ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕ ಭಾಷಾ ಕಾಯ್ದೆ’ ಜಾರಿಗೆ ಒತ್ತಾಯ

Last Updated 9 ಏಪ್ರಿಲ್ 2014, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ವಾಣಿಜ್ಯ ಮಳಿಗೆಗಳು, ಅಂಗಡಿಗಳ ನಾಮ ಫಲಕಗಳಲ್ಲಿ ಕನ್ನಡವನ್ನೆ ಬಳಸಬೇಕು ಎನ್ನುವ ಬಗ್ಗೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆ–1961ಯಲ್ಲಿ ಹೇಳಿಲ್ಲ. ಆದ್ದರಿಂದ ನಾಮ ಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡುವ ಕುರಿತು ಪ್ರತ್ಯೇಕ ಕರ್ನಾಟಕ ಭಾಷಾ ಕಾಯ್ದೆಯನ್ನು ಜಾರಿಗೊಳಿಸಬೇಕಾದ ಅಗತ್ಯ ಇದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ಬೆಂಗಳೂರು  ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ಕನ್ನಡ ನಾಮ ಫಲಕ: ನ್ಯಾಯಾಲಯದ ಆದೇಶ–  ಸಾಧಕ, ಬಾಧಕಗಳು’ ಕುರಿತ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ನಾಮ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಅಳವಡಿ­ಸುವ ಬಗ್ಗೆ  ಕಾಯ್ದೆಯಲ್ಲಿಯೇ ಸ್ಪಷ್ಟವಾಗಿ ಇಲ್ಲ. ಆದ್ದರಿಂದ ಅಂಗಡಿ, ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡವನ್ನು ಕಡ್ಡಾಯ­ಗೊಳಿಸುವ ಬಗ್ಗೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದರು.

‘ಕಾಯ್ದೆಗೆ ತರಲಾಗಿದ್ದ ತಿದ್ದುಪಡಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ  ವೊಡಾಫೋನ್‌ ಕಂಪೆನಿ ಸಹ ನಾನು ಕನ್ನಡ ವಿರೋಧಿಯಲ್ಲ ಎಂದು ಹೇಳಿದೆ.  ಆದ್ದರಿಂದ ನಾಮ ಫಲಕಗಳಲ್ಲಿ ಕನ್ನಡ ಕಡ್ಡಾಯ, ಕನ್ನಡಿಗರಿಗೆ ಉದ್ಯೋಗ, ಕೈಗಾರಿಕೆಗಳು, ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ‘ಕರ್ನಾಟಕ ಭಾಷಾ ಕಾಯ್ದೆ’ಯನ್ನು ಜಾರಿಗೊಳಿಸಬೇಕು. ಕಾಯ್ದೆ ಜಾರಿಗೆ ಹೆಚ್ಚಿನ ಕಾಲಾವಕಾಶ ಬೇಕಾಗುವುದರಿಂದ ತಾತ್ಕಾಲಿಕವಾಗಿ  ಕರ್ನಾಟಕ ಮುನ್ಸಿಪಲ್‌ ಕಾಯ್ದೆಗೆ ತಿದ್ದುಪಡಿ ತಂದು ಅದರಲ್ಲಿ ಈ ವಿಷಯಗಳನ್ನು ಸೇರಿಸಬೇಕು’ ಎಂದು ಒತ್ತಾಯಿಸಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಮಾತನಾಡಿ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆ–1961ಯಲ್ಲಿ ಕಾರ್ಮಿಕರ ಯೋಗಕ್ಷೇಮವನ್ನು ಕಾಪಾಡುವದರ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿಹಿಡಿದಿರುವುದು ಸರಿಯಾದ ಕ್ರಮವಾಗಿದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳಿಗೆ ನಿಬಂಧನೆಗಳನ್ನು ಮಾಡುವ ಅಧಿಕಾರವಿದೆ. ಆದ್ದರಿಂದ ಈ ವಿಷಯಗಳನ್ನು ಅದರ ಅಡಿಯಲ್ಲಿ ಸೇರಿಸಲು ಸಾಧ್ಯವಿದೆಯೇ ಎಂದು ಪರಿಶೀಲಿಸಬೇಕು ಎಂದರು.

ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ‘ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ತಮಿಳು ಮತ್ತು ಮರಾಠಿ ಭಾಷೆಗಳನ್ನು ಕಡ್ಡಾಯಗೊಳಿಸ­ಲಾಗಿದೆ  ಮತ್ತು ಸಮರ್ಪಕವಾಗಿ ಜಾರಿಗೊಳಿಸ­ಲಾಗಿದೆ. ಅಲ್ಲಿ ಸಾಧ್ಯವಾಗಿರುವುದು ನಮ್ಮಲ್ಲಿ ಏಕೆ ಸಾಧ್ಯವಾಗಿಲ್ಲ. ಇದು ಎಲ್ಲರ ಚಿಂತನೆಯ ವಿಷಯವಾಗಬೇಕು’ ಎಂದು ಹೇಳಿದರು.

‘ಕರ್ನಾಟಕದಲ್ಲಿ ವ್ಯಾಪಾರ ಮಾಡುವುದರಿಂದ ಇಲ್ಲಿನ ಸ್ಥಳೀಯ ಭಾಷೆಯನ್ನು ಅಂಗಡಿಗಳು, ವಾಣಿಜ್ಯ ಮಳಿಗೆಗಳ ನಾಮ ಫಲಕಗಳಲ್ಲಿ ಅಳವಡಿಸಬೇಕು. ಅದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಅಷ್ಟಕ್ಕೆ ಅವರು ಅಳವಡಿಸಿಕೊಳ್ಳದಿದ್ದರೆ  ‘ಯಾರಿಗೆ ಕನ್ನಡ ಬೇಡವೋ ಕನ್ನಡಿಗರಿಗೂ ಅವರು ಬೇಡ’ ಎಂಬ ಭಿತ್ತಿ ಪತ್ರವನ್ನು ಅವರ ಅಂಗಡಿಯ ಮುಂದೆ ಅಂಟಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT