ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಯತ್ತ ಇಲ್ಲ ಇಳಕಲ್ ನಗರಸಭೆ ಚಿತ್ತ

ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ರಸ್ತೆಯಲ್ಲಿ ನೀರು: ಸಾಂಕ್ರಾಮಿಕ ರೋಗ ಭೀತಿ
Last Updated 16 ಆಗಸ್ಟ್ 2016, 6:25 IST
ಅಕ್ಷರ ಗಾತ್ರ

ಇಳಕಲ್: ನಗರಸಭೆ ಬೇಜವಾಬ್ದಾರಿಯಿಂದಾಗಿ ಇಲ್ಲಿಯ ಶಿವಾಜಿನಗರ ಬಡಾ ವಣೆಯಲ್ಲಿ ಮಕ್ಕಳು ಸೇರಿದಂತೆ 10 ಜನರಿಗೆ ಡೆಂಗಿ ಜ್ವರ ಕಾಣಿಸಿಕೊಂಡಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

6 ವರ್ಷದ ಗೋವರ್ಧನ ರಾಳ ದಡ್ಡಿ, ಪವನ ಸಾಕ್ರೆ, 7 ವರ್ಷದ ಪೂಜಾ ಐಲಿ, 12 ವರ್ಷದ ಶಿವಕುಮಾರ ಪರಮೇಶ, ಸಾಗರ ದ್ಯಾವನಕೊಂಡಿ, 40 ವರ್ಷದ ಯಂಕಣ್ಣ ಗೋರ್ಕಲ್ ಸೇರಿದಂತೆ 10 ಜನರು ಜನರು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಕೊರತೆಯ ಕಾರಣದಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 15 ರಂದೇ ‘ಪ್ರಜಾವಾಣಿ’ ‘ಅಸಮರ್ಪಕ ಚರಂಡಿ : ಸಾಂಕ್ರಾಮಿಕ ರೋಗ ಭೀತಿ !’ ಎಂದು ವರದಿ ಮಾಡಿ ನಗರಸಭೆಯನ್ನು ಎಚ್ಚರಿಸಿತ್ತು. ಶಿವಾಜಿನಗರದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ನಿರ್ಮಿಸಲಾದ ಚರಂಡಿ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿ ಯಲ್ಲಿ  ಕೊಳಚೆ ಸಂಗ್ರಹಗೊಂಡಿದೆ.

ಇದು ಅನಾರೋಗ್ಯಕ್ಕೆ ಕಾರಣವಾಗಲಿದೆ. ಕೂಡಲೇ ಚರಂಡಿಯಲ್ಲಿ ಸಂಗ್ರಹ ಗೊಂಡಿರುವ ಕೊಳಚೆ ಹಾಗೂ ಮಳೆ ನೀರು ಹರಿದು ಹೋಗುವಂತೆ ಮಾಡ ಬೇಕು ಎಂದು ನಗರಸಭೆಯನ್ನು ಒತ್ತಾಯಿಸಿತ್ತು.

4ನೇ ವಾರ್ಡ್‌ನ ಶಿವಾಜಿನಗರದ ಗಟಾರ ನೋಡಿದರೇ ನಗರಸಭೆಯ ಬೇಜವಾಬ್ದಾರಿ ಹಾಗೂ ಕಾರ್ಯವೈಖರಿ ತಿಳಿಯುತ್ತದೆ. ಅಂದಾಜು 70 ಮೀಟರ್‌ ಉದ್ದದ ಇಲ್ಲಿಯ ಚರಂಡಿಗೆ ಸೇರುವ ಮಳೆ ನೀರು ಹಾಗೂ ಕೊಳಚೆ ಮುಂದೆ ಸಾಗುವುದೇ ಇಲ್ಲ!.

ಏಕೆಂದರೇ ಚರಂಡಿ  ಕೊನೆಯು ಯಾವ ಪ್ರಮುಖ ಚರಂಡಿ ಇಲ್ಲವೇ ನಾಲಾಕ್ಕೆ ಸಂಪರ್ಕಿಸುವುದಿಲ್ಲ. ಕೊಳಚೆ ಹಾಗೂ ಮಳೆ ನೀರನ್ನು ಮುಂದಕ್ಕೆ ಸಾಗಿಸಲು ನಿರ್ಮಿಸಿದ ಚರಂಡಿಗೆ ಜನರಿಗೆ ಶಾಪವಾಗಿ ಪರಿಣಮಿಸಿದೆ. ಈ ಪ್ರದೇಶದ ಅನೇಕರಲ್ಲಿ ಡೆಂಗಿ ಹಾಗೂ ಮಲೇರಿಯಾ ಕಾಣಿಸಿಕೊಂಡಿ ದ್ದರೂ ಈಗಲೂ ನಗರಸಭೆ ಎಚ್ಚೆತ್ತುಕೊಂಡಿಲ್ಲ.

ಈ ಬಡಾವಣೆಯ ಬಹಳಷ್ಟು ಮಹಿ ಳೆಯರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಆ ಶೌಚಾಲಯದ ಗೋಡೆ ಬಿದ್ದಿದ್ದು, ಮರ್ಯಾದೆಯ ಕಾರಣಕ್ಕಾಗಿ ಬಹಿರ್ದೆಸೆಗೆ ಹೋಗಲು ಕತ್ತಲಾಗುವವರೆಗೂ ಕಾಯಬೇಕು.

ಈ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯ ಸಮೀಪಕ್ಕೆ ಹೋಗಲಾ ದಷ್ಟು ಗಲೀಜಾಗಿದೆ. ಬಚ್ಚಲ ನೀರು, ಬಟ್ಟೆ, ಪಾತ್ರೆ ತೊಳೆದ ನೀರು ರಸ್ತೆಯ ಮೇಲೆ ಹರಿಯುತ್ತದೆ. ಸೊಳ್ಳೆಗಳು ಅಧಿಕವಾಗಿವೆ. ಇಲ್ಲಿ ಕನಿಷ್ಟ ಸೌಲಭ್ಯಗಳೂ ಇಲ್ಲ.

ನಗರದಲ್ಲಿ ಎಡಿಬಿ ಯೋಜನೆಯ ಒಳಚರಂಡಿ ಕಾಮಗಾರಿ 4 ವರ್ಷಗಳ ಹಿಂದೆಯೇ ಮೊದಲಿಗೆ ಆರಂಭವಾಗಿದ್ದು  ಶಿವಾಜಿನಗರದಲ್ಲಿ. ಇವತ್ತಿಗೂ ಅದು ಪೂರ್ಣಗೊಂಡಿಲ್ಲ.

ನೇಕಾರ ಕುಟುಂಬಗಳೇ ಹೆಚ್ಚಾಗಿರುವ ಈ ಬಡಾವಣೆಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ನಗರಸಭೆ ಮುಂದಾಗಬೇಕು.

***
ಡೆಂಗಿ ಜ್ವರಕ್ಕೆ ಇಲ್ಲಿಯ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಲು ಹಣ ಇಲ್ಲ. ಹಾಗಾಗಿ ಬಳ್ಳಾರಿ ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಗೆದುಕೊಂಡು ಬಂದಿದ್ದಾರೆ.
–ಈರಣ್ಣ ಭಂಡಾರಿ, ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT