ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಯಾರಿಗೆ ಯಾರು ಹಿತವರು; ಕೈ ಕೊಟ್ಟವರಾರು

Published 2 ಮೇ 2024, 5:05 IST
Last Updated 2 ಮೇ 2024, 5:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಶೇ 77ರಷ್ಟು ಮತದಾನವಾಗಿದೆ. ಈಗ ಎಲ್ಲೆಡೆ ಯಾವ ಅಭ್ಯರ್ಥಿ ಎಲ್ಲಿ ಎಷ್ಟು ಮತಗಳನ್ನು ಪಡೆಯುವರು ಎನ್ನುವ ಚರ್ಚೆ ಜೋರಾಗಿ ನಡೆದಿದೆ. 

ಇದರ ಜೊತೆಗೆ ಒಳ ಏಟಿನ ಚರ್ಚೆಗಳು ಸಹ ಮತ್ತೆ ಗರಿಗೆದರಿವೆ. ಒಂದು ಪಕ್ಷದಲ್ಲಿ ಇದ್ದು ಆಂತರಿಕವಾಗಿ ಎದುರಾಳಿ ಪಕ್ಷ ಹಾಗೂ ಅಭ್ಯರ್ಥಿಗಳ ಜೊತೆ ಕೈ ಜೋಡಿಸಿದ್ದು, ಯಾವ ‘ಪ್ರಮುಖ’ ನಾಯಕ ತಟಸ್ಥನಾಗಿದ್ದ, ಯಾರು ಚುನಾವಣೆಯಲ್ಲಿ ಬಿರುಸಿನಿಂದ ಓಡಾಡಿ ತಮ್ಮ ಅಭ್ಯರ್ಥಿ ಗೆಲ್ಲಬೇಕು ಎಂದು ಹೋರಾಟ ನಡೆಸಿದರು–ಹೀಗೆ ನಾನಾ ವಿಚಾರಗಳು ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆ ಆಗುತ್ತಿದೆ. ಈ ಒಳ ಏಟಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರು ತಮ್ಮದೇ ಆದ ವಿಶ್ಲೇಷಣೆಗಳನ್ನು ಮುಂದಿಡುತ್ತಿದ್ದಾರೆ.

ಚುನಾವಣೆಯ ಪ್ರಚಾರದ ನಡುವೆಯೇ ಒಳ ಏಟಿನ ಮಾತುಗಳು ಜೋರಾಗಿ ಕೇಳಿ ಬರುತ್ತಿದ್ದವು. ಇಬ್ಬರೂ ಅಭ್ಯರ್ಥಿಗಳಿಗೆ ಒಳ ಏಟಿದೆ. ಅದು ಯಾವ ರೀತಿಯಲ್ಲಿ, ಯಾವ ಕ್ಷೇತ್ರದಲ್ಲಿ, ಹೇಗೆ ಎನ್ನುವ ಕ್ಷೇತ್ರದಲ್ಲಿ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದ್ದವು. 

ಮತದಾನದ ತರುವಾಯ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ನಾಯಕ ಯಾರ ಪರವಾಗಿ ಕೆಲಸ ಮಾಡಿದರು. ತಟಸ್ಥ ನಿಲುವು ಹೊಂದಿದ್ದರು ಅಥವಾ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತಗಳ ಕ್ರೋಡೀಕರಣಕ್ಕೆ ಶಕ್ತಿಯನ್ನು ಸಮರ್ಥವಾಗಿ ಬಳಸಲಿಲ್ಲ ಎನ್ನುವ ಚರ್ಚೆಗಳು ಆಯಾ ಪಕ್ಷಗಳ ಆಂತರಿಕ ವಲಯದಲ್ಲಿವೆ.   

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದವರು. ಈ ಎರಡೂ ಜಿಲ್ಲೆಗಳಲ್ಲಿ ತಮ್ಮದೇ ಆದ ಸಂಪರ್ಕ ಜಾಲ ಹೊಂದಿದ್ದಾರೆ. ಸುಧಾಕರ್ ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿದ್ದವರು. ಕಾಂಗ್ರೆಸ್‌ನ ಕೆಲವು ‘ಪ್ರಮುಖ’ ನಾಯಕರೂ ಸಹ ಸುಧಾಕರ್ ಅವರ ಆಪ್ತರು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ತಾಲ್ಲೂಕು ಮಟ್ಟದ ಮುಖಂಡರಿಂದ ಗ್ರಾಮ ಪಂಚಾಯಿತಿ ಮಟ್ಟದವರೆಗಿನ ಮುಖಂಡರೂ ಅವರಿಗೆ ಪರಿಚಿತರು. 

ತಮ್ಮ ಹಳೇ ಪಕ್ಷದ ನಾಯಕರ ಜೊತೆ ಸುಧಾಕರ್ ಅವರಿಗೆ ಆಪ್ತತೆ ಇದೆ ಎನ್ನುವುದು ಬಹಿರಂಗ ಸತ್ಯ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಳಗಿನ ಸುಧಾಕರ್ ಆಪ್ತರು ಹೇಗೆ ಕೆಲಸ ಮಾಡುವರು ಎನ್ನುವ ಕುತೂಹಲವು ಇತ್ತು. ಚುನಾವಣೆಯ ನಂತರ ಈ ವಿಚಾರ ಮತ್ತೆ ಚರ್ಚೆಗೆ ಕಾರಣವಾಗಿದೆ. 

ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ, ಪಂಚಾಯಿತಿ, ಹೋಬಳಿ ಕೇಂದ್ರಗಳಲ್ಲಿನ ಕಾಂಗ್ರೆಸ್ ನಾಯಕರು ಬಿಡು ಬೀಸಾಗಿ ಸುಧಾಕರ್ ಅವರ ವಿರುದ್ಧ ಕೆಲಸ ಮಾಡಿಲ್ಲ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಇದು ಕಾಂಗ್ರೆಸ್‌ನ ಲೀಡ್‌ಗಳ ಲೆಕ್ಕಾಚಾರದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಬಿಜೆಪಿ ಮುಖಂಡರ ವಿಶ್ಲೇಷಣೆ.

ಇದಕ್ಕೆ ಪುಷ್ಠಿ ಎನ್ನುವಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೆಲವು ನಾಯಕರು ಮಾತ್ರ ಚುನಾವಣಾ ಕಣದಲ್ಲಿ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿ ಮತ ಕೇಳಿದರೆ, ಬಹು ಮಂದಿ ನಾಯಕರು ಸುಧಾಕರ್ ಅವರ ಹೆಸರನ್ನೇ ಪ್ರಸ್ತಾಪಿಸಲಿಲ್ಲ. ಕಾಂಗ್ರೆಸ್‌ಗೆ ಮತ ನೀಡಿ ಎಂದಷ್ಟೇ ಕೋರಿದರು. 

ಬಿಜೆಪಿ ನಾಯಕರಿಂದಲೇ ಹಣ ಮಾಹಿತಿ: ಮತ್ತೊಂದು ಕಡೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರಿಗೆ ಸೇರಿದ್ದು ಎನ್ನಲಾದ ₹ 4.80 ಕೋಟಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಮಾಹಿತಿ ಸೋರಿಕೆಯು ಬಿಜೆಪಿ ನಾಯಕರಿಂದಲೇ ನಡೆದಿದೆ ಪಕ್ಷದಲ್ಲಿ ಮಾತುಗಳು ಕೇಳಿ ಬರುತ್ತಿವೆ. 

ಚಿಕ್ಕಬಳ್ಳಾಪುರ ಬಿಜೆಪಿ ನಾಯಕರು ಪಕ್ಷದ ಪ್ರಮುಖ ನಾಯಕರತ್ತ ಬೆರಳು ತೋರುತ್ತಿದ್ದಾರೆ. ಆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ನಿರೀಕ್ಷಿಸಿದಷ್ಟು ದೊಡ್ಡ ಮಟ್ಟದ ಮುನ್ನಡೆ ತಂದುಕೊಡುವುದಿಲ್ಲವೇ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ.

ಜಾತಿ, ಈ ಹಿಂದಿನ ಬಾಂಧವ್ಯ ಇತ್ಯಾದಿ ಕಾರಣಗಳು ಸಹ ಈ ಒಳ ಏಟು ಕೊಡುವುದರಲ್ಲಿ ಕಾರಣವಾದ ಅಂಶಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT