ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮ್ಯೂಚುವಲ್ ಫಂಡ್: ಹೂಡಿಕೆಯತ್ತ ಮಹಿಳೆ ಒಲವು

ಎಂಎಫ್‌: 45ಕ್ಕೂ ಅಧಿಕ ವಯಸ್ಸಿನವರ ಭಾಗವಹಿಸುವಿಕೆಯೇ ಹೆಚ್ಚು
Published : 26 ನವೆಂಬರ್ 2023, 0:30 IST
Last Updated : 26 ನವೆಂಬರ್ 2023, 0:30 IST
ಫಾಲೋ ಮಾಡಿ
Comments

ಬೆಂಗಳೂರು: ದೇಶದ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚಾಗುತ್ತಿದೆ. ದುಡಿಯುವ ವರ್ಗಕ್ಕೆ ಸೇರುವವರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಈ ಕಾರಣಗಳಿಂದಾಗಿ ಮಹಿಳೆಯರು ಸಾಂಪ್ರದಾಯಿಕ ಹೂಡಿಕೆಯ ಮಾರ್ಗಗಳಿಂದಾಚೆಗೆ ಬರುವಂತೆ ಆಗುತ್ತಿದೆ.

ಕೌಟುಂಬಿಕ ಉಳಿತಾಯ ಆರಂಭ ಆಗುವುದೇ ಮಹಿಳೆಯರಿಂದ. ಅಡುಗೆ ಮನೆಯ ಮಸಾಲೆ ಡಬ್ಬಿಗಳಲ್ಲಿ ಆಗಾಗ್ಗೆ ಅಷ್ಟಿಷ್ಟು ಕೂಡಿಡುತ್ತಿದ್ದ ಅವರ ಪ್ರವೃತ್ತಿಯು ಇದೀಗ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ. ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟದ (ಎಎಂಎಫ್‌ಐ) ವರದಿಯ ಪ್ರಕಾರ, 2019ರ ಡಿಸೆಂಬರ್‌ನಲ್ಲಿ ಮಹಿಳಾ ಹೂಡಿಕೆದಾರರ ಸಂಖ್ಯೆ 46.99 ಲಕ್ಷ ಇತ್ತು. ಇದು 2022ರ ಡಿಸೆಂಬರ್ ಅಂತ್ಯದ ವೇಳೆಗೆ 74.49 ಲಕ್ಷಕ್ಕೆ ಏರಿಕೆ ಆಗಿದೆ. 

‘45 ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರು ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚಾಗಿ ಹೂಡಿಕೆ ಮಾಡುತ್ತಿದ್ದಾರೆ. ಮಕ್ಕಳ ಶಿಕ್ಷಣ, ಮದುವೆಯು ಮಹಿಳಾ ಹೂಡಿಕೆದಾರರ ಪ್ರಮುಖ ಹಣಕಾಸು ಗುರಿಗಳಾಗಿವೆ ಎನ್ನುವುದು ಜಿಯೋಜಿತ್  ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ತಿಳಿಸಿದರು.

‘ದುಡಿಯುವ ವರ್ಗಕ್ಕೆ ಸೇರುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮಹಿಳೆಯರ ಆದಾಯದಲ್ಲಿ ಏರಿಕೆ ಆಗುತ್ತಿದೆ. ಈ ಕಾರಣದಿಂದಾಗಿಯೇ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ’ ಎನ್ನುವುದು ಎಲ್‌ಐಸಿ ಮ್ಯೂಚುವಲ್ ಫಂಡ್‌ ಅಸೆಟ್ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ನ ಈಕ್ವಿಟಿ ಸಂಶೋಧನೆಯ ಹಿರಿಯ ವಿಶ್ಲೇಷಕ ಜೈಪ್ರಕಾಶ್‌ ತೋಶನೀವಾಲಾ ಅವರ ಅಭಿಪ್ರಾಯ ಆಗಿದೆ.

‘ಮ್ಯೂಚುವಲ್ ಫಂಡ್ ಉದ್ಯಮವು ನಡೆಸುತ್ತಿರುವ ‘ಮ್ಯೂಚುವಲ್ ಫಂಡ್‌ ಸರಿ ಇದೆ’ ಅಭಿಯಾನವೂ ಪರಿಣಾಮಕಾರಿ ಆಗಿದೆ. ಅಂತರ್ಜಾಲದ ವ್ಯಾಪ್ತಿ ವಿಸ್ತರಣೆ ಆಗಿರುವುದು ಮತ್ತು ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗುತ್ತಿರುವುದರಿಂದ ಮಹಾನಗರಗಳಾಚೆಗೆ ಮತ್ತು ಅರೆ ಪಟ್ಟಣಗಳಲ್ಲಿಯೂ ಮ್ಯೂಚುವಲ್ ಫಂಡ್‌ ಯೋಜನೆಗಳು ಮಹಿಳೆಯರಿಗೆ ಸುಲಭವಾಗಿ ದಕ್ಕುವಂತಾಗಿದೆ. ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ (ಎಸ್‌ಐಪಿ) ₹100 ರಿಂದಲೂ ಹೂಡಿಕೆ ಆರಂಭಿಸಬಹುದಾಗಿದೆ. ಹೀಗಾಗಿ ಮಹಿಳೆಯರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

****

ಮಹಿಳೆ ಎಷ್ಟೇ ವಿದ್ಯಾವಂತೆ ಆಗಿದ್ದರೂ ಹೂಡಿಕೆ ನಿರ್ಧಾರವನ್ನು ಸ್ವತಂತ್ರವಾಗಿ ತೆಗೆದುಕೊಳ್ಳುತ್ತಿಲ್ಲ.ಈಗಲೂ ತಂದೆ, ಪತಿ, ಮಗನ ಮೇಲೆ ಅವಲಂಬಿಸಿದ್ದಾಳೆ.

-ವಿ.ಕೆ. ವಿಜಯಕುಮಾರ್‌, ಮುಖ್ಯ ಹೂಡಿಕೆ ತಜ್ಞ, ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT