ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ಗಾಗಿ ಕಾ ದಿರುವ ಐತಿಹಾಸಿಕ ಆಸ್ಪತ್ರೆ !

ತುಕ್ಕು ಹಿಡಿಯುತ್ತಿರುವ ವೈದ್ಯಕೀಯ ಉಪಕರಣ, ಸ್ವಚ್ಛತೆ ಮರೀಚಿಕೆ, ಜನರ ಪರದಾಟ
ಅಕ್ಷರ ಗಾತ್ರ

ಚಿಕ್ಕಜೋಗಿಹಳ್ಳಿ (ಕೊಟ್ಟೂರು): ಸ್ವಾತಂತ್ರ್ಯ ನಂತರ ಮಾದರಿ ಗ್ರಾಮ ಎಂಬ ಹೆಗ್ಗಳಿಕೆಗೆ ಹೆಸರಾಗಿದ್ದ  ಚಿಕ್ಕ­ಜೋಗಿ­ಹಳ್ಳಿ ಗ್ರಾಮದ ಗತವೈಭವ ಇಂದು ದಿನದಿಂದ ದಿನಕ್ಕೆ ಕಳೆಗುಂದುತ್ತಿ­ರುವುದು ನೋವಿನ ಸಂಗತಿಯಾಗಿದೆ.

1956 ರಲ್ಲಿಯೇ  ಈ ಪುಟ್ಟಗ್ರಾಮ ಯಾವ ನಗರಕ್ಕೂ ಕಡಿಮೆ ಇಲ್ಲದಂತೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ಅದರೆ ಇಂದು ಒಂದೊಂದೇ ಸೌಲಭ್ಯ­ಗಳಿಂದ ವಂಚಿತವಾಗುತ್ತಿದೆ. ಸುಮಾರು 10 ಎಕರೆ ಪ್ರದೇಶದಲ್ಲಿ ನಿರ್ಮಾಣ­ವಾಗಿರುವ ಗ್ರಾಮದ ಆಸ್ಪತ್ರೆ ಒಂದು ಕಾಲದಲ್ಲಿ ವಿಮ್ಸ್ ಬಿಟ್ಟರೆ ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿತ್ತು. ಇಂತಹ ಆಸ್ಪತ್ರೆ  ಇಂದು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಸೇರಿ ಹಲವು ಮೂಲ ಸಮಸ್ಯೆಗಳಿಂದ ನರಳುತ್ತಿ­ರುವುದು ವಿಪರ್ಯಾಸದ ಸಂಗತಿಯಾಗಿದೆ.

ಈ ಆಸ್ಪತ್ರೆಯಲ್ಲಿ ಒಟ್ಟು ಎಂಟು ವ್ಯೆದ್ಯರ ಹುದ್ದೆ ಇದ್ದು, ನೆಪ ಮಾತ್ರಕ್ಕೆ ಮೂವರು ವೈದ್ಯರು ಇದ್ದಾರೆ. ಇಬ್ಬರು ಕಾಯಂ ವೈದ್ಯರಿದ್ದು. ಇವರಲ್ಲಿ ಡಾ.­ವಿನಯ್ ಅವರನ್ನು ಕೂಡ್ಲಿಗಿ ಆಸ್ಪತ್ರೆಗೆ ನಿಯೋಜನೆ ಮಾಡಿದ್ದಾರೆ. ಇನ್ನೊಬ್ಬ ಅರಿವಳಿಕೆ ತಜ್ಞರಾದ  ಡಾ.ಎಂ. ಆಲಿ ಅವರನ್ನು ವಾರದ ಮೂರು ದಿನಗಳಿಗೆ ಆಲೂರು ಆಸ್ಪತ್ರೆಗೆ ನಿಯೋಜನೆ ಮಾಡಲಾಗಿದೆ.  ಗುತ್ತಿಗೆ ವೈದ್ಯರಾದ ಡಾ.ಪ್ರದೀಪ್ ಮಾತ್ರ ಸ್ಥಳೀಯರಾಗಿರುವ ಕಾರಣ ಕಾಯಂ ವೈದ್ಯರಂತೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ.

ಆಸ್ಪತ್ರೆಯಲ್ಲಿ ಅರೆವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಯಂತ್ರೋಪಕ­ರಣ­ಗಳನ್ನು ಉಪಯೋಗಿ­ಸದ ಕಾರಣ ತುಕ್ಕುಹಿಡಿ­ಯುತ್ತಿವೆ, ನಿರುಪಯುಕ್ತವಾ­ಗಿರುವ ಕುಷ್ಠರೋಗ ವಿಭಾಗ ಕಟ್ಟಡ ಅನ್ಯ ಕಾರ್ಯಗಳಿಗೆ ಬಳಕೆಮಾಡಿಕೊಳ್ಳದ ಕಾರಣ ಶಿಥಿಲಾವಸ್ಥೆಯ ಅಂಚಿನಲ್ಲಿದೆ. ಅಲ್ಲದೆ  ದಂತ, ಸ್ತ್ರೀರೋಗ, ನೇತ್ರತಜ್ಞ, ಕೀಲು­ಮೂಳೆ ತಜ್ಞ ಸೇರಿ ಇಬ್ಬರು ಶಸ್ತ್ರಚಿಕಿತ್ಸೆ ತಜ್ಞರ ಹುದ್ದೆಗಳು ಖಾಲಿ­ಯಿದ್ದರೂ ಸಹ ಎರಡು ದಶಕಗಳಿಂದ ನೇಮಕ ಮಾಡಿಲ್ಲವೆಂದರೆ ಇಲಾಖೆಯ ನಿರ್ಲಕ್ಷ್ಯತನಕ್ಕೆ ಇದು ಹಿಡಿದ ಕೈಗನ್ನಡಿಯಾಗಿದೆ.

‘ಪ್ರಾರಂಭದಲ್ಲಿ ಐವತ್ತು ಹಾಸಿಗೆಗಳ ಜನರಲ್ ಆಸ್ಪತ್ರೆಯೆಂದು ಮೇಲ್ದರ್ಜೆಗೇ­ರಿಸ­ಲಾಗಿತ್ತು. ಅದರೆ ಕೆಲವು ವರ್ಷಗಳ ನಂತರ ಸಮುದಾಯ ಅರೋಗ್ಯ ಕೇಂದ್ರ­ವ­ನ್ನಾಗಿಸಿ 30 ಹಾಸಿಗೆಗಳಿಗೆ ಇಳಿಸಲಾ­ಯಿತು, 1995ರಲ್ಲಿ ಸುಮಾರು ₹ 1.20 ಕೋಟಿ  ವೆಚ್ಚದಲ್ಲಿ ನವೀಕರ­ಣಗೊಳಿಸಿ­ದರೂ ಅಗತ್ಯ ವೈದ್ಯರ ನೇಮಕಕ್ಕೆ ಮುಂದಾಗಲಿಲ್ಲ’ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಧನಂಜಯ ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಕಳೆದ ಎರಡು ವರ್ಷಗಳಿಂದ ಆಸ್ಪತ್ರೆ­ಯಲ್ಲಿ ನೀರಿನ  ಸಮಸ್ಯೆ ಉಲ್ಬಣ­ಗೊಂಡಿ­ದೆ. ನೀರು ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಸ್ವಚ್ಛತೆ ಎಂಬುದು ಮರೀಚೆಕೆಯಾಗಿದೆ. ‘ಸ್ವಚ್ಛತೆ ಇಲ್ಲದ ಕಾರಣ ರೋಗ ಗುಣಪಡಿಸಬೇಕಾದ ಆಸ್ಪತ್ರೆ ರೋಗ ಅಂಟಿಸುವ ತಾಣ­ವಾಗು­ತ್ತಿದೆ. ಸಂಜೆ­ಯಾಗು­ತ್ತಿದ್ದಂತೆ ಸೊಳ್ಳೆಗಳ ಕಾಟಕ್ಕೆ ರೋಗಿಗಳು    ಯಾತನೆ ಅನುಭವಿ­ಸುವಂತಹ ಪರಿಸ್ಥಿತಿ ನಿರ್ಮಾ­ಣ­ವಾಗಿದೆ‘ ಎಂದು ಭೀಮ­ಸಮುದ್ರ ಗ್ರಾಮದ ಮರಿಯಣ್ಣ ನೋವಿನಿಂದ ಹೇಳುತ್ತಾರೆ.

‘ಸರ್ಕಾರಿ ಆಸ್ಪತ್ರೆಯಿದ್ದರೂ ಮಹಿಳಾ ವೈದ್ಯರಿಲ್ಲದ ಕಾರಣ ನಾವು ದೂರದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿಯ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡು­ವುದು ಅನಿವಾರ್ಯವಾಗಿದೆ’ ಎಂದು ಗುಂಡಮುಣಗು ಗ್ರಾಮದ ಬಸಮ್ಮ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

‘ಆಸ್ಪತ್ರೆಯನ್ನು ಕಾಡುತ್ತಿರುವ ಸಮ­ಸ್ಯೆಗಳ ಬಗ್ಗೆ ಕೂಡಲೇ ಹಿರಿಯ ಅಧಿಕಾರಿ­ಗಳ ಗಮನಕ್ಕೆ ತಂದು ವೈದ್ಯರು, ಸಿಬ್ಬಂದಿ ನೇಮಕ ಹಾಗೂ ಮೂಲ ಸೌಕರ್ಯ ಕಲ್ಪಿಸಿ­ಕೊಡಲು ಯತ್ನಿಸಲಾಗು­ವುದು’ ಎಂದುತಾಲ್ಲೂಕು ವೈದ್ಯಾಧಿಕಾರಿ ಡಾ. ಷಣ್ಮುಖ­ನಾಯ್ಕ ತಿಳಿಸಿದರು.

ಹಲವು ಸಮಸ್ಯೆ­ಗಳಿಂದ ಬಳಲುತ್ತಿ­ರುವ ಈ ಆಸ್ಪತ್ರೆಗೆ ಜನಪ್ರತಿನಿಧಿಗಳು , ಅಧಿಕಾರಿಗಳು ಕೂಡಲೇ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆಸ್ಪತ್ರೆಗೆ ಜೀವ ನೀಡಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT