ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಭೀತಿಯಲ್ಲಿ ಅನ್ನದಾತರು

Last Updated 19 ಆಗಸ್ಟ್ 2016, 5:31 IST
ಅಕ್ಷರ ಗಾತ್ರ

ಕೊಟ್ಟೂರು: ಆರಂಭದಲ್ಲಿ ಹೋಬಳಿಯಾದ್ಯಂತ ಭರ್ಜರಿಯಾಗಿ ಸುರಿದ ಮುಂಗಾರು ಮಳೆಯಿಂದ ಉತ್ತೇಜನಗೊಂಡ ಅನ್ನದಾತರು ಹರ್ಷಚಿತ್ತರಾಗಿ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ, ಇತ್ತೀಚೆಗೆ ಕೆಲವು ದಿನಗಳಿಂದ ಮಳೆ ಕೈಕೊಟ್ಟಿದ್ದು, ಬಿತ್ತಿದ ಬೆಳೆಗಳು ಬಾಡುತ್ತಿರುವುದರಿಂದ ರೈತರಲ್ಲಿ ಆತಂಕ ಮೂಡಿಸಿದೆ.

ಸಕಾಲಕ್ಕೆ ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಗುಳೆ ಹೋಗುವ ದೃಶ್ಯ ಈ ಭಾಗದಲ್ಲಿ ಸಾಮಾನ್ಯವಾಗಿದೆ.

ಸುಮಾರು ಇಪ್ಪತ್ತು ದಿನಗಳಿಂದ ಮಳೆ ಕ್ಷೀಣಿಸಿದ್ದು, ಬಿಸಿಲಿನ ಪ್ರಖರತೆ ಹೆಚ್ಚಾದ ಪರಿಣಾಮ ಬೆಳೆಗಳು ಬಾಡುತ್ತಿವೆ. ಇದರಿಂದ ಆತಂಕಗೊಂಡ ರೈತರು ವರುಣನ ಕೃಪೆಗಾಗಿ ಪೂಜೆ ಪುನಸ್ಕಾರಗಳಿಗೆ ಮೊರೆ ಹೋಗಿ, ದಿನ ನಿತ್ಯ ಆಕಾಶವನ್ನು ನೋಡುವಂತಹ ಪರಿಸ್ಥಿತಿ ಈ ಪ್ರದೇಶದಲ್ಲಿ ನಿರ್ಮಾಣವಾಗಿದೆ.

ಹೋಬಳಿಯಲ್ಲಿ ಒಟ್ಟು 18 ಸಾವಿರ ಹೆಕ್ಟರ್ ಬಿತ್ತನೆ ಕಾರ್ಯ ಗುರಿಹೊಂದಲಾಗಿತ್ತು. ಅದರಲ್ಲಿ 17,234 ಹೆಕ್ಟರ್(ಶೇ 96) ಬಿತ್ತನೆಯಾಗಿದ್ದು, ಇದರಲ್ಲಿ 9455 ಹೆಕ್ಟರ್ ಭೂಮಿಯಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯ ನಡೆದಿದೆ. ಉಳಿದ ಪ್ರದೇಶದಲ್ಲಿ ರಾಗಿ, ಸಜ್ಜೆ, ನವಣೆ, ಜೋಳ, ಹತ್ತಿ, ಶೇಂಗಾ ಹಾಗೂ ತೊಗರಿ ಬಿತ್ತನೆಗೊಂಡಿವೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಗೋಂದಿ ತಿಳಿಸಿದರು.

ವಿಶೇಷವಾಗಿ ಈ ಬಾರಿ ಮೆಕ್ಕೆಜೋಳದ ನಂತರ ತೊಗರಿಬೇಳೆ ಬಿತ್ತನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶೇಂಗಾ ಹತ್ತಿ ಸೂರ್ಯಕಾಂತಿ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿವೆ. ಬಿತ್ತನೆ ಬೀಜದ ಮಾರಾಟದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದ್ದು, ಮಳೆಯ ಕಣ್ಣಮುಚ್ಚಾಲೆ ಆಟದಿಂದ ರೈತ ಸಮುದಾಯವು ಆರ್ಥಿಕವಾಗಿ ಮತ್ತೊಷ್ಟು ಕುಸಿಯುವಂತಾಗಿದೆ.

ಆಗಸದಲ್ಲಿ ಮೋಡಗಳು ಕಂಡುಬರುತ್ತವೆಯೇ ವಿನಃ ಮಳೆ ಮಾತ್ರ ಸುರಿಯುತ್ತಿಲ್ಲ. ಈಗ ಒಂದು ವಾರದಿಂದ ಬಿಸಿಲಿನ ತಾಪ ಹೆಚ್ಚಾದ ಪರಿಣಾಮ ತೇವಾಂಶ ಕಡಿಮೆಯಾಗಿದೆ ಮತ್ತು ಇನ್ನೂ ಕೆಲವು ದಿನ ಮಳೆ ಬರುವ ಮುನ್ಸೂಚನೆ ಇಲ್ಲ ಎಂದೂ ಸಹ ಇಲಾಖೆ ತಿಳಿಸಿದೆ.

ಹವಾಮಾನ ವೈಪರಿತ್ಯಯಿಂದ ಬೆಳೆ ಬಾಡತೊಡಗಿವೆ. ಮುಂಗಾರು ಆರಂಭದಲ್ಲಿ ಒಂದಿಷ್ಟು ಮಳೆ ಬಂದಿದ್ದರಿಂದ ಹುಲ್ಲು ಚಿಗಿತು ಜಾನುವಾರುಗಳು ಮೇಯಲು ಅನುಕೂಲವಾಗಿತ್ತು. ಆದರೆ, ಇತ್ತೀಚೆಗೆ ಮಳೆ ಕೈಕೊಟ್ಟಿದ್ದರಿಂದ ಹುಲ್ಲು ಒಣಗಿ ದನ ಕರುಗಳಿಗೆ ಕಷ್ಟ ಎದುರಾಗಿದೆ ಎಂದು ಹಿರೇವಡ್ಡರಹಳ್ಳಿ ಗ್ರಾಮದ ರೈತ ವೀರಭದ್ರಯ್ಯ ನೋವಿನಿಂದ ಹೇಳುತ್ತಾರೆ.

ಸಕಾಲಕ್ಕೆ ಮಳೆ ಬಂದರೆ ಸರಿ ಇಲ್ಲದಿದ್ದರೆ ಹೆಂಡತಿ ಮಕ್ಕಳೊಂದಿಗೆ ನಾವು ಕಾಫೀ ಸೀಮೆಗೆ ದುಡಿಯೋಕೆ ಹೋಗುತ್ತೇವೆ ಎಂದು ನೋವಿನಿಂದ ಹೇಳುತ್ತಾರೆ ಮೋತಿಕಲ್ಲು ತಾಂಡದ ರೈತ ಜಿಮ್ಲಾನಾಯ್ಕ

ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆ ಮುಖಾಂತರ ಕೂಡ್ಲಿಗಿ ತಾಲ್ಲೂಕಿನ ಕೆರೆಗಳಿಗೆ ಶಾಶ್ವತ ನೀರು ತುಂಬಿಸಿದಲ್ಲಿ ರೈತರು ಗುಳೆ ಹೋಗುವುದು ತಪ್ಪುತ್ತದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಭರಮಣ್ಣ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಕೂಡ್ಲಿಗಿ ತಾಲ್ಲೂಕನ್ನು   ಸೇರಿಸುವ ಮೂಲಕ  ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕೆರೆಗಳಿಗೆ ಶಾಶ್ವತ ನೀರು ತುಂಬಿಸಿದಲ್ಲಿ ಗುಳೆ ಹೋಗುವುದು ತಪ್ಪುತ್ತದೆ, ಅನ್ನದಾತ ನೆಮ್ಮದಿಯ ಜೀವನ   ಕಾಣಲು ಸಾಧ್ಯವಾಗುತ್ತದೆ ಎನ್ನುವುದು ಈ ಭಾಗದ ಜನತೆಯ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT