ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೆಲ್ಲ ಸರ್ವಜ್ಞರೇ? ಸರಸ್ವತಿಯರೇ ಎಂದ ಆ ಹೆಣ್ಣುಮಗಳಿಗೆ ಏನು ಉತ್ತರ ಕೊಡಲಿ?

Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಅವರು ಸಣ್ಣಗೆ ಅಳುತ್ತಿದ್ದಂತಿತ್ತು. ಮಾತು ನಿಂತು ನಿಂತು ಬರುತ್ತಿತ್ತು. ದನಿ ಮೆದುವಾಗಿದ್ದರೂ ಆಳದಲ್ಲಿ ಸಿಟ್ಟು ಇದ್ದಂತೆ ಇತ್ತು. ಆಕ್ರೋಶ ಇತ್ತು. ಹತಾಶೆ ಇತ್ತು. ಅವರಿಗೆ ಅವಮಾನ ಆದಂತಿತ್ತು. ಅದಕ್ಕೆ ಏನು ಪರಿಹಾರ ಎಂದು ಝಂಕಿಸಿ ಕೇಳುವ ದಾಷ್ಟೀಕ ಇದ್ದಂತಿತ್ತು. ಆದರೆ, ತಮ್ಮ ಹೆಸರು, ಊರು ಬರೆಯಬಾರದು ಎಂದು ಅವರು ಷರತ್ತು ಹಾಕಿದರು. ಅದಕ್ಕೆ ಕಾರಣವನ್ನೂ ಕೊಟ್ಟರು. ಇದು ನನ್ನ ಕಥೆ ಎಂದು ಮಾತ್ರ ನೀವು ತಿಳಿಯಬೇಡಿ. ಇಂಥ ಬೇಕಾದಷ್ಟು ಕಥೆಗಳು ರಾಜ್ಯದ ಮೂಲೆ ಮೂಲೆಯಲ್ಲಿ ನಡೆದಿರಬಹುದು ಎಂದರು. ನಾನು ಹೇಳಿದ್ದನ್ನು ನನ್ನ ಮಾತುಗಳಲ್ಲಿಯೇ ಇಟ್ಟು ಬಿಡಿ. ನಿಮ್ಮದನ್ನು ಏನೂ ಸೇರಿಸಬೇಡಿ ಎಂದು ತಾಕೀತೂ ಮಾಡಿದರು!:

“ನಾನು ಊರಿನ ಹೈಸ್ಕೂಲಿನಲ್ಲಿ ಕೆಲಕಾಲ ಮುಖ್ಯೋಪಾಧ್ಯಾಯಿನಿ ಆಗಿದ್ದ ಸಮಯ ಅದು. ಇದಾಗಿ ಬಹಳ ದಿನಗಳೇನೂ ಆಗಿಲ್ಲ. ಒಂದು ದಿನ ಊರಿನ ಒಬ್ಬ ಪತ್ರಕರ್ತ ನನ್ನ ಬಳಿ ಬಂದ. ಶಾಲೆಯ ಆವರಣದಲ್ಲಿ ಬೆಳೆದ ಕಸ ಕಡ್ಡಿ ತೆಗೆಸುವ ಕೆಲಸ ತನಗೆ ಕೊಡಿಸಬೇಕು ಎಂದ. ಅದನ್ನೇಕೆ ಅವನು ಮಾಡಬೇಕು ಎಂದು ಗೊತ್ತಾಗಲಿಲ್ಲ! ಅದಕ್ಕೆ ಹಣವನ್ನೂ ಕೇಳಿದ. ನಾನು ಒಪ್ಪಲಿಲ್ಲ. ಎರಡು ದಿನ ಬಿಟ್ಟು ನಮ್ಮ ಶಾಲೆಗೆ ಒಂದು ಆರ್‌ಟಿಐ ಅರ್ಜಿ ಬಂತು. ಅದರಲ್ಲಿ ನಾನು ಉತ್ತರ ಕೊಡಲಾಗದ ಪ್ರಶ್ನೆಗಳನ್ನೂ ಅದೇ ಪತ್ರಕರ್ತ ಕೇಳಿದ್ದ. ಶಾಲೆಯ ಮುಖ್ಯಸ್ಥರ ಜತೆ ಚರ್ಚೆ ಮಾಡಿದೆ. ವಕೀಲರ ಜತೆಗೂ ಚರ್ಚೆ ಮಾಡಿದೆ. ಅವರು ಉತ್ತರ ಕೊಡಬೇಕಿಲ್ಲ ಎಂದರು. ವಕೀಲರ ಮೂಲಕವೇ ಉತ್ತರ ಕೊಟ್ಟೆ.

“ಮರುದಿನ ರಾಜ್ಯ ಮಟ್ಟದ ಟಿ.ವಿ ವಾಹಿನಿಯ ವರದಿಗಾರನ ಜತೆಗೆ ಈ ಪತ್ರಕರ್ತ ನನ್ನ ಕೊಠಡಿಗೆ ನುಗ್ಗಿದ. ಮುಖಕ್ಕೆ ಕ್ಯಾಮೆರಾ ಹಿಡಿದು `ಅದೇಕೆ ಹೀಗೆ,' `ಇದೇಕೇ ಹಾಗೆ' ಎಂದೆಲ್ಲ ಪ್ರಶ್ನೆ ಕೇಳಿದ. ಅದಕ್ಕೆಲ್ಲ ಉತ್ತರ ಕೊಟ್ಟೆ. ಸುದ್ದಿ ಪ್ರಕಟವಾದಾಗ ನನ್ನ ಮುಖ ಮಾತ್ರ ಕಾಣುತ್ತಿತ್ತು. ನಾನು ಹೇಳಿದ್ದು ಒಂದೂ ವರದಿಯಾಗಲಿಲ್ಲ. ಪತ್ರಕರ್ತ ತನಗೆ ಬೇಕಾದ ಹಾಗೆ ಸುದ್ದಿಯನ್ನು ಪ್ರಸಾರ ಮಾಡಿದ್ದ.

ವಿಚಿತ್ರ ಎಂದರೆ, ನಮ್ಮ ಊರಿನ ಪತ್ರಕರ್ತ ತಿಂಗಳಿಗೆ ಒಂದು ಪತ್ರಿಕೆ ತರುತ್ತಾನೆ. ಅವನಿಗೆ ತನ್ನ ಹೆಸರನ್ನೂ ಸರಿಯಾಗಿ ಬರೆಯಲು ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆತನಿಗೆ ಒಳ್ಳೆಯ ಮನೆ ಇದೆ, ಕಾರು ಇದೆ. ಹತ್ತು ಬೆರಳಿಗೂ ಉಂಗುರಗಳು ಇವೆ. ಆತ ತನ್ನ ಪತ್ರಿಕೆಯಲ್ಲಿ, ನಮ್ಮ ಶಾಲೆ ಬಗ್ಗೆ ಏನಾದರೂ ಲೋಪಗಳು ಇದ್ದರೆ ಬರೆಯಬಹುದಿತ್ತು. ಆದರೆ, ಅವನ ಜತೆಗೆ ರಾಜ್ಯ ಮಟ್ಟದ ಟಿ.ವಿ ವಾಹಿನಿಯ ವರದಿಗಾರನಿಗೆ ಏನು ಕೆಲಸ? ಅವನೇಕೆ ಬಂದ? ಹೀಗೆ ನೀವು ಜತೆಯಾಗಿ ಸುದ್ದಿ ಮಾಡುತ್ತೀರಾ? ಹಾಗೆ ಮಾಡುವುದಿಲ್ಲ ಎಂದು ನಾನು ಅಂದುಕೊಂಡಿದ್ದೆ!

“ಅವರು ಜತೆಯಾಗಿ ಆದರೂ ಬರಲಿ, ಒಬ್ಬಂಟಿಯಾಗಿಯಾದರೂ ಬರಲಿ. ಏನಾದರೂ ಪ್ರಶ್ನೆ ಕೇಳಲಿ. ನಾನು ಮುಚ್ಚಿ ಇಡುವಂಥದು ಏನೂ ಇರಲಿಲ್ಲ. ಆದರೆ, ನನ್ನ ಕೊಠಡಿಗೆ ಬರುವುದಕ್ಕಿಂತ ಮುಂಚೆ ನನ್ನ ಅನುಮತಿ ಕೇಳುವುದು ಬೇಡವೇ? ಹಾಗೆಯೇ ನುಗ್ಗಿ ಬಿಡಬಹುದೇ? ನನಗೆ ಪ್ರಶ್ನೆ ಕೇಳಿ ಅದಕ್ಕೆ ಉತ್ತರವನ್ನೂ ತೆಗೆದುಕೊಂಡ ಮೇಲೆ ಅದನ್ನು ಪ್ರಸಾರ ಮಾಡುವುದು ಬೇಡವೇ? ಬರೆಯುವುದು ಬೇಡವೇ? ನನ್ನ ಪುಣ್ಯ. ಶಾಲೆಯ ಆಡಳಿತ ಮಂಡಳಿ, ಸಹ ಶಿಕ್ಷಕರು ನನ್ನ ಬೆನ್ನಿಗೆ ನಿಂತರು.

ಇಲ್ಲದಿದ್ದರೆ ಊರಿನಲ್ಲಿ ನನ್ನ ಕಥೆ ಏನು? ಈಗ ನಾನು ಯಾರಿಗೆ ದೂರು ಕೊಡಲಿ? ಕೊಟ್ಟರೆ ಪರಿಹಾರ ಸಿಗುತ್ತದೆಯೇ? ಅದೇ ಪತ್ರಕರ್ತ ನಮ್ಮದೇ ಊರಿನ ಕಾಲೇಜಿನ ಒಬ್ಬ ಹುಡುಗ, ಒಬ್ಬ ಹುಡುಗಿ ಎಲ್ಲಿಯೋ ಮೂಲೆಯಲ್ಲಿ ನಿಂತರೆ ಮೊಬೈಲಿನಲ್ಲಿ ಅದನ್ನು ಚಿತ್ರೀಕರಣ ಮಾಡಿಕೊಳ್ಳುತ್ತಾನೆ. ಕಥೆ ಕಟ್ಟಿ ತನ್ನ ಪತ್ರಿಕೆಯಲ್ಲಿ ಬರೆಯುತ್ತೇನೆ ಎಂದು ಅವರಿಬ್ಬರ ತಂದೆ ತಾಯಿಗೆ ಹೆದರಿಸುತ್ತಾನೆ. ಅವರಿಂದ ದುಡ್ಡು ಕೀಳುತ್ತಾನೆ.

ತನ್ನ ವಾಹನದ ಮೇಲೆ `ಪ್ರೆಸ್' ಎಂದು ಹಾಕಿಕೊಂಡು ತಿರುಗುವ ಅವನಿಗೆ ಯಾವ ಕಾಯ್ದೆಯೂ ಅನ್ವಯಿಸುವುದಿಲ್ಲವೇ? ನಾವು ಸರ್ಕಾರಿ ನೌಕರರು. ತಪ್ಪು ಮಾಡಿದರೆ ನಮ್ಮನ್ನು ನೌಕರಿಯಿಂದ ಅಮಾನತು ಮಾಡುತ್ತಾರೆ. ತಪ್ಪು ಸಾಬೀತಾದರೆ ವಜಾ ಮಾಡುತ್ತಾರೆ. ಅದೆಲ್ಲ ತಡ ಆಗಬಹುದು. ಆದರೆ, ಸಾಕ್ಷ್ಯ ಇದ್ದರೆ ಶಿಕ್ಷೆ ತಪ್ಪಿದ್ದಲ್ಲ. ನೀವು ಪತ್ರಕರ್ತರು ತಪ್ಪು ಮಾಡಿದರೆ ನಿಮಗೆ ಯಾವ ಶಿಕ್ಷೆ? ಸರ್ಕಾರಿ ನೌಕರರು ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದರೆ ದೊಡ್ಡದಾಗಿ ಫೋಟೊ ಹಾಕಿ ಸುದ್ದಿ ಮಾಡುತ್ತೀರಿ. ಪತ್ರಕರ್ತರು ಭ್ರಷ್ಟಾಚಾರ ಮಾಡಿದರೆ? ನಾವು ಎಲ್ಲಿ ಬರೆಯೋಣ?

“ನಮ್ಮ ಊರಿನ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಏನಾದರೂ ಆಗಿ ಸತ್ತರೆ ಪತ್ರಕರ್ತರು ಆಸ್ಪತ್ರೆಗೆ ಹೋಗುತ್ತಾರೆ. ಆ ರೋಗಿ ಏಕೆ ಸತ್ತ ಎಂದು ವೈದ್ಯರನ್ನು ಕೇಳುತ್ತಾರೆ. ಆಸ್ಪತ್ರೆಯ ಸಿಬ್ಬಂದಿ ಏನೇ ಹೇಳಲಿ, ನಿಮ್ಮ ನಿರ್ಲಕ್ಷ್ಯದಿಂದಲೇ ಆತ ಸತ್ತ ಎಂದು ಸುದ್ದಿ ಮಾಡುತ್ತೇವೆ ಎಂದು ಹೆದರಿಸುತ್ತಾರೆ. ಸತ್ತ ರೋಗಿಯ ಕಡೆಯವರು ಬಡವರಾಗಿದ್ದರೆ ಅವರಿಗೆ ಸಿಗುವ ದುಡ್ಡಿನಲ್ಲಿ ಒಂದಿಷ್ಟು ಪಾಲು ಕೊಡಿಸುವ ಆಸೆ ಹುಟ್ಟಿಸುತ್ತಾರೆ. ಸುದ್ದಿಗಾರರು ಕ್ಯಾಮೆರಾ ಹಿಡಿದುಕೊಂಡು ಬಂದೇ ಬಿಡುತ್ತಾರೆ. ಯಾವ ಸುದ್ದಿ ವಾಹಿನಿ, ಯಾವ ಪೇಪರು, ಏನು ಕಥೆ, ಒಂದೂ ಗೊತ್ತಾಗುವುದಿಲ್ಲ. ಆಸ್ಪತ್ರೆಯ ಮುಖ್ಯಸ್ಥರು ಮರ್ಯಾದೆಗೆ ಹೆದರಬೇಕೇ? ಅಥವಾ ಇನ್ನು ಮುಂದೆ ರೋಗಿಗಳು ತಮ್ಮ ಆಸ್ಪತ್ರೆಗೆ ಬರುವುದಿಲ್ಲ ಎಂದು ಅಂಜಬೇಕೇ? 

“ನೀವು ಸಮಾಜದಲ್ಲಿನ ಅಂಕುಡೊಂಕು ತಿದ್ದುವವರು ಎಂದು ನಾನು ಅಂದುಕೊಂಡಿದ್ದೆ. ಯಾವುದೋ ಊರಿನ ಯಾವುದೋ ಪುಡಿ ಪತ್ರಕರ್ತ ಹೀಗೆ ಮಾಡಿದರೂ ರಾಜ್ಯ ಮಟ್ಟದಲ್ಲಿ ನಿಮ್ಮ ಮಾನ ಹೋಗುತ್ತದೆ ಎಂದು ಅಂದುಕೊಂಡವಳು ನಾನು. ನನಗೆ ಆದ ಅವಮಾನ ದೊಡ್ಡದು ಎಂದು ನಿಮಗೇನೂ ಅನಿಸಲಿಕ್ಕಿಲ್ಲ. ನೀವು ಇಂಥ ಕಥೆಗಳನ್ನು ನಿತ್ಯ ನೂರು ಕೇಳುತ್ತ ಇರಬಹುದು. ಅಥವಾ ಕಿವುಡಾಗಿರಬಹುದು. ನನಗೇನೋ ನಿಮ್ಮ ಮುಂದೆ ಹೇಳಬೇಕು ಎಂದು ಅನಿಸಿತು; ಹೇಳಿದೆ.

ಆದರೆ, ನನ್ನ ಹಾಗೆ ಅವಮಾನ ಅನುಭವಿಸಿದವರು ಏನು ಮಾಡಬೇಕು? ಇದಕ್ಕೆ ಏನಾದರೂ ಪರಿಹಾರ ಇದೆ ಅಥವಾ ಇರಬೇಕು ಎಂದು ನಿಮಗೆ ಅನಿಸುವುದಿಲ್ಲವೇ? ನಿಮ್ಮ ವೃತ್ತಿಯ ಸಂಘ ಸಂಸ್ಥೆಗಳು ಇರಬೇಕಲ್ಲ? ಪತ್ರಿಕಾ ದಿನಾಚರಣೆ ಸಂದರ್ಭದಲ್ಲಾದರೂ ಈ ಕುರಿತು ಚರ್ಚೆ ನಡೆಯುತ್ತದೆಯೇ? ನಡೆದಂತೆ ನನಗಂತೂ ಅನಿಸಿಲ್ಲ.

ಯಾವ ಪತ್ರಿಕೆಯಲ್ಲಿಯೂ ಅದನ್ನು ಓದಿದ ನೆನಪೂ ನನಗೆ ಇಲ್ಲ. ನಿಮ್ಮ ವೃತ್ತಿ ಎಷ್ಟು ಕಷ್ಟದ್ದು, ಅದನ್ನು ಮಾಡುತ್ತ ಎಷ್ಟು ಜನ ಸತ್ತರು ಎಂದು ಬರೆದುಕೊಂಡ ಲೇಖನಗಳನ್ನು ಓದಿದ್ದೇನೆ. ಹಾಗೆ ಸತ್ತವರಿಗೆ ನನ್ನ ಎರಡು ಹನಿ ಕಣ್ಣೀರು ಇರಲಿ. ನಮ್ಮ ಊರಿನಲ್ಲಿ ಇರುವಂಥ ಪತ್ರಕರ್ತರ ಸಂಖ್ಯೆ ಕಡಿಮೆ ಏನೂ ಇಲ್ಲವಲ್ಲ? ಅವರ ಬಗ್ಗೆ ಏನು ಮಾಡುವುದು? 

“ಪತ್ರಕರ್ತರಿಗೆ ಒಂದಿಷ್ಟು ಕನಿಷ್ಠ ವಿದ್ಯಾರ್ಹತೆ ಬೇಕು ಎಂದು ನಿಮಗೆ ಅನಿಸುವುದಿಲ್ಲವೇ? ಯಾರು ಬೇಕಾದರೂ ಪತ್ರಕರ್ತರು ಆಗಬಹುದೇ? ಬರೆಯಲು ಬರಲಿ, ಬಿಡಲಿ; ಅವರೂ ಪತ್ರಕರ್ತರು ಆಗಬಹುದೇ? ಮೊನ್ನೆ ಕೇಂದ್ರದ ವಾರ್ತಾ ಸಚಿವ ಮನೀಷ್ ತಿವಾರಿ ಪತ್ರಿಕಾ ಸಂಸ್ಥೆಗಳು ಒಂದು ಪ್ರವೇಶ ಪರೀಕ್ಷೆ ಇಟ್ಟು ಪತ್ರಕರ್ತರನ್ನು ನೇಮಕ ಮಾಡಿಕೊಳ್ಳಬೇಕು ಎಂದರು.

ಪತ್ರಕರ್ತರಿಗೆ ಸನ್ನದು ಇರಬೇಕು ಎಂದೂ ಹೇಳಿದರು. ಅದನ್ನು ನೀವೆಲ್ಲ ಏಕೆ ವಿರೋಧ ಮಾಡಿದಿರಿ? ಹಿಂದೆ ಪತ್ರಿಕಾ ಮಂಡಳಿ ಅಧ್ಯಕ್ಷ ಮಾರ್ಕಂಡೇಯ ಖಟ್ಜು ಅವರು, ಪತ್ರಕರ್ತರಿಗೆ ಕನಿಷ್ಠ ವಿದ್ಯಾರ್ಹತೆ ಇರಬೇಕು ಎಂದಾಗಲೂ ನೀವೆಲ್ಲ ವಿರೋಧ ಮಾಡಿದ್ದಿರಿ. ನೀವೆಲ್ಲ ನಿಮ್ಮನ್ನು ಏನು ಅಂದುಕೊಂಡಿದ್ದೀರಿ? ಸರ್ವಜ್ಞರು ಎಂದೇ? ಬ್ರಹ್ಮರು ಎಂದೇ? ಅಥವಾ ಸರಸ್ವತಿಯರು ಎಂದೇ?

“ಯಾವ ಕೆಲಸಕ್ಕೆ ವಿದ್ಯಾರ್ಹತೆ ಬೇಡ? ಶಿಕ್ಷಕರಿಗೆ ವಿದ್ಯಾರ್ಹತೆ ಬೇಡವೇ? ವಕೀಲರಿಗೆ ಬೇಡವೇ? ವೈದ್ಯರಿಗೆ ಬೇಡವೇ? ಅವರೆಲ್ಲರಿಗಿಂತ ನಿಮ್ಮದು ಹೆಚ್ಚಿನ ಜವಾಬ್ದಾರಿ. ಹಾಗೆಂದು ನೀವೇ ಅಂದುಕೊಂಡಿದ್ದೀರಿ! ನೀವು ಸಮಾಜದ ಲೋಪಗಳನ್ನು ತಿದ್ದುವ ಶಿಕ್ಷಕರು, ಒಳ್ಳೆಯದರ ಪರ ವಾದಿಸುವ ವಕೀಲರು ಮತ್ತು ಕೆಟ್ಟದ್ದನ್ನು ನಿವಾರಿಸಬೇಕು ಎನ್ನುವ ವೈದ್ಯರು. ನಿಮಗೇ ಕನಿಷ್ಠ ವಿದ್ಯಾರ್ಹತೆ ಬೇಡ ಎಂದರೆ ಆ ಎಲ್ಲರ ಕೆಲಸ ಹೇಗೆ ಮಾಡುತ್ತೀರಿ? ವಕೀಲರು ಕೆಟ್ಟದಾಗಿ ನಡೆದುಕೊಂಡರೆ ಅವರ ಸನ್ನದು ರದ್ದಾಗುತ್ತದೆ.

ವೈದ್ಯರಿಗೂ ಅಂಥದೇ ಶಿಕ್ಷೆ ಇದೆ. ನೀವು ತಪ್ಪು ಮಾಡುವುದೇ ಇಲ್ಲ ಎಂದು ನಿಮ್ಮ ಅಭಿಪ್ರಾಯವೇ? ಅದು ಹೇಗೆ ಸಾಧ್ಯ? ಪತ್ರಕರ್ತರು ಟೀಕೆಗೆ ಅಷ್ಟೇಕೆ ಹೆದರುತ್ತಾರೆ? ಇಡೀ ಜಗತ್ತನ್ನೇ ಟೀಕಿಸುವ ನಿಮ್ಮನ್ನು ಯಾರೂ ಏಕೆ ಟೀಕೆ ಮಾಡಬಾರದು? ನಿಮ್ಮ ಕೈಯಲ್ಲಿ ಪೆನ್ನು ಇದೆ. ಪೇಪರು ಇದೆ. ನಮ್ಮ ಕೈಯಲ್ಲಿ ಏನು ಇದೆ? ನಿಮ್ಮನ್ನು ನ್ಯಾಯವಾಗಿಯೇ ಬೈದು ಬರೆದರೆ ನೀವು ಪ್ರಕಟಿಸುತ್ತೀರಾ? ಎಷ್ಟು ಮಂದಿ ಪ್ರಕಟಿಸುತ್ತಾರೆ? ನನ್ನ ಕೊಠಡಿಗೆ ನುಗ್ಗಿ ನನ್ನ ಮುಖಕ್ಕೆ ಕ್ಯಾಮೆರಾ ಹಿಡಿದು ಬಾಯಿಗೆ ಬಂದಂತೆ ಪ್ರಶ್ನೆ ಕೇಳಿ ನಾನು ಕೊಟ್ಟ ಉತ್ತರವನ್ನು ಪ್ರಸಾರ ಮಾಡದ ವರದಿಗಾರರ ವಿರುದ್ಧ ನಾನು ಯಾವ ಕ್ರಮ ತೆಗೆದುಕೊಳ್ಳಲು ಸಾಧ್ಯ?

ನನಗೆ ಎಂಥ ಅವಮಾನ ಆಗಿದೆ ಎಂದು ನಾನು ನಿಮಗೆ ಹೇಗೆ ಹೇಳಲಿ? ನಿಮಗೆ ಇದೆಲ್ಲ ಅರ್ಥ ಆಗುತ್ತದೆಯೇ? ಉದ್ಯಮದಲ್ಲಿ ಹೀಗೆಲ್ಲ ಆಗುವುದು ನಿಮ್ಮ ಪತ್ರಕರ್ತರ ಸಂಘಗಳಿಗೆ ಗೊತ್ತಿಲ್ಲವೇ? ಒಬ್ಬನ ಮೇಲಾದರೂ ಸಂಘ ಕ್ರಮ ತೆಗೆದುಕೊಂಡಿದೆಯೇ? ಯಾವ ವೃತ್ತಿಯೂ ನಿಮ್ಮಷ್ಟು ರಕ್ಷಣಾತ್ಮಕ ಎಂದು ನನಗೆ ಅನಿಸಿಲ್ಲ. ನಿಮಗೆ ಒಂದಿಷ್ಟು ವಿದ್ಯಾರ್ಹತೆ, ಒಂದಿಷ್ಟು ಸನ್ನಡತೆ ಇರಬೇಕು ಎಂದ ಕೂಡಲೇ ಅದನ್ನು ಪತ್ರಿಕಾ ಸ್ವಾತಂತ್ರ್ಯಕ್ಕೆ ಲಗಾಮು ಎಂದು ಏಕೆ ಅಂದುಕೊಳ್ಳುತ್ತೀರಿ?”.......

ದೀರ್ಘ ಮೌನದ ನಂತರ ಅವರು ಫೋನ್ ಸಂಪರ್ಕ ಕಡಿದು ಹಾಕಿದರು. ಅವರಿಗೆ ನಿಜವಾಗಿಯೂ ತುಂಬ ಅವಮಾನ ಆಗಿದ್ದಂತೆ ಅನಿಸಿತು. ಅವರ ಮಾತಿನಲ್ಲಿ ಮತ್ತೆ ಮತ್ತೆ ಅದು ಧ್ವನಿಸುತ್ತಿತ್ತು. ಅವರು ಹೇಳುವುದರಲ್ಲಿ ಒಂದಿಷ್ಟೂ ಸುಳ್ಳು ಇರಲಿಲ್ಲ. ನಡು ನಡುವೆ ನಾನು ಏನಾದರೂ ಹೇಳಲು ಹೋದರೆ, `ಸುಮ್ಮನೆ ಕೇಳಿಸಿಕೊಳ್ಳಿ' ಎಂದು ಗದರಿದರು. ಒಂದು ಸಾರಿ ಅವರಿಗೆ ಎಲ್ಲವನ್ನೂ ಹೇಳಿ ಬಿಡಬೇಕು ಎಂದು ಅನಿಸಿರಬೇಕು. ನಾನೂ ಏನೂ ಮಾತನಾಡದೆ ಸುಮ್ಮನೆ ಕೇಳಿಸಿಕೊಂಡೆ.

ಅವರಿಗೆ ಹೇಗೆ ಸಮಾಧಾನ ಹೇಳಬೇಕು ಎಂದು ನನಗೆ ಗೊತ್ತಿರಲಿಲ್ಲ. ಅವರು ಕೇಳಿದ ಪ್ರಶ್ನೆಗಳಿಗೆ ಲೆಕ್ಕವಿರಲಿಲ್ಲ. ಆ ಹೆಣ್ಣು ಮಗಳು ಬಿಡಿ. ಅವರು ನನಗೆ ಏನೋ ಹೇಳಿದರು. ನಾನು ಏನೋ ಬರೆದೆ. ಮನೀಷ್ ತಿವಾರಿ, ಮಾರ್ಕಂಡೇಯ ಖಟ್ಜು ಅವರು ಹೇಳುವುದನ್ನು ಹೀಗೆಯೇ ಅಲಕ್ಷಿಸಿ ಬಿಡಬಹುದೇ? ಅವರೂ ನಮ್ಮ ವೃತ್ತಿಯ ಮುಂದೆ ಪ್ರಶ್ನೆಗಳನ್ನು ಇಡುತ್ತಿದ್ದಾರೆ. ಅವರಿಗೆ ಈಗ ಕೊಟ್ಟ ಹಾಗೆಯೇ ಎಷ್ಟು ದಿನ ಉತ್ತರ ಕೊಡುವುದು? ನಾವು ಅಷ್ಟು ಪ್ರಶ್ನಾತೀತರೇ? ನನಗಂತೂ ಅರ್ಥ ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT