ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯಲ್ಲಿ ದಾಖಲೆಯ ವಹಿವಾಟು

Last Updated 14 ಆಗಸ್ಟ್ 2016, 20:55 IST
ಅಕ್ಷರ ಗಾತ್ರ

ಷೇರುಪೇಟೆಗಳಲ್ಲಿ ಪ್ರತಿಯೊಂದು ಬದಲಾವಣೆಯೂ ದಾಖಲೆ ನಿರ್ಮಿಸುವತ್ತ ಸಾಗಿದೆ. ಅಂದರೆ ವಿವಿಧ ಸೂಚ್ಯಂಕಗಳು ವಾರ್ಷಿಕ ಗರಿಷ್ಠ ಹಂತ ತಲುಪಿದ್ದು ಪ್ರತಿಯೊಂದು ಏರಿಕೆಯು ದಾಖಲೆಯಾಗಿದೆ. ಸೋಮವಾರ (ಆ 8) ಸಂವೇದಿ ಸೂಚ್ಯಂಕವು 104 ಅಂಶಗಳ ಏರಿಕೆ ಕಂಡಿದ್ದು ಅಂದು ಪೇಟೆಯ ಬಂಡವಾಳ ಮೌಲ್ಯವು ₹109.70 ಲಕ್ಷ ಕೋಟಿಗಳಿಗೆ ತಲುಪಿ ಸಾರ್ವಕಾಲೀನ ದಾಖಲೆ ನಿರ್ಮಿಸಿತ್ತು. 

ಅಂದು ಮುಂಬೈ ಷೇರು ಪೇಟೆಯಲ್ಲಿ ವಾಹನ, ಮೂಲ ಸಾಮಗ್ರಿ,  ಲೋಹ, ಮಧ್ಯಮ ಶ್ರೇಣಿ  ಸೂಚ್ಯಂಕಗಳು ವಾರ್ಷಿಕ ಗರಿಷ್ಠ ತಲುಪಿದರೆ  ಮಂಗಳವಾರ ( ಆ. 9)  ಸಂವೇದಿ ಸೂಚ್ಯಂಕವು 28,289.96 ರಲ್ಲಿ ವಾರ್ಷಿಕ ಗರಿಷ್ಠ  ದಾಖಲೆ ನಿರ್ಮಿಸಿದೆ. 

ಇದರೊಂದಿಗೆ  ಬಿ ಎಸ್ ಇ 100, 200, 500,  ಗರಿಷ್ಠ ಶ್ರೇಣಿ, ಸಿ ಪಿ ಎಸ್ ಇ,  ಉತ್ಪಾದನಾ, ಇಂಧನ, ತೈಲ ಮತ್ತು ಅನಿಲ,  ವಿದ್ಯುತ್‌ ವಲಯದ ಉಪಸೂಚ್ಯಂಕಗಳು ವಾರ್ಷಿಕ ಗರಿಷ್ಠದ ದಾಖಲೆ ತಲುಪಿವೆ. 

ಸೂಚ್ಯಂಕಗಳು ಮತ್ತು ಉಪಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿರುವುದರಿಂದ ಪೇಟೆಯಲ್ಲಿ ಅವಕಾಶಗಳು ಇಲ್ಲವೆಂದಿಲ್ಲ.  ಇಲ್ಲಿ ಅವಕಾಶಗಳು ತ್ವರಿತವಾಗಿ ಮೂಡಿಬರುವುದನ್ನು ಕೆಲವು ಕಂಪೆನಿಗಳಲ್ಲಿ ಕಾಣಬಹುದು.

ಏರಿಳಿತ: ಅಪೋಲೊ ಟೈರ್ ಕಂಪೆನಿಯು ಫಲಿತಾಂಶ ಪ್ರಕಟಿಸಿದ ನಂತರ ಷೇರಿನ ಬೆಲೆಯೂ ₹190 ರವರೆಗೂ ಏರಿಕೆ ಕಂಡಿತು.  ಆದರೆ ಈ ಏರಿಕೆ ಸ್ಥಿರತೆ ಕಾಣದೆ ಮಾರಾಟದ ಒತ್ತಡದಿಂದ ₹167 ರ ಸಮೀಪಕ್ಕೆ ಕುಸಿಯಿತು.

ಕಾಲ್ಗೇಟ್ ಪಾಲ್ಮೊಲೀವ್ ಕಂಪೆನಿಯು ಕಳೆದ ತ್ರೈಮಾಸಿಕದಲ್ಲಿನ   ತನ್ನ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಿದ ದಿನ ಷೇರಿನ ಬೆಲೆಯು ₹1,032 ಕ್ಕೆ ಜಿಗಿಯಿತಾದರೂ ಸ್ಥಿರತೆ ಕಾಣದೆ  ಮಾರಾಟದ ಒತ್ತಡದಿಂದ ₹960 ರ ಸಮೀಪಕ್ಕೆ ಕುಸಿಯಿತು.

ಲುಪಿನ್ ಲಿ. ಕಂಪೆನಿ ಪ್ರಕಟಿಸಿರುವ ಫಲಿತಾಂಶವು  ವಹಿವಾಟುದಾರರನ್ನು ತೃಪ್ತಿ ಪಡಿಸಲು ಅಸಮರ್ಥವಾದ ಕಾರಣ ಷೇರಿನ ಬೆಲೆಯು ₹1,729 ರ ಸಮೀಪದಿಂದ ₹1,540 ರ ಸಮೀಪಕ್ಕೆ ಕುಸಿಯಿತು. ಅಲ್ಲಿಂದ ಮೌಲ್ಯಾಧಾರಿತ ಕೊಳ್ಳುವಿಕೆಯ ಕಾರಣ ₹1,579 ಕ್ಕೆ ಚೇತರಿಸಿಕೊಂಡಿತು.

ವಾರದ ಆರಂಭದ ದಿನ ಸರ್ಕಾರಿ ವಲಯದ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪೆನಿಯ ಷೇರಿನ ಬೆಲೆಯು ₹296 ರಲ್ಲಿತ್ತು. ಪ್ರತಿ ಷೇರಿಗೆ  ₹4 ರ ಲಾಭಾಂಶ ವಿತರಿಸಲಿರುವ ಈ ಕಂಪೆನಿ ಸೆಪ್ಟೆಂಬರ್ 7 ರಂದು ತನ್ನ ವಾರ್ಷಿಕ ಸಾಮಾನ್ಯ ಸಭೆ ಕರೆದಿರುವ ಕಾರ್ಯ ಸೂಚಿ ಹೊರಬಂದ ನಂತರ ಷೇರಿನ ಬೆಲೆ ಕುಸಿಯುತ್ತಾ ವಾರಾಂತ್ಯದಲ್ಲಿ ₹257 ರ ಸಮೀಪವಿತ್ತು. ವಿನಾ ಕಾರಣ ಷೇರಿನ ಬೆಲೆಯು ಕುಸಿದಿರುವುದು  ಸೆ. 7 ರ ಸಮಯಕ್ಕೆ ಚುರುಕಾಗಿಸುವ ಪೀಠಿಕೆ ಕ್ರಮವಾಗಿದೆಯೇ ಎಂಬುದನ್ನು ಕಾದು ನೋಡಬೇಕು.

ಫಾರ್ಮಾ ವಲಯದ ವೊಕಾರ್ಡ್ ಲಿ ಈ ವಾರ ಸುಮಾರು ₹150 ಕ್ಕೂ ಹೆಚ್ಚಿನ ಕುಸಿತ ಕಂಡಿತು. ಅಮೆರಿಕದ ಎಫ್‌ಡಿಎಯ ಎಚ್ಚರಿಕೆಯ ಕಾರಣ ಈ ಕುಸಿತ ಕಂಡಿದೆ.

ಈ ರೀತಿಯ ಎಫ್‌ಡಿಎ ಕ್ರಮವು ಈ ಕಂಪೆನಿಯ ಮೇಲೆ ಆಗಿಂದಾಗ್ಗೆ ನಡೆಯುತ್ತಿದ್ದು, ಸಾಮಾನ್ಯವಾಗಿ ಷೇರಿನ ಬೆಲೆ ಸಾವಿರ ರೂಪಾಯಿಗಳ ಗಡಿ ದಾಟಿದಾಗ ಇಂತಹ ಕ್ರಮ ಜರುಗುತ್ತಿದೆ. ಸ್ವಲ್ಪ ದಿನಗಳ ನಂತರ ಮತ್ತೊಮ್ಮೆ ಪುಟಿದೇಳಬಹುದು.

ಈ ರೀತಿಯ ವಿಭಿನ್ನ, ವೈವಿಧ್ಯಮಯ ಕಾರಣಗಳಿಗೆ ಅಗ್ರಮಾನ್ಯ ಅನೇಕ ಕಂಪೆನಿಗಳ ಷೇರು ಬೆಲೆಗಳು ಭಾರಿ ಏರಿಳಿತ ಪ್ರದರ್ಶಿಸಿದವು. ಅವುಗಳಲ್ಲಿ ಅದಾನಿ ಪೋರ್ಟ್ಸ್, ಕಮ್ಮಿನ್ಸ್, ಮದರ್ ಸನ್ ಸುಮಿ ಸಿಸ್ಟಮ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾಗಳು ಸೇರಿವೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 74 ಅಂಶಗಳ ಏರಿಕೆ ಕಂಡು ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕವನ್ನು 54 ಅಂಶಗಳ ಏರಿಕೆ ಕಾಣುವಂತೆ ಮಾಡಿದೆ.  ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕವು 92 ಅಂಶಗಳ ಇಳಿಕೆ ಕಂಡಿದೆ.

ಖರೀದಿ, ಮಾರಾಟದ ಒತ್ತಡ: ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ಕೊಳ್ಳುವ ಭರಾಟೆ  ಮುಂದುವರೆಸಿ, ₹3,236 ಕೋಟಿ ಮೌಲ್ಯದ ಷೇರು ಖರೀದಿಸಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ಮಾರಾಟದ ಹಾದಿಯಿಂದ ₹3,247 ಕೋಟಿ ಮೌಲ್ಯದ ಷೇರುಗಳಿಂದ ಹೊರಬಂದಿವೆ. ಈ ಎರಡು ವಿಧದ ಸಂಸ್ಥೆಗಳ ಚಟುವಟಿಕೆಯು ಪೇಟೆಯಲ್ಲಿ ಹತ್ತಾರು ಅವಕಾಶಗಳನ್ನು ಸೃಷ್ಟಿಸಿವೆ.  ಪೇಟೆಯ ಬಂಡವಾಳ ಮೌಲ್ಯವು ₹108.78 ಲಕ್ಷ ಕೋಟಿಗೆ ತಲುಪಿದೆ.

ಹೊಸ ಷೇರು: ಆರ್‌ಬಿಎಲ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆಯು ತನ್ನ ಪ್ರತಿ 10 ರೂಪಾಯಿ ಮುಖಬೆಲೆಯ ಷೇರನ್ನು ₹224 ರಿಂದ ₹225 ರ ಅಂತರದಲ್ಲಿ ಆರಂಭಿಕ ಷೇರು, ಸಾರ್ವಜನಿಕವಾಗಿ ವಿತರಣೆ ಮಾಡಲಿದೆ. ಈ ವಿತರಣೆಯು ಆಗಸ್ಟ್ 19 ರಿಂದ 23 ರವರೆಗೂ ತೆರೆದಿರುತ್ತದೆ. ಅರ್ಜಿಯನ್ನು 65 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ. ಶೇ 35 ರಷ್ಟು ಭಾಗವನ್ನು ಸಣ್ಣ ಹೂಡಿಕೆದಾರರಿಗೆ ಮೀಸಲಿಡಲಾಗಿದೆ. 

ಇತ್ತೀಚಿಗೆ ಪ್ರತಿ ಷೇರಿಗೆ ₹219 ರಂತೆ ಸಾರ್ವಜನಿಕ ವಿತರಣೆ ಮಾಡಿದ ದಿಲೀಪ್ ಬ್ಯುಲ್ಡ್ ಕಾನ್ ಲಿ. ಕಂಪೆನಿಯು ಗುರುವಾರ  ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ವಿತರಣೆ ಬೆಲೆಗಿಂತ ಹೆಚ್ಚಿನ ದರದಲ್ಲಿ ವಹಿವಾಟಾಗಿ ಹೂಡಿಕೆದಾರರನ್ನು ಸಂತೋಷ ಪಡಿಸಿದೆ.

ಪ್ರತಿ ಷೇರಿಗೆ ₹268 ರಂತೆ ಸಾರ್ವಜನಿಕ ವಿತರಣೆ ಮಾಡಿದ ಎಸ್ ಪಿ ಅಪೇರಲ್ಸ್‌ ಲಿಮಿಟೆಡ್ ಕಂಪೆನಿಯು 12 ರಿಂದ  ‘ಟಿ’  ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಬೋನಸ್ ಷೇರು: ಸರ್ಕಾರಿ ಸ್ವಾಮ್ಯದ ನವರತ್ನ ಕಂಪೆನಿ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಲಿ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಇದಕ್ಕಾಗಿ ಸೆಪ್ಟೆಂಬರ್ 29 ನಿಗದಿತ ದಿನವಾಗಿದೆ.

ಸರ್ಕಾರಿ ವಲಯದ ಪವರ್ ಫೈನಾನ್ಸ್ ಕಾರ್ಪೊರೇಷನ್ ಕಂಪೆನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಆಗಸ್ಟ್ 29 ನಿಗದಿತ ದಿನವಾಗಿದೆ. ನವಭಾರತ್ ವೆಂಚರ್ಸ್ ಲಿ ಕಂಪೆನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಸೆಪ್ಟೆಂಬರ್ 3 ನಿಗದಿತ ದಿನವಾಗಿದೆ.

ಲಾಭಾಂಶ ವಿಚಾರ: ಬಲರಾಂಪುರ್ ಚಿನ್ನಿ ಪ್ರತಿ ಷೇರಿಗೆ ₹3.50 (ಮು ಬೆ ₹1, ನಿ ದಿ: ಆ.24),  ಹಿಂದೂಜಾ ಗ್ಲೋಬಲ್ ಸೊಲ್ಯೂಷನ್ಸ್ ಪ್ರತಿ ಷೇರಿಗೆ ₹2.50, ಡಿ ಐ ಎಲ್ ಪ್ರತಿ ಷೇರಿಗೆ ₹2.50 (ನಿದಿ : ಸೆ. 21 ),  ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಪ್ರತಿ ಷೇರಿಗೆ ₹5.10 (ನಿ ದಿ : ಆ. 24),

ಇಂಡಿಯನ್ ಕಾರ್ಡ್ ಕ್ಲಾತಿಂಗ್ ಪ್ರತಿ ಷೇರಿಗೆ ₹10 (ನಿದಿ: ಆ.26 ), ಮಣಪುರಂ  ಫೈನಾನ್ಸ್ ಪ್ರತಿ ಷೇರಿಗೆ ₹0.50 ( ಮು ಬೆ ₹2 ),  ಪೇಜ್ ಇಂಡಸ್ಟ್ರೀಸ್  ಪ್ರತಿ ಷೇರಿಗೆ ₹24, ಎಸ್ ಆರ್ ಎಫ್ : ಪ್ರತಿ ಷೇರಿಗೆ ₹6,ಶ್ರೀ ಸಿಮೆಂಟ್ ಪ್ರತಿ ಷೇರಿಗೆ ₹16,  ಸ್ಟೆರ್ಲಿಂಗ್ ಟೂಲ್ಸ್ ಪ್ರತಿ ಷೇರಿಗೆ ₹5.

ಮುಖಬೆಲೆ ಸೀಳಿಕೆ: ಗ್ರಾಸಿಂಕಂಪೆನಿಯು ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ನಿರ್ಧರಿಸಿದೆ. ಜಿಸ್ಕೊ ಅಲ್ಲಾಯ್ಸ್  ಕಂಪೆನಿಯು ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲಿದೆ.

ಪಿಲ್ ಇಟಾಲಿಕ ಲೈಫ್ ಸ್ಟೈಲ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ₹4 ರಿಂದ ₹1 ಕ್ಕೆ ಸೀಳಲು ಈ ತಿಂಗಳ 25 ನಿಗದಿತ ದಿನವಾಗಿದೆ. ಈ ಕಂಪೆನಿಯು ಹಿಂದಿನ ಹೆಸರು ಪಿಕಾಕ್ ಇಂಡಸ್ಟ್ರೀಸ್  ಲಿ. ಎಂದಿತ್ತು.

ವಾರದ ವಿಶೇಷ
ಕೋಲ್ಕತ್ತದ ಆಧುನಿಕ್ ಇಂಡಸ್ಟ್ರೀಸ್ ಲಿ ಕಂಪೆನಿಯು ಲೋಹ ವಲಯದ ಕಂಪೆನಿಯಾಗಿದೆ. ಈ ಕಂಪೆನಿಯು ಶುಕ್ರವಾರ ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. ಲಾಭ ಗಳಿಕೆಯು ತೃಪ್ತಿದಾಯಕವಲ್ಲ. ವಿಚಿತ್ರವೆಂದರೆ ಈ ಕಂಪೆನಿಯ ಷೇರಿನ ಬೆಲೆಯು ಒಂದೇ ವಾರದಲ್ಲಿ ₹140 ರ ಸಮೀಪದಿಂದ ₹201 ರವರೆಗೂ ಏರಿಕೆ ಕಂಡು ಫಲಿತಾಂಶದ  ದಿನ  ಷೇರಿನ ಬೆಲೆಯು ₹142 ಸಮೀಪಕ್ಕೆ ಹಿಂದಿರುಗಿದೆ. 

ಕೇವಲ ಒಂದೇ ವಾರದಲ್ಲಿ ಈ ರೀತಿಯ ವೇಗದ ಏರಿಳಿತ ಕಾಣಲು ಕಂಪೆನಿಯ ಆಡಳಿತ ಮಂಡಳಿಯು 12 ರಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತದೆ ಎನ್ನುವ ಅಂಶ ಬಿಟ್ಟರೆ   ಅಂತಹ ಗಮನಾರ್ಹ ಬೆಳವಣಿಗೆಇಲ್ಲದ್ದಿದ್ದರೂ ಈ ಗಾತ್ರದ ಏರಿಕೆ ಮತ್ತು ಇಳಿಕೆಗಳು ಬಹಳಷ್ಟು ಅಮಾಯಕ ಹೂಡಿಕೆದಾರರನ್ನು ಸೆಳೆದಿವೆ.

ಕೆಲ ಮಧ್ಯಮ ಮತ್ತು ಕಳಪೆ ಷೇರುಗಳಲ್ಲಿ ಹೂಡಿಕೆ ಮಾಡುವಾಗ ಈ ರೀತಿಯ ಬೆಳವಣಿಗೆ ಅನಿರೀಕ್ಷಿತ, ಅನಪೇಕ್ಷಿತವಾಗಿರಲು ಸಾಧ್ಯ ಎಂಬುದು ಸದಾ ನೆನಪಿನಲ್ಲಿಡಬೇಕಾದುದು ಅಗತ್ಯ. ವಿಶೇಷವೆಂದರೆ 12 ರಂದು ಕಂಪೆನಿಯು ಪ್ರಕಟಿಸಿದ ಫಲಿತಾಂಶವು, ಈ ಅವಧಿಯ ವಹಿವಾಟಿನ ಗಾತ್ರ ಉತ್ತಮವಾಗಿದ್ದರೂ ಇತರೆ ಕಾರಣಗಳಿಂದ ಗಳಿಸಿದ ಲಾಭ ಮಾತ್ರ ಮಾರ್ಚ್ ತ್ರೈಮಾಸಿಕದಲ್ಲಿ ಗಳಿಸಿದ ಲಾಭಕ್ಕಿಂತ ಶೇ 10 ಕ್ಕೂ ಕಡಿಮೆ ಇದೆ.  ಫಲಿತಾಂಶ ಪ್ರಕಟಣೆಗೆ ಮುನ್ನಾ ದಿನಗಳಲ್ಲಿ ಪ್ರದರ್ಶಿಸಿದ ಈ ಅಸ್ವಾಭಾವಿಕ ಏರಿಳಿತಗಳು ಹಿತಾಸಕ್ತ ಚಟುವಟಿಕೆಯಾಗಿರಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT