ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಮತ್ತೆ ಅಧಿಕಾರ; ಕಾರ್ಮಿಕ ಹಕ್ಕು ರದ್ದು: ಸಿದ್ದಗಂಗಪ್ಪ

ಬಾಗೇಪಲ್ಲಿ: ಕಾರ್ಮಿಕ ದಿನಾಚರಣೆಯಲ್ಲಿ ಆರೋಪ
Published 1 ಮೇ 2024, 12:49 IST
Last Updated 1 ಮೇ 2024, 12:49 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬಾಗೇಪಲ್ಲಿ: ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರ ಬಂದರೆ ಕಾರ್ಮಿಕರ ಹಕ್ಕುಗಳನ್ನು ಕಿತ್ತೆಸೆದು, ಹೋರಾಟ ಹತ್ತಿಕ್ಕುವ ಕೆಲಸ ಮಾಡಲಿದೆ. ಇದರಿಂದ ಕಾರ್ಮಿಕರ ವರ್ಗ ಬೀದಿಪಾಲು ಆಗಲಿದೆ ಎಂದು ಸೆಂಟರ್ ಆಫ್ ಟ್ರೇಡ್ ಯುನಿಯನ್(ಸಿಐಟಿಯು) ಜಿಲ್ಲಾ ಸಮಿತಿ ಅಧ್ಯಕ್ಷ ಸಿದ್ದಗಂಗಪ್ಪ ಹೇಳಿದರು.

ಸೆಂಟರ್ ಆಫ್ ಟ್ರೇಡ್ ಯುನಿಯನ್(ಸಿಐಟಿಯು), ಪ್ರಾಂತ ಕೃಷಿಕೂಲಿಕಾರರ ಸಂಘ, ಮಸಣ ಕಾರ್ಮಿಕರ ಸಂಘ, ದಲಿತ ಹಕ್ಕುಗಳ ಸಮಿತಿ ಸಹಯೋಗದಲ್ಲಿ ಪಟ್ಟಣದ ಸುಂದರಯ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಅವರು ಮಾತನಾಡಿದರು.

ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ಮೋದಿ ಕಳೆದ 10 ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಚ್ಚಿಹಾಕಿದ್ದಾರೆ. ಇದರಿಂದ ಕೋಟ್ಯಂತರ ಮಂದಿ ಉದ್ಯೋಗಿಗಳು ಬೀದಿ ಪಾಲಾದರು ಎಂದು ಹೇಳಿದರು.

ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಜಮಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಒಂದು ರೂಪಾಯಿ ಹಣ ಹಾಕಲಿಲ್ಲ. ಕೇವಲ ಸುಳ್ಳು ಭರವಸೆ ನೀಡಿ, ಜನರಿಗೆ ಟೋಪಿ ಹಾಕುತ್ತಿದ್ದಾರೆ. ಮತ್ತೆ ಸುಳ್ಳು ಗ್ಯಾರಂಟಿ ನೀಡಿ ಮತ್ತೊಮ್ಮೆ ಮೋಸ ಮಾಡಲು ಹೊರಟಿದ್ದಾರೆ. ಜನರು ಸಹ ಮೋದಿ ಗ್ಯಾರಂಟಿ ನಂಬುತ್ತಿರುವುದು ವಿಪರ್ಯಾಸ ಆಗಿದೆ ಎಂದರು.

ಕಾರ್ಮಿಕ ಮುಖಂಡ ಅನಿಲ್ ಕುಮಾರ್ ಮಾತನಾಡಿ, ಕೋಲಾರ ಜಿಲ್ಲೆಯ ಚಿನ್ನದ ಕಾರ್ಖಾನೆಯಲ್ಲಿ ಭೂಮಿ ಆಳಕ್ಕೆ ಇಳಿದು ಗಣಿ ನಡೆಸಲು ಯಂತ್ರಗಳಿಗೆ ಸಾಧ್ಯವಾಗಿಲಿಲ್ಲ. ಆಗ ಅನೇಕ ಅಸಂಘಟಿತ ಕಾರ್ಮಿಕರಿಂದ ಕೆಲಸ ಮಾಡಿಸಲಾಯಿತು.‌  ಆಗ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. 8 ಗಂಟೆ ಮಾತ್ರ ಕೆಲಸಕ್ಕಾಗಿ ಹೋರಾಟ ನಡೆಸಲಾಯಿತು. ಕಾರ್ಮಿಕರ ಸಂಘಟನೆಯಿಂದ ಕಮ್ಯೂನಿಸ್ಟ್ ಸಂಘಟನೆ ಉದಯ ಆಗಿ ಎರಡು ಜಿಲ್ಲೆಗಳಲ್ಲಿ ಕಮ್ಯೂನಿಸ್ಟ್ ಹೋರಾಟಕ್ಕೆ ಪ್ರೇರಣೆ ಆಗಿದೆ ಮ ಎಂದು ಹೇಳಿದರು,

ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ದೇಶದಲ್ಲಿ ಅರಾಜಕತೆ, ಕೋಮುವಾದ, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ಮೋದಿ ಅವರನ್ನು ಜನ ಬೆಂಬಲಿಸುತ್ತಿರುವುದು ದುರಂತ ಆಗಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬಂದರೆ ಕೃಷಿಕೂಲಿಕಾರ್ಮಿಕರ ವಿರೋಧಿ ಕಾಯಿದೆ ಜಾರಿ ಮಾಡಿ, ಎಲ್ಲರ ಹಕ್ಕು ಕಸಿಯುತ್ತಾರೆ. ಜನರು ಎಚ್ಚೆತ್ತುಕೊಳ್ಳಬೇಕು. ಅಸಂಘಟಿತ ಕಾರ್ಮಿಕರ ಪರ ಹೋರಾಟಗಳನ್ನು ಮಾಡುವ ಕೆಂಬಾವುಟಕ್ಕೆ ಜನರು ಶಕ್ತಿ ತುಂಬಿಸಬೇಕು ಎಂದು ತಿಳಿಸಿದರು.

ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಹಕಾರ್ಯದರ್ಶಿ ಬಿಳ್ಳೂರುನಾಗರಾಜ್, ಸದಸ್ಯೆ ಬಿ.ಸಾವಿತ್ರಮ್ಮ, ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ, ದಲಿತ ಹಕ್ಕುಗಳ ಸಮಿತಿಯ ತಾಲ್ಲೂಕು ಕಾರ್ಯದರ್ಶಿ ಜಿ.ಕೃಷ್ಣಪ್ಪ, ಸ್ಥಳೀಯ ಕಾರ್ಯದರ್ಶಿ ಅಶ್ವಥ್ಥಪ್ಪ, ಮಸಣ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನಿಯಪ್ಪ, ಮುಖಂಡರಾದ ಒಬಳರಾಜು, ಬಿ.ಎಚ್.ರಫೀಕ್, ಅಕ್ಷರ ದಾಸೋಹ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಅಮರಾವತಿ ಇದ್ದರು.

ಶೇ 90 ಕಾರ್ಮಿಕರು ಅಸಂಘಟಿತರು

ಕೆಂಬಾವುಟದ ಅಡಿಯ ಸಿಐಟಿಯು ಸಂಘಟನೆಯಲ್ಲಿ ಅಸಂಘಟಿತ ಕಾರ್ಮಿಕರೇ ಶೇ 90ಕ್ಕೂ ಹೆಚ್ಚು ಮಂದಿ ಇದ್ದಾರೆ. ಶೇ 8 ರಷ್ಟು ಸಂಘಟಿತರಾಗಿದ್ದಾರೆ. ಅಸಂಘಟಿತರ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಮೊದಲು ಸಂಘಟಿತರಾಗಬೇಕು ಎಂದು ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಸಿದ್ದಗಂಗಪ್ಪ ಹೇಳಿದರು. ಸಮಾನ ಕೆಲಸಕ್ಕೆ ಸಮಾನ ವೇತನ ಕಾರ್ಮಿಕರಿಗೆ ಭದ್ರತೆ ಕಾಯಂ ಕೆಲಸ ವಿಮಾ ಸೌಲಭ್ಯ ಸೇರಿದಂತೆ ವಿವಿಧ ಹಕ್ಕುಗಳನ್ನು ಸಂವಿಧಾನ ಕಲ್ಪಿಸಿದೆ. ಆದರೂ ಇದುವರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ಹಕ್ಕುಗಳನ್ನು ಕಲ್ಪಿಸಿಲ್ಲ. ಕೇವಲ ಗುತ್ತಿಗೆ ದಿನಗೂಲಿ ಗೌರವಧನ ಆಧಾರದ ಮೇಲೆ ಕಡಿಮೆ ವೇತನ ನೀಡಿ ಹೆಚ್ಚು ದುಡಿಮೆ ಮಾಡಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT