ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29 ಸಾವಿರ ಗಡಿ ದಾಟಿದ ಸಂವೇದಿ ಸೂಚ್ಯಂಕ

Last Updated 15 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಫೆಬ್ರುವರಿ 13 ರಂದು ಅಂತ್ಯವಾದ ವಾರ­ದಲ್ಲಿ ಸಂವೇದಿ ಸೂಚ್ಯಂಕವು 29 ಸಾವಿರದ ಗಡಿಯನ್ನು ದಾಟಿ ಮತ್ತೊಮ್ಮೆ ಹೂಡಿಕೆದಾರರಲ್ಲಿ ಉತ್ಸಾಹವನ್ನು ಚಿಗುರಿಸಿದೆ.

ಫೆಬ್ರುವರಿ 5 ರಿಂದಲೂ ಸಂವೇದಿ ಸೂಚ್ಯಂಕವು 29 ಸಾವಿರದೊಳಗೆ ಕುಸಿದು ನಂತರ ಸತತ ಇಳಿಕೆಯನ್ನು ವೈವಿಧ್ಯಮಯ ಕಾರಣಗಳಿಂದ ಪ್ರದರ್ಶಿಸಿ 13ನೇ ಶುಕ್ರವಾರದಂದು ಮತ್ತೊಮ್ಮೆ 29 ಸಾವಿರದ ಗಡಿ ದಾಟಿರುವುದು ಪೇಟೆಯಲ್ಲಿನ ಚಟುವಟಿಕೆಯ ರಭಸಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ತಿಂಗಳ ಆರಂಭದಿಂದಲೂ ಮಾರಾಟದ ಒತ್ತಡದಿಂದ ಪ್ರತಿ ದಿನವೂ ಹಾನಿಗೊಳಗಾಗುತ್ತಿದ್ದ ಸೂಚ್ಯಂಕವು ಫೆ. 11 ರಿಂದ ಮೂರುದಿನವೂ ಏರಿಕೆ­ಯತ್ತ ತಿರುಗಿರುವುದು ಗಮನಾರ್ಹ. ಬ್ಯಾಂಕಿಂಗ್‌ ವಲಯದಲ್ಲಿ ಎನ್‌.ಪಿ.ಎ. ಪ್ರಮಾಣ ಹೆಚ್ಚು, ನಿರೀಕ್ಷಿತ ಫಲಿತಾಂಶವಿಲ್ಲವೆಂಬ ಸಕಾರಾತ್ಮಕ ಭಾವನೆ ಮೂಡಿಸಿ, ಭಾರತೀಯ ಸ್ಟೇಟ್ ಬ್ಯಾಂಕ್‌ ಫಲಿತಾಂಶ ಪ್ರಕಟ­ವಾಗುತ್ತಿದ್ದಂತೆಯೇ ಎಲ್ಲವೂ ಸಕಾರಾತ್ಮಕವಾಗಿ ಸ್ಪಂದಿಸಿ ಚುರುಕಾದ ಮುನ್ನಡೆ ಪಡೆದು ಕೊಂಡ ರೀತಿಯು ‘ವ್ಯಾಲ್ಯು ಪಿಕ್‌ – ಪ್ರಾಫಿಟ್ ಬಂಕ್‌’ ಎಂಬ ನಮ್ಮ ಕಳೆದ ವಾರದಲ್ಲಿ ಅಂಕಣದ ಶೈಲಿಯು ಬಿಂಬಿತವಾಗಿದೆ.

ಇಂತಹ ವಾತಾವರಣದಲ್ಲಿ ಸಾರ್ವಜನಿಕ ವಲಯದ ಆಯಿಲ್‌ ಇಂಡಿಯಾ, ಒ.ಎನ್‌.ಜೆ.ಸಿ., ಗೇಲ್‌ ಇಂಡಿಯಾ, ಎಂಜಿನಿಯರ್ಸ್ ಇಂಡಿಯಾ­ಗಳು ಇಳಿಕೆ ಕಂಡಿರುವುದು ಮುಂದಿನ ದಿನಗಳಲ್ಲಿ  ಕೇಂದ್ರ ಬಿಂದುವಾಗ­ಬಹುದು. ಟೆಕ್ನಾಲಜಿ ವಲಯದ ಎಚ್‌.ಸಿ.ಎಲ್. ಟೆಕ್‌, ಇನ್‌ಫೋಸಿಸ್‌, ಟೆಕ್‌ ಮಹೀಂದ್ರ, ವಿಪ್ರೋ ಕಂಪೆನಿಗಳು ಚುರುಕಾದ ಮುನ್ನಡೆ ಕಂಡುಕೊಂಡವು.

ನೆಸ್ಲೆ ಕಂಪೆನಿಯು ಶುಕ್ರವಾರ ಫಲಿತಾಂಶ­ದೊಂದಿಗೆ ರೂ12.50 ಲಾಭಾಂಶ ಪ್ರಕಟಿಸಿದ ಕಾರಣ ಸುಮಾರು 218 ರೂಪಾಯಿಗಳ ಏರಿಕೆ ಕಂಡಿದೆ. ಶನಿವಾರದಂದು ತನ್ನ ಫಲಿತಾಂಶ ಪ್ರಕಟಿಸಲಿರುವ ಬಾಲಕೃಷ್ಣ ಇಂಡಸ್ಟ್ರೀಸ್‌ ಷೇರು ರೂ715ರ ವರೆಗೂ ಏರಿಕೆ ಕಂಡು ರೂ708 ರಲ್ಲಿ ಕೊನೆಗೊಂಡಿದೆ. ಹಿಂದಿನ ತ್ರೈಮಾಸಿಕ ಫಲಿತಾಂಶದ ನಂತರ ಷೇರಿನ ಬೆಲೆಯು ರೂ 850ರ ಸಮೀಪದಿಂದ ರೂ550ರ ವರೆಗೂ ಕುಸಿದಿತ್ತು ಎಂಬುದು ನೆನಪಿರಬೇಕಾದ ಅಂಶವಾಗಿದೆ.

ಆದರೆ ಶನಿವಾರದಂದು ಪ್ರಕಟಿಸ­ಲಿರುವ ಫಲಿತಾಂಶದ ಕಾರಣ ಆಯಿಲ್‌ ಇಂಡಿಯಾ ರೂ530 ರಿಂದ ರೂ499ರ ವರೆಗೂ ಇಳಿಕೆ ಕಂಡು ರೂ502 ರಲ್ಲಿ ಕೊನೆಗೊಂಡಿದೆ. ಒಂದೇ ರೀತಿಯ ಸೂತ್ರ ಎಲ್ಲಾ ಕಂಪೆನಿಗಳಿಗೂ ಅನ್ವಯಿಸ­ಲಾರ­ದೆನ್ನಬಹುದು.

ಒಟ್ಟಾರೆ ಈ ವಾರ 130 ಅಂಶಗಳ ಏರಿಕೆ­ಯನ್ನು ಕಂಡ ಸಂವೇದಿ ಸೂಚ್ಯಂಕವು ನಿರಾಶೆ ಭಾವನೆ­ಯನ್ನು ಕೊಡವಿ ಚೇತರಿಕೆ ಮೂಡಿಸಿದೆ. ಇದಕ್ಕೆ ಪೂರಕವಾಗಿ ಮಧ್ಯಮ ಮತ್ತು ಕೆಳ­ಮಧ್ಯಮ ಶ್ರೇಣಿ ಸೂಚ್ಯಂಕಗಳು ಏರಿಕೆ ಪ್ರದರ್ಶಿಸಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಸತತ ಮಾರಾಟ ಮಾಡಿದರೆ ಸ್ವದೇಶಿ ಸಂಸ್ಥೆಗಳು ಬೆಂಬಲಿಸಿ ಹೂಡಿಕೆ ಮಾಡಿವೆ.

ಕಂಪೆನಿ ಚಟುವಟಿಕೆ ಬೇರ್ಪಡಿಸುವಿಕೆ
ಕ್ರಾಂಪ್ಟನ್‌ ಗ್ರೀವ್ಸ್ ಲಿ. ಕಂಪೆನಿಯು 19 ರಂದು ಗ್ರಾಹಕ ಉತ್ಪನ್ನಗಳ ವಿಭಾಗವನ್ನು, ಕ್ರಾಂಪ್ಟನ್‌ ಗ್ರೀವ್ಸ್ ಕನ್ಸೂಮರ್‍ಸ್ ಪ್ರಾಡಕ್ಟ್ಸ್ ಲಿ ನೊಂದಿಗೆ ವ್ಯವಸ್ಥಿತ ಯೋಜನೆಯಂತೆ ಬೇರ್ಪಡಿಸುವುದನ್ನು ಪರಿಶೀಲಿಸಿದೆ. ಕಾಂಪ್ಟನ್‌ ಗ್ರೀವ್ಸ್ ಕಂಪೆನಿಯು ಕ್ರಾಂಪ್ಟನ್‌ ಗ್ರೀವ್ಸ್ ಕನ್ಸೂಮರ್‍ಸ ಪ್ರಾಡಕ್ಟ್ ಕಂಪೆನಿಯಲ್ಲಿನ ಷೇರು­ಗಳನ್ನು ರದ್ದುಗೊಳಿಸಿಕೊಳ್ಳುವ ಸಾಧ್ಯತೆ ಇದ್ದು ಇದರಿಂದ ಶೇ100 ರಷ್ಟು ಬೇರ್ಪಡಿಸಿ­ದಂತಾಗುತ್ತದೆ.

ವಾರದ ವಿಶೇಷ
ಮೌಲ್ಯಾಧಾರಿತ ಕೊಳ್ಳುವಿಕೆ: ಷೇರುಗಳ ದರದಲ್ಲಿ ಏರಿಳಿತ

ಷೇರು ಪೇಟೆಯ ವಿಶೇಷತೆ ಎಂದರೆ ಹಿಂದಿನ ಬೆಳವಣಿಗೆಗಳನ್ನು ಕಡೆಗಣಿಸಿ ಭವಿಷ್ಯದ ಬೆಳವಣಿಗೆ­ಗಳಿಗೆ ಮಾನ್ಯತೆ ನೀಡುವುದು. ಷೇರುಪೇಟೆಗಳ ಸೂಚ್ಯಂಕಗಳ ಏರಿಳಿತಕ್ಕೆ ತಕ್ಕಂತೆ ಕಾರಣಗಳು ಸೃಷ್ಟಿಯಾಗುತ್ತವೆ. ಕಳೆದ ವಾರದ ಮೊದಲನೆ ದಿನದಂದು ದೆಹಲಿಯ ಚುನಾವಣೆಯ ಕಾರಣ ಪೇಟೆಯು ಕುಸಿತ ಕಂಡಿತಾದರೂ ನಿರೀಕ್ಷಿತ ಫಲಿತಾಂಶದ ನಂತರ ಪೇಟೆಯು ಏರಿಕೆ ಕಂಡಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಆದರೆ ಆ ವಿಷಯವು  ಮುಗಿದ ಘಟನೆ­ಯಾದ್ದರಿಂದ ಪೇಟೆಯು  ಮುಂದಿನ ಬಜೆಟ್‌ ಮಂಡಣೆಯಾಗುವ ವಿಚಾರದತ್ತ ಚಟುವಟಿಕೆ ಕೇಂದ್ರೀಕರಿಸಿದೆ. ಅಂದರೆ ಭವಿಷ್ಯದತ್ತ ತನ್ನ ನೋಟ ಹರಿಸಿದೆ.

ಕಾರ್ಪೊರೇಟ್‌ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿಲ್ಲದಿದ್ದರೂ, ಮೊದಲೇ ಷೇರುಗಳು ಕುಸಿತ ಕಂಡಿದ್ದರಿಂದ ಮೌಲ್ಯಾಧಾರಿತ ಕೊಳ್ಳುವಿಕೆಯು ಷೇರುಗಳು ದರಗಳಲ್ಲಿ ಏರಿಕೆ ಕಾಣುವಂತೆ ಮಾಡಿದೆ.

ಅಗ್ರಮಾನ್ಯ ಕಂಪೆನಿಗಳಾದ ಬಯೋಕಾನ್‌, ಕೆನರಾ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಗೇಲ್‌ ಇಂಡಿಯಾ, ಮಹೀಂದ್ರ ಅಂಡ್‌ ಮಹೀಂದ್ರ, ಎಂ ಅಂಡ್‌ ಎಂ ಫೈನಾನ್ಸ್, ಸನ್‌ ಫಾರ್ಮಾ, ಗ್ಲೆನ್‌ಮಾರ್ಕ್‌ ಫಾರ್ಮಾ ಮುಂತಾದವುಗಳು ಹೆಚ್ಚಿನ ಏರಿಳಿತ ಪ್ರದರ್ಶಿಸಿವೆ.

ಆಯಿಲ್‌ ಇಂಡಿಯಾ ಕಂಪೆನಿಯ ತ್ರೈಮಾಸಿಕ ಫಲಿತಾಂಶ ಒಂದು ದಿನ ಮುಂದೂಡಿದ್ದರಿಂದ ಸುಮಾರು ಶೇ 5 ರಷ್ಟು ಕುಸಿತ ಕಂಡಿತು. ಕ್ರಾಂಪ್ಟನ್‌ ಗ್ರೀವ್ಸ್ ಕಂಪೆನಿಯು ವಿಭಾಗಗಳ ಬೇರ್ಪಡಿಸುವ ಚಿಂತನೆ ಕಾರಣ ವಾರಾಂತ್ಯದಲ್ಲಿ ಏರಿಕೆ ಪಡೆಯಿತು. ಕೋಲ್‌ ಇಂಡಿಯಾ ಕಂಪೆನಿಯ ಬಂಡವಾಳ ಹಿಂತೆಗೆತದ  ನಂತರ ರೂ376ರ ಸಮೀಪಕ್ಕೆ ಏರಿಕೆ ಕಂಡಿದೆ.

ಐಟಿಸಿ ಕಂಪೆನಿಯು ರಭಸದ ಮುನ್ನಡೆಯಿಂದ ರೂ 378ರ ಸಮೀಪಕ್ಕೆ ಜಿಗಿದರೆ, ಜೆ.ಕೆ.ಟೈರ್‌ ಕಂಪೆನಿ ರೂ124ರ ಸಮೀಪ ತಲುಪಿ ಉತ್ತಮ ಏರಿಕೆ ದಾಖಲಿಸಿದೆ.

ಭಾರತೀಯ  ಸ್ಟೇಟ್‌ ಬ್ಯಾಂಕ್‌ ಫಲಿತಾಂಶವು ತಟಸ್ಥಮಯವಾಗಿದ್ದರೂ ಈಗಾಗಲೇ ಹೆಚ್ಚು ಕುಸಿತದಲ್ಲಿದ್ದ ಕಾರಣ ಚುರುಕಾದ ಏರಿಕೆ ಪಡೆದು ಸುಮಾರು 20 ರೂಪಾಯಿಗಳಷ್ಟು ಜಿಗಿತವನ್ನು ಪ್ರದರ್ಶಿಸಿ ವಲಯದ ಇತರೆ ಕಂಪೆನಿ­ಗಳಾದ ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ಗಳು ಮುಂತಾದವು ಮುನ್ನಡೆ ಕಾಣುವಂತೆ ಮಾಡಿತು. ಅತೀವ ಕುಸಿತದಲ್ಲಿದ್ದ  ಹೆಚ್ಚಿನ ಪ್ರಮುಖ ಕಂಪೆನಿ­ಗಳು ಏರಿಕೆ ಕಾಣುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT