ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ‘ಸಂಸ್ಕಾರ’ ಶಿಬಿರ: ಚಿಣ್ಣರ ಕಲರವ

ಹೆತ್ತವರ ಪಾದಪೂಜೆ ಮಾಡಿ ಸಂಭ್ರಮಿಸಿದ ಮಕ್ಕಳು; 9 ದಿನಗಳ ಶಿಬಿರ ಮುಕ್ತಾಯ
Published 27 ಏಪ್ರಿಲ್ 2024, 4:38 IST
Last Updated 27 ಏಪ್ರಿಲ್ 2024, 4:38 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಯಾದವಾಡದ ಮಹಾಲಿಂಗಪ್ಪ ಐ.ಕತ್ತಿ ಶಾಲೆ ಆವರಣದಲ್ಲಿ ಪುಟಾಣಿಗಳೆಲ್ಲ ಮಾತಾ, ಪಿತಾ, ಪಿತಾಮಹಂ, ಪಿತಾಮಹಿಂ, ಭ್ರಾತೃ, ಪಿತ್ರವ್ಯ ಹೀಗೆ... ಸಂಸ್ಕೃತದಲ್ಲಿ ಸಂಭಾಷಣೆ ಮಾಡುತ್ತಿದ್ದರು. ತಮ್ಮದೇ ಲೋಕದಲ್ಲಿ ಅವರು ವಿಹರಿಸುತ್ತಿರುವುದನ್ನು ಗಮನಿಸಿದರೆ, ವೇದಕಾಲದ ಗುರುಕುಲಕ್ಕೆ ಬಂದ ಅನುಭವವಾಗುತ್ತಿತ್ತು.

ಯಾದವಾಡದ ಭಾವೈಕ್ಯ ಬಳಗ 9 ದಿನಗಳ ಕಾಲ ಉಚಿತವಾಗಿ ಏರ್ಪಡಿಸಿದ್ದ ‘ಸಂಸ್ಕಾರ’ ಶಿಬಿರ ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡುವಷ್ಟು ಮಕ್ಕಳನ್ನು ಪರಿಣಿತರನ್ನಾಗಿಸಿತ್ತು. ಶಿಬಿರಕ್ಕೆ ಆಗಮಿಸುವಾಗ ಮಕ್ಕಳಿಗೆ ಸಂಸ್ಕೃತದ ಬಗ್ಗೆಯೇ ಗೊತ್ತಿರಲಿಲ್ಲ. ಆದರೆ, ಶಿಬಿರದಿಂದ ಮರಳುವಾಗ ಸಂಸ್ಕತದಲ್ಲಿ ಮಾತನಾಡುತ್ತ, ಸಂಭ್ರಮದಿಂದ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು.

ಇಲ್ಲಿ ಸಂಸ್ಕೃತವಷ್ಟೇ ಅಲ್ಲ; ಭಗವದ್ಗೀತೆ, ನಿತ್ಯ ದೇವರನ್ನು ಪೂಜಿಸುವುದು, ಉಪನಿಷತ್ತು ಸೇರಿದಂತೆ ಭಾರತೀಯ ಸಂಸ್ಕೃತಿ, ಸಂಸ್ಕಾರದ ಪರಿಚಯಿಸುವ ನಾನಾ ವಿಷಯಗಳನ್ನು ಕಲಿಸಲಾಯಿತು. ರಾಮಾಯಣ, ಮಹಾಭಾರತ ಕಥೆಗಳನ್ನು ಆಧರಿಸಿದ ಏಕಾಂಕ ನಾಟಕಗಳನ್ನು ಮಕ್ಕಳಿಂದ ಪ್ರದರ್ಶಿಸಲಾಯಿತು.

ಹೆತ್ತವರ ಪಾದ ಪೂಜೆ: ಈ ಶಿಬಿರದಲ್ಲಿ ಯಾದವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 100 ಪುಟಾಣಿಗಳು ಭಾಗವಹಿಸಿದ್ದರು. ಅವರು ಹೆತ್ತವರು, ಅಜ್ಜ–ಅಜ್ಜಿ ಪಾದಗಳನ್ನು ತೊಳೆದು, ಪೂಜಿಸಿ ಆಶೀರ್ವಾದ ಪಡೆದರು. ಮಕ್ಕಳಿಂದ ಪಾದಪೂಜೆ ಮಾಡಿಸಿಕೊಂಡ ಹಿರಿಯರು ಸಂಭ್ರಮಿಸಿದರು. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಅರಿವು ಅವರಲ್ಲಿ ಮೂಡಿತು.

‘ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್‌, ಟಿ.ವಿಯಲ್ಲಿ ಕಳೆದು ಹೋಗುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರದ ಬೀಜ ಬಿತ್ತಿ, ದೇಶದ ಸುಸಂಸ್ಕೃತ ಪ್ರಜೆಗಳನ್ನಾಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಿದ್ದೇವೆ’ ಎಂದು ಶಿಬಿರದ ಆಚಾರ್ಯ ಸಿದ್ಧೇಶ್ವರ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾವೈಕ್ಯ ಬಳಗದ ಅಧ್ಯಕ್ಷ ಈಶ್ವರ ಕತ್ತಿ ಮಾತನಾಡಿ, ‘ಇಂದಿನ ಮಕ್ಕಳೇ ನಾಳಿನ ಶ್ರೇಷ್ಠ ನಾಗರಿಕರು. ಮಕ್ಕಳಿಗೆ ಕೇವಲ ಅಕ್ಷರ ಜ್ಞಾನ ನೀಡಿದರೆ ಸಾಲದು. ಅವರಿಗೆ ಸಂಸ್ಕಾರ ಕಲಿಸುವ ಅವಶ್ಯವಿದೆ. ಪಾಲಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಪ್ರತಿವರ್ಷವೂ ಸಂಸ್ಕಾರ ಶಿಬಿರ ನಡೆಸುತ್ತಿದ್ದೇವೆ’ ಎಂದರು.

ಬಸವರಾಜ ಕಲ್ಯಾಣಿ, ಬಸಲಿಂಗಪ್ಪ ಢವಳೇಶ್ವರ, ಲಕ್ಷ್ಮಣ ಶೇರೆಗಾರ ಸೇರಿದಂತೆ ವಿವಿಧ ಸಂಘಟನೆಯವರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT