ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪಾಯರಹಿತ’ ಹೂಡಿಕೆಯ ಅಪಾಯ!

Last Updated 14 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಒಂದು ದಶಕದ ಅವಧಿಯಲ್ಲಿ ಹೂಡಿಕೆಯ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ಈಗ ಹಣದ ಹೂಡಿಕೆ ಎಂಬುದು ಹಿಂದೆಂದಿಗಿಂತಲೂ ಹೆಚ್ಚು ಸರಳವಾಗಿದೆ. ಬ್ಯಾಂಕ್‌ ಠೇವಣಿಯಿಂದ ಆರಂಭಿಸಿ ಮ್ಯೂಚುವಲ್‌ ಫಂಡ್‌ಗಳವರೆಗೆ, ಷೇರುಗಳಿಂದ ಆರಂಭಿಸಿ ಜೀವ ವಿಮೆಯವರೆಗೆ ಎಲ್ಲ ರೀತಿಯ ಹೂಡಿಕೆಗಳನ್ನೂ ಆನ್‌ಲೈನ್‌ನಲ್ಲೇ ಮಾಡಬಹುದಾಗಿದೆ. ಕೆವೈಸಿ (ಗ್ರಾಹಕರ ಮಾಹಿತಿ ಸಂಗ್ರಹ) ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಇದ್ದರೂ, ಆ ಮಾಹಿತಿ ನೀಡುವ ವಿಧಾನವನ್ನೂ ಸರಳಗೊಳಿಸಲಾಗಿದೆ. ಇಷ್ಟೆಲ್ಲ ಬದಲಾವಣೆಗಳಾಗಿದ್ದರೂ ಭಾರತದ ಹೂಡಿಕೆದಾರರು ಮಾತ್ರ ‘ಅಪಾಯರಹಿತ ಹೂಡಿಕೆ’ (ರಿಸ್ಕ್‌ ಫ್ರೀ) ಎಂಬ ಮಾನಸಿಕ ಸ್ಥಿತಿಯಿಂದ ಹೊರಬಂದಿಲ್ಲ.

ಉಳಿತಾಯದ ಹಣವನ್ನು ಬ್ಯಾಂಕ್‌ನಲ್ಲಿ ಕೂಡಿಡುವುದು ನಮ್ಮ ಹೂಡಿಕೆದಾರರಲ್ಲಿ ಒಂದು ಭದ್ರತೆಯ ಭಾವವನ್ನು ಮೂಡಿಸುತ್ತದೆ. ತಾವು ಕಷ್ಟಪಟ್ಟು ಸಂಪಾದಿಸಿದ ಹಣದ ಹೂಡಿಕೆ ವಿಚಾರದಲ್ಲಿ ‘ರಿಸ್ಕ್‌’ ತೆಗೆದುಕೊಳ್ಳಲು ಯಾರು ತಾನೇ ಬಯಸುತ್ತಾರೆ? ಆದರೆ, ಈ ‘ಭದ್ರತೆ’ಯ ಭಾವವು ಮನಸ್ಸಿನಲ್ಲಿ ಮೂಡುವುದು ನಮ್ಮ ಸುತ್ತಮುತ್ತಲಿನವರ ಮತ್ತು ಪೋಷಕರ ಪ್ರಭಾವದಿಂದ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ಮುಗಿಸಿ ಆಗ ತಾನೇ ಉದ್ಯೋಗಕ್ಕೆ ಸೇರುವ ಯುವಕರು ಸಹ ಅವಧಿ ಠೇವಣಿ ಮತ್ತು ಎಲ್‌ಐಸಿ ಬಗ್ಗೆಯೇ ಮಾತನಾಡುತ್ತಾರೆ. ಯಾಕೆಂದರೆ ಅವರು ತಮ್ಮ ಪಾಲಕರಿಂದ ಕಲಿತ ವಿಚಾರಗಳು ಅವು ಮಾತ್ರ. ನಮ್ಮ ಪೋಷಕರಿಗೆ ಸರ್ಕಾರದ ಮೇಲೆ ಒಂದಿಷ್ಟೂ ಭರವಸೆ ಇಲ್ಲದಿದ್ದರೂ, ತಮ್ಮ ಹೂಡಿಕೆಯ ಹಣವನ್ನು ನಿರ್ವಹಿಸುವ, ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳ ಮೇಲೆ ಪೂರ್ಣ ವಿಶ್ವಾಸವಿರುತ್ತದೆ. ಆದ್ದರಿಂದ ಅವರು ಇಂತಹ ‘ಸುಭದ್ರ’ ಸಂಸ್ಥೆಗಳಲ್ಲೇ ಹೂಡಿಕೆ ಮಾಡಲು ಇಚ್ಛಿಸುತ್ತಾರೆ.

ಈಗಿನ ತಲೆಮಾರು ಮತ್ತು ಅವರ ಪೋಷಕರ ತಲೆಮಾರಿನವರು ಅರ್ಥಮಾಡಿಕೊಳ್ಳದಿರುವ ಸಂಗತಿ ಯಾವುದು ಎಂದರೆ, ಇಂದಿನ ಜೀವನ ಶೈಲಿಯು ಅತ್ಯಂತ ದುಬಾರಿಯಾದುದು. ನಿಮ್ಮ ಗಳಿಕೆಗಿಂತಲೂ ಹೆಚ್ಚನ್ನು ನೀವು ವೆಚ್ಚಮಾಡಬೇಕಾಗುತ್ತದೆ ಎಂಬ ವಿಚಾರ. ನಾವು ದಿನನಿತ್ಯ ಬಳಸುತ್ತಿರುವ ವಸ್ತುಗಳ ಬೆಲೆಯು ಯಾವ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದರೆ, ನಮ್ಮ ಠೇವಣಿಗೆ ಲಭಿಸುತ್ತಿರುವ ಬಡ್ಡಿಯು ಯಾವ ರೀತಿಯಲ್ಲೂ ಅದಕ್ಕೆ ಸರಿಸಮವಲ್ಲ. ಬ್ಯಾಂಕ್‌ ಠೇವಣಿಯು ನಮಗೆ ಗರಿಷ್ಠ ಎಂದರೂ ವಾರ್ಷಿಕ ಶೇ 6 ರಿಂದ ಶೇ 7ರಷ್ಟು ಆದಾಯವನ್ನು ತಂದುಕೊಡಬಲ್ಲದು. ಆದರೆ ನಾವು ಬಳಕೆ ಮಾಡುವ ಉತ್ಪನ್ನಗಳ ಬೆಲೆ ಅದಕ್ಕೂ ಹಲವು ಪಟ್ಟು ಏರಿಕೆಯಾಗುತ್ತಿದೆ.

ನಿವೃತ್ತಿ ವಯಸ್ಸಿನಲ್ಲಿ ಒಂದು ಸುಂದರವಾದ ಮನೆಯನ್ನು ಕಟ್ಟುವ ಕನಸನ್ನು ಕಾಣುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಅದಕ್ಕೂ ಮುಂಚೆ ನೀವು ಒಂದು ವೇಳೆ ಯೂರೋಪ್‌ ಪ್ರವಾಸ ಕೈಗೊಳ್ಳಲು ಮುಂದಾದರೆ, ನಿಮ್ಮ ಕನಸಿನ ಮನೆಯು ನಿಮ್ಮಿಂದ ದೂರ ಸರಿಯುತ್ತಿರುವಂತೆ ಭಾಸವಾಗುತ್ತದೆ. ಅದಕ್ಕಾಗಿ ನೀವು ನಿಮ್ಮ ಇಷ್ಟದ ಇನ್ಯಾವುದನ್ನೋ ತ್ಯಾಗ ಮಾಡಬೇಕಾಗುತ್ತದೆ. ಇದರ ಬದಲು, ಸ್ವಲ್ಪ ಯೋಚನೆ ಮಾಡಿ, ನಿಮ್ಮ ಉಳಿತಾಯಕ್ಕೆ ಒಂದಿಷ್ಟು ‘ಉದ್ದೀಪನಾ ಮದ್ದು (‘ಸ್ಟಿರಾಯ್ಡ್‌’)ಕೊಟ್ಟರೆ ಕನಸುಗಳನ್ನು ಬೇಗನೆ ನನಸಾಗಿಸಬಹುದು. ಸ್ಟಿರಾಯ್ಡ್‌ ಬಳಕೆಯನ್ನು ಒಲಿಂಪಿಕ್‌ ಸಮಿತಿಯು ನಿಷೇಧಿಸಬಹುದು. ಆದರೆ ಆರ್ಥಿಕ ವಿಚಾರದಲ್ಲಿ ಇದು ಸ್ವಿಕೃತ ಅಷ್ಟೇ ಅಲ್ಲ ಸರಿಯಾದ ಪ್ರಮಾಣದಲ್ಲಿ ನೀವು ಈ ‘ಸ್ಟಿರಾಯ್ಡ್‌’ ತೆಗೆದುಕೊಳ್ಳದಿದ್ದರೆ ಹಣಕಾಸಿನ ವಿಚಾರದಲ್ಲಿ ನೀವು ಇತರರಿಗಿಂತ ಹಿಂದೆ ಉಳಿಯುವ ಸ್ಥಿತಿಯೂ ಬರಬಹುದು.

ನಿಜವಾಗಿಯೂ ಈ ರೀತಿಯ ಹೂಡಿಕೆ ಪರಿಣಾಮಕಾರಿಯೇ? ಸಂದೇಹ ನಿವಾರಣೆಗಾಗಿ ಈ ಉದಾಹರಣೆಯನ್ನು ನೋಡಿ.

ಪ್ರಭು ಮತ್ತು ಮಹೇಶ್‌, ಶಾಲಾ ದಿನಗಳಿಂದಲೇ ಆತ್ಮೀಯ ಗೆಳೆಯರು. 2018ರ ಮಾರ್ಚ್‌ 31ರಂದು ಅವರಿಬ್ಬರೂ ನಿವೃತ್ತರಾಗಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ ಒಂದರ ನೌಕರನ ಮಗನಾದ ಪ್ರಭು ಅವರಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಹೆಚ್ಚಿನ ವಿಶ್ವಾಸ– ನಂಬಿಕೆ. ಮಹೇಶ್‌ ಅವರ ತಂದೆ ಅರ್ಥಶಾಸ್ತ್ರವನ್ನು ಅರಗಿಸಿಕೊಂಡಿದ್ದ ವ್ಯಕ್ತಿ. ಆದ್ದರಿಂದ ಬಾಲ್ಯದಿಂದಲೇ ಅವರು ಅರ್ಥಶಾಸ್ತ್ರದ ವಿಚಾರಗಳನ್ನು ತಿಳಿದುಕೊಂಡಿದ್ದರು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆ ಹೆಚ್ಚು. ತಮ್ಮ ತಮ್ಮ ಪೂರ್ವಾಪರಕ್ಕೆ ಅನುಗುಣವಾಗಿ, ಪ್ರಭು ತಮ್ಮ ಉಳಿತಾಯದ ಹಣವನ್ನೆಲ್ಲ ಪಿಪಿಎಫ್‌ ನಲ್ಲಿ ಹೂಡಿಕೆ ಮಾಡಿದರೆ, ಮಹೇಶ್‌ ತಮ್ಮ ಉಳಿತಾಯದ ಎಲ್ಲ ಹಣವನ್ನೂ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದರು. ನಿವೃತ್ತಿ ವೇಳೆಗೆ ಕನಿಷ್ಠ ಮೂರು ಕೋಟಿ ರೂಪಾಯಿಗಳ ನಿಧಿ ಇರಬೇಕು ಎಂಬುದು ಅವರ ಉದ್ದೇಶವಾಗಿತ್ತು.

1997ರಿಂದಲೇ ಇಬ್ಬರೂ ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ತಲಾ ಒಂದು ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡುತ್ತ ಬಂದಿದ್ದರು. ನಿವೃತ್ತಿಯ ದಿನ ಪ್ರಭು ಅವರ ಒಟ್ಟು ಉಳಿತಾಯ (ಪಿಪಿಎಫ್‌) ₹ 60 ಲಕ್ಷ ಆಗಿದ್ದರೆ, ಮಹೇಶ್‌ ಅವರ ಉಳಿತಾಯ (ಮ್ಯೂಚುವಲ್‌ ಫಂಡ್‌) ₹ 3.61 ಕೋಟಿ ಆಗಿತ್ತು (ಈ ಅಂದಾಜು ಲೆಕ್ಕಕ್ಕೆ, ಎಚ್‌ಡಿಎಫ್‌ಸಿಯ ಅತ್ಯುತ್ತಮ 100 ಫಂಡ್‌ಗಳು ಹಾಗೂ ಫ್ರಾಂಕ್ಲಿನ್‌ ಇಂಡಿಯಾ ಪ್ರೈಮಾ ಫಂಡ್‌ಗಳಲ್ಲಿ 50 : 50ರ ಅನುಪಾತದ ಹೂಡಿಕೆಯನ್ನು ಪರಿಗಣಿಸಲಾಗಿದೆ. ದಯವಿಟ್ಟು ಇದನ್ನು ಹೂಡಿಕೆಯ ಸಲಹೆ ಎಂದು ಪರಿಗಣಿಸಬಾರದು).
ಮಹೇಶ್‌ ಅವರು ತಮ್ಮ ಹೆಚ್ಚುವರಿ ಉಳಿತಾಯ ₹ 60ಲಕ್ಷದಲ್ಲಿ ₹ 15ಲಕ್ಷವನ್ನು ಬಳಸಿಕೊಂಡು ಪತ್ನಿಯ ಜೊತೆ ಯೂರೋಪ್‌ ಪ್ರವಾಸ ಹೋಗಿ ಬಂದರೆ, ಪ್ರಭು, ‘ಮಹೇಶ್‌ ಇಷ್ಟೊಂದು ಹಣವನ್ನು ಹೇಗೆ ಸಂಪಾದಿಸಿದ’ ಎಂದು ಚಿಂತಿಸುತ್ತ ಕುಳಿತಿದ್ದರು.

ಮೇಲ್ನೋಟಕ್ಕೆ ಈ ಅಂಕಿಅಂಶಗಳನ್ನು ನಂಬುವುದು ಕಷ್ಟವೆನಿಸಬಹುದು. ಮ್ಯೂಚುವಲ್‌ ಫಂಡ್‌ನಲ್ಲಿ ಮಾಡಿರುವ ಹೂಡಿಕೆಯು ಪಿಪಿಎಫ್‌ನಲ್ಲಿ ಮಾಡಿರುವ ಹೂಡಿಕೆಗಿಂತ ಆರು ಪಟ್ಟುಹೆಚ್ಚಿನ ಆದಾಯವನ್ನು ತಂದಿದೆ. ಈ ಅಂಕಿ ಅಂಶಗಳನ್ನು ಸಾರಾಸಗಟಾಗಿ ತಳ್ಳಿಹಾಕುವುದಕ್ಕೂ ಮುನ್ನ, ಈ ಎರಡೂ ಹೂಡಿಕೆ ಉತ್ಪನ್ನಗಳ ಗಳಿಕೆಯ ಪ್ರಮಾಣವನ್ನೊಮ್ಮೆ ತಾಳೆಹಾಕಿ ನೋಡಬೇಕು. ಪಿಪಿಎಫ್‌ ಹೂಡಿಕೆಗೆ ವಾರ್ಷಿಕ ಶೇ 8.75ರಷ್ಟು ಬಡ್ಡಿ ಮಾತ್ರ ಬರುತ್ತದೆ. ಆದರೆ ಮ್ಯೂಚುವಲ್‌ ಫಂಡ್‌ ಆದಾಯವು ಶೇ 22.1ರಷ್ಟಿದೆ. ಈ ಹೂಡಿಕೆಯ ಅವಧಿಯಲ್ಲಿ ಷೇರು ಮಾರುಕಟ್ಟೆಯು ನಾಲ್ಕು ಬಾರಿ ಗರಿಷ್ಠ ಏರಿಕೆಯನ್ನು ದಾಖಲಿಸಿತ್ತು ಎಂಬುದನ್ನು ಗಮನಿಸಿದಾಗ ಈ ಅಂಕಿಅಂಶಗಳನ್ನು ನಂಬಲೇಬೇಕಾಗುತ್ತದೆ.

ನಿಜ, ಈ ಹೂಡಿಕೆಗಳು ಹಿಂದೆ ಯಾವ ಪ್ರಮಾಣದಲ್ಲಿ ಗಳಿಕೆ ದಾಖಲಿಸಿದ್ದವೋ ಅದೇ ಪ್ರಮಾಣದಲ್ಲಿ ಮುಂದೆಯೂ ಗಳಿಕೆ ದಾಖಲಿಸಬೇಕೆಂದಿಲ್ಲ. ಷೇರು ಮಾರುಕಟ್ಟೆಯು ಕುಸಿಯುವ ಅಪಾಯ ಇದ್ದೇ ಇದೆ. ಅದರಂತೆ ಮ್ಯೂಚುವಲ್‌ ಫಂಡ್‌ ಬಡ್ಡಿ ದರದಲ್ಲೂ ಬದಲಾವಣೆ ಆಗಬಹುದಲ್ಲವೇ? ಆದ್ದರಿಂದ ಉಳಿತಾಯದ ಹಣವನ್ನು ಬ್ಯಾಂಕ್‌ನಲ್ಲಿ ಇರಿಸಿದರೆ ‘ಅಪಾಯ ರಹಿತ’ ಹೂಡಿಕೆ ಎಂಬ ಭರವಸೆಯೇನೋ ಇರುತ್ತದೆ. ಆದರೆ, ನಿಮ್ಮ ನಿವೃತ್ತಿ ಯೋಜನೆಗಳು ಡೋಲಾಯಮಾನವಾಗಿರುತ್ತವೆ. ಅಂದರೆ ‘ರಿಸ್ಕ್‌’ ತಪ್ಪಿಸುವ ಉದ್ದೇಶದಿಂದ ನಿಮ್ಮ ಕನಸುಗಳೊಡನೆ ಚೆಲ್ಲಾಟ ಆಡಿದಂತಾಗುತ್ತದೆ.

(ಲೇಖಕ: ‘ಫಂಡ್ಸ್ಇಂಡಿಯಾ ಡಾಟ್‌ಕಾಂ’ನ ಪ್ರಧಾನ ಸಂಶೋಧನಾ ವಿಶ್ಲೇಷಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT