ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29 ಸಾವಿರ ಗಡಿ ದಾಟಿದ ಸಂವೇದಿ ಸೂಚ್ಯಂಕ

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಷೇರುಪೇಟೆಯು ದಿನೇ ದಿನೇ ಏರಿಕೆಯ ಹಾದಿಯಲ್ಲಿದ್ದು ಸೂಚ್ಯಂಕಗಳು ಸರ್ವಕಾಲೀನ ಗರಿಷ್ಠಮಟ್ಟಕ್ಕೆ ಜಿಗಿಯುತ್ತಿವೆ.     ವಾರಾಂತ್ಯದ ದಿನ ಶುಕ್ರವಾರ ಸಂವೇದಿ ಸೂಚ್ಯಂಕ ಅಂತ್ಯದಲ್ಲಿ 498 ಅಂಶಗಳ ಭಾರಿ ಕುಸಿತ ಕಂಡು ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದೆ.
ಆದರೆ ಆ ದಿನ ಸಂವೇದಿ ಸೂಚ್ಯಂಕವು ಆರಂಭದ ಸಮಯದಲ್ಲಿಯೇ ಗರಿಷ್ಠಮಟ್ಟದ ದಾಖಲೆ ಸ್ಥಾಪಿಸಿತು. ಅಂದು ತಲುಪಿದ 29,844 ಅಂಶಗಳ ದಾಖಲೆಯು ಸರ್ವಕಾಲೀನ ಗರಿಷ್ಠವಾಗಿದೆ.

ಅಲ್ಲಿಂದ ಸಂವೇದಿ ಸೂಚ್ಯಂಕವು 661 ಅಂಶ­ಗಳಷ್ಟು ಕುಸಿತ ಕಂಡಿತು. ಈ ಗಾತ್ರದ ಕುಸಿತ–ಏರಿಕೆಗಳು ಸಹಜ­ವಾಗುವುದಕ್ಕೆ ಕಾರಣ ಸಂವೇದಿ ಸೂಚ್ಯಂಕದ ಮಟ್ಟವು 29 ಸಾವಿರ ಅಂಶಗಳಾಗಿ­ರುವುದಾಗಿದೆ. ಈ ವಾರದಲ್ಲಿ ಪ್ರಮುಖ ಕಂಪೆನಿಗಳಾದ ಭಾರತ್‌ ಪೆಟ್ರೋಲಿಯಂ, ಹಿಂದೂಸ್ಥಾನ್‌ ಪೆಟ್ರೋಲಿಯಂ ಕಂಪೆನಿಗಳು ಸುಮಾರು ₹100 ರಷ್ಟು ಏರಿಳಿತ ಕಂಡಿವೆ. ರಿಯಲ್‌ ಎಸ್ಟೇಟ್‌ ವಲಯದ ಪ್ರೆಸ್ಟೀಜ್‌ ಎಸ್ಟೇಟ್ಸ್ ಪ್ರಾಜೆಕ್ಟ್ ₹256ರ ಸಮೀಪದಿಂದ ₹ 323ರ ಸರ್ವಕಾಲೀನ ಗರಿಷ್ಠ ತಲುಪಿ ₹ 275ರ ಸಮೀಪ ವಾರಾಂತ್ಯ ಕಂಡಿತು.

ಬಿಡಿ ಸಿಗರೇಟು ಮಾರಾಟ ನಿಷೇದಿಸ­ಬಹುದೆಂಬ ಸುದ್ದಿಯಿಂದ ಕುಸಿದಿದ್ದ ಐಟಿಸಿ ಕಂಪೆನಿ ಷೇರು ಪುಟಿದೆದ್ದಿತು. ಫಲಿತಾಂಶ ಪ್ರಕಟಣೆಯ ನಂತರ ಟೈಟಾನ್‌ ಕಂಪೆನಿಯ ಷೇರು ₹394ರ ಸಮೀಪದಿಂದ ₹ 443ರ ಗರಿಷ್ಠಕ್ಕೆ ಜಿಗಿಯಿತು. ಕಳೆದ ಕೆಲವು ವಾರಗಳಿಂದಲೂ ನೀರಸಮಯ­ವಾಗಿದ್ದ ಅಪೋಲೋ ಟೈರ್‌ ಕಂಪೆನಿಯ ಷೇರು ₹222 ರಿಂದ ₹245 ರವರೆಗೂ ಏರಿಕೆ ಕಂಡಿದೆ.

ಬ್ಯಾಂಕಿಂಗ್‌ ವಲಯದ ಕೆನರಾ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌,  ಆಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಚಟುವಟಿಕೆ ಭರಿತವಾಗಿ ಏರಿಕೆ ಕಂಡವು ಆದರೆ ವಾರಾಂತ್ಯದ ದಿನ ಬ್ಯಾಂಕ್‌ ಆಫ್‌ ಬರೋಡ, ಐಸಿಐಸಿಐ ಬ್ಯಾಂಕ್‌ಗಳ ಫಲಿತಾಂಶವು ವಲಯದ ಷೇರುಗಳ ಚಟು­ವಟಿಕೆಗೆ, ನಿರೀಕ್ಷಿತ ಮಟ್ಟದ ಫಲಿತಾಂಶ ಬರದ ಕಾರಣ, ತಡೆಯೊಡ್ಡಿ ಭಾರಿ ಕುಸಿತಕ್ಕೆ ಹಾದಿ ಮಾಡಿ­ಕೊಟ್ಟವು. ವಾರಾಂತ್ಯದ ಕೊನೆ ಎರಡು ದಿನಗಳಲ್ಲಿ ಬಿಎಸ್‌ಇ ಬ್ಯಾಂಕೆಕ್ಸ್ ಸುಮಾರು 1300 ಅಂಶಗಳಷ್ಟು ಇಳಿಕೆ ಕಂಡಿರುವುದು ಪೇಟೆಯು ಎಂತಹ ಹರಿತ ಪ್ರದರ್ಶಿಸುತ್ತಿದೆ ಎಂಬುದರ ಅರಿವು ಮೂಡಿಸುತ್ತದೆ.

ಈ ವಾರ ಹೆಚ್ಚಿನ ಕಂಪೆನಿಗಳು ತಮ್ಮ ಫಲಿತಾಂಶ ಪ್ರಕಟಿಸಿದ್ದು ಇವುಗಳಲ್ಲಿ ಹೆಚ್‌ಸಿಎಲ್‌ ಟೆಕ್ನಾಲ­ಜೀಸ್‌ ಕಂಪೆನಿ ₹180ಕ್ಕೂ ಹೆಚ್ಚಿನ ಏರಿಕೆ ಕಂಡು ನಂತರ ಸ್ವಲ್ಪ ಇಳಿಕೆ ಕಂಡಿತು. ರಿಯಾಲ್ಟಿ ಇಂಡೆಕ್ಸ್ ನ ಹೌಸಿಂಗ್‌ ಡೆವೆಲಪ್‌­ಮೆಂಟ್‌ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿಯು ₹79ರ ಸಮೀಪ­ದಿಂದ ₹112 ರವರೆಗೂ ಏರಿಕೆ ದಾಖಲಿಸಿದೆ. ಡಿಎಲ್‌ಎಫ್‌ ಸಹ ಸುಮಾರು 20 ರೂಪಾಯಿಗಳ ಏರಿಳಿತ ಪ್ರದರ್ಶಿಸಿದೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 97 ಅಂಶಗಳ ಇಳಿಕೆ ಕಂಡಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು  ₹3,628 ಕೋಟಿ ಹೂಡಿಕೆ ಮಾಡಿದರೆ ಸ್ವದೇಶಿ  ವಿತ್ತೀಯ ಸಂಸ್ಥೆಗಳು ₹3,793 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು
₹103.46 ಲಕ್ಷ ಕೋಟಿಯಲ್ಲಿದೆ.

ಬೋನಸ್‌ ಷೇರು


* ಆರತಿ ಡ್ರಗ್ಸ್ ಕಂಪೆನಿ 1:1ರ ಅನುಪಾತದ ಬೋನಸ್‌ ಷೇರು ಪ್ರಕಟಿಸಿದೆ.
* ಹೆಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪೆನಿ 1:1ರ ಅನುಪಾತದ ಬೋನಸ್‌ ಪ್ರಕಟಿಸಿದೆ.
* ಟೆಕ್‌ ಮಹೀಂದ್ರ ಕಂಪೆನಿ 1:1ರ ಅನುಪಾತದ ಬೋನಸ್‌ ಷೇರು ಪ್ರಕಟಿಸಿದೆ.
* ಫಿನಿಯೋ ಟೆಕ್ಸ್ ಕೆಮಿಕಲ್ಸ್ ಕಂಪೆನಿ ವಿತರಿಸ­ಲಿರುವ 1:1ರ ಅನುಪಾತದ ಬೋನಸ್‌ ಷೇರಿಗೆ ಫೆಬ್ರುವರಿ 13 ನಿಗದಿತ ದಿನವಾಗಿದೆ.
* ಪರ್ಸಿಸ್ಟಂಟ್‌ ಸಿಸ್ಟಮ್ಸ್ ಕಂಪೆನಿಯು ವಿತರಿಸಲಿರುವ 1:1ರ ಅನುಪಾತದ ಬೋನಸ್‌ ಷೇರಿಗೆ ಷೇರುದಾರರು  26ನೇ ಫೆಬ್ರವರಿ­ಯಂದು ನಡೆಯುವ ಇ.ಜಿ.ಎಂ. ನಲ್ಲಿ ಸಮ್ಮತಿಸಲಿದ್ದಾರೆ.

ವಾರದ ವಿಶೇಷ
ಹೂಡಿಕೆಗೆ ಕಂಪೆನಿಯ ಹಿಂದಿನ ಸಾಧನೆ ಪರಿಗಣನೆ ಸಲ್ಲ

ಕಳೆದ ವಾರದಲ್ಲಿ ಪ್ರಮುಖ ಸೂಚ್ಯಂಕಗಳಾದ ಸಂವೇದಿ ಸೂಚ್ಯಂಕವು 29,844 ಅಂಶಗಳನ್ನು 30 ರಂದು ತಲುಪಿದೆ ಇದರೊಂದಿಗೆ ಬಿಎಸ್‌ಇ–100, ಬಿಎಸ್‌ಇ–200, ಬಿಎಸ್‌ಇ–500, ಬಿಎಸ್‌ಇ ಕ್ಯಾಪಿಟಲ್‌ ಗೂಡ್‌್ಸ, ಬಿಎಸ್‌ಇ ಎಫ್‌ಎಂಸಿಜಿ, ಬಿಎಸ್‌ಇ ಹೆಲ್‌್ತಕೇರ್‌, ಬಿಎಸ್‌ಇ ಐಟಿ, ಬಿಎಸ್‌ಇ ಟೆಕ್‌ ಸೂಚ್ಯಂಕಗಳೂ ಸಹ 30 ರಂದು ಶುಕ್ರವಾರ ಸರ್ವಕಾಲೀನ ಗರಿಷ್ಠ ಹಂತ ತಲುಪಿ ವಿಜೃಂಭಿತಗೊಂಡಿವೆ. ಆದರೂ ಸಹ ಅಂದು ಸಂವೇದಿ ಸೂಚ್ಯಂಕವು 498 ಅಂಶಗಳ ಹಾನಿ ಕಂಡಿದೆ.

ದಿನದ ಅಂತ್ಯದಲ್ಲಿ, ಬಿಎಸ್‌ಇ ಕನ್ಸೂಮ್‌ ಡ್ಯೂರಬಲ್ಸ್ , ಉಪಸೂಚ್ಯಂಕವು 29 ರಂದು, ಮಧ್ಯಮ ಶ್ರೇಣಿ ಸೂಚ್ಯಂಕ, ಬಿಎಸ್‌ಇ ಇನ್‌ಫ್ರಾಸ್ಟ್ರಕ್ಚರ್‌, ಬಿಎಸ್‌ಇ ಆಟೋ, ಬಿಎಸ್‌ಇ ಬ್ಯಾಂಕೆಕ್ಸ್ ಉಪಸೂಚ್ಯಂಕಗಳು 28 ರಂದು ಗರಿಷ್ಠಮಟ್ಟ ತಲುಪಿ ದಾಖಲೆ ನಿರ್ಮಿಸಿವೆ.

ಅಂದರೆ ಕಳೆದವಾರ ಒಂದು ರೀತಿಯ ಜಾತ್ಯಾತೀತ ರೀತಿಯ ಏರಿಕೆ ಕಂಡಿವೆ ಎನ್ನುವ ಭಾವನೆ ಮೂಡುವುದು ಸಹಜ. ಹೀಗಿರುವಾಗ ಮುಂದಿನ ದಿನಗಳಲ್ಲಿ ಯಾವ ಕಂಪೆನಿಗಳು ಆರೋಹಣ ಹಾದಿ ಹಿಡಿಯಬಹುದು ಎಂಬ ಪ್ರಶ್ನೆ ಮೂಡುವುದು. ಈ ಉಪಸೂಚ್ಯಂಕಗಳ ಜೊತೆಗೆ ಇತರೆ ವಲಯ ಸೂಚ್ಯಂಕಗಳಾದ ಬಿಎಸ್‌ಇ ರಿಯಾಲ್ಟಿ ಇಂಡೆಕ್ಸ್ ಇದುವರೆಗೂ ತನ್ನ ಗರಿಷ್ಠ ಹಂತವಾದ ಜನವರಿ 2008 ರಲ್ಲಿನ 13,848ನ್ನು ತಲುಪಲು ಸಧ್ಯಕ್ಕೆ ಅಸಾಧ್ಯವೆನ್ನುವಂತಿದೆ. ಈಗಲೂ ಈ ರಿಯಾಲ್ಟಿ ಸೂಚ್ಯಂಕವು ಕೇವಲ 1,811 ರಲ್ಲಿದೆ. ಅಂದರೆ ವಹಿವಾಟುದಾರರು ಮುಂದಿನ ದಿನಗಳಲ್ಲಿ ಈ ವಲಯದ ಕಂಪೆನಿಗಳತ್ತ ಒಲವು ತೋರಬಹುದೇ ಕಾದುನೋಡೋಣ.  2008 ರಲ್ಲಿನ ಗರಿಷ್ಠ ಹಂತವನ್ನು ತಲುಪಲು ಸಾಧ್ಯವಾಗದೇ ಇರುವುದೆಂದರೆ ಪವರ್‌ ವಲಯ ಸೂಚ್ಯಂಕವು ಆಗಿನ ಹಂತವಾದ 4,929 ಅಂಶಗಳನ್ನು ತಲುಪುವುದು ಇದುವರೆಗೂ ಅಸಾಧ್ಯವಾಗಿ ಈಗ 2224 ಅಂಶಗಳಲ್ಲಿದೆ.

ಹಿಂದಿನ ಗರಿಷ್ಠ ದಾಖಲೆಗಳನ್ನು ತಲುಪಲು ಅಸಾಧ್ಯವಾಗಿರುವ ವಲಯಗಳೆಂದರೆ ಬಿಎಸ್‌ಇ ಆಯಿಲ್‌ ಅಂಡ್‌ ಗ್ಯಾಸ್‌, ಬಿಎಸ್‌ಇ ಮೆಟಲ್‌, ಬಿಎಸ್‌ಇ ಸ್ಮಾಲ್‌ ಕ್ಯಾಪ್‌ಗಳಾಗಿವೆ. ಮುಂದಿನ ದಿನಗಳಲ್ಲಿ ಈ ವಿವಿಧ ವಲಯಗಳಲ್ಲಿನ ಉತ್ತಮ ಕಂಪೆನಿಗಳು ಹೂಡಿಕೆಗೆ ಅವಕಾಶ ಕಲ್ಪಿಸಿಕೊಡಬಹುದು. ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ 2008ರ ಗರಿಷ್ಠ ದರಗಳನ್ನು ಪರಿಗಣಿಸಿ ನಿರ್ಧರಿಸದೆ ಈಗಿನ ಪರಿಸ್ಥಿತಿ ಮತ್ತು ವಾಸ್ತವತೆ ಅರಿತು ನಿರ್ಧರಿಸುವುದು ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT