ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಮೇಯರ್ ಚುನಾವಣೆ ಇಂದು

ಸುಧೀರ್ ಶೆಟ್ಟಿ, ಸುನೀತಾ ಹೆಸರು ಅಂತಿಮ?
Published 7 ಸೆಪ್ಟೆಂಬರ್ 2023, 21:45 IST
Last Updated 7 ಸೆಪ್ಟೆಂಬರ್ 2023, 21:45 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಇಂದು (ಸೆ.7) ಮಧ್ಯಾಹ್ನ 12 ಗಂಟೆಗೆ ಮಂಗಳಾ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ.

ಈ ಅವಧಿಯ ನಾಲ್ಕನೇ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 44, ಕಾಂಗ್ರೆಸ್‌ 14 ಹಾಗೂ ಇಬ್ಬರು ಎಸ್‌ಡಿಪಿಐ ಸದಸ್ಯರು ಇದ್ದಾರೆ.

‘ಹಿಂದಿನ ಅವಧಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸದಸ್ಯರು ಮೇಯರ್ ಹುದ್ದೆಗೆ ಆಯ್ಕೆಯಾಗಿದ್ದರು. ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮೇಯರ್ ಹುದ್ದೆ, ಮಂಗಳೂರು ಉತ್ತರಕ್ಕೆ ಉಪಮೇಯರ್ ಹುದ್ದೆ ಸಿಗುವ ಸಾಧ್ಯತೆ ಇದೆ. ಪಾಲಿಕೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಇದ್ದು, ಕೊಡಿಯಾಲ್‌ಬೈಲ್ ವಾರ್ಡ್‌ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಅವರು ಮೇಯರ್ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತ. ಪಾಲಿಕೆಯಲ್ಲಿರುವ ಪರಿಶಿಷ್ಟ ಜಾತಿಯ ಏಕೈಕ ಸದಸ್ಯೆ ಪಣಂಬೂರು ವಾರ್ಡ್‌ನ ಸುನೀತಾ ಅವರು ಉಪಮೇಯರ್ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸುಧೀರ್‌ ಶೆಟ್ಟಿ ಅವರು ಮೂರನೇ ಬಾರಿಗೆ ಪಾಲಿಕೆಗೆ ಆಯ್ಕೆಯಾದವರು. ಮುಖ್ಯ ಸಚೇತಕರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಕಳೆದ ವರ್ಷ ಮೇಯರ್‌ ಚುನಾವಣೆ ವೇಳೆ ಸುಧೀರ್ ಅವರ ಹೆಸರೂ ಕೇಳಿಬಂದಿತ್ತು. ಬಿಲ್ಲವ ಸಮುದಾಯಕ್ಕೆ ಆದ್ಯತೆ ನೀಡಿದ್ದ ಬಿಜೆಪಿ, ಜಯಾನಂದ ಅಂಚನ್ ಅವರಿಗೆ ಅವಕಾಶ ಕಲ್ಪಿಸಿತ್ತು.

‘ಬಹುಮತ ಇಲ್ಲದಿದ್ದರೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯರು ಇಲ್ಲ. ಹಾಗಾಗಿ ಉಪಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ನಾಮಪತ್ರ ಸಲ್ಲಿಸುವುದಿಲ್ಲ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸುನೀತಾ
ಸುನೀತಾ
ಸಾಮಾನ್ಯ ಮೀಸಲಾತಿ ಇರುವುದರಿಂದ ಎಲ್ಲರಿಗೂ ಸ್ಪರ್ಧಿಸಲು ಅವಕಾಶ ಇದ್ದು ಒಮ್ಮತದ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಿ ಚುನಾವಣೆ ದಿನ ಘೋಷಿಸಲಿದೆ.
ಸುದರ್ಶನ್‌ ಎಂ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT