ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಕೋಡ್: ಸಾಹಿತಿಗಳೂ ಸರ್ಕಾರವೂ ಮರೆತ ವಿಚಾರಗಳು

Last Updated 18 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಯೂನಿಕೋಡ್ ಕನ್ನಡ ತಂತ್ರಾಂಶವನ್ನು ಜನಪ್ರಿಯಗೊಳಿಸಲು ಡಾ ಚಿದಾನಂದ ಗೌಡ ಸಮಿತಿಯ ಶಿಫಾರಸ್ಸನ್ನು ಜಾರಿಗೆ ತರಲಾಗುವುದು.' ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾತಂತ್ರ್ಯೋತ್ಸವ ದಿನದ ಭಾಷಣದ ಸಾಲು. ಡಾ ಚಿದಾನಂದ ಗೌಡ ನೇತೃತ್ವದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ತನ್ನ ಅಂತಿಮ ವರದಿಯನ್ನು ನೀಡಿದ ನಂತರ ಮೂವರು ಮುಖ್ಯಮಂತ್ರಿಗಳು ಮಾಜಿಯಾಗಿದ್ದಾರೆ.

ಸಿದ್ದರಾಮಯ್ಯನವರು ಈ ವರದಿಯ ಬಗ್ಗೆ ಮಾತನಾಡುತ್ತಿರುವ ನಾಲ್ಕನೇ ಮುಖ್ಯಮಂತ್ರಿ.ಇಲ್ಲಿಯ ತನಕವೂ `ಯೂನಿಕೋಡ್' ಅಂದರೆ ಏನು ಮತ್ತು ಅದು ಏಕೆ ಅಗತ್ಯ ಎಂಬುದು ಸರ್ಕಾರಕ್ಕೆ ಅರ್ಥವಾಗಿರುವಂತೆ ಕಾಣಿಸುವುದಿಲ್ಲ. ಈ ಕಾರಣದಿಂದಾಗಿಯೇ `ಯೂನಿಕೋಡ್ ಕನ್ನಡ ತಂತ್ರಾಂಶವನ್ನು ಜನಪ್ರಿಯಗೊಳಿಸಲು' ಎಂಬಂಥ ಮಾತುಗಳು ಮುಖ್ಯಮಂತ್ರಿಗಳ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕಾಣಿಸಿಕೊಂಡಿದೆ.

ವಾಸ್ತವದಲ್ಲಿ ಮುಖ್ಯಮಂತ್ರಿ ಅಥವಾ ಅಧಿಕಾರಶಾಹಿ ಭಾವಿಸಿರುವಂತೆ `ಯೂನಿಕೋಡ್' ಎಂಬುದು ಒಂದು ತಂತ್ರಾಂಶವಲ್ಲ. ಅದೊಂದು ಶಿಷ್ಟತೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉದ್ಯಮ ತಾನು ತಯಾರಿಸುವ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ರೋಮನ್ ಹೊರತಾದ ಲಿಪಿಗಳನ್ನು ಬಳಸುವ ಭಾಷೆಗಳನ್ನೂ ಅಳವಡಿಸಿಕೊಳ್ಳಲು ಕಂಡುಕೊಂಡ ಜಾಗತಿಕ ಶಿಷ್ಟತೆ ಇದು. ಈ ಶಿಷ್ಟತೆಯನ್ನು ಅಳವಡಿಸಿಕೊಂಡಿರುವ ಕಂಪ್ಯೂಟರ್, ಫೋನ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಂವಹನದ ಉಪಕರಣದಲ್ಲಿ ಕನ್ನಡ ಪಠ್ಯವನ್ನು ಬರೆದರೆ ಅದು ಕನ್ನಡದಲ್ಲಿದೆ ಎಂಬುದು ಬರೆದು, ಓದುವ ಮನುಷ್ಯನಿಗಷ್ಟೇ ಅಲ್ಲದೆ ಆ ಯಂತ್ರಕ್ಕೂ ಅರ್ಥವಾಗುತ್ತದೆ.

ಸಾಮಾನ್ಯವಾಗಿ `ಬರಹ' ಅಥವಾ `ನುಡಿ' ತಂತ್ರಾಂಶ ಬಳಸಿ ರಚಿಸಿದ ಕನ್ನಡ ಪಠ್ಯ ಆಯಾ ತಂತ್ರಾಂಶಗಳು ಅಥವಾ ಅಕ್ಷರ ಮಾದರಿಗಳನ್ನು (ಫಾಂಟ್) ಅಳವಡಿಸದ ಕಂಪ್ಯೂಟರ್‌ಗಳಲ್ಲಿ ಓದಲು ಸಾಧ್ಯವಿಲ್ಲ. ಯೂನಿಕೋಡ್ ಶಿಷ್ಟತೆಯನ್ನು ಅಳವಡಿಸಿಕೊಂಡಿರುವ ತಂತ್ರಾಂಶ ಬಳಸಿ ಕನ್ನಡ ಪಠ್ಯ ರಚಿಸಿದರೆ ಆ ಶಿಷ್ಟತೆಯಿರುವ ಯಾವುದೇ ಕಂಪ್ಯೂಟರ್ ಅಥವಾ ಗ್ಯಾಜೆಟ್‌ಗಳಲ್ಲಿ ಅದನ್ನು ಓದಲು ಸಾಧ್ಯ. ಯೂನಿಕೋಡ್‌ನ ಉಪಯೋಗ ಇಷ್ಟು ಮಾತ್ರವಲ್ಲ. ಈ ಶಿಷ್ಟತೆಯನ್ನು ಅಳವಡಿಸಿಕೊಂಡರೆ ಕಂಪ್ಯೂಟರ್‌ನಲ್ಲಿ ಇಂಗ್ಲಿಷ್‌ನಲ್ಲಿ ಮಾಡಬಹುದಾದ (ರೋಮನ್ ಲಿಪಿಯನ್ನು ಬಳಸಿ ಮಾಡಬಹುದಾದ) ಎಲ್ಲಾ ಕೆಲಸಗಳನ್ನೂ ಕನ್ನಡ ಬಳಸಿಯೂ ಮಾಡಬಹುದು.

ಈ ವಿಷಯ ಸರ್ಕಾರದಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವವರನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಕನ್ನಡಿಗರಿಗೆ ಚೆನ್ನಾಗಿ ತಿಳಿದಿದೆ. ಕನ್ನಡದಲ್ಲಿ ಬ್ಲಾಗಿಂಗ್ ಮಾಡುತ್ತಿರುವ ಸಾವಿರಾರು ಮಂದಿ ಯೂನಿಕೋಡ್ ಬಳಸುತ್ತಿದ್ದಾರೆ. ಕನ್ನಡದ ಎಲ್ಲಾ ಪ್ರಮುಖ ದಿನಪತ್ರಿಕೆಗಳ ವೆಬ್‌ಸೈಟ್‌ಗಳೂ ಈಗ ಯೂನಿಕೋಡ್ ಬಳಸುತ್ತಿವೆ. ಇಲ್ಲಿನ ಸುದ್ದಿಗಳು ಮತ್ತು ಬರಹಗಳಿಗೆ ಪ್ರತಿಕ್ರಿಯಿಸುವ ಲಕ್ಷಾಂತರ ಮಂದಿ ಕನ್ನಡಿಗರು ಯೂನಿಕೋಡ್ ಶಿಷ್ಟತೆಯನ್ನೇ ಬಳಸುತ್ತಾರೆ.

ಅಷ್ಟೇಕೆ ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಜಾಲತಾಣಗಳನ್ನು ಬಳಸುವ ಲಕ್ಷಾಂತರ ಕನ್ನಡಿಗರೂ ಯೂನಿಕೋಡ್ ಶಿಷ್ಟತೆಯನ್ನೇ ಬಳಸಿ ಕನ್ನಡದಲ್ಲಿ `ಸ್ಟೇಟಸ್ ಅಪ್‌ಡೇಡ್' ಮಾಡುತ್ತಾರೆ. ದುಬಾರಿ ಐ-ಫೋನ್ ಮತ್ತು ಐ-ಪ್ಯಾಡ್‌ಗಳಲ್ಲಿಯೂ ಕನ್ನಡ ಬಳಸುವವರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿದೆ. ಕನ್ನಡ ಟೈಪಿಸುವುದಕ್ಕೆ ಐ-ಟ್ಯೂನ್ಸ್‌ನಲ್ಲಿ ಹಲವು ಕಿರು ತಂತ್ರಾಂಶಗಳು ಮಾರಾಟಕ್ಕಿರುವುದೇ ಇದಕ್ಕೆ ಸಾಕ್ಷಿ. ಆಂಡ್ರಾಯಿಡ್ ಫೋನ್ ಬಳಸುವವರಿಗಂತೂ ಕನ್ನಡ ಟೈಪಿಸುವುದಕ್ಕೆ ಹಲವು ಆಯ್ಕೆಗಳಿವೆ.

ಎರಡರಿಂದ ಐದು ಸಾವಿರ ರೂಪಾಯಿಗಳಿಗೆ ಲಭ್ಯವಿರುವ ನೋಕಿಯಾ, ಸ್ಯಾಮ್ಸಂಗ್ ಇತ್ಯಾದಿ ಕಂಪೆನಿಗಳ ಬಹುತೇಕ ಫೋನುಗಳಲ್ಲಿ ಕನ್ನಡ ಓದುವ ಮತ್ತು ಬರೆಯುವ ಸೌಲಭ್ಯವಿದೆ. ಇಲ್ಲಿಯೂ ಯೂನಿಕೋಡ್ ಶಿಷ್ಟತೆಯೇ ಬಳಕೆಯಲ್ಲಿದೆ. ಯೂನಿಕೋಡ್ ಅನ್ನು ಜನಪ್ರಿಯಗೊಳಿಸಬೇಕಿರುವುದು ಸರ್ಕಾರದ ಒಳಗೆಯೇ ಹೊರತು ಹೊರಗಲ್ಲ. ಅಂದರೆ ಸರ್ಕಾರಿ ವೆಬ್ ಸೈಟುಗಳಲ್ಲಿ, ಸರ್ಕಾರದ ದಿನ ನಿತ್ಯದ ವ್ಯವಹಾರಗಳಲ್ಲಿ ಯೂನಿಕೋಡ್ ಬಳಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ.

ಅಧಿಕಾರಶಾಹಿ ಯಾವತ್ತೂ ಕನ್ನಡದಂಥ ಭಾಷೆಯನ್ನು ಆಡಳಿತದಲ್ಲಿ ಬಳಸುವುದಕ್ಕೆ ಯಾವತ್ತೂ ತಾನಾಗಿಯೇ ಮುಂದಾಗಿಲ್ಲ. ಸರ್ಕಾರಿ ವ್ಯವಹಾರಗಳಲ್ಲಿ ಕಂಪ್ಯೂಟರ್ ಬಳಕೆ ಆರಂಭಗೊಂಡಾಗ ಅದರಲ್ಲಿ ಕನ್ನಡ ಬಳಸುವುದು ಕಷ್ಟ ಎಂಬ ನೆಪವೊಡ್ಡಿ ಹಲವು ವರ್ಷ ಹಿರಿಯ ಅಧಿಕಾರಿಗಳ ನಡುವಣ ಪತ್ರವ್ಯವಹಾರ ಇಂಗ್ಲಿಷ್‌ನಲ್ಲಿಯೇ ನಡೆಯುತ್ತಿತ್ತು. ಈಗಲೂ ಮೇಲಿನ ಮಟ್ಟದ ಸಂವಹನ ನಡೆಯುವುದು ಇಂಗ್ಲಿಷ್‌ನಲ್ಲಿಯೇ. ಯೋಜನೆಗಳ ಕರಡು ಇತ್ಯಾದಿಗಳೆಲ್ಲವೂ ಇಂಗ್ಲಿಷ್‌ನಲ್ಲಿಯೇ ಇರುತ್ತದೆ.

ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕೇಳಬರುವ ನೆಪ `ತಾಂತ್ರಿಕ ತೊಂದರೆ'. ಈ  ಕುಂಟು ನೆಪಗಳನ್ನು ಅಂತ್ಯಗೊಳಿಸಲು ಜನಪ್ರತಿನಿಧಿಗಳಿಗೆ ಸಾಧ್ಯ. ಇನ್ನು ಸರ್ಕಾರ ಯೂನಿಕೋಡ್‌ನ ವಿಷಯದಲ್ಲಿ ಏನಾದರೂ ಮಾಡಬೇಕೆಂದಿದ್ದರೆ ಅದು ಈ ಬಗೆಯ `ಜಾಗತಿಕ ಶಿಷ್ಟತೆ' ಒಡ್ಡುವ ಸಾಂಸ್ಕೃತಿಕ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು. ಈ ನಿಟ್ಟಿನಲ್ಲಿ ಆಂಧ್ರಪ್ರದೇಶ ಸರ್ಕಾರ ಒಂದು ಹೆಜ್ಜೆಯನ್ನು ಮುಂದಿಟ್ಟಿರುವಂತಿದೆ.

ಯೂನಿಕೋಡ್ ಶಿಷ್ಟತೆಯ ಕುರಿತಂತೆ ತೀರ್ಮಾನ ಕೈಗೊಳ್ಳುವ ಯೂನಿಕೋಡ್ ಕನ್ಸಾರ್ಷಿಯಂನಲ್ಲಿ ಆಂಧ್ರಪ್ರದೇಶ ಸರ್ಕಾರ ಸದಸ್ಯತ್ವ ಪಡೆದುಕೊಂಡಿದೆ. ತಮಿಳುನಾಡು ಸರ್ಕಾರ ತಾನು ಖರೀದಿಸುವ ಮಾಹಿತಿ ತಂತ್ರಜ್ಞಾನ ಸಂಬಂಧಿ ಉತ್ಪನ್ನ ಮತ್ತು ಸೇವೆಗಳ ಪ್ರಮಾಣವನ್ನು ಮುಂದಿಟ್ಟುಕೊಂಡು ಯೂನಿಕೋಡ್ ಕನ್ಸಾರ್ಷಿಯಂ ತಮಿಳು ಭಾಷೆಯ ಬೇಡಿಕೆಗಳಿಗೆ ಸ್ಪಂದಿಸುವಂತೆ ಮಾಡಿತ್ತು. ಇಂಥ `ಅಧಿಕೃತ ಮಧ್ಯಪ್ರವೇಶ'ಗಳ ಅಗತ್ಯವಿಲ್ಲದೆಯೇ ಯೂನಿಕೋಡ್‌ನಲ್ಲಿರುವ ಕನ್ನಡ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಿದೆ.

ಆದರೆ ಕನ್ನಡ ಲಿಪಿಯನ್ನು ಬಳಸುವ ತುಳು, ಕೊಂಕಣಿ, ಬ್ಯಾರಿ, ಕೊಡವ ಭಾಷೆಗಳ ಸಮಸ್ಯೆಗಳಿನ್ನೂ ಉಳಿದುಕೊಂಡಿವೆ. ರೋಮನ್ ಲಿಪಿಯನ್ನು ಬಳಸದ ಭಾಷೆಗಳನ್ನೂ ಮಾಹಿತಿ ಮತ್ತು ಸಂಹವನ ತಂತ್ರಜ್ಞಾನದ ತೆಕ್ಕೆಗೆ ತೆಗೆದುಕೊಂಡು ಬರಬೇಕೆಂಬ ಮಹತ್ವದ ಉದ್ದೇಶ ಯೂನಿಕೋಡ್ ಶಿಷ್ಟತೆಯನ್ನು ರೂಪಿಸುವುದರ ಹಿಂದೆ ಇದೆ. ಜೊತೆಗೆ ರೋಮನೇತರ ಲಿಪಿಗಳನ್ನು ಬಳಸುವ ಮಾರುಕಟ್ಟೆಯ ಬೃಹತ್ ಗಾತ್ರವೂ ಈ ಶಿಷ್ಟತೆಗೆ ಪ್ರೇರಕ ಶಕ್ತಿ. ಯೂನಿಕೋಡ್ ಶಿಷ್ಟತೆಯ ಮೊದಲ ಆವೃತ್ತಿ ಹೊರಬಂದದ್ದು 1991ರ ಅಕ್ಟೋಬರ್ ತಿಂಗಳಿನಲ್ಲಿ.

ಆಗ ಅದರಲ್ಲಿ 24 ಭಾಷೆಗಳಿಗೆ ಸಂಬಂಧಿಸಿದ ಶಿಷ್ಟತೆಗಳನ್ನು ನಿರ್ಣಯಿಸಲಾಗಿತ್ತು. ಇದರಲ್ಲಿ ಕನ್ನಡವೂ ಸೇರಿದಂತೆ ಒಂಬತ್ತು ಭಾರತೀಯ ಭಾಷೆಗಳಿದ್ದವು. ಅಂತಾರಾಷ್ಟ್ರೀಯ ಶಿಷ್ಟತಾ ಸಂಸ್ಥೆಯ (ಐಎಸ್‌ಓ) ಈ ನಿರ್ಧಾರಕ್ಕೆ ಸಂಬಂಧಿಸಿದ ವಿಚಾರ ಭಾರತದಲ್ಲಿ ಯಾರಿಗಾದರೂ ಗೊತ್ತಿತ್ತೇ ಎಂಬ ಪ್ರಶ್ನೆಗೆ ಈತನಕ ಯಾವ ಸಂಶೋಧಕರಿಗೂ ಉತ್ತರ ಗೊತ್ತಾಗಿಲ್ಲ. ಭಾರತೀಯ ಭಾಷೆಗಳಲ್ಲಿ ಕಂಪ್ಯೂಟರ್ ಬಳಸುವವರಿಗೆ ಈ ವಿಷಯ ಗೊತ್ತಾದದ್ದು 2000ದ ಹೊತ್ತಿಗೆ.

ಈ ನಡುವಿನ ಹತ್ತು ವರ್ಷಗಳಲ್ಲಿ ಸಿ-ಡಾಕ್  ಭಾರತೀಯ ಭಾಷೆಗಳಿಗೆ ಐಎಸ್‌ಸಿಐಐ (ಇಂಡಿಯನ್ ಸ್ಕ್ರಿಪ್ಟ್‌ಕೋಡ್ ಫಾರ್ ಇನ್ಫಾರ್ಮೇಶನ್ ಇಂಟರ್ ಚೇಂಜ್) ಎಂಬ ಶಿಷ್ಟತೆಯೊಂದನ್ನು ರೂಪಿಸಿತ್ತು. ತಾರ್ಕಿಕವಾಗಿ ನೋಡಿದರೆ ಸಿ-ಡಾಕ್‌ಗೆ ಯೂನಿಕೋಡ್ ಎಂಬ ಜಾಗತಿಕ ಶಿಷ್ಟತೆ ವಿಚಾರ ತಿಳಿದಿರಬೇಕಿತ್ತು. ಅದು ತಿಳಿದೂ ತಪ್ಪು ಮಾಡಿತೋ ಅಥವಾ ಸರ್ಕಾರಿ ಆಲಸ್ಯವೋ ಒಟ್ಟಿನಲ್ಲಿ ಕಂಪ್ಯೂಟರ್‌ನಲ್ಲಿ ಭಾರತೀಯ ಭಾಷೆಗಳ ಬಳಕೆಯೆಂಬುದೊಂದುಗೊಂದಲದ ಗೂಡಾಗಿದ್ದಂತೂ ನಿಜ.

ಕನ್ನಡದಲ್ಲಿ ಯೂನಿಕೋಡ್‌ನ ಬಳಕೆ ಸಣ್ಣ ಪ್ರಮಾಣದಲ್ಲಿಯಾದರೂ ಆರಂಭವಾದದ್ದು 2001ರ ನಂತರವೇ. ಮೈಕ್ರೋಸಾಫ್ಟ್‌ನ ಎಕ್ಸ್‌ಪಿ ಎಂಬ ಆಪರೇಟಿಂಗ್ ಸಿಸ್ಟಂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ ಯೂನಿಕೋಡ್ ಬಳಕೆ ಹೆಚ್ಚುತ್ತಾ ಹೋಯಿತು. ಆಗ ಯೂನಿಕೋಡ್ ಸರಿಯಿಲ್ಲ ಎಂದು ಹೇಳುವುದಕ್ಕೆ ಅದರಲ್ಲಿದ್ದ ಅರ್ಕಾವೊತ್ತಿನ ಸಮಸ್ಯೆಯನ್ನು ಮುಂದಿಡಲಾಯಿತು. `ತುಂಗಾ' ಎಂಬ ಅಕ್ಷರ ಮಾದರಿಯಲ್ಲಿದ್ದ ಸಮಸ್ಯೆಯನ್ನು ಯೂನಿಕೋಡ್‌ನ ಸಮಸ್ಯೆ ಎನ್ನಲಾಯಿತು. ಈಗ ಇವೆಲ್ಲಾ ಪರಿಹಾರವಾಗಿದ್ದರೂ ಯೂನಿಕೋಡ್‌ನಲ್ಲಿ ಸಮಸ್ಯೆ ಇದೆ ಎಂಬುದನ್ನು ಕನ್ನಡದ ಬಹುತೇಕ ಸಾಹಿತಿಗಳು, ವಿವಿಧ ಸಂಸ್ಥೆಗಳ ಮುಖ್ಯಸ್ಥರು ನಂಬುತ್ತಾರೆ.

ಈ ಮೂಢನಂಬಿಕೆಗಳ ಪರಿಣಾಮವಾಗಿ ಯೂನಿಕೋಡ್ ತಂದೊಡ್ಡಿರುವ ನಿಜವಾದ ಸಾಂಸ್ಕೃತಿಕ ಸಮಸ್ಯೆಯ ಕುರಿತಂತೆ ಯಾರೂ ಚರ್ಚಿಸುತ್ತಿಲ್ಲ! ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೆಸರನ್ನು ದಕ್ಷಿಣ ಕನ್ನಡ ಭಾಗದಲ್ಲಿ `ಮೊಲಿ' ಎಂದು ಬರೆಯುತ್ತಾರೆ. ಹಾಗೆಯೇ ಪುತ್ತೂರು ಸಮೀಪ `ಕೊಲ' ಎಂಬ ಊರಿದೆ. ಕನ್ನಡದ ವ್ಯಾಕರಣ ನಿಯಮದಂತೆ ಒಂದೇ ವ್ಯಂಜನಕ್ಕೆ ಎರಡು ಸ್ವರಗಳು ಸೇರಲು ಸಾಧ್ಯವಿಲ್ಲ. ಯೂನಿಕೋಡ್‌ನಲ್ಲಿ ಈ ತತ್ವವನ್ನು ಕುರುಡಾಗಿ ಅನುಸರಿಸಿರುವುದರಿಂದ `ಕೊಲ' ಎಂದು ಬರೆಯಲು ಸಾಧ್ಯವೇ ಇಲ್ಲ. ಇದು ಒಂದು ಉದಾಹರಣೆ ಮಾತ್ರ.

ಕೊಂಕಣಿ, ತುಳು, ಬ್ಯಾರಿ, ಕೊಡವ ಭಾಷೆಗಳಲ್ಲಿ ಅರ್ಧದಷ್ಟು ಮಾತ್ರ ಉಚ್ಚರಿಸುವ ಸ್ವರಗಳಿವೆ. ಅವುಗಳನ್ನು ಕನ್ನಡ ಲಿಪಿಯಲ್ಲಿ ತೋರಿಸಲು ಸ್ವರಕ್ಕೆ ಅರ್ಧಾಕ್ಷರ ಬರೆಯುವಾಗ ಬಳಸುವ `್' ಚಿಹ್ನೆಯನ್ನು ಬಳಸಬೇಕಾಗುತ್ತದೆ. ಯೂನಿಕೋಡ್ ಇದಕ್ಕೆ ಎಲ್ಲಾ ಸಂದರ್ಭದಲ್ಲಿಯೂ ಅವಕಾಶ ಕೊಡುವುದಿಲ್ಲ. ಸ್ವಲ್ಪ ಸರ್ಕಸ್ ಮಾಡಿ ಇಂಥದ್ದನ್ನು ಯೂನಿಕೋಡ್‌ನಲ್ಲಿ ಮೂಡಿಸಲು ಸಾಧ್ಯವಾದರೂ ಅದು ಒಂದು ದತ್ತಸಂಚಯದಲ್ಲಿ ಬಂದಾಗ ಅಕಾರಾದಿ ವಿಂಗಡಿಸುವುದು ಹೇಗೆ ಎಂಬ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಇದಕ್ಕೆ ಶಿಷ್ಟತಾ ನೀತಿಯಲ್ಲೇ ಉತ್ತರ ಕಂಡುಕೊಳ್ಳಬೇಕು.

ಚೀನಾದಲ್ಲಿ ಯೂನಿಕೋಡ್ ಅನುಷ್ಠಾನಕ್ಕೆ ತಂದ ಹೊತ್ತಿನಲ್ಲಿ ಇಂಥದ್ದೊಂದು ಸಮಸ್ಯೆ ಉದ್ಭವಿಸಿತ್ತು. ಸುಮಾರು ಆರು ಕೋಟಿ ಮಂದಿಯ ಹೆಸರುಗಳನ್ನು ಕಂಪ್ಯೂಟರ್‌ನಲ್ಲಿ ಮೂಡಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಇವರೆಲ್ಲರ ಹೆಸರುಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿ ಇಲ್ಲದ ಚೀನೀ ಅಕ್ಷರಗಳಿದ್ದವು. ತುಳು, ಬ್ಯಾರಿ, ಕೊಡವ ಮೂಲದ ಹೆಸರುಗಳಿಗೆ ನಮ್ಮಲ್ಲೂ ಈ ಸ್ಥಿತಿ ಬಂದುಬಿಟ್ಟಿದೆ. ವೀರಪ್ಪ ಮೊಯ್ಲಿ ಎಂದು ಬರೆಯುವಲ್ಲಿಯೇ ಈ ರಾಜಿ ಮಾಡಿಕೊಂಡಾಗಿದೆ. `ಕೊಯ್ಲ' ಎಂದು ಈಗಾಗಲೇ ಬರೆಯುತ್ತಿದ್ದೇವೆ.

ಕೊಂಕಣಿಯದ್ದು ಮತ್ತಷ್ಟು ಸಂಕೀರ್ಣ ಸಮಸ್ಯೆ. ಈ ಭಾಷೆಯನ್ನು ದೇವನಾಗರಿ, ಕನ್ನಡ, ಮಲಯಾಳಂ ಮತ್ತು ರೋಮನ್ ಲಿಪಿಯಲ್ಲಿ ಬರೆಯುತ್ತಾರೆ. ಈ ಮೂರೂ ಲಿಪಿಗಳಲ್ಲಿ ರಚಿತವಾಗಿರುವ ಸಾಹಿತ್ಯವೂ ಲಭ್ಯವಿದೆ. ಆದರೆ ಕಂಪ್ಯೂಟರ್‌ನಲ್ಲಿ ಕೊಂಕಣಿಗೆ ಮಾನ್ಯತೆ ಇರುವುದು ದೇವನಾಗರಿ ಲಿಪಿಯಲ್ಲಿ ಮಾತ್ರ. ಬ್ಯಾರಿ ಮತ್ತು ಕೊಡವ ಭಾಷೆಗಳಿಗೆ ತಲಾ ಒಂದೊಂದು ಸಾಹಿತ್ಯ ಅಕಾಡೆಮಿಗಳಿರುವ ರಾಜ್ಯ ನಮ್ಮದಾದರೂ ಈ ಭಾಷೆಗಳಿಗೆ ಯೂನಿಕೋಡ್‌ನ ಸಂದರ್ಭದಲ್ಲಿರುವ ಸಮಸ್ಯೆಗಳ ಬಗ್ಗೆ ಯಾರೂ ಚರ್ಚಿಸಿಲ್ಲ. ಈ ಎರಡೂ ಭಾಷೆಗಳ ಸಮಸ್ಯೆಯೂ ಹೆಚ್ಚು ಕಡಿಮೆ ತುಳುವಿನಂಥದ್ದೇ.

ಕೊರಗರಿಗೇ ವಿಶಿಷ್ಟವಾಗಿರುವ ತುಳು, ಉತ್ತರ ಕನ್ನಡದ ಕೆಲ ಬುಡಕಟ್ಟುಗಳು ಮಾತನಾಡುವ ವಿಶಿಷ್ಟ ಕೊಂಕಣಿಗಳನ್ನೆಲ್ಲಾ ಪರಿಗಣಿಸಿದರೆ ಕಂಪ್ಯೂಟರ್ ಅನ್ಯಗೊಳಿಸುವ ಭಾಷೆಗಳು ಮತ್ತು ಪದಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಚೀನೀ ಭಾಷೆ ಯೂನಿಕೋಡ್ ಒಪ್ಪಿಕೊಂಡಾಗ ಆರು ಕೋಟಿ ಮಂದಿಯ ಹೆಸರುಗಳಷ್ಟೇ ಕಂಪ್ಯೂಟರ್‌ನಲ್ಲಿ ಮೂಡಲಿಲ್ಲ. ಕನ್ನಡ ಯೂನಿಕೋಡ್ ಒಪ್ಪಿಕೊಳ್ಳುವ ಕ್ರಿಯೆಯಲ್ಲಿ ಕನ್ನಡದ ಸೋದರ ಭಾಷೆಗಳು ಕನ್ನಡದಿಂದ ದೂರವಾಗುವ ಅಪಾಯವಿದೆ. ಇದನ್ನು ತಪ್ಪಿಸುವುದಕ್ಕೆ ಸಾಧ್ಯವಿರುವುದು ಕರ್ನಾಟಕ ಸರ್ಕಾರಕ್ಕೆ ಮಾತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಸೂಕ್ಷ್ಮ ಅರ್ಥವಾಗುತ್ತದೆ ಎಂದು ಭಾವಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT