ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಶ್ಚಟಗಳ ಭಿಕ್ಷೆ ಬೇಡಿದ ಮಹಾಂತ ಜೋಳಿಗೆ

Last Updated 1 ಆಗಸ್ಟ್ 2017, 6:16 IST
ಅಕ್ಷರ ಗಾತ್ರ

ಇಳಕಲ್‌: ಬಸವತತ್ವಕ್ಕೆ ಮತ್ತೊಂದು ಹೆಸರು ಡಾ.ಮಹಾಂತ ಸ್ವಾಮೀಜಿ. ನಿಂದೆ, ಹಲ್ಲೆ, ಕುತ್ಸಿತ ಮನಸ್ಸಿನ ಸಂಪ್ರದಾಯವಾದಿಗಳ ಷಡ್ಯಂತ್ರಗಳಿಗೂ ಜಗ್ಗದೇ ಬಸವ ಪಥದಲ್ಲಿ ದಿಟ್ಟ ಹೆಜ್ಜೆ ಇಟ್ಟ ಅಪರೂಪದ ಕಾವಿಧಾರಿ.

1ನೇ ಆಗಸ್ಟ್ 1930ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ವಿರೂಪಾಕ್ಷಯ್ಯಪಾಲ ಬಾವಿಮಠ ಹಾಗೂ ನೀಲಮ್ಮ ದಂಪತಿ ಉದರದಲ್ಲಿ ಜನಿಸಿದರು. ಮಠವೊಂದರ ವಟುವಾಗಲು ಬೇಕಾದ ಸಂಸ್ಕೃತ, ಭಾರತೀಯ ತತ್ವಶಾಸ್ತ್ರ, ಅಧ್ಯಾತ್ಮ ಶಿಕ್ಷಣ ವನ್ನು ಶಿವಯೋಗ ಮಂದಿರ ಹಾಗೂ ಕಾಶಿಯಲ್ಲಿ ಪಡೆದುಕೊಂಡರು.

ಮುಧೋಳ, ನವಲಗುಂದ ಹಾಗೂ ಸವದಿ ಮಠದ ಸ್ವಾಮೀಜಿಯಾಗಿ ನೇಮಕಗೊಂಡರು. ಸ್ಪಷ್ಟ ನುಡಿ, ಅಪಾರ ಪಾಂಡಿತ್ಯ ಹಾಗೂ ಸಂಗೀತದ ಜ್ಞಾನದಿಂದಾಗಿ ಕೆಲವೇ ದಿನಗಳಲ್ಲಿ ಉತ್ತಮ ಪ್ರವಚನಕಾರ ಎಂಬ ಖ್ಯಾತಿಗೆ ಪಾತ್ರರಾದರು. 17ನೇ ಮೇ 1970 ರಂದು ಮಹಾಂತ ಶ್ರೀಗಳು ಇಳಕಲ್ ಮಠದ 19 ಪೀಠಾಧಿಪತಿಯಾಗುವ ಮೂಲಕ ಸಮಾಜಸೇವೆಯ ದೀಕ್ಷೆ ಪಡೆದುಕೊಂಡರು.

ಮಹಾಂತ ಜೋಳಿಗೆ: ಲಿಂ.ವಿಜಯ ಮಹಾಂತ ಶಿವಯೋಗಿಗಳ 64ನೇ ಪುಣ್ಯತಿಥಿ ಹೊತ್ತಿಗೆ ಪ್ರವಚನ, ಮಾತುಗಳಿಂದ ಮಾತ್ರ ಎಲ್ಲರನ್ನೂ ಬದಲಾಯಿಸಲು ಸಾಧ್ಯವಾಗುವುದಿಲ್ಲ ಎಂಬುವುದನ್ನು ಅರ್ಥಮಾಡಿಕೊಂಡು ಜೋಳಿಗೆ ಎತ್ತಿಕೊಂಡರು. ಅದುವೇ ‘ಮಹಾಂತ ಜೋಳಿಗೆ’. ಮೂರು ಲಕ್ಷ ಜನರನ್ನು ದುಶ್ಚಟಗಳಿಂದ ಮುಕ್ತ ಮಾಡಿದ ಯಶೋಗಾಥೆ ಈ ಜೋಳಿಗೆಯದು. 

ದುಶ್ಚಟ ಮಾಡುವವರಿಗೆ ಸಾಮಾಜಿಕ, ಆರ್ಥಿಕ, ದೈಹಿಕ ಹಾಗೂ ಕೌಟುಂಬಿಕ ನಷ್ಟವನ್ನು, ಅವಮಾನವನ್ನು ಮನವರಿಕೆಯಾಗುವಂತೆ ಹೇಳಿ, ಶ್ರೀಗಳು ಮಹಾಂತ ಜೋಳಿಗೆ ಹಿಡಿಯುತ್ತಿದ್ದಂತೆ ಅದರೊಳಗೆ ಮದ್ಯದ ಬಾಟಲಿ, ಬೀಡಿ, ಸಿಗರೇಟ್ ಹಾಗೂ ತಂಬಾಕ ಪೊಟ್ಟಣಗಳು, ಇಸ್ಪೀಟ್ ಎಲೆ ರಾಶಿ ರಾಶಿ ಬೀಳುತ್ತಿದ್ದವು.

ಎಲ್ಲವನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿ, ಮತ್ತೆ ಚಟದತ್ತ ವಾಲದಂತೆ ದೇವರನ್ನು ಕಾವಲು ಇಟ್ಟು, ಮುಂದಿನ ಊರಿಗೆ ನಡೆಯುತ್ತಿದ್ದರು. 70 ಹಾಗೂ 80ರ ದಶಕದಲ್ಲಿ ಜೋಳಿಗೆಯೊಂದಿಗೆ ನಾಡಿನ ಸಾವಿರಾರು ಹಳ್ಳಿ, ಪಟ್ಟಣಸುತ್ತಿದರು. ದಲಿತರ ಕೇರಿಗಳಿಗೆ ಹೋಗಿದ್ದಾರೆ.  90ರ ದಶಕದಲ್ಲಿ ಬಸವತತ್ವದ ಪ್ರಚಾರಕ್ಕೆ ಮಹಾಂತಪ್ಪಗಳು ಯುರೋಪ್ ಪ್ರವಾಸ ಕೈಗೊಂಡಿದ್ದರು.

ಈ ವೇಳೆ ‘ಲಂಡನ್ ನಗರದ ಸಭಾ ಭವನವೊಂದರಲ್ಲಿ ಕನ್ನಡಿಗರು ಕಾರ್ಯಕ್ರಮ ಏರ್ಪಡಿಸಿದ್ದರು. ಆ ವೇಳೆ ಆಂಗ್ಲ ಮಹಿಳೆಯೊಬ್ಬರು ಮಹಾಂತ ಶ್ರೀಗಳು ಹಿಡಿದಿದ್ದ ಜೋಳಿಗೆಗೆ ಕೆಲವು ಪೌಂಡ್‌ಗಳನ್ನು ಹಾಕಲು ಮುಂದಾದರು. ಆಗ ಶ್ರೀಗಳು ‘ತಾಯಿ ಈ ಜೋಳಿಗೆ ಹಣ ಬೇಡುವುದಿಲ್ಲ. ಇದು ದುಶ್ಚಟಗಳನ್ನು ಮಾತ್ರ ಬೇಡುತ್ತದೆ. ದುಶ್ಚಟಗಳಿದ್ದರೇ ಹಾಕಿೆ ಎಂದರು. ಆಗ ಆಕೆ ಶ್ರೀಗಳನ್ನು ಕೊಂಡಾಡಿದ್ದರಂತೆ.

ನಾಡಿನ ಶ್ರೇಷ್ಠ ಕವಿ ಚನ್ನವೀರ ಕಣವಿ ಅವರು ತಮ್ಮ ‘ಮಹಾಂತ ಭಿಕ್ಷೆ’ ಕವನದಲ್ಲಿ.. ದುಡ್ಡು ದುಗ್ಗಾಣಿಯನು ಕೇಳೆನು ನಿಮ್ಮ ನೆಮ್ಮದಿಯ ಬಾಳಿಗೆ ನೀಡಿರಯ್ಯ ದುಶ್ಚಟಗಳ ತುಂಬಿಕೊಳುವೆನು ಜೋಳಿಗೆ ಎಂದು ವರ್ಣಿಸಿದ್ದಾರೆ.

ವೈಚಾರಿಕ ಮಾರ್ಗ, ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂಬ ಕೂಗು ಈಗ ಬಲವಾಗಿ ಕೇಳಿ ಬರುತ್ತಿದೆ. ಆದರೆ 4 ದಶಕಗಳಿಂದ ಬಸವಣ್ಣನವರ ತತ್ವಾದರ್ಶಗಳ ಬೆಳಕಿನಲ್ಲಿ ‘ಲಿಂಗಾಯತ ಧರ್ಮದ ಆಚಾರ ಸಂಹಿತೆ’ ರೂಪಿಸುವ ಕಾರ್ಯ ಮಾಡಿದ್ದು ಡಾ.ಮಹಾಂತ ಶ್ರೀಗಳು.

ಮುಂಚೆ ವೀರಶೈವೀಕರಣಗೊಂಡಿದ್ದ ಮಠವನ್ನು -ಲಿಂಗಾಯತ ತತ್ವದ ಪುನರ್‌ ನಿರ್ಮಾಣ ಮಾಡಿದ್ದು ಪೂಜ್ಯರಿಗೆ ಬಸವತತ್ವದ ಬಗ್ಗೆ ಇರುವ ಬದ್ಧತೆಗೆ ಸಾಕ್ಷಿಯಾಗಿದೆ. ಇಳಕಲ್ ಮಠಕ್ಕೆ ವಚನಗಳೇ ಧರ್ಮಗ್ರಂಥ. ಬಸವಣ್ಣನೇ ಧರ್ಮಗುರು.

ಲಿಂಗಾಯತ ಧರ್ಮಕ್ಕೆ ಸಮ್ಮತ ವಲ್ಲದ ಆಚರಣೆಗಳನ್ನು ನಿಲ್ಲಿಸಿದರು. ವಚನ ಕಟ್ಟುಗಳ ರಥೋತ್ಸವ, ವಚನಗಳ ತಾಡೋಲೆಗಳ ಅಡ್ಡಪಲ್ಲಕ್ಕಿ ಆರಂಭಿಸಿದರು. ಜಾತಿ ಭೇದ ಇಲ್ಲದೇ ಲಿಂಗದೀಕ್ಷೆ ನೀಡಿದರು. ಸಹಪಂಕ್ತಿ ಭೋಜನದ ವ್ಯವಸ್ಥೆ ಮಾಡಿದರು. ಜ್ಯೋತಿಷ್ಯ, ವಾಸ್ತು ಶಾಸ್ತ್ರದ ಟೊಳ್ಳುತನದ ಬಗ್ಗೆ ಅರಿವು ಮೂಡಿಸಿದರು.

ವಿವಾಹದ ವೇಳೆ ಸಂಸ್ಕೃತದ ಮಂತ್ರಗಳ ಬದಲಾಗಿ ವಚನ ಗಳನ್ನು ಹೇಳುವಂತೆ, ಆರತಕ್ಷತೆಗೆ ಅಕ್ಕಿಯ ಬದಲಾಗಿ ಪುಷ್ಪವೃಷ್ಠಿಗೈಯುವಂತೆ ಜಾಗೃತಿ ಮೂಡಿಸಿದರು. ವಿಧವೆಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. 

ಮಠದಿಂದ ಸೌಕರ್ಯ: ಬಸವತತ್ವ ಪ್ರಸಾರಕ್ಕಾಗಿ ಶರಣ ಸಿದ್ಧಾಂತ ವಿದ್ಯಾಪೀಠ, ಕಾಯಕ ಜೀವಿಗಳಿಗೆ ಬಡ್ಡಿ ರಹಿತ ಸಾಲ ಹಾಗೂ ಉಪಕರಣ ನೀಡಲು ಕಾಯಕ ಸಂಜೀವಿನಿ ಸಂಸ್ಥೆ, ಶಿಕ್ಷಣ ಪ್ರಸಾರಕ್ಕಾಗಿ ಹುನಗುಂದ ಹಾಗೂ ಇಳಕಲ್‌ನಲ್ಲಿ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಲಿಂಗವಂತ ಧರ್ಮಗ್ರಂಥ ಬಹುಮಾನ ಯೋಜನೆ, ಸಾಧಕರಿಗೆ ಬಸವಗುರು ಕಾರುಣ್ಯ ಪ್ರಶಸ್ತಿ, ಬಸವ ಬೆಳಗು ತ್ರೈಮಾಸಿಕ ಪತ್ರಿಕೆ, ಬಸವಕೇಂದ್ರಗಳ ಸ್ಥಾಪನೆ ಹೀಗೆ ಆನೇಕ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶ್ರೀಗಳ ಸಾಮಾಜಿಕ, ಧಾರ್ಮಿಕ ಸೇವೆ  ಗಮನಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯಿಂದ ‘ಸಂಯಮ’ ಪ್ರಶಸ್ತಿ, ಕರ್ನಾಟಕ ಸರ್ಕಾರ ‘ರಾಷ್ಟ್ರೀಯ ಬಸವ ಪುರಸ್ಕಾರ’ ನೀಡಿ ಗೌರವಿಸಿವೆ.

ಮಹಾಂತ ಸ್ವಾಮೀಜಿ ಕ್ರಾಂತಿಕಾರಕ ನಡೆ
ಇಳಕಲ್: ವಿಧವಾ ವಿವಾಹ, ತಿಥಿ, ನಕ್ಷತ್ರ ನೋಡದೆ ಶುಭ ಸಮಾರಂಭ ನೆರವೇರಿಸುವುದು. ಬಸವಧರ್ಮ ಅನುಭಾವ ಪ್ರಮಾಣ ಧರ್ಮ ಎಂದು ಸಾರಿದ್ದು, ಶಾಖಾ ಮಠಗಳಿಗೆ ದಲಿತ ಸಮುದಾಯ ಶರಣರ ನೇಮಕ ತಮ್ಮ ಉತ್ತರಾಧಿಕಾರಿಗಳನ್ನಾಗಿ ಭಕ್ತ ವರ್ಗದ ಗುರು ಮಹಾಂತಸ್ವಾಮೀಜಿಯನ್ನಾಗಿ ಸ್ವೀಕರಿಸಿದ್ದು, ಶ್ರೀಗಳ ಬಸವ ತತ್ವ ಅನುಷ್ಠಾನದಲ್ಲಿ ಇಟ್ಟ ಕ್ರಾಂತಿಕಾರಕ ಹೆಜ್ಜೆಗಳಾಗಿವೆ. ಬಸವಧರ್ಮ ಪ್ರಸಾರಕರಿಗೆ ಅರಿವು, ಅನ್ನ ಆಶ್ರಯ ನೀಡಿದ ಮಹಾ ದಾಸೋಹಿ ಎಂದೇ ಹೆಸರುವಾಸಿಯಾಗಿದ್ದಾರೆ.

ಪಾಸ್ವಾನ್ ಸವಾಲು ಸ್ವೀಕರಿಸಿದ ಸ್ವಾಮೀಜಿ
1994ರ ಏಪ್ರಿಲ್ 16,17 ಹಾಗೂ 18 ರಂದು ಬೀದರ್‌ನಲ್ಲಿ ನಡೆದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಆಗಿನ ಕೇಂದ್ರ ಸಚಿವರಾದ ರಾಮ ವಿಲಾಸ ಪಾಸ್ವಾಸ್‌ ಹಾಗೂ ಸ್ವಾಮಿ ಅಗ್ನಿವೇಶ ಪಾಲ್ಗೊಂಡಿದ್ದರು.

ಈ ವೇಳೆ ‘ಬಸವಣ್ಣನ ಅನು ಯಾಯಿಗಳು ಎಂದು ಹೇಳಿಕೊಳ್ಳುವ ಇಲ್ಲಿನ ಮಠಾಧೀಶರು ತಮ್ಮ ಮಠ ಗಳಿಗೆ ದಲಿತರನ್ನು ಸ್ವಾಮೀಜಿಯಾಗಿ ನೇಮಕ ಮಾಡುವ ಧೈರ್ಯ ತೋರಬಲ್ಲರಾ? ಎಂದು ಸವಾಲು ಹಾಕಿದರು.

ಸಭೆ ಸ್ತಬ್ಧವಾಗಿತ್ತು. ಆದರೆ ಆ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಮಹಾಂತ ಸ್ವಾಮೀಜಿ ಮಾತ್ರ ಈ ಸವಾಲು ಸ್ವೀಕರಿ ಸಿದರು. ಅದರಂತೆ ಮಹಾಂತಶ್ರೀಗಳು ತಮ್ಮ ಪೀಠದ ಲಿಂಗಸೂರು ಶಾಖಾ ಮಠಕ್ಕೆ ಲಂಬಾಣಿ ಸಮಾಜದ ಸಿದ್ಧಲಿಂಗ ಸ್ವಾಮೀಜಿ, ಕೆ.ಆರ್.ಪೇಟೆ ತಾಲ್ಲೂಕಿನ ಸಿದ್ದಯ್ಯನಕೋಟೆ ಮಠಕ್ಕೆ ದಲಿತರಾದ ಬಸವಲಿಂಗ ಸ್ವಾಮೀಜಿಯನ್ನು ಗುರುವಾಗಿಸಿದರು. 2004 ರಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಜಂಗಮರಲ್ಲದ, ಶಿವಯೋಗ ಮಂದಿರದ ವಟುವಲ್ಲದ ಗುರು ಮಹಾಂತ ಸ್ವಾಮೀಜಿ ಅವರನ್ನು ಸೆಪ್ಟೆಂಬರ್‌ 12ರಂದು ನೇಮಕ ಮಾಡುವುದಾಗಿ ಘೋಷಿಸಿದರು.

ಇದನ್ನು ವಿರೋಧಿಸಿ ಕೆಲವರು ಆಗಸ್ಟ್‌ 31ರಂದು ಶ್ರೀಗಳ ಮೇಲೆ ಹಲ್ಲೆ ಮಾಡಿದರು. ಸುಳ್ಳು ಆರೋಪ ಮಾಡಿದರು. ಯಾವುದಕ್ಕೂ ಜಗ್ಗದ ಮಹಾಂತ ಶ್ರೀಗಳು ‘ಬಸವಣ್ಣನ ಕೆಲಸ ಮಾಡುವಾಗ ಯಾರಿಗೂ ಹೆದ ರುವುದಿಲ್ಲ, ಹಾಗೆಯೇ ಯಾರ ಬಗ್ಗೆಯೂ ಕಹಿ ಭಾವನೆ ಇಲ್ಲ’ ಎಂದು ಹೇಳಿದ್ದರು.

ಅಂದು ನೇಮಕಗೊಂಡ ಗುರುಮಹಾಂತ ಶ್ರೀಗಳು ಇಂದು ತಮ್ಮ ವಿನಯ, ಸರಳತೆ, ಅಂತಃ ಕರಣ ಹಾಗೂ ಕ್ರಿಯಾಶೀಲತೆಯಿಂದ ವಿರೋಧಿಸಿದವರ ಮನಸ್ಸು ಗೆದ್ದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT