ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯೋಮಿ ಎಂಐ4 ಸೆಲ್ಫೀಗಿದು ಒಳ್ಳೆ ಫೋನ್

Last Updated 25 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಶಿಯೋಮಿ ಕಂಪೆನಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿದೆ. ಅದು ಈಗಾಗಲೇ ಚೈನಾ ದೇಶದಲ್ಲಿ ಸ್ಯಾಮ್ಸಂಗ್ ಕಂಪೆನಿಯನ್ನು ಹಿಂದಿಕ್ಕಿದೆ. ಅದರ ಕಾರ್ಯವೈಖರಿಯಿಂದಾಗಿ ಅದು ಸಾಧ್ಯವಾಗಿದೆ. ಜಾಹೀರಾತು, ಮಾರಾಟದ ವೆಚ್ಚ, ಡೀಲರುಗಳಿಗೆ ನೀಡುವ ಕಮಿಶನ್ ಇತ್ಯಾದಿ ಯಾವುದೇ ಹೆಚ್ಚಿಗೆ ಖರ್ಚು ಇಲ್ಲದೇ ಶಿಯೋಮಿ ತನ್ನ ಉತ್ಪನ್ನಗಳನ್ನು ನೇರವಾಗಿ ಅಂತರಜಾಲದ ಮೂಲಕ ತನ್ನ ಗ್ರಾಹಕರುಗಳಿಗೆ ತಲುಪಿಸುತ್ತದೆ. ಅದರಿಂದಾಗಿ ಕಡಿಮೆ ಬೆಲೆಗೆ ಉತ್ತಮ ಉತ್ಪನ್ನಗಳನ್ನು ನೀಡಲು ಅದಕ್ಕೆ ಸಾಧ್ಯವಾಗಿದೆ.

ಶಿಯೋಮಿ ಕಂಪೆನಿ ಈ ಸೂತ್ರದನ್ವಯ ಅಂತರಜಾಲದ ಮೂಲಕ ಮಾತ್ರ ಮಾರಾಟ ಮಾಡುತ್ತಿರುವ ತುಂಬ ಜನಪ್ರಿಯ ಫೋನ್‌ಗಳಾದ ಎಂಐ3, ರೆಡ್ಮಿ ನೋಟ್ ಮತ್ತು ರೆಡ್ಮಿ ನೋಟ್ 4ಜಿ ಫೋನ್‌ಗಳ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಈ ವಾರ ನಮ್ಮ ವಿಮರ್ಶಾ ನೋಟ ಶಿಯೋಮಿ ಎಂಐ4 (Xiaomi Mi 4) ಕಡೆಗೆ.

ಗುಣವೈಶಿಷ್ಟ್ಯಗಳು
2.5 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಕ್ವಾಲ್ಕಾಂ ಸ್ನಪ್‌ಡ್ರಾಗನ್ ಪ್ರೊಸೆಸರ್ (801), ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಆಡ್ರೆನೋ 330 ಪ್ರೊಸೆಸರ್, 3 + 16 ಗಿಗಾಬೈಟ್ ಮೆಮೊರಿ, 2ಜಿ/3ಜಿ (ಒಂದು) ಮೈಕ್ರೋಸಿಮ್, ಮೈಕ್ರೋಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲ, ಯುಎಸ್‌ಬಿ ಆನ್-ದ-ಗೋ (USB OTG) ಇದೆ, 5 ಇಂಚು ಗಾತ್ರದ 1080 x 1920 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಪರದೆ, ಗೊರಿಲ್ಲ-3 ಗಾಜು, f/1.8 ಅಪೆರ್ಚರ್‌ನ ಲೆನ್ಸ್ ಉಳ್ಳ 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್‌ನ (f/1.8)  ಇನ್ನೊಂದು ಕ್ಯಾಮೆರಾ, ಕ್ಯಾಮೆರಾಕ್ಕೆ ಎಲ್ಇಡಿ ಫ್ಲಾಶ್, ಪೂರ್ತಿ ಹೈಡೆಫಿನಿಶನ್ (1080p) ಮತ್ತು 4k ವಿಡಿಯೊ ಚಿತ್ರೀಕರಣ, 3080mAh ಬ್ಯಾಟರಿ, 68.5x139.2x8.9 ಮಿ.ಮೀ ಗಾತ್ರ, 149 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಎಫ್ಎಂ ರೇಡಿಯೊ, ಎನ್ಎಫ್‌ಸಿ, ಅವಕೆಂಪು (ಇನ್‌ಫ್ರಾರೆಡ್) ದೂರನಿಯಂತ್ರಕ, ಆಂಡ್ರಾಯಿಡ್ 4.4.4 + ಶಿಯೋಮಿಯವರದೇ ಆದ ಎಂಐಯುಐ 6 (MIUI 6), ಇತ್ಯಾದಿ. ಬೆಲೆ ₹19,999 (flipkart.com).  

ರಚನೆ ಮತ್ತು ವಿನ್ಯಾಸ ನಿಜಕ್ಕೂ ಅತ್ಯುತ್ತಮವಾಗಿದೆ. ಅತಿ ದುಬಾರಿ ಐಫೋನ್ ಅಥವಾ ಸ್ಯಾಮ್ಸಂಗ್ ಆಲ್ಫಾ ಫೋನ್ ಕೈಯಲ್ಲಿ ಹಿಡಿದುಕೊಂಡ ಮಾದರಿಯ ಅನುಭವವೇ ಆಗುತ್ತದೆ. ಫ್ರೇಮ್ ಅನ್ನು ಉಕ್ಕಿನಿಂದ ಮಾಡಲಾಗಿದೆ. ಫೋನಿನ ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎದುರುಗಡೆ ಕೆಳಭಾಗದಲ್ಲಿ ಬಹುತೇಕ ಆಂಡ್ರಾಯಿಡ್ ಫೋನ್‌ಗಳಲ್ಲಿರುವಂತೆ ಮೂರು ಸಾಫ್ಟ್‌ಬಟನ್‌ಗಳಿವೆ. ಫೋನಿನ ಮೇಲ್ಭಾಗದಲ್ಲಿ ಕಿವಿಗೆ ಇಟ್ಟುಕೊಳ್ಳುವ ಭಾಗದಲ್ಲಿ ಮಾತು ಕೇಳಿಸಿಕೊಳ್ಳುವ ಸ್ಪೀಕರ್ ಮತ್ತು ಎದುರುಗಡೆಯ ಕ್ಯಾಮೆರಾ ಇವೆ.

ಈ ಜಾಗವು ಸುಮಾರು 12 ಮಿ.ಮೀ. ಮತ್ತು ಫೋನಿನ ಕೆಳಭಾಗವು ಸುಮಾರು 16 ಮಿ.ಮೀ. ಅಗಲ ಇವೆ. ಫೋನಿನ ಕೆಳಭಾಗದಲ್ಲಿ ಸಂಗೀತ ಆಲಿಸಲು ಸ್ಪೀಕರ್ ಇದೆ. ಇದರ ಗುಣಮಟ್ಟ ಎಂಐ3 ಗಿಂತ ಸ್ವಲ್ಪ ಉತ್ತಮವಾಗಿದೆ. ಫೋನಿನ ಕವಚ ತೆರೆಯಲು ಸಾಧ್ಯವಿಲ್ಲ. ಬ್ಯಾಟರಿ ಬದಲಾಯಿಸಲು ಅಸಾಧ್ಯ. ಸಿಮ್ ಕಾರ್ಡ್ ಹಾಕಲು ಒಂದು ಟ್ರೇ ಇದೆ. ಅದನ್ನು ಹೊರ ತೆಗೆಯಲು ಒಂದು ಕಿಂಡಿಯಲ್ಲಿ ಚಿಕ್ಕ ಪಿನ್ ತೂರಿಸಿ ತಳ್ಳಬೇಕು. ಈ ಪಿನ್ ಅನ್ನು ಅವರೇ ನೀಡಿದ್ದಾರೆ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಫೋನ್‌ಗಳಲ್ಲಿ ಇದೇ ನಮೂನೆಯ ವಿನ್ಯಾಸ ಇದೆ.

ಫೋನ್ ಕೆಲಸ ಮಾಡುವ ವೇಗ ಅತ್ಯುತ್ತಮವಾಗಿದ್ದು ತೃಪ್ತಿದಾಯಕವಾಗಿದೆ. ನಾಲ್ಕು ಹೃದಯಗಳ ಅತಿ ವೇಗದ ಪ್ರೊಸೆಸರ್, ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಪ್ರೊಸೆಸರ್‌ಗಳು ಇರುವುದು ಹಾಗೂ 3 ಗಿಗಾಬೈಟ್ ಮೆಮೊರಿ ಇವೆಲ್ಲ ಈ ವೇಗಕ್ಕೆ ಕಾರಣ. ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಈ ಫೋನಿನಲ್ಲಿ ಯಾವುದೇ ಅಡೆತಡೆಯಿಲ್ಲದೆ ಆಡಬಹುದು. ಹೈಡೆಫಿನಿಶನ್ ಮಾತ್ರವಲ್ಲ ಅಲ್ಟ್ರಾ ಹೈಡೆಫಿನಿಶನ್ (4k) ವಿಡಿಯೊಗಳನ್ನೂ ವೀಕ್ಷಿಸಬಹುದು. ಆ ಅನುಭವವೂ ಅತ್ಯುತ್ತಮವಾಗಿದೆ.

13 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್‌ನ ಎದುರುಗಡೆಯ ಕ್ಯಾಮೆರಾ ಎರಡೂ ಚೆನ್ನಾಗಿವೆ. f/1.8 ಲೆನ್ಸ್ ಇರುವುದರಿಂದ ಉತ್ತಮ ಫೋಟೊ ಮೂಡಿಬರುತ್ತದೆ. ವಿಡಿಯೊ ಚಿತ್ರೀಕರಣವೂ ಚೆನ್ನಾಗಿದೆ. ಇದರಲ್ಲಿರುವ 8 ಮೆಗಾಪಿಕ್ಸೆಲ್‌ನ ಸ್ವಂತೀ (ಸೆಲ್ಫೀ) ಕ್ಯಾಮೆರಾವನ್ನು ಬಳಸಿ ನಿಮ್ಮ ಫೋಟೊ ನೀವೇ ತೆಗೆಯುವಾಗ ಒಂದು ಸರಳ ಸೌಲಭ್ಯ ನೀಡಿದ್ದಾರೆ. ಸಾಮಾನ್ಯವಾಗಿ ಸ್ವಂತೀ ತೆಗೆಯುವಾಗ ಬೆರಳಿನಲ್ಲಿ ಕ್ಲಿಕ್ ಮಾಡಬೇಕಾಗಿರುವುದರಿಂದ ಚಿತ್ರ ಸರಿಯಾಗಿ ಮೂಡಿಬರುವುದು ಸ್ವಲ್ಪ ಕಷ್ಟ.

ಇದರಲ್ಲಿ ಇಂತಹ ಸಂದರ್ಭಕ್ಕೆಂದೇ ಕ್ಯಾಮೆರಾ 3, 2, 1 ಎಂದು ಅಂಕಿಗಳನ್ನು ತೋರಿಸಿ ನಂತರ ಫೋಟೊ ತೆಗೆಯುತ್ತದೆ. ಬೆರಳಿನಲ್ಲಿ ಒತ್ತಿದ ಕೂಡಲೇ ಫೋಟೊ ತೆಗೆಯುವುದಿಲ್ಲ. ಇದು ಉತ್ತಮ ಸೌಲಭ್ಯ. ಇದರ ಆಡಿಯೊ ಇಂಜಿನ್ ಚೆನ್ನಾಗಿದೆ. ಇಯರ್‌ಫೋನ್ ನೀಡಿಲ್ಲ. ಉತ್ತಮ ಇಯರ್‌ಫೋನ್ ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು.

ಇದರಲ್ಲಿ ಅವಕೆಂಪು ದೂರನಿಯಂತ್ರಕ ಇದೆ. ಗೂಗ್ಲ್ ಪ್ಲೇ ಸ್ಟೋರ್‌ನಿಂದ ಸೂಕ್ತ ಕಿರುತಂತ್ರಾಂಶ (ಆಪ್) ಹಾಕಿಕೊಂಡರೆ ನಿಮ್ಮ ಮನೆಯಲ್ಲಿರುವ ಟಿ.ವಿ., ಡಿ.ಟಿ.ಎಚ್., ಇತ್ಯಾದಿ ಸಾಧನಗಳನ್ನು ಇದರ ಮೂಲಕ ನಿಯಂತ್ರಿಸಬಹುದು.  ಇದಕ್ಕೆ ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕಿ ಮೆಮೊರಿ ಜಾಸ್ತಿ ಮಾಡಲು ಆಗುವುದಿಲ್ಲ ಎಂಬುದು ಇದರ ಪ್ರಮುಖ ಕೊರತೆಗಳಲ್ಲೊಂದು. ಆದರೆ ಯುಎಸ್‌ಬಿ ಆನ್ ದ-ಗೋ ಇರುವುದರಿಂದ ಹೊರಗಡೆಯಿಂದ ಯುಎಸ್‌ಬಿ ಡ್ರೈವ್ ಜೋಡಿಸಬಹುದು.

ಭಾರತದಲ್ಲಿ 4ಜಿ ಸೌಲಭ್ಯದ ಎಂಐ4 ಇನ್ನೂ ಲಭ್ಯವಿಲ್ಲ. ಇಷ್ಟೆಲ್ಲ ಅತ್ಯಾಧುನಿಕವಾದ ಫೋನಿಗೆ 16 ಗಿಗಾಬೈಟ್ ಮೆಮೊರಿ ಕಡಿಮೆ ಆಯಿತು ಎಂದು ನನ್ನ ಭಾವನೆ. ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಕನ್ನಡವನ್ನು ಎಲ್ಲ ಕಡೆ ಬಳಸಬಹುದು. ಶಿಯೋಮಿ ಎಂಐ3 ಸುಮಾರು ₹14 ಸಾವಿರಕ್ಕೆ ಮಾರಾಟ ಆಗುತ್ತಿತ್ತು. ಅದಕ್ಕೆ ಹೋಲಿಸಿದರೆ ಇದಕ್ಕೆ ನಿಗದಿ ಮಾಡಿರುವ ₹20 ಸಾವಿರ ಬೆಲೆ ಸ್ವಲ್ಪ ಜಾಸ್ತಿ ಆಯಿತು ಎಂಬುದು ನನ್ನ ಅಭಿಪ್ರಾಯ.

ವಾರದ ಆಪ್
ಸಯನ್ಸ್ ಡೈಲಿ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನ ಆಗುತ್ತಿರುವ ಬೆಳವಣಿಗೆ, ಸಂಶೋಧನೆ, ಸುದ್ದಿಗಳನ್ನು ನೀಡುವ ತುಂಬ ಜನಪ್ರಿಯ ಜಾಲತಾಣ  www.sciencedaily.com. ವಿಜ್ಞಾನದಲ್ಲಿ ಆಸಕ್ತಿಯಿರುವ ಎಲ್ಲರೂ ಭೇಟಿ ನೀಡುವ ಜಾಲತಾಣವಿದು. ಆಧುನಿಕ ಸಂಶೋಧನೆಗಳ ಬಗ್ಗೆ ಮಾಹಿತಿ ಪಡೆಯಲು ಇದು ಉಪಯುಕ್ತ ಜಾಲತಾಣ. ಸಂಶೋಧನಾ ಕೇತ್ರದಲ್ಲಿ ಕೆಲಸ ಮಾಡುವವರಿಗೆ, ಅಧ್ಯಾಪಕರಿಗೆ, ವಿಜ್ಞಾನದಲ್ಲಿ ಪದವಿಗಾಗಿ ಓದುತ್ತಿರುವವರಿಗೆಲ್ಲ ಪ್ರಯೋಜನಕಾರಿ.

ಈ ಜಾಲತಾಣದ ಕಿರುತಂತ್ರಾಂಶ (ಆಪ್) ಬೇಕಿದ್ದರೆ ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಸಯನ್ಸ್ ಡೈಲಿ (ScienceDaily) ಎಂದು ಹುಡುಕಿ. ಸುದ್ದಿಗಳನ್ನು ಹಲವು ವಿಭಾಗಗಳಲ್ಲಿ ನೀಡಲಾಗಿದೆ. ನಿಮಗಿಷ್ಟವಾದ ಯಾವುದಾದರೂ ಸುದ್ದಿಯನ್ನು ಓದಿದ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳುವ ಸೌಲಭ್ಯವೂ ಇದೆ. ಈ ಕಿರುತಂತ್ರಾಂಶದ ಒಂದು ಕೊರತೆಯೆಂದರೆ ಇದರಲ್ಲಿ ಟ್ಯಾಬ್ಲೆಟ್‌ಗಳಲ್ಲಿ ಬಳಸಲು ಉಪಯೋಗಕಾರಿಯಾದ ಲ್ಯಾಂಡ್‌ಸ್ಕೇಪ್  ಆಯ್ಕೆ ಇಲ್ಲ.

ಗ್ಯಾಜೆಟ್ ಸುದ್ದಿ
ಟೊಮೆಟೊ ತಿನ್ನಿಸುವ ಗ್ಯಾಜೆಟ್
ಚಾರ್ಲಿ ಚಾಪ್ಲಿನ್ ಅವರ ‘ಮಾಡರ್ನ್ ಟೈಮ್ಸ್’ ಚಲನಚಿತ್ರ ನೋಡಿದ ನೆನಪಿದೆಯಾ? ಉದ್ಯೋಗಿಗಳು ಮಧ್ಯಾಹ್ನದ ಊಟಕ್ಕೆ ಸಮಯ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಲು ಅವರಿಗೆ ಬಾಯಿಗೇ ನೇರವಾಗಿ ತಿನ್ನಿಸುವ ಯಂತ್ರವನ್ನು ಅದರಲ್ಲಿ ಬಳಸಲಾಗಿತ್ತು. ಚಿತ್ರವಿಚಿತ್ರ ಗ್ಯಾಜೆಟ್‌ಗಳಿಗೆ ಪ್ರಸಿದ್ಧವಾಗಿರುವ ಜಪಾನಿನಿಂದ ಅಂತಹುದೇ ಒಂದು ಹೊಸ ಗ್ಯಾಜೆಟ್ ತಯಾರಾದ ಬಗ್ಗೆ ಸುದ್ದಿ ಬಂದಿದೆ. ಅದರ ಹೆಸರು ಟೊಮಾಟನ್ ಎಂದು.

ಇದಕ್ಕೂ ಟೊಮೆಟೊಗೂ ಏನೋ ಸಂಬಂಧ ಇದೆ ಎಂದು ಇದರ ಹೆಸರಿನಿಂದ ನಿಮಗೆ ಅಂದಾಜಾಗಿರಬಹುದು. ಹೌದು. ಇದು ನಿಮಗೆ ಟೊಮೆಟೊ ತಿನ್ನಿಸುತ್ತದೆ. ಬರೋಬ್ಬರಿ 8 ಕಿಲೋಗ್ರಾಂ ತೂಕ ಇರುವ ಇದನ್ನು ಟೊಮೆಟೊ ಹಣ್ಣುಗಳನ್ನು ತುಂಬಿಸಿ ಬೆನ್ನಿಗೆ ಕಟ್ಟಿಕೊಳ್ಳಬೇಕು. ನಂತರ ನಡೆಯುವಾಗ ಇದು ಆಗಾಗ ಒಂದೊಂದು ಟೊಮೆಟೊವನ್ನು ನಿಮ್ಮ ಬಾಯಿಗೆ ನೀಡುತ್ತದೆ. ಇದರಿಂದ ಏನು ಉಪಯೋಗ ಎಂದು ಕೇಳುತ್ತಿದ್ದೀರಾ? ಮ್ಯಾರಥಾನ್ ನಡಿಗೆ ಸ್ಪರ್ಧಿಗಳಿಗೆ ಆಗಾಗ ಟೊಮೆಟೊ ಬಾಯಿಗೆ ನೀಡಲು ಇದನ್ನು ಬಳಸಬಹುದು ಎಂಬುದು ಇದರ ತಯಾರಕರ ಅಂಬೋಣ. ಇದು ಭಾರತದಲ್ಲಿ ಲಭ್ಯವಾಗುವ ಸಾಧ್ಯತೆಗಳಿಲ್ಲ. ಆದುದರಿಂದ ನಾವೆಲ್ಲ ಟೊಮೆಟೊವನ್ನು ಕೈಯಲ್ಲಿ ತೆಗೆದು ಬಾಯಿಗೆ ಹಾಕಿಕೊಳ್ಳೋಣ.

ಗ್ಯಾಜೆಟ್ ತರ್ಲೆ
ಒಬ್ಬಾತನಲ್ಲಿ ತನ್ನ ದೊಡ್ಡ ಲೆನ್ಸ್ ಜೋಡಿಸಿದ ದೊಡ್ಡ ಎಸ್ಎಲ್ಆರ್ ಬಳಸಿ ಫೋಟೊ ತೆಗೆಯುವಾಗ ಕ್ಯಾಮೆರಾ ಅಲ್ಲಾಡದಂತೆ ನಿಲ್ಲಿಸಲು ಕ್ಯಾಮೆರಾಕ್ಕೆ ಜೋಡಿಸಲು ಕ್ಯಾಮೆರಾ ಸ್ಟ್ಯಾಂಡ್ (ಟ್ರೈಪಾಡ್) ಇರಲಿಲ್ಲ. ಆತನ ಜೊತೆ ಹೇಳಿದಂತೆ ಕೇಳುವ ಒಂದು ನಾಯಿ ಇತ್ತು. ಆತ ಅದರ ಬೆನ್ನಿನ ಮೇಲೆ ಕ್ಯಾಮೆರಾ ಇಟ್ಟು ಫೋಟೊ ತೆಗೆದ. ಅಂದರೆ ನಾವು ಟ್ರೈಪಾಡ್ ಬದಲಿಗೆ ನಾಯಿಪಾಡ್ ಎನ್ನಬಹುದೇ?

ಗ್ಯಾಜೆಟ್ ಸಲಹೆ
ಶ್ರೀವತ್ಸ ಅವರ ಪ್ರಶ್ನೆ: ಫೆಬ್ರುವರಿ 19ರ ತಮ್ಮ ಅಂಕಣದಲ್ಲಿ ಶಿಯೋಮಿ ರೆಡ್ಮಿ ನೋಟ್ 4ಜಿ ಲೇಖನ ಓದಿದೆ. ಅದು ದೊರೆಯುವ ಸ್ಥಳವನ್ನು ತಿಳಿಸಿದರೆ ತುಂಬಾ ಅನುಕೂಲ.
ಉ: flipkart.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT