ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಶುಲ್ಕ ಕಡಿತ: ನಿರ್ವಹಣೆಗೆ ಹೆಣಗಾಟ

ಎಪಿಎಂಸಿ ಶುಲ್ಕ ₹ 1 ರಿಂದ 35 ಪೈಸೆಗೆ ಇಳಿಕೆ, ಬಹುಪಾಲು ಆದಾಯ ಖೋತಾ
Last Updated 30 ನವೆಂಬರ್ 2020, 2:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಶುಲ್ಕ ಕಡಿತಗೊಳಿಸಿದ್ದೇ ಎಪಿಎಂಸಿಯ ಬಹುಪಾಲು ಆದಾಯ ಖೋತಾ ಆಗಿ, ವೆಚ್ಚ ಸರಿದೂಗಿಸಲು ಆಡಳಿತ ಮಂಡಳಿ ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ₹ 1 ಇದ್ದ ಮಾರುಕಟ್ಟೆ ಶುಲ್ಕವನ್ನು ರಾಜ್ಯ ಸರ್ಕಾರ ಕಳೆದ ಐದು ತಿಂಗಳ ಹಿಂದೆ 35 ಪೈಸೆಗೆ ಇಳಿಸಿದ್ದು, ಎಪಿಎಂಸಿ ಆಡಳಿತ ಮಂಡಳಿಗೆ ನಿರ್ವಹಣೆಯ ಚಿಂತೆ ಶುರುವಾಗಿದೆ.

ಆದಾಯ ಕಡಿಮೆ ಆಗಿದ್ದರಿಂದ ವೆಚ್ಚವನ್ನು ಕಡಿಮೆ ಮಾಡಿ, ಆದಾಯಕ್ಕೆ ಸರಿದೂಗುವಂತೆ ಮಾಡಲು ವಿವಿಧ ಕ್ರಮ ಕೈಗೊಳ್ಳಲಾಗಿದೆ. ಭದ್ರತಾ, ಸ್ವಚ್ಛತಾ ಸಿಬ್ಬಂದಿ ಕಡಿತ, ಇಂಧನ ಬಳಕೆ, ವಿದ್ಯುತ್‌ ಬಿಲ್, ಕಚೇರಿ ವ್ಯವಹಾರ ವೆಚ್ಚ ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಸಾಧ್ಯವಾದಷ್ಟು ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಆದರೆ, ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಆಧಾಯ ಇಲ್ಲವಾಗಿದೆ ಎನ್ನುತ್ತಾರೆ ಎಪಿಎಂಸಿ ಆಡಳಿತ ಮಂಡಳಿ ಪದಾಧಿಕಾರಿಗಳು.

‘ಸದ್ಯ ಆಕರಿಸುತ್ತಿರುವ 35 ಪೈಸೆ ಸೆಸ್‌ನಲ್ಲಿ 15 ಪೈಸೆ ಬೆಂಬಲ ಬೆಲೆಗೆ ಕೊಡಬೇಕು. 6 ಪೈಸೆ ಆವರ್ತ ನಿಧಿ, ಕೃಷಿ ಮಾರಾಟ ಮಂಡಳಿ ನಿಧಿಗೆ ನೀಡಬೇಕು. ಕೊನೆಗೆ ಉಳಿಯುವ 14 ಪೈಸೆಯಲ್ಲೇ ಎಪಿಎಂಸಿ ನಿರ್ವಹಿಸಬೇಕಾಗಿದೆ. ಹೀಗಾಗಿ, ಕಂಪ್ಯೂಟರ್‌ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಚಾಲಕರನ್ನು ಕೆಲಸದಿಂದ ತೆಗೆದಿದ್ದೇವೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರ ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ.

‘ನಮಗೆ 12 ಜನ ಭದ್ರತಾ ಸಿಬ್ಬಂದಿ ಅಗತ್ಯವಿದೆ. ಆದರೆ ಅಷ್ಟೊಂದು ಸಿಬ್ಬಂದಿ ಸಂಬಳ ಭರಿಸಲು ಸಾಧ್ಯವಾಗದ ಕಾರಣಕ್ಕೆ ಕೇವಲ ನಾಲ್ಕು ಜನರಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಒಂದು ತಿಂಗಳಿಗೆ ₹ 9 ಲಕ್ಷ ಆದಾಯ ಸಂಗ್ರಹಿಸಿದರೆ ಇನ್ನೂ ಮೂರು ಭದ್ರತಾ ಸಿಬ್ಬಂದಿ ನಿಯೋಜನೆಗೆ ಅವಕಾಶ ಮಾಡಿಕೊಡುವುದಾಗಿ ನಿರ್ದೇಶಕರು ಹೇಳಿದ್ದಾರೆ’ ಎಂದು ಹೇಳಿದರು.

‘ಶುಲ್ಕ ಇಳಿಕೆಗೂ ಮುನ್ನ ಒಂದು ತಿಂಗಳಿಗೆ ನಮಗೆ ₹ 18 ಲಕ್ಷ ಆದಾಯವಿತ್ತು. ₹6 ಲಕ್ಷ ನಿರ್ವಹಣೆಗೆ ಖರ್ಚಾಗಿ, ₹12 ಲಕ್ಷ ಉಳಿಕೆಯಾಗುತ್ತಿತ್ತು. ಸದ್ಯ ಆದಾಯದ ಪ್ರಮಾಣ ತಿಂಗಳಿಗೆ ₹7 ಲಕ್ಷಕ್ಕೆ ಇಳಿಕೆಯಾಗಿದೆ. ಇದರಿಂದ ಎಪಿಎಂಸಿ ಅಭಿವೃದ್ಧಿ ವಿಚಾರದಲ್ಲಿ ಹಿನ್ನೆಡೆಯಾಗಿದೆ’ ಎಂದು ತಿಳಿಸಿದರು.

‘ಸದ್ಯ ನಮಗೆ ಸಿಗುವ 35 ಪೈಸೆ ಆದಾಯದಲ್ಲಿಯೇ ಮುಂದಿನ ತಿಂಗಳಲ್ಲಿ ₹9 ಲಕ್ಷ ಆದಾಯ ಸಂಗ್ರಹಿಸಲು ಪ್ರಯತ್ನ ನಡೆಸಿದ್ದೇವೆ. ಕೇಂದ್ರ ಸ್ಥಾನದಲ್ಲಿ ಎಪಿಎಂಸಿ ಉಳಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ’ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಹೊರೆ ತಪ್ಪಿಸಲು ರಾಜ್ಯ ಸರ್ಕಾರ ಕೈಗೊಂಡ ತೆರಿಗೆ ಕಡಿತ ಕ್ರಮ ಸ್ವಾಗತಾರ್ಹವಾದುದು. ಆದರೆ, ಅವುಗಳ ನಿರ್ವಹಣೆಗೂ ಆದಾಯ ಬೇಕಾಗುತ್ತದೆ. ಆದ್ದರಿಂದ ಮಾರುಕಟ್ಟೆಗಳ ಗಾತ್ರದ ಆಧಾರದ ಮೇಲೆ ಸರ್ಕಾರ ನಿರ್ವಹಣಾ ವೆಚ್ಚ ನೀಡಬೇಕು ಎಂಬುದು ಎಪಿಎಂಸಿ ಸಿಬ್ಬಂದಿ ವರ್ಗದ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT