ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪಾಠದ ಕೊಠಡಿಯೆ ಅಡುಗೆ ಕೋಣೆ!

ನಗರದ 7ನೇ ವಾರ್ಡ್‌ ವ್ಯಾಪ್ತಿಯ ನಿಮ್ಮಾಕಲಕುಂಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ
Last Updated 1 ಆಗಸ್ಟ್ 2018, 16:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳಚಿ ಬೀಳುತ್ತಿರುವ ಚಾವಣಿಯ ಪದರ, ಮಳೆ ಸುರಿದರೆ ಕೊಠಡಿಯಲ್ಲಿ ಮಡುಗಟ್ಟುವ ನೀರು, ಕಾಂಪೌಂಡ್, ಆಟದ ಮೈದಾನ ಇಲ್ಲದ ಕೊರಗು, ಒಂದು ಕಡೆ ಮಕ್ಕಳಿಗೆ ಪಾಠ ನಡೆಯುತ್ತಿದ್ದರೆ ಆ ಕೋಣಿಯ ಮತ್ತೊಂದು ಕಡೆ ಬಿಸಿಯೂಟ ತಯಾರಿ!

ನಗರದ 7ನೇ ವಾರ್ಡ್‌ ವ್ಯಾಪ್ತಿಯ ನಿಮ್ಮಾಕಲಕುಂಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಪೋಷಕರು ಈ ಶಾಲೆಗೆ ಭಯದಿಂದಲೇ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

ಒಂದಲ್ಲ, ಎರಡಲ್ಲ ಆರೇಳು ವರ್ಷಗಳಿಂದ ಶಾಲೆಯಲ್ಲಿ ಈ ಅಧ್ವಾನದ ಸ್ಥಿತಿ ಇದೆ. 1 ರಿಂದ 5ನೇ ತರಗತಿವರೆಗೆ 20 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎರಡು ಕೊಠಡಿಗಳಿದ್ದು ಇಬ್ಬರು ಶಿಕ್ಷಕರು ಇದ್ದಾರೆ.

ಈ ಎರಡೇ ಕೊಠಡಿಯಲ್ಲಿ ಪಾಠ, ಬಿಸಯೂಟ ತಯಾರಿ ಆಗಬೇಕು. ಈ ಕೊಠಡಿಗಳು ಸಹ ಶಿಥಿಲವಾಗಿವೆ. ಮೂಲ ಸೌಕರ್ಯದ ಕೊರತೆಯ ನಡುವೆ ಹೆಚ್ಚು ಕಾಡುತ್ತಿದೆ. ಪಾಠ ಕೇಳುವ ಮಕ್ಕಳ ನಡುವೆಯೇ ಗ್ಯಾಸ್ ಸ್ಟೌ ಹಚ್ಚಿ ಊಟ ತಯಾರಿಸಬೇಕು!

ಏನಾದರೂ ಅನಾಹುತವಾದರೆ ಯಾರು ಹೊಣೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುವರು.

‘ಹೆಚ್ಚು ಶುಲ್ಕ ಕೊಟ್ಟು ಖಾಸಗಿ ಶಾಲೆಗೆ ಸೇರಿಸಲು ಶಕ್ತಿ ಇಲ್ದ ಬಡವರ ಮಕ್ಕಳೇ ಶಾಲೆಗೆ ಹೆಚ್ಚು ಬರುತ್ತಾರೆ. ಆದರೆ, ಈ ಶಾಲೆ ಮಾತ್ರ ದಿನೇ ದಿನೇ ಕೊಟ್ಟಿಗೆಯ ರೂಪ ಪಡೆಯುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೇಳಿದಾಗಲೆಲ್ಲಾ ಅಧಿಕಾರಿಗಳು ಸಲ್ಲದ ಸಬೂಬು ಹೇಳುತ್ತಾರೆ’ ಎಂದು ನಿವೃತ್ತ ಶಿಕ್ಷಕ ಎಸ್‌.ಶಿವರಾಂ ಆರೋಪಿಸಿದರು.

‘ಅಧಿಕಾರಿಗಳ ನಿರ್ಲಕ್ಷ್ಯ, ಮೂಲಸೌಲಭ್ಯಗಳ ಕೊರತೆ, ಶಿಕ್ಷಕರ ಹೊಣೆಗೇಡಿತನದಿಂದ ಸರ್ಕಾರಿ ಶಾಲೆಗಳು ದಿನೇ ದಿನೇ ಬಾಗಿಲು ಮುಚ್ಚುತ್ತಿವೆ. ಶಿಥಿಲ ಕೊಠಡಿಗಳಲ್ಲಿ ಪಾಠ ಮಾಡುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಇತ್ತಿಚಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಮಕ್ಕಳ ಪ್ರವೇಶಾತಿ ಹೆಚ್ಚಳ ಹಾಗೂ ಫಲಿತಾಂಶ ಉನ್ನತೀಕರಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ನೂರು ವರ್ಷದ ಹಳೆಯ ಶಾಲೆಗಳಿವೆ. ಇವುಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಮುತವರ್ಜಿವಹಿಸಬೇಕು’ ಎಂದು ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯ ಮುನಿಸ್ವಾಮಿ ಆಗ್ರಹಿಸಿದರು.

ದಯವಿಟ್ಟು ಬರೆಯದಿರಿ

ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಶಿಕ್ಷಕರನ್ನು ವಿಚಾರಿಸಿದರೆ, ‘ಶಾಲೆಯ ಸಮಸ್ಯೆಗಳ ಬಗ್ಗೆ ಪತ್ರಕರ್ತರಿಗೆ ಹೇಳಿಕೆ ನೀಡಿದರೆ ಅಧಿಕಾರಿಗಳು ಬಂದು ಪತ್ರಕರ್ತರನ್ನು ನೀವೇ ಕರೆಸಿದ್ದೀರಿ ಎಂದು ನಮ್ಮ ವಿರುದ್ಧ ಕ್ರಮ ಜರುಗಿಸುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಯಾವೊಂದು ಹೇಳಿಕೆ ನೀಡುವುದಿಲ್ಲ. ಸುಮ್ಮನೆ ನಿಮ್ಮಿಂದ ನಮ್ಮ ಶಾಲೆ ಪತ್ರಿಕೆಯಲ್ಲಿ ಬರುತ್ತದೆ. ದಯವಿಟ್ಟು ಈ ಬಗ್ಗೆ ಬರೆಯುವುದು ಬೇಡ’ ಎಂದು ಶಿಕ್ಷಕರೊಬ್ಬರು ಹೇಳಿದರು.

ಶಾಲೆ ಸಮಸ್ಯೆಗಳು ನನ್ನ ಗಮನಕ್ಕೆ ಇಲ್ಲಿಯವರೆಗೂ ಬಂದಿಲ್ಲ. ಅಲ್ಲಿನ ಸಮಸ್ಯೆ ಕುರಿತು ಮಾಹಿತಿ ಪಡೆದು ಕೂಡಲೇ ಕ್ರಮ ಕೈಗೊಳ್ಳಲಾಗುವುದು
ಶಿವಣ್ಣರೆಡ್ಡಿ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT