ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕರ್ಜಿಯ ಕನಸುಗಳು­

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಆ ಊರಲ್ಲೊಬ್ಬ ಮೂಕರ್ಜಿ ಬರೆಯುವವನಿದ್ದ. ಅವನಿಗೆ ಆದಾಯದ ಯಾವ ಕಸುಬೂ ಇರಲಿಲ್ಲ. ನಮ್ಮ ಕಾಲೇಜಿನಲ್ಲೇ ಪಿಯುಸಿ ತನಕ ಓದಿ ಅಮೋಘವಾಗಿ ಫೇಲಾಗಿದ್ದನಂತೆ. ನಂತರ ಕಾಲೇಜ್ ಪಕ್ಕದಲ್ಲೇ ಹೋಟೆಲ್ ಇಟ್ಟಿದ್ದ. ಕೊನೆಗದನ್ನೂ ಸರಿಯಾಗಿ ಸಂಭಾಳಿಸಲಾರದೆ ಮುಳುಗಡೆ ಮಾಡಿದ್ದ. ಆಮೇಲೆ ಊರಲ್ಲಿ ನಾನಾ ಸಂಘಗಳನ್ನು ಹುಟ್ಟು ಹಾಕಿದ್ದ. ಎಲ್ಲದಕ್ಕೂ ತಾನೇ ಅಧ್ಯಕ್ಷನಾಗಿದ್ದ. ಇವನ ಉಪಟಳ ಸಹಿಸಲಾಗದ ಸದಸ್ಯರೇ ಒಂದಾಗಿ ಇವನ ಕೈ ಕಾಲು ನೆಟ್ಟಗೆ ಮಾಡಿದ್ದರು. ಒಂದಂಕಿ ಲಾಟರಿ, ಮಟ್ಕಾ ನಂಬರ್, ದನಗಳ ವ್ಯಾಪಾರ, ಬಡ್ಡಿ ವ್ಯವಹಾರ, ಮೀನಿನ ವ್ಯಾಪಾರ ಎಲ್ಲಾ ಮಾಡಿ ಸುಸ್ತಾಗಿದ್ದ. ಕೊನೆಗೆ ಸುಲಭವಾದ ಮೂಕರ್ಜಿ ಬರೆಯುವ ದಂಧೆಯ ಕೈ ಹಿಡಿದಿದ್ದ.

ಆ ಊರಿಗೆ ನಾನು ಉಪನ್ಯಾಸಕನಾಗಿ ಹೋಗುವ ಮೊದಲೇ ಸಿಕ್ಕಸಿಕ್ಕವರೆಲ್ಲಾ ಅವನ ಬಗ್ಗೆ ಎಚ್ಚರ ತುಂಬಿದ್ದರು. ಮೊದಲಿಗೆ ಸಾಲ ಕೇಳ್ತಾನೆ ದುಸರ ಮಾತಾಡದೆ ಕೊಟ್ಟು ಬಿಡಿ. ಕೊಟ್ಟ ಮೇಲೆ ಕೊಟ್ಟಿದ್ದೀನಿ ಅನ್ನೋದನ್ನ ಮರೆತುಬಿಡಿ. ನಿಮ್ಮ ಕಾಸು ಯಾವ ಕಾರಣಕ್ಕೂ ವಾಪಸ್ಸು ಬರಲ್ಲ. ಅದೊಂದು ಥರ ಕಪ್ಪ ಕಾಣಿಕೆ ಇದ್ದಂಗೆ. ಅಪ್ಪಿತಪ್ಪಿಯೂ ಅವನ ಹತ್ರ ಸಾಲವನ್ನ ವಾಪಸ್ಸು ಕೇಳಕ್ಕೆ ಹೋಗಬೇಡ್ರಿ. ಅಕಸ್ಮಾತ್ ನೀವೇನಾದ್ರೂ ಕೇಳಿದರೆ ನಿಮ್ಮ ಮೇಲೆ ಗ್ಯಾರಂಟಿ ಮೂಕರ್ಜಿ ಗೀಚುತ್ತಾನೆ. ಆ ಊರಿಗೆ ಹೋಗುವ ಎಲ್ಲಾ ನೌಕರರಿಗೂ ನಾವು ಕೊಡುವ ಉಚಿತ ಸಲಹೆ ಇದೇನೆ. ಯಾವುದಕ್ಕೂ ನೀವು ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದರು.

ಇವನ ಮೂಕರ್ಜಿಯ ಉಪಟಳಕ್ಕೆ ನಡುಗಿ ಹೋಗಿದ್ದ ಕಾಲೇಜಿನವರು ಶಾಲೆಯಲ್ಲಿ ಏನೇ ಸಭೆ ಸಮಾರಂಭ ನಡೆದರೂ ಈತನನ್ನೇ ಕಾಯಂ ಅತಿಥಿಯನ್ನಾಗಿ ನೇಮಿಸಿಕೊಂಡಿದ್ದರು. ಸಿಕ್ಕಾಪಟ್ಟೆ ಗೌರವ ಕೊಡುತ್ತಿದ್ದರು. ಈ ಮುಲಾಜು ಬಳಸಿಕೊಂಡು ಆತ ಕಾಲೇಜಿನ ಎಲ್ಲಾ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದ. ಕಾಲೇಜಿನ ಮಾಲೀಕನಂತೆ ವರ್ತಿಸುತ್ತಿದ್ದ. ನಾವು ಕಾಲೇಜಿಗೆ ಬರುವ, ಹೋಗುವ ಎಲ್ಲಾ ಸಮಯಗಳನ್ನು ದಾಖಲಿಸಿಕೊಳ್ಳುತ್ತಿದ್ದ. ಕಾಲೇಜಿನ ಒಳಗೊಂದು ಹಾಜರಿ ಪುಸ್ತಕವಿದ್ದರೆ ಮತ್ತೊಂದು ಇವನ ಬಳಿ ಇತ್ತು. 

ಕಾಲೇಜಿನ ಒಳಗೆ ನಡೆಯುವ ಎಲ್ಲಾ ಮಾತುಕತೆಗಳು ಸಂಜೆ ಹೊತ್ತಿಗೆ ಅವನಿಗೆ ತಲುಪಿರುತ್ತಿದ್ದವು. ಅದನ್ನೆಲ್ಲಾ ವರದಿ ಮಾಡುವ ಗೂಢಾಚಾರ ವ್ಯಕ್ತಿ ನಮ್ಮಲ್ಲೇ ಉಪನ್ಯಾಸಕರಾಗಿದ್ದರು. ಮೇಲಾಗಿ ಅವರು ಸ್ಥಳೀಯ ನಿವಾಸಿ. ಪಕ್ಕಾ ಸಿ.ಸಿ ಟಿ.ವಿ ಕ್ಯಾಮೆರಾ ಕಣ್ಣುಗಳು. ಎಲ್ಲಾ ಕಡೆ ಬಗ್ಗಿ ನೋಡಿ ಕಾಲೇಜಿನ ಬಿಡಿಬಿಡಿ ಮಾಹಿತಿಗಳನ್ನೂ ಅವರು ಸಂಗ್ರಹಿಸುತ್ತಿದ್ದರು.

ಸಂಜೆಯಾದ ಮೇಲೆ ಇಬ್ಬರೂ ಸೇರಿ ತಮ್ಮ ಕಲಾಪ ನಡೆಸುತ್ತಿದ್ದರು. ಕಾಲೇಜಿನ ಜುಜುಬಿ ವಿಷಯಗಳನ್ನೇ ದೇಶದ ಮುಖ್ಯ ಸಮಸ್ಯೆಗಳೆಂಬಂತೆ ಚರ್ಚಿಸುವಷ್ಟು ತಾಳ್ಮೆ ಅವರಲ್ಲಿತ್ತು.  ಇವರಿಬ್ಬರ ಮುಂಗೈಯರಗಿಳಿ ಸಂಬಂಧದಿಂದ ಕಾಲೇಜಿಗೆ ಆಗಿರುವ ಉಪಕಾರಗಳಿಗಿಂತಲೂ ಉಪಟಳಗಳೇ ಜಾಸ್ತಿಯಾಗಿದ್ದವು. ನಮ್ಮ ಪ್ರಿನ್ಸಿಪಾಲರು ಕರಟಕ ದಮನಕ ಎಂಬ ಗುಪ್ತ ನಾಮಗಳನ್ನು ಇವರಿಗಿಟ್ಟಿದ್ದರು. ಬಾಯಿ ಕೊಳಕಾಗುವಷ್ಟು ಬೈದು, ನೋಡ್ತಾ ಇರ್ರಿ ಆ ನನ್ಮಕ್ಕಳು ರೋಡ್ ಆಕ್ಸಿಡೆಂಟಲ್ಲೇ ಸಾಯೋದು ಎಂದು ಮನಸಾರೆ  ಕಿಡಿಕಾರುತ್ತಿದ್ದರು.

ಯಥಾ ಪ್ರಕಾರ ನಾನು ಆ ಕಾಲೇಜಿಗೆ ಹೋದ ವಾರದಲ್ಲೇ ಮೂಕರ್ಜಿಯವನು ಎರಡು ಸಾವಿರಕ್ಕೆ ಅರ್ಜಿ ಹಾಕಿದ. ವಿಚಿತ್ರ ವಿನಯ ತೋರಿಸಿದ. ಸತ್ಯ, ಪ್ರಾಮಾಣಿಕತೆ, ನಾಡು ನುಡಿಯ ಬಗ್ಗೆ ಉಪ್ಪು ಖಾರ ಹಚ್ಚಿ ಮಾತಾಡಿದ. ಕ್ಷಣ ಕಾಲ ಭಾವುಕನಾದ. ಭಲೇ ಚೆನ್ನಾಗಿ ಪಾಠ ಮಾಡ್ತೀರಂತೆ ಊರಲ್ಲೆಲ್ಲಾ ಸುದ್ದಿ ಅದೆ ಎಂದು ಅಟ್ಟಕ್ಕೇರಿಸಿದ.

ನಾನೂ ಕ್ಷಣಕಾಲ ಅವನಿಟ್ಟ ಏಣಿಯನ್ನು ಹತ್ತಿನಿಂತೆ. ಪಖಾಡ ಆದರೂ ಅದೆಷ್ಟು ಮೃದುಲವಾಗಿ ಮಾತನಾಡುತ್ತಾನಲ್ಲ ಎಂದು ಸೋಜಿಗವಾಯಿತು. ಅವನು ಬಿಟ್ಟ ಪಾತಾಳಗರಡಿ ನನ್ನ ಮನಸ್ಸಿಗೆ ಮುಟ್ಟಿತು. ಅದೇ ಜೋಶಿನಿಲ್ಲಿ ಚಕಚಕ ಎಂದು ಎಣಿಸಿ ಕೊಟ್ಟೆ. ಇಷ್ಟು ಕೊಟ್ಟ ಮೇಲೆ ಇನ್ನಿವನು ನನ್ನ ಮೇಲೆ ಮೂಕರ್ಜಿ ಬರೆಯಲಾರನಲ್ಲವೇ? ಎಂಬ ನಿರಾಳ ಭಾವ ನನ್ನಲ್ಲಿ ಮೂಡಿ ಬಂದಿತು. ಅವನು ಕೊಂಕು ಬುದ್ಧಿಯ ಪಡಪೋಶಿಯಾದರೂ ಅವನ ಧ್ವನಿಯಲ್ಲಿದ್ದ ಶಕ್ತಿ, ಲಯದಲ್ಲಿ ಮಾತಾಡುವ ಗುಣ ನನಗೆ ಹಿಡಿಸಿತು. ಇವನು ಮೇಷ್ಟ್ರಾಗಿದ್ರೆ ಎಷ್ಟು ಚೆನ್ನಾಗಿತ್ತಲ್ಲಾ! ಅದಕ್ಕೆ ಬೇಕಾದ ಸಕಲ ಲಕ್ಷಣಗಳೂ ಇವನಲ್ಲಿವೆ. ಅದು ಬಿಟ್ಟು ಇದ್ಯಾವುದೋ ದಗಲಬಾಜಿ ದಂಧೆ ಹಿಡಿದು ಕೆಟ್ಟು ಕೆರವಾಗಿದ್ದಾನಲ್ಲ ಎಂದು ಬೇಸರವಾಯಿತು.

ನಾನವನ ಬಗ್ಗೆ ಏನಂದುಕೊಂಡೆ ಎನ್ನುವುದು ಬೇರೆ. ಅವನು ಮಾತ್ರ ಕೇಳಿದ ತಕ್ಷಣ ಗರಿಗರಿ ನೋಟು ಬಿಡಿಸಿಕೊಟ್ಟ ನನ್ನನು ಒಳ್ಳೆಯ ಬಕರ ಎಂದು ಖಾತ್ರಿಪಡಿಸಿಕೊಂಡ. ನಾನು ನನ್ನ ಕಂತು ಕೊಟ್ಟಾಯಿತು. ಇನ್ನು ಮೂಕರ್ಜಿ ಕಾಟವಿಲ್ಲದೆ ಹಾಯಾಗಿರಬಹುದು ಎಂದುಕೊಂಡೆ. ಆದರೆ, ಮತ್ತೆ ಎರಡೇ ತಿಂಗಳಿಗೆ ಅವನು ಗಂಟಲ ಗಾಣವಾಗಿ ವಕ್ಕರಿಸಿದ.

ಅವನು ದುಡ್ಡಿನ ಬೇಡಿಕೆ ಇಟ್ಟ ದಿನ ನನ್ನ ಸ್ಥಿತಿಯೂ ಹಾಳೂರ ಸಂತೆಯಂತಿತ್ತು. ಬಿಡಿಗಾಸಿಗೆ ನಾನೂ ಕಣ್ಬಾಯಿ ಬಿಡುತ್ತಿದ್ದೆ. ಇಂಥ ಬರಗಾಲದ ಸಮಯದಲ್ಲಿ ಕಾಸು ಕೇಳಿದ್ದು ನನ್ನನ್ನು ರೇಗಿಸಿತು. ನಾನವತ್ತೇ ಕೊಟ್ಟಿದ್ದೀನಲ್ಲಾ! ಈಗ ಮತ್ತೇನು ನಿಮ್ಮದು? ಎಂದು ಉಗುಳು ನುಂಗಿಕೊಂಡೇ ಗುಟುರು ಹಾಕಿದೆ. ಅದಕ್ಕವನು ಅದೆಲ್ಲಾ ಹಳೇ ಲೆಕ್ಕಾ ಸ್ವಾಮಿ! ಇವತ್ತಿಂದು ವಸತು. ನಮ್ದೂ ಜೀವನ ನಡೀಬೇಕಲ್ಲಾ ಎಂದ. ಎಂದೂ ತೀರಿಸದ ಸಾಲದಂತಿರಲಿ ಎಂದು ನಾನು ಭಾವಿಸಿ ಕೊಟ್ಟಿದ್ದನ್ನವನು  ಟಿಪ್ಸ್ ಎಂದು ಪರಿಗಣಿಸಿದ್ದ. ಜೊತೆಗೆ ಅವನ ಜೀವನ ಸಾಗಿಸುವ ಜವಾಬ್ದಾರಿಯೂ ಸರ್ಕಾರ ನನಗೇ ಒಪ್ಪಿಸಿದೆ ಎನ್ನುವಂತೆ ಭಂಡವಾದದ ಪೆಂಡಿಗಳ ಬಿಚ್ಚಿಡುತ್ತಿದ್ದ.

ನೀವೇನು ನಿಮ್ ದುಡ್ ಕೊಡ್ಬೇಡಿ ಸ್ವಾಮಿ; ಸರ್ಕಾರ ನಿಮ್ಗೆ ಕೊಡೋದ್ರಲ್ಲಿ ನಮ್ಮ ಹುಂಡೀನೂ ಸೇರ್‍ಕೊಂಡಿರುತ್ತೆ. ಅದನ್ನ ಈ ಕಡೆ ತಳ್ಳಿ. ಬೆಣ್ಣೆ ನೀವೇ ಇಟ್ಕಳಿ. ಹುಳಿ ಮಜ್ಜಿಗೆನಾದ್ರೂ ನಮ್ಮ ಕಡೆ ಬಿಸಾಕ್ ಬಾರದೆ ಸ್ವಾಮಿ. ನಾವ್ ಟ್ಯಾಕ್ಸ್ ಕಟ್ಟಿದ್ ಕಣ್ಣೀರೆ ಅಲ್ವೇನ್ರೀ ನಿಮ್ಮ ಸಂಬಳ. ಸಾವಿರಾರು ರೂಪಾಯಿ ಸಂಬಳ ತಗೊಂಡು ಏನ್ರಿ ಮಾಡ್ತೀರಾ? ಹೋಗ್ಲಿ ಅಂಥ ಕಷ್ಟದ ಕೆಲ್ಸನಾದ್ರೂ ಏನ್ ಸ್ವಾಮಿ ಮಾಡ್ತೀರಿ ನೀವು. ಏನ್ ಮಣ್ ಬಗೀತೀರಾ? ಸೌದೆ ಹೊಡಿತೀರಾ? ಗದ್ದೆ ಉಳ್ತೀರಾ? ಇಲ್ಲಾ ತಾನೆ. ಸುಖದ ದುಡಿಮೆ ಕಣ್ರೀ ನಿಮ್ಮದು. ನಿಮಗಿಂತ ಚೆನ್ನಾಗಿ ನಾನೂ ಮಾತಾಡ್ತೀನಿ, ಗೊತ್ತು ತಾನೆ ನಿಮಗೆ? ಅದಕ್ಕೆ ಯಾರಾದ್ರೂ ಸಂಬಳ ಕೊಡ್ತಿದ್ದಾರಾ ನನಗೆ? ನಂದು ದೇಶ ಸೇವೇನೆ ಗೊತ್ತಾ ನಿಮಗೆ? ಎಲ್ಲಾ ಇಲಾಖೇಲಿ ಏನು ಕೆಲಸ ಆಗುತ್ತೆ? ಏನು ಆಗಲ್ಲ ಅಂತ ನಾನು ವಾಚ್ ಮಾಡ್ತ ಇರ್ತೀನಿ. ನಾನು ಇರೋದಕ್ಕೇ ಎಲ್ಲಾ ನೆಟ್ಟಗೆ ಕೆಲಸ ಮಾಡ್ತಿರೋದು! ಇಲ್ಲಾಂದ್ರೆ ಇಷ್ಟೊತ್ತಿಗೆ ಊರಿಗೇ ಬೀಗ ಜಡಿದು ಹೋಗಿರ್ತಿದ್ರು. ಇಷ್ಟು ಅರ್ಥಮಾಡ್ಕೊಳ್ಳೋ ಕಾಮನ್ ಸೆನ್ಸ್  ಕೂಡ ಇಲ್ವಲ್ಲ ಸಾರ್ ನಿಮಗೆ ಎನ್ನುತ್ತಾ ನೇರ ಎದೆಯ ಮೇಲೇ ನಿಂತು ಬಿಟ್ಟನು.

ಎಡವಿದ ಕಡ್ಡಿ ಎತ್ತಿಡದ ದಂಡಪಿಂಡನಿಂದ ನಡು ರಸ್ತೆಯಲ್ಲಿ ನಿಂತು ಬುದ್ಧಿ ಹೇಳಿಸಿಕೊಳ್ಳುವ ಗತಿ ನನಗೆ ಒದಗಿ ಬಂತಲ್ಲ ಎಂದು ಪೇಚಾಡತೊಡಗಿದೆ. ರಸ್ತೆಯ ಅತ್ತ ಇತ್ತ ಕಣ್ಣು ಕೀಲಿಸಿ, ಕಿವಿನೆಟ್ಟ ಜನ ನನ್ನ ಅಸಹಾಯಕ ಸ್ಥಿತಿಯನ್ನು ನೋಡಿ ಸಣ್ಣಗೆ ಎಂಜಾಯ್ ಮಾಡುತ್ತಿದ್ದರು. ಈ ಮುಜುಗರದ ದೃಶ್ಯಕ್ಕೆ ಜನರ ಕಿವಿ ಅಗಲವಾದಷ್ಟೂ ಇವನೊಳಗಿನ ಆತ್ಮವಿಶ್ವಾಸ ಉಬ್ಬುತ್ತಿತ್ತು.

ತಕ್ಷಣ ಹುಷಾರಾದ ನಾನು ನನ್ನ ದನಿಯ ಮಟ್ಟವನ್ನು ಎತ್ತರಿಸಿಕೊಂಡೆ.  ಮರ್ಯಾದೆ ಕಳೀಬ್ಯಾಡಿ, ಸಂಬಳ ಆಗದೇ ಸದ್ಯ ನಾನೇ ಪಾಪರ್‌ಚೀಟಿ ಆಗಿದೀನಿ ಅಂತ ಸಮಧಾನವಾಗೇ ಹೇಳ್ತಿದೀನಿ. ನಿಮಗೇ ಅರ್ಥ ಆಗಲ್ವೇನ್ರಿ. ಮೇಲಾಗಿ ನಾನೇನು ನಿಮ್ಮ ಸಾಲಗಾರನಲ್ಲ. ಲಂಚ ಹೊಡೆಯುವ ಇಲಾಖೆಯೂ ನನ್ನದಲ್ಲ. ನನ್ನ ಪಾಠ, ನನ್ನ ಕರ್ತವ್ಯಗಳ ವಿಷಯದಲ್ಲಿ ನಾನು ಯಾವತ್ತೂ ಕಳ್ಳಾಟ ಆಡಿದವನಲ್ಲ. ನೀವು ನನ್ನ ಮೇಲೆ ಯಾರಿಗೆ ಕಂಪ್ಲೇಂಟ್ ಮಾಡಿದರೂ ನಾನೇನು ಕೇರ್ ಮಾಡುವುದಿಲ್ಲ. ನಿಮ್ಮ ಮೂಕರ್ಜಿಗೆ ನಾನು ಹೆದರಲ್ಲ ಹೋಗ್ರಿ. ಏನೋ ಮಾನವೀಯತೆಯಿಂದ ಕೊಟ್ರೆ ತಲೆಮೇಲೆ ಖಾರ ರುಬ್ಬಕ್ಕೆ ಬರ್ತೀರಲ್ರಿ ಎಂದು ತೊಡೆ ತಟ್ಟಿ ನಿಂತುಬಿಟ್ಟೆ.

ನನ್ನ ಈ ಮಾತಿನಿಂದ ಷಡ್ರಸಗಳನ್ನು ಕುಡಿದವನಂತೆ ಅವನು ಕಹಿಯಾಗಿ ಬಿಟ್ಟ. ನನ್ನ ಬಂಡಾಯ ಅವನು ನಿರೀಕ್ಷಿಸಿರಲಿಲ್ಲ. ಆದರೂ ಅವನೆಂಥ ಜಗತ್ ಕಿಲಾಡಿಯೆಂದರೆ, ತಕ್ಷಣ ಮಾತಿನ ವರಸೆಯನ್ನೇ ಬದಲಾಯಿಸಿ ಬಿಟ್ಟ. ಅದೆಲ್ಲಾ ಇರ್ಲಿ ಬಿಡಿ ಸಾರ್. ರೂಲ್ಸ್ ಪ್ರಕಾರ ಬ್ಯಾಡ. ಅದೇನೋ ಮಾನವೀಯತೆ ಅಂದ್ರಲ್ಲ. ಅದರ ಪ್ರಕಾರನೆ ಬರೋಣ. ಈಗ ನೀವೂ ಕಷ್ಟದಲ್ಲಿದ್ದೀರಿ ಅಂತಿದ್ದೀರಿ.  ನಮ್ಮೂರಲ್ಲಿ ಒಳ್ಳೇ ಫೈನಾನ್ಸಿಯರ್ ಇದಾನೆ. ನಾನ್ ರೆಕ್ಮೆಂಡ್ ಮಾಡಿದ್ರೆ ಇಲ್ಲ ಅನ್ನಲ್ಲ. ಸಾಲ ಕೊಡುಸ್ತೀನಿ ಬನ್ನಿ ಸಾರ್. ಮೊದಲು ಸಾಲ ತಗಳಿ. ಅದರಲ್ಲೇ ನನಗೊಂದಿಷ್ಟು ಬಿಸಾಕಿ ಅಲ್ಲಿಗೆ ಎಲ್ಲಾ ವ್ಯವಹಾರ ಚುಕ್ತಾ ಆಗುತ್ತಲ್ಲ ಎಂದ.

ಅವನ ಭಂಡತನ ನೋಡಿ ನನಗೆ ನಡುಕವೇ ಬಂತು. ನಾನು ಮತ್ತಷ್ಟು ಪಿತ್ಥ ಕೆರಳಿಸಿಕೊಂಡು, ರೀ ಸ್ವಾಮಿ! ದುಡ್ಡು ಕೊಡಕ್ಕಾಗಲ್ಲಾ ಹೋಗ್ರೀ, ಬಡ್ಡಿಗೆ ದುಡ್ ತಗೊಂಡು ನಿಮಗೆ ಪುಗ್ಸಟ್ಟೆ ಕೊಡಕ್ಕೆ ನನ್ಗೇನ್ ತಲೆ ಕೆಟ್ಟಿದೆಯಾ? ಬೇರೆ ಊರಿಂದ ಡ್ಯೂಟಿಗೆ ಬರೋರಿಗೆ ಊರಿನ ಜನರ ಹೆದರಿಕೆ ತೋರ್ಸಿ ಬ್ಲಾಕ್‌ಮೇಲ್ ಮಾಡ್ತಿರೇನ್ರಿ. ಇಸ್ಕೊಂಡ್ ದುಡ್ ವಾಪಾಸ್ ಕೊಡೋ ಜನ್ಮಾನೆ ಅಲ್ವಂತೆ ನಿಮ್ದು. ತಲೆ ಬುಡ ಇಲ್ಲದ ನೀತಿ ಸಿದ್ಧಾಂತ ಬೇರೆ ಬೊಗಳ್ತಿರಲ್ರಿ. ತೊಲಗ್ರಿ ಮೊದ್ಲು ಇಲ್ಲಿಂದ ಎಂದು ಧೈರ್ಯ ತುಂಬಿಕೊಂಡು ಭರ್ಜರಿ ಅವಾಜೊಂದನ್ನು ಹಾಕಿದೆ. 

ಓಹೋ! ಹಿಂಗೋ ವಿಷ್ಯ. ನನಗೇ ಅವಮಾನನಾ? ರೀ ಮಿಸ್ಟರ್ ಇನ್ನೊಂದು ವಾರದಲ್ಲಿ ನಿಮ್ಗೆ ಈ  ಇನ್ಸಲ್ಟ್ ರಿಸಲ್ಟ್ ಸಿಗುತ್ತೆ. ನನ್ನ ಮಾತಿಗೆ ಇಲ್ಲ ಅಂದವರ ಯಾರ ಲೈಫೂ ಇಲ್ಲಿಗಂಟ ನೆಟ್ಟಗೆ ಇರೋದಕ್ಕೆ ಬಿಟ್ಟಿಲ್ಲ ನಾನು. ನೋಡ್ತಾ ಇರಿ ಶಕುನಿ ವಂಶದವನು ನಾನು ಎಂದು ಕಣ್ಣಿನಲ್ಲಿ ಕೆಂಡ ಕಾರುತ್ತಾ ಹೊರಟು ಹೋದ.

ಅವನು ಮೂಕರ್ಜಿಗಳನ್ನು ಬಹಳ ಅಚ್ಚುಕಟ್ಟಾಗಿ ಬರೆಯುತ್ತಿದ್ದ. ಮೂಕರ್ಜಿ ಸಿದ್ಧವಾದ ಮೇಲೆ ಎಲ್ಲಾ ಸರಿಯಿದೆಯೇ ಇಲ್ಲವೇ ತಿಳಿಯಲು ಅವನ ಬಿಝ್ನೆಸ್ ಪಾರ್ಟ್‌ನರ್ ಆಗಿದ್ದ ನಮ್ಮ ಕಾಲೇಜಿನ ಉಪನ್ಯಾಸಕನೊಂದಿಗೆ ಚರ್ಚಿಸುತ್ತಿದ್ದ. ಆ ಸಾಹೇಬರು ಓದಿ ಸಲಹೆ ಸೂಚನೆ ಕೊಡುತ್ತಿದ್ದರು. ಮೂಕರ್ಜಿ ಯಾರ್‍್ಯಾರಿಗೆ ಕಳಿಸಬೇಕು, ಅದರಲ್ಲಿ ಏನೇನು ಆಪಾದನೆಗಳು ತುಂಬಬೇಕು, ಅದರ ರೀತಿ ರಿವಾಜುಗಳು ಹೇಗಿರಬೇಕು ಎಂಬುದೆಲ್ಲಾ ಅಚ್ಚುಕಟ್ಟಾಗಿ ಇಬ್ಬರೂ ಕೂತು ಫಿಕ್ಸ್ ಮಾಡುತ್ತಿದ್ದರು.

ಇವರ ಮೂಕರ್ಜಿಯ ದೆಸೆಯಿಂದ ಆ ಊರಿಗೇ ಕೆಟ್ಟ ಹೆಸರು ಅಂಟಿಕೊಂಡಿತ್ತು. ಅಧಿಕಾರಿಗಳು, ಮೇಷ್ಟ್ರುಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಇವರ ಕಿರುಕುಳದ ದೆಸೆಯಿಂದ ಅನೇಕ ಒಳ್ಳೆಯ ಮೇಷ್ಟ್ರುಗಳು, ಅಧಿಕಾರಿಗಳು ಊರು ತೊರೆದು ಹೊರಟೇ ಹೋದರು. ನಾನು ಅಂದಾಜಿಸಿದಂತೆ ಒಂದು ದಿನ ಮೂಕರ್ಜಿ ಫಲಕೊಟ್ಟಿತ್ತು. ನನಗೆ ಮೇಲಿನವರಿಂದ ಒಂದು ಪ್ರೇಮಪತ್ರ ಬಂದೇ ಬಿಟ್ಟಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT