ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ ಕಪ್ಪು ಮಾಂಸದ ಖಡಕನಾತ್ ಕೋಳಿ

Last Updated 16 ನವೆಂಬರ್ 2017, 20:22 IST
ಅಕ್ಷರ ಗಾತ್ರ

ಬೆಂಗಳೂರು: ಕಪ್ಪು ರಕ್ತ, ಮಾಂಸ ಹೊಂದಿರುವ ಖಡಕನಾತ್ ಕೋಳಿಯನ್ನು ನೋಡಲು ರೈತರು ಆಸಕ್ತಿಯಿಂದ ಧಾವಿಸುತ್ತಿದ್ದರು.

ಮೂಲತಃ ಮಧ್ಯಪ್ರದೇಶದ ಈ ತಳಿ ತಮಿಳುನಾಡಿನಲ್ಲಿ ಪ್ರಚಲಿತದಲ್ಲಿದೆ. ರಾಜ್ಯದ ಪಶು ಸಂಗೋಪನಾ ಇಲಾಖೆ ಇದನ್ನು ರಾಜ್ಯದಲ್ಲೂ ಪರಿಚಯಿಸಿ ಪ್ರಚಾರ ಮಾಡುತ್ತಿದೆ.

‘ನಮ್ಮಲ್ಲಿ ನಾಟಿ ಕೋಳಿ ಬಹಳ ಜನಜನಿತವಾಗಿದ್ದು, ಇದರ ಮಾಂಸಕ್ಕೆ ಹೆಚ್ಚಿನ ಬೇಡಿಕೆಯೂ ಇದೆ. ಅದಕ್ಕಿಂತಲೂ ಖಡಕನಾತ್ ಕೋಳಿ ಮಾಂಸದಲ್ಲಿ ಹೆಚ್ಚಿನ ಪ್ರೋಟಿನ್ ಇರುತ್ತದೆ. ಅಲ್ಲದೆ, ಇದನ್ನು ಔಷಧಕ್ಕಾಗಿಯೂ ಬಳಕೆ ಮಾಡಲಾಗುತ್ತದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಹೇಳಿದರು.

ಖಡಕನಾತ್ ಕೋಳಿ 1 ಕೆ.ಜಿ.ಯಿಂದ 1.5 ಕೆ.ಜಿಯಷ್ಟು ತೂಕ ಹೊಂದಿದ್ದು, ಪ್ರತಿ ಕೆ.ಜಿ. ಮಾಂಸದ ಬೆಲೆ ₹500 ಇದೆ. ಅಲ್ಲದೆ, ವರ್ಷಕ್ಕೆ 80 ಮೊಟ್ಟೆ ಇಡಲಿದ್ದು, ಇದಕ್ಕೂ ಬೇಡಿಕೆ ಇದೆ ಎಂದರು.

‘ಸದ್ಯ ಹೊಸಕೋಟೆ ಸುತ್ತಮುತ್ತಲಿನ ಫಾರಂಗಳಲ್ಲಿ ಖಡಕನಾತ್ ಕೋಳಿಗಳು ಸಿಗುತ್ತವೆ. ಇಲಾಖೆಯಿಂದ ಪ್ರಚಾರ ಮಾಡಿ ಎಲ್ಲ ಕೋಳಿ ಸಾಕಣೆದಾರರಿಗೂ ಇದರ ಮಾಹಿತಿ ತಲುಪಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಅಪರೂಪದ ಗೋ ತಳಿಗಳು: ಕೃಷಿ ಮೇಳಕ್ಕೆ ಬಂದರೆ ಸ್ವರ್ಣಭೂಮಿ ಗೋಶಾಲಾ ಮಳಿಗೆಯಲ್ಲಿ ಹಳ್ಳಿಕಾರ್, ಅಮೃತಮಹಲ್, ಮಲೆನಾಡ ಗಿಡ್ಡ, ಮಲೆನಾಡ ಗಿಡ್ಡ ತಳಿಯ ಕಪಿಲ ಹಸುಗಳನ್ನು ನೋಡಬಹುದು.

‘ಈ ಎಲ್ಲ ತಳಿಗಳು ಕರ್ನಾಟಕದ್ದೇ ಆಗಿವೆ. ಆದರೆ, ಹೆಚ್ಚಿನ ಹಾಲು ಉತ್ಪಾದನೆಗಾಗಿ ಬೇರೆ ಬೇರೆ ರಾಜ್ಯದ ತಳಿಗಳನ್ನು ಇಲ್ಲಿಗೆ ತಂದಿರುವುದರಿಂದ ನಮ್ಮ ಮೂಲ ತಳಿಗಳು ಅಳಿವಿನ ಅಂಚಿಗೆ ತಲುಪಿವೆ. ಇವುಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಇಲ್ಲಿಗೆ ಕರೆತಂದಿದ್ದೇನೆ’ ಎಂದು ಸ್ವರ್ಣಭೂಮಿ ಗೋಶಾಲಾದ ಡಿ.ಎಸ್. ರಾಘವೇಂದ್ರ ಹೇಳಿದರು.

‘ಹಳ್ಳಿಕಾರ್ ಮತ್ತು ಅಮೃತಮಹಲ್ ಹಸುಗಳನ್ನು ಕಸಾಯಿಖಾನೆಗಳಿಂದ ಬಿಡಿಸಿಕೊಂಡು ತಂದಿದ್ದೇನೆ. ಪ್ರತಿ ಹಸು ದಿನಕ್ಕೆ ಸರಾಸರಿ 7 ಲೀಟರ್ ಹಾಲು ಕೊಡುತ್ತವೆ. ನಾಟಿ ತಳಿಯ ಹಸುವಿನ ಪ್ರತಿ ಲೀಟರ್ ಹಾಲಿಗೆ ಬೆಂಗಳೂರಿನಲ್ಲಿ ₹ 100 ಮತ್ತು ಒಂದು ಕೆ.ಜಿ. ತುಪ್ಪಕ್ಕೆ ₹ 2,000 ಇದೆ. ರೈತ ತನ್ನ ಜಮೀನಿನಲ್ಲಿ ಏನು ಬೆಳೆಯುತ್ತಾನೊ ಅದನ್ನೇ ತಿಂದು ಈ ಹಸುಗಳು ಬದುಕುತ್ತವೆ’ ಎಂದು ವಿವರಿಸಿದರು.

ಸೂರ್ಯಕಾಂತಿ ಸಿಪ್ಪೆ ಸುಲಿಯುವ ಯಂತ್ರ:

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೊಯ್ಲಿನೋತ್ತರ ತಂತ್ರಜ್ಞಾನ ವಿಭಾಗ ಈ ಬಾರಿ ಸೂರ್ಯಕಾಂತಿ ಸಿಪ್ಪೆ ಸುಲಿಯುವ ಯಂತ್ರವನ್ನು ಅಭಿವೃದ್ಧಿಪಡಿಸಿದೆ.

‘ಬೇಕರಿ ತಿನಿಸುಗಳಿಗೆ, ರೋಸ್ಟೆಡ್ ಆಹಾರ ಪದಾರ್ಥಗಳನ್ನು ತಯಾರಿಸಲು ಸಿಪ್ಪೆ ಸುಲಿದ ಸೂರ್ಯಕಾಂತಿ ಬೀಜಗಳನ್ನು ಬಳಸಲಾಗುತ್ತದೆ. ಆದರೆ, ಅದನ್ನು ಸುಲಿಯುವುದಕ್ಕೆ ಯಂತ್ರ ಇದ್ದಿಲ್ಲ. ನಮ್ಮ ವಿದ್ಯಾರ್ಥಿಗಳು ಇದನ್ನು ಅಭಿವೃದ್ಧಿಪಡಿಸಿದ್ದಾರೆ’ ಎಂದು ವಿಭಾಗದ ಮುಖ್ಯಸ್ಥ ಡಾ.ಪಳನಿಮುತ್ತು ಹೇಳಿದರು.

ಗುಬ್ಬಿ ಓಡಿಸುವ ಸಾಧನ

ಜಮೀನಿನಲ್ಲಿ ಪಕ್ಷಿಗಳು ಮತ್ತು ಹಂದಿಗಳನ್ನು ಓಡಿಸಲು ಸುಲಭ ಸಾಧನವೊಂದನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಎ.ಎಸ್. ಏಜೆನ್ಸಿಸ್ ಮಳಿಗೆ ಮುಂದೆ ಕಾಣಬಹುದು.

ಉದ್ದನೆಯ ಪೈಪ್‌ಗೆ ಫ್ಯಾನಿನ ರೆಕ್ಕೆಗಳನ್ನು ಜೋಡಿಸಲಾಗಿದೆ. ಗಾಳಿಗೆ ಈ ರೆಕ್ಕೆಗಳು ತಿರುಗಿದಂತೆಲ್ಲ ಅದರ ಹಿಂದಿನ ಕೊಂಡಿಯೊಂದು ಪ್ಲೇಟ್ ಮೇಲೆ ಸದ್ದು ಮಾಡುತ್ತದೆ. ನಿರಂತರ ಶಬ್ದ ಮಾಡುವುದರಿಂದ ಪಕ್ಷಿಗಳು ಮತ್ತು ಹಂದಿಗಳನ್ನು ನಿಯಂತ್ರಿಸಬಹುದು ಎಂಬುದು ಲೆಕ್ಕಾಚಾರ.

‘ಜಮೀನಿನಲ್ಲಿ ಪಕ್ಷಿಗಳು ಮತ್ತು ಹಂದಿಗಳ ಹಾವಳಿ ತಪ್ಪಿಸಲು ಸಾಧನವೊಂದನ್ನು ಸಿದ್ಧಪಡಿಸುವಂತೆ ರೈತರೇ ಸಲಹೆ ನೀಡಿದ್ದರು. ಅದರಂತೆ ಈ ಸಾಧನ ಸಿದ್ಧಪಡಿಸಲಾಗಿದೆ. ₹ 2,000 ದರ ನಿಗದಿ ಮಾಡಲಾಗಿದೆ’ ಎಂದು ಮಳಿಗೆಯಲ್ಲಿದ್ದ ಅಧಿಕಾರಿಗಳು ತಿಳಿಸಿದರು.

ಕರೆ ಮಾಡಿದರೆ ಹೊಲಕ್ಕೆ ನೀರು:

ನೀವೊಂದು ಕರೆ ಮಾಡಿದರೆ ಸಾಕು ನಿಮ್ಮ ಹೊಲದಲ್ಲಿನ ಪಂಪ್‌ಸೆಟ್ ಕಾರ್ಯಾರಂಭ ಮಾಡಿ ಬೆಳೆಗೆ ನೀರು ಹರಿಸುತ್ತದೆ.

ಎಲ್‌ ಅಂಡ್ ಟಿ ಸಂಸ್ಥೆ ‘ಎಂಪವರ್’ ಎಂಬ ಯಂತ್ರವನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಕೃಷಿ ಮೇಳದಲ್ಲಿ ಮಾರಾಟಕ್ಕಿಡಲಾಗಿದೆ. ಯಾವುದೇ ಸ್ಟಾರ್ಟರ್‌ಗಳಿಗೆ ಜೋಡಣೆ ಮಾಡಬಹುದು.

‘ಈ ಯಂತ್ರದಲ್ಲಿ ಮೊಬೈಲ್ ಸಿಮ್ ಅಳವಡಿಸಲಾಗಿದೆ. ರೈತ ಎಲ್ಲಿಯೇ ಇದ್ದರೂ ಈ ಸಿಮ್‌ನ ನಂಬರ್‌ಗೆ ಕರೆ ಮಾಡಿದರೆ ನಾಲ್ಕೈದು ರಿಂಗ್‌ಗೆ ಪಂಪ್‌ಸೆಟ್ ಪ್ರಾರಂಭವಾಗಿ ನೀರು ಹರಿಸುತ್ತದೆ. ಕೆಲ ಸಮಯದ ಬಳಿಕ ಮತ್ತೆ ಕರೆ ಮಾಡಿದರೆ ಪಂಪ್‌ಸೆಟ್ ಬಂದ್ ಆಗುತ್ತದೆ. ಒಂದು ವೇಳೆ ಮಧ್ಯದಲ್ಲಿ ವಿದ್ಯುತ್ ಕಡಿತವಾದರೆ ರೈತನ ಮೊಬೈಲ್‌ಗೆ ಎಸ್‌ಎಂಎಸ್ ಸಂದೇಶ ಬರುತ್ತದೆ. ವಿದ್ಯುತ್ ಬಂದ ಬಳಿಕವೂ ಮತ್ತೊಂದು ಸಂದೇಶ ಬರುತ್ತದೆ’ ಎಂದು ಕಂಪೆನಿಯ ಮಾರುಕಟ್ಟೆ ಅಧಿಕಾರಿಗಳು ವಿವರಿಸಿದರು.

ಇದಲ್ಲದೆ, ಆ್ಯಪ್ ಸಹ ಅಭಿವೃದ್ಧಿಪಡಿಸಲಾಗಿದೆ. ಸ್ಮಾರ್ಟ್‌ಫೋನ್ ಹೊಂದಿರುವ ರೈತರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಎಷ್ಟು ವಿದ್ಯುತ್ ಖರ್ಚಾಯಿತು, ಎಷ್ಟು ನೀರು ಜಮೀನಿಗೆ ಹರಿಯಿತು ಎಂಬಂತಹ ಮಾಹಿತಿಗಳನ್ನೂ ಒದಗಿಸುತ್ತದೆ ಎಂದು ವಿವರಿಸಿದರು.

ಮರ ಅಪ್ಪಿಕೊಳ್ಳುವಂತಹ ಕೊನೆ ಕಟಾವು ಯಂತ್ರ

ಅಡಿಕೆ ಮರದ ಕೊನೆ ಕಟಾವು ಮಾಡುವುದಕ್ಕಾಗಿ ಅಭಿವೃದ್ಧಿಪಡಿಸಲಾದ ಯಂತ್ರ ಮೇಳದಲ್ಲಿ ಆಕರ್ಷಣೆ ಪಡೆದಿತ್ತು. ಈ ಯಂತ್ರದ ಪ್ರಾತ್ಯಕ್ಷಿಕೆ ನೋಡಲು ರೈತರು ಮುಗಿಬಿದ್ದಿದ್ದರು.

ಶಿವಮೊಗ್ಗ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಶೆರ್ವಿನ್ ಕೆ. ಮೊಬಿನ್ ಅವರು ಈ ಯಂತ್ರ ಅಭಿವೃದ್ಧಿಪಡಿಸಿದ್ದು, ವರ್ಷಾ ಅಸೋಸಿಯೇಟ್ಸ್‌ ಇದರ ಪ್ರಾತ್ಯಕ್ಷಿಕೆ ಏರ್ಪಡಿಸಿತ್ತು.

ಅಡಿಕೆ ಕೊನೆ ಕೊಯ್ಯುವುದಕ್ಕೆ ಕಾರ್ಮಿಕರ ಕೊರತೆ ಸಮಸ್ಯೆಯನ್ನು ನಿವಾರಿಸಲು ಈ ಯಂತ್ರ ಸಹಕಾರಿಯಾಗುತ್ತದೆ. ಮರವನ್ನು ಅಪ್ಪಿಕೊಳ್ಳುವ ರೀತಿಯಲ್ಲಿ ಯಂತ್ರ ಇದ್ದು, ಮರ ಹತ್ತುವುದಕ್ಕಾಗಿ ಎರಡೂ ಬದಿ ಚಕ್ರಗಳಿವೆ. ಅದರ ಮೇಲ್ಭಾಗದಲ್ಲಿ ಅಳವಡಿಸಿರುವ ಬ್ಲೇಡ್‌ಗಳು ಅಡಿಕೆ ಕೊನೆಯನ್ನು ಕಟಾವು ಮಾಡುತ್ತದೆ. ಕೊನೆ ನೆಲಕ್ಕೆ ಬೀಳದಂತೆ ಯಂತ್ರಕ್ಕೆ ಸಿಕ್ಕಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. 2 ಎಚ್‌.ಪಿ ಮೋಟಾರ್ ಇದ್ದು, ಪೆಟ್ರೋಲ್ ಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ.

‘ಕಾರ್ಮಿಕರ ಕೊರತೆಯಿಂದಾಗಿ ಅಡಿಕೆ ಕೊನೆ ಕಟಾವು ಮಾಡುವುದು ಪ್ರಮುಖ ಸಮಸ್ಯೆಯಾಗಿದೆ. ಮಲೆನಾಡು ಭಾಗದ ರೈತರಿಗೆ ನೆರವಾಗುತ್ತದೆ. ಆದರೆ, ಇದರಲ್ಲಿ ಇನ್ನೂ ಸ್ವಲ್ಪ ಸುಧಾರಣೆ ತರುವ ಅಗತ್ಯವಿದೆ. ರೈತರೂ ಸಲಹೆಗಳನ್ನು ನೀಡಿದ್ದಾರೆ. ಸದ್ಯ ಮಾರಾಟಕ್ಕೆ ಇಲ್ಲ’ ಎಂದು ವರ್ಷಾ ಅಸೋಸಿಯೇಟ್ಸ್‌ ಮಾರುಕಟ್ಟೆ ಅಧಿಕಾರಿ ಪರಮೇಶ್‌ ಹೇಳಿದರು.

ಮೇಳಕ್ಕೆ ಬಂದು ಬಿಸ್ಕತ್ ತಯಾರಿಸಿ

ಮೇಳಕ್ಕೆ ಬಂದವರು ಕೃಷಿ ಯಂತ್ರೋಪಕರಣಗಳನ್ನು ನೋಡುವುದಷ್ಟೇ ಅಲ್ಲ, ನಿಮ್ಮ ಕೈಯಿಂದ ಬೇಕರಿ ಉತ್ಪನ್ನಗಳನ್ನೂ ತಯಾರಿಸಿ, ಹೇಗೆ ಮಾಡಿದ್ದೀರಿ ಎಂದು ರುಚಿ ನೋಡಬಹುದು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೇಕರಿ ತರಬೇತಿ ಕೇಂದ್ರ, ಬೇಕರಿ ತರಬೇತಿ ಉತ್ತೇಜಿಸಲು ಇಂತಹ ಅವಕಾಶ ಒದಗಿಸಿದೆ. ಇದಕ್ಕಾಗಿ ₹ 20 ಟಿಕೆಟ್ ದರ ನಿಗದಿ ಮಾಡಲಾಗಿದೆ. ಮೈದಾ, ಸಕ್ಕರೆ ಪದಾರ್ಥ ಸೇರಿಸಿ ಕ್ಷಣದಲ್ಲಿಯೇ ಕುಕ್ಕೀಸ್ ತಯಾರಿಸಬಹುದು.

‘ಸಿರಿಧಾನ್ಯಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗುತ್ತದೆ. ಇಂತಹ ಧಾನ್ಯಗಳನ್ನು ಊಟ, ಉಪಾಹಾರಕ್ಕಾಗಿ ಬಳಸದೆ ಕುಕ್ಕೀಸ್, ಬಿಸ್ಕತ್‌, ಚಕ್ಕಲಿ, ನಿಪ್ಪಟ್ಟು, ಕೇಕ್, ಮಸಾಲಾ ಡೋನಟ್ ಸೇರಿ 150 ಬಗೆಯ ಉತ್ಪನ್ನಗಳನ್ನು ತಯಾರಿಸಬಹುದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಬೇಕರಿ ತರಬೇತಿ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಶಂಶಾದ್ ಬೇಗಂ.

ಜನರಿಂದ ಪ್ರಾತ್ಯಕ್ಷಿಕೆಯಾಗಿ ಮಾಡಿಸಿದರೆ ಈ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಬೇಕರಿ ತಿನಿಸು ತಯಾರಿಸುವ ಬಗ್ಗೆ 4 ಮತ್ತು 14 ವಾರದ ಕೋರ್ಸ್‌ಗಳಿವೆ. ಅಲ್ಲಿ ಸಿರಿ ಧಾನ್ಯಗಳನ್ನು ಬಳಸಿ ಪದಾರ್ಥ ತಯಾರಿಸುವ ಬಗ್ಗೆ ಹೇಳಿಕೊಡಲಾಗುತ್ತದೆ. ಇದರಿಂದ ಸ್ವಯಂ ಉದ್ಯೋಗವೂ ಮಾಡಬಹುದು ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT