ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಗಳೆಂಬವರು ಮೊರೆವ ಹುಲಿಗಳು...

Last Updated 16 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮನಸ್ಸು ನಿಜವನ್ನೇ ಹೇಳುತ್ತದೆ. ಎಂ.ಕೆ.ಅಯ್ಯಪ್ಪ ಮನಸ್ಸಿನ ಮಾತನ್ನು ಕೇಳಿದ್ದರೆ ಜೈಲು ಪಾಲು ಆಗುತ್ತಿರಲಿಲ್ಲ. ಅವರ ಮುಂದೆ ಉಪ್ಪು ತಿಂದವರು ನೀರು ಕುಡಿದ ಬೇಕಾದಷ್ಟು ನಿದರ್ಶನಗಳು ಇದ್ದುವು. ಅವೆಲ್ಲ ತಾಜಾ ಉದಾಹರಣೆಗಳೇ ಆಗಿದ್ದುವು. ತಾವು ಮಾಡುತ್ತಿರುವುದು ತಪ್ಪು ಎಂದೂ ಅವರಿಗೆ ಅನಿಸುತ್ತಿತ್ತು. ಇಲ್ಲವಾದರೆ ಅವರು ಒಂದೇ ಆದೇಶವನ್ನು ಮತ್ತೆ ಮತ್ತೆ ಬದಲು ಮಾಡುತ್ತಿರಲಿಲ್ಲ. ತಪ್ಪು ಮತ್ತು ಸರಿ ನಡುವೆ ಹೊಯ್ದಾಡುತ್ತಿದ್ದ ಮನಸ್ಸಿನ ನಿಜಕರೆಗೆ ಅವರು ಓಗೊಡಬೇಕಿತ್ತು.

ನಾನು ಅಯ್ಯಪ್ಪ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಅದನ್ನು ಹೇಳಬೇಕಾದುದು ನ್ಯಾಯಾಲಯ. ಆದರೆ, ಅಯ್ಯಪ್ಪ ಸರ್ಕಾರದ ಭೂ ಪರಭಾರೆ ಆರೋಪದ ಮೇಲೆ ಬಂಧಿತರಾದ ಮೊದಲ ಜಿಲ್ಲಾಧಿಕಾರಿ. ಹಿಂದೆ ಯಾವ ಜಿಲ್ಲಾಧಿಕಾರಿ ವಿರುದ್ಧವೂ ಇಂಥ ಆಪಾದನೆ ಬಂದಿರಲಿಲ್ಲ. ಇದು ಒಟ್ಟು ಆಡಳಿತ ವ್ಯವಸ್ಥೆಯ ಬಗ್ಗೆ ಒಳ್ಳೆಯ ಮಾತನ್ನು ಹೇಳುವ ಘಟನೆಯಲ್ಲ.

ಈಗ ಬೇಲಿಯೇ ಎದ್ದು ಹೊಲ ಮೆಯ್ದಂತಾಗಿದೆ. ಅಥವಾ ಹಾಗೆಂದು ಹೇಳುವುದು ಸುಲಭ ಎನ್ನುವಂತಾಗಿದೆ. ಜಿಲ್ಲಾಧಿಕಾರಿಗಳು, ಅವರ ಕೆಳಗಿನ ಕಂದಾಯ ಅಧಿಕಾರಿಗಳು ಸರ್ಕಾರಿ ಜಮೀನನ್ನು ರಕ್ಷಿಸಬೇಕಾದವರು. ಅದೇ ಅವರ ಮುಖ್ಯ ಕೆಲಸ. ಅವರೇ ಅದನ್ನು ಬೇನಾಮಿ ವ್ಯಕ್ತಿಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಿದ ಆರೋಪಕ್ಕೆ ಸಿಲುಕಿ ಬಿಟ್ಟರೆ ಬೇಲಿಯೇ ಎದ್ದು ಹೊಲ ಮೆಯ್ದಂತೆಯೇ ಅಲ್ಲವೇ? ಮತ್ತೆ ಇನ್ನೇನು ಹೇಳಬೇಕು? ಬೆಂಗಳೂರು ಸುತ್ತಮುತ್ತಲಿನ ಭೂಮಿಗೆ ಹೊನ್ನಿನ ಬೆಲೆ ಬಂದು ದಶಕಗಳೇ ಕಳೆದು ಹೋಗಿವೆ.

ಅದನ್ನು ಕಬಳಿಸಿದವರ ವಿರುದ್ಧ ಸರ್ಕಾರದ ಮುಂದೆ ಎರಡು ವರದಿಗಳು ಇವೆ. ಒಂದು ಸದನ ಸಮಿತಿ ಕೊಟ್ಟುದು. ಇನ್ನೊಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿ ದರ್ಜೆಯ ನಿವೃತ್ತ ಅಧಿಕಾರಿ ಕೊಟ್ಟುದು. ಹಿಂದೆ ಕಬಳಿಕೆಯಾದ ಭೂಮಿಯನ್ನೇ ಸರ್ಕಾರ ಇನ್ನೂ ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡಿಲ್ಲ. ಸರ್ಕಾರದ ವರ್ತನೆ ನೋಡಿದರೆ ಈಗ ಉಳಿದಿರುವ ಜಮೀನನ್ನೂ ಯಾರಾದರೂ ಸುಲಭವಾಗಿ ಕಬಳಿಸಿ ಬಿಡಲಿ ಎನ್ನುವಂತೆಯೇ ಇದೆ.

ಸರ್ಕಾರಕ್ಕೇನಾದರೂ ಈ ಜಮೀನನ್ನು ರಕ್ಷಿಸಬೇಕು ಎಂಬ ಇರಾದೆ ಇದ್ದಿದ್ದರೆ ದಕ್ಷರಾದ, ಪ್ರಾಮಾಣಿಕರಾದ ಐಎಎಸ್ ಅಧಿಕಾರಿಗಳನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳಾಗಿ ನೇಮಿಸುತ್ತಿತ್ತು. ಎಂ.ಕೆ.ಅಯ್ಯಪ್ಪ ಸಾರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ಕೆಲಸ ಮಾಡಿದವರು. ಅವರು ಕೆಎಎಸ್‌ಯೇತರ ವರ್ಗದಿಂದ ಐಎಎಸ್‌ಗೆ ಬಡ್ತಿ ಪಡೆದ ಅಧಿಕಾರಿ. ಅವರು ಸಾರಿಗೆ ಇಲಾಖೆಯಲ್ಲಿ ದಕ್ಷರಾಗಿಯೇ ಕೆಲಸ ಮಾಡಿರಬಹುದು.

ಅವರಿಗೆ ಅವರ ದಕ್ಷತೆಯ ಆಧಾರದ ಮೇಲೆಯೇ ಐಎಎಸ್‌ಗೆ ಬಡ್ತಿಯೂ ಸಿಕ್ಕಿರಬಹುದು. ಹಾಗೆಂದು ಅವರನ್ನು ಬೆಂಗಳೂರು ನಗರದಂಥ ಕಠಿಣ ಮತ್ತು ಹೊನ್ನಿನಂಥ ಭೂಮಿ ಇರುವ ಜಿಲ್ಲೆಗೆ ಜಿಲ್ಲಾಧಿಕಾರಿ ಎಂದು ನೇಮಕ ಮಾಡಿಬಿಡಬಹುದೇ? ಕಂದಾಯ ಇಲಾಖೆಯ ಒಳಸುಳಿಗಳನ್ನು ತನ್ನ ಇಡೀ ಸೇವಾವಧಿಯಲ್ಲಿ ತಿಳಿಯದ ಒಬ್ಬ ಅಧಿಕಾರಿಯನ್ನು ನೇಮಕ ಮಾಡುವುದರ ಹಿಂದೆ ಸರ್ಕಾರಕ್ಕೆ ಯಾವ ಒತ್ತಡವಿತ್ತು? ಉದ್ದೇಶವಿತ್ತು? ಅಧಿಕಾರಿಗಳನ್ನು ಸೂಕ್ತ ಸ್ಥಳಗಳಿಗೆ ನಿಯೋಜಿಸುವ ಹೊಣೆ ಹೊತ್ತ ಮುಖ್ಯ ಕಾರ್ಯದರ್ಶಿಗಳಿಗೂ ಈ ಸೂಕ್ಷ್ಮ ಹೊಳೆಯಲಿಲ್ಲವೇ? ಕೆಲವೇ ವರ್ಷಗಳ ಹಿಂದೆ ನೇರ ಐಎಎಸ್

ಅಲ್ಲದ ಅಧಿಕಾರಿಯನ್ನು ದೊಡ್ಡ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ ನೇಮಕ ಮಾಡುತ್ತಿರಲಿಲ್ಲ. ಕಂದಾಯ ಇಲಾಖೆಯವರೇ ಆದ, ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದ ಅಧಿಕಾರಿಗಳಿಗೂ ಇಂಥ ಜಿಲ್ಲೆಗಳ ಉಸ್ತುವಾರಿ ಸಿಗುತ್ತಿರಲಿಲ್ಲ. ಮೊದಲು ಅವರು ಸಣ್ಣಪುಟ್ಟ ಜಿಲ್ಲೆಗಳಲ್ಲಿ, ಐಎಎಸ್ ಅಧಿಕಾರಿಗಳಿಗೆ ಸಹಾಯಕರಾಗಿ ಕೆಲಸ ಮಾಡಿ ಅನುಭವ ಪಡೆಯಬೇಕಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠರ ನೇಮಕದಲ್ಲಿಯೂ ನೇರ ಐಪಿಎಸ್ ಅಧಿಕಾರಿಗಳಿಗೇ ಮೊದಲ ಮನ್ನಣೆ ಸಿಗುತ್ತಿತ್ತು. ಇವೆಲ್ಲ ಆಡಳಿತ ಬಿಗಿಯಾಗಿ ಇರಬೇಕು ಎನ್ನುವ ಜನಪ್ರತಿನಿಧಿಗಳು ತೆಗೆದುಕೊಳ್ಳಬೇಕಾದ ತೀರಾ ಕನಿಷ್ಠ ಕ್ರಮಗಳಾಗಿದ್ದುವು.

ಈಗ ಜನಪ್ರತಿನಿಧಿಗಳಿಗೇ ಆಡಳಿತದಲ್ಲಿ ಬಿಗಿ ಬೇಕಾಗಿಲ್ಲ. ಬೆಂಗಳೂರು ಸುತ್ತಮುತ್ತಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದುಬಂದ ಶಾಸಕರ ಹಿನ್ನೆಲೆಯನ್ನು ಕೊಂಚ ಗಮನಿಸಿ ನೋಡಿ. ಬಹುತೇಕ ಶಾಸಕರು ಭೂ ದಂಧೆಯಲ್ಲಿ ತೊಡಗಿದವರು. ಅವರದು ದೊಡ್ಡ ಲಾಬಿ. ಅವರು ತಮಗೆ ಬೇಕಾದಂತೆ ಕಾನೂನನ್ನು ಬಗ್ಗಿಸಬಲ್ಲವರು. ಬೆಂಗಳೂರು ಉತ್ತರದ ಒಂದು ತಾಲ್ಲೂಕಿನ ತಹಶಿಲ್ದಾರ್‌ವೊಬ್ಬರು ನಲವತ್ತು ಲಕ್ಷ ರೂಪಾಯಿ ಕೊಟ್ಟು ನೇಮಕವಾದರು.

ಅವರು ಅಲ್ಲಿ ಆರು ತಿಂಗಳೂ ಇರಲಿಲ್ಲ. ಐವತ್ತು ಲಕ್ಷ ರೂಪಾಯಿ ಕೊಟ್ಟವರೊಬ್ಬರು ಈಗ ಅಲ್ಲಿ ಬಂದು ಕುಳಿತಿದ್ದಾರೆ. ಮಧ್ಯದಲ್ಲಿ ಒಬ್ಬರು ಇಪ್ಪತ್ತು ಲಕ್ಷ ರೂಪಾಯಿ ಕೊಟ್ಟು, ಕಳೆದುಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಊರಿನ ತಹಶಿಲ್ದಾರ್ ಆಗಿದ್ದಾರೆ.

ತಹಶಿಲ್ದಾರ್ ಹುದ್ದೆಗೇ ಇಷ್ಟು ಲಂಚ ಕೊಟ್ಟು ನೇಮಕ ಆಗುವವರು ಆರು ತಿಂಗಳೂ ಅಲ್ಲಿ ಇರುವುದು ಖಾತ್ರಿ ಆಗಿರದೇ ಇದ್ದರೆ ಅವರು ಎಷ್ಟು ವೇಗವಾಗಿ ಹಣ ಮಾಡಬೇಕು? ಯೋಚನೆ ಮಾಡಲಾದರೂ ಸಾಧ್ಯವೇ? ಅವರು ಬರೀ ಬಡ ವಿದ್ಯಾರ್ಥಿಗಳ ಆದಾಯ ಪ್ರಮಾಣಪತ್ರಕ್ಕೆ ಸಹಿ ಹಾಕುತ್ತ ಇದ್ದರೆ ಆ ಹಣ ವಾಪಸು ಬರುತ್ತದೆಯೇ? ಒಂದೋ ಅವರು ತನ್ನನ್ನು ಅಲ್ಲಿಗೆ ತಂದ ಶಾಸಕ ಹೇಳಿದ ಕಡೆಗೆಲ್ಲ ರುಜು ಮಾಡಬೇಕು. ಇಲ್ಲವಾದರೆ ತನ್ನನ್ನು ಶಾಸಕನಿಗೆ ಪರಿಚಯಿಸಿದ ದಲ್ಲಾಳಿಗೆ ಕಚೇರಿಯ ಮೊಹರನ್ನು ಕೊಟ್ಟು ಕೈಕಟ್ಟಿಕೊಂಡಿರಬೇಕು.

ಎಲ್ಲ ತಹಶಿಲ್ದಾರ್ ಕಚೇರಿಗಳಲ್ಲಿ ಒಂದು ದಾಖಲೆ ಕೊಠಡಿ ಇರುತ್ತದೆ. ಅಲ್ಲಿ ಆಯಾ ತಹಶಿಲ್ ವ್ಯಾಪ್ತಿಯ ಎಲ್ಲ ಭೂದಾಖಲೆಗಳು ಇರುತ್ತವೆ. ಆ ಕೊಠಡಿಗೆ ತಹಶಿಲ್ದಾರ್ ಮತ್ತು ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಬಿಟ್ಟರೆ ಯಾರಿಗೂ ಪ್ರವೇಶ ಇರಬಾರದು. ಇರುವುದಿಲ್ಲ. ಆದರೆ ಬೆಂಗಳೂರು ನಗರ ಜಿಲ್ಲೆಯ ತಹಶಿಲ್ ಕಚೇರಿಗಳಲ್ಲಿ ಈಗ ಆ ಸ್ಥಿತಿ ಇದೆಯೇ? ತಹಶಿಲ್ದಾರರು ಆ ಕೊಠಡಿಯಲ್ಲಿ ಭದ್ರವಾಗಿ ಇರಬೇಕಾದ ದಾಖಲೆಗಳನ್ನೆಲ್ಲ  ತೆಗೆದುಕೊಂಡು ಶಾಸಕರ ಮುಂದೆ ಮಂಡಿಯೂರಿ ಕುಳಿತುಕೊಳ್ಳುತ್ತಿದ್ದಾರೆ. ಅವರು ಹೇಳಿದಂತೆ ಆದೇಶ ಮಾಡುತ್ತಿದ್ದಾರೆ. ತಹಶಿಲ್ದಾರರಿಗಿಂತ ಶಾಸಕರಿಗೆ ಯಾವ ಕಡತದಲ್ಲಿ ಯಾವ ಮಾಹಿತಿ ಇದೆ ಎಂದು ಗೊತ್ತಿದೆ. ಏಕೆಂದರೆ ಮೊದಲೂ ಅವರು ಭೂ ದಂಧೆಯಲ್ಲಿಯೇ ಇದ್ದರು. ಈಗಲೂ ಅದರಲ್ಲಿಯೇ ಇದ್ದಾರೆ.

ರಾಜ್ಯದಲ್ಲಿ 2006ರವರೆಗೆ ನೇರವಾಗಿ ಆಯ್ಕೆಯಾದ ತಹಶಿಲ್ದಾರರೇ ಇರಲಿಲ್ಲ. ಇದ್ದವರೆಲ್ಲ ಪ್ರಮೋಟಿಗಳು. ಅವರಿಗೂ ವಯಸ್ಸಾಗಿತ್ತು. ಆಡಳಿತಕ್ಕೆ ಯೌವನ, ತಿಳಿವಳಿಕೆ ಮತ್ತು ದಕ್ಷತೆ ತರಬೇಕು ಎಂದು ತಹಶಿಲ್ದಾರರ ನೇಮಕಾತಿಗೆ ಸರ್ಕಾರ ನಿರ್ಧರಿಸಿತ್ತು. 1998ರ ತಂಡದ ನೇಮಕಾತಿ ಹಗರಣದಲ್ಲಿ ಸಿಲುಕಿತು. 1999ರ ತಂಡ ನೇಮಕ ಆದುದು 2006ರಲ್ಲಿ. ಇಪ್ಪತ್ತೆರಡು ವರ್ಷಗಳ ನಂತರ ತಹಶಿಲ್ದಾರ್ ಹುದ್ದೆಗೆ ನೇಮಕ ಆದ ತಂಡ ಅದು.

ಅವರೇ ಈಗ ಬೆಂಗಳೂರು ಸುತ್ತಮುತ್ತ ತಹಶಿಲ್ದಾರ್‌ರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಯೌವನ, ತಿಳಿವಳಿಕೆ ಮತ್ತು ದಕ್ಷತೆಯೆಲ್ಲ ಜನಪ್ರತಿನಿಧಿಗಳ ಕಾಲ ಬಳಿ ಡೊಗ್ಗಿ ಸಲಾಮು ಹಾಕುತ್ತಲಿದೆ. ಅಧಿಕಾರಿ ಸರ್ಕಾರದ ಸೇವಕ. ಆತ ಶಾಸಕನ ಅಡಿಯಾಳಲ್ಲ. `ನಾನು ಏನಿದ್ದರೂ ಕಾನೂನಿನ ಪಾಲಕ. ನಿಮ್ಮ ಕಾನೂನುಬಾಹಿರ ಕೆಲಸ ಮಾಡಲು ಅಲ್ಲ' ಎಂದು ಯಾವ ಅಧಿಕಾರಿಯೂ ಹೇಳಿದ ಸುದ್ದಿಯನ್ನು ನಾವು ಈ ಸರ್ಕಾರದಲ್ಲಿ ಕೇಳಿಲ್ಲ.

`ನೀವು ತಪ್ಪು ಮಾಡುತ್ತಿದ್ದೀರಿ. ಸರ್ಕಾರದ ಆಸ್ತಿ ಲೂಟಿಯಾಗುವುದನ್ನು ತಡೆಯಲು ನಿಮ್ಮಿಂದ ಆಗುತ್ತಿಲ್ಲ. ಅದಕ್ಕಾಗಿ ನಿಮ್ಮನ್ನು ಅಮಾನತು ಮಾಡಿದ್ದೇವೆ' ಎಂದು ಸರ್ಕಾರದಲ್ಲಿ ಇದ್ದವರು ಅಧಿಕಾರಿಗಳಿಗೆ ಹೇಳಿದ್ದನ್ನೂ ನಾವು ಕೇಳಿಲ್ಲ. ಇಬ್ಬರೂ ಒಂದೇ ಕೆಲಸಕ್ಕೆ, ಒಂದೇ ಉದ್ದೇಶಕ್ಕೆ ಷಾಮೀಲು ಆದಂತೆ ಕಾಣುತ್ತದೆ.

ಇಲ್ಲವಾದರೆ ಒಬ್ಬ ತಹಶಿಲ್ದಾರ್ ಒಬ್ಬ ಶಾಸಕನಿಗೆ ಬಿಎಂಡಬ್ಲ್ಯು ಕಾರನ್ನು ಕೊಡುಗೆಯಾಗಿ ಕೊಡುತ್ತಿರಲಿಲ್ಲ. ಮಧ್ಯ ಕರ್ನಾಟಕದಲ್ಲಿ ನಡೆದ ತಹಶಿಲ್ದಾರ್‌ವೊಬ್ಬರ ಮದುವೆಗೆ ಒಬ್ಬ ಮಂತ್ರಿ ಮತ್ತು ಒಬ್ಬ ಶಾಸಕ ಹೆಲಿಕಾಪ್ಟರ್‌ನಲ್ಲಿ ಹೋಗಿ ಹಾಜರು ಆಗುತ್ತಿರಲಿಲ್ಲ. ಒಬ್ಬ ತಹಶಿಲ್ದಾರ್‌ರ ಹುಟ್ಟುಹಬ್ಬವನ್ನು ಭೂಗಳ್ಳರೆಲ್ಲ ಸೇರಿಕೊಂಡು ಕಚೇರಿಯಲ್ಲಿಯೇ ಆಚರಿಸಿ ಅವರಿಗೆ ಕೇಕು ತಿನ್ನಿಸುತ್ತಿರಲಿಲ್ಲ!

ನನಗೆ ನನ್ನ ಬಾಲ್ಯದ ದಿನಗಳು ನೆನಪಾಗುತ್ತವೆ. ನಮ್ಮ ಊರಿನ ತಹಶಿಲ್ದಾರ್ ಕಚೇರಿಗೆ ಬರುವಾಗ ಅವರ ಮುಂದೆ ಒಬ್ಬ ಪಟ್ಟೇವಾಲ ನಡೆದುಕೊಂಡು ಬರುತ್ತಿದ್ದ. ಆತ ದಾರಿಯಲ್ಲಿ ಅಡ್ಡ ಬಂದ ಜನರನ್ನು ನೊಣಗಳ ಹಾಗೆ `ಹುಷ್' `ಹುಷ್' ಎಂದು ಆಚೆ ಈಚೆ ಸರಿಸುತ್ತಿದ್ದ. ಜನರೂ ಊರಿನ ದಂಡಾಧಿಕಾರಿಗೆ ಗೌರವ ಕೊಟ್ಟು ದೂರ ಸರಿಯುತ್ತಿದ್ದರು. ಅದು ಬ್ರಿಟಿಷ್ ಆಡಳಿತದ ಪಳೆಯುಳಿಕೆ ಎಂಬುದರಲ್ಲಿ ಅನುಮಾನವಿಲ್ಲ.

ಈಗಲೂ ಹಾಗೆಯೇ ಇರಬೇಕು ಎಂದು ನಾನು ಬಯಸುತ್ತಿಲ್ಲ. ಆದರೆ, ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಜನಪ್ರತಿನಿಧಿಗಳು ಹೆದರುತ್ತಿದ್ದ ಕಾಲ ಅದು. ತಹಶಿಲ್ದಾರ್ ಕಚೇರಿಗೆ ಹೋಗುವ ಧೈರ್ಯವಾದರೂ ಅವರಿಗೆ ಇರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಈಗ ತಹಶಿಲ್ದಾರ್‌ನನ್ನು ವರ್ಗ ಮಾಡುವ ಅಧಿಕಾರವೇ ಶಾಸಕನಿಗೆ ಸಿಕ್ಕಿಬಿಟ್ಟಿದೆ. ಆತ ಶಾಸಕನ ಮಾತು ಕೇಳದಿದ್ದರೆ ಗುಲ್ಬರ್ಗ ಅಥವಾ ರಾಯಚೂರು ಜಿಲ್ಲೆಯ ಯಾವುದಾದರೂ ತಾಲ್ಲೂಕಿಗೆ ವರ್ಗ ಆಗುತ್ತದೆ.

ಅಥವಾ ವರ್ಗ ಮಾಡಿಸುತ್ತೇನೆ ಎಂದು ಶಾಸಕ ಹೆದರಿಸುತ್ತಾನೆ. ಅಲ್ಲಿ ಜನವೇ ಇಲ್ಲ. ಅವೆಲ್ಲ ನೀರು ಸಿಗದ ಜಾಗ ಎಂದು ಈ ಅಧಿಕಾರಿಗಳೂ ತಿಳಿದುಕೊಂಡಿದ್ದಾರೆ. `ಮಾಡಿಸಿದರೆ ಮಾಡಲಿ. ಅಲ್ಲಿಯೇನು ಜನರಿಲ್ಲವೇ? ಕುಡಿಯಲು ನೀರು ಸಿಗುವುದಿಲ್ಲವೇ? ಇರಲು ಮನೆ ಸಿಗುವುದಿಲ್ಲವೇ? ಅಲ್ಲಿಯೇ ನಾನು ಕೆಲಸ ಮಾಡುತ್ತೇನೆ' ಎಂದು ಹೇಳುವಂಥ ಆತ್ಮಗೌರವ ಇಲ್ಲದವರು ಬೆಂಗಳೂರು ಸುತ್ತಮುತ್ತ ತಹಶಿಲ್ದಾರ್‌ಗಳಾಗಿ ಠಳಾಯಿಸುತ್ತಿದ್ದಾರೆ.

ಇಲ್ಲವಾದರೆ ಆರು ತಿಂಗಳ, ಒಂದು ವರ್ಷದ ಅವಧಿಗೆ ನಲವತ್ತು ಐವತ್ತು ಲಕ್ಷ ಕೊಡುವ ಅನಿವಾರ್ಯತೆ ಅವರಿಗೆ ಏನಿರುತ್ತದೆ? ಎಷ್ಟು ವರ್ಷ ದುಡಿದರೆ ಅವರಿಗೆ ಅಷ್ಟು ಸಂಬಳ ಸಿಗುತ್ತದೆ? ಅವರು ಸಂಬಳಕ್ಕೆ ಮಾತ್ರ ದುಡಿಯುತ್ತಿದ್ದರೆ ಬೆಂಗಳೂರು ಉತ್ತರದ ಆ ತಹಶಿಲ್ದಾರ್ ಕಚೇರಿಗೆ ಕಳೆದ ಐದು ವರ್ಷಗಳಲ್ಲಿ ಅಷ್ಟು ಮಂದಿ ತಹಶಿಲ್ದಾರ್‌ಗಳು ಏಕೆ ವರ್ಗವಾಗಿ ಬಂದರು? ಆ ತಹಶಿಲ್ದಾರ್ ಕಚೇರಿಯಲ್ಲಿನ ಫಲಕವೇ ಅದಕ್ಕೆ ಸಾಕ್ಷಿ ಹೇಳುತ್ತಿದೆಯಲ್ಲ?
ಮನಸ್ಸು ನಿಜ ಹೇಳುತ್ತದೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಮನಸ್ಸಿನ ಮಾತು ಕೇಳುವುದನ್ನು ಬಿಟ್ಟು ಬಿಟ್ಟಿದ್ದಾರೆ. ಕೇಳಿದರೆ ತಾನೇ ಸಮಸ್ಯೆ ಎಂದು ಅದರ ಮಾತಿಗೆ ಕಿವುಡಾಗಿದ್ದಾರೆ. ಆಡಳಿತ ಎಂದರೆ ಒಂದು ಅಂತರ ಮತ್ತು ಒಂದು ನಿಕಟತೆ. ಕಾನೂನು ಮುರಿಯುವ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು ಎನ್ನುವ ಸಂದರ್ಭದಲ್ಲಿ ನಿಕಟತೆ ಇಟ್ಟುಕೊಳ್ಳಬೇಕು.

ಈ ಅಂತರವೇ ಈಗ ತೊರೆದು ಹೋಗಿದೆ. ಈಗ ಅಧಿಕಾರ ಎಂಬುದು, ಅದು ಇದ್ದಾಗ ಸಾಧ್ಯವಾದಷ್ಟು ದುಡ್ಡು ಮಾಡಿಕೊಳ್ಳುವ ಒಂದು ಸಾಧನ ಎನ್ನುವಂತೆ ಆಗಿದೆ. ಅರಸನೆಂಬವನು ರಾಕ್ಷಸನಾಗಿದ್ದಾನೆ. ಮಂತ್ರಿಗಳೆಂಬವರು ಮೊರೆವ ಹುಲಿಗಳಾಗಿದ್ದಾರೆ. ಇವರ ಮಧ್ಯೆ ಸಿಲುಕಿರುವ ಸಾಮಾನ್ಯ ಮನುಷ್ಯ ಏನಾಗಿದ್ದಾನೆಂದು ಯಾಕೆ ಕೇಳಬೇಕು? ಕಾಣುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT