ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಿನ ಲೋಕದ ಕದ ತಟ್ಟುವ ಸಮಯ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಪುರಸಭೆ, ನಗರಸಭೆ ಚುನಾವಣೆಗಳ ಗೆಲುವು ಸೋಲುಗಳನ್ನು ಬದಿಗಿಟ್ಟು ನಡುರಾತ್ರಿಯಲ್ಲಿ ಆಕಾಶದತ್ತ ಕಣ್ಣು ಹಾಯಿಸಿ. ಮೋಡಗಳಿಲ್ಲದ ಶುಭ್ರ ಕತ್ತಲಲ್ಲಿ ಎಷ್ಟೊಂದು ತಾರೆಗಳು ಮಿನುಗುತ್ತಿವೆ. ನೀವು ಅದೃಷ್ಟವಂತರಾಗಿದ್ದರೆ ಮೆಲ್ಲಗೆ ಚಲಿಸುತ್ತಿರುವ ಬಾಹ್ಯಾಕಾಶ ನಿಲ್ದಾಣವನ್ನೂ ನೋಡಬಹುದು. ಅದರಾಚೆಗೂ ದೃಷ್ಟಿ ಹರಿಸಿ - ನಿಮ್ಮ ಊಹಾಚಕ್ಷು ನಿಜಕ್ಕೂ ಚುರುಕಾಗಿದ್ದರೆ ಅದೊಂದೇ ಸರಳ ರೇಖೆಯಲ್ಲಿ ಲಕ್ಷೋಪಲಕ್ಷ ತಾರೆಗಳನ್ನು ಸವರುತ್ತ ಅನಂತದೆಡೆಗೆ ಸಾಗುತ್ತೀರಿ. ಅಲ್ಲಿ ಎಷ್ಟೊಂದು ಬಗೆಯ ಪೃಥ್ವಿಯಂಥ ಜೀವಂತ ಗ್ರಹಗಳಿರಬಹುದು. ಏನೆಲ್ಲ ಬಗೆಬಗೆಯ ಜೀವಲೋಕಗಳಿರಬಹುದು.

ವಿಜ್ಞಾನ ಕತೆಗಾರರು ತಮ್ಮ ಕಲ್ಪನೆಗಳನ್ನು ವಿಸ್ತರಿಸುತ್ತ ನಾನಾ ಬಗೆಯ ಗ್ರಹಗಳ ಬಗ್ಗೆ, ಅಲ್ಲಿ ವಾಸಿಸುವ ಊಹಾಜೀವಿಗಳ ಬಗ್ಗೆ ಕತೆಗಳನ್ನು ಬರೆದಿದ್ದಾರೆ. ಬೇಲಿಯಂಥ ಜೀವಿಗಳು, ಹಳ್ಳದಂಥ ವಾಜಿಗಳು, ಓಡಾಡುವ ಮರಗಳು, ಕುದಿಯುವ ಆಸಿಡ್‌ನಲ್ಲೇ ಹಾಯಾಗಿ ಬದುಕುವ ಗೂಜಿಗಳು, ಮೋಡಗಳಂತೇ ಆಕಾಶದಲ್ಲಿ ಬದುಕುತ್ತ ಚುನಾವಣೆ ಎದುರಿಸಲು ಉದ್ದಡ್ಡ ಧುಮ್ಮಿಕ್ಕುವ ಗುಗ್ಗಪ್ಪಗಳು.....

ನಮ್ಮ ಇದುವರೆಗಿನ ಅಂಥ ಎಲ್ಲ ಊಹೆಗಳನ್ನೂ ಏರುಪೇರು ಮಾಡಬಲ್ಲ ಚಿತ್ರವಿಚಿತ್ರ ಗ್ರಹಗಳು ಪತ್ತೆಯಾಗುತ್ತಿವೆ. ಕತೆ ಕೇಳಲು, ಕೇಳಿದ್ದನ್ನು ಕಿರಿಯರಿಗೆ ಹೇಳಲು ಸಜ್ಜಾಗಿರಿ.

ಬೇರೆ ಭೂಮಿಗಳ ಶೋಧಕ್ಕೆಂದೇ ಅಮೆರಿಕದ ನಾಸಾ ಸಂಸ್ಥೆ ನಾಲ್ಕು ವರ್ಷಗಳ ಹಿಂದೆ ಇದೇ ಮಾರ್ಚ್ ತಿಂಗಳಲ್ಲಿ `ಕೆಪ್ಲರ್' ಹೆಸರಿನ ದೂರದರ್ಶಕವನ್ನು ಕಕ್ಷೆಗೆ ಏರಿಸಿತ್ತು. ಅದು ಇದುವರೆಗೆ 2740 ಸಂಭವನೀಯ  `ಎಕ್ಸೊಪ್ಲಾನೆಟ್' ಅರ್ಥಾತ್  `ತಾರಾಗ್ರಹ'ಗಳನ್ನು ಪತ್ತೆ ಮಾಡಿದೆ. ಅವುಗಳಲ್ಲಿ 140 ಗ್ರಹಗಳು ನೇರ ವೀಕ್ಷಣೆಗೆ ಲಭಿಸಿವೆ, ಇನ್ನುಳಿದವು ಪರೋಕ್ಷವಾಗಿ ತಮ್ಮ ಇರವನ್ನು ದೃಢಪಡಿಸಿವೆ. ಇವುಗಳಲ್ಲಿ ಒಂದೊಂದಕ್ಕೂ ಒಂದೊಂದು ಬಗೆಯ ನಿಗೂಢ ಗುಣವಿಶೇಷಗಳಿದ್ದು ಖಗೋಳ ವಿಜ್ಞಾನಿಗಳನ್ನು ತಬ್ಬಿಬ್ಬು ಮಾಡುತ್ತಿವೆ. ಅನ್ಯಗ್ರಹಗಳ ಅಧ್ಯಯನ ಮಾಡುವವರಿಗೆ ದಿನದಿನಕ್ಕೂ ಕುತೂಹಲ ಹೆಚ್ಚುತ್ತಿದೆ.

ಕೆಪ್ಲರ್ ದೂರದರ್ಶಕ ನಮ್ಮ `ಮಿಲ್ಕಿವೇ' ಗ್ಯಾಲಕ್ಸಿಯ ಒಂದು ಪುಟ್ಟ ಭಾಗದಲ್ಲಿ, ಒಂದೇ ದಿಕ್ಕಿನಲ್ಲಿ ಕಣ್ಣಿಟ್ಟು ಅತ್ಯಂತ ನಾಜೂಕಾಗಿ ದೂರದ ತಾರೆಗಳನ್ನು ನೋಡುತ್ತಿದೆ. ಕಗ್ಗತ್ತಲಿನ ಮಹಾಸಾಗರದಲ್ಲಿ ಪುಟ್ಟ ಜಲಾಂತರ್ಗಾಮಿ ನೌಕೆಯೊಂದು ನಿಂತಲ್ಲೇ ಅಲುಗಾಡದೆ ನಿಂತು ಒಂದು ಕಿಂಡಿಯ ಮೂಲಕ ಒಂದೇ ಕಡೆ ಟಾರ್ಚ್ ಇಟ್ಟು ನೋಡುವ ಹಾಗೆ. ಒಂದೊಂದೇ ತಾರೆಯನ್ನು ದಿಟ್ಟಿಸಿ ನೋಡುತ್ತ ಅದರ ಸುತ್ತಲಿನ ಗ್ರಹಗಳನ್ನು ಹುಡುಕುತ್ತಿದೆ. ಅದು ಸುಲಭವಲ್ಲ. ತಾರೆಯಿಂದ ಹೊಮ್ಮುವ ಬೆಳಕಿನ ಎದುರು ಅದನ್ನು ಸುತ್ತುತ್ತಿರುವ ಗ್ರಹಗಳು ಕಾಣುವುದೂ ಇಲ್ಲ.

ಕಳೆದ ವರ್ಷ ಶುಕ್ರಗ್ರಹ ನಮ್ಮ ಸೂರ್ಯಬಿಂಬದ ಎದುರು ಪುಟ್ಟ ಚುಕ್ಕಿಯಾಗಿ ಎಡದಿಂದ ಬಲಕ್ಕೆ ಸರಿದು ಹೋಗಿದ್ದನ್ನು ನೆನಪಿಸಿಕೊಳ್ಳಿ. ಹಾಗೆಯೇ ದೂರದ ಯಾವುದೋ ತಾರೆಯ ಎದುರು ಅದರ ಯಾವುದಾದರೂ ಗ್ರಹವೊಂದು ಹಾದು ಹೋದೀತೆ ಎಂದು ಕೆಪ್ಲರ್ ನೋಡುತ್ತಿರುತ್ತದೆ. ಹಾಗೆ ತಾಯಿತಾರೆಯನ್ನು ಸುತ್ತುವ ಮರಿಗ್ರಹಗಳು ಪ್ರತ್ಯಕ್ಷ ಕಂಡೇ ಕಾಣುತ್ತವೆ ಎಂಬುದೂ ಖಾತ್ರಿ ಇಲ್ಲ. ನಮ್ಮ ಶುಕ್ರಗ್ರಹ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುತ್ತದಾದರೂ ಮತ್ತೊಮ್ಮೆ ಅದು ಕಪ್ಪುಚುಕ್ಕಿಯಂತೆ ಸೂರ್ಯಬಿಂಬದ ಎದುರು ಸಾಗುವುದನ್ನು ನಾವು ನೋಡಬೇಕೆಂದರೆ ಇನ್ನೂ 120 ವರ್ಷ ಕಾಯಬೇಕು. ಏಕೆಂದರೆ ಅದರ ಕಕ್ಷೆ ಸದಾ ಒಂದೇ ಸಮತಲದಲ್ಲಿ ಇರುವುದಿಲ್ಲ.

ತಾರೆಯಿಂದ ಕೆಪ್ಲರನತ್ತ ಬರುವ ಕ್ಷೀಣ ಬೆಳಕಿನಲ್ಲಿ ತೀರಾ ಅತ್ಯಲ್ಪ ಪ್ರಮಾಣ ಇಳಿತ ಕಂಡರೆ ಅದರೆದುರು ಗ್ರಹವೊಂದು ಹಾದು ಹೋಗುತ್ತಿದೆ ಎಂದರ್ಥ. ಆ ತಾರೆಯ ಸುತ್ತಲಿನ ಗುರುತ್ವ ಕ್ಷೇತ್ರದಲ್ಲಿ ವ್ಯತ್ಯಾಸವೇವಾದರೂ ಅಲ್ಲೊಂದು ಗ್ರಹ ಇದೆಯೆಂದು ಹೇಳಬಹುದು. ಎಲ್ಲವನ್ನೂ ನೋಡುತ್ತ ಕೂರಬೇಕಿಲ್ಲ. ತಾಯಿತಾರೆಗೆ ತೀರ ಹತ್ತಿರವೂ ಅಲ್ಲದ, ದೂರವೂ ಅಲ್ಲದ  `ಜೀವಸಾಧ್ಯತೆ ಇರಬಹುದಾದ' ಗ್ರಹಗಳ ಬಗ್ಗೆ ವಿಶೇಷ ವರದಿ ನೀಡಬೇಕೆಂದು ಕೆಪ್ಲರ್ ದೂರದರ್ಶಕಕ್ಕೆ ಆದೇಶ ನೀಡಲಾಗಿದೆ.

ಮಿಲ್ಕಿವೇ ಗ್ಯಾಲಕ್ಸಿಯ ಒಂದು ಪುಟ್ಟ ಕ್ಷೇತ್ರದಲ್ಲಿ ತೀರ ಇಕ್ಕಟ್ಟಿನ ವೀಕ್ಷಣೆಯಲ್ಲೂ 2740 ಗ್ರಹಗಳು ಕಂಡಿವೆಯೆಂದರೆ ಇಡೀ ವಿಶ್ವದಲ್ಲಿ ಅದೆಷ್ಟು ಲಕ್ಷ ಕೋಟಿ ಗ್ರಹಗಳು ಇರಲು ಸಾಧ್ಯ ಎಂಬುದನ್ನು ನಾವು ಊಹಿಸಬಹುದು. ಅವುಗಳ ಪೈಕಿ ಶೇಕಡಾ ಹತ್ತರಷ್ಟಾದರೂ ಜೀವಧಾರಕ ಗ್ರಹಗಳು ಇವೆಯೆಂದು ಊಹಿಸಿದರೆ ಇಡೀ ಬ್ರಹ್ಮಾಂಡವೇ ಜೀವಿಗಳಿಂದ ಧುಮುಧುಮಿಸುತ್ತಿದೆ ಎಂದು ಹೇಳಬಹುದು.

ಇದುವರೆಗೆ ಪತ್ತೆ ಮಾಡಿದ ಗ್ರಹಗಳಲ್ಲಿ ಅದೆಷ್ಟೊ ವೈವಿಧ್ಯಮಯ ಕಾಯಗಳನ್ನು ಗುರುತಿಸಲಾಗಿದೆ. ವಜ್ರದಂತೆ ಪಳಪಳ ಹೊಳೆಯುವ ಗ್ರಹ ಬೇಕೆ, ಅಂಗಾರದಂತೆ ಕರೀಕಪ್ಪಿನ ಗ್ರಹ ಬೇಕೆ, ಜೋಡಿಗ್ರಹ ಬೇಕೆ? ಸ್ಟೈರೊಫೋಮ್ ಹಾಗೆ ಹಗುರು ನೊರೆನೊರೆಯಂಥ ಗ್ರಹವೂ, ಸಾಬೂನು ಗುಳ್ಳೆಯಂಥ ಗ್ರಹವೂ ಪತ್ತೆಯಾಗಿವೆ. ಅಚ್ಚರಿಯೊಳಗಿನ ಅಚ್ಚರಿ ಏನೆಂದರೆ ತಾಯಿತಾರೆಯೇ ಇಲ್ಲದ ಅನಾಥ ಗ್ರಹವೂ ಸಿಕ್ಕಿದೆ.

ಗ್ರಹಗಳ ಅಸ್ತಿತ್ವಕ್ಕೆ ಇಂತಿಂಥದ್ದೇ ಲಕ್ಷಣಗಳಿರಬೇಕೆಂಬ ಲೆಕ್ಕಾಚಾರಕ್ಕೂ ಇವು ಕೊಕ್ ಕೊಟ್ಟಿವೆ. ಪರಸ್ಪರ ಸಮೀಪ ಇರುವ ಜೋಡಿಗ್ರಹಗಳ ಭೌತಿಕ ಲಕ್ಷಣಗಳು ಒಂದೇ ರೀತಿ ಇರುತ್ತವೆಂದು ಇದುವರೆಗೆ ನಿರ್ಧರಿಸಲಾಗಿತ್ತು. ಆದರೆ ಈಗ ಪತ್ತೆಯಾದ ಅಂಥ ಜೋಡಿಗ್ರಹಗಳಲ್ಲಿ ಒಂದು ಉಕ್ಕಿನಷ್ಟು ಗಟ್ಟಿಯದಾಗಿದ್ದರೆ ಇನ್ನೊಂದು ಗಾಳಿತುಂಬಿದ ಬಲೂನಿನಂತಿದೆ. ಭೂಮಿಯಂಥ ಗಟ್ಟಿ ಗ್ರಹಗಳು ತಾಯಿತಾರೆಗೆ ತುಸು ಸಮೀಪದಲ್ಲಿ ಇರುತ್ತವೆಂದೂ ಗುರುವಿನಂಥ ಅನಿಲ ಗೋಳಗಳು ದೂರದಲ್ಲಿ ಇರುತ್ತವೆಂದೂ ನಿರ್ಧರಿಸಲಾಗಿತ್ತು. ಆದರೆ ಅದೂ ಉಲ್ಟಾ ಆಗಿದೆ. ತಾಯಿತಾರೆಯ ತೀರ ಸಮೀಪದಲ್ಲಿ ಸುತ್ತುವ ಗುಳ್ಳೆಗ್ರಹವೂ ಪತ್ತೆಯಾಗಿದೆ.

ಈ ಎಲ್ಲ ಬೆಳವಣಿಗೆಯ ಫಲ ಏನೆಂದರೆ, ಹೊಸಗ್ರಹಗಳ ವೀಕ್ಷಣೆಯಲ್ಲಿ ಹೊಸ ಹೊಸ ಉತ್ಸಾಹಿಗಳು ಪಾಲ್ಗೊಳ್ಳಲು ಮುಂದೆ ಬರುತ್ತಿದ್ದಾರೆ. ಕೆಪ್ಲರ್‌ನಂಥ ಕಕ್ಷಾರೂಢ ದೂರದರ್ಶಕದ ಬದಲು ಭೂಮಿಯ ಮೇಲಿಂದಲೇ ತಾರಾಗ್ರಹಗಳ ಲಕ್ಷಣಗಳನ್ನು ಅಧ್ಯಯನ ಮಾಡಬಲ್ಲ ಹೊಸ ಬಗೆಯ ದೂರದರ್ಶಕಗಳು ಸಿದ್ಧವಾಗತೊಡಗಿವೆ. ಅಥವಾ ಕಡ್ಡಿಪೆಟ್ಟಿಗೆ ಗಾತ್ರದ ಸಾವಿರಾರು ಕಿರುಸಾಧನಗಳನ್ನು ಒಟ್ಟಾಗಿ ಕಕ್ಷೆಗೆ ಏರಿಸಿ, ಅವೆಲ್ಲವೂ ಮಿಲಿಟರಿ ಶಿಸ್ತಿನಲ್ಲಿ ನಾನಾ ಆಕಾರಗಳಲ್ಲಿ ಸಂಚರಿಸುವಂತೆ ಮಾಡಿ, ದೂರದ ಗ್ರಹಗಳ ಕ್ಷೀಣ ಬೆಳಕನ್ನು ಸಂಗ್ರಹಿಸಿ ಗ್ರಹಲಕ್ಷಣಗಳನ್ನು ವಿಶ್ಲೇಷಿಸಲು ಸಾಧ್ಯವಿದೆ ಎಂದೂ ತರ್ಕಿಸಲಾಗಿದೆ. ಅಂಥ ಕಿರು ಉಪಗ್ರಹಗಳನ್ನು ಹಾರಿಸಲು ಸಿದ್ಧತೆ ನಡೆದಿದೆ.

ಭೂಮಿಯನ್ನೇ ಹೋಲುವ ತಾರಾಗ್ರಹಗಳನ್ನು ಪತ್ತೆ ಮಾಡಬೇಕು, ಅವುಗಳಲ್ಲಿ ಜೀವಿಗಳ ಅಸ್ತಿತ್ವವನ್ನು ಗುರುತಿಸಬೇಕು, ಅಲ್ಲಿ ಬುದ್ಧಿಜೀವಿಗಳಿದ್ದರೆ ಅವರೊಂದಿಗೆ  ಮಹಾಸಂಪರ್ಕ  ಸಾಧಿಸಬೇಕು ಎಂದು ಮುಂತಾದ ಮಹಾಕನಸುಗಳು ಈ ತಲೆಮಾರಿನಲ್ಲೇ, ಈ ದಶಕದಲ್ಲೇ ಸಾಧ್ಯವಾದರೆ ಅಚ್ಚರಿಯೇನಿಲ್ಲ.

ಅಂಥದೊಂದು ಸಾಧ್ಯತೆಗೆ ಭೂಮಿ ಕಾಯುತ್ತಿದೆ.  `ಹೌದು, ನಾವು ಇಲ್ಲಿದ್ದೇವೆ, ನೀವು ಹೇಗಿದ್ದೀರಾ?' ಎಂಬ ಸಂದೇಶ ಅನ್ಯಲೋಕದಿಂದ ಬಂದಿದ್ದೇ ಆದರೆ ಅದರಂಥ ರೋಚಕ ಸಂಗತಿ ಮನುಕುಲಕ್ಕೆ ಬೇರೊಂದಿರಲಾರದು.

ಅಂಥದೊಂದು ಸಂಪರ್ಕಕ್ಕೆ ಕಳೆದ 40 ವರ್ಷಗಳಿಂದ ಏನೆಲ್ಲ ಬಗೆಯ ಸರ್ಕಸ್ ನಡೆದಿದೆ. ಮೊದಲು  `ಪಯೊನಿಯರ್' ಹೆಸರಿನ ಉಪಗ್ರಹವನ್ನು ಸೌರಲೋಕದ ಆಚೆ ಅನಂತ ಪಯಣಕ್ಕೆ ಕಳುಹಿಸಲಾುತು. ಅದರಲ್ಲಿ ಭೂಗ್ರಹದ ವಿಳಾಸವನ್ನೂ ಮನುಷ್ಯ ಪ್ರಾಣಿಯ ಗುಣಲಕ್ಷಣಗಳನ್ನೂ ಸೇರಿಸಿದ ಫಲಕವನ್ನು ಇಡಲಾಗಿತ್ತು. ಆ ಬಳಿಕ ನಕ್ಷತ್ರ ಲೋಕಕ್ಕೆ ಭಾರೀ ಶಕ್ತಿಶಾಲಿ ಇಲೆಕ್ಟ್ರಾನಿಕ್ ಸಂದೇಶವೊಂದನ್ನು ಚಿಮ್ಮಿಸಲಾುತು. ತಾರಾಗ್ರಹದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ಜೀವಿಗಳು ಯಾರೇ ಇದ್ದರೂ ಅವರ ಟಿವಿ ಅಥವಾ ಜಾಲಪರದೆಯಲ್ಲಿ ಅಥವಾ ಇಲೆಕ್ಟ್ರಾನಿಕ್ ನರಮಂಡಲದಲ್ಲಿ ನಮ್ಮ ಸಂದೇಶ ತಾನಾಗಿ ಮೂಡಲೆಂಬ ಆಶಯ ಅದರಲ್ಲಿತ್ತು.

ಅದಾದ ಮೇಲೆ ಪೆರುವಿನ ತೋತಿವಾಕನ್ ಪಿರಮಿಡ್ ಮೇಲಿಂದ ಮನುಷ್ಯ ಸಂಕುಲದ ಚರಿತ್ರೆಯನ್ನೆಲ್ಲ ಡಿಜಿಟಲ್ ರೂಪದಲ್ಲಿ ರವಾನಿಸಲಾುತು. ಅದು ಆಚಿನ ಲೋಕಕ್ಕೆ ತಲುಪಿತೆಂಬುದಕ್ಕೆ ಉತ್ತರದ ನಿರೀಕ್ಷೆಯಲ್ಲಿ ಈ ಭೂಮಿಯ ಎಷ್ಟೊಂದು ಕಡೆ ವೀಕ್ಷಣೆ ನಡೆಸಲಾಗುತ್ತಿದೆ. ನಮ್ಮದೇ ಲೋಕದ ಗೌಜು ಗದ್ದಲಗಳ ನಡುವೆ ಆಚಿನವರು ಕಳುಹಿಸಿರಬಹುದಾದ ಸಂದೇಶಗಳಿಗಾಗಿ ನಿರಂತರ ಸ್ಕ್ಯಾನ್ ಮಾಡಲಾಗುತ್ತಿದೆ.

ಈಗಿನ ಅಂದಾಜಿನ ಪ್ರಕಾರ, ನಮ್ಮ ಮಿಲ್ಕಿ ವೇ ಗ್ಯಾಲಕ್ಸಿಯೊಂದರಲ್ಲೇ ಸುಮಾರು 75 ಶತಕೋಟಿ ಕೆಂಪುಕುಜ್ಜಗಳೆಂಬ ನಕ್ಷತ್ರಗಳಿವೆ. ಅವು ಸೂರ್ಯನಿಗಿಂತ ತುಸು ಚಿಕ್ಕದಾಗಿದ್ದು, ತುಸು ಮಂದ ಬೆಳಕನ್ನು ಹೊಮ್ಮಿಸುತ್ತಿವೆ. ಅವುಗಳಲ್ಲಿ ಸುಮಾರು ಶೇಕಡಾ 6ರಷ್ಟು ಕೆಂಪುಕುಬ್ಜಗಳ ಸುತ್ತ ಪೃಥ್ವಿಯನ್ನು ಹೋಲಬಲ್ಲ ಗ್ರಹಗಳು ಸುತ್ತುತ್ತಿವೆ ಎಂದು ಅಂದಾಜು ಮಾಡಿದರೂ 450 ಶತಕೋಟಿ ಗ್ರಹಗಳು ಇರಬೇಕು. ಅವುಗಳಲ್ಲಿ ಲಕ್ಷದಲ್ಲೊಂದು ಗ್ರಹದಲ್ಲಿ ಜೀವಿಗಳಿವೆ, ಸಾವಿರದಲ್ಲೊಂದು ಅಂಥ ಜೀವಂತ ಗ್ರಹದಲ್ಲಿ ಬುದ್ಧಿಜೀವಿಗಳು ವಿಕಾಸವಾಗಿವೆ ಎಂದು ಇಟ್ಟುಕೊಂಡರೂ ನಮ್ಮಂದಿಗೆ ಸಂದೇಶ ವಿನಿಮಯ ಮಾಡಬಲ್ಲ ಎಷ್ಟೊಂದು ಬಗೆಯ ಜೀವಿಗಳು ಅಲ್ಲಿವೆ.

`ತುಂಬ ದೂರ ಹೋಗಬೇಕಿಲ್ಲ, ನಮ್ಮದೇ ಹಿತ್ತಲಲ್ಲಿ ಎಂಬಷ್ಟು ಸಮೀಪದಲ್ಲೇ ಎಷ್ಟೊಂದು ಜೀವಂತ ಗ್ರಹಗಳು ಇರಲು ಸಾಧ್ಯವಿದೆ' ಎಂದು ಹಾರ್ವರ್ಡ್-ಸ್ಮಿತ್ಸೋನಿಯನ್ ಆಸ್ಟ್ರೊಫಿಸಿಕ್ಸ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಕರ್ಟ್ನೆ ಡ್ರೆಸ್ಸಿಂಗ್ ಎಂಬ ವಿಜ್ಞಾನಿ ಹೇಳಿದ್ದಾರೆ. ಕೇವಲ 13 ಜೋತಿರ್ವವರ್ಷಗಳಷ್ಟು ದೂರದಲ್ಲಿ ಅಂಥ ಗ್ರಹಗಳಿರುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಅದರರ್ಥ ಏನೆಂದರೆ `ಹಲೋ ಹೇಗಿದ್ದೀರಾ?'  ಎಂದು ನಾವು ಅವರಿಗೆ ಪ್ರಶ್ನೆ ಹಾಕಿದರೆ 13 ವರ್ಷಗಳಲ್ಲಿ ಅದು ಅವರನ್ನು ತಲುಪಿ ನಂತರ ಮತ್ತೆ 13 ವರ್ಷಗಳ ನಂತರ ಅಲ್ಲಿನವರು `ನಾವು ಚೆನ್ನಾಗಿದ್ದೇವೆ, ನೀವೆಲ್ಲ ಕ್ಷೇಮ ತಾನೆ?' ಎಂದು ಉತ್ತರ ಅಲ್ಲಿಂದ ನಮಗೆ ಬರಬಹುದು.

ಅವರೊಂದಿಗೆ ಸಂಪರ್ಕ ಪಡೆಯಬೇಕು ಎಂಬ ಉದ್ದೇಶದಿಂದಲಾದರೂ ನಾವು ಈ ಭೂಮಿಯನ್ನು ಸುಸ್ಥಿತಿಯಲ್ಲಿ ಉಳಿಸಿಕೊಂಡಿರಬೇಕು ಎಂದು ಹೆಸರಾಂತ ಖಗೋಲ ವಿಜ್ಞಾನಿ ಕಾರ್ಲ್ ಸೇಗನ್ ಹೇಳಿದ್ದ. ಬ್ರಹ್ಮಾಂಡದಲ್ಲಿ ಯಾವುದೋ ಗ್ರಹದಲ್ಲಿನ ಜೀವತಂತುಗಳು 320 ಕೋಟಿ ವರ್ಷಗಳ ಹಿಂದೆ ಭೂಮಿಗೂ ಬಂದು ಇಲ್ಲಿ ಜೀವಾಂಕುರವಾಗಿ ತಾಂತ್ರಿಕ ಮನುಷ್ಯನವರೆಗೆ ವಿಕಾಸಗೊಂಡು ಈಗ ತಾನಾಗಿ ಬೇರೆ ಲೋಕದಲ್ಲಿ ಜೀವಾಂಕುರ ಮಾಡಬಹುದಾದಷ್ಟು ಪ್ರೌಢಿಮೆ ಪಡೆದಿವೆ.

ಮನುಷ್ಯ ಜೀವಿಯ ಕಣಕಣವೂ ಬ್ರಹ್ಮಾಂಡದ ತಾರಾದ್ರವ್ಯದಿಂದಲೇ ರೂಪುಗೊಂಡಿರುವುದರಿಂದ ಅನ್ಯ ಜಗತ್ತಿನ ಇತರರೊಂದಿಗೆ ಸಂಪರ್ಕ ಸಾಧಿಸಬೇಕೆಂಬ ತುಡಿತ ನಮ್ಮೆಲ್ಲರಲ್ಲೂ ಇದ್ದೇ ಇದೆ. ಆ ತುಡಿತವೇ ಮಂಗಳಗ್ರಹಕ್ಕೆ `ಕ್ಯೂರಿಯಾಸಿಟಿ' ಯಂತ್ರವನ್ನು ಇಳಿಸಿದೆ; ಕೆಪ್ಲರನ್ನು ಮೇಲಕ್ಕೆ ಅಟ್ಟಿದೆ. ಅಲ್ಲಿನ ಜೀವಿಗಳ ಕದ ತಟ್ಟುವ ಸಮಯ ಸನ್ನಿಹಿತವಾಗುತ್ತಿದೆ.

`ಅಲ್ಲಿನವರು ಬುದ್ಧಿಜೀವಿಗಳೇ ಇರಬೇಕು. ಆದ್ದರಿಂದಲೇ ಅವು ಇನ್ನೂ ನಮ್ಮನ್ನು ಸಂಪರ್ಕಿಸುವ ಗೋಜಿಗೆ ಹೋಗಿಲ್ಲ' ಎಂದು ವ್ಯಂಗ್ಯಚಿತ್ರವೊಂದರಲ್ಲಿ ಕೆಲ್ವಿನ್ ಎಂಬ ಕಿಲಾಡಿ ಬಾಲಕ ಹೇಳಿದ್ದು ಇಲ್ಲಿ ನೆನಪಿಗೆ ಬರುತ್ತದೆ.

ಈ ಮನುಷ್ಯನಂಥ ಕೊಳಕು ಜೀವಿಯನ್ನು ಯಾರು ಸಂಪರ್ಕಿಸಲು ಬಯಸುತ್ತಾರೆ? ತನ್ನ ಸುತ್ತಲಿನ ಎಲ್ಲ ಜೀವಜಂತುಗಳನ್ನೂ ಬಡಿದು ಬಿಸಾಕುತ್ತ, ಕೊಳಕು ಹಬ್ಬಿಸುತ್ತ, ತನ್ನ ಕುಟುಂಬ, ತನ್ನ ಜಾತಿ, ತನ್ನ ಧರ್ಮ, ತನ್ನ ದೇಶ ಎಂಬ ಕಡುಸ್ವಾರ್ಥದಲ್ಲಿ ಮುಳುಗೇಳುತ್ತ ಭೂಗ್ರಹವೆಂಬ ತನ್ನ ಮನೆಯನ್ನೇ ವಿನಾಶದಂಚಿಗೆ ತಂದುಕೊಂಡ ಈ ಜೀವಿಯನ್ನು ಯಾವ ಬುದ್ಧಿವಂತ ಜೀವಿಯೂ ತುದಿಗೋಲಲ್ಲಿ ಕೂಡ ಮುಟ್ಟಬಯಸಲಿಕ್ಕಿಲ್ಲ. ನಾವಾಗಿ ಕದ ತಟ್ಟಿದರೆ ಅವರು ತೆರೆದಾರೆಯೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT