ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಗಳಿದ್ದರೂ ಭಣಗುಡುತ್ತಿರುವ ಬಿನ್ನಿಪೇಟೆ ಹೂವಿನ ಮಾರುಕಟ್ಟೆ!

ಬಿನ್ನಿಪೇಟೆ ಎಪಿಎಂಸಿ ಸುಸಜ್ಜಿತ ಮಳಿಗೆಗಳಿಗೆ ಬೀಗ, ತ್ರಿಶಂಕು ಸ್ಥಿತಿಯಲ್ಲಿ ವರ್ತಕರು
Published 19 ಅಕ್ಟೋಬರ್ 2023, 20:23 IST
Last Updated 19 ಅಕ್ಟೋಬರ್ 2023, 20:23 IST
ಅಕ್ಷರ ಗಾತ್ರ

ಬೆಂಗಳೂರು: ಬಿನ್ನಿಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು (ಎಪಿಎಂಸಿ) ಹೂವಿನ ವ್ಯಾಪಾರಿಗಳಿಗಾಗಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿದೆ. ಆದರೆ, ಇಲ್ಲಿ ರೈತರು, ಗ್ರಾಹಕರು ಬಾರದೇ ವ್ಯಾಪಾರ ವಹಿವಾಟು ನಡೆಯದೇ ಪ್ರಾಂಗಣವೆಲ್ಲ ಭಣಗುಡುತ್ತಿದೆ.

ಬಿನ್ನಿಪೇಟೆ ಎಪಿಎಂಸಿಯಲ್ಲಿ 1 ಎಕರೆ 20 ಗುಂಟೆ ಪ್ರದೇಶದಲ್ಲಿ ಹೂವಿನ ಮಾರುಕಟ್ಟೆ ನಿರ್ಮಿಸಲಾಗಿದೆ. ಸುಜ್ಜಿತ ಮಳಿಗೆಗಳಿವೆ. ಪ್ರತಿ ಮಳಿಗೆಗೆ ನೀರಿನ ಸಂಪರ್ಕವಿದೆ. ಪಾರ್ಕಿಂಗ್‌, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕೆಲವು ಮಳಿಗೆಗಳಲ್ಲಿ ವರ್ತಕರೂ ಇದ್ದಾರೆ. ಇಷ್ಟೆಲ್ಲ ಸೌಲಭ್ಯಗಳಿದ್ದರೂ, ರೈತರು, ವ್ಯಾಪಾರಿಗಳು ಮತ್ತು ಗ್ರಾಹಕರು ಮಾತ್ರ ಬರುತ್ತಿಲ್ಲ. ಇದರಿಂದ, ಈಗಿರುವ ವರ್ತಕರು ಮಳಿಗೆಗೆ ಬಾಡಿಗೆ ಭರಿಸಲಾಗದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೆಚ್ಚುವರಿಯಾಗಿ 32 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಅವುಗಳ ಹಂಚಿಕೆಯಾಗಿಲ್ಲ.

ಕೋವಿಡ್‌ ಸಂದರ್ಭದಲ್ಲಿ ಈ ಮಾರುಕಟ್ಟೆ ವಿಶಾಲವಾಗಿರುವ ಕಾರಣ, ನಗರದ ಎಲ್ಲ ಹೂವಿನ ವರ್ತಕರು ಬಿನ್ನಿಪೇಟೆಯಲ್ಲಿ ವ್ಯಾಪಾರ–ವಹಿವಾಟು ಮಾಡುತ್ತಿದ್ದರು. ಕೋವಿಡ್‌ ನಂತರ ಇಲ್ಲಿದ್ದ ಕೆಲ ವರ್ತಕರು ಮತ್ತೆ ಕೆ.ಆರ್. ಮಾರುಕಟ್ಟೆ, ಅವೆನ್ಯೂ ರಸ್ತೆ, ವಿಲ್ಸನ್‌ ಗಾರ್ಡನ್‌, ಸುಂಕದಕಟ್ಟೆ ಸೇರಿದಂತೆ ನಗರದ ವಿವಿಧ ರಸ್ತೆಗಳ ಬದಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿಗೆ ಬರುತ್ತಿದ್ದ ರೈತರು, ಗ್ದಾಹಕರ ಸಂಖ್ಯೆ ಕಡಿಮೆಯಾಗಿದೆ. ಹೂವಿನ ವರ್ತಕರಿಗೆ ವ್ಯಾಪಾರವಿಲ್ಲದೇ ‘ತ್ರಿಶಂಕು ಸ್ಥಿತಿ’ಗೆ ತಲುಪಿದ್ದಾರೆ.

‘40ಕ್ಕೂ ಹೆಚ್ಚು ಉನ್ನತ ತಳಿ ಹೂವು ಮಾರಾಟಗಾರರಿಗೆ ಬಿನ್ನಿಪೇಟೆ ಎಪಿಎಂಸಿಯಿಂದ ಪರವಾನಿಗೆ ನೀಡಲಾಗಿದೆ. ಆದರೆ, ಅವರೆಲ್ಲರೂ ಈಗ ವಿಲ್ಸನ್‌ ಗಾರ್ಡನ್‌ನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲಿ ವ್ಯಾಪಾರ ಮಾಡಬಾರದು ಎಂದು ಕೋರ್ಟ್‌ ಆದೇಶ ನೀಡಿದೆ. ಆದರೂ, ಬಿಬಿಎಂಪಿ ಅಧಿಕಾರಿಗಳು ವ್ಯಾಪಾರ ಮಾಡಲು ಅವಕಾಶ ನೀಡಿದ್ದಾರೆ. ಅವರೆಲ್ಲರನ್ನೂ ಇಲ್ಲಿಗೆ ಸ್ಥಳಾಂತರಿಸಬೇಕು’ ಎಂದು ನಾಡಪ್ರಭು ಕೆಂಪೇಗೌಡ ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆನಂದ್ ಕುಮಾರ್ ತಿಳಿಸಿದರು.

‘ಬಿನ್ನಿಪೇಟೆ ಎಪಿಎಂಸಿ ಸಗಟು ಹೂವಿನ ಮಾರುಕಟ್ಟೆಯಲ್ಲಿರುವ ಸೌಲಭ್ಯಗಳ ಬಗ್ಗೆ ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಒತ್ತಾಯಿಸಿದರು.

‘ಈ ಮಾರುಕಟ್ಟೆಗೆ ಮೇಲ್ಛಾವಣಿ ನಿರ್ಮಿಸಲು ಮತ್ತು ಬಾಳೆಕಾಯಿ ಮಂಡಿಯಿಂದ ಇಲ್ಲಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸ್ಕೈವಾಕ್‌ ನಿರ್ಮಿಸಲು ಟೆಂಡರ್‌ ನೀಡಲಾಗಿದೆ. ಕೆಲ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಅನಧಿಕೃತವಾಗಿ ವ್ಯಾಪಾರ ಮಾಡುವ ಹೂವಿನ ವರ್ತಕರನ್ನು ಇಲ್ಲಿನ ಮಾರುಕಟ್ಟೆಗೆ ಸ್ಥಳಾಂತರಿಸಬೇಕೆಂದು ಬಿಬಿಎಂಪಿ, ಪೊಲೀಸರಿಗೆ ಮನವಿ ಮಾಡಲಾಗಿದೆ. ಆದರೇ ಯಾರು ಸ್ಪಂದಿಸುತ್ತಿಲ್ಲ. ಎಪಿಎಂಸಿ ಕಾಯ್ದೆ ಇಲ್ಲದಿರುವುದರಿಂದ ನಾವು ಏನೂ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ’ ಎಂದರು.

ಬಿನ್ನಿಪೇಟೆಯ ಹೂವಿನ ಮಾರುಕಟ್ಟೆಯಲ್ಲಿ ಬೀಗ ಹಾಕಿರುವ ಅಂಗಡಿಗಳು.
ಬಿನ್ನಿಪೇಟೆಯ ಹೂವಿನ ಮಾರುಕಟ್ಟೆಯಲ್ಲಿ ಬೀಗ ಹಾಕಿರುವ ಅಂಗಡಿಗಳು.
ಶಿವೇಗೌಡ
ಶಿವೇಗೌಡ
ಆನಂದ್ ಕುಮಾರ್
ಆನಂದ್ ಕುಮಾರ್

ನಗರದಲ್ಲಿರುವ ಅನಧಿಕೃತ ಹೂವಿನ ವ್ಯಾಪಾರಿಗಳನ್ನು ಬಿನ್ನಿಪೇಟೆ ಹೂವಿನ ಮಾರುಕಟ್ಟೆಗೆ ಸ್ಥಳಾಂತರಿಸಿದರೆ ನಗರದ ಪ್ರಮುಖ ರಸ್ತೆಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ ತಪ್ಪಲಿದೆ.

–ಆನಂದ್ ಕುಮಾರ್, ನಾಡಪ್ರಭು ಕೆಂಪೇಗೌಡ ಹೂವಿನ ವ್ಯಾಪಾರಿಗಳ ಸಂಘ ಉಪಾಧ್ಯಕ್ಷ

ಎಲ್ಲ ಹೂವಿನ ವರ್ತಕರು ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿದರೆ ಸೆಸ್‌ ರೂಪದಲ್ಲಿ ಸರ್ಕಾರಕ್ಕೆ ಹೆಚ್ಚ ಆದಾಯ ಬರಲಿದೆ.

–ಶಿವೇಗೌಡ ನಾಡಪ್ರಭು ಕೆಂಪೇಗೌಡ ಹೂವಿನ ವ್ಯಾಪಾರಿಗಳ ಸಂಘದ ಗೌರವ ಅಧ್ಯಕ್ಷ

‘ಹೂವಿನ ಅಂಗಡಿಗಳಿಗೆ ಬೀಗ’ ‘ಬಿನ್ನಿಪೇಟೆ ಹೂವಿನ ಮಾರುಕಟ್ಟೆಗೆ ಪ್ರತಿನಿತ್ಯ ಎರಡು ಹೂವಿನ ವಾಹನಗಳು ಮಾತ್ರ ಬರುತ್ತಿವೆ. ಕೆ.ಆರ್. ಮಾರುಕಟ್ಟೆಯಿಂದ ಹೂ ಖರೀದಿಸಿ ಇಲ್ಲಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರವಿಲ್ಲದ ಕಾರಣ ಬಾಡಿಗೆ ಭರಿಸಲಾಗುತ್ತಿಲ್ಲ. ಇಲ್ಲಿನ ಬಹುತೇಕ ಅಂಗಡಿಗಳಿಗೆ ಬೀಗ ಹಾಕಲಾಗಿದೆ’ ಎಂದು ಸಂಘದ ಗೌರವ ಅಧ್ಯಕ್ಷ ಶಿವೇಗೌಡ ಖಜಾಂಚಿ ಶ್ರೀಧರ ಮಾಹಿತಿ ನೀಡಿದರು.

ಅಂಕಿ–ಅಂಶಗಳು

1ಎಕರೆ 20 ಗುಂಟೆ ಮಾರುಕಟ್ಟೆ ವಿಸ್ತೀರ್ಣ

98 ಮಳಿಗೆಗಳು

₹11 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT