ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ನಗರಸಭೆ ಬಜೆಟ್‌; ಮೂಲಸೌಕರ್ಯ, ಸ್ವಚ್ಛತೆಗೆ ಗಮನ

₹59.26 ಕೋಟಿ ಬಜೆಟ್‌ ಮೊತ್ತ, ₹1.15 ಕೋಟಿ ಉಳಿತಾಯ
Published 2 ಮಾರ್ಚ್ 2024, 14:26 IST
Last Updated 2 ಮಾರ್ಚ್ 2024, 14:26 IST
ಅಕ್ಷರ ಗಾತ್ರ

ಚಾಮರಾಜನಗರ: 2024–25ನೇ ಸಾಲಿನಲ್ಲಿ ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಕುಡಿಯುವ ನೀರು, ಉದ್ಯಾನ ಸೇರಿದಂತೆ ಮೂಲಸೌಕರ್ಯಗಳಿಗೆ ಆದ್ಯತೆ ಮತ್ತು ನಗರ ಸ್ವಚ್ಛತೆಗೆ ಒತ್ತು ನೀಡುವ, ₹1.15 ಕೋಟಿ ಉಳಿತಾಯದ ಬಜೆಟ್‌ ಅನ್ನು ಚಾಮರಾಜನಗರ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಶನಿವಾರ ಮಂಡಿಸಿದರು. 

ನಗರದ ನಗರಸಭೆಯ ಕೌನ್ಸಿಲ್‌ ಸಭಾಂಗಣದಲ್ಲಿ ನಡೆದ ಬಜೆಟ್‌ ಸಭೆಯಲ್ಲಿ ಆರಂಭಿಕ ಶಿಲ್ಕು ₹22.45 ಕೋಟಿ, ಆದಾಯ ಮತ್ತು ಬರಲಿರುವ ಅನುದಾನದ ಮೊತ್ತ ₹36.81 ಕೋಟಿ ಸೇರಿದಂತೆ ₹59.26 ಕೋಟಿ ಮೊತ್ತದ ಬಜೆಟ್‌ ಅನ್ನು ಜಿಲ್ಲಾಧಿಕಾರಿಯವರು ಮಂಡಿಸಿದರು. ಈ ಮೊತ್ತದಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ₹58.11 ಕೋಟಿಯನ್ನು ವೆಚ್ಚ ಮಾಡುವ ಗುರಿಯನ್ನು ನಗರಸಭೆ ಆಡಳಿತ ಹೊಂದಿದೆ. 

₹12.86 ಕೋಟಿ ಆದಾಯ: ನಗರಸಭೆಯು ಆಸ್ತಿ ತೆರಿಗೆ, ಆಸ್ತಿ ತೆರಿಗೆ ದಂಡ, ಬಾಡಿ, ವಿವಿಧ ಶುಲ್ಕಗಳಿಂದ ಒಟ್ಟು ₹12.86 ಕೋಟಿ ಹಣವನ್ನು ಸಂಗ್ರಹಮಾಡುವ ಗುರಿಯನ್ನು ಹೊಂದಿದೆ. ಈ ಪೈಕಿ ಆಸ್ತಿ ತೆರಿಗೆ, ಆಸ್ತಿ ತರಿಗೆ ದಂಡ, ಉಪಕರ ಸಂಗ್ರಹಣಾ ಶುಲ್ಕ ಮತ್ತು ಉಪಕರ ಸಂಗ್ರಹದಿಂದಲೇ ₹8.41 ಕೋಟಿ ಕ್ರೋಡೀಕರಿಸಲಿದೆ.

₹23.95 ಕೋಟಿ ಅನುದಾನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 15ನೇ ಹಣಕಾಸು ಆಯೋಗದ ಅನುದಾನ ₹4.17 ಕೋಟಿ, ಎಸ್‌ಎಫ್‌ಸಿ ವೇತನ ಅನುದಾನ ₹5.04 ಕೋಟಿ, ಎಸ್‌ಎಫ್‌ಸಿ ವಿದ್ಯುತ್‌ ಅನುದಾನ–ನೀರು ಸರಬರಾಜು ಅನುದಾನ 6.75 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ ₹1.46 ಕೋಟಿ ಸೇರಿದಂತೆ ಒಟ್ಟು ₹23.95 ಕೋಟಿಯಷ್ಟು ಅನುದಾನ ಬರುವ ನಿರೀಕ್ಷೆ ಇದೆ. 

ಯಾವುದಕ್ಕೆ ಎಷ್ಟು?: ಮುಂದಿನ ಆರ್ಥಿಕ ವರ್ಷದಲ್ಲಿ ಕೈಗೆತ್ತಿಕೊಳ್ಳಲಿರುವ ಪ್ರಮುಖ ಯೋಜನೆ, ಕಾಮಗಾರಿಗಳನ್ನು ಜಿಲ್ಲಾಧಿಕಾರಿಯವರು ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದರು.

ಖರ್ಚು ಮಾಡಲಿರುವ ಹಣದಲ್ಲಿ ಹೆಚ್ಚಿನ ಪಾಲು ವೇತನ, ಬಿಲ್‌ ಪಾವತಿ ಉದ್ದೇಶಕ್ಕೆ ಬಳಕೆಯಾಗಲಿದೆ.  

ಉಳಿದಂತೆ ಕಸಾಯಿ ಖಾನೆ ನಿರ್ಮಾಣಕ್ಕೆ ₹5 ಕೋಟಿ, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ₹3.10 ಕೋಟಿ, ರಸ್ತೆ ಬದಿ ಚರಂಡಿ, ಮಳೆನೀರು ಚರಂಡಿ ಅಭಿವೃದ್ಧಿಗೆ ₹1.31 ಕೋಟಿ, ನೀರು ಸರಬರಾಜು ಕಾಮಗಾರಿ ಮತ್ತು ವ್ಯವಸ್ಥೆಗಾಗಿ ₹2.83 ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆಯ ಯಂತ್ರೋಪಕರಣ, ವಾಹನ ಇತರೆ ವಾಹನಗಳ ಅಭಿವೃದ್ಧಿಗೆ ₹3.28 ಕೋಟಿ, ವಿದ್ಯುತ್‌ ಚಿತಾಗಾರ ನಿರ್ಮಾಣಕ್ಕೆ ₹2.50 ಕೋಟಿ ಹಂಚಿಕೆ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆ ₹86.52 ಲಕ್ಷ ಮೀಸಲಿಡಲಾಗಿದೆ. 

ವಾಣಿಜ್ಯ ಸಂಕೀರ್ಣ ನಿರ್ಮಾಣ: ಐ.ಡಿ.ಎಸ್.ಎಂ.ಟಿ. ಯೋಜನೆಯ ಮಳಿಗೆ ಬಾಡಿಗೆಯಿಂದ ಲಭ್ಯವಿರುವ ₹1.40 ಕೋಟಿ ಮತ್ತು ನಗರಸಭಾ ಮಳಿಗೆ ಬಾಡಿಗೆಯಿಂದ ಲಭ್ಯವಿರುವ ₹ 35.00 ಲಕ್ಷ ಸೇರಿದಂತೆ ₹1.75 ಕೋಟಿ ವೆಚ್ಚದಲ್ಲಿ ನಗರಸಭೆ ಕಚೇರಿ ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಮಾಡಲಾಗಿದೆ. 

ಚಾಮರಾಜನಗರ ನಗರಸಭಾ ಬಜೆಟ್‌ ಅನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಮಂಡಿಸಿದರು. ಆಯುಕ್ತ ರಾಮದಾಸ್‌ ಹಾಗೂ ಸದಸ್ಯರು ಪಾಲ್ಗೊಂಡಿದ್ದರು
ಚಾಮರಾಜನಗರ ನಗರಸಭಾ ಬಜೆಟ್‌ ಅನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಮಂಡಿಸಿದರು. ಆಯುಕ್ತ ರಾಮದಾಸ್‌ ಹಾಗೂ ಸದಸ್ಯರು ಪಾಲ್ಗೊಂಡಿದ್ದರು

ನಾಮಫಲಕ: ನಗರಸಭಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಮುಖ್ಯ ರಸ್ತೆಗಳಿಗೆ ನಾಮಫಲಕ ಅಳವಡಿಸಲು ₹40 ಲಕ್ಷ ಕಾಯ್ದಿರಿಸಲಾಗಿದೆ.

ಕುಡಿಯುವ ನೀರು: ಎಸ್.ಎಫ್.ಸಿ ಕುಡಿಯುವ ನೀರು ಯೋಜನೆಯಡಿ ನೀರಿನ ಅಭಾವ ಇರುವ ವಾರ್ಡ್‌ಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆದು ಪಂಪ್ ಅಳವಡಿಸಲು ₹ 10 ಲಕ್ಷ ತೆಗೆದಿರಿಸಲಾಗಿದೆ. 

ಬಜೆಟ್‌ ಸಭೆಯಲ್ಲಿ ನಗರಸಭಾ ಸದಸ್ಯರು ಭಾಗವಹಿಸಿದ್ದರು
ಬಜೆಟ್‌ ಸಭೆಯಲ್ಲಿ ನಗರಸಭಾ ಸದಸ್ಯರು ಭಾಗವಹಿಸಿದ್ದರು

ಈಜು ಕೊಳ, ವಿದ್ಯುತ್ ಚಿತಾಗಾರ ನಿರ್ಮಾಣ

ನಗರದ ನಾಗರಿಕರು ಮತ್ತು ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಕ್ರೀಡಾ ಇಲಾಖೆಯಿಂದ ₹ 3 ಕೋಟಿ ವಿಶೇಷ ಅನುದಾನ ಪಡೆದು ಸೂಕ್ತ ಸ್ಥಳ ಗುರುತಿಸಿ ಈಜುಕೊಳ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.  ಉತ್ತುವಳ್ಳಿಯ ಸಿಮ್ಸ್‌ ಹತ್ತಿರ ಎಸ್.ಎಫ್.ಸಿ ವಿಶೇಷ ಅನುದಾನದಿಂದ ₹2.50 ಕೋಟಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.  ಪಾರ್ಕ್‌ಗಳ ಅಭಿವೃದ್ಧಿ: ‘ಉದ್ಯಾನದ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ₹60 ಲಕ್ಷ ಮೀಡಲಿಡಲಾಗಿದ್ದು ಐದು ಪಾರ್ಕ್‌ಗಳನ್ನು ಅಭಿವೃದ್ಧಿ ಹಾಗೂ ಹಸರೀಕರಣ ಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ನಗರ ಸ್ವಚ್ಛತೆಗೆ ಆದ್ಯತೆ

ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿಯಲ್ಲಿ ಒಣತ್ಯಾಜ್ಯ ನಿರ್ವಹಣೆಗಾಗಿ ₹ 1.51 ಕೋಟಿ ವೆಚ್ಚದಲ್ಲಿ ಚಾಮರಾಜನಗರ ನಗರಸಭೆಯ ಎಂ.ಆರ್.ಎಫ್ (ಮೆಟರಿಯಲ್ ರಿಕವರಿ ಫೆಸಿಲಿಟಿ) ಸೌಲಭ್ಯವನ್ನು ಕಲ್ಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಸ್ವಚ್ಚಭಾರತ್ ಮಿಷನ್ ಯೋಜನೆಯಡಿ ₹93.50 ಲಕ್ಷ ಮತ್ತು 15ನೇ ಹಣಕಾಸು ಯೋಜನೆಯಡಿ₹ 58.52 ಲಕ್ಷ ಕಾಯ್ದಿರಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿಯಲ್ಲಿ ₹1.18 ಕೋಟಿ ವೆಚ್ಚದ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮದಡಿ ಅಂದಾಜು 22 ಸಾವಿರ ಟನ್‌ಗಳಷ್ಟು ತಾಜ್ಯ ನಿರ್ವಹಣೆ ಮಾಡುವ ಗುರಿಹೊಂದಲಾಗಿದೆ.  ಘನತ್ಯಾಜ್ಯ ನಿರ್ವಹಣೆಗಾಗಿ 15ನೇ ಹಣಕಾಸು ಯೋಜನೆಯಡಿ ₹ 22 ಲಕ್ಷಗಳ ವೆಚ್ಚದಲ್ಲಿ 2 ಟ್ರಾಕ್ಟರ್ ಮತ್ತು ಟ್ರೇಲರ್ ಹಾಗೂ ₹ 42 ಲಕ್ಷ ವೆಚ್ಚದಲ್ಲಿ ಕಾಂಪ್ಯಾಕ್ಟರ್ ಖರೀದಿಸಲು ಅನುದಾನ ಮೀಸಲಿಡಲಾಗಿದೆ.  

‘ವಾಪಸ್ಸಾದ ಅನುದಾನ ತರಲು ಕ್ರಮ’

ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಜಿ.ಚಂದ್ರಶೇಖರ್‌ ‘ಮಾರುಕಟ್ಟೆ ನಿರ್ಮಾಣಕ್ಕಾಗಿ ₹4.5 ಕೋಟಿ ಅನುದಾನ ಬಂದಿತ್ತು. ಯೋಜನೆ ಅನುಷ್ಠಾನಗೊಳಿಸದೇ ಇದ್ದುದರಿಂದ ಹಣ ವಾಪಸ್‌ ಹೋಗಿದೆ. ಹೊಸ ವಾಣಿಜ್ಯ ಕಟ್ಟಡ ನಿರ್ಮಿಸಲು ಹೊರಟಿರುವ ಅಧಿಕಾರಿಗಳಿಗೆ ಮಾರುಕಟ್ಟೆ ಬೇಡವಾಯಿತೆ’ ಎಂದು ಪ್ರಶ್ನಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಎಸ್‌.ಎ.ರಾಮದಾಸ್‌ ‘ಹೋಗಿರುವ ಹಣವನ್ನು ವಾಪಸ್‌ ತರುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಪತ್ರ ಬರೆದಿದ್ದಾರೆ. ಮಾರುಕಟ್ಟೆ ನಿರ್ಮಾಣಕ್ಕಾಗಿ ₹12.5 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿದೆ. ಅನುದಾನ ಬಂದ ನಂತರ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದರು.  ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಮಾತನಾಡಿ ‘ಯೋಜನೆಗೆ ವಿರೋಧ ವ್ಯಕ್ತವಾಗಿದೆ ಎಂದು ಕೈಬಿಡುವುದಲ್ಲ. ಕುಳಿತು ಚರ್ಚಿಸಬೇಕು. ಬಂದಿರುವ ಅನುದಾನದಲ್ಲಿ ಒಂದು ರೂಪಾಯಿಯೂ ವಾಪಸ್‌ ಹೋಗಬಾರದು. ಅಧಿಕಾರಿಗಳು ಅದಕ್ಕೆ ಅವಕಾಶ ಕೊಡಬಾರದು’ ಎಂದರು. 

‘ಉದ್ಯಾನ ಅಭಿವೃದ್ಧಿಪಡಿಸಿ’

ಸದಸ್ಯರಾದ ಆರ್‌.ಪಿ.ನಂಜುಂಡಸ್ವಾಮಿ ಗಾಯತ್ರಿ ಚಂದ್ರಶೇಖರ್‌ ಅವರು ಉದ್ಯಾನದ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದರು. ನಂಜುಂಡಸ್ವಾಮಿ ಅವರು ‘ಮೂರು ಉದ್ಯಾನಗಳಷ್ಟೇ ನಗರದಲ್ಲಿದ್ದು ನಿರ್ವಹಣೆ ಸರಿ ಇಲ್ಲ. ಜಿಲ್ಲಾಧಿಕಾರಿಯವರು ಖುದ್ದು ಭೇಟಿ ನೀಡಬೇಕು’ ಎಂದು ಮನವಿ ಮಾಡಿದರು.  ಪೌರಕಾರ್ಮಿಕರ ಪರಿಸ್ಥಿತಿಯೂ ಚೆನ್ನಾಗಿಲ್ಲ. ಅವರಿಗೆ ಸಮರ್ಪಕ ಮನೆಗಳಿಗೆ ಅವರು ಇರುವ ಪ್ರದೇಶಗಳಿಗೆ ಡಿ.ಸಿಯವರು ಭೇಟಿ ನೀಡಬೇಕು ಎಂದು ಒತ್ತಾಯಿಸಿದರು.  ಸದಸ್ಯರ ಅಧಿಕಾರವಧಿ ಮುಕ್ತಾಯಗೊಳ್ಳುವತ್ತಿರುವ ಹಂತದಲ್ಲಿ ವಾರ್ಡ್‌ಗಳ ರಸ್ತೆಗಳಿಗೆ ನಾಮಫಲಕ ಹಾಕುವ ಪ್ರಸ್ತಾವಕ್ಕೆ ಸದಸ್ಯೆ ಮಮತಾ ಅವರು ಆಕ್ಷೇಪ ವ್ಯಕ್ತಪಡಿಸಿದರು.  ಸದಸ್ಯರಾದ ಅಬ್ರಾರ್‌ ಅಹಮದ್‌ ರಾಘವೇಂದ್ರ ಸೇರಿದಂತೆ ಹಲವರು ಮಾತನಾಡಿದರು.  

ಅಂಕಿ ಅಂಶ

₹59.26 ಕೋಟಿ 2024–25ನೇ ಸಾಲಿನ ಬಜೆಟ್‌ ಮೊತ್ತ

₹58.11 ಕೋಟಿ ವರ್ಷದಲ್ಲಿ ನಗರಸಭೆ ಮಾಡಲಿರುವ ಖರ್ಚು

₹12.86 ಕೋಟಿ ಸ್ವಂತ ಮೂಲಗಳಿಂದ ಸಂಗ್ರಹವಾಗಲಿರುವ ಆದಾಯ

₹23.95 ಕೋಟಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರೀಕ್ಷಿಸಿರುವ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT