ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಕಾರ್ಯಕರ್ತರಿಗೂ ನನ್ನ ಮೇಲೆಯೇ ಪ್ರೀತಿ: ಎಸ್‌.ಬಾಲರಾಜು

ಕ್ಷೇತ್ರದ ಜನರು ನನ್ನ ಕೆಲಸ ನೋಡಿದ್ದಾರೆ, ನಾನು ಏನು ಎನ್ನುವುದು ಗೊತ್ತಿದೆ–ಬಾಲರಾಜು
Published 22 ಏಪ್ರಿಲ್ 2024, 7:48 IST
Last Updated 22 ಏಪ್ರಿಲ್ 2024, 7:48 IST
ಅಕ್ಷರ ಗಾತ್ರ

ಚಾಮರಾಜನಗರ ಮೀಸಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್‌.ಬಾಲರಾಜು ಅವರು ಕೊಳ್ಳೇಗಾಲದ ಮಾಜಿ ಶಾಸಕರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದವರು. ಕ್ಷೇತ್ರದ ರಾಜಕೀಯ ಚಿತ್ರಣ ಹಾಗೂ ಇತರ ವಿಚಾರಗಳ ಬಗ್ಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

* ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ. ಏನನ್ನಿಸುತ್ತಿದೆ?

– ಪಕ್ಷ ನನಗೆ ಕೊಟ್ಟಂತಹ ದೊಡ್ಡ ಅವಕಾಶ ಇದು. ಇದನ್ನು ನಿರೀಕ್ಷಿಸಿರಲಿಲ್ಲ. ರಾಜ್ಯ ರಾಜಕಾರಣದಲ್ಲೇ ಇರಬೇಕು ಎಂದು ಬಯಸಿದ್ದವನು ನಾನು. ರಾಷ್ಟ್ರ ರಾಜಕಾರಣಕ್ಕೆ ಹೋಗುವ ಆಲೋಚನೆಯೇ ಮಾಡಿರಲಿಲ್ಲ. ಪಕ್ಷದ ರಾಷ್ಟ್ರೀಯ, ರಾಜ್ಯ ಮುಖಂಡರಿಗೆ ಧನ್ಯವಾದ ಅರ್ಪಿಸುವೆ.

*10 ತಿಂಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದೀರಿ. ಪಕ್ಷ ನಿಮ್ಮನ್ನು ಹೇಗೆ ಸ್ವಾಗತಿಸಿದೆ? ಅದರ ಸಂಸ್ಕೃತಿಗೆ ಹೊಂದಿಕೊಂಡಿದ್ದೀರಾ?

–ಬಿಜೆಪಿಯು ನನಗೆ ಮಹತ್ವದ ಜವಾಬ್ದಾರಿ ನೀಡಿ, ದೊಡ್ಡ ಸ್ಥಾನದಲ್ಲಿ ನಿಲ್ಲಿಸಿದೆ. ಪಕ್ಷದ ಮುಖಂಡರೆಲ್ಲರೂ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ನಾನು ಬಿಜೆಪಿಗೆ ಹೊಸಬನಲ್ಲ. ಮೊದಲೇ ಸಂಘಟನೆಯಲ್ಲಿದ್ದೆ. 2000ದಿಂದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಹಾಗಾಗಿ, ಪಕ್ಷದ ಸಂಸ್ಕೃತಿ ನನಗೆ ಹೊಸದಲ್ಲ.  

* ಕ್ಷೇತ್ರದ ಚುನಾವಣಾ ಚಿತ್ರಣವನ್ನು ಹೇಗೆ ವಿಶ್ಲೇಷಿಸುತ್ತೀರಿ?

–2004ರಲ್ಲಿ ನಾನು ಕೊಳ್ಳೇಗಾಲದಲ್ಲಿ ಪಕ್ಷೇತರ ಶಾಸಕನಾಗಿ ಸ್ಪರ್ಧಿಸಿದ್ದಾಗ ಯಾವ ವಾತಾವರಣ ಇತ್ತೋ ಅದೇ ರೀತಿಯ ಚಿತ್ರಣ ಕಾಣಿಸುತ್ತಿದೆ. ಆ ಸಂದರ್ಭದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಲೆ ಇತ್ತು. ಪಕ್ಷ, ಸಂಘಟನೆಗಳು ನನ್ನನ್ನು ಬೆಂಬಲಿಸಿದ್ದವು. ಈಗಲೂ ಕ್ಷೇತ್ರದಲ್ಲಿ ನಮಗೆ ಉತ್ತಮ ವಾತಾವರಣ ಇದೆ. ನರೇಂದ್ರ ಮೋದಿ ಅವರ ಅಲೆ ಇದೆ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ, ಅವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂದು ಮತದಾರರಿಗೆ ಇದೆ. ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನಮ್ಮ ಬಲ ಹೆಚ್ಚಿಸಿದೆ. 18 ವರ್ಷಗಳಿಂದ ರಾಜಕೀಯ ಅಧಿಕಾರ ಸಿಕ್ಕಿಲ್ಲ. ಹೀಗಾಗಿ, ಜನರಿಗೆ ಅನುಕಂಪ ಇದೆ. ಕ್ಷೇತ್ರದಾದ್ಯಂತ ಜನರ ನಂಬಿಕೆ ವಿಶ್ವಾಸ ಗಳಿಸಿದ್ದೇನೆ. ಇವೆಲ್ಲವೂ ಚುನಾವಣೆಯಲ್ಲಿ ನನಗೆ ನೆರವಾಗಿ ಗೆಲುವು ತಂದುಕೊಡಲಿದೆ. 

* ಎಡಗೈ ಸಮುದಾಯದ ಕೋಟೆ ಶಿವಣ್ಣ ಹಾಗೂ ಬೆಂಬಲಿಗರು ‍ಪಕ್ಷ ತೊರೆದಿರುವ ಬಗ್ಗೆ ಏನು ಹೇಳುತ್ತೀರಿ?

–  ಎಡಗೈ ಸಮುದಾಯ ಯಾವಾಗಲೂ ಬಿಜೆಪಿಯೊಂದಿಗಿದೆ. ಬಿಜೆಪಿಯು ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಂಡಿದೆ. ಈ ಸಮುದಾಯದವರಿಗೂ ರಾಜಕೀಯ ಅಧಿಕಾರ, ಸ್ಥಾನಮಾನ ನೀಡಿದೆ. ಸಮುದಾಯದವರೊಬ್ಬರನ್ನು ಉಪಮುಖ್ಯಮಂತ್ರಿ ಮಾಡಿದೆ. ಬೇರೆ ಯಾವ ಪಕ್ಷವೂ ಇದನ್ನು ಮಾಡಿಲ್ಲ. ಈಗ ಪಕ್ಷ ತೊರೆದಿರುವ ಶಿವಣ್ಣ ಅವರನ್ನೇ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. 

ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು, ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ನೆಪ ಒಡ್ಡಿಕೊಂಡು ‍ಪಕ್ಷ ತೊರೆದಿದ್ದಾರೆ. ಇದರಿಂದ ಪಕ್ಷಕ್ಕೇನೂ ತೊಂದರೆ ಇಲ್ಲ. ಸಮುದಾಯದ ಕಾರ್ಯಕರ್ತರೆಲ್ಲ ನಮ್ಮೊಂದಿಗೆ ಇದ್ದಾರೆ.

* ಗೆದ್ದರೆ ಕ್ಷೇತ್ರಕ್ಕೆ ಏನು ಮಾಡುವಿರಿ?

– ಪ್ರಮುಖವಾಗಿ ಮೂರು ಅಂಶಗಳ ಕಾರ್ಯಕ್ರಮ ರೂಪಿಸಿದ್ದೇನೆ. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಿದ್ದೇನೆ. 

ಕೇಂದ್ರ ಸರ್ಕಾರ ಅನುದಾನದಲ್ಲಿ ವಿಶ್ವವಿದ್ಯಾಲಯವನ್ನು ಇನ್ನಷ್ಟು ಬಲಗೊಳಿಸುವೆ. ಶಾಲಾ ಕಾಲೇಜುಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ. ಕೇಂದ್ರ ಸರ್ಕಾರದಲ್ಲಿ ಯೋಜನೆಗಳಿವೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಚಿಂತನೆ ಇದೆ.  ಆರೋಗ್ಯ ಕ್ಷೇತ್ರದಲ್ಲೂ ಸುಧಾರಣೆಯಾಗಬೇಕಾಗಿದೆ. ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳು ಪ್ರಾಥಮಿಕ  ಆರೋಗ್ಯ ಕೇಂದ್ರಗಳ ಅಭಿವೃದ್ಧಿಯಾಗಬೇಕು. ಜನರಿಗೆ ಉತ್ತಮ ಚಿಕಿತ್ಸೆ ಸಿಗಬೇಕು. ಜನರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳುವೆ. 

ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಅವರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುವುದು, ಅರಿಸಿನ ಮಾರುಕಟ್ಟೆ ಸ್ಥಾಪನೆ, ತರಕಾರಿ, ಹೂವಿನ ಬೆಳೆಗಾರರಿಗೆ ಅನುಕೂಲವ ರೀತಿಯಲ್ಲಿ ಮಾರುಕಟ್ಟೆ ಕಲ್ಪಿಸುವುದು, ಶಿಥಲೀಕರಣ ಘಟಕಗಳ ಸ್ಥಾಪನೆಯಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಕೌಶಲ ಅಭಿವೃದ್ಧಿ ತರಬೇತಿ ಕೊಡಿಸುವ ಮೂಲಕ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವೆ. 

* ಈಗಿ‌ನ ಅವಧಿಯಲ್ಲಿ (2019-24) ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಬರೀ ಮೋದಿ ಅಲೆಯನ್ನು ನೆಚ್ಚಿಕೊಂಡರೆ ಗೆಲುವು ಸಾಕೇ?

–ಸಂಸದ ಶ್ರೀನಿವಾಸ ಪ್ರಸಾದ್‌ ಅವರಿಗೆ ಅನಾರೋಗ್ಯ ಇದ್ದ ಕಾರಣಕ್ಕೆ ಹೆಚ್ಚು ಓಡಾಡಲು ಸಾಧ್ಯವಾಗಿಲ್ಲ. ಹಾಗಿದ್ದರೂ, ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಸಿದ್ದಾರೆ. ಹಿಂದೆಯೂ ಕ್ಷೇತ್ರದ ಅಭಿವೃದ್ಧಿಗೆ ಅವರು ದುಡಿದಿದ್ದಾರೆ. ಈ ಬಾರಿಯೂ ಅವರೇ ಸ್ಪರ್ಧಿಸುತ್ತಿದ್ದರೆ ಈ ವಿಚಾರ ಪ್ರಸ್ತಾಪವಾಗುತ್ತಿತ್ತೇನೋ, ಆದರೆ, ನಾನು ಸ್ಪರ್ಧಿಸಿರುವುದರಿಂದ ಇದು ಹೆಚ್ಚು ಪ್ರಾಮುಖ್ಯ ಪಡೆಯುವುದಿಲ್ಲ. ನನಗೆ ವಿರೋಧಿ ಅಲೆ ಇಲ್ಲ. ನಾನು ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಅದು ಜನರಿಗೆ ಚೆನ್ನಾಗಿ ತಿಳಿದಿದೆ. 

* ಧ್ರುವನಾರಾಯಣ ಅವರೊಂದಿಗಿದ್ದ ನಂಟು ನಿಮಗೆ ಲಾಭವಾಗಲಿದೆಯೇ?

–ನಾನು 23 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದವನು. ಆ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ನಾನು ಅಲ್ಲಿದ್ದಾಗ ಏನು ಮಾಡಿದ್ದೇನೆ ಎಂಬುದು ಮುಖಂಡರು, ಕಾರ್ಯಕರ್ತರಿಗೆ ಎಲ್ಲರಿಗೂ ಗೊತ್ತು. ನನ್ನ ಬಗ್ಗೆ ಅವರಲ್ಲಿ ಪ್ರೀತಿ, ವಿಶ್ವಾಸ, ಗೌರವ ಇದೆ. ಹಾಗಾಗಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರೂ ನನ್ನನ್ನು ಬೆಂಬಲಿಸಲಿದ್ದಾರೆ. 

* ಬಿಜೆಪಿ–ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿ ನಡೆಯುತ್ತಿದೆಯಲ್ಲಾ..?

–ಕಾಂಗ್ರೆಸ್‌ನವರಿಗೆ ಸೋಲಿನ ಭಯ ಕಾಡುತ್ತಿದೆ. ಹಾಗಾಗಿ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಪತ್ರಿಕೆಯಲ್ಲಿ ಸುದ್ದಿಯೊಂದು ಬಂದಂತೆ ನಕಲಿ ಸುದ್ದಿಯನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾವು ಪೊಲೀಸರಿಗೆ ಮತ್ತು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದೇವೆ.  ನಾನು ಏನು ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದೆ. ಈ ವಿಚಾರದಲ್ಲಿ ಜನರೇ ನನ್ನ ಬೆಂಬಲಕ್ಕೆ ನಿಂತಿದ್ದಾರೆ. 

* ಬಿಜೆಪಿ ಗೆದ್ದರೆ ಸಂವಿಧಾನ ಬದಲಾಗುತ್ತದೆಯೇ?

–ಕಾಂಗ್ರೆಸ್‌ನವರು ಅಂತಹ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಸಚಿವ ಮಹದೇವಪ್ಪ ಹೋದಲ್ಲೆಲ್ಲ ಅದೇ ರೀತಿ ಹೇಳುತ್ತಿದ್ದಾರೆ. ವಾಸ್ತವವಾಗಿ ಸಂವಿಧಾನಕ್ಕೆ ಅಪಚಾರ ಮಾಡಿದವರು ಅವರು. ಎಸ್‌ಸಿಎಸ್‌ಪಿ ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿ ನಿಯಮ ಉಲ್ಲಂಘಿಸಿರುವುದು ಸಂವಿಧಾನಕ್ಕೆ ಮಾಡಿರುವ ಅಪಮಾನವಲ್ಲವೇ? ಅಂಬೇಡ್ಕರ್‌ ರೂಪಿಸಿರುವ ಸಂವಿಧಾನವನ್ನು ಯಾರು ಬಂದರೂ ಬದಲಾಯಿಸಲು ಸಾಧ್ಯವಿಲ್ಲ. 

ಎಸ್‌.ಬಾಲರಾಜು
ಎಸ್‌.ಬಾಲರಾಜು
ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ‘ಮೌನ’
ಬೆಂಬಲಿಗರು ಕಾಂಗ್ರೆಸ್‌ ಸೇರಿದ್ದು ಸಿ.ಎಂ ಅವರನ್ನು ಭೇಟಿಮಾಡಿರುವುದು ನಿಮಗೆ ದುಬಾರಿಯಾಗಲಿದೆಯೇ? – ಶ್ರೀನಿವಾಸ ಪ್ರಸಾದ್‌ ಅವರು ಎಲ್ಲಿ ಮೌನವಾಗಿದ್ದಾರೆ? ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಬಳಿಕ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಅವರು ಈ ಹಿಂದೆಯೇ ಘೋಷಿಸಿದ್ದರು. ಅವರ ಕೆಲವು ಬೆಂಬಲಿಗರು ಹೋಗಿದ್ದಾರೆ ಎಂದರೆ ಎಲ್ಲ ಕಾರ್ಯಕರ್ತರೂ ಹೋಗಿದ್ದಾರೆ ಎಂದಲ್ಲ. ಅವರ ಅಳಿಯಂದಿರು ನಮ್ಮ ಜೊತೆಯಲ್ಲೇ ಇದ್ದಾರೆ. ಅವರು ಕಾಂಗ್ರೆಸ್‌ಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶ್ರೀನಿವಾಸ ಪ್ರಸಾದ್‌ ನನಗೂ ಆಶೀರ್ವಾದ ಮಾಡಿದ್ದಾರೆ. ಇನ್ನೂ ಒಂದೂವರೆ ತಿಂಗಳು ತಾವು ಸಂಸದರಾಗಿರುವುದರಿಂದ ಬಿಜೆಪಿಯಲ್ಲೇ ಇರುವುದಾಗಿ ಅವರು ಹೇಳಿದ್ದಾರೆ. ರಾಜಕೀಯ ನಿವೃತ್ತಿಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಮಹದೇವಪ್ಪ ಹಾಗೂ ಇತರರು ಸೌಜನ್ಯಕ್ಕೆ ಭೇಟಿ ಮಾಡಿರುವುದಾಗಿ ಹೇಳಿದ್ದಾರೆ. 
ನಿಮ್ಮ ಎದುರಾಳಿ ಸುನಿಲ್‌ ಬೋಸ್‌ ಬಗ್ಗೆ ಏನು ಹೇಳುತ್ತೀರಿ?
ನಾನು ಏನು ಹೇಳಲಿ? ತಿ.ನರಸೀಪುರ ಕ್ಷೇತ್ರದ ಜನರು ಹೇಳಬೇಕು. ಸ್ಪರ್ಧೆಯಲ್ಲಿ ಎದುರಾಳಿ ಯಾರು ಎನ್ನುವುದನ್ನು ನಾನು ಚಿಂತನೆ ಮಾಡುವುದಿಲ್ಲ. ಸುನಿಲ್‌ ಬೋಸ್‌ ಬದಲು ಅವರ ತಂದೆ ಮಹದೇವಪ್ಪ ನಿಂತಿದ್ದರೂ ಯೋಚನೆ ಮಾಡುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT