ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಡಯಾಲಿಸಿಸ್‌ ಚಿಕಿತ್ಸೆ: ರಾಜ್ಯಕ್ಕೆ ವೆನ್ಲಾಕ್‌ ಮೊದಲು

ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತೆ ವಿಶಿಷ್ಟ ಸಾಧನೆ: ಪ್ರತಿದಿನ 80 ಮಂದಿಗೆ ಸೌಲಭ್ಯ
Last Updated 9 ಜನವರಿ 2022, 3:31 IST
ಅಕ್ಷರ ಗಾತ್ರ

ಮಂಗಳೂರು: ಪ್ರತಿದಿನ 80 ಮಂದಿ ರೋಗಿಗಳಿಗೆ ಡಯಾಲಿಸಿಸ್‌ ಸೌಲಭ್ಯ ಒದಗಿಸುವ ಮೂಲಕ ಮಂಗಳೂರಿನ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಿನವೊಂದಕ್ಕೆ 60 ಮಂದಿಗೆ ಡಯಾಲಿಸಿಸ್‌ ಸೌಲಭ್ಯ ನೀಡುವ ಮೂಲಕ ಎರಡನೇ ಸ್ಥಾನದಲ್ಲಿದ್ದ ಸರ್ಕಾರಿ ಆಸ್ಪತ್ರೆಯು ಈಗ ಇನ್ನಷ್ಟು ರೋಗಿಗಳಿಗೆ ಸೇವೆ ಒದಗಿಸಲು ಸಿದ್ಧವಾಗಿದೆ.

ಪ್ರತಿನಿತ್ಯ 68 ಮಂದಿ ರೋಗಿಗಳಿಗೆ ಡಯಾಲಿಸಿಸ್‌ ಸೌಲಭ್ಯ ನೀಡುತ್ತಿದ್ದ ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯುಈವರೆಗೆ ಮೊದಲ ಸ್ಥಾನದಲ್ಲಿತ್ತು, ಅದು ಈಗ ಎರಡನೇ ಸ್ಥಾನದಲ್ಲಿದೆ.

ಮೂತ್ರ ಪಿಂಡದ ಸಮಸ್ಯೆ ಹೊಂದಿರುವ ಬಡ ರೋಗಿಗಗಳು, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದ ಡಯಾಲಿಸಿಸ್‌ ಚಿಕಿತ್ಸೆ ಪಡೆಯಲು ಪರದಾಡುವಂತಹ ಇಂತಹ ಸ್ಥಿತಿ ಇತ್ತು. ವೆನ್ಲಾಕ್‌ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಸೌಲಭ್ಯ ಸಿಗುತ್ತಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ತಿಂಗಳಿಗೆ 1,800 ಮಂದಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ.

ಕೆಲವು ರೋಗಿಗಳಿಗೆ ವಾರಕ್ಕೆ 2ರಿಂದ 3ಬಾರಿ ಡಯಾಲಿಸಿಸ್‌ ಮಾಡುವ ಅಗತ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳೊಂದಕ್ಕೆ ₹4 ಸಾವಿರದಿಂದ ₹6 ಸಾವಿರದವರೆಗೆ ಹಣಖರ್ಚು ಮಾಡಬೇಕಾಗುತ್ತದೆ.

ವೆನ್ಲಾಕ್‌ನಲ್ಲಿ ಇಡೀ ಸೇವೆ ಉಚಿತವಾಗಿ ಲಭಿಸುತ್ತಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ, ಡಯಾಲಿಸಿಸ್‌ ಅಗತ್ಯವಿರುವ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳಷ್ಟೇ ಅಲ್ಲ, ಇತರ ವರ್ಗದ ರೋಗಿಗಳಿಗೂ ಉಚಿತವಾಗಿ ಈ ಸೌಲಭ್ಯ ನೀಡಲಾಗುತ್ತದೆ.

ವೆನ್ಲಾಕ್‌ ಆಸ್ಪತ್ರೆಯಲ್ಲಿ 2000ನೇ ಸಾಲಿನಲ್ಲಿ ಡಯಾಲಿಸಿಸ್‌ ಕೇಂದ್ರ ಆರಂಭವಾಗಿತ್ತು. ಆ ಸಂದರ್ಭದಲ್ಲಿ 10 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಈಗ ದಿನವೊಂದಕ್ಕೆ 80 ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಒಂದು ಯಂತ್ರದಿಂದ ಚಿಕಿತ್ಸೆ ಆರಂಭಿಸಿದ್ದ ಕೇಂದ್ರದಲ್ಲಿ ಈಗ 19 ಡಯಾಲಿಸಿಸ್‌ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ.

‘ಪ್ರಸಕ್ತ ಒಂದು ಡಯಾಲಿಸಿಸ್‌ ಯಂತ್ರವನ್ನು ತೀವ್ರ ನಿಗಾ ಘಟಕದಲ್ಲಿ ಹಾಗೂ ಇನ್ನೊಂದನ್ನು ಕೋವಿಡ್‌ ಕೇಂದ್ರದಲ್ಲಿ ಇಡಲಾಗಿದೆ. ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯಿಂದ 1, ಶ್ರೀಕ್ಷೇತ್ರ ಧರ್ಮಸ್ಥಳದಿಂದ 2,ರೋಟರಿಯಿಂದ 4 ಡಯಾಲಿಸಿಸ್‌ ಯಂತ್ರ ಆಸ್ಪತ್ರೆಗೆ ಕೊಡುಗೆಯಾಗಿ ಬಂದಿವೆ. ಯಂತ್ರಗಳಸಂಖ್ಯೆ ಹೆಚ್ಚಿದಂತೆ ಅದರ ಪ್ರಯೋಜನ ಪಡೆಯುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೆ ಸಕಾಲದಲ್ಲಿಡಯಾಲಿಸಿಸ್‌ ಸೌಲಭ್ಯ ಒದಗಿಸಬೇಕಾದರೆ ಇನ್ನುಷ್ಟು ಯಂತ್ರಗಳು ಬೇಕಾಗಿವೆ’ ಎಂದು ವೆನ್ಲಾಕ್‌ ಆಸ್ಪತ್ರೆ ಮೂತ್ರ ರೋಗ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಹೇಳುತ್ತಾರೆ.

‘ಹಾಸಿಗೆ ಹೆಚ್ಚಿದಂತೆ ಸಂಖ್ಯೆ ಕೂಡ ಹೆಚ್ಚಳ’
‘ವೆನ್ಲಾಕ್‌ ಆಸ್ಪತ್ರೆಯಲ್ಲಿ ಹಾಸಿಗೆ ಹೆಚ್ಚಿದಂತೆ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ. ಮಾರ್ಚ್‌ನಿಂದ ದಾನಿಗಳಿಂದ ಕೊಡುಗೆ ನೀಡಿದ ಡಯಾಲಿಸಿಸ್‌ ಯಂತ್ರಗಳಿಂದ ದಿನಕ್ಕೆ ಹೆಚ್ಚುವರಿಯಾಗಿ 42 ಮಂದಿಗೆ ಸೌಲಭ್ಯ ಸಿಗುತ್ತಿದೆ. ಪ್ರತಿ ಡಯಾಲಿಸಿಸ್‌ ರೋಗಿಗೆ ತಿಂಗಳಿಗೆ ಕನಿಷ್ಠ ₹30 ಸಾವಿರದಷ್ಟು ಖರ್ಚು ಬರುತ್ತದೆ. ಒಂದು ಬಾರಿಗೆ 4 ತಾಸುಗಳ ಕಾಲ ಡಯಾಲಿಸಿಸ್‌ ಪ್ರಕ್ರಿಯೆ ನಡೆಯುತ್ತದೆ. ಇಂತಹ ದುಬಾರಿ ವೆಚ್ಚದಿಂದ ಬಡವರಿಗೆ ಸರ್ಕಾರಿ ಸೌಲಭ್ಯ ಸಿಕ್ಕಂತೆ ಆಗುತ್ತದೆ. 50 ಡಯಾಲಿಸಿಸ್‌ ಯಂತ್ರಗಳ ಸಾಮರ್ಥ್ಯದ ಡಯಾಲಿಸಿಸ್‌ ಘಟಕ ಸ್ಥಾಪನೆಯ ಚಿಂತನೆ ಕೂಡ ಜಿಲ್ಲಾಡಳಿತಕ್ಕೆ ಇದೆ. ಈ ಬಗ್ಗೆ ಪ್ರಸ್ತಾವ ಕೂಡ ಇದೆ‘ ಎಂದು ವೆನ್ಲಾಕ್‌ ಆಸ್ಪತ್ರೆಯ ಮೂತ್ರ ರೋಗ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಹೇಳಿದರು.

‘ಪ್ರತ್ಯೇಕ ಡಯಾಲಿಸಿಸ್‌ ಕೇಂದ್ರ ಶೀಘ್ರ’
’ವೆನ್ಲಾಕ್‌ ಆಸ್ಪತ್ರೆಯಲ್ಲಿ 30 ಹಾಸಿಗೆಯ ಪ್ರತ್ಯೇಕ ಡಯಾಲಿಸಿಸ್‌ ಕೇಂದ್ರ ಆರಂಭಿಸುವ ಪ್ರಸ್ತಾವ ಇದ್ದು, ಶೀಘ್ರವೇ ಕಾರ್ಯರೂಪಕೆ ಬರಲಿದೆ. ಈಗ ಇರುವ ಯಂತ್ರಗಳಿಂದಲೇ ಡಯಾಲಿಸಿಸ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಸದರ ನಿಧಿ ಬಳಿಸಿಕೊಂಡು ಕಾಮಗಾರಿ ಆರಂಭಿಸಲಾಗುತ್ತದೆ. ಎಲ್ಲ ವರ್ಗದ ಜನರಿಗೂ ಉಚಿತ ಡಯಾಲಿಸಿಸ್‌ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ತಾಲ್ಲೂಕು ಮಟ್ಟದಲ್ಲಿ ಡಯಾಲಿಸಿಸ್‌ ಕೇಂದ್ರಗಳಿದ್ದರೂ ವೆನ್ಲಾಕ್‌ಗೆ ಬರುವವರ ಸಂಖ್ಯೆ ಹೆಚ್ಚಿದ್ದು, ಹೆಚ್ಚಿನ ಬೇಡಿಕೆ ಕೂಡ ಇದೆ‘ ಎಂದು ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಡಾ. ಸದಾಶಿವ ಶಾನಭಾಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT