ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಪಿ’ ನಾಡಿನ ಕಿರಾತಕರ ನಡುವೆ

Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅದು ಪರೀಕ್ಷೆಯಲ್ಲಿ ಸಾಮೂಹಿಕ ಕಾಪಿ ನಡೆಸುವ ಕಾಲೇಜೆಂದು ಕುಖ್ಯಾತವಾಗಿತ್ತು. ಇಂಥದ್ದೊಂದು ಸ್ಥಳಕ್ಕೆ ನನ್ನನ್ನು ವಿಶೇಷ ಜಾಗೃತದಳದ ಸದಸ್ಯನಾಗಿ ಅಲ್ಲಿಗೆ ನೇಮಿಸಿ ಕಳಿಸಿದರು. ಅದೇ ಕೆಲಸಕ್ಕೆ  ನಿಯುಕ್ತರಾದ ಮತ್ತೋರ್ವ ಉಪನ್ಯಾಸಕರು ಕೂಡ ದೂರದ ಗುಲ್ಬರ್ಗದಿಂದ ಬಂದಿದ್ದರು. ಅದು ಪಕ್ಕಾ ಬಯಲು ಸೀಮೆಯ ತೀರಾ ಹಿಂದುಳಿದ ಗ್ರಾಮ. ಕಾಲೇಜು ಖಾಸಗಿ ಒಡೆತನಕ್ಕೆ ಸೇರಿತ್ತು.

ಮೇಲಾಗಿ, ಅದರ ಮಾಲೀಕ ಒಬ್ಬ ರಾಜಕಾರಣಿ. ಮೊದಲ ದಿನ ಪರೀಕ್ಷೆ ಶುರುವಾಗುವ ಮೊದಲೇ ಎಲ್ಲಾ ಹುಡುಗರ ಜೇಬು, ಪರ್ಸ್‌ಗಳನ್ನು ಚೆಕ್ ಮಾಡಿ ನಂತರ ಪರೀಕ್ಷೆ  ಹಾಲ್‌ನೊಳಗೆ ಬಿಡುವುದು ಸೂಕ್ತವೆಂದು ನಾವಿಬ್ಬರೂ ನಿರ್ಧರಿಸಿಕೊಂಡೆವು. ನಮ್ಮ ಈ ನಿಯಮ ಆ ಕಾಲೇಜಿನವರಿಗೆ ಬಿಲ್‌ಕುಲ್ ಇಷ್ಟವಾಗಲಿಲ್ಲ. ನಾವಿಬ್ಬರೂ ನಮ್ಮ ಹಟ ಬಿಡಲಿಲ್ಲ. ಎಲ್ಲರನ್ನು ತಪಾಸಣೆ ಮಾಡಲು ಹೋದ ನಾವು ನಿಜಕ್ಕೂ ಸುಸ್ತಾಗಿ ಹೋದೆವು. ಯುದ್ಧಭೂಮಿಗೆ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಹೊತ್ತು ತರುವ ಸೈನಿಕರಂತೆ ಅವರೆಲ್ಲಾ ಅತಿ ಶ್ರದ್ಧೆಯಿಂದ ರಾಶಿರಾಶಿ ಕಾಪಿ ಚೀಟಿಗಳ ಗಂಟುಮೂಟೆಗಳನ್ನೇ ತಂದಿದ್ದರು. ಅದನ್ನು ನೋಡಿ ನಮಗೆ ಮೈ ಜುಮ್ಮೆಂದಿತು.

ಅಬ್ಬಬ್ಬಾ! ಅಲ್ಲಿನ ಹುಡುಗರೂ ಹುಡುಗಿಯರೂ ಅಸಮಾನ್ಯ ಶೂರರು, ಧೈರ್ಯವಂತರು. ಎಲ್ಲೆಲ್ಲಿ ಖಾಲಿ ಜಾಗ ಇದೆಯೋ, ಎಲ್ಲೆಲ್ಲಿ ಬಚ್ಚಿಡಲು ಸಾಧ್ಯವೋ ಅಲ್ಲೆಲ್ಲಾ  ಬಗೆಬಗೆಯ ಚೀಟಿಗಳನ್ನು ತುರುಕಿಕೊಂಡಿದ್ದರು. ಆದರಲ್ಲಿ ಕೆಲ ಹೆಣ್ಣು ಮಕ್ಕಳು ಚೀಟಿಗಳು ಸಾಕಾಗದೆ ತಮ್ಮ ವೇಲ್‌ಗಳ ಮೇಲೆ, ಕರ್ಚೀಫುಗಳ ಮೇಲೆ, ಪರೀಕ್ಷೆ ಬರೆಯಲು ಬಳಸುವ ರಟ್ಟುಗಳ ಮೇಲೆಲ್ಲಾ ಸಣ್ಣಗೆ ಉತ್ತರಗಳನ್ನು ಕೆತ್ತಿಕೊಂಡಿದ್ದರು. ಒಬ್ಬಾಕೆಯಂತೂ ಅದ್ಯಾವುದೋ ಸಿಲ್ವರ್ ಪೆನ್ ಬಳಸಿ ತನ್ನ ರಟ್ಟಿನ ಮೇಲೆ ಬರೆದಿಟ್ಟುಕೊಂಡಿದ್ದ ಉತ್ತರಗಳನ್ನು ಆ ಬ್ರಹ್ಮನೂ ಕಂಡು ಹಿಡಿಯಲಾರ. ಅಷ್ಟು ನಯನಾಜೂಕಾಗಿತ್ತು ಆ ಕಲಾವಂತಿಕೆ.

ನೇರವಾಗಿ ರಟ್ಟನ್ನು ಹಿಡಿದು ನೋಡಿದರೆ ಸಿಬಿಐನವರಿಗೂ ಅದನ್ನು ಕಂಡು ಹಿಡಿಯುವುದು ಕಷ್ಟ. ಅಷ್ಟರ ಮಟ್ಟಿಗೆ ಮೇಲ್ನೋಟದಲ್ಲಿ ಖಾಲಿ ಖಾಲಿಯಾಗಿ ಕಾಣಿಸುತ್ತಿತ್ತು. ಅದೇ ರಟ್ಟನ್ನು ಒಂದಿಷ್ಟು ವಾರೆ ಮಾಡಿ ನೋಡಿದರೆ ಮಾತ್ರ ರಟ್ಟಿನ ತುಂಬಾ ಉತ್ತರಗಳೋ ಉತ್ತರ! ಪರೀಕ್ಷೆ ಬರೆಯುವ ಅವಳಿಗೆ ಮಾತ್ರ ಒಂದು ಕೋನದಿಂದ ಅದು ಸ್ಪಷ್ಟವಾಗಿ ಕಾಣಬೇಕು ಹಾಗಿತ್ತು ಅದರ ತಾಂತ್ರಿಕ ರಚನೆ. ಆಕೆಯ ಈ ಪರಮ ಚಾಣಾಕ್ಷ ಜ್ಞಾನಕ್ಕೆ ಪ್ರಶಂಸಿಸಬೇಕೋ, ಬೈಯ್ಯಬೇಕೋ? ಒಂದೂ ತಿಳಿಯದ ನಾನು ದಿಗ್ಭ್ರಮೆಗೆ ಒಳಗಾದೆ.

ಹುಡುಗರ ಬಳಿ ಸಣ್ಣ ಸಣ್ಣ ಗಾತ್ರದ ಮೈಕ್ರೋ ಗೈಡುಗಳಿದ್ದವು. ಆ ಬಗೆಯ ಕಾಪಿ ಹೊಡೆಯಲೆಂದೇ ತಯಾರಾದ ಗೈಡುಗಳನ್ನು ನಾನು ನೋಡಿದ್ದು ಅದೇ ಮೊದಲು. ಮಕ್ಕಳಿಗೆ ಪರೀಕ್ಷೆಯ ಓದಿಗೆ ಅನುಕೂಲವಾಗುವ ಗೈಡುಗಳನ್ನು ಪ್ರಿಂಟು ಮಾಡುವ ಪದ್ಧತಿ ಮೊದಲಿನಿಂದಲೂ ಇದ್ದೇ ಇದೆ. ಆದರೆ, ಕೆಲ ಪ್ರಕಾಶಕರು ಹೀಗೆ, ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಅನುಕೂಲವಾಗುವ ಮೈಕ್ರೋ ಗೈಡುಗಳನ್ನೂ ಪ್ರಿಂಟು ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದ ಮೇಲೆ ನಮಗೆ ನಿಜಕ್ಕೂ ಆಘಾತವಾಯಿತು.

ಮುಲಾಜಿಲ್ಲದೆ, ಎಲ್ಲರ ಬಳಿಯೂ ಇದ್ದ ನಕಲು ಮಾಡುವ ಹತ್ಯಾರಗಳನ್ನು ಕಸಿದುಕೊಂಡು ಅವನ್ನೆಲ್ಲಾ ಒಂದೆರಡು ಬುಟ್ಟಿಗೆ ತುಂಬಿಸಿದೆವು. ಅವರ ಅಮೂಲ್ಯ ಕಾಪಿಚೀಟಿಗಳನ್ನು ನಾವು ಅನಾಮತ್ತಾಗಿ ಕಸಿದುಕೊಂಡಿದ್ದರಿಂದ ಅವರ ಮುಖಗಳೆಲ್ಲಾ ಕಳೆಗುಂದಿದವು. ಅದರಲ್ಲೊಬ್ಬ ಹುಡುಗ ‘ಇದೆಲ್ಲಾ ಇಲ್ಲದೆ ಹೆಂಗ್ರೀ ಸರಾ ನಾವು ಪರೀಕ್ಷಾ ಬರಿಯೋದು? ನಮಗ  ಒಟ್ಟ ಪಾಠನೇ ಯಾರೂ ಇಲ್ಲೀಗಂಟ ಮಾಡಿಲ್ರಿ ಸರ... ಇರೋ ನಮ್ ಲೆಚ್ಚರ್ರೂ, ಹೊಲಮನಿ ಅಂತ ಕಾಲೇಜಿನ ಕಡೀಗೆ ಬರೋಣಿಲ್ಲಾ. ನೀವು ಈಟು ಸ್ಟ್ರಿಕ್ಟ್ ಆದ್ರಿ ಅಂದ್ರ ನಮ್ ಗತಿ ಏನ್ರೀ ಸರ? ನಿಮಿಗೆ ಕೈ ಮುಗೀತೀವಿ ನಮ್ ಕಷ್ಟಾನೂ ಒಂಚೂರು ಅರ್ಥಮಾಡ್ಕೋರಿ ಸರ. ನೀವೂ ಗುರುಗಳ ಅದೀರಿ ಸ್ವಲ್ಪ ವಿಚಾರ ಮಾಡ್ರಪ್ಪ. ನಾವೇನು ಪಾಸಾಗಿ ಪ್ರಧಾನಮಂತ್ರಿ ಆಕ್ತಿವೇನ್ರಿ ಸರಾ’ ಎಂದು ನನ್ನಲ್ಲಿ ನ್ಯಾಯ ಕೇಳಿದನು.

ಅದಕ್ಕೆ ನಾನು ‘ಶಿಷ್ಯೋತ್ತಮಾ... ನಿಮಗೆ ಪಾಠ ಆಗಿಲ್ಲ ಅಂದ್ರೆ ಅದಕ್ಕೆ ಈಗ ನಾನು ಏನು ಮಾಡೋಕ್ಕಾಗುತ್ತೆ. ನೆಟ್ಟಗೆ ಪಾಠ ಮಾಡದೇ ಇದ್ದದ್ದು ನಿಮ್ಮ ಉಪನ್ಯಾಸಕರು ಮಾಡಿದ ತಪ್ಪು. ಪಾಠ ನಿಮ್ಮ ಹಕ್ಕು. ಅದನ್ನು ಕೇಳಿ ಪಡೆಯದೆ ಇಲ್ಲೀತನಕ ನೀವು ಸುಮ್ಮನಿದ್ದದ್ದು ನಿಮ್ಮ ತಪ್ಪು. ಆ ತಪ್ಪುಗಳನ್ನು ಸರಿಪಡಿಸುವ ಸಮಯ ಮತ್ತು  ಜಾಗ ಇದಲ್ಲ. ಇದು ಮುಖ್ಯ ಪರೀಕ್ಷೆ. ಇದೆಲ್ಲಾ ನೀವು ನಿಮ್ಮ ಪ್ರಿನ್ಸಿಪಾಲರ ಹತ್ತಿರ ಕೇಳಬೇಕು’ ಎಂದು ಸಮಾಧಾನ ಹೇಳಿದೆ. ನನ್ನ ಮಾತು ಕಿಂಚಿತ್ತೂ ಇಷ್ಟವಾಗದ ಅವನು ನನ್ನ ಸುಟ್ಟು ತಿನ್ನುವಂತೆ ನೋಡಿ ಪರೀಕ್ಷೆಯ ಕೊಠಡಿಗೆ ಗೊಣಗುತ್ತಾ ನಡೆದು ಹೋದ. ಅವನ ಹಾಗೆಯೇ ಸಾಕಷ್ಟು ಮಕ್ಕಳು ನನ್ನನ್ನು ಕೆಟ್ಟ ಹುಳುವಿನಂತೆ ದಿಟ್ಟಿಸಿ, ಮನಸ್ಸಿನಲ್ಲಿ ಬೈದುಕೊಂಡು ರೂಮಿನೊಳಗೆ ಬೇಸರದಿಂದ ಹೋದರು. ಅವರಿಗೆ ಇಂಥ ಸ್ಥಿತಿ ಬಂದದ್ದು ನೋಡಿ ನನಗೆ ಮರುಕವಾಯಿತು. ಜೊತೆಗೆ ಕಾಲೇಜಿನವರ ಬೇಜವಾಬ್ದಾರಿತನದ ಬಗ್ಗೆಯೂ ಸಿಟ್ಟೂ ಬಂದಿತು.

ಎರಡು ಬುಟ್ಟಿಗಳಲ್ಲಿ ಭರ್ಜರಿಯಾಗಿ ತುಂಬಿಕೊಂಡಿದ್ದ ಚೀಟಿ ಮತ್ತು ಗೈಡುಗಳನ್ನು ಆ ಕಾಲೇಜಿನ ಅಟೆಂಡರನ್ನು ಕರೆದು ತೋರಿಸಿ ತಕ್ಷಣವೇ ಇಲ್ಲಿಂದ ಇದನ್ನು ದೂರ ಸುರಿದು ಬಾರಪ್ಪ, ಸಾಧ್ಯವಾದರೆ ಸುಟ್ಟು ಬಿಡು ಎಂದು ಸೂಚನೆ ಕೊಟ್ಟೆವು. ಅವನು ಆಯ್ತು ಸಾರ್ ಎಂದು ಕಾಪಿ ಪರಿಕರಗಳನ್ನು ತೆಗೆದುಕೊಂಡು ಹೋದ. ಹಾಗೆ ಹೋಗುವಾಗ ಅವನಿಗೂ ಕಾಲೇಜಿನ ಪ್ರಿನ್ಸಿಪಾಲನಿಗೂ ಕಣ್ಣುಗಳಲ್ಲೇ ಅದೇನೋ ಒಂದು ಸಣ್ಣ ಮಾತುಕಥೆ ನಡೆದಂತಾಯಿತು. ನಾವು ಆ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲ. ಮತ್ತೆ ಪ್ರತಿ ರೂಮಿಗೂ ನಾವು ಹೋಗಿ ಇಣುಕುವುದು, ಅನುಮಾನ ಬಂದ ಹುಡುಗರನ್ನು ಹಿಡಿದು ವಿಚಾರಿಸುವುದನ್ನು ನಾವು ಮಾಡುತ್ತಲೇ ಹೋದೆವು.

ನಾವು ಹೀಗೆ,  ತುಂಬಾ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸುತ್ತಿರುವ ವಿಚಾರ ಕ್ಷಣ ಮಾತ್ರದಲ್ಲಿ ಊರಿನವರಿಗೆ ತಲುಪಿಬಿಟ್ಟಿತ್ತು. ಆ ಕಾಲೇಜಿನ ಅಟೆಂಡರ್ ಚೀಟಿ ಮತ್ತು ಗೈಡುಗಳನ್ನು ಹೊರಗೆ ಸುರಿಯಲು ಹೋದವನು ಊರಿನವರಿಗೆ ವಿಷಯ ತಲುಪಿಸಿ ಆ ಬುಟ್ಟಿಗಳಲ್ಲಿದ್ದ ಸಾಮಗ್ರಿಯನ್ನೂ ಅವರ ಕೈಗೆ ಕೊಟ್ಟು ಹುಡುಗರಿಗೆ ಇವನ್ನು ಹ್ಯಾಗಾದರೂ ಮತ್ತೆ ತಲುಪಿಸಿ ಎಂದು ಹೇಳಿ ಜೊತೆಗೆ ನಮ್ಮ ಮೇಲೆ ಚಾಡಿ ಊದಿ ಬಂದಿದ್ದ.

ನೋಡು ನೋಡುತ್ತಿದ್ದಂತೆಯೇ ಊರ ಜನ ಗುಂಪಾಗಿ ಜಾತ್ರೆಯಂತೆ ಕಾಲೇಜಿನ ಸುತ್ತ ಸೇರಿಕೊಂಡರು. ಕೆಲವರು ಯಾರವನು? ಎಲ್ಲಿದ್ದಾನೆ ತೋರಿಸಿ ಎಂದು ನಮ್ಮ ಬಗ್ಗೇನೆ ದೂರದಿಂದ ವಿಚಾರಿಸಿಕೊಳ್ಳತೊಡಗಿದರು. ಆಗ ನಾನು ಅಲ್ಲಿದ್ದ ಒಬ್ಬ ಕಾವಲಿನ ಪೊಲೀಸನನ್ನು ಕರೆದುಕೊಂಡು ಹೋಗಿ ಊರಿನ ಗುಂಪಿಗೆ ಎಚ್ಚರಿಸಿ ಇಲ್ಲಿ ಪರೀಕ್ಷೆ ನಡೀತಿದೆ ದೂರ ಹೋಗಿ, ತೊಂದರೆ ಕೊಡಬೇಡಿ ಎಂದು ಹೇಳಿದೆ. ಆಗ ಗುಂಪು ‘ಓಹೋ ಇವನ್ದೇನಾ ಕಿತಾಪತಿ? ಯಾವೂರಲೇ ನಿಂದು? ಆಮ್ಯಾಕಿಂದ ಹೊರಗೆ ಬಾ ತಮ್ಮ ನಿಂದೂ ಒಂದು ಪರೀಕ್ಷೆ ಐತೆ. ಅದನ್ನೂ ಮಾಡ್ತೀವಿ.

ಅಷ್ಟು ದೂರ್ದಿಂದ ನಮ್ಮ ಹೈಕಳಿಗೆ ತೊಂದ್ರಿ ಕೊಡಾಕೇ ಬಂದಿಯಾ? ಕಾನೂನು ಬ್ಯಾರೆ ಮಾತಾಡ್ತಿಯಾ. ಮರ್ಯಾದೆಯಿಂದ ಸುಮ್ಮನಿದ್ರೆ ಸರಿ ಇಲ್ಲಾಂದ್ರೆ ಐತೆ ನೋಡು ಮಾರಿ ಹಬ್ಬ’ ಎಂದು ನನ್ನ ಕೆಕ್ಕರಿಸಿ ನೋಡಿ ಎಚ್ಚರಿಸಿದರು. ಅವರಿಗೆಲ್ಲಾ ಒಳ್ಳೇ ರೀತಿಯಲ್ಲೇ ಸಮಾಧಾನ ಹೇಳಿ ತಿರುಗುವಷ್ಟರಲ್ಲೆ ಮತ್ತೊಂದು ಗುಂಪು ಕಾಲೇಜಿನ ಇನ್ನೊಂದು ಕಡೆಯಿಂದ ನುಗ್ಗಿ ಬಂತು. ಬುಟ್ಟಿಯಲ್ಲಿ ತುಂಬಿಟ್ಟಿದ್ದ ಗೈಡು, ಚೀಟಿಗಳನ್ನು ಕಿಟಕಿಯಿಂದ ಪರೀಕ್ಷೆಯ ರೂಮಿನಲ್ಲಿ ಬೀಸಿ ಒಗೆಯ ತೊಡಗಿತು. ಹುಡುಗರು ಸಂತೋಷಗೊಂಡು ಮೊದಲ ಮಳೆಗೆ ಬಿದ್ದ ಆಲಿಕಲ್ಲುಗಳನ್ನು ಆರಿಸುವವರಂತೆ ತಮಗೆ ಬೇಕಾದ ಚೀಟಿಗಳನ್ನು, ಗೈಡುಗಳನ್ನು ಬಲು ಸಂಭ್ರಮದಿಂದ ಬಾಚಿಕೊಳ್ಳತೊಡಗಿದರು. 

ಆಗ ಹೆದರಿ ಹೋದ ಮತ್ತೋರ್ವ ಜಾಗೃತದಳದ ಉಪನ್ಯಾಸಕರು ‘ಇದೆಲ್ಲಾ ಯಾರಿಗೆ ಬೇಕ್ರಿ ಸರ್. ಊರಿನ ಜನ ಪ್ರಾಣ ತೆಗಿಯೋರಂಗೆ ನುಗ್ತಿದ್ದಾರೆ. ನಿಮಿಗೆ ತಿಳಿದಂಗೆ ನೀವು ಮಾಡ್ರಿ. ನನಗೆ ಹೆಂಡ್ತಿ ಮಕ್ಕಳು ಇದ್ದಾರೆ. ನಾನು ಇಲ್ಲೇ ಇರ್ತೀನಿ’ ಎಂದು ಪ್ರಿನ್ಸಿಪಾಲರ ಕಚೇರಿ ಹೊಕ್ಕು ತಲೆಮರೆಸಿಕೊಂಡರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಪ್ರಿನ್ಸಿಪಾಲ್ ಮಾತ್ರ ಏನೂ ಆಗಿಲ್ಲ ಎನ್ನುವಂತೆ ಓಡಾಡಿಕೊಂಡಿದ್ದನು. ಊರಿನವರನ್ನು ಎತ್ತಿ ಕಟ್ಟಿರುವ ಆಸಾಮಿ ಇವನೇ ಎಂಬುದು ನನಗಾಗ ಖಾತ್ರಿಯಾಗಿ ಹೋಯಿತು. ಆಗಿದ್ದಾಗಲಿ ಎಂದು ಆವೇಶದಿಂದ ಪ್ರತಿರೂಮಿಗೂ ನುಗ್ಗಿದ ನಾನು ಎಲ್ಲರೂ ಮತ್ತೆ ಸಂಗ್ರಹಿಸಿಕೊಂಡಿದ್ದ ಚೀಟಿ, ಗೈಡುಗಳನ್ನು ಮತ್ತೆ ವಶಪಡಿಸಿಕೊಂಡೆ. ಕಾಲೇಜಿನ ಒಂದು ಮೂಲೆಗೆ ಹೋಗಿ ಸುರಿದು ನಾನೇ ಬೆಂಕಿ ಹಚ್ಚಿದೆ.

ನಂತರ ಬಂದು ಪ್ರಿನ್ಸಿಪಾಲನಿಗೆ ‘ಏನ್ರಿ ಪ್ರಿನ್ಸಿಪಾಲ್ರೆ? ಇದು ಪರೀಕ್ಷೆ ನಡೆಸುವ ರೀತಿಯೇನ್ರಿ? ಒಂಚೂರು ಸಂಬಂಧ ಇಲ್ಲದ ಹಾಗೆ ಇದ್ದೀರಲ್ಲ, ನಿಮ್ಮ ಜವಾಬ್ದಾರಿ ಏನು ಅದಾದ್ರೂ ಗೊತ್ತೇನ್ರಿ? ಏನ್ರಿ ಈ ಅವ್ಯವಸ್ಥೆ? ಹಿಂಗಾ ಪರೀಕ್ಷೆ ನಡೆಸೋದು? ಪರೀಕ್ಷೆಗೆ ಇರೋ ಮಾನ ಮರ್ಯಾದೀನೆ ತೆಗೀತಿದ್ದೀರಲ್ರಿ...’ ಎಂದು ಜೋರು ಮಾಡಿದೆ.

ಅದಕ್ಕೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ಆತ ‘ನಂದಿರಲಿ ನೀವು ಪರೀಕ್ಷೆ ಮುಗಿದ ಮೇಲೆ ಊರಿಗೆ ಹೆಂಗೆ ಹೋಗ್ತೀರಿ ಅದ ಹೇಳ್ರಿ ಸಾರ್? ಹೋದ ವರ್ಷ ಹಿಂಗೇ ಧಿಮಾಕ ಮಾಡದೋನಿಗೆ ಜನ ತಲೇನೆ ಬಿಚ್ಚಿದ್ರು. ನಿಮ್ಮ ಪ್ರಾಣ ನಿಮ್ಮ ಕೈಯಾಗೆ’ ಎಂದು ಸಣ್ಣಗೆ ನಗುತ್ತಾ ಆತ ನಡೆದು ಹೋದನು. ಊರಿನವರು ನನಗಾಗಿ ಕಾಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT