ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರು ಕೆರೆಯಲ್ಲಿ ನೀರು ಸಂಗ್ರಹ ಹೆಚ್ಚಳ

Last Updated 26 ಆಗಸ್ಟ್ 2017, 5:28 IST
ಅಕ್ಷರ ಗಾತ್ರ

ಕೊಟ್ಟೂರು: ಕೊಟ್ಟೂರು ಕೆರೆಗೆ ನೀರು ಹರಿದು ಬರುವ ಮೂಲಗಳಾದ ಚಿರಿಬಿ, ರಾಂಪುರ, ಜಾಗಟಗೆರೆ, ಕಾಳಾಪುರ, ಹಿರೇವಡೇರಹಳ್ಳಿ ,ಬಸಾಪುರ ಮುಂತಾದ ಪ್ರದೇಶಗಳಲ್ಲಿ ಬುಧವಾರದಿಂದ ಸುರಿಯುತ್ತಿರುವ ಮಳೆಯಿಂದ ಗ್ರಾಮಗಳ ಕೆರೆಗಳು ಹಾಗೂ ಗೋಕಟ್ಟೆಗಳು ತುಂಬಿ ಹರಿದಿದ್ದು, ಗುರುವಾರ ಕೊಟ್ಟೂರು ಕೆರೆಗೆ ಸುಮಾರು 5ರಿಂದ 6 ಅಡಿ ನೀರು ಸಂಗ್ರಹವಾಗಿದೆ.

ಕೆರೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಯುವ ಪಡೆಯ ಮಂದಾಳತ್ವದಲ್ಲಿ ವರ್ತಕರು ಹಾಗೂ ಸಂಘ ಸಂಸ್ಥೆಗಳು, ಮಠಾಧೀಶರ ಪರಿಷತ್ತಿನ ನೆರವಿನೊಂದಿಗೆ ‘ನಮ್ಮ ಕೆರೆ ನಮ್ಮ ಹಕ್ಕು’ ಆಭಿಯಾನದಡಿಯಲ್ಲಿ ಕೆರೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿವೆ. ಸುಮಾರು 7–8 ಕಿ.ಮೀ. ವ್ಯಾಪ್ತಿಯಲ್ಲಿ ಕೆರೆಗೆ ಹರಿದು ಬರುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಲಾಗಿದೆ.

ನರೇಗಾ ಯೋಜನೆಯಡಿಯಲ್ಲಿ ಕೆ.ಅಯ್ಯನಹಳ್ಳಿ, ನಾಗರಕಟ್ಟೆ, ತೂಲಹಳ್ಳಿ, ದೂಪದಹಳ್ಳಿ, ರಾಂಪುರ ಗ್ರಾಮ ಪಂಚಾಯಿತಿಗಳ ವತಿಯಿಂದ 54,300 ಮಾನವದಿನಗಳ ಕೆಲಸ ನಿರ್ವಹಿಸಿ 19,74,853 ಘನ ಅಡಿ ಹೂಳು ತೆಗೆದು ಹೊರಗಡೆ ಸಾಗಿಸಿದ್ದರಿಂದಲೂ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

ಕೆರೆಗೆ ಅಳವಡಿಸಿರುವ ಎರಡು ಹಳೆಯ ತೂಬುಗಳ ಮುಖಾಂತರ ಸಣ್ಣದಾಗಿ ಸೋರಿಕೆಯಾಗುತ್ತಿರುವುದನ್ನು ಕಂಡು ಎಚ್ಚೆತ್ತ ಯುವಪಡೆ, ಕೂಡಲೇ ಕಾರ್ಯೋನ್ಮುಖ ರಾಗಿ ಮಣ್ಣನ್ನು ಹಾಕಿ ನೀರು ಸೋರುವುದನ್ನು ತಡೆಗಟ್ಟಿದ್ದಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲು ಸಾಧ್ಯವಾಗಿದೆ.

‘ಕೆರೆಗೆ ಹರಿದು ಬರುವ ನೀರಿನ ದ್ವಾರಗಳಾದ ರಾಂಪುರ ಹಾಗೂ ಚಿರಿಬಿ ಹಾಗೂ ಹಿರೇವಡೆರಹಳ್ಳಿ ಗ್ರಾಮಗಳ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳನ್ನು ಎತ್ತರವಾಗಿ ನಿರ್ಮಿಸಿದರೆ ಕೆರೆಗೆ ಹರಿದುಬರುವ ನೀರಿನ ಪ್ರಮಾಣ ಹೆಚ್ಚಳವಾಗುತ್ತದೆ’ ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ಯುವ ಪಡೆಯ ನಬಿಸಾಬ್‌ ಮುದುಕನಕಟ್ಟೆ ತಿಳಿಸಿದರು.  

‘ಕೆರೆಯಲ್ಲಿ ನೀರು ಸಂಗ್ರಹವಾಗಿರುವುದರಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗುವುದು ಹಾಗೂ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ನೀಗುತ್ತದೆ’ ಎಂದು ಕೋಡಿಹಳ್ಳಿ ಗುಡಿಯಾರ ಮರಿಯಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಮಳೆಯ ಆಗಮನದಿಂದ ಹರ್ಷಚಿತ್ತರಾದ ಅನ್ನದಾತರು ರೈತ ಕೇಂದ್ರ ಮತ್ತು ಖಾಸಗಿ ರಸಗೊಬ್ಬರ ಅಂಗಡಿಗಳ ಮುಂದೆ ಜಮಾಯಿಸಿ ಬೀಜಗೊಬ್ಬರಗಳ ಖರೀದಿಗೆ ಮುಂದಾಗಿರುವುದು ಕಂಡು ಬಂತು. ಅಲ್ಲದೆ, ಕೃಷಿ ಉಪಕರಣಗಳ ಖರೀದಿಯೂ ಜೋರಾಗಿತ್ತು.

* * 

ಮಳೆ ಇಲ್ಲದ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಕೆರೆಯ ಹೂಳೆತ್ತಿದೆವು. ಅದರ ಪರಿಣಾಮ ಈಗ ಕೆರೆಯಲ್ಲಿ ನೀರು ಸಂಗ್ರಹವಾಗಲು ಅವಕಾಶವಾಯಿತು
ನಬಿಸಾಬ್‌ ಮುದುಕನಕಟ್ಟೆ
ಯುವಪಡೆಯ ಸದಸ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT