ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್.ಕೆ. ನಾರಾಯಣ್ ಸ್ಮಾರಕದ ಅರ್ಥಪೂರ್ಣತೆ

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಕಳೆದ  ಶನಿವಾರದಿಂದ ಇಂಗ್ಲಿಷ್ ಕಾದಂಬರಿಕಾರ ಮತ್ತು ಮೈಸೂರಿಗ ಆರ್.ಕೆ. ನಾರಾಯಣ್ ಅವರ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಿ, ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಮೈಸೂರಿನ ಯಾದವಗಿರಿಯಲ್ಲಿರುವ ನಾರಾಯಣ್ ಅವರ ನಿವಾಸವನ್ನು ಮುಖ್ಯಮಂತ್ರಿಗಳು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಈಗ ನವೀಕರಿಸಲಾಗಿರುವ ಸ್ಮಾರಕದಲ್ಲಿ ನಾರಾಯಣ್ ಅವರ ಕೃತಿಗಳು, ವಸ್ತ್ರಗಳು ಮತ್ತು ಪೀಠೋಪಕರಣಗಳು ಸೇರಿದಂತೆ ದಿನನಿತ್ಯಬಳಕೆಯ ವಸ್ತುಗಳು ಹಾಗೂ ಪ್ರಶಸ್ತಿಗಳನ್ನು ಪ್ರದರ್ಶಿಸಲಾಗಿದೆ.

ನಾರಾಯಣ್ ಅವರ ಹೆಸರಿನಲ್ಲಿ ಮೈಸೂರಿನಲ್ಲೊಂದು ಸ್ಮಾರಕವನ್ನು ನಿರ್ಮಿಸಬೇಕೆಂಬ ಚರ್ಚೆ ಪ್ರಾರಂಭವಾಗಿದ್ದು 2006ರಲ್ಲಿ.

ಅವರ ಜನ್ಮಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಹೇಗೆ ಆಚರಿಸಬೇಕು, ಜೊತೆಗೆ ಮೈಸೂರಿನ ಜೊತೆಗಿನ ಅವರ ಸಂಬಂಧವನ್ನು ನೆನಪಿನಲ್ಲಿ ಉಳಿಯುವಂತೆ ನಗರದಲ್ಲಿ ಏನಾದರೂ ಮಾಡಬೇಕು ಎನ್ನುವ ಉದ್ದೇಶದಿಂದ ಹಿರಿಯ ಪತ್ರಕರ್ತ ಮತ್ತು ‘ಔಟ್‌ಲುಕ್’ ನಿಯತಕಾಲಿಕದ ಸಂಪಾದಕ ಕೃಷ್ಣಪ್ರಸಾದ್ ಅವರು ಸಾಮುದಾಯಿಕ ಚರ್ಚೆಯನ್ನು ಆರಂಭಿಸಿದರು.

ಹುರುಪಿನಿಂದ ನಡೆದ ಚರ್ಚೆಯಲ್ಲಿ ಮೂಡಿಬಂದ ಹಲವು ಸಲಹೆಗಳನ್ನು ರಾಜ್ಯಪಾಲರ, ಸರ್ಕಾರದ ಮತ್ತು ಮೈಸೂರು ನಗರಪಾಲಿಕೆಯ ಗಮನಕ್ಕೆ ತರಲಾಯಿತಾದರೂ ಯಾವುದೇ ಉಪಯೋಗವಾಗಲಿಲ್ಲ.

ನಂತರದಲ್ಲಿ 2011ರಲ್ಲಿ, ನಾರಾಯಣ್ ಕುಟುಂಬ ವರ್ಗದವರು ಅವರ ನಿವಾಸವನ್ನು ಖಾಸಗಿ ಡೆವಲಪರ್ ಒಬ್ಬರಿಗೆ ಮಾರಿದರು. ಕೊಂಡವರು ನಿವಾಸವನ್ನು ಉರುಳಿಸುವ ಕೆಲಸವನ್ನು ಪ್ರಾರಂಭಿಸಿದಾಗ, ಅದರ ವಿರುದ್ಧ ಪತ್ರಕರ್ತರು ಮತ್ತು ಮೈಸೂರಿನ ನಾಗರಿಕರು ದನಿಯೆತ್ತಿದರು.

ನಂತರದ ದಿನಗಳಲ್ಲಿ ಕರ್ನಾಟಕ ಸರ್ಕಾರ, ಮೈಸೂರು ನಗರಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಗಳು ಜೊತೆಗೂಡಿ ನಾರಾಯಣ್ ಅವರ ನಿವಾಸವನ್ನು ಅವರ ಕುಟುಂಬ ವರ್ಗದವರಿಂದ ಕೊಂಡು, ಸ್ಮಾರಕವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೆಲಸ ಮಾಡಿದವು.

ಷೇಕ್ಸ್‌ಪಿಯರ್‌ನ ಸ್ಟ್ರಾಟ್‍ಫ಼ೋರ್ಡ್-ಅಪಾನ್-ಎವನ್ ಸ್ಮಾರಕದ ಮಾದರಿಯಲ್ಲಿ ನಾರಾಯಣ್ ನಿವಾಸವನ್ನೂ ರೂಪಿಸುತ್ತೇವೆ ಎಂಬ ಹಮ್ಮಿನ ಹೇಳಿಕೆ ಆಗಾಗ ಮೈಸೂರಿನ ನಗರಪಾಲಿಕೆ ಅಧಿಕಾರಿಗಳಿಂದ ಕೇಳಿಬಂದಿತು.

ಆದರೆ ಇಂದು ನಿವಾಸದ ನವೀಕರಣವಾಗಲಿ, ಸ್ಮಾರಕದೊಳಗಿಟ್ಟಿರುವ ನಾರಾಯಣ್ ಅವರ ವಸ್ತುಗಳ ಹಾಗೂ ಜೀವನದ ವಿವರಗಳ ಪ್ರದರ್ಶನವಾಗಲಿ ಸದಭಿರುಚಿಯಿಂದ ಆಗಿದೆ ಎಂದು ನನಗನ್ನಿಸಿತು. ಇದಕ್ಕೆ ಮೈಸೂರು ನಗರಪಾಲಿಕೆಯ ಕಮಿಷನರ್ ಮತ್ತವರ ಸಹೋದ್ಯೋಗಿಗಳನ್ನು ಅಭಿನಂದಿಸಬೇಕು.

ಸೋಜಿಗದ ವಿಷಯವೆಂದರೆ ನಾರಾಯಣ್ ಅವರ ಹೆಸರಿನಲ್ಲಿ ಸ್ಮಾರಕವೊಂದನ್ನು ಮೈಸೂರಿನಲ್ಲಿ ನಿರ್ಮಿಸಲು, ಈ ಉದ್ದೇಶಕ್ಕಾಗಿ ಸಾರ್ವಜನಿಕ ಸಂಪನ್ಮೂಲಗಳನ್ನು ವಿನಿಯೋಗಿಸುವ ಬಗ್ಗೆ ಸಾಕಷ್ಟು ವಿರೋಧ ಕೇಳಿಬಂದಿದೆ. ಹೀಗೆ ವಿರೋಧಿಸುವವರ ಪಟ್ಟಿಯಲ್ಲಿ ಎಸ್. ಎಲ್. ಭೈರಪ್ಪ, ಜಿ.ಎಸ್. ಶಿವರುದ್ರಪ್ಪನವರಂತಹ ಹಿರಿಯ ಬರಹಗಾರರು, ಕನ್ನಡ ಚಳವಳಿಗಾರರು ಮತ್ತು ಮೈಸೂರು ನಗರಪಾಲಿಕೆಯ ಸದಸ್ಯರೂ ಸೇರಿದ್ದರು.

ಆಗ ಕೇಳಿಬಂದ ಆಕ್ಷೇಪಣೆಗಳಲ್ಲಿ ನಾರಾಯಣ್ ಕನ್ನಡಿಗರಲ್ಲ;  ಕನ್ನಡದಲ್ಲಾಗಲೀ ಕರ್ನಾಟಕದ ವಾಸ್ತವದ ಬಗೆಗಾಗಲೀ ಬರೆಯಲಿಲ್ಲ ಎನ್ನುವುದು ಮುಖ್ಯವಾದವುಗಳು. ಮೈಸೂರಿನಲ್ಲಿ ತಮ್ಮ ಬದುಕಿನ ಬಹುಭಾಗವನ್ನು  ಕಳೆದರೂ ನಾರಾಯಣ್ ಅವರು ನಗರದ ವೈಚಾರಿಕ, ಸಾಂಸ್ಕೃತಿಕ ಮತ್ತು ದೈನಂದಿನ ಜೀವನದ ಭಾಗವಾಗಿರಲಿಲ್ಲ ಎಂದೂ ಮತ್ತೆ ಕೆಲವರು ವಾದಿಸಿದರು.

ನಾರಾಯಣ್ ಅವರ ಸಾಹಿತ್ಯದ ಗುಣಮಟ್ಟವನ್ನು ಪ್ರಶ್ನಿಸುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ನಾರಾಯಣ್ ಅವರನ್ನು ಸಾರ್ವಜನಿಕವಾಗಿ ಮೈಸೂರಿನಲ್ಲಿ ಸರ್ಕಾರವೇ ಗುರುತಿಸುವ ಬಗ್ಗೆ, ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ಸಾಕಷ್ಟು ವಿರೋಧವಿತ್ತು.

ಆರ್.ಕೆ. ನಾರಾಯಣ್ 20ನೆಯ ಶತಮಾನದ ಪ್ರಮುಖ ಭಾರತೀಯ ಬರಹಗಾರರಲ್ಲೊಬ್ಬರು ಎನ್ನಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಇದಕ್ಕೆ ಸುದೀರ್ಘವಾದ ಸಾಹಿತ್ಯಕ ಚರ್ಚೆಯ ಮೂಲಕ ಆಧಾರಗಳನ್ನೂ ಒದಗಿಸಬಹುದು. ಮೈಸೂರು ನಗರದಲ್ಲಿ ಮಾತ್ರವಲ್ಲ ಎಲ್ಲೆಡೆ ಅವರ ನೆನಪು ಸ್ಥಿರವಾಗಿರಬೇಕು ಎನ್ನುವುದಕ್ಕೆ ಮೂರು ಕಾರಣಗಳನ್ನು ನೀಡಬಯಸುತ್ತೇನೆ.

ಮೊದಲಿಗೆ, ನಾರಾಯಣ್ ಅವರ ಸಾಹಿತ್ಯಕ ಮಹತ್ವಾಕಾಂಕ್ಷೆಯನ್ನು ಗಮನಿಸಿ. ತನ್ನ ಬರಹಗಳ ಮೂಲಕವೇ ಅದರಲ್ಲೂ ಇಂಗ್ಲಿಷಿನಲ್ಲಿಯೇ ಬರೆದು  ಬದುಕನ್ನು ಕಟ್ಟಿಕೊಳ್ಳುತ್ತೇನೆ, ಜೀವನ ನಿರ್ವಹಣೆ ಮಾಡುತ್ತೇನೆ ಎನ್ನುವ ನಿಲುವನ್ನು ನಾರಾಯಣ್ ತಮ್ಮ ಯೌವನದಲ್ಲಿ ತಳೆದರು.

ಇಲ್ಲಿ ಎರಡು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು, ಅಷ್ಟೇನು ಒಳ್ಳೆಯ ವಿದ್ಯಾರ್ಥಿಯಾಗಿರದ ನಾರಾಯಣ್ ಇಂಗ್ಲಿಷ್ ಭಾಷೆಯ ಪರೀಕ್ಷೆಯಲ್ಲಿಯೇ ಹಲವು ಬಾರಿ ಅನುತ್ತೀರ್ಣರಾಗಿದ್ದರು. ಹಾಗಿದ್ದಾಗ್ಯೂ ಇಂಗ್ಲಿಷ್ ಬರಹಗಾರನಾಗಬೇಕೆಂಬ ಅವರ ಮಹದಾಸೆಯೇನೂ ಕರಗಲಿಲ್ಲ.

ಎರಡನೆಯದಾಗಿ,  1920ರ ದಶಕದ ಎರಡನೆಯ ಭಾಗದಲ್ಲಿ ನಾರಾಯಣ್ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ, ಅಲ್ಲಿ ಕನ್ನಡ ಸಾಹಿತ್ಯಕ ಚಟುವಟಿಕೆಗಳು ಪ್ರಾರಂಭವಾಗಿದ್ದವು.

ಬಿ.ಎಂ.ಶ್ರೀ, ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್. ಕೃಷ್ಣಶಾಸ್ತ್ರಿಯವರು ಬೋಧಕವರ್ಗದಲ್ಲಿದ್ದರೆ, ನಾರಾಯಣ್ ಅವರ ಹಿರಿಯ ಸಮಕಾಲೀನರಾದ ಕುವೆಂಪು ಅವರು ಇಂಗ್ಲಿಷಿನಿಂದ ಕನ್ನಡದೆಡೆಗೆ ತಿರುಗಿ, ತಮ್ಮ ಸಾಹಿತ್ಯ ರಚನೆಯನ್ನು ಕೈಗೊಂಡಿದ್ದರು.

ಹೊಸದಾಗಿ ಆರಂಭವಾಗಿದ್ದ ಮೈಸೂರು ವಿಶ್ವವಿದ್ಯಾಲಯದಲ್ಲಿ ಆಧುನಿಕ ಕನ್ನಡವೊಂದನ್ನು ಸಾಹಿತ್ಯ, ಜ್ಞಾನ ಮತ್ತು ವ್ಯವಹಾರದ ಭಾಷೆಗಳಾಗಿ ರೂಪಿಸುವ ಮಹತ್ಕಾರ್ಯ ಪ್ರಾರಂಭವಾಗಿತ್ತು.
ನಾರಾಯಣ್ ಇಂತಹ ಕಾರ್ಯಚಟುವಟಿಕೆಗಳಿಂದ ಹೊರಗುಳಿದಿದ್ದರು.

ತಮ್ಮ ಬಾಲ್ಯದಿಂದ ಓದುತ್ತಿದ್ದ ‘ಸ್ಪೆಕ್ಟೇಟರ್’ ಹಾಗೂ ‘ಪಂಚ್‌’ಗಳಂತಹ ನಿಯತಕಾಲಿಕಗಳಲ್ಲಿ ಪ್ರಕಟಿಸಬೇಕು, ಇಂಗ್ಲೆಂಡಿನ ಪ್ರಕಾಶಕರು ತಮ್ಮ ಕಾದಂಬರಿಗಳನ್ನು ಹೊರತರಬೇಕು ಎನ್ನುವ ಆಸೆ ಅವರದು. ಹೇಗೋ  ಬಿ.ಎ. ಮುಗಿಸಿದ ನಾರಾಯಣ್ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲಿಲ್ಲ.

ಸ್ವತಂತ್ರ (ಫ್ರೀಲ್ಯಾನ್ಸ್) ಪತ್ರಕರ್ತನಾಗಿ ಕೆಲವು ಕಾಲ ಮದ್ರಾಸಿನ ಪತ್ರಿಕೆಗಳಿಗೆ ಕೆಲಸ ಮಾಡಿದರು. ಆದರೆ ಬಹುಮಟ್ಟಿಗೆ ಪೂರ್ಣಾವಧಿ ಬರಹಗಾರರಾಗಿಯೆ ಮೈಸೂರಿನಲ್ಲಿ ತಮ್ಮ ಬದುಕನ್ನು ಸಾಗಿಸಿದರು. 

ಹಾಗೆಂದ ಮಾತ್ರಕ್ಕೆ ನಾರಾಯಣ್ ಅವರ ಸಾಹಿತ್ಯಕ ಚಟುವಟಿಕೆಗಳಿಗೂ ಸಮಕಾಲೀನ ಕನ್ನಡ ಸಾಹಿತ್ಯಕ್ಕೂ ಸಾಮ್ಯತೆಗಳಿಲ್ಲವೆಂದಲ್ಲ. 20ನೆಯ ಶತಮಾನದ ಪ್ರಾರಂಭದಲ್ಲಿ ಸಣ್ಣಕಥೆ, ಕಾದಂಬರಿ ಮತ್ತು ಪ್ರಬಂಧಗಳನ್ನು ಬರೆಯುತ್ತಿದ್ದ ಕನ್ನಡ ಬರಹಗಾರರು ಸಾಹಿತ್ಯರಚನೆಗೆ ಸೂಕ್ತವಸ್ತುಗಳನ್ನು ಹುಡುಕುತ್ತಿದ್ದರು, ಹೊಸ ಸಾಹಿತ್ಯಕ ಭಾಷೆಯನ್ನು ಕಟ್ಟಿಕೊಳ್ಳುತ್ತಿದ್ದರು.

ನಾರಾಯಣ್ ಸಹ ಇದೇ ಕೆಲಸವನ್ನು ಇಂಗ್ಲಿಷಿನಲ್ಲಿ ನಡೆಸಿದರು. ತಮ್ಮ ಇತರ ಸಮಕಾಲೀನ ಬರಹಗಾರರಂತೆ ಸಾಮಾಜಿಕ-ರಾಜಕೀಯ ಬದಲಾವಣೆಯ ವಿಚಾರಗಳನ್ನು, ರಾಷ್ಟ್ರೀಯತೆಯ ಪ್ರಶ್ನೆಗಳ ಮೇಲೆ ಅವರು ಬರೆಯಲಿಲ್ಲ ಎನ್ನುವುದು ನಿಜ.

ಆದರೆ ತಮ್ಮ ನಡುವಿನ ಸಾಮಾನ್ಯ ಮನುಷ್ಯರ ಪ್ರತಿದಿನದ ಬದುಕಿನ ಬಗ್ಗೆ ನಾರಾಯಣ್ ಬರೆದರು. ಇದು ಸಹ ಭಾರತೀಯ ಸಾಹಿತ್ಯದ ಹಿನ್ನೆಲೆಯಲ್ಲಿ ಹೊಸದು ಎನ್ನುವುದನ್ನು ನಾವು ಮರೆಯಬಾರದು.

ಈ ಹೊಸ ವಸ್ತುವಿಗೆ ಸೂಕ್ತವಾದ ಸಾಹಿತ್ಯಕ ಭಾಷೆಯನ್ನೂ ನಾರಾಯಣ್ ಕಟ್ಟಿಕೊಂಡರು. ಇದು ನಾವು ನಾರಾಯಣ್ ಅವರ ವಿಚಾರದಲ್ಲಿ ಗಮನಿಸಬೇಕಿರುವ ಎರಡನೆಯ ಅಂಶ.

ನಾರಾಯಣ್ ಅವರ ಸಾಹಿತ್ಯಕ ಅರ್ಹತೆ ಮತ್ತು ಸಾಧನೆಗಳು ನಾನು ಪ್ರಸ್ತಾಪಿಸಬಯಸುವ ಮೂರನೆಯ ಅಂಶ. ಕಥನದ ಉದ್ದೇಶಕ್ಕಾಗಿ ಇಂಗ್ಲಿಷ್ ಭಾಷೆಯ ಬಳಕೆಯಲ್ಲಿ ನಾರಾಯಣ್ ಅವರ ಕುಸುರಿ ಕೆಲಸ, ಅವರ ಶೈಲಿ ಅನುಪಮವಾದುದು.

ಭಾರತೀಯ ಮೂಲದ ಇಂಗ್ಲಿಷ್ ಬರಹಗಾರರಾದ ಜುಂಪಾ ಲಾಹಿರಿ ಹೇಳುವಂತೆ ನಾರಾಯಣ್ ತಮ್ಮ ಪ್ರತಿಯೊಂದು ವಾಕ್ಯದ ಸಂಪೂರ್ಣ ಸಾಮರ್ಥ್ಯವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗುತ್ತಾರೆ.

ಕೆಲವೇ ಪುಟಗಳಲ್ಲಿ ಒಂದು ಬದುಕಿನ ಕಥನವನ್ನು ಸೃಷ್ಟಿಸಿ, ಸಂಕೀರ್ಣಗೊಳಿಸಿ ನಂತರ ಬದಲಿಸಿಬಿಡುತ್ತಾರೆ. ಹಾಗೆಯೇ ವಿಮರ್ಶಕ ವೈಯಾಟ್ ಮೇಸನ್ ಸೂಚಿಸುವಂತೆ ನಾರಾಯಣ್ ತಮ್ಮ ಕಾದಂಬರಿಗಳಲ್ಲಿ ಪಶ್ಚಿಮದ ಕಾದಂಬರಿಕಾರರಿಗಿಂತ ಭಿನ್ನವಾಗಿ ಬರೆಯುತ್ತಾರೆ.

ಈ ಭಿನ್ನತೆಯನ್ನು ನಾರಾಯಣ್ ಅವರ ಕಾದಂಬರಿಗಳಲ್ಲಿ ಸ್ವ (ವ್ಯಕ್ತಿತ್ವ ಅಥವಾ ಸೆಲ್‍ಫ಼್) ಎನ್ನುವುದು ಪಶ್ಚಿಮದ ಕಾದಂಬರಿಗಳಲ್ಲಿರುವಂತೆ ಬದಲಾವಣೆ ಹೊಂದುವ ಖಾಸಗಿಯಾದುದಲ್ಲ.

ಬದಲಿಗೆ ಸಾರ್ವಜನಿಕವಾದುದು ಮತ್ತು ಸ್ಥಿರವಾದುದು. ಇಂತಹ ಆಯಾಮಗಳನ್ನು ಕನ್ನಡದ ಬರಹಗಾರರಲ್ಲಿಯೂ ಕಾಣುತ್ತೇವೆ. ಹಾಗಾಗಿಯೆ ನಾರಾಯಣ್ ಅವರ ಬರಹಗಳನ್ನು ಅವರ ಸಮಕಾಲೀನರಾದ ಭಾರತೀಯ ಬರಹಗಾರರ ಜೊತೆಗೆ ಹೋಲಿಸಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ.

ನಾರಾಯಣ್ ಅವರ ಸಾಹಿತ್ಯಕ ಅರ್ಹತೆಗಳನ್ನು ಪ್ರಶ್ನಿಸುವುದಾಗಲೀ  ಅವರು ಮೈಸೂರಿನ ನಾಗರಿಕ ಬದುಕಿನ ಅಂಗವಾಗಿದ್ದರೆ ಎಂಬ ಪ್ರಶ್ನೆಯನ್ನು ಎತ್ತುವುದಾಗಲೀ ಅರ್ಥಹೀನ ಎಂದು ನನಗನ್ನಿಸುತ್ತದೆ.

ಏಕೆಂದರೆ ಈ ಎಲ್ಲ ಚರ್ಚೆ­ಗಳನ್ನೂ ಮೀರಿದ, ನಮ್ಮ ಸಮಾ­ಜದಲ್ಲಿ ಅಗತ್ಯವಾಗಿ ಬದುಕು­ಳಿಯಬೇಕಿರುವ ಮಹತ್ವಾಕಾಂಕ್ಷೆ­ಯೊಂದನ್ನು ನಾರಾಯಣ್ ಪ್ರತಿನಿಧಿಸುತ್ತಾರೆ. ಕಾರಂತರಂತೆ ಬರಹದಿಂದಲೇ ತಮ್ಮ ಬದುಕನ್ನು ನಡೆಸಿದವರು ಅವರು.

ಎಲ್ಲವೂ ವಾಣಿಜ್ಯಮಯವಾಗುತ್ತಿರುವ ಇಂದಿನ ದಿನಗಳಲ್ಲಿ ಮೈಸೂರಿನ ಯಾದವಗಿರಿಯಲ್ಲೊ ಉತ್ತರ ಕರ್ನಾಟಕದ ಯಾದಗಿರಿಯಲ್ಲೊ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಗುವಿನ ಮನಸ್ಸಿನಲ್ಲಿ ಕಲಾವಿದನಾಗಿ ಅಥವಾ ಬರಹಗಾರನಾಗಿ ಬದುಕುವ ಬದುಕೂ ಸಾರ್ಥಕದ್ದು, ಅಂತಹ ಬದುಕು ಕಟ್ಟಿಕೊಳ್ಳುವುದೂ ಸಾಧ್ಯ ಎನ್ನುವ ಭಾವನೆ ಮೂಡುವ ಸಾಧ್ಯತೆಯನ್ನು ಉಳಿಸಿಕೊಳ್ಳಲು ನಾವಿಂದು ಹೆಣಗಬೇಕಿದೆ. ಆ ಹೋರಾಟದಲ್ಲಿ ನಾರಾಯಣ್ ನಮಗೊಂದು ಸಂಕೇತವಾಗಿ, ಪ್ರತಿಮೆಯಾಗಿ ನಿಲ್ಲುತ್ತಾರೆ.


1948ರಿಂದ 1953ರ ನಡುವೆ ನಿರ್ಮಿತವಾದ ಹಾಗೂ ಮುಂದಿನ ನಾಲ್ಕು ದಶಕಗಳ ಕಾಲ ನಾರಾಯಣ್ ವಾಸವಾಗಿದ್ದ ಯಾದವಗಿರಿಯ ನಿವಾಸವೂ ಇಂದು ಇಂತಹುದೇ ಕಾರಣಕ್ಕೆ ಮುಖ್ಯವಾಗುವುದು. ಮೈಸೂರಿನ ಯುವ ಕಲಾವಿದ ಇಲ್ಲವೆ ಬರಹಗಾರನಿಗೆ ಇಂದು ತನ್ನ ಕಲೆಗಿಂತ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ಭಾಗಿಯಾಗುವುದು ಹೆಚ್ಚು ಅರ್ಥಪೂರ್ಣವಾಗಿ ಕಾಣತೊಡಗಿದೆ.

ಇಂತಹ ದಿನಗಳಲ್ಲಿ ನಾರಾಯಣ್ ತಮ್ಮ ಬರವಣಿಗೆಯ ಮೂಲಕವೆ ಬದುಕನ್ನು, ವಾಸಕ್ಕೆ ನಿವಾಸವೊಂದನ್ನು ಕಟ್ಟಿಕೊಂಡರು ಎನ್ನುವುದು ಪವಾಡವೆನಿಸತೊಡಗಿದರೆ ಆಶ್ಚರ್ಯವಲ್ಲ. ಈ ಕಾರಣಕ್ಕಾಗಿಯಾದರೂ ನಾರಾಯಣ್ ಅವರ ನಿವಾಸ ಸ್ಮಾರಕವಾಗಿ ಪರಿವರ್ತನೆ ಹೊಂದಿರುವುದು ಅರ್ಥಪೂರ್ಣವಾದುದು ಎಂದು ನನ್ನ ನಂಬಿಕೆ.

ಅವರ ಬದುಕು, ಸಾಹಿತ್ಯಿಕ ಮಹತ್ವಾಕಾಂಕ್ಷೆ ಮತ್ತು ಬರಹಗಳು ಸ್ಫೂರ್ತಿಯ ಸೆಲೆಗಳಾಗಿ ಉಳಿಯಬೇಕು. ನಾರಾಯಣ್ ಸ್ಮಾರಕದಲ್ಲಿ ನಡೆಯಲಿರುವ ಚಟುವಟಿಕೆಗಳು ಮತ್ತು ಅಲ್ಲಿ ಇಡಲಾಗುವ ಪ್ರದರ್ಶನವಸ್ತುಗಳು ಈ
ಉದ್ದೇಶವನ್ನು ಸಾಕಾರಗೊಳಿಸಲಿ ಎಂದು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT