ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಹೆಗ್ಗುರುತು ದೇವನಹಳ್ಳಿ ಕೋಟೆ

Last Updated 22 ಜನವರಿ 2022, 19:56 IST
ಅಕ್ಷರ ಗಾತ್ರ

ಬೆಂಗಳೂರು: ದೇವನಹಳ್ಳಿ ಕೋಟೆಯು ಬೆಂಗಳೂರಿನ ಐತಿಹಾಸಿಕ ಹೆಗ್ಗುರುತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇರುವ ಈ ಕೋಟೆಯು 500 ವರ್ಷಗಳಿಗೂ ಹಳೆಯದು. ರಾಷ್ಟ್ರೀಯ ಹೆದ್ದಾರಿ–7ರ ಪಕ್ಕದಲ್ಲಿರುವ ಈ ಕೋಟೆಯು ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು.

ಈ ಕೋಟೆಯುಆಮೆಯ ಆಕಾರದಲ್ಲಿ ಹಾಗೂ ಅಂಡಾಕಾರದಲ್ಲಿದ್ದು, ನಿಯಮಿತ ಮಧ್ಯಂತರಗಳಲ್ಲಿ 12 ಅರೆ ವೃತ್ತಾಕಾರದ ಕೊತ್ತಲಗಳನ್ನು ಹೊಂದಿದೆ. ಕೋಟೆಯನ್ನು ಕಲ್ಲು, ಸುಣ್ಣ ಹಾಗೂ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.

ಗೋಡೆಯುದ್ದಕ್ಕೂ ಅಲ್ಲಲ್ಲಿ ‘ವಿ’ ಆಕಾರದ ಚಿಕ್ಕ ರಂಧ್ರಗಳಿವೆ. ಹೊರಗಿನಿಂದ ಆಕ್ರಮಣ ನಡೆಯುವ ಬಗ್ಗೆ ನಿಗಾ ಇಡಲು ಈ ರಂಧ್ರಗಳನ್ನು ನಿರ್ಮಿಸಲಾಗಿದೆ. ಈ ಕಿಂಡಿಗಳಿಂದ ಕೋಟೆಯ ಹೊರಗಿನ ಚಿತ್ರಣವನ್ನು ಕಾಣಬಹುದು.

ದಾಳಿಯಿಂದ ತಪ್ಪಿಸಿಕೊಳ್ಳಲು ಕಳ್ಳದಾರಿಗಳೂ ಇವೆ. ಕೋಟೆಯ ಮೇಲೆ ಕಾವಲು ಗೋಪುರಗಳಿವೆ. ರಕ್ಷಣೆಗಾಗಿ ಕೋಟೆಯ ಸುತ್ತ ಕಂದಕ ತೋಡಿ, ಅದರಲ್ಲಿ ನೀರು ತುಂಬಿಸಿ ಮೊಸಳೆಗಳನ್ನು ಬಿಟ್ಟಿದ್ದರು ಎಂದು ಊರಿನ ಹಿರಿಯರು ಹೇಳುತ್ತಾರೆ.

ಕೋಟೆಗೆ ಎರಡು ದ್ವಾರಗಳಿದ್ದವು. ಪೂರ್ವದ್ವಾರ ಹಾಳಾಗಿ ಪಟ್ಟಣಕ್ಕೆ ಸೇರಿಕೊಂಡಿದೆ. ಪಶ್ಚಿಮದ ಬಾಗಿಲು ಭದ್ರವಾಗಿದೆ. ಕೋಟೆಯ ಒಳಗೆ ನೂರಾರು ನಿವಾಸಗಳಿದ್ದು, ದೇವನಹಳ್ಳಿಗೆ ಇಂದಿಗೂ ರಕ್ಷಾಕವಚದಂತಿದೆ.

ಕೋಟೆಯ ಒಳಭಾಗದಲ್ಲಿ ಪುರಾತನವಾದ ವೇಣುಗೋಪಾಲಸ್ವಾಮಿ ದೇವಾಲಯ ಇದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ವೇಣು ಗೋಪಾಲ ಸ್ವಾಮಿ ಜಾತ್ರೆ ಮತ್ತು ರಥೋತ್ಸವಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ಆಗ ಕೋಟೆಯಲ್ಲೂ ಜನಜಂಗುಳಿ ಇರುತ್ತದೆ.

ಈ ಕೋಟೆಯ ಐತಿಹಾಸಿಕ ಸಂಗತಿಗಳು ಶತಮಾನಗಳು ಕಳೆದಂತೆ ಜನರ ನೆನಪಿನಿಂದ ಮರೆಯಾಗುತ್ತಲೇ ಇದೆ. ಕೋಟೆಯ ಜಾಡು ಹಿಡಿದು ಹೋದವರಿಗೆ ‘ಇದು..ಟಿಪ್ಪು ಕೋಟೆ’ ಎನ್ನುವ ರೂಢಿ ಮಾತು ಬಿಟ್ಟರೆ, ಹೆಚ್ಚೇನು ಮಾಹಿತಿ ಸಿಗುವುದಿಲ್ಲ. ಇತಿಹಾಸ ವಿವರಿಸುವ ಯಾವುದೇ ಫಲಕಗಳನ್ನು ಇಲ್ಲಿ ಅಳವಡಿಸಿಲ್ಲ.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಗೊಂಡ ಬಳಿಕ ದೇವನಹಳ್ಳಿ ಜಾಗತಿಕ ಮಟ್ಟದಲ್ಲಿ ‌ಪ್ರಸಿದ್ಧಿ ಪಡೆದಿದೆ. ಆದರೆ, ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಎಲ್ಲ ಅಂಶಗಳು ಇಲ್ಲಿದ್ದರೂ ಸರ್ಕಾರಗಳ ನಿರ್ಲಕ್ಷ್ಯದಿಂದ ಕೋಟೆ ಮೆರುಗು ಕಳೆದುಕೊಳ್ಳುತ್ತಿದೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

‘ಆಗೊಮ್ಮೆ ಈಗೊಮ್ಮೆ ಭೇಟಿ ನೀಡುವ ಪ್ರವಾಸಿಗರು ಕೋಟೆಯ ಹೆಬ್ಬಾಗಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಅಪೂರ್ಣ ಮಾಹಿತಿಯೊಂದಿಗೆ ಹಿಂತಿರುಗುತ್ತಿದ್ದಾರೆ. ಕೋಟೆಯ ಇತಿಹಾಸ ವಿವರಿಸುವ ಗೈಡ್‌ಗಳೂ ಇಲ್ಲಿಲ್ಲ. ಕೋಟೆಯ ಗೋಡೆಗಳ ಮೇಲೆ ಪ್ರೇಮದ ಕುರುಹುಗಳನ್ನು ಕೆತ್ತಿ ಹಾಳು ಮಾಡಿದ್ದಾರೆ. ಕಾವಲು ಸಿಬ್ಬಂದಿ ಇಲ್ಲದಿರುವುದರಿಂದ ಇದು ಪುಂಡರ ಅಡ್ಡೆಯಾಗುತ್ತಿದೆ’ ಎಂದು ದೇವನಹಳ್ಳಿ ನಿವಾಸಿ ದಿವಾಕರ್ ದೂರಿದರು.

ಕೋಟೆಯ ಇತಿಹಾಸ ಹೇಳುವುದೇನು?

‘ದೇವನಹಳ್ಳಿಯ ಹಳೆಯ ಹೆಸರುದೇವನದೊಡ್ಡಿ. ಇದು ಮೊದಲು ಗಂಗ ರಾಜಮನೆತನದ ‘ಗಂಗವಾಡಿ’ ಎಂಬ ಪ್ರಾಂತ್ಯದ ಭಾಗವಾಗಿತ್ತು.ನಂತರ ರಾಷ್ಟ್ರಕೂಟರು, ನೊಳಂಬ, ಪಲ್ಲವರು, ಚೋಳರು, ಹೊಯ್ಸಳರು ಮತ್ತು ವಿಜಯನಗರದ ಅರಸರ ಆಳ್ವಿಕೆಗೂ ಈ ಪ್ರಾಂತ್ಯ ಒಳಪಟ್ಟಿತ್ತು. ಕಂಚಿಯಿಂದ ವಲಸೆ ಬಂದ ಆವತಿ ರಾಜವಂಶದ ಮಲ್ಲಭೈರೇಗೌಡ ಕ್ರಿ.ಶ.1501ರಲ್ಲಿ ಈ ಕೋಟೆಯನ್ನು ಮೊದಲು ಮಣ್ಣಿನಿಂದ ಕಟ್ಟಿದ್ದ.

ಕ್ರಿ.ಶ.1747ರಲ್ಲಿನಂಜರಾಜನ ನೇತೃತ್ವದಲ್ಲಿ ನಡೆದ ಯುದ್ಧದಲ್ಲಿ ಕೋಟೆ ಮೈಸೂರು ಅರಸರ ಕೈಸೇರಿತು. ಕೆಲಕಾಲ ಮರಾಠರ ಅಳ್ವಿಕೆಗೂ ಒಳಪಟ್ಟಿತ್ತು. ಬಳಿಕ ಹೈದರಾಲಿ ಮತ್ತು ಮಗ ಟಿಪ್ಪುವಿನ ನಿಯಂತ್ರಣದಲ್ಲಿತ್ತು. ಆಗ ಕೋಟೆಯ ದುರಸ್ತಿ ನಡೆದು, ಕಲ್ಲಿನ ಕೋಟೆ ನಿರ್ಮಿಸಲಾಯಿತು.

‘ಟಿಪ್ಪು ಸುಲ್ತಾನ್ ಈ ಕೋಟೆಗೆ ‘ಯುಸಫಾಬಾದ್’ ಎಂದೂ ನಾಮಕರಣ ಮಾಡಿದ್ದ. ಆದರೆ, 1791ರಲ್ಲಿ ನಡೆದ ಮೈಸೂರು ಯುದ್ಧದ ಬಳಿಕ ಬ್ರಿಟಿಷ್ ದಂಡನಾಯಕ ಲಾರ್ಡ್ ಕಾರ್ನ್ ವಾಲೀಸ್ ಈ ಕೋಟೆಯನ್ನು ಬ್ರಿಟಿಷ್ ಸರ್ಕಾರದ ಸ್ವಾಧೀನಕ್ಕೆ ಪಡೆದಿದ್ದ’ ಎನ್ನುವುದು ಕೋಟೆ ಇತಿಹಾಸ ಕೆದಕಿದಾಗ ಸಿಕ್ಕ ಮಾಹಿತಿ.

‘ಬುರುಜು ಕುಸಿದರೂ ದುರಸ್ತಿಪಡಿಸಿಲ್ಲ’

‘ನವೆಂಬರ್‌ನಲ್ಲಿ ಸುರಿದ ಭಾರಿ ಮಳೆಗೆ ಕೋಟೆಯಲ್ಲಿರುವ ಒಂದು ಬುರುಜು ದಿಢೀರ್ ಕುಸಿಯಿತು. ಅದನ್ನು ದುರಸ್ತಿ ಮಾಡಿಲ್ಲ. ಸಂರಕ್ಷಣೆಗೆ ಕ್ರಮ ಕೈಗೊಳ್ಳದಿರುವುದರಿಂದ ಕೋಟೆ ಶಿಥಿಲಾವಸ್ಥೆ ತಲುಪಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಪುರಾತತ್ವ ಇಲಾಖೆಗಳು ಈ ಬಗ್ಗೆ ಗಮನಹರಿಸಿ, ಕೋಟೆ ಉಳಿಸಲು ಕ್ರಮ ಕೈಗೊಳ್ಳಬೇಕು.

-ಚಿರಾಗ್, ದೇವನಹಳ್ಳಿ ನಿವಾಸಿ

***

‘ಟಿಪ್ಪು ಹೆಸರು ಬೆಸೆದಿರುವುದರಿಂದ ಕಡೆಗಣನೆ’

ರಾಜಕೀಯ ಪಕ್ಷಗಳ ನಡುವೆ ಟಿಪ್ಪು ವಿಚಾರದಲ್ಲಿರುವ ಪರ–ವಿರೋಧದ ನಿಲುವುಗಳೇ ಕೋಟೆಯ ಇಂದಿನ ಸ್ಥಿತಿಗೆ ಕಾರಣ. ಟಿಪ್ಪು ಹುಟ್ಟಿದ ಸ್ಥಳ ಹಾಗೂ ಟಿಪ್ಪು ಕಾಲದ ಕೋಟೆ ಎಂಬ ಕಾರಣದಿಂದ ಸಂರಕ್ಷಣೆ ನಡೆಯುತ್ತಿಲ್ಲ. ಕೋಟೆಯನ್ನು ಟಿಪ್ಪುವಿನ ದೃಷ್ಟಿಯಲ್ಲಿ ನೋಡದೆ, ಐತಿಹಾಸಿಕ ದೃಷ್ಟಿಯಲ್ಲಿ ನೋಡಿ ಉಳಿಸುವ ಕೆಲಸ ಮಾಡಬೇಕು. ಈ ವಿಚಾರದಲ್ಲೂ ಸರ್ಕಾರಗಳು ರಾಜಕೀಯ ಮಾಡಬಾರದು. ಸ್ಥಳೀಯ ಜನಪ್ರತಿನಿಧಿಗಳೂ ಈ ವಿಚಾರದಲ್ಲಿ ನಿರ್ಲಕ್ಷ್ಯ ಹೊಂದಿದ್ದಾರೆ.

–ಎಸ್‌.ಗಗನ್, ದೇವನಹಳ್ಳಿ ನಿವಾಸಿ

***

ಅಂಕಿಅಂಶ

20 ಎಕರೆ

ಕೋಟೆಯ ವಿಸ್ತೀರ್ಣ

35 ಕಿ.ಮೀ

ಬೆಂಗಳೂರಿನಿಂದ ಕೋಟೆ ಇರುವ ದೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT