ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೋಡೋ ಹಕ್ಕಿಯ ಜತೆ ಕಣ್ಮರೆಯಾಗಲಿರುವ ರೈತ

Last Updated 1 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಕಡಲು ಮುನಿದಿತ್ತು. ಸಮುದ್ರರಾಜನ ಅಬ್ಬರಕ್ಕೆ ಮಿತಿಯೇ ಇಲ್ಲ. ಭಾರಿ ಸದ್ದಿನೊಂದಿಗೆ ಸ್ಫೋಟಿಸಿದ. ಈ ಸ್ಫೋಟದಿಂದ ಚೆಂಡೊಂದು ಎಸೆಯಲ್ಪಟ್ಟಿತು. ಈ ಭೂಮಿ ಚೆಂಡನ್ನು ದ್ವೀಪವೆನ್ನಬಹುದು. ಮೇಲೆಸೆಯಲ್ಪಟ್ಟ ದ್ವೀಪವು ಕೆಳಗಿಳಿದು ನಿಧಾನವಾಗಿ ಮುಳುಗತೊಡಗಿತು. ಈ ನಿಧಾನ ಮುಳುಗುವಿಕೆಯಿಂದ ಸುತ್ತಲೂ ಮರಳು ಬಂಡೆಗಳ (fringing reef)ಅಂಚೊಂದು ನಿರ್ಮಾಣವಾಯಿತು. ದ್ವೀಪ ಮುಳುಗಿದಂತೆಲ್ಲಾ ಈ ಮರಳ ಬಂಡೆಗಳ ಅಂಚು ಎತ್ತರವಾಗುತ್ತಾ ಬಂತು. ದ್ವೀಪ ಮುಳುಗುವ ಹೊತ್ತಿಗೆ ಸಮುದ್ರದಿಂದ ಬೇರ್ಪಟ್ಟ ನೀರಿನ ಹರವು ಏರ್ಪಟ್ಟಿತು. ಇದನ್ನೇ ಲಗೂನ್ (Lagoon) ಎನ್ನುತ್ತಾರೆ. ಈ ಹರವು ಹವಳಗಳ ಸೃಷ್ಟಿಗೆ ಹೇಳಿಮಾಡಿಸಿದ ತಾಣ. ಈ ಹರವನ್ನು ಪಾಲಿಪ್ಸ್ (Polyps) ಎನ್ನುವ ಜೀವಿಗಳು ಮನೆಯನ್ನಾಗಿ ಮಾಡಿಕೊಂಡವು. ಇವು ೬೮ಡಿಗ್ರಿ ಉಷ್ಣತೆಗಿಂತ ಕಡಿಮೆ ಇರುವ ನೀರಿನಲ್ಲಿ ವಾಸಿಸಲಾರವು. ನೀರಿನ ಆಳ ಕೂಡಾ ೧೨೦ ಅಡಿಗಳಿಗಿಂತ ಹೆಚ್ಚಿಗೆ ಇರಬಾರದು. ಇಂಥ ಶಿಷ್ಟ ಪರಿಸರದಲ್ಲಿ ಹುಟ್ಟಿ ಸತ್ತ ಮಿಲಿಯನ್‌ಗಟ್ಟಳೆ ಪಾಲಿಪ್ಸ್ ಜೀವಿಗಳೇ ಹವಳಗಳಾಗಿ ರೂಪುಗೊಂಡವು. ನಿಧಾನವಾಗಿ ನಿರ್ಮಾಣವಾದ ಮರಳುದಂಡೆಗಳು ಕ್ರಮೇಣ ಸಮುದ್ರ ಪಕ್ಷಿಗಳಿಗೆ ಆಶ್ರಯತಾಣವಾದವು. ಆ ಪಕ್ಷಿಗಳು ಎಲ್ಲಿಂದಲೋ ತಂದು ಎಸೆದ ಬೀಜಗಳಿಂದ ಸಸ್ಯಸಂಕುಲ ಹುಟ್ಟಿತು.

ಮಾರಿಷಸ್‌ನಂಥ ದ್ವೀಪಗಳು ಹೇಗೆ ನಿರ್ಮಾಣವಾಗಿರಬಹುದು ಎಂಬ ವೈಜ್ಞಾನಿಕ ಊಹೆಗಳನ್ನು ಯಾವ ಪುಸ್ತಕದಲ್ಲಿ ಓದಿದೆ ಎಂದು ಮರೆತುಹೋಗಿದೆ. ಮಾರಿಷಸ್‌ನ ಬೀಚುಗಳಲ್ಲಿ ನಡೆಯುತ್ತ ಹೋದಂತೆ ಈ ವೈಜ್ಞಾನಿಕ ವಿಕಾಸವಾದ ನೆನಪಾಗಹತ್ತಿತು. ಕಾವ್ಯ ಮತ್ತು ವಿಜ್ಞಾನಗಳು ಹೀಗೆ ಸಂಜೆ-ಮುಂಜಾನೆಗಳಲ್ಲಿ ಸಮನ್ವಯ ಸಾಧಿಸುತ್ತಿದ್ದವು. ಯಾಕೆಂದರೆ ನಾನು ಪ್ರತಿ ಮುಂಜಾನೆ, ಪ್ರತಿ ಸಂಜೆ ಕಾಲು ದಣಿಯುವಷ್ಟು ದೂರ ಮಾರಿಷಸ್‌ನ ಬೀಚುಗಳಲ್ಲಿ ನಡೆಯುತ್ತಿದ್ದೆ. ಈ ಪುಟಾಣಿ ದ್ವೀಪದ ಜನರು ಭಾಷೆ, ಜಾತಿ, ಧರ್ಮಗಳ ವಿಷಯಕ್ಕಾಗಿ ಕಾದಾಡುವುದಿಲ್ಲ. ಅಲ್ಲಿನ ಸುಂದರವಾದ ಭೌಗೋಳಿಕತೆ ಅವರನ್ನೆಲ್ಲ ಪ್ರಸನ್ನವಾಗಿಟ್ಟಿದೆ. ಗಾತ್ರದಲ್ಲಿ ಬಹುತೇಕ ಬೆಂಗಳೂರು ಜಿಲ್ಲೆಯಷ್ಟು ಚಿಕ್ಕದಿರುವ ಮಾರಿಷಸ್, ಆರ್ಥಿಕತೆಯಲ್ಲಿ ಮಾತ್ರ ಭಾರತದ ಎರಡರಷ್ಟು ಸಾಧಿಸಿದೆ. ಅದೂ ಭಾರತೀಯರೇ ಕೂಡಿ ಕಟ್ಟಿರುವ ದೇಶ. ಭಾರತೀಯರು ಹೊರದೇಶಕ್ಕೆ ಹೋದರೆ ಮಾತ್ರ ಕಷ್ಟಪಟ್ಟು ದುಡಿಯುತ್ತಾರೆ; ಪ್ರಾಮಾಣಿಕರಾಗಿರುತ್ತಾರೆ!

  ಮಾರ್ಕ್‌ಟ್ವೇನ್ ಹೇಳುತ್ತಾನೆ: Mauritius was made first, and the heaven; heaven being copied after  Mauritius! ಸ್ವರ್ಗವನ್ನು ಸೃಷ್ಟಿಸಲು ಮಾರಿಷಸ್‌ಅನ್ನು ನಕಲು ಮಾಡಲಾಯಿತಂತೆ! ಉತ್ಪ್ರೇಕ್ಷೆಯಂತೆ ಕಂಡರೂ ಈ ಬಣ್ಣನೆಗೆ ಪೂರಕವಾದ ಸುಮನೋಹರವಾದ ಬೀಚುಗಳು, ನೀಲಿ ಲಗೂನ್‌ಗಳು, ಮನುಷ್ಯ ಮಾಡಿ, ಕೆತ್ತಿ ನಿಲ್ಲಿಸಿರಬಹುದೆಂಬ ವಿಸ್ಮಯ ಉಂಟುಮಾಡುವ ವಿಚಿತ್ರಾಕೃತಿಯ ಪರ್ವತ ಶ್ರೇಣಿಗಳು, ಕಬ್ಬು ಬೆಳೆದು ನಿಂತ ಎಕರೆಗಟ್ಟಲೆ ಹೊಲಗಳು, ಒಣಗಿಹೋದ ಕಪ್ಪು ನದಿ, ಆರಿಹೋದ ಅಗ್ನಿಕುಂಡಗಳು, ಗರಿಗೆದರಿ ನಿಂತ ನವಿಲುಗಳು, ಮೆದು ಮಾತಿನ ಭಾರತೀಯ ಸಂಜಾತ ಮಾರಿಷಸ್ ಜನರು, ನಿರುದ್ಯೋಗ ಮತ್ತು ಭ್ರಷ್ಟತೆಯಿಂದ ಮುಕ್ತವಾದ ಸಮಾಜ, ಮಾರಿಷಸ್‌ ಅನ್ನು ಸ್ವರ್ಗದ ಸಮೀಪಕ್ಕೆ ಕೊಂಡೊಯ್ಯುತ್ತವೆ. ಸ್ವರ್ಗವೆಂದರೆ ಹಿಂಸೆಯಿಂದ ಅಸಮಾನತೆಯಿಂದ ಮುಕ್ತವಾದ, ಜನ ನೆಮ್ಮದಿಯಿಂದ ಬಾಳುವ ಒಂದು ಸಾಮಾಜಿಕ ವ್ಯವಸ್ಥೆ ಎಂಬುದೇ ಸರಿಯಾದ ಆಧುನಿಕ ವ್ಯಾಖ್ಯಾನ.

ಮಾರಿಷಸ್‌ಗೆ ಮೊದಲು ವಕ್ಕರಿಸಿದವರು ಪೋರ್ಚುಗೀಸರು. ಆನಂತರ ಬಂದ ಡಚ್ಚರು ಈ ದ್ವೀಪಕ್ಕೆ ತಮ್ಮ ರಾಜಕುಮಾರ ಮಾರಿಸ್‌ನ

ಹೆಸರಿಟ್ಟರು. ಕಬ್ಬು ನೆಟ್ಟರು. ಕಬ್ಬು ನೆಟ್ಟವರೆಂದು ಡಚ್ಚರನ್ನು ಮೆಚ್ಚಿಕೊಳ್ಳು­ವಂತೆಯೇ ಅವರನ್ನು ಶಾಶ್ವತವಾಗಿ ನಿಂದಿಸಬೇಕಾದ್ದೂ ಇದೆ. ಇಲ್ಲಿಗೆ ಬಂದ ಡಚ್ ನಾವಿಕರು ಮಾರಿಷಸ್‌ನಲ್ಲಿದ್ದ ರುಚಿಯಾದ ಪಕ್ಷಿ ಡೋಡೋವನ್ನು ತಿನ್ನತೊಡಗಿದರು. ನೋಡಲು ಬಾತುಕೋಳಿಯಂತಿದ್ದ ಮುದ್ದಾದ ಡೋಡೋ, ಡಚ್ ನಾವಿಕರ ನಾಲಗೆಯ ಚಪಲಕ್ಕೆ ನಾಮಾವಶೇಷವಾಯಿತು. ಈ ಡಚ್ಚರು ಡೋಡೋ ತಿಂದು ಮುಗಿಸಿದ್ದು ಮಾತ್ರವಲ್ಲ, ಮಾರಿಷಸ್‌ನ ಸಮೃದ್ಧ ಎಬೊನಿ ಮಹಾರಣ್ಯಗಳನ್ನೂ ನಾಶ ಮಾಡಿದರು. ಅವರ ಅಟ್ಟಹಾಸ ನೂರಾ ಹತ್ತು ವರ್ಷ ನಡೆಯಿತು. ಅನಂತರ ೧೭೧೫ರ ವೇಳೆಗೆ ಬಂದವರು ಫ್ರೆಂಚ್ ಮಹನೀಯರು. Isle de France ಎಂಬ ಹೊಸ ಹೆಸರು ಕೊಟ್ಟರು. ಬೆಳೆದು ನಿಂತಿದ್ದ ಕಬ್ಬನ್ನು ನೋಡಿ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿದರು. ಪೋರ್ಟ್‌ಲೂಯಿಸ್‌ಗೆ ಹೊಸ ಆಕಾರ, ಬಣ್ಣ ಬಂತು. ಎಲ್ಲ ಸಿದ್ಧವಾಗಲಿ ಎಂಬಂತೆ ಕಾಯುತ್ತ ಕೂತಿದ್ದ ಇಂಗ್ಲಿಷರು ತಡಮಾಡದೆ ೧೮೧೦ರಲ್ಲಿ ಧಾವಿಸಿ ಬಂದರು. ಮಾರಿಷಸ್‌ ಅನ್ನು ಆಕ್ರಮಿಸಿದ ಕೂಡಲೇ ಇಂಗ್ಲಿಷರು ಮಾಡಿದ ಮೊದಲ ಕೆಲಸ ಹೆಸರು ಬದಲಿಸಿದ್ದು. Isle de France  ಕಿತ್ತುಹಾಕಿ Mauritius ಎಂದು ಮರುನಾಮಕರಣವಾಯಿತು. ಅಲ್ಲಿಂದ ಆರಂಭವಾದ ಬ್ರಿಟಿಷ್ ಅಧಿಪತ್ಯ ಭಾರತದಂತೆಯೇ ಬಹುಕಾಲ ನಡೆದು ೧೯೬೮ರ ಮಾರ್ಚಿ ೧೨ರಂದು ಮಾರಿಷಸ್ ಸ್ವತಂತ್ರವಾಯಿತು. ಹತ್ತೊಂಬತ್ತನೆ ಶತಮಾನದ ಮಾನವ ಹಕ್ಕುಗಳ ಪ್ರಜ್ಞೆ, ಶೋಷಣೆಯ ವಿರುದ್ಧ ಹೋರಾಟ, ಗಾಂಧಿ ಹುಟ್ಟಿಸಿದ ದೇಶಪ್ರೇಮ, -ಸ್ವಾಭಿಮಾನ ಜಗತ್ತಿನಲ್ಲಿ ಹೊಸ ಸಂಚಲನ ಉಂಟುಮಾಡಿತು. ಬ್ರಿಟಿಷರು ಕಬಳಿಸಿದ್ದ ನೆಲಗಳನ್ನು ವಿಮೋಚನೆಗೊಳಿಸಿ ತಮ್ಮ ಧ್ವಜಗಳನ್ನು ಇಳಿಸಿ ಸುತ್ತಿಕೊಳ್ಳುತ್ತಾ ಹಡಗನ್ನೇ ರಿದರು. ಆದರೆ ಹೋಗುವ ಮುನ್ನ ತಮ್ಮ ನಂತರವೂ ಆಳಲು, ಇಂಗ್ಲಿಷ್ ಭಾಷೆಯನ್ನು, ವೆಸ್ಟ್ ಮಿನಿಸ್ಟರ್ ಮಾದರಿಯನ್ನು, ತಮ್ಮ ಕಾನೂನು ರಾಜ್ಯಾಡಳಿತ ಕ್ರಮವನ್ನು ಸ್ಥಾಪಿಸಿಯೇ ಹೋದರು. ಈಗ ಮಾರಿಷಸ್ ಮಿನಿ ಇಂಗ್ಲೆಂಡ್‌ನಂತೆಯೇ.

  ಮಾರಿಷಸ್‌ನಲ್ಲಿ ಏಳು ಬಣ್ಣದ ಭೂಮಿ ಇದೆ ಎಂದು ತಿಳಿದಾಗ ಅಚ್ಚರಿಯಾಯಿತು. ಪ್ರವಾಸಿಗರನ್ನು ಸೆಳೆಯಲು ಎಂಥದೋ ಗಿಮಿಕ್ ಇರಬೇಕು ಎಂದುಕೊಂಡಿದ್ದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ದೇಶಗಳಲ್ಲಂತೂ ಇಂಥ ಗಿಮಿಕ್‌ಗಳು ಬಹಳ. ಇರುವ ಅಲ್ಪವನ್ನೇ ಭೂಮವನ್ನಾಗಿಸಿ ಪ್ರವಾಸಿಗರನ್ನು ಸೆಳೆಯುತ್ತಾರೆ. ಆದರೆ ನಿಜಕ್ಕೂ ಇಲ್ಲಿ ಏಳು ಬಣ್ಣದ ಭೂಮಿ ಇದೆ. ಮಾರಿಷಸ್ ಸರ್ಕಾರ ಈ ಸಪ್ತವರ್ಣಧರಿತ್ರಿಯನ್ನು ಸಂರಕ್ಷಿಸಿದೆ. ಸಾವಿರಾರು ಜನ ಅದನ್ನು ನೋಡಲು ಬರುತ್ತಾರೆ. ಇವು ಮರಳು ದಿಣ್ಣೆಯಲ್ಲ-, ಗಟ್ಟಿ ಮಣ್ಣಿನ ದಿಣ್ಣೆಗಳು. ಅಗೋಚರನಾದ ಕಲಾವಿದನೊಬ್ಬ, ಅಳಿಸಲಾಗದ ವಿವಿಧ ವರ್ಣಗಳನ್ನು ಮಿಲಿಯಾಂತರ ವರ್ಷಗಳ ಹಿಂದೆಯೇ ರಚಿಸಿದಂತೆ ಭಾಸವಾಗುತ್ತದೆ. ಈ ನೈಸರ್ಗಿಕ ಅಚ್ಚರಿಯಲ್ಲಿ ಸಪ್ತವರ್ಣಗಳಿದ್ದರೂ ನೇರಳೆ ಬಣ್ಣವೇ ಎದ್ದು ಕಾಣುತ್ತದೆ.

ಭೂಮಿಗೆ ಏಳು ಬಣ್ಣವಿದ್ದರೆ ಕಡಲಿಗೆ ನೂರಾರು ಬಣ್ಣಗಳು, ಸೂರ್ಯ ಸಂಚಾರಕ್ಕೆ ಅನುಗುಣವಾಗಿ ಕಡಲು ತಾಳುವ ವರ್ಣವೈವಿಧ್ಯವನ್ನು ನೋಡಿಯೇ ತಿಳಿಯಬೇಕು. ಹಿಂದೂ ಮಹಾಸಾಗರದ ನಡುವೆ ಕುಳಿತ ಮಾರಿಷಸ್ ದ್ವೀಪ ಸುಂದರಿಯು ಈ ಜಲಾಭರಣವನ್ನು ವರ್ಷದ ಎಲ್ಲ ದಿನಗಳಲ್ಲಿಯೂ ತೊಟ್ಟು ಮೆರೆಯುತ್ತಿದ್ದಾಳೆ. ಮುತ್ತು ಹವಳದ ಸರೋವರಗಳೇ ದ್ವೀಪವನ್ನು ಸುತ್ತಿಕೊಂಡ ಉಂಗುರ. ಆಳ ಕಡಲಿನ ಅಬ್ಬರದ ಅಲೆಗಳು ಇಲ್ಲಿಲ್ಲ. ದಂಡೆಯನ್ನು ಸೋಕಲೋ ಬೇಡವೋ ಎಂಬ ಅಳುಕಿನಿಂದ ತಿಳಿತಿಳಿಯಾಗಿ ಸಣ್ಣಗೆ ಹೊರಳುತ್ತಾ, ಮೆಲುದನಿಯಲ್ಲಿ ಜೋಗುಳ ಹಾಡುವ, ನಿಧಾನಗತಿಯ ಅಲೆಗಳ ಭಾವಗೀತೆಯ ಪಲುಕು ಇಲ್ಲಿಯದು. ಅಡಿಯ ನೆಲವೋ ಪಾರದರ್ಶಕ. ನೆಲದ ತಳ ಕಾಣಿಸುವ ಬೆರಗು. ಬರಿಗಣ್ಣಲ್ಲಿ ಮುತ್ತು, ಹವಳ, ವೈವಿಧ್ಯಮಯ ಪಾಚಿ ಹಸಿರು ಹಾಸು, ಶಂಖ... ಈ ವೈಭವದ ಜಲಗರ್ಭದಲ್ಲಿ ಆಟವಾಡುವ ಮೀನುಗಳು ಅಸಂಖ್ಯ. ಕಪ್ಪು ಮತ್ತು ನೀಲಿ ಮರ್ಲಿನ್‌ಗಳು, ಡೊರಾಡೋ, ಶಾರ್ಕ್, ಸೈಲ್‌ಫಿಶ್, ಹಳದಿ ಟೂನಾ, ವಾಹೂ, ಬರ್ರಕುಡಾ, ಬೊನಿಟೊಸ್... ನನಗೊಬ್ಬ ಮೀನುಗಾರ ಸಿಕ್ಕಿದ್ದ. ಅವನು ಬಿಹಾರಿ. ಭೋಜ್‌ಪುರಿ ಬಲ್ಲವ. ಸರ್ಕಾರ ಮೀನುಗಾರರಿಗೆ ಒದಗಿಸಿರುವ ಅನೇಕ ಸೌಲಭ್ಯಗಳನ್ನು ಹೇಳಿದ. ನಮ್ಮ ದೇಶದಲ್ಲಿ ಯಾವ ಸತ್ಪ್ರಜೆಯನ್ನು ಮಾತನಾಡಿಸಿದರೂ ಸರ್ಕಾರದ ವಿರುದ್ಧ ಒಂದು ಆರೋಪದ ಪಟ್ಟಿ ಇರುತ್ತದೆ. ಮಾರಿಷಸ್‌ನಲ್ಲಿ ಜನ ಸರ್ಕಾರದ ಪಾಡಿಗೆ ಸರ್ಕಾರ, ಅವರ ಪಾಡಿಗೆ ಅವರು ಎಂಬಂತಿರುತ್ತಾರೆ.

ನಾನು ದೇಶ ಬಿಡುವ ಮುನ್ನ ಕಬ್ಬು ಬೆಳೆಯುವ ರೈತರನ್ನು ಮತ್ತು ಒಂದು ಸಕ್ಕರೆ ಕಾರ್ಖಾನೆಯನ್ನು ತೋರಿಸಲೇ ಬೇಕು ಎಂದು ನನ್ನ ಡ್ರೈವರ್‌ಗೆ ಹೇಳುತ್ತಲೇ ಇದ್ದೆ. ನನ್ನ ಬಲವಂತಕ್ಕೆ  Bean Planಗೆ ಕರೆದುಕೊಂಡು ಹೋದ. ಅಲ್ಲಿ ಅಚ್ಚರಿ ಕಾದಿತ್ತು. ಹೊಗೆ ಇಲ್ಲ. ಕಬ್ಬಿನ ಸಿಪ್ಪೆ ರಾಶಿ ಇಲ್ಲ. ವಾಸನೆ ಇಲ್ಲ. ಸ್ವಚ್ಛವಾಗಿದ್ದ ಕಾರ್ಖಾನೆ ನೋಡಿ ವಿಸ್ಮಯವಾಯಿತು. ಕೊನೆಗೆ ಗೊತ್ತಾದದ್ದು ಅದು ಮುಂದಿನ ಮಕ್ಕಳಿಗಾಗಿ ಸಕ್ಕರೆಯ ಕಥೆ ಹೇಳುವ Aventutre du sucre ಎಂಬ ಹೆಸರಿನ ಮ್ಯೂಸಿಯಂ. ಮಾರಿಷಸ್‌ನಿಂದ ಸಕ್ಕರೆ ಉದ್ಯಮ ಕ್ರಮೇಣ ಮಾಯವಾಗುತ್ತಿದೆ. ಇನ್ನು ಕೆಲವು ವರ್ಷಗಳಲ್ಲಿ ಅಲ್ಲಿನ ನೆಲದ ಮೇಲೆ ಬಿದಿರಿನಂತೆ ಬೆಳೆದು ನಿಂತ ಕಬ್ಬು ಕಣ್ಮರೆಯಾಗಲಿದೆ. ಜಾಗತೀಕರಣದ ಫಲ. ಈ ಜಾಗತೀಕರಣವೆಂಬ ಶನಿ ಚಿಕ್ಕ ಪುಟ್ಟ ದೇಶಗಳ ಸಂಪತ್ತನ್ನು, ಕ್ರಿಯಾಶೀಲತೆಯನ್ನು ಹೇಗೆ ಸರ್ವನಾಶ ಮಾಡಬಹುದು ಎನ್ನುವುದಕ್ಕೆ ಇದು ಚಿಕ್ಕದಾದ ಉದಾಹರಣೆ. ಜಗತ್ತಿನ ದೊಡ್ಡ ದೊಡ್ಡ ದೇಶಗಳ ದೈತ್ಯ ಉತ್ಪಾದನೆ ಮತ್ತು ಮಾರುಕಟ್ಟೆಯ ಎದುರು ಮಾರಿಷಸ್‌ನಂಥ ಪುಟ್ಟ ದ್ವೀಪದ ಸಕ್ಕರೆ ಕಾರ್ಖಾನೆಗಳು ತತ್ತರಿಸಿ ಹೋಗಿವೆ. ೨೦೦ ಕಾರ್ಖಾನೆಗಳಿದ್ದ ದ್ವೀಪದಲ್ಲಿ ಇದೀಗ ಕೆಲಸ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳು ಕೇವಲ ೧೨! ಒಂದು ಕಾಲಕ್ಕೆ ಮಾರಿಷಸ್ ಉತ್ಪಾದಿಸು­­ತ್ತಿದ್ದ ವಾರ್ಷಿಕ ಸಕ್ಕರೆ ಉತ್ಪನ್ನ ಏಳು ಲಕ್ಷದ ಹದಿನೆಂಟು ಸಾವಿರ ಟನ್‌ಗಳು. ಈಗ ಅದು ಇತಿಹಾಸ. ರೈತನೂ ಇಲ್ಲ. ಕಬ್ಬೂ ಇಲ್ಲ.

ಈ ಸಲ ಮಾರಿಷಸ್‌ಗೆ ಹೋಗಿದ್ದಾಗ ಬಹಳಷ್ಟು ರೈತರು ಟೂರಿಸ್ಟ್ ಗೈಡ್‌ಗಳಾಗಿ ಗ್ರಾಂಡ್ ಬೇ, ಬ್ಲೂ ಬೇಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಾ, ನೀರಾಟ ಆಡಿಸುತ್ತಾ, ಕ್ಯಾಸೆಲಾ ಬರ್ಡ್ ಪಾರ್ಕ್‌ಗೆ ಕರೆದೊಯ್ದು ನವಿಲುಗಳನ್ನು ತೋರಿಸುತ್ತಾ ಟಿಪ್ಸ್‌ಗಳಿಗೆ ಕೈಯೊಡ್ಡುತ್ತಾ ಬದುಕುತ್ತಿರುವುದನ್ನು ಗಮನಿಸಿದೆ. ಕೌಶಲ್ಯ, ದುಡಿಮೆಗಳನ್ನು ಕಸಿದು ನಿಷ್ಕ್ರಿಯತೆ, ಕೃತಕತೆಯನ್ನು ರೈತಾಪಿ ಜನರಿಗೆ ದಯಪಾಲಿಸಿರುವ ಜಾಗತೀಕರಣದ ದುಷ್ಪರಿಣಾಮಕ್ಕೆ ಮಾರಿಷಸ್‌ನ ರೈತ ಸಾಕ್ಷಿಯಾಗಿದ್ದಾನೆ. ಮಾರಿಷಸ್‌ಗೆ ಹೋದವರು ಮರದ ಕೆತ್ತನೆಯ ಡೋಡೋ ಪಕ್ಷಿಯನ್ನು ಕಂಕುಳಲ್ಲಿ ಇರುಕಿ ತರುತ್ತಾರೆ.

ಇದು ಡೋಡೋ ಹಕ್ಕಿಯ ಜತೆಗೆ ರೈತನೂ ಕಣ್ಮರೆಯಾಗಲಿರುವ ದುರಂತದ ಭವಿಷ್ಯಸೂಚಿಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT