ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಜಲ್ ಗುರು ಸತ್ತರೂ, ಸಾಯದಿರುವ ಪ್ರಶ್ನೆಗಳು

Last Updated 10 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮ್ಮ ಸಂಸದರ ಅಮೂಲ್ಯ ಪ್ರಾಣ ಮತ್ತು ದೇಶದ ಮಾನವನ್ನು ಭಯೋತ್ಪಾದಕರ ದಾಳಿಯಿಂದ ರಕ್ಷಿಸಲು ಹೋಗಿ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡ ಸಂಸತ್ ಮೇಲಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗಿದೆ. ಕೊನೆಗೂ ಅಪರಾಧಿಯೊಬ್ಬನಿಗೆ ಶಿಕ್ಷೆಯಾಯಿತಲ್ಲ ಎಂದು ದೇಶದ ಸಾಮಾನ್ಯ ಜನತೆ ನಿಟ್ಟುಸಿರುಬಿಟ್ಟರೆ, ಒಂದಷ್ಟು ಅತ್ಯುಗ್ರ ದೇಶಾಭಿಮಾನಿಗಳು ಬೀದಿಗಿಳಿದು ಹಬ್ಬ ಆಚರಿಸುವ ರೀತಿಯಲ್ಲಿ ಸಂಭ್ರಮಿಸಿದ್ದಾರೆ.

ಇದರೊಂದಿಗೆ `ಸಂಸತ್‌ಮೇಲೆ ದಾಳಿ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ, ನಿಜವಾದ ಅಪರಾಧಿಗಳೆಲ್ಲರಿಗೂ ಶಿಕ್ಷೆಯಾಗಿದೆ' ಎಂದು ಸಮಾಧಾನ ಪಟ್ಟುಕೊಳ್ಳಬಹುದೇ?

ಸಂಸತ್‌ಭವನದ ಮೇಲೆ ಭಯೋತ್ಪಾದಕರ ದಾಳಿ ನಡೆದ ಎರಡೇ ದಿನಗಳಲ್ಲಿ ಕಿಕ್ಕಿರಿದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ದೆಹಲಿ ಪೊಲೀಸರ ವಿಶೇಷ ದಳ ಈ ದುಷ್ಕೃತ್ಯಕ್ಕೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೋಯಬಾ ಮತ್ತು ಜೈಷ್-ಎ-ಮೊಹಮ್ಮದ್ ಎಂಬ ಎರಡು ಉಗ್ರಗಾಮಿ ಸಂಘಟನೆಗಳು ಕಾರಣ ಎಂದು ಘೋಷಿಸಿತ್ತು. ಆರೋಪಿಗಳನ್ನೆಲ್ಲ ಪತ್ತೆಹಚ್ಚಿದ್ದಾಗಿ ಹೇಳಿದ್ದ ಪೊಲೀಸರು ಹನ್ನೆರಡು ಆರೋಪಿಗಳ ಪಟ್ಟಿಯನ್ನೂ ನೀಡಿದ್ದರು.

ಎಲ್‌ಇಟಿಗೆ ಸೇರಿದ ಘಾಜಿ ಬಾಬಾ ಮತ್ತು ಮೌಲಾನ ಮಸೂದ್ ಅಜರ್, ತಾರೀಖ್ ಮಹಮ್ಮದ್, ಮೃತರಾದ ಐವರು ದಾಳಿಕೋರರು, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್.ಎ.ಆರ್.ಗಿಲಾನಿ, ಅಫ್ಜಲ್‌ಗುರು,  ಶೌಕತ್‌ಹುಸೇನ್ ಗುರು ಮತ್ತು ಪತ್ನಿ ಅಫ್ಸನ್‌ಗುರುವಿನ ಹೆಸರು ಆ ಪಟ್ಟಿಯಲ್ಲಿತ್ತು. ಈ ಹನ್ನೆರಡು ಆರೋಪಿಗಳಲ್ಲಿ ಆ ಕ್ಷಣದಲ್ಲಿ ಜೀವಂತವಾಗಿದ್ದವರು ಏಳು ಮಂದಿ ಮಾತ್ರ.

ಕೆಲವು ವರ್ಷಗಳ ನಂತರ ಘಾಜಿಬಾಬಾ ಕೂಡಾ ಎಲ್ಲೋ ಭದ್ರತಾಪಡೆಯ ಗುಂಡಿಗೆ ಬಲಿಯಾಗಿದ್ದ. ಮಸೂದ್ ಅಜರ್ ಪಾಕಿಸ್ತಾನದಲ್ಲಿ ನಿಶ್ಚಿಂತೆಯಾಗಿ ಸಾವಿನ ವ್ಯಾಪಾರವನ್ನು ನಡೆಸಿಕೊಂಡು ಹೋಗುತ್ತಿದ್ದಾನೆ. ಗಿಲಾನಿ ಮತ್ತು ಅಫ್ಸನ್‌ಗುರುವನ್ನು ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಶೌಕತ್‌ಗುರುವಿಗೆ ಹೈಕೋರ್ಟ್ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ಹತ್ತುವರ್ಷಗಳ ಜೈಲು ಶಿಕ್ಷೆಯಾಗಿ ಪರಿವರ್ತಿಸಿದ್ದರಿಂದ ಬಿಡುಗಡೆಗೊಂಡಿದ್ದಾನೆ. ಕೊನೆಗೂ ಗಲ್ಲಿಗೇರಿದ್ದು ಅಫ್ಜಲ್‌ಗುರು ಒಬ್ಬನೇ.

ಸಂಸತ್ ಮೇಲಿನ ದಾಳಿಯಲ್ಲಿ ಎಲ್‌ಎಟಿ ಇಲ್ಲವೇ ಜೆಎಎಂ ಪಾತ್ರ ಏನೆಂದು ಹೇಳಲು ಕಳೆದ ಹನ್ನೆರಡು ವರ್ಷಗಳಲ್ಲಿ ಪೊಲೀಸರಿಗೆ ಸಾಧ್ಯವಾಗಿಲ್ಲ. ಇಡೀ ಪ್ರಕರಣದಲ್ಲಿ ನಿಗೂಢ ರೀತಿಯಲ್ಲಿ (ಮಾಧ್ಯಮಗಳು ಸೇರಿದಂತೆ) ಎಲ್ಲರ ಕಣ್ಣುಗಳಿಂದಲೂ ತಪ್ಪಿಸಿಕೊಂಡಿರುವ ತಾರೀಖ್ ಮೊಹಮ್ಮದ್ ಎಂಬ ಆರೋಪಿಯನ್ನು ಬಂಧಿಸಲೂ ಅವರಿಂದ ಆಗಿಲ್ಲ.

ಭಾರತ ಮತ್ತು ಪಾಕಿಸ್ತಾನದ ನಡುವೆ ಅಣುಸಮರ ನಡೆದೇ ಬಿಟ್ಟಿತು ಎನ್ನುವಷ್ಟು ಗಂಭೀರರೂಪ ಪಡೆದಿದ್ದ ಘಟನೆ ಇದು. ಪಾಕಿಸ್ತಾನದ ಕೈವಾಡದ ಬಗ್ಗೆ `ವಿವಾದಾತೀತ ಪುರಾವೆ' ಇದೆ ಎಂದು ಸಂಸತ್‌ನಲ್ಲಿಯೇ ಘೋಷಿಸಿ, ಆ ದೇಶದ ಮೇಲೆ ಯುದ್ಧವನ್ನೆ ಸಾರುವಂತೆ ಸೇನೆಯನ್ನು ಗಡಿಯಲ್ಲಿ ಕೊಂಡೊಯ್ದು ನಿಲ್ಲಿಸಿದ್ದ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಂದ ಹಿಡಿದು ಈಗಿನ ಪ್ರಧಾನಿ ಮನಮೋಹನ್‌ಸಿಂಗ್ ವರೆಗೂ ಈವರೆಗೂ ದಾಳಿಯಲ್ಲಿ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಶಾಮೀಲಾಗಿರುವುದನ್ನು ಸಾಬೀತುಪಡಿಸಲು ಆಗಲಿಲ್ಲ.

ದಾಳಿ ನಡೆದ ನಂತರ ಅಫ್ಜಲ್‌ಗುರುವಿಗಿಂತ ಮೊದಲೇ ಬಂಧಿಸಿದ್ದ ಎಸ್.ಎ.ಆರ್.ಗಿಲಾನಿ ವಿರುದ್ಧದ ಆರೋಪವನ್ನು ಕೂಡಾ ಸಾಬೀತುಪಡಿಸಲು ಪೊಲೀಸರಿಂದ ಸಾಧ್ಯ ಆಗಿಲ್ಲ. ಉಳಿದವರೆಲ್ಲರೂ ಪೊಲೀಸರಿಂದ ತಪ್ಪಿಸಿಕೊಂಡರೂ ಅಫ್ಜಲ್‌ಗುರು ಮಾತ್ರ ಯಾಕೆ ಸಿಕ್ಕಿಹಾಕಿಕೊಂಡ?

ಸಾಮಾನ್ಯವಾಗಿ ಆರೋಪಿಯೊಬ್ಬ ತನಗೆ ವಕೀಲರ ಅವಶ್ಯಕತೆ ಇಲ್ಲ ಎಂದು ಹೇಳಿದರೂ ಕೂಡಾ ನ್ಯಾಯಾಲಯ ಆತನ ಪರ ವಾದಿಸಲು ವಕೀಲರನ್ನು ನೇಮಿಸುತ್ತದೆ. ಆದರೆ  ಅಫ್ಜಲ್‌ಗುರುವಿನ ಬಗ್ಗೆ ಮಾತ್ರ ನ್ಯಾಯಾಲಯ ಅಂತಹ ದಯೆಯನ್ನು ತೋರಲಿಲ್ಲ ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ಎಸ್.ಎ.ಆರ್ ಗಿಲಾನಿ ಪರ ಹೈಕೋರ್ಟ್‌ನಲ್ಲಿ ರಾಮ್‌ಜೇಠ್ಮಲಾನಿಯಂತಹ ಖ್ಯಾತ ವಕೀಲರೇ ವಾದ ಮಂಡಿಸಿ ಅವರ ಬಿಡುಗಡೆಗೆ ಕಾರಣರಾಗಿದ್ದರು. ಆದರೆ ಆರೋಪಪಟ್ಟಿ ಸಲ್ಲಿಸಿದ ದಿನದಿಂದ 2005ರ ಮೇ 14ರವರೆಗೆ  ಸುಮಾರು ನಾಲ್ಕು ವರ್ಷ ಸಂಸತ್‌ದಾಳಿಯ ಸಂಚಿನ ಪ್ರಮುಖ ಪಾತ್ರಧಾರಿ ಎಂದು ಹೇಳಲಾಗಿದ್ದ ಅಫ್ಜಲ್‌ಗುರುವನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಯಾವ ವಕೀಲರೂ ಇರಲಿಲ್ಲ.

ಕೊನೆಗೆ ನ್ಯಾಯಾಲಯ ವಕೀಲರೊಬ್ಬರನ್ನು ನೇಮಿಸಿದರೂ ಅವರು ಹಾಜರಾಗಲೇ ಇಲ್ಲ. ಅದರ ನಂತರ ಮತ್ತೊಬ್ಬರನ್ನು ನೇಮಿಸಲಾಯಿತು. ಅವರು ಅಫ್ಜಲ್ ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದ ವಿಚಾರಗಳನ್ನೆಲ್ಲ ನ್ಯಾಯಾಲಯದಲ್ಲಿ ಒಪ್ಪಿಕೊಂಡುಬಿಟ್ಟರು. ಕೊನೆಗೆ ಏನೋ ಕಾರಣ ನೀಡಿ ಅವರು ಅಫ್ಜಲ್ ವಕಾಲತ್ತಿನಿಂದ ಬಿಡುಗಡೆಗೊಳಿಸಬೇಕೆಂದು ಕೋರಿದರು.

ಈ ನಡುವೆ ಅಫ್ಜಲ್ ಸೂಚಿಸಿದ್ದ ನಾಲ್ವರು ವಕೀಲರು ಒಪ್ಪಿಕೊಳ್ಳಲಿಲ್ಲ. ಕೊನೆಗೆ ನೀರಜ್ ಬನ್ಸಾಲ್ ಎಂಬವರನ್ನು ನ್ಯಾಯಾಲಯ ಅಮಿಕಸ್ ಕ್ಯುರಿಯೇ (ನ್ಯಾಯಾಲಯದ ಮಿತ್ರ) ಆಗಿ ನೇಮಿಸಿತು. ಆದರೆ ಈ `ಮಿತ್ರ' ಅಫ್ಜಲ್‌ನಿಂದ ಯಾವ ಮಾಹಿತಿಯನ್ನು ಪಡೆಯುವ ಪ್ರಯತ್ನ ಮಾಡಲಿಲ್ಲ. ಆತನ ವಿರುದ್ಧ ಪ್ರಾಸಿಕ್ಯೂಶನ್ ಹಾಜರುಪಡಿಸಿದ್ದ ಸಾಕ್ಷಿಗಳನ್ನು ಪಾಟಿಸವಾಲು ನಡೆಸಲಿಲ್ಲ. ಈ ವಕೀಲರ ಮೇಲೆ ತನಗೆ ವಿಶ್ವಾಸ ಇಲ್ಲ ಎಂದು ಅಫ್ಜಲ್ ನ್ಯಾಯಾಲಯದಲ್ಲಿಯೇ ಹೇಳಿದ್ದ.

ಅಫ್ಜಲ್‌ಗುರುವಿಗೆ ಪ್ರಾರಂಭದಲ್ಲಿಯೇ ನುರಿತ ವಕೀಲರೊಬ್ಬರ ನೆರವು ಸಿಕ್ಕಿದ್ದರೆ ಇಡೀ ಪ್ರಕರಣ ಬೇರೆ ತಿರುವು ಪಡೆಯುತ್ತಿತ್ತೆ? ಘಟನೆಯ ಬಗ್ಗೆ ಆತ ನೀಡಿದ್ದ ಅನೇಕ ಪ್ರಮುಖ ಸುಳಿವುಗಳ ಜಾಡುಹಿಡಿದು ಪೊಲೀಸರು ಘಟನೆಯ ಆಳಕ್ಕೆ ಹೋಗಿದ್ದರೆ ಸಂಸತ್‌ಮೇಲಿನ ದಾಳಿಯ ಸಂಚಿನಲ್ಲಿ ಶಾಮೀಲಾಗಿದ್ದ ಇನ್ನಷ್ಟು ವ್ಯಕ್ತಿಗಳ ಪಾತ್ರ ಬಯಲಾಗುತ್ತಿತ್ತೇ? ಹೀಗೆ ಮಾಡದ ಪೊಲೀಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ಮಾಡಿ ಮುಗಿಸುವ ಅವಸರದಲ್ಲಿದ್ದರೇ? ಇಲ್ಲವೆ ಯಾರನ್ನೋ ರಕ್ಷಿಸುವ ಒತ್ತಡದಲ್ಲಿ ಅವರು ಸಿಕ್ಕಿ ಹಾಕಿಕೊಂಡಿದ್ದರೇ?  ಅಫ್ಜಲ್‌ಗುರು ತಿಹಾರ್ ಜೈಲಿನಲ್ಲಿ ಮಣ್ಣಾಗಿಹೋಗಿದ್ದರೂ ಇಂತಹ ಅನೇಕ ಪ್ರಶ್ನೆಗಳನ್ನು ಬಿಟ್ಟುಹೋಗಿದ್ದಾನೆ.

ಎಂಬತ್ತರ ದಶಕದ ಕೊನೆಭಾಗದಲ್ಲಿ ಕಾಶ್ಮೆರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದ ನೂರಾರು ಯುವರಕಲ್ಲಿ ಒಬ್ಬ ಅಫ್ಜಲ್‌ಗುರು. 1989ರಲ್ಲಿ ಉಗ್ರಗಾಮಿ ತರಬೇತಿ ಪಡೆಯಲು ಪಾಕಿಸ್ತಾನ ಆಕ್ರಮಿತ ಕಾಶ್ಮೆರಕ್ಕೆ ಹೋಗಿದ್ದ ಈತ ಬಹಳ ಬೇಗ ಭ್ರಮನಿರಸನಗೊಂಡು ವಾಪಸು ಬಂದಿದ್ದ. ಅದರ ನಂತರ ಸ್ವಇಚ್ಛೆಯಿಂದ ಗಡಿ ಭದ್ರತಾ ಪಡೆಯ ಮುಂದೆ ಶರಣಾಗತನಾಗಿದ್ದ. ಅಂದಿನಿಂದ ಸತತವಾಗಿ ಈತ ಕಾಶ್ಮೆರದ `ವಿಶೇಷ ಪೊಲೀಸ್ ದಳ'ದ (ಎಸ್‌ಟಿಎಫ್) ಕಣ್ಗಾವಲಿನಲ್ಲಿದ್ದ. ಆಗಾಗ ಎಸ್‌ಟಿಎಫ್ ಅಫ್ಜಲ್‌ನನ್ನು ತನ್ನಲ್ಲಿಗೆ ಕರೆಸಿಕೊಂಡು ಮಾಹಿತಿಗಾಗಿ ಪೀಡಿಸುತ್ತಿತ್ತು.

ಈ ರೀತಿ ಎಸ್‌ಟಿಎಫ್ ನಿಗಾ ಇಟ್ಟಿರುವ ವ್ಯಕ್ತಿಯೊಬ್ಬನನ್ನು ಯಾವುದೇ ಉಗ್ರಗಾಮಿ ಸಂಘಟನೆ ತನ್ನ ಪ್ರಮುಖ  ಕಾರ್ಯಾಚರಣೆಯಲ್ಲಿ ಯಾವ ಧೈರ್ಯದಿಂದ ಬಳಸಿಕೊಳ್ಳಲು ಸಾಧ್ಯ? ಅಂತಹ ಧೈರ್ಯವನ್ನು ಅದು ತೋರಿದರೂ ಈ ಬೆಳವಣಿಗೆಗಳು ಎಸ್‌ಟಿಎಫ್ ಗಮನಕ್ಕೆ ಯಾಕೆ ಬರಲಿಲ್ಲ?

ಅಫ್ಜಲ್‌ಗುರು ತನ್ನ ತಪ್ಪೊಪ್ಪಿಗೆಯಲ್ಲಿ ಕಾಶ್ಮೆರದ ಎಸ್‌ಟಿಎಫ್ ಪಾತ್ರವನ್ನು ವಿವರವಾಗಿ ದಾಖಲಿಸಿದ್ದ. ದಾಳಿಯ ವೇಳೆ ಭದ್ರತಾಪಡೆಯ ಗುಂಡಿಗೆ ಬಲಿಯಾಗಿದ್ದ ಮೊಹಮ್ಮದ್ ಎಂಬ ಭಯೋತ್ಪಾದಕನ ಜತೆಗಿನ ಸಂಬಂಧವನ್ನು ನಿರಾಕರಿಸಿರಲಿಲ್ಲ. ಅದರ ಜತೆಯಲ್ಲಿ ಮೊಹಮ್ಮದ್ ಹೇಗೆ ಪರಿಚಯವಾದ ಎನ್ನುವುದನ್ನು ಕೂಡಾ ಹೇಳಿದ್ದ. ಇಲ್ಲಿಯೇ ತಾರೀಖ್ ಮತ್ತು ಎಸ್‌ಟಿಎಫ್ ಡಿವೈಎಸ್‌ಪಿ ದ್ರಾವಿಂದರ್ ಸಿಂಗ್ ಎಂಬ ಇಬ್ಬರು  ನಿಗೂಢ ವ್ಯಕ್ತಿಗಳು ಕಾಣಿಸಿಕೊಳ್ಳುವುದು.

ತಾರೀಖ್‌ನನ್ನು ಆರೋಪಿಯೆಂದು ಪೊಲೀಸರು ಗುರುತಿಸಿದ್ದರೂ ಘಟನೆ ನಡೆದ ದಿನದಿಂದ ಇಲ್ಲಿಯ ವರೆಗೆ ಆತನ ಪತ್ತೆಯಾಗಿಲ್ಲ. ಮೊಹಮ್ಮದ್‌ನ ಹಿನ್ನೆಲೆ ಬಯಲಿಗೆ ಬಂದಿಲ್ಲ, ದ್ರಾವಿಂದರ್ ಸಿಂಗ್ ಬಗ್ಗೆ ಕನಿಷ್ಠ ವಿಚಾರಣೆ ಕೂಡಾ ನಡೆದಿಲ್ಲ.

`ತಾರೀಖ್‌ನ ಮೂಲಕ ನನಗೆ ಮೊಹಮ್ಮದ್ ಪರಿಚಯವಾಗಿತ್ತು.  ಎಸ್‌ಟಿಎಫ್‌ಗೆ ಕೆಲಸ ಮಾಡುತ್ತಿದ್ದನೆಂದು ಹೇಳುತ್ತಿದ್ದ ತಾರೀಖ್ ಜತೆಯಲ್ಲಿಯೇ ನಾನು ಡಿವೈಎಸ್‌ಪಿ ದ್ರಾವಿಂದರ್ ಸಿಂಗ್ ಅವರನ್ನು ಭೇಟಿಯಾಗಿದ್ದೆ. ಮೊಹಮ್ಮದ್‌ನನ್ನು ದೆಹಲಿಗೆ ಕರೆದೊಯ್ಯುವಂತೆ ಅವರೇ ನನ್ನನ್ನು ಒತ್ತಾಯಿಸಿದ್ದು. ಎಸ್‌ಟಿಎಫ್ ಆದೇಶವನ್ನು ನಾನು ಮೀರುವುದು ಸಾಧ್ಯ ಇರಲಿಲ್ಲವಾದ ಕಾರಣ ಮೊಹಮ್ಮದನನ್ನು ಕರೆದುಕೊಂಡು ಬಂದೆ.

ದಾಳಿಯಲ್ಲಿ ಉಪಯೋಗಿಸಲಾಗಿದ್ದ ಅಂಬಾಸಿಡರ್ ಕಾರು ಖರೀದಿ ಮಾಡಲು ಕೂಡಾ ನಾನು ಸಹಾಯ ಮಾಡಿದ್ದೆ. ಆದರೆ ಆತ ಭಯೋತ್ಪಾದಕನೆಂದು ನನಗೆ ಗೊತ್ತಿರಲಿಲ್ಲ. ತಾರೀಖ್ ಮತ್ತು ದ್ರಾವಿಂದರ್ ಸಿಂಗ್ ನೀಡಿದ್ದ ಆದೇಶಗಳನ್ನಷ್ಟೇ ನಾನು ಪಾಲಿಸಿದ್ದೇನೆ. ನನ್ನ ಹೇಳಿಕೆಯನ್ನು ನಂಬುವುದಿಲ್ಲವಾದರೆ ದಯವಿಟ್ಟು ನನ್ನ ಮತ್ತು ಮೊಹಮ್ಮದ್‌ನ ಸೆಲ್‌ಪೋನ್‌ಗಳಿಗೆ ತಾರೀಖ್ ಮತ್ತು ದ್ರಾವಿಂದರ್‌ಸಿಂಗ್ ಮಾಡಿದ್ದ ಫೋನ್ ಕರೆಗಳ ವಿವರಗಳನ್ನಾದರೂ ಪರಿಶೀಲಿಸಿ' ಎಂದು ಅಫ್ಜಲ್‌ಗುರು ನ್ಯಾಯಾಲಯದ ಮುಂದೆ (ಪೊಲೀಸರ ಮುಂದೆ ಅಲ್ಲ) ನೀಡಿದ್ದ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದ. ಟಿವಿ ಚಾನೆಲ್‌ಗಳ ಮುಂದೆ ಹಾಜರಾಗಿದ್ದ ದ್ರಾವಿಂದರ್‌ಸಿಂಗ್ ತಾನು ಅಫ್ಜಲ್‌ನನ್ನು ಬಂಧಿಸಿದ್ದು ಮತ್ತು ಚಿತ್ರಹಿಂಸೆ ನೀಡಿದ್ದನ್ನು ಒಪ್ಪಿಕೊಂಡಿದ್ದರು.

ಅಫ್ಜಲ್‌ಗುರು ಹೇಳಿಕೆಯ ಸತ್ಯಾಸತ್ಯತೆಗಳೇನೇ ಇದ್ದರೂ ಪೊಲೀಸರು ತಾರೀಖ್ ಮತ್ತು ಪೊಲೀಸ್ ಅಧಿಕಾರಿ ದ್ರಾವಿಂದರ್ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಬಹುದಿತ್ತು. ಇಷ್ಟು ಮಾತ್ರ ಅಲ್ಲ ದಾಳಿಯ ಸಂಚಿನಲ್ಲಿ ಅಫ್ಜಲ್‌ನನ್ನು ಜೋಡಿಸಿದ್ದ ಮೊಹಮ್ಮದ್ ಎಂಬ ಭಯೋತ್ಪಾದಕನ ಬಗ್ಗೆಯೂ ಪೊಲೀಸರು ಯಾಕೋ ಆಳಕ್ಕೆ ಇಳಿದು ತನಿಖೆ ನಡೆಸಿಲ್ಲ. ದಾಳಿ ನಡೆದ ನಂತರ ಈ ಭಯೋತ್ಪಾದಕನ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಕಂಡ ಮಹಾರಾಷ್ಟ್ರದ ಥಾಣೆಯ ಪೊಲೀಸ್ ಕಮಿಷನರ್ ಎಸ್.ಎಂ.ಶಾಂಗಾರಿ ಅವರು `ಮೃತ ಭಯೋತ್ಪಾದಕ ಮೊಹಮ್ಮದ್ ಅಲಿಯಾಸ್ ಅಬು ಹಮ್ಜಾ  ಎಂಬಾತ ಲಷ್ಕರ್-ಎ-ತೊಯ್ಬಾಗೆ ಸೇರಿರುವ ಉಗ್ರನಾಗಿದ್ದು ಆತನನ್ನು 2000ನೇ ವರ್ಷದಲ್ಲಿ  ಬಂಧಿಸಿ ಜಮ್ಮು ಮತ್ತು ಕಾಶ್ಮೆರದ ಪೊಲೀಸರ ವಶಕ್ಕೆ ಒಪ್ಪಿಸಿದ್ದಾಗಿ ಹೇಳಿದ್ದರು.

ಇದು ನಿಜವೇ ಆಗಿದ್ದರೆ ಪೊಲೀಸರ ವಶದಲ್ಲಿದ್ದ ಈತ ಹೇಗೆ ದಾಳಿಯಲ್ಲಿ ಭಾಗಿಯಾಗಿದ್ದ? ದಾಳಿಯಲ್ಲಿ ಭಾಗಿಯಾಗದೆ ಇದ್ದಿದ್ದರೆ ಬಂಧಿತ ಮೊಹಮ್ಮದ್ ಈಗ ಎಲ್ಲಿದ್ದಾನೆ?' ಈ ಪ್ರಶ್ನೆಗೂ ಪೊಲೀಸರ ತನಿಖೆಯಲ್ಲಿ ಉತ್ತರ ಸಿಗುವುದಿಲ್ಲ.

ಸಂಸತ್‌ನ ಮೇಲೆ ದಾಳಿ ನಡೆಸುವ ಭಯೋತ್ಪಾದಕರ ಕೃತ್ಯದ ಬಗ್ಗೆ ಗೊತ್ತಿದ್ದರೂ ಮೌನವಾಗಿರುವ ಅಪರಾಧವನ್ನು ಅಫ್ಜಲ್‌ಗುರು ಮಾಡಿರಬಹುದು. ಇದು ಗಲ್ಲು ಶಿಕ್ಷೆಗೆ ಅರ್ಹವಾದ `ದೇಶದ ವಿರುದ್ಧ ಯುದ್ಧ ಸಾರಿರುವ ವಿದ್ರೋಹ'ವಾಗಿರಬಹುದು. ಆದರೆ ಇಂತಹ ಮಹಾ ಅಪರಾಧದ ತನಿಖೆ ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಲು ಸಾಧ್ಯ ಇರುವಷ್ಟು ದುರ್ಬಲವಾಗಿರಬಾರದಿತ್ತು. ಇಲ್ಲಿಯವರೆಗೆ ಗಲ್ಲಿಗೇರಿಸಲಾದ ಯಾವ ಅಪರಾಧಿಯ ಬಗ್ಗೆ ನಡೆದ ತನಿಖೆ ಕೂಡಾ ಇಷ್ಟೊಂದು ವಿವಾದವನ್ನು ಹುಟ್ಟುಹಾಕಿರಲಿಲ್ಲ.

ವಿಚಿತ್ರವೆಂದರೆ ಸುಪ್ರೀಂಕೋರ್ಟ್ ಕೂಡಾ ತನ್ನ ತೀರ್ಪಿನಲ್ಲಿ `ಅಫ್ಜಲ್‌ಗುರು ಸಂಸತ್‌ಭವನದ ಮೇಲಿನ ದಾಳಿಯ ಸಂಚನ್ನು ರೂಪಿಸಿಲ್ಲ ಮತ್ತು ಅದರ ಅನುಷ್ಠಾನದಲ್ಲಿ ಪಾಲ್ಗೊಂಡಿಲ್ಲ' ಎನ್ನುವುದನ್ನು ಒಪ್ಪಿಕೊಂಡಿದೆ. ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿಯೇ ಅದು ಅಫ್ಜಲ್‌ಗುರು ಅಪರಾಧಿ ಎಂದು ಹೇಳಿದೆ. `ಈ ಸಂಚಿಗೆ ಸಂಬಂಧಿಸಿದ ಸ್ಪಷ್ಟ ಮತ್ತು ನೇರ ಸಾಕ್ಷ್ಯಗಳಿಲ್ಲ.

ಹೀಗಿದ್ದರೂ ಸಂದರ್ಭ ಮತ್ತು ಪರಿಸ್ಥಿತಿ ಉಗ್ರಗಾಮಿಗಳೊಂದಿಗೆ ಆರೋಪಿ ಅಫ್ಜಲ್‌ನ ಸಹಭಾಗಿತ್ವ ಇತ್ತು ಎನ್ನುವುದನ್ನು ನಿಸ್ಸಂದೇಹವಾಗಿ ಸೂಚಿಸುತ್ತದೆ' ಎನ್ನುವ ಸುಪ್ರೀಂಕೋರ್ಟ್ ತೀರ್ಪು ಈಗಾಗಲೇ ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ, ಬದಲಿಗೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT