ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಎಫ್‌ಎಕ್ಸ್‌ ಸಮ್ಮೇಳನ | ಬೋಧಕರ ಕೊರತೆ ನೀಗಿಸುವಂತೆ ವಿದ್ಯಾರ್ಥಿಗಳು ಅಳಲು

Published 31 ಜನವರಿ 2024, 15:34 IST
Last Updated 31 ಜನವರಿ 2024, 15:34 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ 27 ಲಲಿತಕಲಾ ಕಾಲೇಜುಗಳಲ್ಲಿ ಸರ್ಕಾರ ಡಿಜಿಟಲ್ ಆರ್ಟ್‌ ಲ್ಯಾಬ್‌ ತೆರೆದಿದೆ. ಆದರೆ, ಡಿಜಿಟಲ್‌ ಕಲೆಯ ಕಲಿಕೆಗೆ ಸಂಬಂಧಿಸಿದಂತೆ ಅಗತ್ಯ ಪರಿಕರಗಳಿಲ್ಲ. ವಿದ್ಯಾರ್ಥಿಗಳಿಗೆ ಕಲಿಸಲು ಕಾಯಂ ಬೋಧಕರಿಲ್ಲ’

ನಗರದಲ್ಲಿ ಬುಧವಾರ ನಡೆದ ಜಿಎಎಫ್‌ಎಕ್ಸ್‌ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಐಟಿ–ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಮುಂದೆ ಕಾಲೇಜಿನ ಬೋಧಕರು ಮತ್ತು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದು ಹೀಗೆ.

ಅನಿಮೇಷನ್‌, ವಿಷುಯಲ್‌ ಎಫೆಕ್ಟ್ಸ್‌, ಗೇಮ್ಸ್‌ ಮತ್ತು ಕಾಮಿಕ್ಸ್‌ (ಎವಿಜಿಸಿ) ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಖಾಸಗಿ ಸಂಸ್ಥೆಯಾದ ಎಬಿಎಐ ಜೊತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಯು ಕಾಲೇಜಿನಲ್ಲಿರುವ ಬೋಧಕರಿಗೆ ತರಬೇತಿ ನೀಡುತ್ತದೆ. ತರಬೇತಿ ಪಡೆದವರೇ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಕಲೆ ಬಗ್ಗೆ ಕಲಿಸಬೇಕಿದೆ ಎಂದರು.

ಡಿಜಿಟಲ್‌ ಲ್ಯಾಬ್‌ಗೆ ಕಂಪ್ಯೂಟರ್‌, ಡಿಜಿಟಲ್‌ ಕಲೆಗೆ ಸಂಬಂಧಿಸಿದ ಹೊಸ ಸಾಫ್ಟ್‌ವೇರ್‌ಗಳನ್ನು ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ಟ್ಯಾಬ್‌, ಲ್ಯಾಪ್‌ಟಾಪ್‌ ನೀಡಬೇಕು ಎಂದು ಕೋರಿದರು.

ಎರಡು ದಶಕದಿಂದಲೂ ಲಲಿತಕಲಾ ಕಾಲೇಜುಗಳಿಗೆ ಬೋಧಕ ಸಿಬ್ಬಂದಿ ನೇಮಿಸಿಲ್ಲ. ಈ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು. ಆಗಷ್ಟೇ ವಿಷಯವಾರು ಬೋಧಕರ ನೇಮಕಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ನೇಮಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ‘ಡಿಜಿಟಲ್‌ ಕಲೆ ಕಲಿತ ಸಾಕಷ್ಟು ವಿದ್ಯಾರ್ಥಿಗಳು ಕಾರ್ಪೊರೇಟ್‌ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ. ಡಿಜಿಟಲ್ ಲ್ಯಾಬ್‌ಗಳಿಗೆ ಹಂತ ಹಂತವಾಗಿ ಅಗತ್ಯ ಪರಿಕರಗಳ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಹೊಸ ಬೋಧಕರ ನೇಮಕಾತಿ ಸಂಬಂಧ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು. ಮಂಜೂರಾಗಿರುವ ಹುದ್ದೆಗಳಿಗೆ ಅನುಗುಣವಾಗಿ ನೇಮಕಾತಿಗೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.

ಗೇಮಿಂಗ್‌ ವಲಯದ ಅಭಿವೃದ್ಧಿಗೆ ಒತ್ತು ‘

ರಾಜ್ಯದಲ್ಲಿ ಗೇಮಿಂಗ್‌ ವಲಯದ ಅಭಿವೃದ್ಧಿಗಾಗಿ ಶ್ರೇಷ್ಠತಾ ಕೇಂದ್ರ (ಸಿಒಇ) ಸ್ಥಾಪನೆಗೆ ಸರ್ಕಾರ ಉದ್ದೇಶಿಸಿದೆ. ಹಾರ್ಡ್‌ವೇರ್‌ ಸಾಫ್ಟ್‌ವೇರ್‌ ನವೋದ್ಯಮಿಗಳು ಮತ್ತು ಸರ್ಕಾರವು ಒಂದೇ ಸೂರಿನಡಿ ಕಾರ್ಯ ನಿರ್ವಹಿಸಲು ಇದರಿಂದ ಸಹಕಾರಿಯಾಗಲಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು ಕರ್ನಾಟಕವು ಎವಿಜಿಸಿ ವಲಯದ ಮುಖ್ಯ ನೆಲೆಯಾಗಬೇಕು ಎಂಬುದು ಸರ್ಕಾರದ ಆಶಯ. ಇದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗುವುದು ಎಂದರು. ‘ಗೇಮ್ಸ್‌ ವಿನ್ಯಾಸಕರ ಸಮ್ಮೇಳನ ಮತ್ತು ಇ-ಗೇಮಿಂಗ್ ಶೃಂಗಸಭೆಯನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ನಟ ಉಪೇಂದ್ರ ಕಿಯೋನಿಕ್ಸ್‌ ಅಧ್ಯಕ್ಷ ಶರತ್ ಬಚ್ಚೇಗೌಡ ಎಬಿಎಐ ಅಧ್ಯಕ್ಷ ಬಿರೇನ್ ಘೋಷ್‌ ಹಾಜರಿದ್ದರು.

ಡಿಜಿಟಲ್‌ ಕಲೆ ಕಲಿತ ವಿದ್ಯಾರ್ಥಿಗಳು ಬೋಧನಾ ವೃತ್ತಿಗೆ ಮರಳುವುದಿಲ್ಲ. ಹಾಗಾಗಿ ಕಾಲೇಜುಗಳಲ್ಲಿ ಈ ವಿಷಯದ ಬೋಧಕರ ಕೊರತೆ ಹೆಚ್ಚಿದೆ.
- ಬಿ.ಎಲ್‌. ಚೌಹಾಣ್‌ ಅಧ್ಯಕ್ಷ ಕರ್ನಾಟಕ ರಾಜ್ಯ ಚಿತ್ರಕಲಾ ಮಹಾವಿದ್ಯಾಲಯಗಳ ಸಿಬ್ಬಂದಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT