಇಂದಿನ ಅಗತ್ಯ. 70ರ ದಶಕದಲ್ಲಿ ಪಾಲ್ಗೊಂಡಂತೆ ಚಳವಳಿಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿಲ್ಲ. ಸಮುದಾಯದ ದನಿಯಾಗಬೇಕಾಗಿದ್ದ ದಲಿತ ಚಳವಳಿ ವ್ಯಕ್ತಿಗತ ದನಿಯಾಗುತ್ತಿರುವ ಈ ಹೊತ್ತಿನಲ್ಲಿ ಸಮ್ಮೇಳನ ಹೆಚ್ಚು ಪ್ರಸ್ತುತ.

ಹೋರಾಟಗಳ ಜತೆ ಸಾಹಿತಿಗಳು ಇದ್ದಾಗ ಗಡಸುತನವಿತ್ತು. ಸಾಹಿತ್ಯ, ಘೋಷಣೆಗಳು ಚಳವಳಿಯ ಒಡಲಿನಿಂದ ಬಂದಿವೆ. ಆದರೆ ಇಂದು ಸಾಹಿತ್ಯ–ಚಳವಳಿ ಸಂಬಂಧಗಳು ದೂರ ಸರಿದಿರುವಂತೆ ಕಾಣುತ್ತದೆ. ಹೋರಾಟಗಳು ವ್ಯಕ್ತಿಗತವಾಗುತ್ತಿರುವ ಕಾರಣವೂ ಇದಕ್ಕಿರಬಹುದು. ಸಾಧಿಸಿಯೇ ತೀರುವೆವು ಎನ್ನುವ ಮನೋಭಾವ ಇಂದು ಮೃದುವಾಗುತ್ತಿದೆ. ಇಂದಿನ ಬರಗಾಹರರು ಚಳವಳಿ– ಸಂಘಟನೆಗಳ ಜತೆ ಬರುತ್ತಿಲ್ಲ. ದೌರ್ಜನ್ಯದ ಸ್ಥಳದಲ್ಲಿ ಅಂದರೆ ಘಟನಾ ಪ್ರಧಾನ ನೆಲೆಯಲ್ಲಿ ಹುಟ್ಟಿದ ಸಾಹಿತ್ಯ ಗಟ್ಟಿಯಾಗಿರುತ್ತದೆ. ಈ ಹಿಂದೆ ದಲಿತ ಬರಹಗಾರರು ದೌರ್ಜನ್ಯ ನಡೆದ ಸ್ಥಳಕ್ಕೆ ಹೋಗುತ್ತಿದ್ದರು, ಜನರನ್ನು ಎಚ್ಚರಿಸುತ್ತಿದ್ದರು. ಆ ಘಟನೆ ಆಧಾರಿತ ನೆಲೆಯಲ್ಲಿ ಹುಟ್ಟಿದ ಸಾಹಿತ್ಯ ಶಕ್ತಿಯುತವಾಗಿ ಇರುತ್ತಿತ್ತು. ಈಗ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಹೋರಾಟಗಳಲ್ಲಿ ಪಾಲ್ಗೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ.

‘ರಾಜಕೀಯ ಅಧಿಕಾರ ದಕ್ಕುವವರೆಗೂ ಸಾಮಾಜಿಕ ಸ್ಥಾನಮಾನ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ದಲಿತ ಸಾಹಿತಿಗಳು ರಾಜಕಾರಣ ಪ್ರಜ್ಞೆಯನ್ನು ಆದ್ಯತೆಯನ್ನಾಗಿ ಮಾಡಿಕೊಂಡಿಲ್ಲ. ಸಂಘಟನೆಗಳು ಮೇಲ್ನೋಟಕ್ಕೆ ವಿಘಟನೆ ಎನ್ನುವಂತೆ ಕಾಣುತ್ತವೆ. ಆದರೆ ಎಲ್ಲ ಸಂಘಟನೆಗಳು ದುಡಿಯುತ್ತಿರುವುದು ಒಂದೇ ಗುರಿಗಾಗಿ. ಬೆಂಗಳೂರಿನಲ್ಲಿ ಮೆಟ್ರೊ ರೈಲಿನ ಹಾದಿಗಾಗಿ ವಿಧಾನಸೌಧದ ಎದುರು ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸುವ ವಿಷಯದಲ್ಲಿ ಎಲ್ಲರೂ ಒಗ್ಗೂಡಿದರು. ಆ ಒಗ್ಗಟ್ಟು ಎಲ್ಲ ಸಂದರ್ಭಗಳಲ್ಲೂ ಕಾಣಬೇಕು.

ಆಶಾಭಾವ ಇದ್ದರಷ್ಟೇ ಬದಲಾವಣೆ ಸಾಧ್ಯ
-ಲಕ್ಷ್ಮೀನಾರಾಯಣ ನಾಗವಾರ

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪಲ್ಲಟಗಳನ್ನು ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಶೋಷಿತವರ್ಗಗಳ ದನಿ ಹೆಚ್ಚಾಗಬೇಕು. ದಲಿತ ಸಾಹಿತ್ಯ ಸಂವೇದನೆ ಪ್ರತಿಯೊಬ್ಬ ಸಾಹಿತಿಗೂ ಮುಖ್ಯ. ಅದು ದಲಿತ ಬರಹಗಾರರಿಗೆ ಮಾತ್ರವಲ್ಲ. ಕುವೆಂಪು ಅವರಿಂದ ಹಿಡಿದು ಅನಂತಮೂರ್ತಿ ಅವರವರೆಗೂ ಈ ಸಂವೇದನೆಗಳು ಕಾಣಿಸುತ್ತಿದ್ದು, ಅದು ಹೆಚ್ಚಬೇಕು ಎನ್ನುವುದೇ ಆಶಯ. ದಲಿತ ಸಾಹಿತ್ಯದ ಸಂವೇದನೆ ಅಂತಿಮವಾಗಿ ಜಾತಿವಿನಾಶದ ಕಡೆ ಸಾಗಬೇಕು.

ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ಕೆಲವು ಸಾಹಿತಿಗಳು/ವಿಮರ್ಶಕರು ಇಂದು ಹತಾಶರಾಗಿದ್ದಾರೆ. ವೈಯಕ್ತಿಕ ಹಿನ್ನೆಲೆಯಲ್ಲಿ ಚಳವಳಿ ಮತ್ತು ಸಾಹಿತ್ಯವನ್ನು ವಿಘಟನೆಯ ಸ್ವರೂಪಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಹತಾಶೆಯನ್ನೇ ಸಮಾಜದ ಹತಾಶೆಯನ್ನಾಗಿ ಬಿಂಬಿಸುತ್ತಿದ್ದಾರೆ. ಹತಾಶೆಗಿಂತ ಆಶಾಭಾವ ಇದ್ದರೆ ಮಾತ್ರ ಬದಲಾವಣೆ ಸಾಧ್ಯ. ಆ ಹಿನ್ನೆಲೆಯ ದಲಿತ ಸಂವೇದನೆ ಹೆಚ್ಚು ಅವಶ್ಯ.  

ವಿದ್ಯಾರ್ಥಿಗಳು, ಯುವಕರು ತಮ್ಮ ಸಾಹಿತ್ಯದ ಪ್ರಾರಂಭದಲ್ಲಿ ಪ್ರೇಮ–ಕಾಮದ ಮೂಲಕ ಅಸ್ಮಿತೆ ಕಂಡುಕೊಳ್ಳುತ್ತಾರೆ, ಚಳವಳಿ ಹಿನ್ನೆಲೆಯವರ ಸಾಹಿತ್ಯಕ್ಕೆ ಸಮಾನತೆ, ಸಂಘರ್ಷದ ಕಿಚ್ಚು ಬರುತ್ತದೆ. ಇಂದಿನ ಯುವಕರಿಗೆ ಅಂಬೇಡ್ಕರ್ ಎಷ್ಟು ಮುಖ್ಯವಾಗುವರೋ ಕುವೆಂಪು, ಬಸವಣ್ಣ, ಕಾರ್ಲ್‌ಮಾಕ್ಸ್ ಸಹ ಅಷ್ಟೆ ಮುಖ್ಯರಾಗಬೇಕು. ಬಸವಣ್ಣನವರ ವಚನ ಚಳವಳಿ, ಮಂಟೆಸ್ವಾಮಿ, ಸಿದ್ದಪ್ಪಾಜಿ ಅವರ  ಸಾಂಸ್ಕೃತಿಕ ನೆಲೆ ಐತಿಹಾಸಿಕವಾದದ್ದು. ಅದು ದಲಿತ ಸಂಸ್ಕೃತಿಗೆ ಮುಖ್ಯ ನೆಲೆಗಟ್ಟಾಗುತ್ತದೆ. ಅಂಬೇಡ್ಕರ್ ದಲಿತರಿಗೆ ‘ಪ್ರತ್ಯೇಕ ಮತದಾನ’ದ ಪರಿಕಲ್ಪನೆ ಕೇಳಿದ್ದು ಅವರ ದೂರದೃಷ್ಟಿಯ ಫಲ. ಮೀಸಲು ಕ್ಷೇತ್ರಗಳಲ್ಲಿ ವಿಚಾರವಂತ ದಲಿತರು ಆಯ್ಕೆಯಾಗುವುದು ಇಂದಿಗೂ ಕಷ್ಟವಾಗುತ್ತಿದೆ. ಮೇಲ್ಜಾತಿಯ ಮರ್ಜಿ ಅನಿವಾರ್ಯ ಎನ್ನುವಂತಿದೆ. ಮೂಲ ದಲಿತ ಚಳವಳಿಯಿಂದ ನಾಲ್ಕೈದು ಗುಂಪುಗಳಾಗಿವೆ.  ಹಿರಿಯರು ಮತ್ತು ವಿಮರ್ಶಕರು ‘ದಲಿತ’ ಎಂದ ತಕ್ಷಣ ದಲಿತ ಸಂಘರ್ಷ ಸಮಿತಿ ಎನ್ನುವ ಪರಿಕಲ್ಪನೆ ಮೂಡಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಲ್ಲಾ ಕೇಂದ್ರ, ಪಟ್ಟಣಗಳಂಥ ಸ್ಥಳಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟುಕೊಂಡು ನೋಂದಾಯಿತರಾಗಿರುವ ಲೆಟರ್ ಹೆಡ್ ಸಂಘನೆಗಳೂ ಇವೆ. ಇವರು ಚಳವಳಿಯನ್ನು ತಪ್ಪಾಗಿ ಭಾವಿಸಿದ್ದಾರೆ.

ದಲಿತ ಚಳವಳಿಗೂ ಸಂಘಕ್ಕೂ ವ್ಯತ್ಯಾಸವಿದೆ. ಸೈದ್ಧಾಂತಿಕ ನಿಲುವು ಸಹ ಬೇರೆ. ದಲಿತ ಸಂಘಟನೆಗಳು ಒಂದಾಗಬೇಕು ಎಂದು ಮೈಸೂರಿನಲ್ಲಿ ಇತ್ತೀಚೆಗೆ ನಡೆದ ದಲಿತ ಕಾರ್ಯಾಗಾರದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು ಮತ್ತು ನಾವು ವಿಷಯಾಧಾರಿತ ಬೆಂಬಲದಲ್ಲಿ ಹೋರಾಟ ರೂಪಿಸಲು ಸಮನ್ವಯ ಸಮಿತಿ ರಚಿಸುವ ತೀರ್ಮಾನದಲ್ಲಿದ್ದೇವೆ. ತಳಮಟ್ಟದಲ್ಲೀ ಕಾರ್ಯಕರ್ತರನ್ನು ಸೇರಿಸುವ ಆಲೋಚನೆ ಇದೆ. ಸಾಂಸ್ಕೃತಿಕ ಮತ್ತು ಸಾಹಿತ್ಯದ ನಂಟು ಇಟ್ಟುಕೊಂಡಿರುವ ಚಳವಳಿಗಳಿಗೆ ತಾತ್ವಿಕ ಬದ್ಧತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT