ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್ನೆಟ್ ಸ್ವಾತಂತ್ರ್ಯಕ್ಕೆ ಹೊಸ ಅಪಾಯ

Last Updated 12 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಎಲ್ಇಡಿ, ಸಿಎಫ್ಎಲ್ ಬಲ್ಬ್‌ಗಳು ಕಡಿಮೆ ವಿದ್ಯುತ್ ಬಳಸುತ್ತವೆ. ಹಾಗೆಯೇ ಪಂಚತಾರಾ ರೇಟಿಂಗ್ ಹೊಂದಿರುವ ಗೃಹೋಪಯೋಗಿ ವಿದ್ಯುತ್ ಉಪಕರಣಗಳೂ ಕಡಿಮೆ ವಿದ್ಯುತ್ ಬಳಸುತ್ತವೆ. ಇದರಿಂದ ಗ್ರಾಹಕರು ಪಾವತಿಸಬೇಕಾದ ವಿದ್ಯುತ್ ಶುಲ್ಕದ ಪ್ರಮಾಣವೂ ಕಡಿಮೆಯಾಗುತ್ತದೆ. ಈ ಬಗೆಯ ಕಡಿಮೆ ವಿದ್ಯುತ್ ಬಳಸುವ ಉಪಕರಣಗಳನ್ನು ಗ್ರಾಹಕರು ಉಪಯೋಗಿಸುತ್ತಿರುವುದರಿಂದ ನಮಗೆ ನಷ್ಟವಾಗುತ್ತಿದೆ. ಆದ್ದರಿಂದ ಈ ಬಗೆಯ ಉಪಕರಣಗಳನ್ನು ಬಳಸುವವರು ಹೆಚ್ಚು ಶುಲ್ಕ ಪಾವತಿಸಬೇಕು ಎಂದು ವಿದ್ಯುತ್ ವಿತರಣಾ ಕಂಪೆನಿಗಳು ಬೇಡಿಕೆಯಿಟ್ಟರೆ?

ಇಂಥದ್ದೊಂದು ಸ್ಥಿತಿ ಈಗ ಮೊಬೈಲ್ ಫೋನ್ ಬಳಕೆದಾರರಿಗೆ ಬಂದಿದೆ. ಎಸ್ಎಂಎಸ್ ಶುಲ್ಕ ಹೆಚ್ಚು ಆದ್ದರಿಂದ ನಾವು ವಾಟ್ಸ್ ಆ್ಯಪ್ ಬಳಸುತ್ತೇವೆ. ಅಂತರರಾಷ್ಟ್ರೀಯ ಕರೆಗಳ ದರ ಹೆಚ್ಚು. ಅದಕ್ಕಾಗಿ ನಾವು ಇಂಟರ್‌ನೆಟ್ ಆಧಾರಿತ ಕರೆ ಸವಲತ್ತುಗಳಾದ ಸ್ಕೈಪ್, ವೈಬರ್ ಇತ್ಯಾದಿಗಳನ್ನು ಬಳಸುತ್ತೇವೆ. ಇವನ್ನೇನು ನಾವು ಉಚಿತವಾಗಿ ಬಳಸುವುದಿಲ್ಲ. ಇಂಟರ್‌ನೆಟ್ ಸೇವೆಗಾಗಿ ಹಣ ಪಾವತಿಸಿಯೇ ಈ ಸವಲತ್ತುಗಳನ್ನು ಬಳಸುತ್ತೇವೆ.

ಆದರೆ ಮೊಬೈಲ್ ಸೇವಾದಾತರು ನೀವು ಇಂಟರ್ನೆಟ್ ಅನ್ನು ಹೀಗೆಲ್ಲಾ ಬಳಸುವುದರಿಂದ ನಮಗೆ ನಷ್ಟವಾಗುತ್ತಿದೆ. ಆದ್ದರಿಂದ ವಾಟ್ಸ್ ಆ್ಯಪ್, ವೈಬರ್, ಸ್ಕೈಪ್ ಇತ್ಯಾದಿಗಳನ್ನು ಬಳಸಿದರೆ ಅದಕ್ಕೆ ಎಸ್ಎಂಎಸ್ ಮತ್ತು ಮಾಮೂಲು ಕರೆಗಳಿಗೆ ನೀಡುವ ದರವನ್ನೇ ನೀಡಬೇಕು ಎಂದರೆ ಒಪ್ಪಲು ಸಾಧ್ಯವೇ? ಸಾಧ್ಯವಿಲ್ಲ ಎಂಬುದು ಸಾಮಾನ್ಯ ಜ್ಞಾನವಿರುವ ಯಾರು ಬೇಕಾದರೂ ಹೇಳಬಹುದಾದ ಮಾತು. ಆದರೆ ಲಾಭವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡಿರುವ ಮೊಬೈಲ್ ಸೇವಾದಾತರಿಗೆ ಮಾತ್ರ ಈ ಉತ್ತರ ಇಷ್ಟವಾಗುತ್ತಿಲ್ಲ.

ಇದಕ್ಕಾಗಿ ಅವರು ಮಾಡುತ್ತಿರುವ ಲಾಬಿ ಅಂತಿಂಥದ್ದಲ್ಲ. ಭಾರತದಲ್ಲಿ ಟೆಲಿಕಾಂ ಸೇವೆಗಳನ್ನು ನಿಯಂತ್ರಿಸುವ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಥವಾ ಟ್ರಾಯ್‌ನ ಮೇಲೆ ಒತ್ತಡ ಹೇರಿ ಇಂಟರ್‌ನೆಟ್ ಆಧಾರಿತ ಮೆಸೇಜಿಂಗ್ ಮತ್ತು ಕರೆ ಸೇವೆಗಳ ಮೇಲೆ ಶುಲ್ಕ ವಿಧಿಸುವುದಕ್ಕೆ ಬೇಕಿರುವ ಪೂರ್ವಸಿದ್ಧತೆಯಲ್ಲಿ ತೊಡಗಿದ್ದಾರೆ. ಸರ್ಕಾರದ ಅಧೀನದಲ್ಲಿರುವ ‘ಟ್ರಾಯ್’ ಕೂಡಾ ಈ ಲಾಭಕೋರರ ಲಾಬಿಗೆ ಮಣಿದಂತೆ ಕಾಣಿಸುತ್ತಿದೆ. ಇದಕ್ಕೆ ಸಾಕ್ಷ್ಯವಾಗಿ ಈ ಕೆಳಗಿನ ಸಂಗತಿಗಳನ್ನು ಗಮನಿಸಬಹುದು.

ಈ ವರ್ಷದ ಮಾರ್ಚ್ 27ರಂದು ಟ್ರಾಯ್ 118 ಪುಟಗಳ ದಾಖಲೆಯೊಂದನ್ನು (http://goo.gl/XfJVvE) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು. ‘ರೆಗ್ಯುಲೇಟರಿ ಫ್ರೇಮ್‌ವರ್ಕ್ ಫಾರ್ ಓವರ್‌್ ದ ಟಾಪ್ ಸರ್ವೀಸಸ್’ ಎಂಬ ಶೀರ್ಷಿಕೆಯ ಈ ದಾಖಲೆಯನ್ನು ಅರ್ಥ ಮಾಡಿಕೊಳ್ಳುವುದು ಸುಲಭವೇನಲ್ಲ. ‘ಓವರ್ ದ ಟಾಪ್’ ಸೇವೆಗಳು (ಓಟಿಟಿ) ಎಂದರೆ ಮೊಬೈಲ್ ಸೇವಾದಾತರು ಒದಗಿಸುವ ಇಂಟರ್ನೆಟ್ ಸೇವೆಯನ್ನು ಆಧಾರವಾಗಿಟ್ಟುಕೊಂಡು ರೂಪಿಸಲಾಗಿರುವ ಸೇವೆಗಳು ಎಂದರ್ಥ.

ಸರಳವಾಗಿ ಹೇಳುವುದಾದರೆ ನಮ್ಮ ಮೊಬೈಲ್ ಫೋನ್‌ನಲ್ಲಿರುವ ವಾಟ್ಸ್ ಆ್ಯಪ್ ಬಗೆಯ ಕಿರು ತಂತ್ರಾಂಶಗಳು ಒದಗಿಸುವ ಸೇವೆ. ಇವುಗಳನ್ನು ಟ್ರಾಯ್ ಹೇಗೆ ನಿಯಂತ್ರಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸುವುದಕ್ಕೆ ದಾಖಲೆಯನ್ನು ರೂಪಿಸಲಾಗಿದೆ. 118 ಪುಟಗಳಲ್ಲಿ ಟೆಲಿಕಾಂ ನೀತಿಗಳು ಮತ್ತು ತಂತ್ರಜ್ಞಾನದ ಕುರಿತ ಅರಿವಿರುವವರಷ್ಟೇ ಬಳಸುವ ಪಾರಿಭಾಷಿಕಗಳಿಂದ ತುಂಬಿದ ಅನೇಕ ಮಾಹಿತಿಗಳಿವೆ. ಇದರ ಜೊತೆಗೆ ಸಾರ್ವಜನಿಕರು ಅಥವಾ ಟ್ರಾಯ್‌ನ ಭಾಷೆಯಲ್ಲೇ ಹೇಳುವುದಾದರೆ ಭಾಗೀದಾರರು (Stakeholders) ಉತ್ತರಿಸಬೇಕಾದ 20 ಪ್ರಶ್ನೆಗಳೂ ಇವೆ.

ಈ ಭಾಗಿದಾರರು ಯಾರೆಲ್ಲಾ ಎಂಬುದನ್ನು ಸ್ವಲ್ಪ ನೋಡೋಣ. ಕಳೆದ ವರ್ಷದ ಅಂತ್ಯದ ಹೊತ್ತಿಗೆ ಭಾರತದಲ್ಲಿದ್ದ ಮೊಬೈಲ್ ಫೋನ್ ಸಂಪರ್ಕಗಳ ಸಂಖ್ಯೆ 93 ಕೋಟಿ. ಇತ್ತೀಚಿನ ಲೆಕ್ಕಾಚಾರಗಳಂತೆ ಭಾರತದಲ್ಲಿರುವ ಸ್ಮಾರ್ಟ್‌ಫೋನುಗಳ ಸಂಖ್ಯೆ 28 ಕೋಟಿ. ಈ ಎಲ್ಲಾ ಫೋನುಗಳೂ ಒಂದಲ್ಲಾ ಒಂದು ಬಗೆಯ ಓಟಿಟಿ ಸೇವೆಗಳನ್ನು ಬಳಸುತ್ತವೆ. ಅಂದರೆ ಒಟ್ಟು ಸಂಪರ್ಕಗಳ ಸುಮಾರು ಶೇಕಡ 30ರಷ್ಟು ಪ್ರಮಾಣದಲ್ಲಿ ಓಟಿಟಿ ಬಳಕೆದಾರರಿದ್ದಾರೆ.

ಟ್ರಾಯ್ ರೂಪಿಸಲು ಹೊರಟಿರುವ ನಿಯಂತ್ರಣ ಚೌಕಟ್ಟು ಹೇಗಿರಬೇಕು ಅಥವಾ ಹೇಗಿರಬಾರದು ಎಂದು ಹೇಳುವುದಕ್ಕೆ ಇವರೆಲ್ಲರಿಗೂ ಹಕ್ಕಿದೆ. ಇನ್ನುಳಿದ ಭಾಗೀದಾರರಲ್ಲಿ ಮೊಬೈಲ್ ಸೇವಾದಾತರು, ಓಟಿಟಿ ಸೇವೆಗಳನ್ನು ನೀಡುವವರು, ಮುಂದೆ ನೀಡಬೇಕೆಂದು ಭಾವಿಸಿರುವವರು ಹಾಗೂ ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಕೊಂಡವರೆಲ್ಲಾ ಬರುತ್ತಾರೆ. ಯಾವುದೇ ತರ್ಕವನ್ನು ಬಳಸಿದರೂ ನಿಯಂತ್ರಣ ನೀತಿಯ ಫಲವನ್ನು ಅಂತಿಮವಾಗಿ ಅನುಭವಿಸುವವರು ಬಳಕೆದಾರರು.

ಹಲವು ಕೋಟಿಗಳಷ್ಟು ಸಂಖ್ಯೆಯಲ್ಲಿರುವ ಬಳಕೆದಾರರನ್ನು ಬಾಧಿಸುವ ವಿಷಯವೊಂದರ ಕುರಿತಂತೆ ನಿರ್ಧಾರ ಕೈಗೊಳ್ಳಲು ಟ್ರಾಯ್ ರೂಪಿಸಿರುವ ಪ್ರಶ್ನಾವಳಿ ಮತ್ತು ವಿವರಣಾ ಪತ್ರ ಬಹುಸಂಖ್ಯೆಯ ಬಳಕೆದಾರರಿಗೆ ಅರ್ಥವಾಗದ ಇಂಗ್ಲಿಷ್ ಭಾಷೆಯಲ್ಲಿದೆ. ಇಂಗ್ಲಿಷ್ ಗೊತ್ತಿರುವವರು ಇದನ್ನು ಅರ್ಥ ಮಾಡಿಕೊಳ್ಳಲು ಟೆಲಿಕಾಂ ವ್ಯವಹಾರ ಮತ್ತು ತಂತ್ರಜ್ಞಾನವನ್ನು ಮೊದಲು ಕಲಿಯಬೇಕಾಗುತ್ತದೆ.
ಕೋಟ್ಯಂತರ ಸಂಖ್ಯೆಯಲ್ಲಿರುವ ಬಳಕೆದಾರರನ್ನು ಬಾಧಿಸುವ ಸಂಗತಿಯೊಂದನ್ನು ಜನರಿಗೆ ಅರ್ಥವಾಗದೇ ಇರುವ ಭಾಷೆಯಲ್ಲಿ ಮಂಡಿಸಿರುವ ಟ್ರಾಯ್‌ನ ವರ್ತನೆಯೇ ಪ್ರಶ್ನಾರ್ಹ.

ಭಾರತದ ಸಂವಿಧಾನ ಮಾನ್ಯ ಮಾಡಿರುವ ಭಾಷೆಗಳಲ್ಲಾದರೂ ಈ ದಾಖಲೆಯ ಅನುವಾದವಿರಬೇಕು ಎಂದು ಟ್ರಾಯ್‌ಗೆ ಅನ್ನಿಸದೇ ಇರುವುದೇ ಆಶ್ಚರ್ಯದ ಸಂಗತಿ. ಇಷ್ಟರ ಮೇಲೆ ಇಂಥದ್ದೊಂದು ದಾಖಲೆಯನ್ನು ಬಿಡುಗಡೆ ಮಾಡಿರುವ ವಿಚಾರವನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಕೆಲಸವನ್ನೂ ಟ್ರಾಯ್ ಮಾಡಿಲ್ಲ. 2015ರ ಏಪ್ರಿಲ್ 24ರ ಒಳಗೆ ಭಾಗೀದಾರರೆಲ್ಲಾ ತಮ್ಮ ಅಭಿಪ್ರಾಯಗಳನ್ನು ಸೂಕ್ತ ಸಮರ್ಥನೆಯೊಂದಿಗೆ ನೀಡಬೇಕು. ಇದಕ್ಕೆ ಪ್ರತ್ಯಭಿಪ್ರಾಯಗಳನ್ನು ಪಡೆಯುವ ಕ್ರಿಯೆ ಮೇ 8ರೊಳಗೆ ಮುಗಿಯುತ್ತದೆ.

ಒಟ್ಟಾರೆ ಅಭಿಪ್ರಾಯ ಸಂಗ್ರಹದ ಪ್ರಕ್ರಿಯೆಯೇ ಏಕಪಕ್ಷೀಯವಾಗಿರುವುದಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ವೇದಿಕೆಗಳಲ್ಲಿ ಬಿಸಿಯೇರಿದ ಚರ್ಚೆಗಳು ನಡೆಯುತ್ತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ನೆಟ್ ನ್ಯೂಟ್ರಾಲಿಟಿ ಅಥವಾ ಅಲಿಪ್ತ ಜಾಲ ಪರಿಕಲ್ಪನೆಯನ್ನು ಬೆಂಬಲಿಸುವ ಎಲ್ಲರೂ ಟೆಲಿಕಾಂ ಕಂಪೆನಿಗಳ ಲಾಭಕೋರ ವಾದಗಳಿಗೆ ಸಮರ್ಥ ಉತ್ತರಗಳನ್ನು ನೀಡುವ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕಾಗಿಯೇ ಒಂದು ಜಾಲತಾಣವೂ ಇದ್ದು  (http://goo.gl/BCYhjG) ಅದರಲ್ಲಿ ಹೋರಾಟದಲ್ಲಿ ಹೇಗೆ ಜನಸಾಮಾನ್ಯರು ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ಬೇಕಿರುವ ಮಾಹಿತಿಗಳಿವೆ.

ಈಗ ಓಟಿಟಿ ಸೇವೆಗಳಿಂದ ತಮಗೆ ನಷ್ಟವಾಗುತ್ತಿದೆ ಎನ್ನುತ್ತಿರುವ ಟೆಲಿಕಾಂ ಕಂಪೆನಿಗಳು ಇದೇ ತಂತ್ರಜ್ಞಾನವನ್ನು ಬಳಸಿ ಭಿನ್ನ ಸೇವಾ ಜಾಲಗಳ ಮಧ್ಯೆ ಸಂಪರ್ಕ ಕಲ್ಪಿಸುತ್ತಿದ್ದವು ಎಂಬುದನ್ನು ಮರೆತಂತೆ ಕಾಣಿಸುತ್ತದೆ. ಇದನ್ನು ಒಂದು ಸರಳ ಉದಾಹರಣೆಯೊಂದಿಗೆ ವಿವರಿಸಬಹುದು. ಉದಾಹರಣೆಗೆ ನೀವು ಭಾರತದಿಂದ ಅಮೆರಿಕದಲ್ಲಿರುವ ನಿಮ್ಮ ಗೆಳೆಯನೊಬ್ಬನಿಗೆ ಕರೆ ಮಾಡುತ್ತೀರಿ ಎಂದುಕೊಳ್ಳೋಣ. ಈ ಕರೆ ನಿಮ್ಮ ಗೆಳೆಯನನ್ನು ತಲುಪುವುದೂ ಇಂಟರ್‌ನೆಟ್ ತಂತ್ರಜ್ಞಾನಾಧಾರಿತ ಧ್ವನಿ ಸಂವಹನದ ಮೂಲಕವೇ. ಮೊದಲು ಇದು ಮೊಬೈಲ್ ಸೇವಾದಾತರ ಮೂಲಕ ನಡೆಯುತ್ತಿತ್ತು.

ಈಗ ಓಟಿಟಿ ಸೇವೆಗಳನ್ನು ಬಳಸಿಕೊಂಡು ಗ್ರಾಹಕ ನೇರವಾಗಿ ಮಾಡಬಹುದು. ಗ್ರಾಹಕರು ಈ ತಂತ್ರಜ್ಞಾನವನ್ನು ಬಳಸುವುದನ್ನು ಮೊಬೈಲ್ ಸೇವಾದಾತರು ತಮಗಾಗುತ್ತಿರುವ ನಷ್ಟವೆಂದು ಭಾವಿಸುತ್ತಿದ್ದಾರೆ. ಅಂದರೆ ಗ್ರಾಹಕರಿಗೆ ಅಗ್ಗದ ದರದಲ್ಲಿ ಸೇವೆಗಳು ಒದಗಿಸುವ ತಂತ್ರಜ್ಞಾನವನ್ನು ಅವರು ವಿರೋಧಿಸುತ್ತಿದ್ದಾರೆ. ಅವರ ಈ ವಿರೋಧ ಈಗಾಗಲೇ ಅನೇಕ ಬಗೆಯಲ್ಲಿ ಕಾಣಿಸಿಕೊಂಡಿದೆ. ಕಳೆದ ವರ್ಷದ ಅಂತ್ಯದ ಹೊತ್ತಿಗೆ ಓಟಿಟಿ ಸೇವೆಗಳನ್ನು ಬಳಸುವವರು ಹೆಚ್ಚುವರಿ ಹಣ ಪಾವತಿಸಬೇಕು ಎಂದು ಏರ್‌ಟೆಲ್ ಹೇಳಿತ್ತು.

ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ ಭಾರತದಲ್ಲಿಯೂ ನೆಟ್ ನ್ಯೂಟ್ರಾಲಿಟಿಯ ಚರ್ಚೆಗಳು ಆರಂಭವಾದವು. ಓಟಿಟಿಗಳಿಗೆ ಹೆಚ್ಚುವರಿ ದರ ವಿಧಿಸುವುದನ್ನು ಏರ್‌ಟೆಲ್ ಕೈಬಿಟ್ಟಿತು. ಆದರೆ ಆ ಪ್ರಕ್ರಿಯೆ ಹಿಂಬಾಗಿಲಿನಿಂದ ಆರಂಭವಾಯಿತು. ಇದಕ್ಕೆ ಅತ್ಯುತ್ತಮ ಉದಾಹರಣೆ ಏರ್ ಟೆಲ್ ಇತ್ತೀಚೆಗೆ ಆರಂಭಿಸಿರುವ ‘ಝೀರೋ’ ಸೇವೆ. ಇದರಂತೆ ಆಯ್ದ ಸೇವೆಗಳಿಗೆ ಗ್ರಾಹಕರು ದತ್ತಾಂಶ ಬಳಕೆಯ ಶುಲ್ಕ ಪಾವತಿಸಬೇಕಾಗಿಲ್ಲ. ಇದೇ ಬಗೆಯ ಸೇವೆಯೊಂದು ರಿಲಯನ್ಸ್ ಮತ್ತು ಫೇಸ್‌ಬುಕ್ ಜಂಟಿಯಾಗಿಯೂ ರೂಪಿಸಿವೆ.

ಬಡವರಿಗೆ ಇಂಟರ್‌ನೆಟ್ ಒದಗಿಸುವುದಕ್ಕಾಗಿ ‘internet.org’ ಎಂಬ ತಾಣವನ್ನು ರೂಪಿಸಲಾಯಿತು. ಇದರ ಮೂಲಕ ಉಚಿತವಾಗಿ ಇಂಟರ್‌ನೆಟ್ ಸೇವೆ ಪಡೆಯಬಹುದಂತೆ. ಆದರೆ ಇದಕ್ಕಾಗಿ ರಿಲಯನ್ಸ್‌ನಿಂದ ಇಂಟರ್ನೆಟ್ ಸೇವೆಯನ್ನು ಪಡೆದಿರಬೇಕು. ಇಲ್ಲಿ ಮೈಕ್ರೋಸಾಫ್ಟ್‌ನ ‘ಬಿಂಗ್’ ಬಳಸಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸಬಹುದೇ ಹೊರತು ‘ಗೂಗಲ್’ ಬಳಸುವಂತಿಲ್ಲ. ಹಾಗೂ ಇಂಥ ಅನೇಕ ಷರತ್ತುಗಳಿವೆ.

ಮೇಲ್ನೋಟಕ್ಕೆ ಇದರಿಂದ ಗ್ರಾಹಕನಿಗೆ ಲಾಭವಾಗುತ್ತಿದೆ ಎಂಬಂತೆ ಕಾಣಿಸಬಹುದು. ಆದರೆ ಇದು ಒಟ್ಟಾರೆ ತಂತ್ರಜ್ಞಾನ ಕ್ಷೇತ್ರದ ಸಹಜ ವಿಕಾಸಕ್ಕೆ ಅತಿದೊಡ್ಡ ಅಡ್ಡಿಯಾಗಿ ಪರಿಣಮಿಸುತ್ತದೆ. ಯೂಟ್ಯೂಬ್, ವಿಡಿಯೋ ಹಂಚಿಕೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ತಾಣ. ಅದು ಇಂಟರ್ನೆಟ್ ದೈತ್ಯ ಗೂಗಲ್ ಒಡೆತನದಲ್ಲಿದೆ. ಗೂಗಲ್ ಮೊಬೈಲ್ ಸೇವಾದಾತರಿಗೆ ಭಾರೀ ಪ್ರಮಾಣದಲ್ಲಿ ಶುಲ್ಕ ಪಾವತಿಸಿ ತನ್ನ ಸೇವೆ ಉಚಿತವಾಗಿರುವಂತೆ ನೋಡಿಕೊಳ್ಳುತ್ತದೆ ಎಂದು ಭಾವಿಸೋಣ. ಅಲ್ಲಿಗೆ ಈ ಕ್ಷೇತ್ರದಲ್ಲಿ ಇನ್ಯಾರೂ ಸ್ಪರ್ಧಿಸಲು ಸಾಧ್ಯವಾಗದೇ ಇಂಟರ್ನೆಟ್ ವಿಡಿಯೋದಲ್ಲಿ ಗೂಗಲ್‌ನ ಏಕಸ್ವಾಮ್ಯವಷ್ಟೇ ಉಳಿಯುತ್ತದೆ.

ಈ ಕ್ಷೇತ್ರದಲ್ಲಿ ಆಗಬಹುದಾಗಿರುವ ತಂತ್ರಜ್ಞಾನದ ವಿಕಾಸ ಸಂಪೂರ್ಣವಾಗಿ ಗೂಗಲ್ ನಿಯಂತ್ರಣಕ್ಕೆ ಒಳಪಡುತ್ತದೆ. ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಂಥ ದೈತ್ಯರು ಮನಸ್ಸು ಮಾಡಿದರೆ ಇಡೀ ಅಂತರ್ಜಾಲಾಧಾರಿತ ಮಾರಾಟ ಕ್ಷೇತ್ರದಲ್ಲಿ ಉಳಿದ ಯಾರಿಗೂ ಸ್ಪರ್ಧಿಸಲಾಗದ ಸ್ಥಿತಿ ಉದ್ಭವಿಸುತ್ತದೆ. ಈ ಎಲ್ಲಾ ಅಪಾಯಗಳನ್ನು ಮನಗಂಡೇ ಹೆಚ್ಚಿನ ಎಲ್ಲಾ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಲಿಪ್ತ ಜಾಲ ಪರಿಕಲ್ಪನೆಯನ್ನು ಪ್ರೋತ್ಸಾಹಿಸುತ್ತಿವೆ.

ಕಳೆದ ತಿಂಗಳಷ್ಟೇ ಅಮೆರಿಕ ಸರ್ಕಾರ ಅಲಿಪ್ತ ಜಾಲ ಪರಿಕಲ್ಪನೆಯನ್ನು ಅಧಿಕೃತ ನೀತಿಯನ್ನಾಗಿಸಿತು. ದುರದೃಷ್ಟವೆಂದರೆ ಅಮೆರಿಕವೂ ಸೇರಿದಂತೆ ವಿಶ್ವಾದ್ಯಂತ ಅಲಿಪ್ತ ಜಾಲ ಪರಿಕಲ್ಪನೆಯನ್ನು ಬೆಂಬಲಿಸುವ ಗೂಗಲ್, ಫೇಸ್‌ಬುಕ್‌ನಂಥ ಇಂಟರ್ನೆಟ್ ದೈತ್ಯರು ಭಾರತದಲ್ಲಿ ಮಾತ್ರ ಲಾಭಕೋರ ಮೊಬೈಲ್ ಸೇವಾದಾತರ ಜೊತೆಗೆ ಸೇರಿಕೊಂಡಿರುವುದು. ಡಿಜಿಟಲ್ ಇಂಡಿಯಾದ ಮೂಲಕ ಹೊಸ ಕ್ರಾಂತಿಯನ್ನು ನಿರೀಕ್ಷಿಸುತ್ತಿರುವ ಪ್ರಧಾನಿ ಈ ತನಕವೂ ಅಲಿಪ್ತ ಜಾಲ ಪರಿಕಲ್ಪನೆಯ ಕುರಿತಂತೆ ಒಂದಕ್ಷರವನ್ನೂ ಮಾತನಾಡಿಲ್ಲ.

ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆಯ ಸಚಿವ ರವಿಶಂಕರ ಪ್ರಸಾದ್ ‘ಇಂಟರ್ನೆಟ್ ಇರುವುದು ಮನುಕುಲಕ್ಕೆ ಹೊರತು ಕೆಲವೇ ಕೆಲವರಿಗಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಯುಪಿಎ ಸರ್ಕಾರ ರೂಪಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ‘66ಎ’ಯನ್ನು ಉಳಿಸುವುದಕ್ಕೆ ಈಗಿನ ಸರ್ಕಾರವೂ ಪ್ರಯತ್ನಿಸಿತ್ತು ಎಂಬುದರ ಹಿನ್ನೆಲೆಯಲ್ಲೇ ಈ ಟ್ವೀಟ್ ಅನ್ನು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಜನಸಾಮಾನ್ಯರಿಗಿದೆ ಎಂಬುದು ವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT