ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ದಾಖಲೆಗಳತ್ತ ಷೇರುಪೇಟೆ ಹೆಜ್ಜೆ

Last Updated 8 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಷೇರು ಪೇಟೆಯಲ್ಲಿ ಪ್ರತಿಯೊಂದು ಬೆಳವಣಿಗೆಗಳು ದಾಖಲೆ­ಯತ್ತ ಸಾಗುತ್ತಲಿವೆ. ಬುಧವಾರದಂದು ಪೇಟೆಯು ಆರಂಭವಾಗುತ್ತಿದ್ದಂತೆಯೇ ದಾಖಲೆಯ ಏರಿಕೆ ಕಂಡಿತು. ಅದು ಕೇವಲ ಕ್ಷಣಿಕವಾಗಿತ್ತು. ಅಂದು ಸಂವೇದಿ ಸೂಚ್ಯಂಕವು ಸರ್ವಕಾಲೀನ ದಾಖಲೆಯ ಹಂತ ೩೦,೦೨೪.೭೪ನ್ನು ತಲುಪಿತು. ಆರ್‌ಬಿಐ ಅನಿರೀಕ್ಷಿತವಾಗಿ ಪ್ರಕಟಿಸಿದ ೨೫ ಮೂಲಾಂಶಗಳ ರೆಪೋ ದರ ಕಡಿತವನ್ನು ಸ್ವಾಗತಿಸಿದ ರೀತಿ ಅದಾಗಿತ್ತು.  ಸಂವೇದಿ ಸೂಚ್ಯಂಕವು ಒಟ್ಟಾರೆ ಏಳು ನೂರು ಅಂಶಗಳಿಗೂ ಹೆಚ್ಚಿನ ಏರಿಳಿತ ಪ್ರದರ್ಶಿಸಿದೆ.

ಆಟೋ ಇಂಡೆಕ್ಸ್ ೪೨೦ ಅಂಶಗಳ ಏರಿಳಿತ ಪ್ರದರ್ಶಿಸಿದರೆ, ಬ್ಯಾಂಕೆಕ್ಸ್ ಭರ್ಜರಿ ೧,೨೦೦ ಅಂಶಗಳಿಗೂ ಹೆಚ್ಚಿನ ಏರಿಳಿತ ಪ್ರದರ್ಶಿಸಿ ಪೇಟೆಯಲ್ಲಿ ಆ ವಲಯದ ಸೂಕ್ಷ್ಮತೆಯ ಮಟ್ಟವನ್ನು ತೋರಿಸಿದೆ. ಹೆಲ್ತ್ ಕೇರ್ ಇಂಡೆಕ್ಸ್ ೫೬೨ ಅಂಶಗಳು, ಕ್ಯಾಪಿಟಲ್ ಗೂಡ್ಸ್ ೫೩೦ ಅಂಶಗಳ ಏರಿಳಿತ ತೋರಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಹದಿನೈದು ಸಾವಿರ ಕೋಟಿ ರೂಪಾಯಿ­ಗಳ ಸಂಪನ್ಮೂಲ ಸಂಗ್ರಹಣೆಗೆ ಷೇರುದಾರರು ಸಮ್ಮತಿ­ಸಿದ್ದಾರೆ.

ಷೇರುಪೇಟೆಗಳಲ್ಲಿ ಕಾಣುತ್ತಿರುವ ಏರಿಕೆಯು ಕೇವಲ ನಮ್ಮ ದೇಶಕ್ಕೆ ಸೀಮಿತವಾಗಿಲ್ಲ. ಅಮೇರಿಕಾದ ನಾಸ್ಡಾಕ್ ಕಾಂಪೋಸಿಟ್ ಇಂಡೆಕ್ಸ್ ೨೦೦೦ ರ ಮಾರ್ಚ್ ನಂತರ ಪ್ರಥಮ ಭಾರಿ ಐದು ಸಾವಿರ ಅಂಶಗಳನ್ನು ದಾಟಿದೆ.  ಸನ್ ಫಾರ್ಮ ಕಂಪನಿಯು ಈ ವಾರ ಏರಿಕೆಯ ಪಥದಲ್ಲಿತ್ತು. ಆಸ್ಟ್ರೇಲಿಯಾದಲ್ಲಿ ಘಟಕವೊಂದನ್ನು ಖರೀದಿಸಿದುದು ಈ ಏರಿಕೆಗೆ ಕಾರಣವಾದರೆ, ನಂತರ ಕಂಪನಿಯ ಪ್ರವರ್ತಕರು ಭಾರತದ ಅಗ್ರಮಾನ್ಯ ಸಾಹುಕಾರರು ಎಂಬ ಸುದ್ಧಿಯಿಂದ ಪ್ರೇರಿತವಾಗಿ ಮತ್ತಷ್ಟು ಏರಿಕೆ ಕಂಡು ವಾರ್ಷಿಕ ಗರಿಷ್ಠ ದಾಖಲಿಸಿತು.

ವಾರದ ವಿಶೇಷ

ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ೨೦೧೪ ರಲ್ಲಿ ಸಂಗ್ರಹಣೆಯಾದ ಅಂಕಿ ಅಂಶಗಳಲ್ಲಿ ಶೇ೮ ರಷ್ಟು ಮಹಿಳೆಯರ ಆಸಕ್ತಿ ಹೆಚ್ಚಿದ್ದು, ಸುಮಾರು ಶೇ೫೦ರಷ್ಟು ಮಹಿಳೆಯರು, ವಿಶೇಷವಾಗಿ ದುಡಿಮೆಯಲ್ಲಿರುವ ಮಹಿಳೆಯರು ಮ್ಯೂಚು­ಯಲ್  ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಅಂಶವು ಸಕಾರಾತ್ಮಕ ಬೆಳವಣಿಗೆಯಾಗಿದೆ. 

ಈ ಸಂದರ್ಭದಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆಯು ಅಪಾಯ ಮುಕ್ತ ಎಂಬ ಭಾವನೆ ಬೇಡ ಮತ್ತು ಪೇಟೆಯಲ್ಲಾಗುವ ಬದಲಾವಣೆಗಳು ನೇರವಾಗಿ ಪ್ರಭಾವ ಬೀರುತ್ತವೆ ಎಂಬ ಸತ್ಯವನ್ನು ಹೂಡಿಕೆದಾರರು ಅರಿತಿರಬೇಕು. ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ಅನೇಕ ನಮೂನೆಯ, ವಿವಿಧ ಉದ್ದೇಶಗಳ ಸಾಧನೆಗೆ ಯೋಜನೆಗಳಿರುತ್ತವೆ. ಸರಿಯಾಗಿ ಅರಿತು ಹೂಡಿಕೆ ಮಾಡುವುದು ಕ್ಷೇಮ. ಹೂಡಿಕೆದಾರರು ಯೂನಿಟ್ ಲಿಂಕ್ದ್ ಯೋಜನೆಗಳತ್ತ ಒಲವು ತೋರುವುದು ಸಹಜ,  ಈ ಯೋಜನೆ­ಗಳಲ್ಲಿ ಹೂಡುವಾಗ ನಿಮ್ಮ ಹೂಡಿಕೆಯ ಹಣದಲ್ಲಿ ಈಕ್ವಿಟಿ ಯಲ್ಲಿ ಎಷ್ಟು   ಮತ್ತು  ಬಾಂಡ್ ಯೋಜನೆಗಳಿಗೆ ಎಷ್ಟು ಪ್ರಮಾಣವನ್ನು ಹೂಡಿಕೆ ಮಾಡಬೇಕೆಂಬುದನ್ನು ನಿರ್ಧರಿಸಲು ಮರೆಯದಿರಿ.  ಈ ನಿರ್ಧಾರವನ್ನು ಆಯ್ಕೆ ಮಾಡಿಕೊಳ್ಳುವ ವಿಚಾರವನ್ನು ಮರೆತಿರಾದರೆ  ಮುಂದಿನ ಫಲಿತಾಂಶಕ್ಕೆ ನೀವೇ ಹೊಣೆ­ಗಾರ­ರಾಗುತ್ತೀರಿ.

ಆ್ಯಕ್ಸಿಸ್ ಬ್ಯಾಂಕ್ ವಾರ್ಷಿಕ ಗರಿಷ್ಠವಾದ ₨.೬೫೫.೩೫ ನ್ನು ತಲುಪಿತು. ಇದು ಈ ವಾರ ₨೫೬೩ ರಿಂದ ₨೬೫೫ ರವರೆಗೂ ಏರಿಕೆ ಕಂಡಿದೆ. ಐ.ಟಿ.ಸಿ.ಕಂಪನಿಯು ಬಜೆಟ್ ನಂತರದ ಕುಸಿತವನ್ನು ಮುಂದುವರೆಸಿ ₨೩೩೯ ರವರೆಗೂ ಇಳಿದು ನಂತರ ಚೇತರಿಕೆ ಕಂಡಿತು.

ಇದುವರೆಗೂ ಕಡೆಗಣಿಸಲ್ಪಟ್ಟಿದ್ದ ಫೆಡರಲ್ ಬ್ಯಾಂಕ್ ಈ ವಾರ ₨೧೫೪ ರವರೆಗೂ ಏರಿಕೆ ಕಂಡು ಗರಿಷ್ಟ ದಾಖಲಿಸಿತು. ಅಬಾನ್ ಆಫ್ ಶೋರ್ ಕಂಪನಿಯ ಅಂಗ ಸಂಸ್ಥೆಗಳು ₨೧,೩೩೫ ಕೋಟಿ ಮೌಲ್ಯದ ಸಾಲವನ್ನು ಸರಿಯಾದ ಸಮಯದಲ್ಲಿ ಬಡ್ಡಿ ಸಮೇತ ಹಿಂದಿರುಗಿಸಿದೆ ಎಂಬ ಸುದ್ಧಿಯಿಂದ ₨೪೮೧ ರಿಂದ ₨೫೧೯ ರವರೆಗೂ ಏರಿಕೆ ಕಾಣುವಂತೆ ಮಾಡಿತಾದರೂ ₨೫೦೧ ರಲ್ಲಿ ಕೊನೆಗೊಂಡಿತು.

ಮಾರ್ಚ್‌ 4ರ ಸೂಚ್ಯಂಕದ ಚಲನೆ
ಒಟ್ಟಾರೆ ಸಂವೇದಿ ಸೂಚ್ಯಂಕವು ೮೭ ಅಂಶಗಳ ಏರಿಕೆಯನ್ನು ನಾಲ್ಕು ದಿನಗಳ ವಹಿವಾಟಿನ ಈ ವಾರದಲ್ಲಿ ಪ್ರದರ್ಶಿಸಿದೆ. ಮಧ್ಯಮ ಶ್ರೇಣಿಯ ಸೂಚ್ಯಂಕವು ೨೩೪ ಅಂಶಗಳ ಹಾಗೂ ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕವು ೧೯೦ ಅಂಶಗಳ ಏರಿಕೆ ಪ್ರದರ್ಶಿಸಿದೆ.

ವಿದೇಶಿ ವಿತ್ತೀಯ ಸಂಸ್ಥೆಗಳು ₨೪,೦೬೩ ಕೋಟಿ ಮೌಲ್ಯದ ಷೇರು­ಗಳನ್ನು ಖರೀದಿಸಿದೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ₨೩೦೦ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಷೇರುಪೇಟೆ ಬಂಡ­ವಾಳ ಮೌಲ್ಯವು ₨೧೦೫.೬೯  ಲಕ್ಷ ಕೋಟಿಯಲ್ಲಿತ್ತು.  ಮಂಗಳ­ವಾರ­ದಂದು ₨೧೦೬.೨೭ ಲಕ್ಷ ಕೋಟಿ­ಯಲ್ಲಿದ್ದು, ಅದು ಸರ್ವಕಾಲೀನ ದಾಖಲೆಯಾಗಿದೆ.

ಲಾಭಾಂಶ
*ಮೋಲ್ಡ್ ಟೆಕ್ ಪ್ಯಾಕೇಜಿಂಗ್  ಪ್ರತಿ ಷೇರಿಗೆ ₨೨.೦೦ರಂತೆ ಲಾಭಂ ನೀಡಲು ಮಾರ್ಚ್ 14 ನಿಗದಿತ ದಿನವಾಗಿದೆ.

*ಏಜೀಸ್ ಲಾಜಿಸ್ಟಿಕ್ಸ್ ಪ್ರತಿ ಷೇರಿಗೆ ₨೨.೫೦ರಂತೆ ಲಾಭಾಂಶ ನೀಡಲಿದೆ.

ಮುಖಬೆಲೆ ಸೀಳಿಕೆ
*ಟಿಟಾಗರ್ ವ್ಯಾಗನ್ ಲಿಮಿಟೆಡ್ ಕಂಪೆನಿ ಷೇರಿನ ಮುಖಬೆಲೆ­ಯನ್ನು ₨೧೦ ರಿಂದ ₨೨ಕ್ಕೆ ಸೀಳಲಿದೆ.

ಹೊಸ ಷೇರು
*ಪ್ರಾದೇಶಿಕ ಕೇಬಲ್ ಆಪರೇಟರ್ ಮತ್ತು ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ಕಂಪೆನಿ, ಆರ್ಟೆಲ್ ಕಮ್ಯುನಿಕೇಶನ್ ಲಿಮಿಟೆಡ್,  ಆರಂಭಿಕ ಷೇರು ವಿತರಣೆ ಮಾಡಿದೆ.  ಈ ವಿತರಣೆಗೆ ಸೂಕ್ತವಾದ ಸಾರ್ವಜನಿಕ ಸ್ಪಂದನ ದೊರೆಯದೆ ಕೇವಲ ಶೇ೭೫ರಷ್ಟು ಮಾತ್ರ ಸಂಗ್ರಹವಾಗಿದೆ.

*ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಟಾಲ್ ಬ್ರೋಸ್ ಎಂಜಿನಿಯರಿಂಗ್‌  ಲಿಮಿಟೆಡ್ ೪ ರಿಂದ ಬಿ.ಎಸ್.ಇ.­ನ ಡಿ.ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ­ಯಾಗಿದೆ.

*ಪುಣೆ, ಅಹ್ಮದಾಬಾದ್ ಮತ್ತು ವಡೋದರ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಎಸ್.ಎ.ಆರ್. ಆಟೋ ಪ್ರಾಡಕ್ಟ್ಸ್  ಕಂಪೆನಿ ೪ ರಿಂದ ಬಿ.ಎಸ್.ಇ ಯ ಡಿ.ಟಿ. ಗುಂಪಿನಲ್ಲಿ ವಹಿವಾಟಾಗುತ್ತಿದೆ.

*ಅಹ್ಮದಾಬಾದ್‌ನ ಜಯಾತ್ಮ ಸ್ಪಿನ್ನರ್ಸ್ ಕಂಪೆನಿ ೯ರಿಂದ ಬಿಎಸ್ಇ­­ನ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ­ಯಾಗಲಿದೆ.

ಬೋನಸ್ ಷೇರು
*ರಾಯ್ ಸಾಹೇಬ್ ರೇಖ್ ಚಂದ್ ಮೊಹ್ತಾ ಸ್ಪಿನ್ನಿಂಗ್ ಅಂಡ್ ವೀವಿಂಗ್ ಮಿಲ್ಸ್ ಕಂಪೆನಿ ವಿತರಿಸಲಿರುವ ೧:೬ ರ ಅನುಪಾತದ ಬೋನಸ್ ಷೇರಿಗೆ ಮಾರ್ಚ್ ೧೭ ನಿಗದಿತ ದಿನವಾಗಿದೆ.

ಹಕ್ಕಿನ ಷೇರು
*ಜಿ.ಎಂ.ಆರ್. ಇನ್ಫ್ರಾಸ್ಟ್ರಕ್ಚರ್ ಕಂಪೆನಿ ಪ್ರತಿ ಷೇರಿಗೆ ₨೧೪ ರಂತೆ, ೩:೧೪ ಅನುಪಾತದ  ಹಕ್ಕಿನ ಷೇರಿಗೆ ಮಾರ್ಚ್ ೧೨ ನಿಗದಿತ ದಿನ.

*ಝೀ ಮೀಡಿಯಾ ಕಾರ್ಪೊರೇಶನ್  ಕಂಪೆನಿ ಪ್ರತಿ ಷೇರಿಗೆ ₨೧೭ ರಂತೆ , ೩:೧೦ ರ ಅನುಪಾತದ ಹಕ್ಕಿನ ಷೇರಿಗೆ ಮಾರ್ಚ್ ೧೭ ನಿಗದಿತ ದಿನವಾಗಿದೆ.

ಸಂಪರ್ಕಕ್ಕೆ ಮೊ: 9886313380 (ಸಂಜೆ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT