ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಎದುರು ನಡುಗುವ ಬಿಜೆಪಿ ಸಂಸದರು: ಸಿದ್ದರಾಮಯ್ಯ ವ್ಯಂಗ್ಯ

Published 22 ಏಪ್ರಿಲ್ 2024, 16:28 IST
Last Updated 22 ಏಪ್ರಿಲ್ 2024, 16:28 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ನಗರ: ‘ರಾಜ್ಯಕ್ಕೆ ಸಿಗಬೇಕಾದ ಅನುದಾನ, ಯೋಜನೆಗಳನ್ನು ಕೇಳಿ ಪಡೆಯದ, ನರೇಂದ್ರ ಮೋದಿ ಎದುರು ನಡುಗುತ್ತ ಮಂಡಿಯೂರಿ ಕುಳಿತುಕೊಳ್ಳುವ ಬಿಜೆಪಿ ಸಂಸದರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದು ಮತದಾರರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಇಲ್ಲಿ ಮತ‌ಯಾಚನೆ ಮಾಡಿ ಮಾತನಾಡಿದ ಅವರು,‌ ‘ಭ್ರಷ್ಟ, ಜನ ವಿರೋಧಿ, ರೈತರ ವಿರೋಧಿ ಬಿಜೆಪಿಗೆ ತಕ್ಕ ಪಾಠ ಕಲಿಸಿ’ ಎಂದರು.

‘ಬೆಂಗಳೂರು ನಗರದ ನೀರಿನ ಹಾಹಾಕಾರಕ್ಕೆ, ಟ್ಯಾಂಕರ್ ನೀರಿನ ಸೃಷ್ಟಿಗೆ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡದ ನರೇಂದ್ರ ಮೋದಿಯವರೇ ನೇರ ಕಾರಣ. ಮತಕೋಸ್ಕರ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿ ಹಿಂದೆಂದೂ ಇರಲಿಲ್ಲ. ಮುಂದೆಯೂ ಬರುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ಕೆಪಿಸಿಸಿ ವಕ್ತಾರೆ ಎಚ್. ಕುಸುಮಾ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಬಡವರು, ಶ್ರಮಿಕರು, ಮಧ್ಯಮ ವರ್ಗದವರು, ರೈತರಿಗೆ ಗ್ಯಾರಂಟಿ ಯೋಜನೆಯನ್ನು ನೀಡಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ದೊಡ್ಡ ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಅಭಿವೃದ್ಧಿಗೆ ಕೈಜೋಡಿಸಿ’ ಎಂದರು.

ಡಿ.ಕೆ. ಸುರೇಶ್ ಮಾತನಾಡಿ, ‘ನನಗೆ ಕೂಲಿ ಕೊಡಿ. ನನ್ನ ಪ್ರಾಣ ಒತ್ತೆ ಇಟ್ಟು ಮೇಕೆದಾಟು, ಮಹದಾಯಿ ಯೋಜನೆ, ರಾಜ್ಯಕ್ಕೆ ಸಿಗಬೇಕಾಗಿರುವ ಹಲವು ಯೋಜನೆಗಳು ಮತ್ತು ನಮ್ಮ ಪಾಲಿನ ಅನುದಾನವನ್ನು ತರುತ್ತೇನೆ’ ಎಂದು ಭರವಸೆ ನೀಡಿದರು.

ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಮಾಜಿ ಉಪಮೇಯರ್ ಬಿ.ಎಸ್. ಪುಟ್ಟರಾಜು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಮುಖಂಡ ರಾಜೇಶ್ ಗೂಳಿಗೌಡ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಸಲೀಂ ಅಹಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಜ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಪಾಲಿಕೆ ಮಾಜಿ ಸದಸ್ಯರಾದ ವೇಲು ನಾಯಕ್, ಜಿ. ಮೋಹನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT