ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತದಾರ ಪ್ರಭುಗಳು’ ಸಿನಿಮಾ ಪ್ರಸಾರಕ್ಕೆ ಅವಕಾಶ ನಿರಾಕರಣೆ

Published 3 ಮೇ 2024, 16:27 IST
Last Updated 3 ಮೇ 2024, 16:27 IST
ಅಕ್ಷರ ಗಾತ್ರ

ಬೆಂಗಳೂರು: ‘ಮತ ಚಲಾವಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಿದ ‘ಮತದಾರರ ಪ್ರಭುಗಳು’ ಸಿನಿಮಾದ ಪ್ರಾಯೋಜಿತ ಪ್ರಸಾರಕ್ಕೆ ಅವಕಾಶ ನೀಡಬೇಕು. ಅಲ್ಲದೆ, ಕ್ಷುಲ್ಲಕ ಕಾರಣಕ್ಕೆ ತಡೆಹಿಡಿದಿರುವ ಬೆಂಗಳೂರು ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥರು, ಉಪ ಮಹಾನಿರ್ದೇಶಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರದರ್ಶನದ ಮಹಾನಿರ್ದೇಶಕರಿಗೆ ಸಿನಿಮಾದ ನಿರ್ದೇಶಕರೂ, ನಿರ್ಮಾಪಕರೂ ಆಗಿರುವ ಅನಂತರಾಯಪ್ಪ ದೂರು ನೀಡಿದ್ದಾರೆ.

‘₹85 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರಮಂದಿರಗಳು ಸಿಗದ ಕಾರಣ ಚಂದನ ವಾಹಿನಿ ಮೂಲಕ ಪ್ರಾಯೋಜಿತ ಪ್ರಸಾರಕ್ಕೆ ನಿರ್ಧರಿಸಿದ್ದೆವು. ಚುನಾವಣಾ ನೀತಿ ಸಂಹಿತೆಗೆ ಸಂಪೂರ್ಣ ವಿರುದ್ಧವಾಗಿದ್ದರೂ ಕೋಮುದ್ವೇಷ ಕೆರಳಿಸುವ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಕೇರಳ ದೂರದರ್ಶನ ಏಪ್ರಿಲ್‌ 5ರಂದು ಪ್ರಸಾರ ಮಾಡಿದೆ. ಆದರೆ, ನಮ್ಮ ಸಿನಿಮಾದ ಯಾವ ಭಾಗದಲ್ಲಿಯೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ. ಆದರೂ ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಬೆಂಗಳೂರು ದೂರದರ್ಶನದ ಅಧಿಕಾರಿಗಳು ತಡೆಹಿಡಿದಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಿನಿಮಾದ ಕಥೆ ಕೇವಲ ಕಾಲ್ಪನಿಕ. ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣಿಯ ಹೆಸರನ್ನು ಸಿನಿಮಾದಲ್ಲಿ ಸೇರಿಸಿಲ್ಲ. ಈ ಬಗ್ಗೆ ಸಿನಿಮಾದ ಆರಂಭದಲ್ಲಿಯೇ ತಿಳಿಸಲಾಗಿದೆ. ಈ ಸಿನಿಮಾವನ್ನು ಪ್ರಸಾರ ಮಾಡುವುದರಿಂದ ಆಗುವ ಪ್ರಯೋಜನವನ್ನು ಪೂರ್ವ ವೀಕ್ಷಣೆ ಸಮಿತಿಯ ಸದಸ್ಯರು ಗುರುತಿಸುವ ಬದಲು, ರಾಜಕೀಯ ಪಕ್ಷಗಳ ಬಗ್ಗೆ ‌ವಿಶೇಷ ಕಾಳಜಿ ತೋರಿಸಿ, ರಾಜಕೀಯ ಪ್ರೇರಿತ ವರದಿ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಸಂವಿಧಾನವೇ ಅವಕಾಶ ಕಲ್ಪಿಸಿದ್ದರೂ ಪಕ್ಷೇತರರಿಗೆ ಮತ ಹಾಕುವಂತೆ ಹೇಳುವುದು ಒಕ್ಕೂಟ ವ್ಯವಸ್ಥೆಗೆ ಸರಿಯಲ್ಲ ಎಂದು ನೀಡಿರುವ ಶಿಫಾರಸು ಸಂವಿಧಾನ ವಿರೋಧಿಯಾಗಿದೆ. ನಮ್ಮ ಆಕ್ಷೇಪಣೆಗಳನ್ನೂ ಪರಿಗಣಿಸದೆ, ಸಮಿತಿ ನೀಡಿದ ದೋಷಪೂರಿತ ವರದಿಯನ್ನು ಒಪ್ಪಿಕೊಂಡು ಸಿನಿಮಾ ಪ್ರಸಾರವನ್ನು ತಡೆಹಿಡಿಯಲಾಗಿದೆ’ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಈ ಸಿನಿಮಾ ಯೂ ಟ್ಯೂಬ್‌ನಲ್ಲಿ ಲಭ್ಯವಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಈಗಾಗಲೇ ವೀಕ್ಷಿಸಿದ್ದಾರೆ. ಪೂರ್ವವೀಕ್ಷಣೆ ಸಮಿತಿಯ ಸದಸ್ಯರು ಸಿನಿಮಾ ಬಗ್ಗೆ ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದು’ ಎಂದೂ ಅನಂತರಾಯಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT