ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟದ ಒತ್ತಡಕ್ಕೆ ಭಾರಿ ಏರಿಳಿತ

Last Updated 23 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಶುಕ್ರವಾರ ಆತಂಕದ ವಾತಾವರಣ ಸೃಷ್ಟಿಯಾಗಿದ್ದರಿಂದ ಸಂವೇದಿ ಸೂಚ್ಯಂಕ ಸುಮಾರು ಒಂದು ಗಂಟೆಯ ಹೊತ್ತಿಗೆ 1,100 ಅಂಶಗಳಿಗೂ ಹೆಚ್ಚಿನ ಕುಸಿತಕ್ಕೊಳಗಾ
ಯಿತು. ಈ ಕುಸಿತವು ಎಷ್ಟು ಭಯಾನಕವಾಗಿತ್ತೆಂದರೆ ಏಷ್ಯನ್‌ ಪೇಂಟ್ಸ್ ಷೇರಿನ ಬೆಲೆ ಆ ಸಮಯದಲ್ಲಿ ₹1,300 ರ ಸಮೀಪದಿಂದ ₹1,215 ರವರೆಗೂ ಇಳಿದು ಅಷ್ಟೇ ವೇಗವಾಗಿ ಕೇವಲ 8-10 ನಿಮಿಷಗಳಲ್ಲಿ ಪುಟಿದೆದ್ದು ₹1,300ನ್ನು ತಲುಪಿತು.

ಅದೇ ರೀತಿ ಬಜಾಜ್ ಆಟೋ, ಮಾರುತಿ ಸುಜುಕಿ, ಹೀರೊ ಮೋಟೊಕಾರ್ಪ್, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರಿನ ಬೆಲೆಗಳು ಇಳಿಕೆ ಕಂಡ ಕೆಲವೇ ನಿಮಿಷಗಳಲ್ಲಿ ಪುಟಿದೆದ್ದಿವೆ.

ದಿನದ ಅಂತ್ಯದಲ್ಲಿ ಬಾಹ್ಯ ನೋಟಕ್ಕೆ ಕೇವಲ 279 ಅಂಶಗಳ ಇಳಿಕೆ ಕಂಡರೂ, ದಿನದ ಮಧ್ಯಂತರದ ಭರ್ಜರಿ ಕುಸಿತ - ಪುಟಿದೆದ್ದ ವೇಗವು ಅನೇಕ ನಕಾರಾತ್ಮಕವಾದ ಪ್ರಭಾವ ಉಂಟುಮಾಡಿರುತ್ತದೆ. ಮೊದಲನೆಯದಾಗಿ ಈಗ ಹೆಚ್ಚಿನ ಆಕರ್ಷಣೆ ಪಡೆದುಕೊಂಡಿರುವ ಡೇ ಟ್ರೇಡಿಂಗ್ ನಡೆಸುವವರನ್ನು ಭಯಭೀತರನ್ನಾಗಿಸುವ ಮಟ್ಟದ್ದಾಗಿತ್ತು.

ಮತ್ತೊಂದು ವಿಧದ ಚಟುವಟಿಕೆಯಾದ ಮಾರ್ಜಿನ್ ಟ್ರೇಡಿಂಗ್‌ನಲ್ಲಿ, ವಹಿವಾಟುದಾರರು ಒದಗಿಸಬಹುದಾದ ಹೆಚ್ಚುವರಿ ಮಾರ್ಜಿನ್‌ ಅನ್ನು ನೀಡಲು ವಿಫಲರಾದಾಗ ಆ ಷೇರುಗಳನ್ನು ಮಾರಾಟ ಮಾಡಬೇಕಾಗುವುದು ಪೇಟೆಯಲ್ಲಿ ಹೆಚ್ಚಿನ ಮಾರಾಟದ ಒತ್ತಡವನ್ನು ಉಂಟುಮಾಡುತ್ತದೆ.

ಮೂಲಾಧಾರಿತ ಪೇಟೆಯ ಚಟುವಟಿಕೆಯಲ್ಲಿ ವಹಿವಾಟಿನ ಗಾತ್ರ ಹೆಚ್ಚಾಗಿದ್ದು ಗ್ರಾಹಕರು ಒತ್ತಡದಿಂದ ತಮ್ಮ ವಹಿವಾಟು ಚುಕ್ತಾ ಮಾಡಿಕೊಂಡು ಅಪಾರ ಹಾನಿಗೊಳಗಾಗುವರು. ಪ್ರಮುಖವಾದ ನಕಾರಾತ್ಮಕವಾದ ಅಂಶವೆಂದರೆ ಪೇಟೆಯು ಚುರುಕಾಗಿದ್ದ ಕಾರಣ ಷೇರುಗಳು ಒತ್ತೆ ಇಟ್ಟು ಸಾಲ ಪಡೆದವರು ಹೆಚ್ಚುವರಿ ಮಾರ್ಜಿನ್ ನೀಡಲು ಸಾಧ್ಯವಾಗದ ಕಾರಣ ಫೈನಾನ್ಶಿಯರ್‌ ಒತ್ತೆ ಇಟ್ಟ ಷೇರುಗಳನ್ನು ಮಾರಾಟ ಮಾಡುವುದು ಪೇಟೆಯಲ್ಲಿ ಒತ್ತಡ ಹೆಚ್ಚಿಸುವುದು. ಈ ಎಲ್ಲಾ ಕಾರಣಗಳು ವಿತ್ತೀಯ ವಲಯದ ಕಂಪನಿಗಳಿಗೆ ಹೆಚ್ಚು ಅನ್ವಯವಾಗುವುದರಿಂದ ಆ ವಲಯದ ಕಂಪನಿಗಳು ಭರ್ಜರಿ ಕುಸಿತವನ್ನು ಕಂಡಿವೆ.

ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳು ಕುಸಿತಕ್ಕೊಳಗಾದರೆ ಅವು ಪುಟಿದೇಳುವ ವೇಗವು ಅತಿ ಹೆಚ್ಚು ಎಂಬುದನ್ನು ಶುಕ್ರವಾರ ದಿನದ ಮಧ್ಯಂತರದ ಅತಿಯಾದ ಕುಸಿತ - ದಿಢೀರ್‌ ಚೇತರಿಕೆಗಳು ದೃಢಪಡಿಸುತ್ತವೆ.

ಅಂಕಿ ಅಂಶಗಳಾಧಾರಿಸಿ ನಿರ್ಧರಿಸಿದರು, ಷೇರಿನ ಬೆಲೆ ಇಳಿಕೆಯಲ್ಲಿದ್ದು ಅದು ಉತ್ತಮ ಮೌಲ್ಯಯುತವೇ ಎಂಬುದನ್ನು ಅರಿತು ಖರೀದಿಸಬೇಕು. ಇಂತಹ ರಭಸದ ಏರಿಳಿತಗಳು ತೈಲ ಮಾರಾಟ ಸಂಸ್ಥೆಗಳಾದ ಬಿಪಿಸಿಎಲ್, ಎಚ್‌ಪಿಸಿಎಲ್‌, ಐಓಸಿ ಕಂಪನಿ ಷೇರುಗಳ ಬೆಲೆ ಏರಿಕೆ ಕಂಡಿದೆ. ಇದಕ್ಕೆ ಮೂಲ ಕಾರಣ ಈ ಷೇರಿನ ಬೆಲೆಗಳು ಸಾಕಷ್ಟು ಕುಸಿತಕ್ಕೊಳಗಾಗಿದ್ದು, ಹೂಡಿಕೆ ಚಟುವಟಿಕೆಯ ಬೆಂಬಲ ಷೇರಿನ ಬೆಳೆಗಳಲ್ಲಿ ಸ್ಥಿರತೆ ತಂದಿದೆ.

ಸೋಮವಾರ ಸಂವೇದಿ ಸೂಚ್ಯಂಕ ದಿನದ ಮಧ್ಯಂತರದಲ್ಲಿ 541 ಅಂಶ ಇಳಿಕೆ ಕಂಡು ಅಂತ್ಯದಲ್ಲಿ 505 ಅಂಶಗಳ ಹಾನಿಗೊಳಗಾಯಿತು. ಈ ಭಾರಿ ಕುಸಿತದ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್‌ನ 86 ಅಂಶ, ಎಚ್‌ಡಿಎಫ್‌ಸಿ 80 ಅಂಶ, ಎಚ್‌ಡಿಎಫ್‌ಸಿ ಬ್ಯಾಂಕ್‌ನ 75 ಅಂಶಗಳ ಕುಸಿತದ ಕೊಡುಗೆ ಪ್ರಮುಖವಾಗಿದೆ.

ಮಾರುತಿ ಸುಜುಕಿ ₹99 ರಷ್ಟು, ಹೀರೊ ಮೋಟೊಕಾರ್ಪ್ ₹ 54 ರಷ್ಟು, ಏಷ್ಯನ್‌ ಪೇಂಟ್ಸ್ ₹25 ರಷ್ಟು, ಹಿಂದುಸ್ತಾನ್ ಯೂನಿಲಿವರ್‌ ₹25 ರಷ್ಟು ಬಜಾಜ್ ಆಟೋ ₹21 ರಷ್ಟು ಇಳಿಕೆಗೆ ಒಳಗಾಗಿ ವಾತಾವರಣವನ್ನು ಮತ್ತಷ್ಟು ಕದಡಿತ್ತು. ಈ ರೀತಿ ಕುಸಿತಕ್ಕೆ ಮುಖ್ಯ ಕಾರಣ ಎಂದಿನಂತೆ ರೂಪಾಯಿಯ ಬೆಲೆ ಕುಸಿತ ಮತ್ತು ಕಚ್ಚಾ ತೈಲ ದರ ಏರಿಕೆಗಳ ಜೊತೆಗೆ ವಿದೇಶಿ ಪೇಟೆಗಳ ಕುಸಿತವು ಕಾರಣವಾದವು.

ಇಂತಹ ಕದಡಿದ ವಾತಾವರಣದಲ್ಲೂ ಮಹತ್ತರವಾದ ಚೇತರಿಕೆಯಿಂದ ವಿಜೃಂಭಿಸಿದ ಕಂಪೆನಿಗಳೆಂದರೆ ಬಿಪಿಸಿಎಲ್ ಷೇರು ₹9 ರಷ್ಟು, ಎಚ್‌ಪಿಸಿಎಲ್‌ ₹5 ರಷ್ಟು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ₹158 ರ ಗಡಿ ದಾಟಿ ನಂತರ ₹156.50 ರಲ್ಲಿ ಕೊನೆಗೊಂಡಿತು. ಉಳಿದಂತೆ ಸಾರ್ವಜನಿಕ ವಲಯದ ಕಂಪನಿಗಳಾದ ಎಂಜಿನಿಯರ್ಸ್‌ ಇಂಡಿಯಾ, ಚೆನ್ನೈ ಪೆಟ್ರೊ, ಆರ್‌ಇಸಿ, ಎಚ್‌ಎಎಲ್‌ಗಳು ಅಲ್ಲದೆ ಲೋಹ ವಲಯದ ಟಾಟಾ ಸ್ಟಿಲ್, ಜೆಸ್‌ಡಬ್ಲ್ಯು ಸ್ಟಿಲ್, ಜಿಂದಾಲ್ ಸ್ಟಿಲ್ ಮುಂತಾದವು ಆಕರ್ಷಕ ಏರಿಕೆ ಪಡೆದುಕೊಂಡವು.

ಕಮ್ಮಿನ್ಸ್ ಇಂಡಿಯಾ ಸುಮಾರು ₹23 ರಷ್ಟು ಇಳಿಕೆ ಕಂಡರೆ ಸಕ್ಕರೆ ವಲಯದ ಕಂಪನಿಗಳು ಹೆಚ್ಚಿನ ಏರಿಕೆಯಿಂದ ಮಿಂಚಿದವು. ಬಜಾಜ್ ಹಿಂದುಸ್ತಾನ್‌, ಉಗಾರ್ ಶುಗರ್, ದಾಲ್ಮಿಯಾ ಭಾರತ್ ಶುಗರ್, ದ್ವಾರಿಕೇಶ್ ಶುಗರ್, ದಿನದ ಗರಿಷ್ಠದಲ್ಲಿದವು.

ದಿನದ ಆರಂಭದಲ್ಲಿ ಯೆಸ್‌ ಬ್ಯಾಂಕ್ ಷೇರಿನ ಬೆಲೆ ₹286 ರ ಸಮೀಪವಿದ್ದು ನಂತರ ನಿರಂತರ ಕುಸಿತದಿಂದ ₹210 ರವರೆಗೂ ಕುಸಿದು ನಂತರ ಚೇತರಿಸಿಕೊಂಡು ₹227 ರ ಸಮೀಪ ವಾರಾಂತ್ಯ ಕಂಡಿದೆ. ಬ್ರೋಕರೇಜ್ ಸಂಸ್ಥೆಗಳಾದ ಗೋಲ್ಡ್‌ಮನ್‌ ಸ್ಯಾಕ್ಸ್‌, ಸಿಟಿ ಬ್ಯಾಂಕ್, ನೂಮುರಾಗಳು ಕಂಪನಿಯ ಹೂಡಿಕೆಯ ದರ್ಜೆಯನ್ನು ಇಳಿಸುವ ರೇಟಿಂಗ್ ನೀಡಿದ್ದು ಸಹ ಮಾರಾಟದ ಒತ್ತಡವನ್ನು ಹೆಚ್ಚಿಸಿತು.

ಮಾರುತಿ ಸುಜುಕಿ ಷೇರಿನ ಬೆಲೆ ಆರಂಭದ ಕ್ಷಣಗಳಲ್ಲಿ ₹8,241 ರ ಸಮೀಪದಿಂದ ₹8,320 ರವರೆಗೂ ಏರಿಕೆ ಕಂಡು ದಿನದ ಮಧ್ಯಂತರದಲ್ಲಿ ₹7,590 ರವರೆಗೂ ಕುಸಿದು ₹8,040 ರ ಸಮೀಪ ವಾರಾಂತ್ಯಕಂಡಿತು.

ಬಜಾಜ್ ಫಿನ್ ಸರ್ವ್ ಷೇರಿನ ಬೆಲೆಯೂ ₹6,370 ರ ಸಮೀಪದಿಂದ ₹5,100 ರವರೆಗೂ ಕುಸಿದು ನಂತರ ₹6,280 ಕ್ಕೆ ಚೇತರಿಕೆಯಿಂದ ವಾರಾಂತ್ಯ ಕಂಡಿತು.

ದಿವಾನ್ ಹೌಸಿಂಗ್ ಫೈನಾನ್ಸ್ ಲಿ ಕಂಪನಿ ಷೇರಿನ ಬೆಲೆ ಆರಂಭದಲ್ಲಿ ₹615 ರಲ್ಲಿದ್ದು ನಿರಂತರವಾಗಿ ಕುಸಿದು ₹246 ರವರೆಗೂ ಇಳಿಕೆ ಕಂಡು ನಂತರ ₹338 ರ ಸಮೀಪಕ್ಕೆ ಚೇತರಿಕೆಯಿಂದ ವಾರಾಂತ್ಯ ಕಂಡಿತು.

ಈ ಕಂಪನಿಯ ಷೇರು ಭಾರಿ ಕುಸಿತಕ್ಕೊಳಗಾಗಲು ಕಾರಣ ಕಂಪನಿಯು ಆರ್ಥಿಕ ಆಪತ್ತಿಗೊಳಗಾಗಿದೆ ಎಂಬ ಗಾಳಿ ಸುದ್ದಿಯಾಗಿದೆ. ಈ ಮಧ್ಯೆ ಪ್ರಮುಖ ಮ್ಯೂಚುವಲ್‌ ಫಂಡ್‌ ಸುಮಾರು ₹300 ಕೋಟಿ ಮೌಲ್ಯದ ದಿವಾನ್ ಹೌಸಿಂಗ್ ಫೈನಾನ್ಸ್ ಷೇರು ಮಾರಾಟಮಾಡಿದೆ ಎಂಬ ಸುದ್ದಿ ಸಹ ಈ ಕುಸಿತಕ್ಕೆ ಕಾರಣವಾಗಿದೆ.

ಎಚ್‌ಡಿಎಫ್‌ಸಿ ಎಎಂಸಿ ಷೇರಿನ ಬೆಲೆ ₹1,433 ರಲ್ಲಿದ್ದು ದಿನದ ಮಧ್ಯಂತರದಲ್ಲಿ ₹1,248 ರವರೆಗೂ ಕುಸಿದು ನಂತರ ಚೇತರಿಕೆಯಿಂದ ₹1,378 ರಲ್ಲಿ ಕೊನೆಗೊಂಡಿತು.

ಹೊಸ ಷೇರು: ದಿನೇಶ್ ಎಂಜಿನಿಯರ್ಸ್‌ ಲಿಮಿಟೆಡ್ ಕಂಪನಿ ಸೆ. 28 ರಿಂದ ಅಕ್ಟೋಬರ್‌ 3 ರವರೆಗೂ ಪ್ರತಿ ಷೇರಿಗೆ ₹183 ರಿಂದ ₹185 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 80 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದು.

ಬೋನಸ್ ಷೇರು:ಜಿಯಾ ಎಕೊ ಪ್ರಾಡಕ್ಟ್ಸ್ ಕಂಪನಿ ಅಕ್ಟೋಬರ್‌ 10 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ವಾರದ ವಹಿವಾಟು:ಈ ವಾರದ ವಹಿವಾಟಿನ ಮೇಲೆಯೂ ದೇಶಿ, ಜಾಗತಿಕ ವಿದ್ಯಮಾನಗಳ ಪ್ರಭಾವ ಮುಂದುವರಿಯಲಿವೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ವ್ಯತ್ಯಯ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗುವ ಏರಿಳಿತವು ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಈ ವಾರ ಬಡ್ಡಿದರ ಪರಾಮರ್ಶೆ ನಡೆಸಲಿದೆ. ಹಂತ ಹಂತವಾಗಿ ಬಡ್ಡಿದರ ಏರಿಕೆ ಮಾಡುವುದಾಗಿ ಹೇಳಿದೆ. ಬಡ್ಡಿದರದಲ್ಲಿ ಏರಿಕೆ ಹೂಡಿಕೆದಾರರಿಗೆ ಸುಲಭವಾಗಿ ಸಾಲ ಲಭ್ಯವಾಗುವುದಿಲ್ಲ.ಇದರಿಂದ ಭಾರತವನ್ನೂ ಒಳಗೊಂಡು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಇನ್ನಷ್ಟು ತಗ್ಗುವ ಸಾಧ್ಯತೆ ಇದೆ.

ವಾರದ ಮುನ್ನೋಟ
ಈ ವಾರದ ವಹಿವಾಟಿನ ಮೇಲೆಯೂ ದೇಶಿ, ಜಾಗತಿಕ ವಿದ್ಯಮಾನಗಳ ಪ್ರಭಾವ ಮುಂದುವರಿಯಲಿವೆ. ಡಾಲರ್‌ ಎದುರು ರೂಪಾಯಿ ಮೌಲ್ಯ ವ್ಯತ್ಯಯ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗುವ ಏರಿಳಿತವು ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಈ ವಾರ ಬಡ್ಡಿದರ ಪರಾಮರ್ಶೆ ನಡೆಸಲಿದೆ. ಹಂತ ಹಂತವಾಗಿ ಬಡ್ಡಿದರ ಏರಿಕೆ ಮಾಡುವುದಾಗಿ ಹೇಳಿದೆ. ಬಡ್ಡಿದರದಲ್ಲಿ ಏರಿಕೆ ಹೂಡಿಕೆದಾರರಿಗೆ ಸುಲಭವಾಗಿ ಸಾಲ ಲಭ್ಯವಾಗುವುದಿಲ್ಲ.ಇದರಿಂದ ಭಾರತವನ್ನೂ ಒಳಗೊಂಡು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಇನ್ನಷ್ಟು ತಗ್ಗುವ ಸಾಧ್ಯತೆ ಇದೆ.

(ಮೊ: 9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT