ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಜೊತೆ ಮೋದಿ ಚರ್ಚೆಗೆ ಬರಲಿ: ಸಚಿವ ಸಂತೋಷ ಲಾಡ್‌ ಸವಾಲು

Published 3 ಮೇ 2024, 16:02 IST
Last Updated 3 ಮೇ 2024, 16:02 IST
ಅಕ್ಷರ ಗಾತ್ರ

ಜಮಖಂಡಿ: ‘ಪ್ರಧಾನಿ ಮೋದಿ ಅವರಿಗೆ ತಾಕತ್ತಿದ್ದರೆ ರಾಹುಲ್‌ ಗಾಂಧಿ ಬಳಿ ಹತ್ತು ನಿಮಿಷವಾದೂ ನಿಂತು, ಚರ್ಚೆ ಮಾಡಲಿ. ಆಗ ಅವರ ಮುಖವಾಡ ಗೊತ್ತಾಗುತ್ತದೆ. ನಿಜವಾಗಿ ಅವರು ಕೆಲಸ ಮಾಡಿದ್ದರೆ ಅಷ್ಟೊಂದು ಪ್ರಚಾರ ಏಕೆ ಬೇಕಿತ್ತು’ ಎಂದು ಸಚಿವ ಸಂತೋಷ ಲಾಡ್‌ ಪ್ರಶ್ನಿಸಿದರು.

ಇಲ್ಲಿನ ಶಿವಾಜಿ ವೃತ್ತದಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಮೋದಿಯಿಂದ ದೇಶ ಸಾಲದ ಸುಳಿಯಲ್ಲಿ ಸಿಲುಕಿದೆ. ಹತ್ತು ವರ್ಷದಲ್ಲಿ ಅಧೋಗತಿಗೆ ತಲುಪಿದೆ. ಉದ್ಯಮಿಗಳ ₹25 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಮೋದಿ, ರೈತರ ಸಾಲ ಮನ್ನಾ ಏಕೆ ಮಾಡುತ್ತಿಲ್ಲ’ ಎಂದು ಕೇಳಿದರು.

‘ಈ ದೇಶದಲ್ಲಿ ಒಳ್ಳೆಯದಾದರೆ ಮೋದಿ ಕಾರಣ, ಕೆಟ್ಟದಾದರೆ ಕಾಂಗ್ರೆಸ್ ಕಾರಣವೆಂದು ಅಪಪ್ರಚಾರ ಮಾಡಲಾಗುತ್ತಿದೆ. ಕೆಲ ಮಾಧ್ಯಮದವರು ಇವರನ್ನು ಇಂದ್ರ–ಚಂದ್ರ ಎಂಬಂತೆ ಬಿಂಬಿಸುತ್ತಿವೆ. ನಾವು ಭಾರತೀಯ ಹಿಂದೂಗಳು. ಬಿಜೆಪಿ, ಆರ್‌ಎಸ್‌ಎಸ್‌ನವರಂತೆ ನಕಲಿ ಹಿಂದೂಗಳಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬ್ರಿಟಿಷರು ಈ ದೇಶ ಬಿಟ್ಟು ಹೋಗುವಾಗ ಶಾಲೆ, ಆಸ್ಪತ್ರೆ, ನೀರು, ರೈಲು, ಅಂಗನವಾಡಿ ಇರಲಿಲ್ಲ. ಕುಷ್ಟ, ಪೋಲಿಯೊ ಕಾಯಿಲೆಯಿಂದ ಜನರು ಬಳಲುತಿದ್ದರು. ಇದೆಲ್ಲವನ್ನೂ ಎದುರಿಸಿ ಕಾಂಗ್ರೆಸ್, ದೇಶವನ್ನು ಕಟ್ಟಿದೆ’ ಎಂದರು.

‘ಮನಮೋಹನ್‌ ಸಿಂಗ್ 117 ಸುದ್ದಿಗೋಷ್ಠಿ ನಡೆಸಿದ್ದರು. ಆದರೆ, ಮೋದಿ ಒಂದೂ ಸುದ್ದಿಗೋಷ್ಠಿ ಮಾಡಿಲ್ಲವೇಕೆ? ಉದ್ಯೋಗಸೃಷ್ಟು, ಚುನಾವಣಾ ಬಾಂಡ್, ಬುಲೆಟ್ ರೈಲು, ಸ್ಮಾರ್ಟ್ ಸಿಟಿ ಮೊದಲಾದ ವಿಷಯಗಳ ಬಗ್ಗೆ ಚರ್ಚೆಗೆ ಬನ್ನಿ’ ಎಂದು ಮುಕ್ತ ಆಹ್ವಾನ ನೀಡಿದರು.

ಮುತ್ತಣ್ಣ ಹಿಪ್ಪರಗಿ, ಶ್ರೀಶೈಲ ದಳವಾಯಿ, ನಜೀರ ಕಂಗನೊಳ್ಳಿ, ವರ್ದಮಾನ ನ್ಯಾಮಗೌಡ, ತೌಫೀಮ ಪಾರ್ಥನಳ್ಳಿ, ಕಾಡು ಮಾಳಿ, ಕಲ್ಲಪ್ಪ ಗಿರಡ್ಡಿ, ಸಿದ್ದು‌ ಮೀಸಿ, ಎ.ಆರ್.ಶಿಂಧೆ, ದಾನೇಶ ಘಾಟಗೆ, ಇಲಾಯಿ ಕಂಗನೊಳ್ಳಿ, ಅನ್ವರ ಮೋಮಿನ, ರವಿ ಯಡಹಳ್ಳಿ, ಧನರಾಜ ಮೋರೆ, ಗುಡುಸಾಬ ಹೊನವಾಡ ಇದ್ದರು.

‘ಜನರಿಗೆ ಚೊಂಬು ನೀಡಿದ ಬಿಜೆಪಿ’
‘ನಾವು ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿಯಿಂದ ಸರ್ಕಾರದ ತೆರಿಗೆ ಹೆಚ್ಚಾಗಿದೆ ಸರ್ಕಾರ ದಿವಾಳಿ ಆಗಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಿಕೊಂಡು ಮತ ಕೇಳುವ ನೈತಿಕತೆ ನಮ್ಮಲ್ಲಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಆನಂದ ನ್ಯಾಮಗೌಡ ಹೇಳಿದರು. ‘ಬಿಜೆಪಿಯವರು ರಾಮ ಮತ್ತು ಸೈನಿಕರ ಹೆಸರಿನಲ್ಲಿ ಮತ ಕೇಳುತ್ತಾರೆ. ಅದರಿಂದ ಮತ ಬರದಿದ್ದರೆ ಹಿಂದೂ–ಮುಸ್ಲಿಂ ಹೆಸರು ಹೇಳಿ ಯುವಕರ ದಾರಿ ತಪ್ಪಿಸುತ್ತಾರೆ. ಕಾಂಗ್ರೆಸ್ ಯುವಕರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದೆ. 26 ಬಿಜೆಪಿ ಸಂಸದರು ಗಂಡಸರಿದ್ದರೆ ನಮ್ಮ ಪಾಲಿನ ತೆರಿಗೆ ಹಾಗೂ ಬರಗಾಲ ಪರಿಹಾರ ತರಬೇಕಾಗಿತ್ತು. ಆದರೆ ಅವರು ಜನರಿಗೆ ಚೊಂಬು ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT