ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುದದ್ವಾರಕ್ಕೆ ಏರ್ ಪ್ರೆಷರ್ ಗಾಳಿ: ಯುವಕ ಸಾವು

ಕರುಳು ತುಂಡರಿಸಿ ರಕ್ತಸ್ರಾವ – ‘ಸಿಎನ್‌ಎಸ್ ಕಾರ್ ಸ್ಪಾ’ ಮಳಿಗೆ ಕೆಲಸಗಾರ ಬಂಧನ
Published 28 ಮಾರ್ಚ್ 2024, 15:22 IST
Last Updated 28 ಮಾರ್ಚ್ 2024, 15:22 IST
ಅಕ್ಷರ ಗಾತ್ರ

ಬೆಂಗಳೂರು: ಏರ್‌ ಪ್ರೆಷರ್ ಪೈಪ್‌ನಿಂದ ಗುದದ್ವಾರದೊಳಗೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯಲ್ಲಿಯ ಕರುಳು ತುಂಡರಿಸಿ ಆರ್. ಯೋಗೇಶ್ (24) ಎಂಬುವವರು ಮೃತಪಟ್ಟಿದ್ದು, ಪ್ರಕರಣ ಸಂಬಂಧ ‘ಸಿಎನ್‌ಎಸ್ ಕಾರ್ ಸ್ಪಾ’ ಸರ್ವೀಸ್ ಮಳಿಗೆ ಕೆಲಸಗಾರ ಮುರುಳಿ ಅವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ದೇವನಹಳ್ಳಿ ತಾಲ್ಲೂಕಿನ ಯೋಗೇಶ್, ಬೆಂಗಳೂರಿನ ಥಣಿಸಂದ್ರದಲ್ಲಿ ತಂದೆ–ಅಕ್ಕನ ಜೊತೆ ವಾಸವಿದ್ದರು. ಕಾರ್ಯಕ್ರಮ ನಿರ್ವಹಣೆ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸಾವಿನ ಬಗ್ಗೆ ಐಪಿಸಿ 304 (ಕೊಲೆ ಉದ್ದೇಶವಿಲ್ಲದೆ ನಡೆದ ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಮುರುಳಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಯೋಗೇಶ್ ಹಾಗೂ ಮುರುಳಿ ಹಲವು ವರ್ಷಗಳ ಸ್ನೇಹಿತರೆಂಬುದು ತನಿಖೆಯಿಂದ ಗೊತ್ತಾಗಿದೆ. ತಮಾಷೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿರುವುದಾಗಿ ಆರೋಪಿ ಮುರುಳಿ ಹೇಳಿಕೆ ನೀಡಿದ್ದಾನೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಬೈಕ್‌ ಸರ್ವೀಸ್‌ಗೆ ಹೋಗಿದ್ದ ಯೋಗೇಶ್: ‘ಥಣಿಸಂದ್ರದಲ್ಲಿರುವ ಲೋಹಿತ್‌ ಗೌಡ ಎಂಬುವವರಿಗೆ ಸೇರಿದ್ದ ‘ಸಿಎನ್‌ಎಸ್ ಕಾರು ಸ್ಪಾ’ ಸರ್ವೀಸ್ ಮಳಿಗೆಯಲ್ಲಿ ಆರೋಪಿ ಮುರುಳಿ ಕೆಲಸ ಮಾಡುತ್ತಿದ್ದ. ಯೋಗೇಶ್, ಆಗಾಗ ಮಳಿಗೆಗೆ ಹೋಗಿ ಸ್ನೇಹಿತ ಮುರುಳಿಯನ್ನು ಮಾತನಾಡಿಸಿಕೊಂಡು ಬರುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಬೈಕ್ ಸರ್ವೀಸ್ ಮಾಡಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿದ್ದ ಯೋಗೇಶ್, ಮಾರ್ಚ್ 25ರಂದು ಸಂಜೆ 7 ಗಂಟೆ ಸುಮಾರಿಗೆ ಮಳಿಗೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಯೋಗೇಶ್, ಚಡ್ಡಿ ಧರಿಸಿದ್ದರು’ ಎಂದು ತಿಳಿಸಿದರು.

ಬಿಗಿದಪ್ಪಿ ಗುದದ್ದಾರಕ್ಕೆ ಪೈಪ್ ಹಿಡಿದಿದ್ದ: ‘ಯೋಗೇಶ್‌ ಮಳಿಗೆಗೆ ಹೋದಾಗ, ಮುರುಳಿ ಕಾರೊಂದನ್ನು ಏರ್ ಪ್ರೆಷರ್ ಪೈಪ್ ಮೂಲಕ ಸ್ವಚ್ಛಗೊಳಿಸುತ್ತಿದ್ದರು. ಯೋಗೇಶ್‌ ಅವರನ್ನು ನೋಡಿದ್ದ ಆತ, ಪೈಪ್‌ ಹಿಡಿದುಕೊಂಡೇ ಮಾತನಾಡಿಸಲು ಬಂದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ನೇಹಿತನೆಂಬ ಕಾರಣಕ್ಕೆ ಆತ್ಮೀಯತೆಯಿಂದ ಮಾತನಾಡಿಸಿದ್ದ ಮುರುಳಿ, ಯೋಗೇಶ್‌ ಅವರನ್ನು ಹಿಂದಿನಿಂದ ಬಿಗಿದಪ್ಪಿಕೊಂಡು ಗುದದ್ವಾರಕ್ಕೆ ಪೈಪ್ ಹಿಡಿದು ಒತ್ತಿದ್ದರು. ಇದೇ ಸಂದರ್ಭದಲ್ಲಿ ಏರ್‌ ಪ್ರೆಷರ್ ಪೈಪ್‌ನಿಂದ ಗುದದ್ವಾರದೊಳಗೆ ಅತೀ ವೇಗದಲ್ಲಿ ಗಾಳಿ ನುಗ್ಗಿತ್ತು.’

‘ಗಾಳಿಯ ಒತ್ತಡ ಹೆಚ್ಚಿದ್ದರಿಂದ ಕರುಳು ತುಂಡರಿಸಿ, ಹೊಟ್ಟೆಯೊಳಗೆ ರಕ್ತಸ್ರಾವವಾಗಿತ್ತು. ಯೋಗೇಶ್‌ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮಾರ್ಚ್ 27ರಂದು ಬೆಳಿಗ್ಗೆ ಅವರು ಅಸುನೀಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗುದದ್ವಾರದೊಳಗೆ ಏರ್‌ ಪ್ರೆಷರ್‌ ಗಾಳಿ ಬಿಟ್ಟರೆ ಸಾವು ಸಂಭವಿಸುತ್ತದೆ ಎಂಬುದು ಗೊತ್ತಿದ್ದರೂ ಮುರುಳಿ ನಿರ್ಲಕ್ಷ್ಯ ವಹಿಸಿದ್ದ. ಈತನಿಂದ ಯೋಗೇಶ್ ಮೃತಪಟ್ಟಿರುವುದಾಗಿ ಸಹೋದರಿ ದೂರು ನೀಡಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿರುವುದರಿಂದ, ಸಾವಿನ ಬಗ್ಗೆ ವೈದ್ಯರಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT