ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆಯಲ್ಲಿ ಇಳಕಲ್ ಕೇಂದ್ರೀಯ ಶಾಲೆ

Last Updated 14 ಆಗಸ್ಟ್ 2013, 10:58 IST
ಅಕ್ಷರ ಗಾತ್ರ

ಇಳಕಲ್: ಹಲವು ವರ್ಷಗಳ ಹಿಂದೆ ನಗರದಲ್ಲಿ ಅತ್ಯುತ್ತಮ ಶಾಲೆ ಎನಿಸಿಕೊಂಡಿದ್ದ ಸರ್ಕಾರಿ ಕೇಂದ್ರೀಯ ವಿದ್ಯಾಲಯ (ಸೆಂಟ್ರಲ್ ಸ್ಕೂಲ್) ಈಗ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪಾಳು ಬಿದ್ದಿದೆ. ಸಾವಿರದಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ನೂರರ ಆಸುಪಾಸಿಗೆ ಇಳಿದಿದೆ. ಗತ ವೈಭವ ಕಳೆದುಕೊಂಡು, ಜೀರ್ಣಾವಸ್ಥೆ ತಲುಪಿದೆ.

ಇಳಕಲ್ ನಗರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಮಕ್ಕಳು ಇದೇ ಕೇಂದ್ರೀಯ ವಿದ್ಯಾಲಯದಲ್ಲಿ ಓದಿದ್ದಾರೆ. ಅಂದಿನ ಅವಿಭಜಿತ ವಿಜಾಪುರ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಹೆಸರು ಮಾಡಿದ್ದ ಹಾಗೂ ಪ್ರತಿ ವರ್ಷ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದ ಶಾಲೆ ಇದಾಗಿತ್ತು. ಈ ಶಾಲೆಯಲ್ಲಿದ್ದ ಎನ್.ಪಿ. ಮೆಣಸಿಕಾಯಿ ಹಾಗೂ ಮಹಾದೇವ ಕಂಬಾಗಿ ಶಿಕ್ಷಕರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

ಆದರೆ ಶಾಲೆಯ ಆ ವೈಭವ ಈಗ ಇತಿಹಾಸ. ಇದಕ್ಕೆ ಕಾರಣಗಳು ಹಲವು. ಮೂಲ ಸೌಲಭ್ಯಗಳ ಕೊರತೆ ಹಾಗೂ ಪಾಲಕರಲ್ಲಿ ಬೆಳೆದಿರುವ ಖಾಸಗಿ ಶಾಲೆಗಳ ಮೋಹ ಪ್ರಮುಖವಾದವುಗಳು. ಇಲ್ಲಿ ಅನೇಕ ಕೊಠಡಿಗಳು ಕಾಣಿಸುತ್ತವೆ. ಆದರೆ ಅವುಗಳಲ್ಲಿ ಅನೇಕವು ಶಿಥಿಲಗೊಂಡು ಬಳಕೆಗೆ ಯೋಗ್ಯವಾಗಿಲ್ಲ. ಹಳೆಯ ಹಂಚಿನ ಕಟ್ಟಡದ ಗೋಡೆಗಳು ಗಟ್ಟಿಯಾಗಿದ್ದರೂ, ಪುಂಡರ ಪುಂಡಾಟಿಕೆಗೆ ಪುಡಿಪುಡಿಯಾಗಿವೆ.

ಎಸ್‌ಡಿಎಂಸಿ ಮೂಲಕ ಅನೇಕ ವರ್ಷಗಳಿಂದ ಕಟ್ಟಲಾಗುತ್ತಿರುವ 3 ತರಗತಿ ಕೋಣೆಗಳು ಪೂರ್ಣಗೊಂಡಿಲ್ಲ. ಆದರೆ ಇದೇ ಶಾಲೆಗೆ ಹೊಂದಿಕೊಂಡು ಕೆಲವು ವರ್ಷಗಳ ಹಿಂದೆ ಆರಂಭವಾದ ಖಾಸಗಿ ಶಿಕ್ಷಣ ಸಂಸ್ಥೆಯು ಈಗ ಮೂರನೇ ಮಹಡಿಯಲ್ಲಿ ತರಗತಿ ಕೊಠಡಿಗಳನ್ನು ಕಟ್ಟುತ್ತಿದೆ.

ಖಾಸಗಿ ಶಾಲೆಗಳು ಕೇಳುವ ಡೊನೇಶನ್ ಕೊಡಲು ಸಾಧ್ಯವಾಗದ ಬಡವರ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ತಾಲ್ಲೂಕಿಗೆ ಪ್ರಸಿದ್ಧವಾಗಿದ್ದ ಈ ಸೆಂಟ್ರಲ್ ಸ್ಕೂಲ್ ಈಗ ಕೇವಲ ಭೌತಿಕವಾಗಿ ಅಷ್ಟೇ ಅಲ್ಲ, ಎಲ್ಲದರಲ್ಲೂ ಹಿಂದುಳಿದಿದೆ.

ಶಾಲೆಯ ಮುಂದೆಯೇ ಕಂಪೌಂಡ್‌ಗೆ ಹೊಂದಿಕೊಂಡು ಮಾಂಸದ ಅಂಗಡಿ ತಲೆ ಎತ್ತಿದೆ. ನಾಯಿಗಳು ಮೂಳೆಗಳನ್ನು ಶಾಲಾ ಆವರಣದಲ್ಲಿ ತಂದು ಹಾಕುತ್ತಿವೆ. ಶಾಲೆಯ ಕಿಟಕಿ, ಬಾಗಿಲುಗಳನ್ನು ಮುರಿದಿರುವ ಕಿಡಿಗೇಡಿಗಳು, ರಾತ್ರಿ ಮದ್ಯ ಸೇವನೆಗೆ ಹಾಗೂ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಎಲ್ಲೆಂದರಲ್ಲಿ ಗುಟ್ಕಾ ಉಗುಳಿ ಗಲೀಜು ಮಾಡಿದ್ದಾರೆ. ಪಕ್ಕದ ಖಾಸಗಿ ಶಾಲೆ ಹಾಗೂ ಈ ಶಾಲೆಯ ನಡುವಿರುವ ಅಜಗಜದಷ್ಟು ಅಂತರ. ಈ ಶಾಲೆಯ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಬೆಳೆಯಲು ಕಾರಣವಾಗಿದೆ.

`ಶಾಲೆಯೊಂದಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೆ ಇದ್ದಾಗ, ಪಾಲಕರ ನಿರೀಕ್ಷೆಗೆ ತಕ್ಕಂತೆ ಶಿಕ್ಷಣ ದೊರೆಯದೆ ಇದ್ದಾಗ, ಪಾಲಕರು ಸರಕಾರಿ ಶಾಲೆಗಳ ಬದಲಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ. ಆಗ ಸರಕಾರ ವಿದ್ಯಾರ್ಥಿಗಳ ಕೊರತೆ ನೆಪವೊಡ್ಡಿ ಶಾಲೆಗಳನ್ನು ಮುಚ್ಚುತ್ತಾ ಹೋಗುತ್ತದೆ. ಈ ಮೂಲಕ ಶಿಕ್ಷಣ ನೀಡುವ ಜವಾಬ್ದಾರಿಯಿಂದ ಸರಕಾರ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ' ಎಂದು ಇಳಕಲ್ ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಸಿ. ಚಂದ್ರಾಪಟ್ಟಣ ಆರೋಪಿಸುವರು.

`ಕೂಡಲೇ ನಗರಸಭೆಯು ಶಾಲೆ ಕಂಪೌಂಡ್‌ಗೆ ಹೊಂದಿಕೊಂಡಿರುವ ಮಾಂಸದ ಅಂಗಡಿಯನ್ನು ತೆರವುಗೊಳಿಸಬೇಕು. ಶಿಕ್ಷಣ ಇಲಾಖೆಯು ಶಾಲೆಗೆ ಬೇಕಾದ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಆ ಮೂಲಕ ಶಾಲೆಯ ಗತ ವೈಭವ ಮರಳುವಂತೆ ಮಾಡಬೇಕು' ಎಂದು ಈ ಶಾಲೆಯ ಹಳೆಯ ವಿದ್ಯಾರ್ಥಿ, ಜನಜಾಗೃತಿ ವೇದಿಕೆ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೊಂಗಲ್ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT