ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಫ್‌: ‘ಆಲಸಿ ಹೂಡಿಕೆ ಸೂತ್ರ’

Last Updated 25 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

‘ಯಶಸ್ಸಿಗೆ ಅಡ್ಡ ಹಾದಿಗಳಿಲ್ಲ. ಗುರಿ ಸಾಧನೆಗೆ ಕಠಿಣ ಪರಿಶ್ರಮವೊಂದೇ ದಾರಿ’ ಎಂದು ನಿಮಗೂ ಕೆಲವರು ಹಲವು ಬಾರಿ ಸಲಹೆ ಕೊಟ್ಟಿರುತ್ತಾರೆ. ಇಂಥ ಮಾತುಗಳಿಂದ ಪ್ರಭಾವಿತರಾದ ನೀವು, ‘ಸತತವಾಗಿ ಏನಾದರೂ ಮಾಡುತ್ತಿದ್ದರೆ ಮಾತ್ರ ಯಶಸ್ಸು ಅಥವಾ ನಿರೀಕ್ಷಿತ ಉದ್ದೇಶ ಈಡೇರಲು ಸಾಧ್ಯ’ ಎಂಬ ನಿರ್ಧಾರಕ್ಕೆ ಬಂದಿರಬಹುದು.

ಹೂಡಿಕೆಯ ವಿಚಾರದಲ್ಲೂ ಹಲವರು ಇಂಥದ್ದೇ ನಿರ್ಧಾರಕ್ಕೆ ಬಂದಿರುತ್ತಾರೆ. ಮ್ಯೂಚುವಲ್ ಫಂಡ್‌ಗಳಲ್ಲಿನ ತಮ್ಮ ಹೂಡಿಕೆಯು ಸದಾ ಆದಾಯ ಗಳಿಸುತ್ತಲೇ ಇರಬೇಕೆಂದು ಅನೇಕರು ಬಯಸುತ್ತಾರೆ. ‘ನಾನು ಹೂಡಿಕೆ ಮಾಡಿರುವ ಫಂಡ್‌ ಇಂದು ಎಷ್ಟು ಗಳಿಸಿತು, ಒಟ್ಟಾರೆ ಎಷ್ಟು ಆದಾಯ ತಂದುಕೊಟ್ಟಿದೆ, ಈ ಫಂಡ್‌ ನಿರೀಕ್ಷೆಯ ಮಟ್ಟದಲ್ಲಿ ಗಳಿಕೆ ದಾಖಲಿಸುತ್ತಿಲ್ಲವೇ?’ ಎಂದು ದಿನನಿತ್ಯ ಪ್ರಶ್ನೆಗಳನ್ನು ಕೇಳುತ್ತ ತಲೆಕೆಡಿಸಿಕೊಳ್ಳುತ್ತಾರೆ. ಒಂದು ಫಂಡ್‌ ಸ್ವಲ್ಪ ಹಿನ್ನಡೆ ಕಂಡರೂ ಕೂಡಲೇ ಆ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಮುಂದಾಗುವವರು ಸಹ ಇದ್ದಾರೆ. ಮಾರುಕಟ್ಟೆ ತೇಜಿಗೆ ಬರುತ್ತಿದ್ದಂತೆ ಫಂಡ್‌ಗಳನ್ನು ಮಾರಾಟ ಮಾಡಿ ಲಾಭ ಬಾಚಿಕೊಳ್ಳಲು ಮುಂದಾಗುವವರು, ದಿನನಿತ್ಯ ಎಂಬಂತೆ ಮಾರಾಟ, ಖರೀದಿ ನಡೆಸುವವರು ಹಲವರಿದ್ದಾರೆ. ಮ್ಯೂಚುವಲ್‌ ಫಂಡ್‌ ಹೂಡಿಕೆಯ ವಿಚಾರದಲ್ಲಿ ಇಷ್ಟೊಂದು ಆಕ್ರಮಣಶೀಲತೆಯು ಲಾಭಕ್ಕಿಂತ ಹೆಚ್ಚಾಗಿ ನಷ್ಟವನ್ನೇ ತಂದೊಡ್ಡುತ್ತದೆ. ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿರುವವರು ತಾವಾಗಿಯೇ ಅಷ್ಟೊಂದು ಆಸಕ್ತಿ ವಹಿಸಿ ವಹಿವಾಟು ನಡೆಸುವ ಅಗತ್ಯ ಇರುವುದಿಲ್ಲ. ಅದಕ್ಕಾಗಿಯೇ ಫಂಡ್‌ ಮ್ಯಾನೇಜರ್‌ಗಳಿರುತ್ತಾರೆ. ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಮಾರಾಟ– ಖರೀದಿಗಳನ್ನು ಮಾಡುವ ಮೂಲಕ ಅವರೇ ನಿಮ್ಮ ಹೂಡಿಕೆಗೆ ಗರಿಷ್ಠ ರಕ್ಷಣೆ ಒದಗಿಸುತ್ತಾರೆ.

ಕೆಲವು ರಾಜಕೀಯ, ಆರ್ಥಿಕ ಬೆಳವಣಿಗೆಗಳು, ಸುದ್ದಿಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದು ನಿಜ. ಆದರೆ ಕಾಲಕ್ರಮೇಣ ಅದರ ತೀವ್ರತೆ ಕಡಿಮೆಯಾಗುತ್ತದೆ. ಕೆಲವು ಸುದ್ದಿಗಳು ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರುತ್ತವೆ ಎಂದು ಆರಂಭದಲ್ಲಿ ಅನ್ನಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮ ಉಂಟುಮಾಡದಿರಬಹುದು. ಉದಾಹರಣೆಗೆ– ಇರಾನ್‌ ಅಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ಸುದ್ದಿಯು ಮೇ 8ರಂದು ಪ್ರಸಾರವಾಯಿತು. ಇರಾನ್ ಕಚ್ಚಾ ತೈಲ ರಫ್ತುಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ, ಅಮೆರಿಕದ ತೀರ್ಮಾನದಿಂದ ರಫ್ತು ಪ್ರಮಾಣ ತಗ್ಗಿ, ತೈಲ ಬೆಲೆ ಏರಿಳಿತವಾಗಬಹುದು, ಹಲವು ರಾಷ್ಟ್ರಗಳ ಅರ್ಥವ್ಯವಸ್ಥೆ ಕುಸಿಯಬಹುದು ಎಂದೆಲ್ಲ ನಿರೀಕ್ಷಿಸಲಾಯಿತು. ಷೇರು ಮಾರುಕಟ್ಟೆಗಳು ಸಣ್ಣ ಅವಧಿಗೆ ಇಳಿಕೆಯನ್ನೂ ಕಂಡವು. ಆದರೆ, ತೈಲ ಬೆಲೆಯು ಜನರು ಭಾವಿಸಿದ ಮಟ್ಟದಲ್ಲಿ ಏರಿಕೆಯಾಗಲಿಲ್ಲ. ಅಲ್ಲೋಲಕಲ್ಲೋಲವೇನೂ ಆಗಲಿಲ್ಲ. ಇದರಿಂದಾಗಿ ಮಾರುಕಟ್ಟೆಗಳು ಮತ್ತೆ ಚೇತರಿಸಿಕೊಂಡವು. ಈ ಸುದ್ದಿಗೆ ಕಿವಿಗೊಟ್ಟು, ಮಾರುಕಟ್ಟೆಗಳು ಇಳಿಯಬಹುದು, ಆಗ ಹೂಡಿಕೆ ಮಾಡುತ್ತೇನೆ ಎಂದು ಕಾಯುತ್ತ ಕುಳಿತಿದ್ದವರಿಗೆ ಖಂಡಿತ ನಿರಾಸೆಯಾಗಿರುತ್ತದೆ.

ಇಂತಹ ಹತ್ತು ಹಲವು ಉದಾಹರಣೆಗಳಿವೆ. ಪ್ರತಿ ಬಾರಿ ಮಾರುಕಟ್ಟೆ ಇಳಿಕೆಯಾದಾಗ ಅಥವಾ ಏರಿಕೆಯಾಗುವಾಗ ನೀವು ಆತಂಕಪಡುವ ಅಗತ್ಯ ಇರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಮಾರಾಟ ಅಥವಾ ಖರೀದಿ ಮಾಡುವುದರಿಂದ ಹೆಚ್ಚಿನ ಗಳಿಕೆ ಮಾಡಬಹುದು ಎಂಬುದು ಸತ್ಯವಲ್ಲ. ಯಾಕೆಂದರೆ ಕಾಲಕ್ರಮೇಣ ಇಂಥ ಏರಿಳಿತಗಳು ಶಾಂತವಾಗಿ ಮಾರುಕಟ್ಟೆ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ.

ಹೂಡಿಕೆಯ ಅವಧಿ ದೀರ್ಘವಾದಷ್ಟೂ ದಿನಂಪ್ರತಿಯ ಏರಿಳಿತದ ಪ್ರಮಾಣವೂ ಕಡಿಮೆಯಾಗುತ್ತದೆ. ಒಂದು ತಿಂಗಳ ಅಂಕಿ ಅಂಶಗಳನ್ನು ನೋಡಿದರೆ ಮ್ಯೂಚುವಲ್‌ ಫಂಡ್‌ ಹೂಡಿಕೆಯ ದಿನದ ಸರಾಸರಿ ಏರಿಳಿತ ಶೇ 0.2ರಷ್ಟಿದೆ. ಆದರೆ ಐದು ವರ್ಷಗಳ ಅಂಕಿ ಅಂಶಗಳನ್ನು ನೋಡಿದಾಗ ಇದರ ಪ್ರಮಾಣ ಶೇ 0.05ರಷ್ಟಿರುವುದು ತಿಳಿಯುತ್ತದೆ. ಇದರ ಅರ್ಥವಿಷ್ಟೇ, ಸಣ್ಣ ಅವಧಿಗೆ ನೀವು ಹೂಡಿಕೆ ಮಾಡಿದ್ದರೆ ದಿನನಿತ್ಯದ ಏರಿಳಿತಗಳು ಹೂಡಿಕೆಯ ಮೇಲೆ ದೊಡ್ಡ ಪರಿಣಾಮ ಉಂಟುಮಾಡುತ್ತವೆ.

ಇದಕ್ಕೆ ಮನೋವೈಜ್ಞಾನಿಕ ಆಯಾಮವೂ ಇದೆ. ನೀವು ಹೂಡಿಕೆ ಮಾಡಿರುವ ಫಂಡ್‌, ಒಂದು ಒಂದು ವಾರದಲ್ಲಿ ಶೇ 1ರಷ್ಟು ಇಳಿಕೆಯಾದಾಗ ಮತ್ತು ಒಂದೇ ದಿನದಲ್ಲಿ ಶೇ 1ರಷ್ಟು ಇಳಿಕೆ ದಾಖಲಿಸಿದಾಗ ನಿಮಗೆ ಆಗುವ ಆತಂಕದ ಪ್ರಮಾಣ ಬೇರೆಬೇರೆಯಾಗಿರುತ್ತದೆ. ಆದ್ದರಿಂದ ದಿನನಿತ್ಯವೂ ನಿಮ್ಮ ಹೂಡಿಕೆಯ ವಿಶ್ಲೇಷಣೆ ಮಾಡುತ್ತಾ ಕೂರುವುದು ಹೆಚ್ಚು ಆತಂಕ ಮೂಡಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿಯೇ ‘ಹೂಡಿಕೆಯು ದೀರ್ಘಾವಧಿಯದ್ದಾಗಿರಲಿ’ ಮತ್ತು ವರ್ಷಕ್ಕೊಮ್ಮೆ ಮಾತ್ರ ಹೂಡಿಕೆಯ ವಿಶ್ಲೇಷಣೆ ಮಾಡಿ ಎಂದು ನಾವು ಯಾವತ್ತೂ ಸಲಹೆ ನೀಡುತ್ತೇವೆ.

ಮಾರುಕಟ್ಟೆ ಯಾವತ್ತೂ ಏರಿಳಿತ ದಾಖಲಿಸುತ್ತಲೇ ಇರುತ್ತದೆ. ಹೂಡಿಕೆದಾರರು ಅದರಿಂದ ಲಾಭ ಮಾಡಿಕೊಳ್ಳಬೇಕು ಅಷ್ಟೇ. ಅದಕ್ಕಾಗಿ ಕೆಲವು ಒಳ್ಳೆಯ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಅದರಲ್ಲಿ ಹೂಡಿಕೆ ಮಾಡುತ್ತಲೇ ಇರಿ. ದಿನಂಪ್ರತಿ ಆಗುವ ಏರಿಳಿತಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟುಬಿಡಿ.

ನಾವಿದನ್ನು ‘ಆಲಸಿ ಹೂಡಿಕೆದಾರ ಸೂತ್ರ’ ಎಂದು ಕರೆಯಲು ಬಯಸುತ್ತೇವೆ. ಆಲಸಿ ಹೂಡಿಕೆದಾರರು ದಿನನಿತ್ಯ ತಮ್ಮ ಹೂಡಿಕೆ ಏನಾಗಿದೆ ಎಂದು ನೋಡುವ ಗೋಜಿಗೆ ಹೋಗುವುದಿಲ್ಲ. ಅವರು ವರ್ಷಕ್ಕೊಮ್ಮೆ ಮಾತ್ರ ಹೂಡಿಕೆಯ ವಿಶ್ಲೇಷಣೆ ಮಾಡುತ್ತಾರೆ. ಅಥವಾ ತಮಗೆ ಹಣದ ಅಗತ್ಯ ಇದ್ದಾಗ ಮಾತ್ರ ಅದರತ್ತ ಗಮನ ಹರಿಸುತ್ತಾರೆ. ಹೀಗೆ ಮಾಡುವುದರಿಂದ ಆಲಸಿ ಹೂಡಿಕೆದಾರರು ಹೆಚ್ಚಿನ ಗಳಿಕೆ ದಾಖಲಿಸುತ್ತಾರೆ. ನೀವೂ ‘ಆಲಸಿ ಸೂತ್ರ’ ಅಳವಡಿಸಿಕೊಳ್ಳುವುದು ಸೂಕ್ತ. ಒಳ್ಳೆಯ ಫಂಡ್‌ಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿ. ಆನಂತರ ಸ್ವಲ್ಪ ದೀರ್ಘಕಾಲದವರೆಗೆ ಅಥವಾ ಉದ್ದೇಶಿತ ಗುರಿ ಮುಟ್ಟುವವರೆಗೂ ನಿಶ್ಚಿಂತೆಯಿಂದ ಕಾಯುತ್ತಿರಿ.

(ಲೇಖಕ: ಫಂಡ್ಸ್‌ ಇಂಡಿಯಾದ ಮ್ಯೂಚುವಲ್‌ ಫಂಡ್‌ ರಿಸರ್ಚ್‌ನ ಪ್ರಧಾನ ಸಂಶೋಧನಾ ವಿಶ್ಲೇಷಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT