ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರ ಕೈಹಿಡಿದ ದಾಳಿಂಬೆ ಕೃಷಿ

Last Updated 8 ಮೇ 2011, 6:50 IST
ಅಕ್ಷರ ಗಾತ್ರ

ತಾಲ್ಲೂಕಿನ ವಾತಾವರಣ ಹಾಗೂ ಭೂಮಿ ದಾಳಿಂಬೆ ಕೃಷಿಗೆ ಪೂರಕವಾಗಿದೆ ಎನ್ನುವುದನ್ನು ಅರಿತ  ತಾಲ್ಲೂಕಿನ ಕೆಲವು ಮಂದಿ 5-6 ವರ್ಷಗಳ ಹಿಂದೆ ಕೃಷಿ  ಸಲಹೆಗಾರರ ಮಾರ್ಗದರ್ಶನದಲ್ಲಿ ದಾಳಿಂಬೆ ಕೃಷಿ ಪ್ರಾರಂಭಿಸಿ ಲಕ್ಷಾಂತರ ರೂ ಆದಾಯ ಪಡೆಯಲು ಆರಂಭಿಸಿದ್ದಾರೆ.

ದಾಳಿಂಬೆ ಕೃಷಿಯಲ್ಲಿ ಲಕ್ಷಾಂತರ ಆದಾಯ ಬರುತ್ತದೆ ಎಂದು ಕಂಡು ಕೊಂಡವರು ಹಾಳುಬಿಟ್ಟಿದ್ದ ಜಮೀನುಗಳನ್ನು ಒಪ್ಪಮಾಡಿ, ಸುತ್ತಲೂ ಬೇಲಿ ಹಾಕಿ 5-10 ಎಕರೆ ಪ್ರದೇಶಗಳಲ್ಲಿ ದಾಳಿಂಬೆ ಕೃಷಿ ಪ್ರಾಂಭಿಸಿ ಲಕ್ಷಗಳ ಲೆಕ್ಕದಲ್ಲಿ ಆದಾಯ ನಿರೀಕ್ಷಿಸುತ್ತಿದ್ದಾರೆ.

ಕೆಲವೇ ಕೆಲವು ದೊಡ್ಡ ರೈತರು ಆರಂಭಿಸಿದ ದಾಳಿಂಬೆ ಕೃಷಿಯತ್ತ ಮೊದಲನೆ ದರ್ಜೆ ಗುತ್ತಿಗೆದಾರ ತಂಡಗದ ಎಚ್.ಆರ್. ಕಲ್ಲೇಶ್‌ರಂತವರೂ ಆಕರ್ಷಿತರಾದರು. ಮೂಲತಃ ಕೃಷಿ ಕುಟುಂಬವರೆ ಆದ ಕಲ್ಲೇಶ್ ರಸ್ತೆ, ಕಟ್ಟಡ ಇತ್ಯಾದಿ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿದ್ದರು.

ಸರ್ಕಾರಿ ಗುತ್ತಿಗೆ ಕೆಲಸ ಮಾಡಿ ಹಾಕಿದ ಬಂಡವಾಳ ವಾಪಸ್ ಪಡೆಯುಲು ಪ್ರಯಾಸ ಪಡುತ್ತಿದ್ದ ಕಲ್ಲೇಶ್, ಸುಮಾರು 4 ವರ್ಷಗಳ ಹಿಂದೆ ದಾಳಿಂಬೆ ಕೃಷಿ ಆರಂಭಿಸಿ ಅದರಲ್ಲಿ ಯಶಸ್ಸನ್ನೂ ಕಂಡರು. ಹಲವಾರು ಸ್ನೇಹಿತರಿಗೆ ಲಾಭದಾಯಕವಾದ ಕೃಷಿ ಕೈಗೊಳ್ಳಲು ಸಲಹೆಯನ್ನೂ ನೀಡುತ್ತಾ ಬಂದರೂ. ತಮ್ಮದೇ ತೋಟದಲ್ಲಿ ದಾಳಿಂಬೆ ಕೃಷಿಕರ ಸಮಾವೇಶವನ್ನೂ ನಡೆಸಿ ಕೃಷಿ ಬಗ್ಗೆ ಮಾಹಿತಿ ವಿನಿಮಯಕ್ಕೆ ದಾರಿಮಾಡಿಕೊಟ್ಟಿದ್ದಾರೆ.

ತಾಲ್ಲೂಕಿನಲ್ಲಿ ದಾಳಿಂಬೆ ಕೃಷಿಯಲ್ಲಿ ಲಾಭದಾಯಕವಾಗಿ ನಡೆಯುತ್ತಿರುವುದಕ್ಕೆ ಪ್ರಮುಖ ಕಾರಣ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ದೇವರಹಳ್ಳಿಯ ಕೃಷಿ ತಜ್ಞ ಈಶ್ವರಪ್ಪ. ದಾಳಿಂಬೆ ಕೃಷಿಯ ಬಗ್ಗೆ ಸಾಕಷ್ಟು ಅನುಭವ ಹೊಂದಿರುವ ಈಶ್ವರಪ್ಪ ಈಗ ಕೃಷಿ ಸಲಹೆಗಾರರಾಗಿ ಕೃಷಿಯ ಬಗ್ಗೆ ಜ್ಞಾನವೇ ಇಲ್ಲದ ವ್ಯಕ್ತಿಗಳಿಂದಲೂ ದಾಳಿಂಬೆ ಕೃಷಿ ಮಾಡಿಸುತ್ತಿದ್ದಾರೆ ಎನ್ನುತ್ತಾರೆ ಗುತ್ತಿಗೆದಾರ ನಾಗರಾಜ್.

ಪ್ರಥಮದರ್ಜೆ ಗುತ್ತಿಗೆದಾರರಾಗಿ ವಿವಿಧ ನಿರ್ಮಾಣ ಕಾಮಗಾರಿ ಕೈಗೊಂಡಿದ್ದ ನಾಗರಾಜ್ ದಾಳಿಂಬೆ ಆಕರ್ಷಣೆಗೆ ಒಳಗಾದರು. ತಾಲ್ಲೂಕಿನ ಕೆಲ್ಲೋಡು ಸಮೀಪ ಖರೀದಿಸಿದ್ದ ಕರಲು ಭೂಮಿಯಲ್ಲಿ ದಾಳಿಂಬೆ ಕೃಷಿ ಕೈಗೊಳ್ಳುವ ನಿರ್ಧಾರಕ್ಕೂ ಬಂದರು. ಕೃಷಿ ತಜ್ಞ ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಸುಮಾರು ಒಂದು ವರ್ಷದ ಹಿಂದೆ ನೆಟ್ಟ ದಾಳಿಂಬೆ ಕಡ್ಡಿಗಳು ಇದೀಗ ಫಸಲಿಗೆ ಬಂದು ನಿಂತಿವೆ.

ಇನ್ನು ಮಾಜಿ ಶಾಸಕ ಇಲ್ಕಲ್‌ವಿಜಯಕುಮಾರ್ ಪುತ್ರ ಇ.ವಿ. ಅರವಿಂದ್ ಸುಮಾರು 10 ಎಕರೆ ಪ್ರದೇಶದಲ್ಲಿ ದಾಳಿಂಬೆ ಕೃಷಿ ಕೈಗೊಂಡಿದ್ದಾರೆ. ಮೂಲತಃ ಬಸ್‌ಮಾಲೀಕರಾದ ಅರವಿಂದ್  ಸ್ವಂತ ಜಮೀನಿಗೆ ಯಾವಾಗಲೋ ಒಮ್ಮೆ ಹೋಗಿ ಬರುತ್ತಿದ್ದು ಬಿಟ್ಟರೆ ಕೃಷಿಯ ಬಗ್ಗೆ ಯಾವುದೇ ಅನುಭವ ಇಲ್ಲದ ವ್ಯಕ್ತಿ. ಒಂದು ವರ್ಷದ ಹಿಂದೆ ಸ್ನೇಹಿತರೊಂದಿಗೆ ಜಮೀನಿಗೆ ಹೋಗಿದ್ದಾಗ ಖಾಲಿ ಜಮೀನು ನೋಡಿದ ಸ್ನೇಹಿತನೊಬ್ಬ ದಾಳಿಂಬೆನಾದರೂ ಬೆಳೆಯೋ..! ಎಂದಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಅರವಿಂದ್ ತಕ್ಷಣವೇ ಸಂಪರ್ಕಿಸಿದ್ದು ಕೃಷಿ ಸಲಹೆಗಾರ ಈಶ್ವರಪ್ಪನವರನ್ನು. ಸೂಕ್ತ ಸಲಹೆ ಮಾರ್ಗದರ್ಶನದೊಂದಿಗೆ ಕೃಷಿ ಪ್ರಾರಂಭಿಸಿಯೇ ಬಿಟ್ಟ ಅರವಿಂದ ಸ್ವಂತ ಬಸ್‌ಗಳನ್ನು ಮರೆತು ಅಪ್ಪಟ ದಾಳಿಂಬೆ ಕೃಷಿಕನಾಗಿದ್ದಾರೆ.

ಗುತ್ತಿಗೆದಾರರು, ವ್ಯಾಪಾರಿಗಳು, ಉದ್ಯಮಿಗಳು, ಶಿಕ್ಷಕರು, ಉಪನ್ಯಾಸಕರು ಹೀಗೆ ಕೃಷಿಯನ್ನೇ ಮರೆತ ಮಂದಿ ಹಾಳುಬಿಟ್ಟಿದ್ದ ಸ್ವಂತ ಜಮೀನುಗಳಲ್ಲಿ ದಾಳಿಂಬೆ ಕೃಷಿ ಕೈಗೊಳ್ಳುತ್ತಿದ್ದಾರೆ. ಜಮೀನು ಇಲ್ಲದವರು ಲೀಸ್ ಆಧಾರದ ಮೇಲೆ ಜಮೀನು ಪಡೆದು ದಾಳಿಂಬೆ ಬೆಳೆಯಲು ಮುಂದಾಗಿದ್ದಾರೆ. ದಾಳಿಂಬೆ ಬೆಳೆಗಾರರೊಬ್ಬರ ಪ್ರಕಾರ ಪ್ರಸ್ತುತ ತಾಲ್ಲೂಕಿನಲ್ಲಿ ಸುಮಾರು 400 ಮಂದಿ ದಾಳಿಂಬೆ ಬೆಳೆಯುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT